Pages

13 October 2010

ಜೀವನದುದ್ದಕ್ಕೂ ಕಲಿಯುವಂಥದ್ದು ಏನಿದೆ?

‘ಕಲಿಯುವುದಕ್ಕೆ ಕೊನೆಯಿಲ್ಲ’, ‘ಕಲಿಯುವಿಕೆ ಜೀವನದಾದ್ಯಂತ ನಿರಂತರವಾಗಿ ಜರಗುತ್ತಿರುವ ಒಂದು ಅಖಂಡ, ಪ್ರಕ್ರಿಯೆ’ - ಇಂಥ ಹೇಳಿಕೆಗಳು ನಿಮಗೆ ಹೊಸತು ಎಂದು ನಾನು ಭಾವಿಸುವುದಿಲ್ಲ. ೪೦-೬೦ ವಯೋವ್ಯಾಪ್ತಿಯಲ್ಲಿ ಇರುವ ಮಧ್ಯವಯಸ್ಕರು ಮತ್ತು ೬೦+ ವಯೋವ್ಯಾಪ್ತಿಯಲ್ಲಿ ಇರುವ ವೃದ್ಧರು ಕಲಿಯುವಂಥಾದ್ದು ಅಥವ ಕಲಿಯಬೇಕಾದ್ದು ಏನಿದೆ ಎಂಬುದರ ಕುರಿತು ಎಂದಾದರೂ ಆಲೋಚಿಸಿದ್ದೀರಾ? ಆಲೋಚಿಸಿದ್ದರೆ, ಕಲಿಯಬೇಕಾದ್ದರ ನಿಖರ ಪಟ್ಟಿ ತಯಾರಿಸಬಲ್ಲಿರಾ?

ಈ ದಿಶೆಯಲ್ಲಿ ಮೊಟ್ಟಮೊದಲು ಸುದೀರ್ಘ ಅಧ್ಯಯನ ಮಾಡಿದ ಭೌತವಿಜ್ಞಾನಿ ಮತ್ತು ಶಿಕ್ಷಣವೇತ್ತ ಪ್ರೊ. ರಾಬರ್ಟ್ ಜೇಮ್ಸ್ ಹ್ಯಾವಿಗ್ ಹರ್ಸ್ಟ್ (೧೯೦೦-೧೯೯೧) ಶೈಶವದಿಂದ ಮೊದಲ್ಗೊಂಡು ಕೊನೆಯುಸಿರು ಎಳೆಯುವ ತನಕ ಜೀವನದ ವಿವಿಧ ಹಂತಗಳಲ್ಲಿ ನಿಭಾಯಿಸಲು ಕಲಿಯಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿ ಅವಕ್ಕೆ ವಿಕಾಸಾತ್ಮಕ ಕಾರ್ಯಗಳು (ಡಿವೆಲಪ್ ಮೆಂಟಲ್ ಟಾಸ್ಕ್ಸ್) ಎಂದು ನಾಮಕರಣ ಮಾಡಿದ್ದಾನೆ. ಇವುಗಳ ಪೈಕಿ ಕೆಲವು ದೇಹದ ನೈಸರ್ಗಿಕ ವಿಕಸನದಿಂದ ಮೂಡುತ್ತವೆ, ಕೆಲವು ವ್ಯಕ್ತಿ ಸ್ವಾಗೀಕರಿಸಿಕೊಂಡ ಮೌಲ್ಯ ವ್ಯವಸ್ಥೆಯಿಂದ ಮೂಡುತ್ತವೆ, ಕೆಲವು ಸಾಮಾಜಿಕ ಒತ್ತಡಗಳಿಂದ ಮೂಡುತ್ತವೆ. ವಿಕಾಸಾತ್ಮಕ ಕಾರ್ಯಗಳ ಪರಿಕಲ್ಪನೆ ಮನೋವಿಜ್ಞಾನ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸದೇ ಇದ್ದರೂ ಹ್ಯಾವಿಗ್ ಹರ್ಸ್ಟ್ ತಯಾರಿಸಿದ ಪಟ್ಟಿ ನಮಗೆ ಮಾರ್ಗದರ್ಶನ ಮಾಡಬಲ್ಲುದು, ನಿಮ್ಮನ್ನು ಈ ದಿಶೆಯಲ್ಲಿ ಚಿಂತಿಸಲು ಪ್ರೇರೇಪಿಸಿ ಮುಂದೆ ಕಲಿಯಬೇಕಾದ್ದರ ಸುಳಿವು ನೀಡುತ್ತದೆ. ಎಂದೇ, ಈ ಮುಂದಿರುವ ಪಟ್ಟಿಯನ್ನು ವೀಕ್ಷಿಸಿ. ಜೀವನದ ವಿವಿಧ ಹಂತಗಳಲ್ಲಿ ನಿಭಾಯಿಸಲೇ ಬೇಕಾದ ಈ ಕಾರ್ಯಗಳನ್ನು ನಿಭಾಯಿಸಲು ಇಂದು ನಾವು ನೀಡುತ್ತಿರುವ ಶಿಕ್ಷಣ ಸಾಕೇ, ಏನೇನೂ ಸಾಕಾಗುವುದಿಲ್ಲ ಎಂದಾದರೆ, ನಾವು ಮಾಡಬಹುದಾದ್ದೇನು ಎಂಬುದರ ಕುರಿತೂ ಆಲೋಚಿಸಿ.

 

ಹ್ಯಾವಿಗ್ ಹರ್ಸ್ಟ್ ರೂಪಿಸಿದ ವಿಕಾಸಾತ್ಮಕ ಕಾರ್ಯಗಳ ಪಟ್ಟಿ

ಶೈಶವ, ಹಸುಳೆತನ ಮತ್ತು ಪೂರ್ವಬಾಲ್ಯ (ವಯೋವ್ಯಾಪ್ತಿ ೦-೬)

*ನಡೆಯಲು, ಘನ ಆಹಾರ ಸೇವಿಸಲು, ಮಾತನಾಡಲು, ಮಲಮೂತ್ರ ವಿಸರ್ಜನೆಯನ್ನು ನಿಯಂತ್ರಿಸಲು, ಲಿಂಗಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು, * ಲೈಂಗಿಕ ಸೌಶೀಲ್ಯವನ್ನು ಕಲಿಯುವುದು. * ಓದಲು ಕಲಿಯಲು ಅಗತ್ಯವಾದ ಪೂರ್ವಸಿದ್ಧತೆ ಮಾಡಿಕೊಳ್ಳುವುದು. (ಆಹಾರ ಸೇವನೆ, ವಿಸರ್ಜನೆ, ನಿದ್ದೆ-ಚಟುವಟಿಕೆ ಇವೇ ಮೊದಲಾದ) ದೈಹಿಕ ಕ್ರಿಯೆಗಳ ಸ್ಥಿರತೆ ಸಾಧಿಸುವುದು. * ಸಾಮಾಜಿಕ ಮತ್ತು ಭೌತಿಕ ವಾಸ್ತವ್ಯಗಳಿಗೆ ಸಂಬಂಧಿಸಿದ ಮೂಲಭೂತ ಸರಳ ಪರಿಕಲ್ಪನೆಗಳನ್ನು ರೂಪಿಸಿಕೊಂಡು ಅವನ್ನು ವರ್ಣಿಸಲು ಅಗತ್ಯವಾದ ಭಾಷಾಸಂಪತ್ತು ಗಳಿಸುವುದು, * ಕುಟುಂಬದ ಸದಸ್ಯರೊಂದಿಗೆ ಮತ್ತು ಇತರರೊಂದಿಗೆ ಯುಕ್ತ ಸಂವೇಗಾತ್ಮಕ (ಇಮೋಷನಲ್) ಸಂಬಂಧ ಬೆಳೆಸಿಕೊಳ್ಳುವುದು. * ’ಒಳ್ಳೆಯದು-ಕೆಟ್ಟದ್ದು’ ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಸರಳ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳುವುದು.

ಉತ್ತರ ಬಾಲ್ಯ (ವಯೋವ್ಯಾಪ್ತಿ ೬-೧೨)

* ವಾಡಿಕೆಯ ಆಟಗಳನ್ನು ಆಡಲು ಬೇಕಾದ ಓಡುವುದು, ನೆಗೆಯುವುದು, ಎಸೆಯುವುದು, ಹಿಡಿಯುವುದು ಇವೇ ಮೊದಲಾದ ದೈಹಿಕ ಕುಶಲತೆಗಳನ್ನು ಗಳಿಸುವುದು. * ಓರಗೆಯವರೊಂದಿಗೆ ಹೊಂದಿಕೊಂಡು ಚಡುವಟಿಕೆಗಳಲ್ಲಿ ಭಾಗವಹಿಸಲು ಕಲಿಯುವುದು. * ವಿಕಸಿಸುತ್ತಿರುವ ತನ್ನ ಬಗ್ಗೆ ಆರೋಗ್ಯಕರ ಧನಾತ್ಮಕ ಮನೋಧರ್ಮಗಳನನ್ನು ರೂಪಿಸಿಕೊಳ್ಳುವುದು.. * ದೈನಂದಿನ ಜೀವನಕ್ಕೆ ಅವಶ್ಯವಾದ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳುವುದು. *ಓದು-ಬರೆಹ-ಗಣಿತ ಸಂಬಂಧಿತ ಮೂಲಭೂತ ಕುಶಲತೆಗಳನ್ನು ಗಳಿಸಿಕೊಳ್ಳುವುದು. *ಅಂತಃಪ್ರಜ್ಞೆ, ನೈತಿಕತೆ, ಶ್ರೇಣೀಕೃತ ಮೌಲ್ಯಗಳು-ಇವನ್ನು ವಿಕಸಿಸಿಕೊಳ್ಳಲು ಆರಂಭಿಸುವುದು. * ಸಾಮಾಜಿಕ ಸಮೂಹಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆರೋಗ್ಯಯುತ ಮನೋಧರ್ಮಗಳನ್ನು ರೂಪಿಸಿಕೊಳ್ಳುವುದು. * ಸ್ವಲ್ಪ ಮಟ್ಟಿಗೆ ವೈಯಕ್ತಿಕ ಸ್ವಾತಂತ್ರ್ಯ ಗಳಿಸುವುದು.

ತಾರುಣ್ಯ (ವಯೋವ್ಯಾಪ್ತಿ ೧೨-೧೮)

* ಇರುವ ಮೈಕಟ್ಟನ್ನು ಅದು ಇರುವ ಹಾಗೆಯೇ ಸ್ವೀಕರಿಸಿ ದೇಹವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಕಲಿಯುವುದು. * ಎರಡೂ ಲಿಂಗಗಳ ಸಮವಯಸ್ಕರೊಂದಿಗೆ ಹೊಸ ಪ್ರೌಢ ಸಂಬಂಧಗಳನ್ನು ಬೆಳೆಸಿಕೊಳ್ಳುವುದು. * ಲಿಂಗ ಸಹಜವಾದ ಸಾಮಾಜಿಕ ಪಾತ್ರ ನಿರ್ವಹಿಸಲು ಕಲಿಯುವುದು. * ತಂದೆ ತಾಯಿಯರಿಂದ ಮತ್ತು ಇತರ ಹಿರಿಯರಿಂದ ಸಂವೇಗಾತ್ಮಕ ಸ್ವಾತಂತ್ರ್ಯ ಸಾಧಿಸುವುದು. * ಆರ್ಥಿಕ ಸ್ವಾತಂತ್ರ್ಯ ಗಳಿಸಲೋಸುಗ ವೃತ್ತಿಯೊಂದನ್ನು ಆಯ್ದು ಅದನ್ನು ಪ್ರವೇಶಿಸಲು ತಕ್ಕುದಾದ ಸಿದ್ಧತೆ ಮಾಡಿಕೊಳ್ಳುವುದು. * ಯೋಗ್ಯ ಮತ್ತು ಸಮರ್ಥನಾದ ಪೌರನಾಗಲು ಅಗತ್ಯವಿರುವ ಬೌದ್ಧಿಕ ಪರಿಕಲ್ಪನೆಗಳನ್ನು ರೂಪಿಸಿಕೊಂಡು ಯುಕ್ತ ಕುಶಲತೆಗಳನ್ನು ಕಲಿಯುವುದು. * ಜವಾಬ್ದಾರಿಯುತ ಸಾಮಾಜಿಕ ವರ್ತನೆಯನ್ನು ಸ್ವ-ಇಚ್ಛೆಯಿಂದ ರೂಢಿಸಿಕೊಳ್ಳುವುದು. * ವಿವಾಹ ಮುಖೇನ ಕೌಟುಂಬಿಕ ಜೀವನ ಪ್ರವೇಶಿಸಲು ಅವಶ್ಯವಾದ ಜ್ಞಾನಾತ್ಮಕ ಪೂರ್ವಸಿದ್ಧತೆ ಮಾಡಿಕೊಳ್ಳುವುದು. * ಜಗತ್ತಿನ ವಾಸ್ತವ್ಯಕ್ಕೆ ಮೇಳೈಸುವ ವರ್ತನೆಯನ್ನು ಅಭಿವ್ಯಕ್ತಿಸಲು ಮಾರ್ಗದರ್ಶಿಯಾಗಬಲ್ಲ ಮೌಲ್ಯಗುಚ್ಛವನ್ನೂ ನೈತಿಕ ವ್ಯವಸ್ಥೆಯನ್ನೂ ರೂಪಿಸಿಕೊಳ್ಳುವುದು.

ಪ್ರೌಢ ಅಥವ ವಯಸ್ಕ (ವಯೋವ್ಯಾಪ್ತಿ ೧೮-೪೦)

* ವೃತ್ತಿನಿರತರಾಗುವುದು. * ಪೌರ ಜವಾಬ್ದಾರಿಗಳನ್ನು ನಿಭಾಯಿಸುವುದು. * ತನ್ನ ಸ್ವಭಾವಕ್ಕೆ ತಕ್ಕುದಾದ ಸಾಮಾಜಿಕ ಸಂಘಟನೆಗಳನ್ನು ಗುರುತಿಸಿ ಅವುಗಳ ಚಟುವಟಿಕೆಗಳಲ್ಲಿ ಭಾಗಿಯಾಗುವುದು. * ಬಾಳ ಸಂಗಾತಿಯನ್ನು ಆಯ್ಕೆ ಮಾಡುವುದು. * ಬಾಳ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಳಲು ಕಲಿಯುವುದು. * ಕುಟುಂಬವನ್ನು ಆರಂಭಿಸುವುದು (ಅರ್ಥಾತ್ ಮಕ್ಕಳನ್ನು ಪಡೆಯುವುದು). * ಮಕ್ಕಳ ಪಾಲನೆ ಪೋಷಣೆ ಮಾಡುವುದು. * ಮನೆಯ ವ್ಯವಹಾರಗಳನ್ನು ನಿಭಾಯಿಸುವುದು.

ಮಧ್ಯವಯಸ್ಸು (ವಯೋವ್ಯಾಪ್ತಿ ೪೦-೬೦)

* ಮಕ್ಕಳು ಜವಾಬ್ದಾರಿಯುತ ಸಂತುಷ್ಟ ವಯಸ್ಕರಾಗಲು ನೆರವು ನೀಡುವುದು. * ಪ್ರೌಢಯೋಗ್ಯ ಸಾಮಾಜಿಕ ಮತ್ತು ಪೌರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವುದು. * ವೃತ್ತಿಜೀವನದಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುವ ಸ್ಥಿತಿಯನ್ನು ತಲುಪಿ ಆ ಸ್ಥಿತಿಯನ್ನು ಕಾಯ್ದುಕೊಳ್ಳುವುದು. * ವಯಸ್ಕಯೋಗ್ಯವಾದ ವಿರಾಮಾವಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳುವುದು. * ಬಾಳಸಂಗಾತಿಯೂ ತನ್ನದೇ ಆದ ವ್ಯಕ್ತಿತ್ವ ಉಳ್ಳ ಒಬ್ಬ ವ್ಯಕ್ತಿ ಎಂಬುದನ್ನು ಅರಿತು ಅದಕ್ಕೆ ತಕ್ಕುದಾದ ರೀತಿಯಲ್ಲಿ ವರ್ತಿಸಲು ಕಲಿಯುವುದು. * ವಯೋಧರ್ಮಕ್ಕೆ ತಕ್ಕಂತೆ ಆಗುವ ಶಾರೀರಿಕ ಬದಲಾವಣೆಗಳನ್ನು ಒಪ್ಪಿಕೊಂಡು ಅದಕ್ಕೆ ಅನುಗುಣವಾಗಿ ಬಾಶಳಲು ಕಲಿಯುವುದು. * ವೃದ್ಧಾಪ್ಯವನ್ನು ತಲುಪಿರುವ ತಂದೆತಾಯಿಯರೊಂದಿಗೆ ಯುಕ್ತ ಹೊಂದಾಣಿಕೆ ಮಾಡಿಕೊಳ್ಳುವುದು.

ವೃದ್ಧಾಪ್ಯ (ವಯೋವ್ಯಾಪ್ತಿ ೬೦+)

ಕ್ಷೀಣಿಸುತ್ತಿರುವ ದೈಹಿಕ ಶಕ್ತಿ ಮತ್ತು ಆರೋಗ್ಯಕ್ಕೆ ತಕ್ಕುದಾದ ಮಾರ್ಪಾಟುಗಳನ್ನು ಜೀವನಶೈಲಿಯಲ್ಲಿ ಮಾಡಿಕೊಳ್ಳುವುದು. * ನಿವೃತ್ತ ಜೀವನಕ್ಕೂ ಕಡಿಮೆ ಆದ ವರಮಾನಕ್ಕೂ ತಕ್ಕುದಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು. * ತೃಪ್ತಿಕರವಾಗಿ ಬಾಳಲು ಅಗತ್ಯವಾದ ಭೌತಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.* ಬಾಳಸಂಗಾತಿಯನ್ನು ಕಳೆದುಕೊಳ್ಳಲು ಅಗತ್ಯವಾದ ಮನೋದಾರ್ಢ್ಯವನ್ನು ಬೆಳೆಸಿಕೊಂಡು ಸಂಗಾತಿ ಇಲ್ಲದೇ ಬಾಳಲು ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು. * ಸಮವಯಸ್ಕರ ಹೊಸ ಗುಂಪುಗಳೊಂದಿಗೆ ಹೊಸ ಪರಿಸ್ಫುಟವಾದ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವುದು. * ತನ್ನ ವಯಸ್ಸಿಗೆ ತಕ್ಕುದಾದ ರೀತಿಯಲ್ಲಿ ಸಾಮಾಜಿಕ ಮತ್ತು ಪೌರ ಋಣವನ್ನು ತೀರಿಸುವುದು ಹಾಗೂ ಅದರಲ್ಲಿ ನಮ್ಯವಾಗಿರಲು (ಪ್ಲೆಕ್ಸಿಬ್ ಲ್) ಕಲಿಯುವುದು.

No comments: