Pages

16 July 2010

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩

ವಾಯುವಿನ ಒತ್ತಡ ಮಾಡುವ ಪವಾಡ!

ಒಂದು ‘ಖಾಲಿ ಲೋಟ’, ಒಂದು ಚೆಂಬು ನೀರು ಮತ್ತು ಲೋಟದ ಬಾಯಿಯನ್ನು ಆರಾಮವಾಗಿ ಮುಚ್ಚಬಲ್ಲ ನಯವಾದ ಕಾಗದದ ಹಾಳೆ - ಇವಿಷ್ಟು ಸಾಮಗ್ರಿಗಳನ್ನು ಕಲೆ ಹಾಕಿದರೆ ಸಾಕು, ಇನ್ನೊಂದು ಕುತೂಹಲಕಾರೀ ಚಟುವಟಿಕೆ ಮಾಡಬಹುದು.

ಮೊದಲು ‘ಖಾಲಿ’ ಲೋಟದ ಬಾಯಿಯನ್ನು ಹಾಳೆಯಿಂದ ಮುಚ್ಚಿ. ಮುಚ್ಚಿದ ಹಾಳೆಯನ್ನು ಅಂಗೈನಿಂದ ಒತ್ತಿ ಹಿಡಿದು ಲೋಟವನ್ನು ತಲೆಕೆಳಗೆ ಮಾಡಿ ಹಾಳೆಯನ್ನು ಒತ್ತಿ ಹಿಡಿದ ಅಂಗೈ ತೆಗೆಯಿರಿ. ಹಾಳೆ ಕೆಳಕ್ಕೆ ಬೀಳುತ್ತದಲ್ಲವೇ? ಇದಲ್ಲೇನೂ ಆಶ್ಚರ್ಯ ಇಲ್ಲವಷ್ಟೆ?

ಲೋಟದಲ್ಲಿ ಅದರ ಸುಮಾರು ೩/೪ ಭಾಗಕ್ಕಿಂತ ಸ್ವಲ್ಪ ಹೆಚ್ಚು ನೀರು ತುಂಬಿಸಿ. ಲೋಟದ ಬಾಯಿಯನ್ನು ನಯವಾದ ಕಾಗದದ ಹಾಳೆಯಿಂದ ಮುಚ್ಚಿ. ಮುಚ್ಚಿದ ಹಾಳೆಯನ್ನು ಅಂಗೈನಿಂದ ಒತ್ತಿ ಹಿಡಿದುಕೊಂಡು ಲೋಟವನ್ನು ತಲೆಕೆಳಗೆ ಮಾಡಿ ಹಾಳೆಯನ್ನು ಒತ್ತಿ ಹಿಡಿದ ಅಂಗೈ ತೆಗೆಯಿರಿ. ಹಾಳೆ ಕೆಳಳಕ್ಕೆ ಬೀಳುವುದಕ್ಕೆ ಬದಲಾಗಿ ಲೋಟದ ಬಾಯಿಗೆ ಅಂಟಿಕೊಂಡು ನಿಲ್ಲುವ ವಿಸ್ಮಯಕಾರೀ ವಿದ್ಯಮಾನ ವೀಕ್ಷಿಸಿ.

 

  • ‘ಖಾಲಿ’ ಲೋಟ ನಿಜವಾಗಿಯೂ ಖಾಲಿಯಾಗಿತ್ತೆ?

  • ಖಾಲಿ ಲೋಟವನ್ನು ಹಾಳೆಯಿಂದ ಮುಚ್ಚಿ ತಲೆಕೆಳಗೆ ಮಾಡಿದಾಗ ಹಾಳೆಯ ಮೇಲ್ಭಾಗದಲ್ಲಿ (ಲೋಟದ ಒಳಗೆ) ಇದ್ದುದೇನು? ಹಾಳೆಯ ಕೆಳ ಭಾಗದಲ್ಲಿ (ಲೋಟದ ಹೊರಗೆ) ಇರುವುದೇನು?

  • ಈ ಸಂದರ್ಭದಲ್ಲಿ ಹಾಳೆ ಕೆಳಗೆ ಬೀಳಲು ಕಾರಣ ಏನು? ಹಾಳೆಯನ್ನು ಮೇಲಿನಿಂದ ಕೆಳಕ್ಕೆ ತಳ್ಳುತ್ತಿರುವ ಬಲ ಯಾವುದು? ಮೇಲಕ್ಕೆ ತಳ್ಳುತ್ತಿರುವ ಬಲ ಯಾವುದು? ಈ ಎರಡು ಬಲಗಳು ಸಮವಿದ್ದರೂ ಹಾಳೆ ಕೆಳಕ್ಕೆ ಬಿದ್ದದ್ದು ಏಕೆ?

  • ನೀರು ಇರುವ ಲೋಟವನ್ನು ಹಾಳೆಯಿಂದ ಮುಚ್ಚಿ ತಲೆಕೆಳಗೆ ಮಾಡಿದಾಗ ಹಾಳೆಯ ಮೇಲ್ಭಾಗದಲ್ಲಿ (ಲೋಟದ ಒಳಗೆ) ಇದ್ದುದೇನು? ಹಾಳೆಯ ಕೆಳ ಭಾಗದಲ್ಲಿ (ಲೋಟದ ಹೊರಗೆ) ಇರುವುದೇನು? ಹಾಳೆಯನ್ನು ಮೇಲಿನಿಂದ ಕೆಳಕ್ಕೆ ತಳ್ಳುತ್ತಿರುವ ಬಲ ಯಾವುದು? ಮೇಲಕ್ಕೆ ತಳ್ಳುತ್ತಿರುವ ಬಲ ಯಾವುದು?

  • ಈ ಸಂದರ್ಭದಲ್ಲಿ ಹಾಳೆ ಕೆಳಕ್ಕೆ ಬೀಳದಂತೆ ತಡೆದದ್ದು ಯಾವ ಬಲ? ಖಾಲಿ ಲೋಟದ ಪ್ರಯೋಗದಲ್ಲಿ ಹಾಳೆ ಕೆಳಕ್ಕೆ ಬೀಳದಂತೆ ಈ ಬಲ ಏಕೆ ತಡೆಯಲಿಲ್ಲ?


ವಾರ್ತಾಪತ್ರಿಕೆಯ ಹಾಳೆ, ನೀರನ್ನು ಸುಲಭವಾಗಿ ಹೀರಬಲ್ಲ ಕಾಗದದ ಹಾಳೆ - ಹೀಗೆ ಬೇರೆ ಬೇರೆ ವಿಧದ ಕಾಗದದ ಹಾಳೆಗಳನ್ನು ಉಪಯೋಗಿಸಿ ಪ್ರಯೋಗವನ್ನು ಪುನಃ ಪುನಃ ಮಾಡಿ ನೋಡಿ. ಲೋಟದಲ್ಲಿ ೧/೪ ಭಾಗ, ೧/೨ ಭಾಗ, ಪೂರ್ತಿ - ಹೀಗೆ ಬೇರೆ ಬೇರೆ ಪರಿಮಾಣದ ನೀರು ತುಂಬಿ ಪ್ರಯೋಗವನ್ನು ಪುನಃ ಪುನಃ ಮಾಡಿ ನೋಡಿ. ಫಲಿತಾಂಶ ಬದಲಾಗುತ್ತದೆಯೇ ಪರೀಕ್ಷಿಸಿ. ನೀರು ಇರುವ ಲೋಟದ ಬಾಯಿಗೆ ತೆಳುವಾದ ಬಟ್ಟೆಯನ್ನು ಬಿಗಿಯಾಗಿ ಎಳೆದು ಕಟ್ಟಿ ತಲೆ ಕೆಳಗೆ ಮಾಡಿದರೆ ನೀರು ಚೆಲ್ಲೀತೇ ಎಂಬುದನ್ನು ಪರೀಕ್ಷಿಸಿ.

‘ಮಿನರಲ್ ವಾಟರ್’ನ ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ. ಅದರ ಕಂಠದ ತನಕ ನೀರು ತುಂಬಿಸಿ ಬಾಯಿಯನ್ನು ನಯವಾದ ಕಾಗದದ ತುಂಡಿನಿಂದ ಮುಚ್ಚಿ.. ಕಾಗದದ ಚೂರನ್ನು ಒತ್ತಿ ಹಿಡಿದು ಬಾಟಲ್ ಅನ್ನು ಅಡ್ಡವಾಗಿ ಹಿಡಿದು ಕಾಗದದ ಚೂರಿನಿಂದ ಕೈತೆಗೆದರೆ ಅದು ಕೆಳಕ್ಕೆ ಬೀಳುತ್ತದೆಯೇ ಎಂಬುದನ್ನು ಪರೀಕ್ಷಿಸಿ. ಬಾಟಲ್ ಅನ್ನು ಬೇರೆ ಬೇರೆ ದಿಕ್ಕುಗಳಿಗೆ ಹಿಡಿದು ಪ್ರಯೋಗವನ್ನು ಪುನಃ ಪುನಃ ಮಾಡಿ ಯಾವುದಾದರೂ ದಿಕ್ಕಿನಲ್ಲಿ ಕಾಗದ ಕೆಳಕ್ಕೆ ಬಿದ್ದು ನೀರು ಚೆಲ್ಲುತ್ತದೆಯೇ ನೋಡಿ

ಈ ಚಟುಚಟಿಕೆಗಳಲ್ಲಿ ನೀವು ನೋಡಿದ್ದನ್ನು ಆಧರಿಸಿ ಕೈಗೊಳ್ಳಬಹುದಾದ ತೀರ್ಮಾನ ಏನು?

 

 

No comments: