Pages

5 March 2017

ನಮ್ಮ ಶಿಕ್ಷಣ ವ್ಯವಸ್ಥೆಯ ಕುರಿತಾದ ಕೆಲವು ಚಿಂತನೆಗಳು.

ಚಿಂತನೆ ೧
ಶಾಲೆಯಲ್ಲಿ ಕಲಿಸಲಾಗುತ್ತಿರುವ ವಿಷಯಗಳ ಪೈಕಿ ಭಾಷೆಗಳು ಅವನ ಅಚ್ಚು ಮೆಚ್ಚಿನ ಅಧ್ಯಯನ ವಿಷಯಗಳು. ಆ ವಿಷಯಗಳ ಪರೀಕ್ಷೆಗಳಲ್ಲಿ ಅವನು ಯಾವಾಗಲೂ ತರಗತಿಗೇ ಪ್ರಥಮ. ಇಂತಿದ್ದರೂ ಅವನಲ್ಲಿ ಒಂದು ದೌರ್ಬಲ್ಯವಿತ್ತು: ಯಾರೊಂದಿಗೆ ಯಾವ ಸನ್ನಿವೇಶದಲ್ಲಿ ಹೇಗೆ ಮಾತನಾಡಬೇಕು ಎಂಬುದು ಅವನಿಗೆ ತಿಳಿದಿರಲಿಲ್ಲ!
ನಿತ್ಯಜೀವನವನ್ನು ಪ್ರಭಾವಿಸದ ಶಿಕ್ಷಣದಿಂದ ಏನು ಉಪಯೋಗ?

ಚಿಂತನೆ ೨
'
ಸ್ವಿಚ್‌'ನ ಅಂದವಾದ ಚಿತ್ರವನ್ನು ಬರೆದು ಅದರ ಕಾರ್ಯವೇನು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಸಮರ್ಪಕವಾಗಿ ವಿವರಿಸಿ ೧೦೦% ಅಂಕ ಗಳಿಸುತ್ತಾನೆ. ಮನೆಯಲ್ಲಿ ಸ್ವಿಚ್‌ ಹಾಳಾದರೆ ಎಲೆಕ್ಟ್ರೀಷಿಯನ್‌ ಅನ್ನು ಕರೆತಂದು ಸರಿಮಾಡಿಸುತ್ತಾನೆ. ಇಂಥ ಅನೇಕ ಉದಾಹರಣೆಗಳನ್ನು ಕೊಡಲು ಸಾಧ್ಯವಾಗಿಸುವ ಶಿಕ್ಷಣ ನಮ್ಮದು.
ನಿತ್ಯಜೀವನದಲ್ಲಿ ಉಪಯೋಗಿಸಲಾಗದ ರೀತಿಯಲ್ಲಿ ’ಜ್ಞಾನ’ ಸಂಗ್ರಹಿಸಿ ಏನು ಪ್ರಯೋಜನ?

ಚಿಂತನೆ ೩
ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರಜೆಗಳನ್ನು ರೂಪಿಸುವುದು ನಮ್ಮ ಶಿಕ್ಷಣದ ಒಂದು ಗುರಿ. ಇದಕ್ಕಾಗಿ ನಾವು ಶಾಲೆಗಳಲ್ಲಿ ತರಗತಿಯ ನಾಯಕರು, ಶಾಲಾ ನಾಯಕರು ಇವರೇ ಮೊದಲಾದವರನ್ನು ಚುನಾವಣೆಯ ಮುಖೇನ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದ್ದೇವೆ. ತದನಂತರ ಏನಾಗುತ್ತದೆ ಎಂಬುದು ಚಿಂತನ ಯೋಗ್ಯ ವಿಷಯ. ಬಹುತೇಕ ಶಾಲೆಗಳಲ್ಲಿ ತರಗತಿಯಲ್ಲಿ ಶಿಕ್ಷಕರು ಇಲ್ಲದೇ ಇದ್ದಾಗ ತರಗತಿಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡದಂತೆಯೂ ಮಾಡಿದವರ ಹೆಸರುಗಳನ್ನು ಪಟ್ಟಿ ಮಾಡಿ ಶಿಕ್ಷಕರಿಗೆ ನೀಡುವುದು, 'ಹೋಮ್‌ ವರ್ಕ್‌ಪುಸ್ತಕ ಸಂಗ್ರಹಿಸುವುದು/ವಿತರಿಸುವುದು ಇವೇ ಮೊದಲಾದ ಶಿಕ್ಷಕರು ಹೇಳಿದ ಕರ್ತವ್ಯಗಳನ್ನು ನಿಭಾಯಿಸುವುದು ಈ ತರಗತಿ ನಾಯಕರ ಪ್ರಮುಖ ಕೆಲಸ. ಶಾಲೆಯ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಶಿಕ್ಷಕರು ಕಂಠಪಾಠ ಮಾಡಿಸಿದ್ದ ಆರ್ಡರ್ಗಳನ್ನು ಒದರುವುದು ಹಾಗು ಅವನ್ನು ಎಲ್ಲರೂ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಶಾಲಾ ನಾಯಕರ ಕರ್ತವ್ಯ. ಶಾಲಾ ಸಮಾರಂಭಗಳ ಸಂಘಟನೆಯಲ್ಲಿ ಶಿಕ್ಷಕ ವೃಂದ ಹೇಳಿದ್ದನ್ನು ಮಾಡುವುದೂ ಇವರ ಕರ್ತವ್ಯ. ನಾವು ನೀಡುತ್ತಿರುವ ಈ ಪ್ರಜಾಪ್ರಭುತ್ವದ ಅನುಭವಗಳಿಗೆ ಜೈ ಅನ್ನೋಣವೇ? ನಮ್ಮ ಪ್ರಜಾಪ್ರಭುತ್ವದ ಇಂದಿನ ಸ್ಥಿತಿಗೆ ಒಂದು ಕಾರಣ ತಿಳಿಯಿತಲ್ಲವೇ?

ಚಿಂತನೆ ೪
ಮಕ್ಕಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕುಶಲತೆ ಬೆಳೆಸುವುದು ಸಾರ್ವತ್ರಿಕ ಶಿಕ್ಷಣದಲ್ಲಿ ವಿಜ್ಞಾನ ಹಾಗು ಗಣಿತ ಬೋಧನೆಯ ಗುರಿಗಳ ಪೈಕಿ ಒಂದು. ಈ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದವರೂ ಮುಂದೆ ಜೀವನದಲ್ಲಿ ಜೀವನದ ಸಮಸ್ಯೆಗಳು ಎದುರಾದಾಗ ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆಗೆ ಶರಣಾಗುವುದು ಏಕೆ?
ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದದ್ದು ಅನಿವಾರ್ಯ. ಅವನ್ನು ಧೈರ್ಯದಿಂದ ಎದುರಿಸಲೇ ಬೇಕು, ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲ ಒಂದು ಸಿದ್ಧಪಡಿಸಿದ ವಿಧಾನ ಇಲ್ಲ, ಅನೇಕ ಸಂದರ್ಭಗಳಲ್ಲಿ ಪರಿಹರಿಸುವ ವಿಧಾನವನ್ನೂ ನಾವೇ ಉಪಜ್ಞಿಸಬೇಕು ಇವೇ ಮೊದಲಾದ ಅಂಶಗಳು ಮನೋಗತವಾದೇ ಇರುವುದರಿಂದಲೇ?

ಚಿಂತನೆ ೫
ರಾಷ್ಟ್ರಗೀತೆಗೆ ಯುಕ್ತ ಗೌರವ ಸಲ್ಲಿಸುವುದನ್ನು ಮಕ್ಕಳಿಗೆ ಕಲಿಸಲೋಸುಗ ಶಾಲೆಯಲ್ಲಿ ಪ್ರತೀದಿನ ಹಾಗು ಸಭೆಸಮಾರಂಭಗಳು ಆದಾಗಲೆಲ್ಲ ರಾಷ್ಟ್ರಗೀತೆ ಹಾಡಿಸುವ/ಕೇಳಿಸುವ ಪದ್ಧತಿ ಇರುವುದನ್ನು ನೀವು ಗಮನಿಸಿರಬಹುದು. ಇಂಥ ಸನ್ನಿವೇಶಗಳಲ್ಲಿ ಎಲ್ಲರೂ ಅಟೆಂಷನ್/ಸಾವಧಾನ್ಭಂಗಿಯಲ್ಲಿ ಎದ್ದು ನಿಲ್ಲುವಂತೆ ಸೂಚಿಸುವುದನ್ನೂ ನೀವು ಗಮನಿಸಿರಬಹುದು. ಅಷ್ಟೇ ಅಲ್ಲದೆ ಇನ್ನೂ ಒಂದು ವೈಷಿಷ್ಟ್ಯವನ್ನೂ ನೀವು ಗಮನಿಸಿರಬಹುದು. ಬಹುತೇಕ ಸಂದರ್ಭಗಳಲ್ಲಿ ಶಿಕ್ಷಕರು ಹಾಗು ಗಣ್ಯರು ರಾಷ್ಟ್ರಗೀತೆ ಹಾಡುವುದರಲ್ಲಿ ಪಾಲ್ಗೊಳ್ಳದೇ ಇರುವುದನ್ನೂ ಯುಕ್ತ ಭಂಗಿಯಲ್ಲಿ ನಿಲ್ಲದೇ ಇರುವುದು! 
ಈ ಕಸರತ್ತಿನಿಂದ ಉದ್ದೇಶಿತ ಗುರಿ ಸಾಧನೆ ಆಗುತ್ತದೆಯೇ?

ಚಿಂತನೆ ೬
ಅದೊಂದು ಕುಗ್ರಾಮ. ಅನಕ್ಷರಸ್ಥರದೇ ರಾಜ್ಯಭಾರ. ಕೄಷಿ ಅಲ್ಲಿನವರ ಪ್ರಧಾನ ಕಸುಬು. ಬಯಲೇ ಶೌಚಾಲಯ. ಅನತಿ ದೂರದಲ್ಲಿ ಹರಿಯುತ್ತಿದ್ದ ನದೀ ತೀರವೆ ಜನ, ದನ, ಪಾತ್ರೆ ಇವೆಲ್ಲವನ್ನೂ ತೊಳೆಯುವ ತಾಣ. ಜನ ಬಡವರಾಗಿದ್ದರೂ ನೆಮ್ಮದಿಯಿಂದ, ನಗುನಗುತ್ತಾ (!) ಜೀವನ ಸವೆಸುತ್ತಿದ್ದರು. ಇಂತಿರುವ ಊರಿನವರನ್ನು ಸುಶಿಕ್ಷಿತರನ್ನಾಗಿ ಪರಿವರ್ತಿಸಲು, ನಾಗರೀಕರನ್ನಾಗಿಸಲು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇವೇ ಮೊದಲಾದ ಸೌಲಭ್ಯಗಳನ್ನು ಸರ್ಕಾರ ಸ್ಥಾಪಿಸಿತು. ನಾನಾ ಆಮಿಷಗಳನ್ನೊಡ್ಡಿ ಮಕ್ಕಳು ಶಾಲೆಗೆ ಬರುವಂತೆ ಮಾಡಿತು. ವರ್ಷಗಳು ಉರುಳಿದವು. ಅನಕ್ಷರಸ್ತರೇ ತುಂಬಿದ್ದ ಊರಿನಲ್ಲಿ ಕ್ರಮೇಣ ಎಸ್‌ ಎಸ್‌ ಎಲ್‌ ಸಿ ಪಾಸು/ಫೇಲ್‌ ಆದವರು ತುಂಬಿದರು. ಶಾಲೆಗೆ ಹೋಗುತ್ತಲಿದ್ದದ್ದರಿಂದಾಗಿ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕಲಿತಿರಲೂ ಇಲ್ಲ. ಎಂದೇ ಅವರಿಗೆ ಕೃಷಿ ಒಂದು ಉತ್ತಮ ಕಸುಬು ಅನ್ನಿಸಲೇ ಇಲ್ಲ. ತತ್ಪರಿಣಾಮವಾಗಿ ಬೇಗನೆ ಹೆಚ್ಚು ಆದಾಯ ತರಬಲ್ಲ ಉದ್ಯೋಗಾಕಾಂಕ್ಷಿಗಳಾಗಿ ಪಟ್ಟಣ ನಗರಗಳತ್ತ ಮುಖ ಮಾಡಲಾರಂಭಿಸಿದರು. ಪಟ್ಟಣದ/ನಗರಗಳ ಹೋಟೆಲ್‌/ಸಿನೆಮಾ/ಮಾಲ್‌ ಗಳ ಸಂಸ್ಕೃತಿಯೇ ನಾಗರೀಕತೆ ಎಂದು ಅನ್ನಿಸ ತೊಡಗಿತು. ಹಳ್ಳಿ ಬರಿದಾಗಿ, ವೃದ್ಧಾಶ್ರಮವಾಯಿತು, ಶ್ರಮಿಕರ ಕೊರತೆಯಿಂದಾಗಿ ಕೃಷಿ ಸೊರಗಿತು. 
ಜೈ ಶಿಕ್ಷಣ ಮಹಾತ್ಮೆ!

ಚಿಂತನೆ ೭
ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳು ವಿಕಸಿಸಲು ಹಾಗು ಪ್ರಕಾಶಿಸಲು ಪೂರಕವಾದ ಪರಿಸರ ಒದಗಿಸಬೇಕಾದದ್ದು ಶಾಲೆಗಳ ಕರ್ತವ್ಯಗಳ ಪೈಕಿ ಒಂದು. ಈ ಗುರಿ ಸಾಧನೆಗೆ ಬಹುತೇಕ ಶಾಲೆಗಳು ಅನುಸರಿಸುತ್ತಿರುವ ವಿಧಾನದ ಯುಕ್ತಾಯುಕ್ತತೆ ಚಿಂತನಯೋಗ್ಯ ವಿಷಯ. 
ಸಾಮಾನ್ಯವಾಗಿ ಗಣ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಶಾಲಾ ವಾರ್ಷಿಕೋತ್ಸವ ಇವು ಪ್ರಮುಖ ಸ್ಥಾನ ಗಳಿಸಿರುವ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಆಯೋಜಿಸುವುದು. ಸಂಗೀತ, ನೃತ್ಯ, ನಟನೆ ಕಲಾ ಪ್ರಕಾರಗಳಲ್ಲಿ ಈಗಾಗಲೇ ತುಸು ಸಾಧನೆ ಮಾಡಿದವರನ್ನು ಆಯ್ದು ಅವರಿಗೆ ಶಿಕ್ಷಕ ನಿರ್ಧಾರಿತ ಕಾರ್ಯಕ್ರಮಗಳಲ್ಲಿ ಸುಮಾರು ೧ ತಿಂಗಳು ತರಬೇತಿ ನೀಡಿ ಅವರು ಅವುಗಳಲ್ಲಿ ಭಾಗವಹಿಸುವಂತೆ ಮಾಡುವುದು. ಕೆಲವು ಶಾಲೆಗಳಲ್ಲಿ ಒಂದೋ ಎರಡೋ ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪ್ರಬಂಧ ಲೇಖನ ಸ್ಪರ್ಧೆ, ಅಡುಗೆ ಸ್ಪರ್ಧೆ, ರಂಗೋಲೆ ಸ್ಪರ್ಧೆ ಮೊದಲಾದ ವಿಭಿನ್ನ ಸ್ಪರ್ಧೆಗಳನ್ನು ಏರ್ಪಡಿಸುವುದೂ ಉಂಟು.
ಇಷ್ಟನ್ನು ಯಾಂತ್ರಿಕವಾಗಿ ಅಥವ ಸಾಂಪ್ರದಾಯಿಕ ಆಚರಣೆಯಂತೆ ಮಾಡಿದರೆ ಈ ಮುನ್ನ ಉಲ್ಲೇಖಿಸಿದ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಂತೆ ಆಗುತ್ತದೆಯೇ?

ಚಿಂತನೆ ೮
ಜೀವನದಾದ್ಯಂತ ಒಬ್ಬ ವ್ಯಕ್ತಿ ಎದುರಿಸಬಹುದಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಜ್ಞಾನವನ್ನೂ ಕುಶಲತೆಗಳನ್ನೂ ಸಾರ್ವತ್ರಿಕ ಶಿಕ್ಷಣದ ಅವಧಿಯಲ್ಲಿ ಕಲಿಸಲು ಸಾಧ್ಯವಿಲ್ಲ - ನಿಜ. ಅಂದ ಮಾತ್ರಕ್ಕೆ ಶಿಕ್ಷಣ ಈ ದಿಸೆಯಲ್ಲಿ ಮಾಡಬಹುದಾದದ್ದು ಏನು ಮತ್ತು ಹೇಗೆ?
ಇಂದಿನ ಶಾಲೆಗಳಲ್ಲಿ ಸಾರ್ವತ್ರಿಕ ಶಿಕ್ಷಣದ ಅವಧಿಯಲ್ಲಿ ಉಪಯುಕ್ತವಾದದ್ದು ಉಪಯುಕ್ತವಲ್ಲದ್ದು ಎಲ್ಲವನ್ನೂ ಮಗು ಹೇಗಾದರೂ ಮಾಡಿ ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲೋಸುಗ ಪರೀಕ್ಷೆ ಮುಗಿಯುವ ವರೆಗಾದರೂ ನೆನಪಿನಲ್ಲಿ ಇಟ್ಟುಕೊಳ್ಲಲು ತರಬೇತಿ ನೀಡಲಾಗುತ್ತಿದೆ.
ನಮಗೆ ಉಪಯುಕ್ತವಾದ ಮಾಹಿತಿಯನ್ನು ಅಗತ್ಯವಿದ್ದಾಗ ನಾವೇ ಸ್ವತಃ ಸಂಗ್ರಹಿಸುವುದು ಹೇಗೆ? ನಮಗೆ ಉಪಯುಕ್ತವಾದ ಕುಶಲತೆಗಳನ್ನು ನಾವೇ ಸ್ವತಃ ಕಲಿಯುವುದು ಹೇಗೆ? ಈ ಕುರಿತಾದ ತರಬೇತಿ ನೀಡಿದರೆ ಅರ್ಥಾತ್ ಸ್ವತಃ ಕಲಿಯುವುದು ಹೇಗೆ?’ ಎಂಬುದರ ಕಲಿಕೆಗೆ ಆದ್ಯತೆ ನೀಡಿದರೆ ಇಂದಿನ ತೀವ್ರ ಸ್ಪರ್ಧೆ ಇರುವ ಜಗತ್ತಿನಲ್ಲಿ, ಅತಿ ವೇಗವಾಗಿ ಬದುಕಲು ಬೇಕಾಗಿರುವ ಜ್ಞಾನ ಹಾಗು ಕುಶಲತೆಗಳು ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕಲು ನೆರವಾಗುವುದು ಖಂಡಿತ. ಈ ಕುರಿತಾದ ಚಿಂತನೆಯನ್ನು ಶಿಕ್ಷಣ ತಜ್ಞರುಮಾಡುತ್ತಿಲ್ಲವೇಕೆ?

ಚಿಂತನೆ ೯
ಹೀಗೊಂದು ಸನ್ನಿವೇಶ ಊಹಿಸಿಕೊಳ್ಳಿ:- ನಾನಾ ದರ್ಜೆಯ ಕುಂಟರು, ಕಿವುಡರು, ಕುರುಡರು, ದೃಢಕಾಯರು ಇವರೇ ಮೊದಲಾದವರೆಲ್ಲರನ್ನೂ ಒಂದೇ ಗುಂಪು ಮಾಡಿ ೪೦೦ಮೀ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಆದೇಶಿಸೋಣ. ಆರಂಭದ ಗೆರೆಯಗುಂಟ ಎಲ್ಲರನ್ನೂ ನಿಲ್ಲಿಸಿ. ಓಟ ಕೊನೆಗೊಳ್ಳುವ ತಾಣ ಪೂರ್ವನಿರ್ಧಾರಿತ, ಓಡಬೇಕಾದ ದೂರವೂ ಪೂರ್ವನಿರ್ಧಾರಿತ. ಇನ್ನೂ ಒಂದು ಷರತ್ತು ವಿಧಿಸೋಣ. ಪೂರ್ವನಿಗದಿತ ಅವಧಿಯೊಳಗೆ ಅಂತಿಮ ಗೆರೆಯನ್ನು ದಾಟದವರು ನಿಷ್ರಯೋಜಕರು ಎಂಬುದಾಗಿ ಘೋಷಿಸಲಾಗುತ್ತದೆ. 
ಪರಿಣಾಮ ಊಹಿಸಬಲ್ಲಿರಲ್ಲವೇ? ನಮ್ಮ ಸಾರ್ವತ್ರಿಕ ಶಿಕ್ಷಣವೂ ಇದೇ ರೀತಿ ಜರಗುತ್ತಿದೆ ಎಂಬುದು ನನ್ನ ನಂಬಿಕೆ. ವಿಭಿನ್ನ ಕಲಿಕಾ ಸಾಮರ್ಥ್ಯ ಉಳ್ಳವರು, ವಿಭಿನ್ನ ವೇಗಗಳಲ್ಲಿ ಕಲಿಯುವವರು, ವಿಭಿನ್ನ ವಿಷಯಗಳಲ್ಲಿ ಆಸಕ್ತಿ ಉಳ್ಳವರು, ವಿಭಿನ್ನ ಕಲಿಕಾಶೈಲಿಯವರು, ಕಲಿಕೆಯ ವಿಭಿನ್ನ ಆರಂಭಿಕ ಮಟ್ಟಗಳಲ್ಲಿ ಇರುವವರು ಇವರೇ ಮೊದಲಾದವರನ್ನು ಒಂದು ಗುಂಪು ಮಾಡಿ ನೀವೆಲ್ಲರೂ ಇಷ್ಟು ಅವಧಿಯಲ್ಲಿ ಇಷ್ಟನ್ನು ಕಲಿಯಲೇ ಬೇಕು, ಕಲಿಯದೇ ಇದ್ದರೆ ನಿಮ್ಮನ್ನು ಫೇಯಿಲ್ ಎಂಬುದಾಗಿ ಪರಿಗಣಿಸಲಾಗುತ್ತದೆ’ ಎಂಬುದಾಗಿ ಘೋಷಿಸುವುದು ಸರಿಯೇ? ನೀವೇ ಆಲೋಚಿಸಿ

ಚಿಂತನೆ ೧೦
ಸಾರ್ವತ್ರಿಕ ಶಿಕ್ಷಣಪಡೆದ ನಂತರ ನಾನು ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ಈಗ ಕಲಿಯುತ್ತಿರುವುದನ್ನು ಕಲಿಯದೇ ಇದ್ದರೆ ವೃತ್ತಿ/ನಿತ್ಯಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಅನ್ನುವಂಥ ವಿಷಯ/ಕುಶಲತೆ/-- ಮಾತ್ರ ಸಾರ್ವತ್ರಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಇದ್ದರೆ ಮಾತ್ರ ಕಲಿತದ್ದು ಸಾರ್ಥಕವಾಗುತ್ತದೆ. ಈಗ ಅಂತಿದೆಯೇ? ನೀವೇ ಮೆಲುಕು ಹಾಕಿ.

ಚಿಂತನೆ ೧೧
ಪ್ರಯೋಗದ ಉದ್ದೇಶ, ಪ್ರಯೋಗ ಮಾಡಲು ಬೇಕಾಗುವ ಉಪಕರಣಗಳು ಹಾಗು ರಾಸಾಯನಿಕಗಳು, ಉಪಕರಣಗಳನ್ನು ಜೋಡಿಸಬೇಕಾದ ಕ್ರಮ, ಪ್ರಯೋಗ ಮಾಡಬೇಕಾದ ವಿಧಾನ, ಪ್ರಯೋಗಾವಧಿಯಲ್ಲಿ ಏನನ್ನು ಹೇಗೆ ವೀಕ್ಷಿಸಬೇಕು, ವೀಕ್ಷಿಸಿದ್ದನ್ನು ಹೇಗೆ ದಾಖಲಿಸಬೇಕು, ದಾಖಲಿಸಿದ ಮಾಹಿತಿಯನ್ನು ಉಪಯೋಗಿಸಿ ಅಪೇಕ್ಷಿತ ಅಂಶವನ್ನು ಹೇಗೆ ಲೆಕ್ಕಿಸಬೇಕು/ಕಂಡುಹಿಡಿಯಬೇಕು, ಪ್ರಯೋಗ ಸರಿಯಾಗಿ ಮಾಡಿದ್ದರೆ ಏನು ಫಲಿತಾಂಶ ದೊರೆಯಬೇಕು - ಇವಿಷ್ಟನ್ನೂ ತಿಳಿಸಿ ಪಿ ಯು ಸಿ ಹಾಗು ಪದವಿ ಹಂತಗಳಲ್ಲಿ ಪ್ರಯೋಗಗಳನ್ನು ಮಾಡಿಸುವುದರಿಂದ ಸಾಧಿಸುವುದಾದರೂ ಏನನ್ನು? ಇಂತು ಕಲಿತರೆ ವಿಜ್ಞಾನದಲ್ಲಿ ಪ್ರಯೋಗಗಳನ್ನು ಮಾಡಬೇಕಾದ್ದರ ಮಹತ್ವ, ಅನಿವಾರ್ಯತೆ ಇವೇ ಮೊದಲಾದವುಗಳು ನಿಜವಾಗಿಯೂ ಮನೋಗತವಾಗುತ್ತವೆಯೇ? ನೀವೇ ಆಲೋಚಿಸಿ.

ಚಿಂತನೆ ೧೨
ಶಿಸ್ತಿನ ಬಾಳ್ವೆ ಮಕ್ಕಳಲ್ಲಿ ಬೇರೂರಲಿ ಎಂಬ ಉದ್ದೇಶದಿಂದ ಆ ಶಾಲೆಯಲ್ಲಿ ಶಿಸ್ತಿಗೆ ಬಲು ಪ್ರಾಧಾನ್ಯ ನೀಡಲಾಗುತ್ತಿತ್ತು, ಬಾಹ್ಯಪ್ರೇರಿತ ಶಿಸ್ತು ಮುಂದೆಂದೋ ಒಂದು ದಿನ ಸ್ವಶಿಸ್ತಿನ ಬೇರೂರುವಿಕೆಗೆ ಕಾರಣವಾಗುತ್ತದೆ ಎಂಬ ನಂಬಿಕೆಯಿಂದ. 
ಅದೊಂದು ದಿನ ಸ್ವಶಿಸ್ತು ಇದ್ದರೆ ಆಗುವ ಅನುಕೂಲಗಳನ್ನು ಶಿಕ್ಷಕರು ತರಗತಿಯಲ್ಲಿ ಬಲು ಚೆನ್ನಾಗಿ ವಿವರಿಸಿದರು. ಯುಕ್ತ ಪ್ರಶ್ನೆಗಳನ್ನು ಕೇಳುವುದರ ಮುಖೇನ ಬೋಧಿಸಿದ್ದು ಮಕ್ಕಳಿಗೆ ಮನವರಿಕೆ ಆಗಿರುವುದನ್ನು ಖಾತರಿ ಪಡಿಸಿಕೊಂಡರು. 
ಯಾವಾಗಲೂ ಒಂದೈದು ನಿಮಿಷ ತಡವಾಗಿ ಬರುತ್ತಿದ್ದ, ಬಹುಮಂದಿ ಮಕ್ಕಳೂ ಶಿಕ್ಷಕರೂ ಹೋಗುವ ಸಿಟಿ ಬಸ್ಅಂದು ಸಂಜೆ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಬಂದೇಬಿಟ್ಟಿತು.
ತರಗತಿಯಲ್ಲಿ ಬೋಧಿಸಿದ್ದ ರಸ್ತೆ ದಾಟುವ ಮುನ್ನ ಮಾಡಬೇಕಾದದ್ದೇನು?, ಬಸ್‌ ಹತ್ತುವಾಗ ಸರತಿ ಸಾಲಿನಲ್ಲಿ ನಿಲ್ಲಬೇಕಾದದ್ದು ಏಕೆ?’ ಇವೇ ಮೊದಲಾದವು ಶಿಕ್ಷಕರಿಗೂ ವಿದ್ಯಾರ್ಥಗಳಿಗೂ ಮರೆತೇ ಹೋಗಿತ್ತು. ಮಕ್ಕಳು ಹೋಎಂಬುದಾಗಿ ಅರಚುತ್ತಾ ರಸ್ತೆ ದಾಟಿ ತಳ್ಳಾಡಿಕೊಂಡು ಬಸ್‌ ಹತ್ತಿದರು, ಅವರೊಂದಿಗೆ ಶಿಕ್ಷಕರೂ ಇದ್ದರು! :D 
ಪ್ರೌಢಶಾಲಾ ಹಂತದಲ್ಲಿ ಶಾಲಾ ಆವರಣದೊಳಗೆ ಇರುವ ಶಿಸ್ತು ಹೊರಗೆ ಬಂದಾಕ್ಷಣ ಬಹುಮಂದಿಯಲ್ಲಿ ಮಾಯವಾಗುವುದೇಕೆ?

ಚಿಂತನೆ ೧೩
"೮ ನೆಯ ತರಗತಿಯ ವರೆಗೆ ವಾರ್ಷಿಕ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಮುಂದಿನ ತರಗತಿಗೆ ಉತ್ತೀರ್ಣರಾಗಿದ್ದಾರೆ ಎಂಬುದಾಗಿ ಘೋಷಿಸಲೇ ಬೇಕು" ಅನ್ನುತ್ತದೆ ಶಿಕ್ಷಣ ನೀತಿ. ಕಲಿಯಬೇಕಾದದ್ದನ್ನು ಕಲಿಯದೇ ಇದ್ದರೂ? ಉತ್ತೀರ್ಣರಾಗಲು ಅಗತ್ಯವಾದ ಕನಿಷ್ಠ ಅಂಕಗಳನ್ನು ಗಳಿಸದೇ ಇದ್ದರೂ? ನಿರಂತರ-ಸಮಗ್ರ ಮೌಲ್ಯಮಾಪನ ತಂತ್ರಗಳಿಂದ ಕಲಿಕೆಯಲ್ಲಿ ಅಪೇಕ್ಷಿತ ವೇಗದಲ್ಲಿ ವಿದ್ಯಾರ್ಥಿಗಳು ಮುಂದುವರಿಯುತ್ತಿದ್ದಾರೆಯೇ ಎಂಬುದನ್ನು ಶಿಕ್ಷಕರು ಗಮನಿಸುತ್ತಿದ್ದು ಅಗತ್ಯವಿದ್ದಾಗಲೆಲ್ಲ ಪರಿಹಾರಾತ್ಮಕ ಬೋಧನೆಯ ನೆರವಿನಿಂದ ಹಿಂದುಳಿದವರನ್ನು ಮುಂದಕ್ಕೆ ತಂದರೆ ಅನುತ್ತೀರ್ಣತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅನ್ನುತ್ತಾರೆ ಈ ನೀತಿ ರೂಪಿಸಿದ ಶಿಕ್ಷಣ ತಜ್ಞರು’. 
ಆದರೆ ನಿಜವಾಗಿಯೂ ನಡೆಯುತ್ತಿರುವುದೇನು? 
ನಿರಂತರ ಮೌಲ್ಯಮಾಪನಾವಧಿಯಲ್ಲಿ ವಿದ್ಯಾರ್ಥಿಗಳು ಅಪೇಕ್ಷಿತ ವೇಗದಲ್ಲಿ ಮುಂದುವರಿಯುತ್ತಿದ್ದಾರೆ ಎಂಬುದನ್ನು ಸಾಬೀತು ಪಡಿಸಬಹುದಾದ ದಾಖಲೆಗಳನ್ನೇ ಪೇರಿಸಿ, ಉತ್ತೀರ್ಣರಾಗಲು ಅಪೇಕ್ಷಿತ ಕನಿಷ್ಠ ಅಂಕಗಳನ್ನು ಗಳಿಸದೇ ಇರುವವರಿಗೆ ಅವರು ಉತ್ತೀರ್ಣರಾಗಲು ಎಷ್ಟು ಬೇಕೋ ಅಷ್ಟು ಕೃಪಾಂಕಗಳನ್ನು ನೀಡಿ ಮುಂದಿನ ತರಗತಿಗೆ ತಳ್ಳಿಶಿಕ್ಷಣ ನೀತಿಯನ್ನು ಪಾಲಿಸುವುದು. ಈ ವಿದ್ಯಾರ್ಥಿಗಳು ಮುಂದೆ ಎಸ್ ಎಸ್ ಎಲ್ ಸಿ / ಪಿ ಯು ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮುನ್ನ ಪರೀಕ್ಷೆತೆಗೆದುಕೊಳ್ಳಲು ವಿಶೇಷ ತರಬೇತಿ ನೀಡುವುದು, ತದನಂತರವೂ ಅಪೇಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಇದ್ದರೆ ಕೃಪಾಂಕಗಳ ನೆರವಿನಿಂದ ಅಪೇಕ್ಷಿತ ಪ್ರಮಾಣದಲ್ಲಿ ಅಥವ ಅದರ ಆಸುಪಾಸಿನಲ್ಲಿ ತೇರ್ಗಡೆಯಾಗುವಂತೆ ನೋಡಿಕೊಳ್ಳುವುದು!
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಿ ಯು ಸಿಗೆ ದಾಖಲಾದವರ ಪೈಕಿ ಅನೇಕರು ಅನುತ್ತೀರ್ಣರಾಗುವುದಕ್ಕೆ ಹಾಗು ಪಿ ಯು ಸಿ ಉತ್ತೀರ್ಣರಾದವರ ಪೈಕಿ ಅನೇಕರು ಉನ್ನತ ಶಿಕ್ಷಣದಲ್ಲಿ ಯಶಸ್ವಿಗಳಾಗದೇ ಇರುವುದಕ್ಕೆ ಒಂದು ಕಾರಣ ತಿಳಿಯಿತಲ್ಲವೇ?

ಚಿಂತನೆ ೧೪
ರಾಷ್ಟ್ರೀಯ ದಿನಾಚರಣೆಗಳಂದು ಎಲ್ಲ ವಿದ್ಯಾಲಯಗಳಲ್ಲಿ ಬೆಳಗ್ಗೆ ಧ್ವಜಾರೋಹಣ, ಧ್ವಜವಂದನೆ ಕಾರ್ಯಕ್ರಮ ಯಾಂತ್ರಿಕವಾಗಿ ಆಚರಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಸಾಮಾನ್ಯವಾಗಿ ಈ ಕಾರ್ಯಕ್ರಮಗಳು ಸಾಧ್ಯವಿರುವಷ್ಟು ಕಡಿಮೆ ಕಾಲಾವಧಿಯಲ್ಲಿ ಮುಗಿಯುತ್ತವೆ, ಎಲ್ಲರಿಗೂ ಅನ್ಯ ಕಾರ್ಯನಿಮಿತ್ತ ತುರ್ತಾಗಿ ಮನೆಗೋ, ಆಟದ ಮೈದಾನಕ್ಕೋ ಇನ್ನೆಲ್ಲಿಗೋ ಹೋಗಬೇಕಾಗಿರುವುದರಿಂದ.
ಈ ಕುರಿತು ಇನ್ನೊಂದು ಬಲು ಮುಖ್ಯವಾದ ಅಂಶವನ್ನು ಯಾರೂ ಗಮನಿಸಿದಂತೆ ಕಾಣುತ್ತಿಲ್ಲ. ಧ್ವಜಾರೋಹಣ ಎಷ್ಟು ಮುಖ್ಯವಾದ ಕಾರ್ಯವೋ ಅಷ್ಟೇ ಮುಖ್ಯವಾದ ಧ್ವಜಾವರೋಹಣ ಕಾರ್ಯಕ್ರಮದ ಕುರಿತು ಯಾರೂ ತಲೆಕೆಡಿಸಿಕೊಂಡಂತಿಲ್ಲ. ಧ್ವಜಾವರೋಹಣಕ್ಕೂ ಒಂದು ನಿಗದಿತ ವಿಧಿವಿಧಾನವಿದೆ ಎಂಬುದು ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಸೂರ್ಯಾಸ್ತಕ್ಕೂ ಮುನ್ನವೇ ಇದು ಜರಗಬೇಕು ಎಂಬ ಅರಿವೂ ಇದ್ದಂತಿಲ್ಲ. ಬಹುತೇಕ ವಿದ್ಯಾಲಯಗಳಲ್ಲಿ ಹಾರಿಸಿದ ಧ್ವಜವನ್ನು ಇಳಿಸಿ ಮಾರನೆಯ ದಿನ ಸಂಬಂಧಿಸಿದವರಿಗೆ ಅದನ್ನು ತಲುಪಿಸುವ ಜವಾಬ್ದಾರಿ ಯಾರೋ ಒಬ್ಬ ಜವಾನ ಅಥವ ರಾತ್ರಿ-ಕಾವಲುಗಾರನದಾಗಿರುತ್ತದೆ. ಅವನು ಅದನ್ನು ಒಟ್ಟಾರೆ ಇಳಿಸಿ ಹೆಗಲಿನ ಮೇಲೆ ಟವಲಿನಂತೆ ಹಾಕಿಕೊಂಡು ಹಗ್ಗವನ್ನು ಕಂಬಕ್ಕೆ ಕಟ್ಟಿ ತದನಂತರ ಟವೆಲ್‌ ಮಡಚಿದಂತೆಯೇ ಮಡಚಿ ಇಡುವುದನ್ನು ನಾನು ಗಮನಿಸಿದ್ದೇನೆ. 
ಇದು ಸರಿಯೇ? ರಾಷ್ಟ್ರಧ್ವಜಕ್ಕೆ ಸಲ್ಲಿಸ ಬೇಕಾದ ಗೌರವ ಇದೇನಾ?

ಚಿಂತನೆ ೧೫
ತರಗತಿಗಳಲ್ಲಿ ಶಿಕ್ಷಕರು ಕೈನಲ್ಲಿ ಪಠ್ಯಪುಸ್ತಕ ಹಿಡಿದುಕೊಂಡು ಅದನ್ನು ಓದಿಕೊಂಡು ಪಾಠ ಬೋಧಿಸುವುದನ್ನು ನಾವು ಅನೇಕ ಶಾಲೆಗಳಲ್ಲಿ ನೋಡಬಹುದು. ಶಿಕ್ಷಕ ತಾನು ಬೋಧಿಸುತ್ತಿರುವ ವಿಷಯದ ಮೇಲೆ ಹಿಡಿತ/ಪ್ರಭುತ್ವ ಸಾಧಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ನಾವು ಪ್ರಭುತ್ವ ಸಾಧಿಸಿರದ ವಿಷಯವನ್ನು ಬೋಧಿಸುವುದು ಹೇಗೆ? ಒಂದು ವೇಳೆ ಪಠ್ಯಪುಸ್ಸಕಗಳಲ್ಲಿ ಇರುವ ವಾಕ್ಯಗಳನ್ನೇ ಅಕ್ಷರಶಃ ಅಥವ ತುಸು ಬದಲಿಸಿ ಹೇಳುವುದಕ್ಕೆ, ಪಠ್ಯಪುಸ್ತಕದಲ್ಲಿ ಇರುವ ಉದಾಹರಣೆಗಳನ್ನೇ ಹೇಳುವುದಕ್ಕೆ ಬೋಧನೆ ಅನ್ನುವುದು ಸರಿಯೇ?
ನನ್ನ ದೃಷ್ಟಿಯಲ್ಲಿ ಭಾಷಾವಿಷಯಗಳ ತರಗತಿಗಳನ್ನು ಹೊರತುಪಡಿಸಿ ಉಳಿದ ವಿಷಯಗಳ ತರಗತಿಗಳಿಗೆ ಶಿಕ್ಷಕರೇ ಆಗಲಿ ವಿದ್ಯಾರ್ಥಿಗಳೇ ಆಗಲಿ ಪಠ್ಯಪುಸ್ತಕ ತರುವ ಅಗತ್ಯವೇ ಇಲ್ಲ. ಹೋಮ್‌ ವರ್ಕ್‌ಮಾಡಲು, ತರಗತಿಯಲ್ಲಿ ಅರ್ಥವಾಗದೇ ಇದ್ದ ಭಾಗವನ್ನು ಮತ್ತೊಮ್ಮೆ ನೋಡಲು ವಿದ್ಯಾರ್ಥಿಗಳು ಮನೆಯಲ್ಲಿ ಪಠ್ಯಪುಸ್ತಕ ಉಪಯೋಗಿಸಬೇಕೇ ವಿನಾ ತರಗತಿಯಲ್ಲಿ ಓದಲು ಅಲ್ಲ. ಶಿಕ್ಷಕನಿಗೆ ಬೋಧಿಸಬೇಕಾದ ವಿಷಯದ ವ್ಯಾಪ್ತಿ, ಆಳ ಇತ್ಯಾದಿಗಳು ಎಷ್ಟಿರಬೇಕು ಎಂಬುದನ್ನು ಸೂಚಿಸುವ ಮಾರ್ಗದರ್ಶಿ ಪಠ್ಯಪುಸ್ತಕವಾಗ ಬೇಕೇ ವಿನಾ ಮಾಹಿತಿಯ ಆಕರ ಅಲ್ಲ.
ದುರದೃಷ್ಟವಶಾತ್ ಇಂದು ವಿದ್ಯಾರ್ಥಿಗಳು ಅಧ್ಯಯಿಸಲೋಸುಗ ರಚಿತವಾದ ಪಠ್ಯಪುಸ್ತಕವೇ ಬಹುಮಂದಿ ಶಿಕ್ಷಕರ ಪ್ರಧಾನ ಆಕರ ಗ್ರಂಥವೂ ಆಗಿದೆ!
ಚಿಂತನೆ ೧೬
'ನರ್ಸರಿ ಸ್ಕೂಲ್‌ಗಳಿಗೆ ಮಕ್ಕಳನ್ನು ಸೇರಿಸದೇ ಇರುವುದು ಒಂದು ಅಕ್ಷಮ್ಯ ಅಪರಾಧ ಅನ್ನುವ ಮನೋಧರ್ಮ ವ್ಯಾಪಕವಾಗಿ ಬೇರೂರಿರುವುದನ್ನು ನಾವು ಇಂದು ಕಾಣಬಹುದು. ನರ್ಸರಿ ಶಿಕ್ಷಣನಿಜವಾಗಿಯೂ ಅಗತ್ಯವೇ ಎಂಬುದರ ಕುರಿತು ಈಗ ನಾನು ಚರ್ಚಿಸುವುದಿಲ್ಲ. ನರ್ಸರಿಶಿಕ್ಷಣದ ಹೆಸರಿನಲ್ಲಿ ಜರಗುತ್ತಿರುವ ಅನಾಹುತದತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. 
ಇಂದಿನ ಮಕ್ಕಳ ಪೈಕಿ ಎಷ್ಟು ಮಂದಿ ಬಲು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾ ಶಾಲೆಗೆ ಹೋಗುತ್ತಾರೆ ಎಂಬುದನ್ನು ಒಮ್ಮೆ ಅವಲೋಕಿಸಿ. ರಜೆಗಳನ್ನು ಏಕಾದರೂ ಕೊಡುತ್ತಾರೋ, ಶಾಲೆಯೇ ಇದ್ದಿದ್ದರೆ ಚೆನ್ನಾಗಿತ್ತು ಎಂಬುದಾಗಿ ಎಷ್ಟು ಮಕ್ಕಳು ಹಂಬಲಿಸುತ್ತಾರೆ ಎಂಬುದನ್ನು ಅವಲೋಕಿಸಿ. ಪ್ರತೀದಿನ ಶಾಲೆ ಬಿಟ್ಟೊಡನೆ ಬಹು ಮಂದಿ ಮಕ್ಕಳು ಬಲು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾ ಹೊರಗೆ ಓಡಿ ಬರುವುದೇಕೆ ಎಂಬುದರ ಕುರಿತು ತುಸು ಆಲೋಚಿಸಿ. 
ಕಲಿಕೆ ಒಂದು ಆನಂದದಾಯಕ ಅನುಭವ ಆಗುವುದರ ಬದಲು ವೇದನಾದಾಯಕ ಅನುಭವ ಆಗಿರುವುದು ಇದಕ್ಕೆ ಕಾರಣ ಆಗಿರ ಬಹುದೇ ನೀವೇ ಆಲೋಚಿಸಿ.
ಕಲಿಕೆ ಒಂದು ಅನಿವಾರ್ಯ ಕೆಟ್ಟ ಅನುಭವಎಂಬ ಅನಿಸಿಕೆ ನಮ್ಮ ಮಕ್ಕಳದ್ದಾಗಿರಬೇಕು ಎಂಬುದಾಗಿ ನನ್ನ ಊಹೆ. ಈ ಅನಿಸಿಕೆ ಬೆಳೆಯಲು ಸದೃಢವಾದ ಅಡಿಪಾಯ ಹಾಕುತ್ತಿವೆ ನಮ್ಮ ಬಹಳಷ್ಟು ನರ್ಸರಿಶಾಲೆಗಳು. 
೫+ ನಿಂದ ೭ವರ್ಷಗಳ ಅವಧಿಯಲ್ಲಿ ಔಪಚಾರಿಕ ಶಿಕ್ಷಣ ಆರಂಭಿಸುವುದು ಅತ್ಯುತ್ತಮ ಎಂಬುದು ‌ಎಲ್ಲ ತಜ್ಞರ ಅಭಿಮತ. ಅಂದ ಮೇಲೆ ಅದಕ್ಕಿಂತ ಕೆಳಗಿನ ವಯಸ್ಸಿನಲ್ಲಿ ಕಲಿಯಬೇಕಾದದ್ದೇನು? ಓದು-ಬರೆಹ-ಗಣಿತವಂತೂ ಖಂಡಿತ ಅಲ್ಲ. ಆಗಬೇಕಾದದ್ದು ಸಾಮಾಜಿಕ ಸಾಹಚರ್ಯ ಬೆಳೆಸಿಕೊಳ್ಳು ಅಗತ್ಯವಾದ ನೈಪುಣ್ಯಗಳು, ಬಾಹ್ಯಪ್ರಪಂಚದ, ಅರ್ಥಾತ್ ತನ್ನ ಸುತ್ತಲಿನ ಪರಿಸರದ ಕುರಿತು ಅನುಭವಮುಖೇನ ಪ್ರಾಥಮಿಕ ಮಾಹಿತಿ ಗಳಿಕೆ, ನರ-ಸ್ನಾಯು ಮಂಡಲಗಳ ಸಮನ್ವಯತೆಯ ಸಾಧನೆ, ಅನುಭವಮುಖೇನ ವೈಯಕ್ತಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಪ್ರಾಥಮಿಕ ಕೌಶಲಗಳ ಗಳಿಕೆ -----. ಇವೆಲ್ಲವೂ ನಕ್ಕುನಲಿಯುತ್ತಾ ಕಲಿಯಬೇಕಾದವೇ ವಿನಾ ಶಿಕ್ಷಕರ ಪ್ರವಚನಗಳ ಮುಖೇನವಾಗಲೀ ವರ್ಕ್‌ಬುಕ್‌ಗಳನ್ನು ಭರ್ತಿ ಮಾಡುವುದರಿಂದಾಗಲೀ ಅಲ್ಲ. ದುರದೃಷ್ಟವಶಾತ್, ಇಂದಿನ ಬಹಳಷ್ಟು ನರ್ಸರಿ ಶಾಲೆಗಳಲ್ಲಿ ಆರಂಭದಿಂದಲೇ ಔಪಚಾರಿಕವಾಗಿ ಅಕ್ಷರ-ಪುಟ್ಟ ಪದಗಳನ್ನು ಬರಯಲು, ಎಣಿಸುವಿಕೆ ಹಾಗು ಕೂಡಿಸುವಿಕೆ-ಕಳೆಯುವಿಕೆ, ಮಗ್ಗಿ ಮೊದಲಾದವನ್ನು ಕಲಿಸಲಾಗುತ್ತಿದೆ. ಕಲಿಕೆ ತೀರಾ ದುಃಖದಾಯಕವಾಗದೇ ಇರಲಿ ಎಂಬುದಕ್ಕಾಗಿ ಕೆಲವು ಶಿಶುಗೀತೆಗಳು, ಯಾರೋ ಬಿಡಿಸಿ ಮುದ್ರಿಸಿದ್ದ ರೇಖಾಚಿತ್ರಗಳಿಗೆ ಬಣ್ಣ ತುಂಬುವುದು, ಒಂದೆರಡು ಏಕ್ಙನ್‌ ಸಾಂಗ್ಚಿಮುಕಿಸಲಾಗಿರುತ್ತದೆ. 
ಶಾಲೆ , ಅಧ್ಯಯನ, ಕಲಿಕೆ ಎಂದರೆ ಮುಖ ಮಕ್ಕಳ ಮುಖ ಮುದುಡುವಂತೆ ಮಾಡುವ ಅತ್ಯಂತ ಯಶಸ್ವೀ ವಿಧಾನ ಇದು!
ಇದು ಶಿಕ್ಷಕರಿಗೆ ತಿಳಿದಿಲ್ಲವೇ? ತಿಳಿದಿದೆ, ಖಂಡಿತ ತಿಳಿದಿದೆ. ಆದಾಗ್ಯೂ ಅವರೇಕೆ ತಪ್ಪು ಮಾಡುತ್ತಿದ್ದಾರೆ. ಶಿಕ್ಷಕರನ್ನೇ ಕೇಳಿ ನೋಡಿ ತಿಳಿಯುತ್ತದೆ, ತಂದೆತಾಯಿಯರು ಎಂಬ ಕಟುಸತ್ಯ! ತಮ್ಮ ಮಕ್ಕಳು ಬೇಗನೆ ಅಧಿಕ ಸಂಬಳ ತರುವವರಾಗಬೇಕು ಎಂಬ ದುರಾಸೆ!!

ಚಿಂತನೆ ೧೭
ಪ್ರತಿಷ್ಠಿತಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಳ್ಳಲೋಸುಗ ಹಾಗು ವಿಜ್ಞಾನ/ವಾಣಿಜ್ಯ ವಿಷಯಗಳನ್ನು ಐಚ್ಛಿಕ ವಿಷಯಗಳಾಗಿಸಿಕೊಳ್ಳಲೋಸುಗ ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳೂ ಅಂತಿಮ/ಸಿ ಇ ಟಿ ಪರೀಕ್ಷೆಯಲ್ಲಿ ಸಾಧ್ಯವಿರುವಷ್ಟು ಹೆಚ್ಚು ಅಂಕ ಗಳಿಸಲೋಸುಗ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳೂ ಖಾಸಗಿ ಟ್ಯೂಷನ್‌ಗೆ ಹೋಗದೇ ಇರುವುದು ಮೂರ್ಖತನ ಅನ್ನುವ ಭಾವನೆ ಸಮುದಾಯದಲ್ಲಿ ಇರುವಂತಿದೆ. ಖ್ಯಾತನಾಮರಿಂದ ಅಥವ ಪ್ರತಿಷ್ಠಿತಟ್ಯೂಷನ್‌ ಸಂಸ್ಥೆಗಳಲ್ಲಿ ಇದಕ್ಕಾಗಿ ಸೀಟು ಗಿಟ್ಟಿಸಿಕೊಳ್ಳಲೂ ಪೈಪೋಟಿ ಇದೆ. ಹೆಚ್ಚು ಶುಲ್ಕ ಕೊಟ್ಟರೆ ಎ ಸಿಕೊಠಡಿಯಲ್ಲಿ ಕೋಚಿಂಗ್ ಕ್ಲಾಸ್ನಡೆಸುವ ಸಂಸ್ಥೆಗಳೂ ಇವೆ. ಶಾಲೆಗಳು ಹಾಗು ಕಾಲೇಜುಗಳು ಇರುವುದು ಇಂತಿಷ್ಟು ಹಾಜರಾತಿ ಇರಲೇಬೇಕು ಎಂಬ ನಿಯಮ ಪಾಲನೆಯನ್ನು ಸಾಧ್ಯವಾಗಿಸಲೋಸುಗ ಮಾತ್ರವೇ ಏನೋ ಎಂಬ ಸಂಶಯ ನನಗಿದೆ. ಕೆಲವು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಹೆಚ್ಚುವರಿ ಶುಲ್ಕ ನೀಡುವವರಿಗೆ ತಾವೇ ಕೋಚಿಂಗ್‌ ಕ್ಲಾಸ್‌ನಡೆಸುವ ಪರಿಪಾಠವೂ ಬೆಳೆಯುತ್ತಿದೆ. ಕೋಚಿಂಗ್‌ ಕ್ಲಾಸ್‌ಗಳಲ್ಲಿ ಬೋಧಿಸುವ ಶಿಕ್ಷಕರು ಯಾವ ವಿದ್ಯಾಲಯಗಳಲ್ಲಿ ವೃತ್ತಿನಿರತರಾಗಿರುತ್ತಾರೋ ಆ ವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳೂ ಅವರ ಹತ್ತಿರ ಕೋಚಿಂಗ್‌ ತೆಗೆದುಕೊಳ್ಳಲು ಬರುತ್ತಿರುವುದನ್ನು ನೋಡಿದರೆ ಅವರು ತರಗತಿಯಲ್ಲಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂಬುದಾಗಿಯೇ ಅರ್ಥೈಸಬೇಕಲ್ಲವೇ?
ಮಾಡಬೇಕಾದ ರೀತಿಯಲ್ಲಿ ತರಗತಿಗಳಲ್ಲಿ ಪಾಠ ಮಾಡಿದರೆ ಟ್ಯೂಷನ್‌ ಅಗತ್ಯವಿಲ್ಲ ಎಂಬುದು ನನ್ನ ನಿಲುವು. ನಾವು ವಿದ್ಯಾರ್ಥಿಗಳಾಗಿದ್ದಾಗ ಮನೆಪಾಠಕ್ಕೆ ಹೋಗುವವರು ಕಲಿಕೆಯಲ್ಲಿ ತುಂಬಾ ಹಿಂದುಳಿದವರಾಗಿರುತ್ತಿದ್ದರು. ಈಗ ಇದಕ್ಕೆ ತದ್ವಿರುದ್ಧವಾದ ವಿದ್ಯಮಾನ ನಾವು ಗಮನಿಸುತ್ತಿದ್ದೇವೆ. ನಗಬೇಕೋ ಅಳಬೇಕೋ ಗೊತ್ತಿಲ್ಲ!

ಚಿಂತನೆ ೧೮
ಅನೇಕ ವಿದ್ಯಾಲಯಗಳಲ್ಲಿ ಶಿಕ್ಷಕರು ಪ್ರತೀ ಬೋಧನಾವಧಿಯ ಅಂತ್ಯದಲ್ಲಿ ನೋಟ್ಸ್‌ಬರೆಸುವ ಪರಿಪಾಠ ಇನ್ನೂ ಇದೆ. ಇದರ ಉದ್ದೇಶ ನನಗೆ ಈ ವರೆಗೂ ಅರ್ಥವಾಗಿಲ್ಲ. ಇದಕ್ಕೆ ಬದಲಾಗಿ ಬೋಧನಾವಧಿಯ ಅಂತ್ಯದಲ್ಲಿ ಒಂದೋ ಎರಡೋ ಪ್ರಶ್ನೆಗಳನ್ನು ಕೊಟ್ಟು ಅದಕ್ಕೆ ಉತ್ತರ ವಿದ್ಯಾರ್ಥಿಗಳೇ ಪತ್ತೆ ಹಚ್ಚುವಂತೆ ಪ್ರೋತ್ಸಾಹಿಸುವುದು ಒಳಿತಲ್ಲವೇ? ಇಂತು ಕೇಳುವ ಪ್ರಶ್ನೆಗಳ ಉತ್ತರಗಳನ್ನು ಒಟ್ಟುಗೂಡಿಸಿದರೆ ಅಂದು ಬೋಧಿಸಿದ್ದರ ತಿರುಳು ದೊರೆಯುವಂತಿರಬೇಕು. ಸಾರ್ವತ್ರಿಕ ಶಿಕ್ಷಣದಲ್ಲಿ ಈ ಕ್ರಮ ಅನುಸರಿಸಿದರೆ ಪಠ್ಯಪುಸ್ತಕದ ಸದುಪಯೋಗವಾಗುವುದಲ್ಲದೆ ಉನ್ನತ ಶಿಕ್ಷಣ ಹಂತದಲ್ಲಿ ತನ್ನ ಅಧ್ಯಯನಕ್ಕೆ ಅಗತ್ಯವಾದ ಟಿಪ್ಪಣಿಗಳನ್ನು ತಾನೇ ತಯಾರಿಸಿಕೊಳ್ಳಲು ಸುಲಭವಾಗುತ್ತದಲ್ಲವೇ? ಸ್ವಾಧ್ಯಯನವನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ಪರಿಶೀಲಿಸಿ ತಿದ್ದುಪಡಿಗಳನ್ನು ಸೂಚಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲೋಸುಗ ನೋಟ್ಸ್‌ಕೊಡುತ್ತಿರಬಹುದೇ?
ತರಗತಿಗಳಲ್ಲಿ ನೋಟ್ಸ್ಬರೆಸುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಸಿದ್ಧವಾಗಲು ಅದನ್ನು ಹೊರತುಪಡಿಸಿ ಬೇರೇನನ್ನೂ ಓದದೇ ಇರುವ ಸಾಧ್ಯತೆ ಹೆಚ್ಚು. ನೋಟ್ಸ್‌ನಲ್ಲಿ ಇರುವ ಅಂಶಗಳನ್ನು ಹೊರತುಪಡಿಸಿ ಬೇರೆ ಏನಾದರೂ ಪ್ರಶ್ನೆ ಇದ್ದರೆ ಔಟ್‌ ಆಫ್‌ ಸಿಲೆಬಸ್ಅನ್ನುವ ಸಾಧ್ಯತೆಯೂ ಇದೆ.

ಚಿಂತನೆ ೧೯
ಅನೇಕ ಶಾಲಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯ ಕಲಿಕೆಯ ಸಾಧನೆಯನ್ನು ಶೇಕಡಾವಾರು ಅಂಕಗಳಲ್ಲಿ ಸೂಚಿಸುವುದು ಸಂಪ್ರದಾಯ. ೯೦% ಅಂಕ ಗಳಿಸಿದವನು ೪೦% ಅಂಕ ಗಳಿಸಿದವನಿಗಿಂತ ಮೇಲ್ದರ್ಜೆಯವನು ಎಂಬುದಾಗಿ ಇದನ್ನು ನಾವು ಅರ್ಥೈಸುವುದೂ ಸಾಮಾನ್ಯ. 
ಶಾಲೆಗಳಲ್ಲಿ ಕಲಿಕೆಯ ಅನಭವಗಳನ್ನು ಒದಗಿಸಬೇಕಾದ ರೀತಿಯಲ್ಲಿಯೇ ಒದಗಿಸಲಾಗುತ್ತಿದೆ ಎಂಬುದಾಗಿ ನಾನು ಭಾವಿಸಿಕೊಂಡು ಈ ಅಂಕಗಳನ್ನು ಇಂತು ಅರ್ಥೈಸುತ್ತೇನೆ:
೯೦% ಅಂಕ ಗಳಿಸಿದವನು ಒಟ್ಟು ಕಲಿಯಬೇಕಾದದ್ದರಲ್ಲಿ ೧೦% ಕಲಿತಿಲ್ಲ. ೪೦% ಅಂಕ ಗಳಿಸಿದವ ಒಟ್ಟು ಕಲಿಯಬೇಕಾದದ್ದರಲ್ಲಿ ೬೦% ಕಲಿತಿಲ್ಲ. ಇದು ಋಣಾತ್ಮಕ ದೃಷ್ಟಿ ಕೋನ ಅನ್ನುವವರಿಗೆ ಆಲೋಚಿಸಲು ಇದರ ಪರಿಣಾಮದ ಇನ್ನೊಂದು ಮುಖದತ್ತ ಗಮನ ಸೆಳೆಯಲು ಬಯಸುತ್ತೇನೆ.
ಒಂದು ತರಗತಿಯಿಂದ ಇನ್ನೊಂದು ತರಗತಿಗೆ ತೇರ್ಗಡೆ ಆಗಬೇಕಾದರೆ ಕನಿಷ್ಠ ೪೦% ಅಂಕ ಗಳಿಸಬೇಕು ಎಂಬ ಕಾನೂನು ಇದೆ ಎಂಬುದಾಗಿ ಕಲ್ಪಿಸಿಕೊಳ್ಳಿ. ಇದರ ಅರ್ಥ ಒಂದು ಒಟ್ಟು ಕಲಿಯಬೇಕಾದದ್ದರಲ್ಲಿ ೬೦% ಕಲಿಯದೇ ಇದ್ದರೂ ಮುಂದಿನ ತರಗತಿಯ ಪಾಠಗಳನ್ನು ಕಲಿಯಲು ಅರ್ಹ! ಯಾವುದೇ ತರಗತಿಯಲ್ಲಿ ಕಲಿಯಬೇಕಾದದ್ದನ್ನು ಯಶಸ್ವಿಯಾಗಿ ಕಲಿಯಬೇಕಾದರೆ ಅದಕ್ಕೂ ಮುನ್ನ ಕಲಿತಿರಬೇಕಾದದ್ದನ್ನು ಕಲಿತಿರಲೇ ಬೇಕಲ್ಲವೇ? ೪೦% ಗಳಿಸಿದ ವಿದ್ಯಾರ್ಥಿಗಳಲ್ಲಿ ಬಹು ಮಂದಿ ಮುಂದಕ್ಕೂ ಆ ಮಟ್ಟದಲ್ಲಿ ಉಳಿಯಲೂ ಹೆಣಗಾಡಬೇಕಾಗಿರುವುದು ಏಕೆ ಎಂಬುದು ತಿಳಿಯಿತಲ್ಲವೇ? ಒಂದು ವೇಳೆ ೪೦%ನಷ್ಟು ಕಲಿತರೂ ಮುಂದಿನದನ್ನು ಕಲಿಯಲು ಅಡ್ಡಿ ಇಲ್ಲ ಅನ್ನುವುದಾದರೆ ಕಲಿಯದೇ ಇದ್ದರೂ ಪರವಾಗಿಲ್ಲ ಅನ್ನುವ ಅಂಶಗಳನ್ನು ಕಲಿಸಲು ಪ್ರಯತ್ನಿಸುವುದಾದರೂ ಏಕೆ? 
ಇನ್ನೂ ಒಂದು ಅಂಶವನ್ನು ನಿಮ್ಮ ಗಮನಕ್ಕೆ ತರುತ್ತೇನೆ, ಮೆಲುಕು ಹಾಕಿ: ೫೦% ಅಂಕ ಗಳಿಸಿ ದ್ವಿತೀಯ ಶ್ರೇಣಿಯಲ್ಲಿ ಸಿವಿಲ್‌ ಎಂಜಿನಿಯರಿಂಗ್ ಪದವಿ ಪಡೆದಾತ ಕಟ್ಟುವ ಕಟ್ಟೋಣಗಳು ಸದೃಢವಾಗಿ ದೀರ್ಘಕಾಲ ಉಳಿಯುವ ಸಂಭವನೀಯತೆ ೫೦% 
ಏಕೆಂದರೆ ಕಲಿಯಬೇಕಾದದ್ದರಲ್ಲಿ ೫೦% ಅವನು ಕಲಿತೇ ಇಲ್ಲ! 
ಅದೇ ರೀತಿ ೬೦% ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ವೈದ್ಯಕೀಯ ಪದವಿ ಪಡೆದವನ ಹತ್ತಿರ ಚಿಕಿತ್ಸೆಗಾಗಿ ಹೋದವ ಗುಣಮುಖನಾಗಿ ಹಿಂದಿರುಗುವ ಸಂಭವನೀಯತೆ ೬೦%! 
ಏಕೆಂದರೆ ಕಲಿಯಬೇಕಾದದ್ದರಲ್ಲಿ ೪೦% ಅವನು ಕಲಿತೇ ಇಲ್ಲ.

ಚಿಂತನೆ ೨೦
ಅನೇಕ ಸಂದರ್ಭಗಳಲ್ಲಿ ಹಾಲಿ ಇರುವ ತರಗತಿ ಇದು ನಮ್ಮ ಶಿಕ್ಷಣ ವ್ಯವಸ್ಥೆ: ಯಾವುದೋ ಒಂದು ಆಯಾಮವನ್ನು ಸುಧಾರಿಸಲು ಏನು ಮಾಡಬೇಕೆಂಬುದರ ಕುರಿತು ಸಲಹೆ ನೀಡಲು ತಜ್ಞರಸಮಿತಿಯೊಂದನ್ನು ಸರ್ಕಾರ ನೇಮಕ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತು ನೇಮಕ ಮಾಡುವುದು ತಪ್ಪೂ ಅಲ್ಲ.
ಮುಂದಿನ ಸಲ ಈ ತಜ್ಞರುಯಾರು ಅವರನ್ನು ತಜ್ಞರು ಎಂದು ಪರಿಗಣಿಸಲು ಕಾರಣಗಳೇನು ಎಂಬುದನ್ನು ಪರಿಶೀಲಿಸಿ. ನಿಮಗೆ ಅಚ್ಚರಿಯಾಗುವ ಅಂಶಗಳು ಗೋಚರಿಸುತ್ತವೆ.
ಬಹುತೇಕ ಅವರು:
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖ್ಯಾತನಾಮರಾಗಿರುತ್ತಾರೆ. ಯಾವ ಕ್ಷೇತ್ರವನ್ನು ಸುಧಾರಿಸಲೋಸುಗ ಅವರು ಸಲಹೆ ನೀಡಬೇಕೋ ಆ ಕ್ಷೇತ್ರದ ಅನುಭವ ಅವರಿಗೆ ಕಿಂಚಿತ್ತೂ ಇರುವುದಿಲ್ಲ. ಆ ಹಂತದ ಸವಿಸ್ತೃತ ಜ್ಞಾನ ಕುಶಲತೆಗೆ ಸಂಬಂಧಿಸಿದ ಶಿಕ್ಷಣ ಶಾಸ್ತ್ರಾಧ್ಯಯನ ಅವರು ಮಾಡಿರುವುದೇ ಇಲ್ಲ. ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅನುಭವ ಇರುವವರೂ ಈ ಸಮಿತಿಯಲ್ಲಿ ಇರುವ ಸಾಧ್ಯತೆ ಇದೆ.
ಈ ತರಗತಿಗಳ ಪಠ್ಯ ಪುಸ್ತಕ ರಚನೆಯ ಸಮಿತಿಗಳಲ್ಲಿ ವಿಷಯಜ್ಞಾನ ಇದೆ ಎಂಬುದಾಗಿ ನಂಬಲಾಗಿರುವ ಉನ್ನತಶಿಕ್ಷಣ ಪ್ರಾಧ್ಯಾಪಕರು, ಭಾಷಾ ಪಠ್ಯಪುಸ್ತಕ ರಚನೆಗೆ ಕವಿಗಳು/ಸಾಹಿತಿಗಳು, ಧರ್ಮನಿರಪೇಕ್ಷತೆಯ ಸ್ವಘೋಷಿತ ಸಂರಕ್ಷಕರು, ಈ ತರಗತಿಗಳಲ್ಲಿ ಅನೇಕ ವರ್ಷಗಳು ಪಾಠ ಮಾಡಿರುವ ಅನುಭವೀಶಿಕ್ಷಕರು ಇರುತ್ತಾರೆ. ಈ ತರಗತಿಯ ಮಕ್ಕಳ ಗ್ರಹಿಕಾಮಟ್ಟಕ್ಕೆ ತಕ್ಕುದಾದ ಶೈಲಿಯಲ್ಲಿ ಬರೆಯಬಲ್ಲ ಸಾಮರ್ಥ್ಯ, ಈ ಹಂತದಲ್ಲಿ ತಥ್ಯಗಳ/ಪರಿಕಲ್ಪನೆಗಳ/ಸಿದ್ಧಾಂತಗಳ---- ಕಲಿಕೆಗೆ ಪೂರಕವಾಗುವ ರೀತಿಯಲ್ಲಿ ಬರೆಯುವ ಕುಶಲತೆ, ಆ ವಯಸ್ಸಿನ ಮಕ್ಕಳ ಅವಧಾನವನ್ನು ಆಕರ್ಷಿಸಿ ಹಿಡಿದು ಇಟ್ಟುಕೊಳ್ಳಬಲ್ಲ ವಿನ್ಯಾಸ ಸೂಚಿಸುವ ಸಾಮರ್ಥ್ಯ ಇವರಿಗೆ ಇದೆ ಎಂಬ ನಂಬಿಕೆ ಸಮಿತಿ ರಚಿಸಿದವರದ್ದು. :D ಅಂದಹಾಗೆ ಶಿಕ್ಷಣಶಾಸ್ತ್ರಗಳ, ಶೈಕ್ಷಣಿಕ ಮನೋವಿಜ್ಞಾನದ, ಮೌಲ್ಯಮಾಪನ ತಂತ್ರಗಳ ಆಳವಾದ ಜ್ಞಾನ ಇವರಿಗೆ ಇರಲೇ ಬೇಕೆಂದೇನೂ ಇಲ್ಲ! ಎರಡು ಬಣ್ಣಗಳನ್ನು ಮುದ್ರಿಸುವಾಗ ಬಳಸಿದರೆ ಅದು ವರ್ಣರಂಜಿತ ಪಠ್ಯಪುಸ್ತಕವಾಗುತ್ತದೆ ಎಂಬ ಜ್ಞಾನ ಇದ್ದರೆ ಧಾರಾಳವಾಯಿತು.
ಪಠ್ಯಪುಸ್ತಕ ಕಂಡೊಡನೆ ಮಕ್ಕಳ ಮುಖ ಮುದುಡುವುದೇಕೆ? ಅರ್ಥವಾಯಿತೇ?

ಚಿಂತನೆ ೨೧
ಯಾವ ಮಗುವೂ ತಾನು ಪರೀಕ್ಷೆಯಲ್ಲಿ ಕಮ್ಮಿ ಅಂಕ ಗಳಿಸಲು ಇಷ್ಟಪಡುವುದಿಲ್ಲ - ಈ ಹೇಳಿಕೆಯನ್ನು ನೀವೆಲ್ಲರೂ ಒಪ್ಪುತ್ತೀರಿ ಎಂಬ ನಂಬಿಕೆ ನನ್ನದು. 
ಇಂದು ನಮ್ಮ ಶಾಲೆಗಳಲ್ಲಿ ಜರಗುತ್ತಿರುವ ವಿದ್ಯಮಾನಗಳು ಕಡಿಮೆ ಅಂಕ ಗಳಿಸಿದವನನ್ನು ಹೆಚ್ಚು ಅಂಕ ಗಳಿಸುವತ್ತ ಒಯ್ಯಲು ಪೂರಕವಾಗಿಲ್ಲ ಎಂಬುದು ನನ್ನ ನಿಲುವು.
ತಮ್ಮ ಶೈಕ್ಷಣಿಕ ಜೀವನದಲ್ಲಿ ಮೊದಲನೇ ಸಲ ಪರೀಕ್ಷೆಎದುರಿಸುವ ಮಕ್ಕಳನ್ನು ಗಮನಿಸಿ. ಎಲ್ಲರೂ ತಾವು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲುಸಿದ್ಧರಾಗಿಯೇ ಶಾಲೆಗೆ ಹೋಗುತ್ತಾರೆ. ಚೆನ್ನಾಗಿ ಮಾಡಲುವಿಶೇಷತ: ವಿದ್ಯಾವಂತಕುಟುಂಬಗಳಲ್ಲಿ ಮಕ್ಕಳಿಗಿಂತ ಅವರ ತಂದೆತಾಯಿಯರು ಹೆಚ್ಚು ಶ್ರಮವಹಿಸಿರುತ್ತಾರೆ. ಪ್ರತಿಯೊಂದು ಮಗುವೂ ಉತ್ತಮ ಅಂಕ ಗಳಿಸಲೋಸುಗ ತನ್ನೆಲ್ಲ ಸಾಮರ್ಥ್ಯ ವ್ಯಯಿಸಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇಂತಾದರೂ ಕೆಲವು ಮಕ್ಕಳಿಗೆ ಕಡಿಮೆ ಅಂಕಗಳು ಬರುತ್ತವೆ. ಶಿಕ್ಷಕರು ಅವರ ತಂದೆತಾಯಿಯರನ್ನು ಕರೆಸಿ ನಿಮ್ಮ ಮಗು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿಲ್ಲ. ಮನೆಯಲ್ಲಿ ಸರಿಯಾಗಿ ಓದಿಸಿಎಂಬ ಅಮೋಘ ಸಲಹೆ ನೀಡುತ್ತಾರೆ. ಈ ಚೆನ್ನಾಗಿ ಓದುವುದು ಅಂದರೇನು?’ ಬಹುಶಃ ಹೇಳಿದ ಶಿಕ್ಷಕರಿಗೂ ಮನೆಯಲ್ಲಿ ಓದಿಸಬೇಕಾದ ತಂದೆತಾಯಿಯರಿಗೂ ತಿಳಿದಿರುವುದಿಲ್ಲ. ಅಷ್ಠೇ ಏಕೆ ನನಗೂ ಗೊತ್ತಿಲ್ಲ. :D 
ಮಾಡ ಬೇಕಾದದ್ದೇನು? ತರಬೇತಿ ಪಡೆದ ಎಲ್ಲ ಶಿಕ್ಷಕರಿಗೂ ಏನು ಮಾಡಬೇಕು ಎಂಬುದು ತಿಳಿದಿರಲೇ ಬೇಕು, ತಿಳಿದಿಲ್ಲ ಅನ್ನುವುದಾದರೆ ಅವರು ಪಡೆದ ತರಬೇತಿ ಅಲಂಕಾರಿಕವಾದದ್ದು ಎಂಬುದಾಗಿಯೇ ಅರ್ಥೈಸಬೇಕು. ತಿಳಿದಿದ್ದರೂ ಅವರೇಕೆ ಅದನ್ನು ಅನುಷ್ಠಾನಗೊಳಿಸಿತ್ತಿಲ್ಲ? ಪೋಷಕ-ಶಿಕ್ಷಕ ಸಂಘಟನೆಗಳು ಮನಸ್ಸು ಮಾಡಿದರೆ ಇದಕ್ಕೆ ಕಾರಣವನ್ನೂ ತಿಳಿಯಬಹುದು, ಪರಿಹಾರ ಆವಿಷ್ಕರಿಸಲೂ ಬಹುದು.
ಬಾಲಂಗೋಚಿ: ನಾನು ಶಿಕ್ಷಕವೃತ್ತಿಯನ್ನು ಪ್ರವೇಶಿಸಿದ ಮೊದಲನೇ ವರ್ಷ ನಡೆದದ್ದು ಇದು: ಅಂದಿನ ಎಸ್‌ ಎಸ್‌ ಎಲ್‌ ಸಿ ತರಗತಿಯಲ್ಲಿ ಸಾಮಾನ್ಯ ಗಣಿತದ ಮೊದಲನೇ ಅಧ್ಯಾಯ ಸರಾಸರಿ’ (ಈಗ ಇದು ಪ್ರಾಥಮಿಕ ಹಂತದಲ್ಲಿ ಇರಬಹುದು) ಒಂದು ತಿಂಗಳ ಕಾಲ ನಾನು ತರಬೇತಿಯಲ್ಲಿ ಕಲಿತಿದ್ದ ಎಲ್ಲ ತಂತ್ರಗಳನ್ನು ಬಳಸಿ ಸರಾಸರಿಅಧ್ಯಾಯದ ಎಲ್ಲ ಧರ್ಮಸೂಕ್ಷ್ಮಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟೆ (ನನ್ನ ಪ್ರಕಾರ ). ಅಧ್ಯಾಯ ಬೋಧನಾನಂತರ ಮಾಡಿದ ಕಿರು ಪರೀಕ್ಷೆಯ ಫಲಿತಾಂಶ ನನ್ನನ್ನೂ ನಿಬ್ಬೆರಗಾಗಿಸಿತು - ಶೇ ೯೦ ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು! ವಿದ್ಯಾರ್ಥಿಗಳು ಎಲ್ಲಿ ಎಡವುತ್ತಿದ್ದಾರೆ ಎಂಬುದನ್ನು ತಿಳಿಯಲು ಉತ್ತರ ಪತ್ರಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಕಂಡು ಬಂದದ್ದು - ಮಕ್ಕಳಿಗೆ ದಶಮಾಂಶ ಸಂಬಂಧಿತ ಗುಣಿಸುವಿಕೆ/ಭಾಗಿಸುವಿಕೆ ಪ್ರಕ್ರಿಯಗಳು ತಿಳಿದಿಲ್ಲ. ಈ ಜ್ಞಾನ/ಕುಶಲತೆಗಳು ಅಗತ್ಯವಿರುವ ಸರಾಸರಿ ಸಂಬಂಧಿತ ಲೆಕ್ಕಗಳು ಇದ್ದರೆ ಅವರೆಲ್ಲರೂ ಅನುತ್ತೀರ್ಣರಾಗುತ್ತಾರೆ, ಅಗತ್ಯವಿಲ್ಲವಾದರೆ ಎಲ್ಲರೂ ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣರಾಗುತ್ತಾರೆ. 

ಚಿಂತನೆ ೨೨
ದಟ್ಟಕಾನನಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಬಾಹ್ಯಜಗತ್ತಿನ ಸಂಪರ್ಕವೇ ಇಲ್ಲದೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದ ಮಕ್ಕಳಿಗೆ ಅರ್ಥಾತ್ ಕಾಡಿನ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡಿ ಅವರು ಸುಸಂಸ್ಕೃತರಾಗಿನಾಗರೀಕ ಜೀವನ ನಡೆಸುವಂತೆ ಮಾಡುವುದು ಪ್ರಜಾಹಿತೈಷಿ ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದು ಎಂಬ ಅರಿವು ಇರುವ ನಮ್ಮ ಸರ್ಕಾರಗಳೂ ಕೆಲವು ಸ್ವಯಂಸೇವಾಸಂಘಟನೆಗಳೂ ಉಚಿತ ವಸತಿಶಾಲೆಗಳನ್ನು ಸ್ಥಾಪಿಸಿದವು. ಈ ಶಾಲೆಗಳಲ್ಲಿ ನಾಡಿನ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ನೀಡಲಾರಂಭಿಸಿದವು.
ಈ ಶಾಲೆಗಳಲ್ಲಿ ಅನೇಕ ಮಕ್ಕಳು ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರೂ ಆಗುತ್ತಿದ್ದಾರೆ. ಅವರ ಪೈಕಿ ಕೆಲವೇ ಕೆಲವರು ಉನ್ನತಶಿಕ್ಷಣಾಕಾಂಕ್ಷಿಗಳಾಗಿ ವಿದ್ಯಾರ್ಥಿ ವೇತನ, ಉಚಿತ ವಸತಿ ಸೌಕರ್ಯಇವೇ ಮೊದಲಾದ ಸೌಲಭ್ಯಗಳ ನೆರವಿನಿಂದ ಪಟ್ಟಣ ಸೇರಿದರು. ಉಳಿದವರು ಹಾಗು ಎಸ್‌ ಎಸ್‌ ಎಲ್‌ ಸಿ ಪಾಸಾಗದವರು ಏನಾದರು? ಕಾಡಿನ ಸಂಸ್ಕೃತಿ ಮರೆತು ಹೋಯಿತು, ನಾಡಿನ ಸಂಸ್ಕೃತಿಯನ್ನು ಸಂಪೂರ್ಣವಾಗಿ ಮೈಗೂಡಿಸಿಕೊಳ್ಳದ ಇವರ ಕತೆ ಮುಂದೇನಾಯಿತು? ಪಟ್ಟಣ ಸೇರಿದವರ ಪೈಕಿ ಬಹುಮಂದಿ ಮುಂದೇನಾದರು? ಯಾರೂ ಈ ಕುರಿತು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ತಾವು ವಾಸಿಸುತ್ತಿರುವ ಪರಿಸರದಲ್ಲಿಯೇ ಆರೋಗ್ಯಯುತ ಜೀವನ ನಡೆಸಲು ಮಕ್ಕಳನ್ನು ಸಿದ್ಧಪಡಿಸದ ಶಿಕ್ಷಣದಿಂದ ಏನು ಪ್ರಯೋಜನ? ’ಅಲ್ಲಯೂ ಸಲ್ಲದ, ಇಲ್ಲಿಯೂ ಸಲ್ಲದವರ ದೊಡ್ಡ ಪಡೆಯೊಂದನ್ನು ಸೃಷ್ಟಿಸಿ ಏನು ಪ್ರಯೋಜನ?
ಈ ಮಕ್ಕಳಿಗೆ ನೀಡುವ ಸಾರ್ವತ್ರಿಕ ಶಿಕ್ಷದ ಗುರಿ ಹಾಗು ವಿಧಾನಗಳನ್ನು ಯುಕ್ತ ರೀತಿಯಲ್ಲಿ ಮಾರ್ಪಡಿಸಿಕೊಂಡರೆ ಈಗ ಸಾಧಿಸುತ್ತಿರುವುದಕ್ಕಿಂತ ಉತ್ತಮ ಫಲಿತಾಂಶ ಪಡೆಯಬಹುದಲ್ಲವೇ?

ಚಿಂತನೆ ೨೩
ಪರೀಕ್ಷೆಗಳಲ್ಲಿ ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲಿ ಇಂದು ಅನುಸರಿಸಲಾಗುತ್ತಿರುವ ವಿಧಾನ ತಿಳಿಯುವ ಸಲುವಾಗಿ ಈ ಮುಂದಿನ ಉದಾಹರಣೆಯನ್ನು ಗಮನಿಸಿ. ಇಂಥ ಅನೇಕ ಉದಾಹರಣೆಗಳನ್ನು ನೀವೇ ಒದಗಿಸಬಹುದು:-
ಪ್ರಶ್ನೆ: ಪ್ರಯೋಗಶಾಲೆಯಲ್ಲಿ ಜಲಜನಕವನ್ನು ತಯಾರಿಸಲು ಸಾಮಾನ್ಯವಾಗಿ ಉಪಯೋಗಿಸುವ ರಾಸಾಯನಿಕಗಳನ್ನು ನಮೂದಿಸಿ. (ಅಂಕಗಳು ೨)
ಸರಿಯಾದ ಉತ್ತರ: ಸತು, ಸಾರರಿಕ್ತ ಸಲ್ಫ್ಯೂರಿಕ್‌ ಆಮ್ಲ (ಇಂತು ಉತ್ತರ ಬರೆದವರಿಗೆ ೨ ಅಂಕ ನೀಡಬೇಕು)
ವಿದ್ಯಾರ್ಥಿ ೧: ಸತು (೨ ರಾಸಾಯನಿಕಗಳಲ್ಲಿ ಒಂದನ್ನು ನಮೂದಿಸಿರುವುದರಿಂದ ೧ ಅಂಕ ನೀಡಬಹುದು 
ವಿದ್ಯಾರ್ಥಿ ೨: ಸಲ್ಫ್ಯೂರಿಕ್‌ ಆಮ್ಲ (೨ ರಾಸಾಯನಿಕಗಳಲ್ಲಿ ಒಂದನ್ನು ನಮೂದಿಸಿರುವುದರಿಂದ ೧ ಅಂಕ ನೀಡಬಹುದು 
ವಿದ್ಯಾರ್ಥಿ ೩: ಸಲ್ಫ್ಯೂರಿಕ್‌ ಆಮ್ಲ (೨ ರಾಸಾಯನಿಕಗಳಲ್ಲಿ ಒಂದನ್ನು ಸರಿಯಾಗಿ ನಮೂದಿಸಲಾಗಿದೆ. ಇನ್ನೊಂದನ್ನು ನಮೂದಿಸುವಾಗ ಸಣ್ಣ ತಪ್ಪಾಗಿದೆ ೧+೧/೨ ಅಂಕ ನೀಡಬಹುದು )
ವಿದ್ಯಾರ್ಥಿ ೧: ೫೦%, ವಿದ್ಯಾರ್ಥಿ ೨: ೫೦%, ವಿದ್ಯಾರ್ಥಿ ೩: ೭೫%
ವಾಸ್ತವದಲ್ಲಿ ಈ ವಿದ್ಯಾರ್ಥಿಗಳು ಜಲಜನಕ ತಯಾರಿಸಲಾರರು! ಆದರೂ ಪರೀಕ್ಷೆಯಲ್ಲಿ ಇಬ್ಬರು ಸೆಕೆಂಡ್‌ ಕ್ಲಾಸ್, ಒಬ್ಬ ಫಸ್ಟ್‌ ಕ್ಲಾಸ್‌!! 
ನಮ್ಮ ವಿದ್ಯಾಲಯಗಳು ನೀಡುತ್ತಿರುವ ಅಂಕಗಳು ವಿದ್ಯಾರ್ಥಿಯ ನಿಜವಾದ ಕಲಿಕಾ ಮಟ್ಟವನ್ನು ಸೂಚಿಸುವುದಿಲ್ಲ ಏಕೆ ಎಂಬುದಕ್ಕೆ ಒಂದು ಕಾರಣ ತಿಳಿಯಿತಲ್ಲವೇ? ಒಂದು ಪರೀಕ್ಷಾ ಪ್ರಾಧಿಕಾರ ನೀಡುವ ಅಂಕಗಳನ್ನು ಅದರ ವ್ಯಾಪ್ತಿಗೆ ಬರದೇ ಇರುವ ಸಂಸ್ಥೆಗಳು ನಂಬದೆ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುವುದರ ಒಂದು ಕಾರಣವೂ ಇದೇ ಆಗಿದೆಯಲ್ಲವೇ?
ನನಗೆ ತಿಳಿದ ಮಟ್ಟಿಗೆ ಅರ್ಧ, ಮುಕ್ಕಾಲು ಕಲಿತಿದ್ದಾರೆ ಅನ್ನುವುದೇ ಮೂರ್ಖ ಪರಿಕಲ್ಪನೆ. ಅಷ್ಠೇ ಅಲ್ಲದೆ ಈ ಅಪೂರ್ಣ ಕಲಿಕೆಯವರು ಮುಂದೆ ಉದ್ಯೋಗ ಗಿಟ್ಟಿಸಿಕೊಂಡು ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಾರೆ!


ಚಿಂತನೆ ೨೪
ನಮ್ಮನ್ನು ಆಳುವ ರಾಜಕೀಯ ಪಕ್ಷ ಬದಲಾದಾಗಲೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲೋಸುಗ ನೂತನಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು, ಅದಕ್ಕೆ ತಕ್ಕಂತೆ ಪಾಠಪಟ್ಟಿ (ಸಿಲೆಬಸ್‌) ರೂಪಿಸುವುದು, ಅದಕ್ಕೆ ಸರಿಹೊಂದುವ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದು ಮುಂತಾದ ಪ್ರಕ್ರಿಯೆಗಳು ಜರಗುವುದನ್ನು ನೀವು ಗಮನಿಸಿರಬಹುದು. ಮಾಡಬೇಕಾದ ಬದಲಾವಣೆಗಳನ್ನು ನಿರ್ಧರಿಸುವ ಸಮಿತಿಯಲ್ಲಿ ಅಧಿಕಾರಾರೂಢ ಪಕ್ಷದ ಚಿಂತನೆಗಳನ್ನು ಅನುಮೋದಿಸುವವರು ಮಾತ್ರ ಇರುವುದನ್ನೂ ನೀವು ಗಮನಿಸಿರಬಹುದು. ಆಳುವ ರಾಜಕೀಯ ಪಕ್ಷ ಬದಲಾದರೆ ಸಾರ್ವತ್ರಿಕ ಶಿಕ್ಷಣದ ಗುರಿಯೂ ಬದಲಾಗಬೇಕಾದದ್ದು ಅನಿವಾರ್ಯವೇ ಎಂಬುದರ ಕುರಿತು ಯಾರೂ ಆಲೋಚಿಸಿದಂತಿಲ್ಲ. ಈ ವರೆಗೆ ಈ ಕಾರಣದಿಂದಾಗಿ ಮಾಡಿದ ಬದಲಾವಣೆಗಳು ಉದ್ದೇಶಿತ ಗುರಿಗಳನ್ನು ಸಾಧಿಸಿರುವುದೂ ನಮಗೆ ಗೋಚರಿಸುತ್ತಿಲ್ಲ. ಅಂದಮೇಲೆ ಈ ತೆರನಾದ ಸೌಂದರ್ಯವರ್ಧಕ (cosmetic)’ ಬದಲಾವಣೆಗಳನ್ನು ಮಾಡುವ ಬದಲಾಗಿ ಸುದೀರ್ಘಕಾಲ ಉಳಿದು ಅಪೇಕ್ಷಿತ ಫಲಿತಾಂಶ ನೀಡಬಲ್ಲ ನಮ್ಮದೇ ಆದ ಶಿಕ್ಷಣ ವ್ಯವಸ್ಥೆಯೊಂದನ್ನು ರೂಪಿಸುವತ್ತ ಗಮನ ಹರಿಸಬಾರದೇಕೆ?

ಚಿಂತನೆ ೨೫
ಸುಮಾರು ೨-೬ ವಯೋವ್ಯಾಪ್ತಿಯ ಮಕ್ಕಳನ್ನು ನೀವು ಗಮನಿಸಿರಬಹುದು. ತಾವು ಏನ್ನನ್ನು ನೋಡುತ್ತಾರೋ ಅವೆಲ್ಲವುಗಳ ಬಗ್ಗೆ ಏನು? ಏಕೆ? ಹೇಗೆ? ಎಂಬುದನ್ನೆಲ್ಲ ತಿಳಿಯುವ ಅದಮ್ಯ ಕುತೂಹಲ ಅವರ ಸಹಜ ಲಕ್ಷಣ. ಅಸಂಖ್ಯ ಪ್ರಶ್ನೆಗಳನ್ನು ಕೇಳುವುದು ಈ ಮಕ್ಕಳ ವಿಶೀಷ್ಟತೆ. ಇಂತಿದ್ದ ಮಕ್ಕಳು ಶಿಶುವಿಹಾರ/ಶಾಲೆಗೆ ಹೋಗಲಾರಂಭಿಸಿದ ನಂತರ ನಿಧಾನವಾಗಿ ಪ್ರಶ್ನೆ ಕೇಳಿ ಮಾಹಿತಿ ಸಂಗ್ರಹಿಸುವ ಉತ್ಸಾಹ ಕಳೆದುಕೊಂಡು ಕೆಲವೇ ವರ್ಷಗಳಲ್ಲಿ ಮೌನವಾಗಿ ಶಿಕ್ಷಕರು ಅಥವ ದೊಡ್ಡವರು ಹೇಳಿದ್ದನ್ನು ಕೇಳಿಸಿಕೊಂಡೋ ಕೇಳಿಸಿಕೊಳ್ಳದೆಯೋ ತಲೆ ಅಲ್ಲಾಡಿಸುವಗುಣ ರೂಢಿಸಿಕೊಳ್ಳುವುದು ಏಕೆ? ಮುಂದೆ ಸಭೆಗಳಲ್ಲಿ ಭಾಷಣಕಾರರು ಏನಾದರೂ ಪ್ರಶ್ನೆಗಳಿವೆಯೇಎಂಬುದಾಗಿ ಕೇಳಿದಾಗಲೂ ಮಂದಿ ಮೌನವಾಗಿರುವುದೇಕೆ? ತರಗತಿಯಲ್ಲಿ ಪಾಠಾಂತ್ಯದಲ್ಲಿ ಶಿಕ್ಷಕರು ಏನಾದರೂ ಸಂಶಯಗಳು ಉಳಿದಿವೆಯೇಎಂಬುದಾಗಿ ಕೇಳಿದಾಗಲೂ ಬಹುಮಂದಿ ಮೌನವಾಗಿರುವುದೇಕೆ? ಶಿಕ್ಷಣ ಪದ್ಧತಿಯ ಪ್ರಭಾವವೇ ಅಥವ ಕುತೂಹಲಕ್ಕೆ ದೊಡ್ಡವರು ತಣ್ಣಿರೆರೆಚುವ ಕೆಲಸ ಮಾಡಿದ್ದರಿಂದಲೋ ಅಥವಾ ಇವೆರಡರ ಒಟ್ಟಾರೆ ಪರಿಣಾಮವೋ, ಆಲೋಚಿಸಿ. ಇದು ಸರಿಯೇ ಎಂಬುದನ್ನೂ ಆಲೋಚಿಸಿ.

ಚಿಂತನೆ ೨೬
ಪೂರ್ವಪ್ರಾಥಮಿಕ ಹಾಗು ಪ್ರಾಥಮಿಕ ಶಾಲಾ ಹಂತದ ಮಕ್ಕಳು ಇತರರು ಹೇಳಿದ್ದನ್ನು ನಂಬುವುದಕ್ಕಿಂತ ಹೆಚ್ಚಾಗಿ ತಮ್ಮ ಶಿಕ್ಷಕರು ಹೇಳಿದ್ದನ್ನು ನಂಬುವುದನ್ನು ನೀವು ಗಮನಿಸಿರಬಹುದು. ಅರ್ಥಾತ್‌ ಶಿಕ್ಷಕರ ಬಗ್ಗೆ ಅನನ್ಯ ಗೌರವ, ನಂಬಿಕೆ, ವಿಶ್ವಾಸಗಳು ಅವರಲ್ಲಿ ಇರುವುದನ್ನು ನೀವು ಗಮನಿಸಿರಬಹುದು. ಈ ಮಕ್ಕಳ ಪೈಕಿ ಬಹು ಮಂದಿ ಪ್ರೌಢಶಾಲಾ ಹಂತ ದಾಟುವ ಸಮಯಕ್ಕೆ ಇದಕ್ಕೆ ತದ್ವಿರುದ್ಧವಾದ ಮನೋಭಾವ ಬೆಳಸಿಕೊಳ್ಳಲು ಕಾರಣ ಏನಿರಬಹುದೆಂಬುದರ ಕುರಿತು ಸಮುದಾಯ, ವಿಶೇಷತಃ ಶಿಕ್ಷಕ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ?

ಚಿಂತನೆ ೨೭
ಶಾಲಾಹಂತದಲ್ಲಿ ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಹೋಗುವುದು ಇಂದು ಹೆಚ್ಚು ಕಮ್ಮಿ ಕಡ್ಡಾಯವಾಗಿದೆ. ಸಮವಸ್ತ್ರಧಾರಣೆಯಿಂದ ಶೈಕ್ಷಣಿಕವಾಗಿ ಲಾಭ ಆಗುವುದೇ ಇಲ್ಲವೇ ಅನ್ನುವುದು ಚರ್ಚಿಸಬಹುದಾದ ವಿಷಯ. ನಾನು ಆ ಕುರಿತು ಚರ್ಚಿಸುವ ಗೊಡವೆಗೆ ಹೋಗದೆ ಇತರ ಎರಡು ಅಂಶಗಳತ್ತ ನಿಮ್ಮ ಗಮನ ಸೆಳೆಯಲು ಇಚ್ಛಿಸುತ್ತೇನೆ.
೧. ಇಂದು ಶಾಲಾ ಸಮವಸ್ತ್ರ ನಮಗೆ ಅರಿವಿಲ್ಲದೆಯೇ ಶಾಲೆಯ ಪ್ರತಿಷ್ಠೆಯ ಪ್ರತೀಕವಾಗುತ್ತಿದೆಯೇ ಎಂಬುದು ಮೊದಲನೆಯದು. ಶಾಲೆಯ ಪ್ರತಿಷ್ಠೆ ಹೆಚ್ಚಿದಷ್ಟೂ ಆ ಶಾಲೆಯ ಮಕ್ಕಳ ಸಮವಸ್ತ್ರವೂ ದುಬಾರಿಯಾದ್ದಾಗಿರುತ್ತದೇನೋ ಎಂಬ ಗುಮಾನಿ ನನ್ನದು. ಬಡಮಕ್ಕಳು ಹಾಗು ಕೆಳ ಮಧ್ಯಮ ವರ್ಗದ ಮಕ್ಕಳು ಹೋಗುವ ಶಾಲೆಗಳ ಸಮವಸ್ತ್ರ, ಮೇಲ್ಮಧ್ಯಮ ವರ್ಗದ ಮಕ್ಕಳು ಹೋಗುವ ಶಾಲೆಗಳ ಸಮವಸ್ತ್ರ ಹಾಗು ಶ್ರೀಮಂತ ವರ್ಗದ ಮಕ್ಕಳು ಹೋಗುವ ಶಾಲೆಗಳ ಸಮವಸ್ತ್ರಗಳನ್ನು ನೀವೇ ತುಲನೆ ಮಾಡಿ, ನಾನು ಹೇಳಬಯಸುತ್ತಿರುವುದೇನು ಎಂಬುದು ನಿಮಗೇ ತಿಳಿಯುತ್ತದೆ.
ಇದು ಸರಿಯೇ, ಶೈಕ್ಷಣಿಕ ಲಾಭಗಳ ದೃಷ್ಟಿಯಿಂದ ಯುಕ್ತವೇ ಎಂಬುದರ ಕುರಿತು ಸಮುದಾಯ ಆಲೋಚಿಸುವ ಅಗತ್ಯವಿದೆ.
೨. ಇಂದಿನ ಶಾಲಾ ಸಮವಸ್ತ್ರಗಳು ಬಹುಮಟ್ಟಿಗೆ ಪಾಶ್ಚಾತ್ಯ ಉಡುಗೆಗಳ ಸಂಸ್ಕೃತಿಯ ಅನುಕರಣೆಯೇ ಆಗಿವೆ. ಇದಕ್ಕೆ ಬದಲಾಗಿ ಅವನ್ನು ಭಾರತೀಕರಿಸಲು ಸಾಧ್ಯವಿಲ್ಲವೇ ಎಂಬುದರ ಕುರಿತೂ ಆಲೋಚಿಸಬೇಕಾದ ಆವಶ್ಯಕತೆ ಇದೆಯಲ್ಲವೇ?

ಚಿಂತನೆ ೨೮
ಯಾವುದೇ ಹಂತದ ಶಿಕ್ಷಣ ಪಡೆದು ಜೀವನ ಕ್ಷೇತ್ರವನ್ನು ಪ್ರವೇಶಿಸುವವರನ್ನು "ಮುಂದೇನು ಮಾಡುವಿರಿ?" ಎಂಬುದಾಗಿ ಪ್ರಶ್ನಿಸಿ. ಬಹಳಷ್ಟು ಮಂದಿ "ಒಳ್ಳೆಯ ಕೆಲಸ ಹುಡುಕುತ್ತೇನೆ" ಎಂಬುದಾಗಿ ಉತ್ತರ ನೀಡುವರೇ ವಿನಾ "ನಾನು ಸ್ವತಂತ್ರವಾಗಿ ------- ಮಾಡಬೇಕೆಂದುಕೊಂಡಿದ್ದೇನೆ" ಎಂಬುದಾಗಿ ಉತ್ತರ ನೀಡುವುದಿಲ್ಲ. ಏಕೆ? ಆಲೋಚಿಸಿ.
ಹಾಲಿ ಶಿಕ್ಷಣ ಪದ್ಧತಿ "ಕೆಲಸ" ಹುಡುಕುವವರನ್ನು ಸೃಷ್ಟಿಸುತ್ತಿದೆ, "ಕೆಲಸ" ಸೃಷ್ಟಿಸುವವರನ್ನಲ್ಲ ಎಂಬುದಾಗಿ ಈ ವಿದ್ಯಮಾನವನ್ನು ಅರ್ಥೈಸಬಹುದೇ? ಸ್ವತಂತ್ರ ರಾಷ್ಟ್ರವೊಂದು ಇಂಥ ಶಿಕ್ಷಣ ಪದ್ಧತಿಯಿಂದ ವಿಕಾಸದ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬಿ ಆಗಬಲ್ಲುದೇ? ನೀವೇ ಆಲೋಚಿಸಿ.

ಚಿಂತನೆ ೨೯
ನಮ್ಮಲ್ಲಿ ಹಾಲಿ ಇರುವುದು ಗುರಿ ಆಧಾರಿತ ಬೋಧನೆ ಅಲ್ಲ, ಪಠ್ಯಪುಸ್ತಕದಲ್ಲಿ ಇರುವ ಪಾಠಗಳ ಆಧಾರಿತ ಬೋಧನೆ. ಏಕೆ?
ನೀವೇನು ಬೋಧಿಸುತ್ತಿದ್ದೀರಿ ಎಂಬುದಾಗಿ ಯಾರಾದರೂ ಶೀಕ್ಷಕರನ್ನು ಕೇಳಿ. ೬ ಹಾಗು ೭ನೇ ತರಗತಿಗಳಿಗೆ (ಅರ್ಥಾತ್, ತಾವು ಬೋಧಿಸುತ್ತಿರುವ ತರಗತಿ ಹೆಸರಿಸಿ) ವಿಜ್ಞಾನ’, ’ಗಣಿತಇವೇ ಮೊದಲಾದ ಯಾವುದೋ ಒಂದು ಪಠ್ಯವಿಷಯವನ್ನು ಅವರು ಹೆಸರಿಸುತ್ತಾರೆ. ೬ನೇ ತರಗತಿಗೆ ವಿಜ್ಞಾನದಲ್ಲಿ ಏನು ಬೋಧಿಸುತ್ತೀರಿ ಎಂಬುದಾಗಿ ಕೇಳಿದರೆ ಪಠ್ಯಪುಸ್ತಕದ ವಿಷಯಾನುಕ್ರಮಣಿಕೆಯಲ್ಲಿ ನಮೂದಿಸಿರುವ ಪಾಠಗಳ ಹೆಸರನ್ನು ಹೇಳುತ್ತಾರೆ. ಅವರು ಹೇಳಿದ ಪಟ್ಟಿಯಲ್ಲಿ ಇರುವ ಯಾವುದಾದರೊಂದು ಪಾಠವನ್ನು ಹೆಸರಿಸಿ ಅದನ್ನು ಏಕೆ ಬೋಧಿಸುತ್ತಿದ್ದಾರೆ ಎಂಬುದನ್ನು ವಿಚಾರಿಸಿ. ನಿಮ್ಮನ್ನು ಒಂದು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನೋಡಿ ತದನಂತರ ಆ ವಿಷಯದ ಕುರಿತಾದ ಜ್ಞಾನವರ್ಧನೆಗಾಗಿ ಎಂಬುದಾಗಿಯೋ ಯಾವುದೋ ಕುಶಲತೆಯ ವರ್ಧನೆಗಾಗಿ ಎಂಬುದಾಗಿಯೋ ಯಾವುದೋ ಮನೋಧೋರಣೆಯನ್ನು ರೂಪಿಸಲೋಸುಗ ಎಂಬುದಾಗಿಯೋ ಹೇಳುತ್ತಾರೆ. ಸೂಚಿಸಿದ ಕುಶಲತೆ ವರ್ಧಿಸಲು ಅಥವ ಮನೋಧೋರಣೆ ರೂಪಿಸಲು ಆ ವಿಷಯವೇ ಏಕಾಗಬೇಕು, ಬೇರೆ ಪಾಠವನ್ನು ಬೋಧಿಸುವುದರ ಮುಖೇನವೂ ಅವನ್ನು ಸಾಧಿಸಬಹುದಲ್ಲವೇ ಎಂಬುದಾಗಿ ಕೇಳಿದರೆ, ಅವರು ಅದನ್ನು ಒಪ್ಪಿ ತದನಂತರ ತಜ್ಞರಸಮಿತಿ ಈ ಪಾಠಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿರುವುದರಿಂದ ತಾವು ಅದನ್ನು ಬೋಧಿಸುತ್ತಿರುವುದನ್ನು ಸೂಚ್ಯವಾಗಿ ತೀಳಿಸುವ ಸಾಧ್ಯತೆ ಇದೆ. ವಾಸ್ತವಾಗಿ ಅನೇಕ ಶಿಕ್ಷಕರಿಗೆ ಪಠ್ಯಕ್ರಮ (curriculum), ಪಾಠಪಟ್ಟಿ (syllabus), ಪಠ್ಯಪುಸ್ತಕ (text book) ಈ ಪರಿಕಲ್ಪನೆಗಳ ನಡುವಣ ಸೂಕ್ಷ್ಮವ್ಯತ್ಯಾಸಗಳ ಹಾಗು ಸಂಬಂಧಗಳ ಅರಿವು ಇರುವ ಸಾಧ್ಯತೆ ಬಲುಕಮ್ಮಿ. ಇದ್ದರೂ, ಅದು ಶಿಕ್ಷಣಶಾಸ್ತ್ರದ ಪುಸ್ತಕಗಳಲ್ಲಿ ಮುದ್ರಿತವಾಗಿರುವ ವ್ಯಾಖ್ಯಾನಗಳ ಪುನರುಚ್ಚರಣೆಗೆ ಸೀಮಿತವಾಗಿರುತ್ತದೆ.
ಇದರ ಒಂದು ಪರಿಣಾಮವೇ ಏಕೆ ಬೋಧಿಸುತ್ತಿರುವೆ ಎಂಬುದರ ಅರಿವು ಇಲ್ಲದೆಯೇ ಬೋಧಿಸುವಿಕೆ. ಬಹುಸಂಖ್ಯಾತ ಶಿಕ್ಷಕರು ಪಾಠಪಟ್ಟಿಯನ್ನು ನೋಡಿರುವುದೇ ಇಲ್ಲ. (ಕಾರಣ ಏನೇ ಇರಲಿ). ತತ್ಪರಿಣಾಮವಾಗಿ ಅವರು ಪಠ್ಯಪುಸ್ತಕದಲ್ಲಿ ಇರುವ ಪಾಠವನ್ನು ಓದಿ ತದನಂತರ ಇದನ್ನು ಏಕೆ ಬೋಧಿಸಬೇಕೆಂಬುದನ್ನು ನಿರ್ಧರಿಸುತ್ತಾರೆ. ವಾಸ್ತವವಾಗಿ ಗುರಿ ಏನು ಎಂಬುದನ್ನು ನಿರ್ಧರಿಸಿ ತದನಂತರ ಅದನ್ನು ಸಾಧಿಸಬೇಕಾದರೆ ಯಾವ ವಿಷಯವನ್ನು ಎಂತು ಬೋಧಿಸಬೇಕು ಎಂಬುದನ್ನು ನಿರ್ಧರಿಸಬೇಕು. ತಜ್ಞರಸಮಿತಿ ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ನಿರ್ದಿಷ್ಟ ತರಗತಿಯಲ್ಲಿ ನಿರ್ದಿಷ್ಟ ವಿಷಯ ಬೋಧನೆಯ ಮುಖೇನ ಸಾಧಿಸಬೇಕಾದದ್ದು ಏನು ಎಂಬುದನ್ನು ಮೊದಲು ತೀರ್ಮಾನಿಸಿ ತದನಂತರ ಉದ್ದೇಶ ಸಾಧನೆಗೆ ಯುಕ್ತವಾದ ಪಠ್ಯವಿಷಯ (content) ಸೂಚಿಸಬೇಕು, ಈ ಮಾಹಿತಿ ಪಾಠಪಟ್ಟಿಯಲ್ಲಿ ಇರಬೇಕು. ತದನಂತರ ಅದಕ್ಕೆ ಅನುಗುಣವಾಗಿ ಯುಕ್ತ ರೀತಿಯಲ್ಲಿ ಪಾಠ ರಚಿಸಿರಬೇಕು. ಶಾಲೆಗಳಲ್ಲಿ ಶಿಕ್ಷಣ ಪ್ರಕ್ರಿಯೆ ಇಂದು ಇಂತು ಜರಗುತ್ತಿದೆಯೇ ಎಂಬುದರ ಕುರಿತು ಆಲೋಚಿಸಿ, ನಮ್ಮದು ಅಸ್ಪಷ್ಟ ಗುರಿಗಳ ಶಿಕ್ಷಣ ಏಕಾಗಿದೆ ಎಂಬುದಕ್ಕೆ ಒಂದು ಕಾರಣ ನಿಮಗೇ ಅರ್ಥವಾಗುತ್ತದೆ.
ಅಂದ ಹಾಗೆ, ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿಯೂ ಪಾಠ ನೋಡಿ ಗುರಿ ರೂಪಿಸಿಕೊಳ್ಳಲು ಕಲಿಸಲಾಗುತ್ತದೆ!!!!

ಚಿಂತನೆ ೩೦
ಪಾಠಪಟ್ಟಿಯಲ್ಲಿ ನಮೂದಿಸಿರುವ ಗುರಿಗೂ ಪಠ್ಯಪುಸ್ತಕದಲ್ಲಿ ಇರುವ ಪಾಠಕ್ಕೂ ಅದನ್ನು ಬೋಧಿಸುವ ವಿಧಾನಕ್ಕೂ ಶಿಕ್ಷಕರು ಬೋಧಿಸಿದ್ದನ್ನು ಮನೋಗತ ಮಾಡಿಕೊಳ್ಳಲು ವಿದ್ಯಾರ್ಥಿ ಅನುಸರಿಸುವ ವಿಧಾನ ಗುರಿ ಸಾಧನೆ ಆಗಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಲೋಸುಗ ಮಾಡುವ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗೂ ಸಂಬಂಧ ಇದ್ದರೆ ಮಾತ್ರ ಶಿಕ್ಷಣಪದ್ಧತಿ ಅಪೇಕ್ಷಿತ ಫಲ ನೀಡುತ್ತದೆ. ಇಲ್ಲದೇ ಇದ್ದರೆ ಏನಾಗುತ್ತದೆ? ನೀವೇ ಊಹಿಸಿಕೊಳ್ಳಿ.
ಬಹುತೇಕ ಶಾಲೆಗಳಲ್ಲಿ ಈಗ ಏನಾಗುತ್ತಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲೋಸುಗ ಈ ಕೆಳಗಿನ ಉದಾಹರಣೆ ನೀಡುತ್ತಿದ್ದೇನೆ. ಅವಶ್ಯವಿದ್ದೆಡೆ ಆವರಣದೊಳಗೆ ನನ್ನ ಟಿಪ್ಪಣಿ ಸೇರಿಸಿದ್ದೇನೆ. ಶಿಕ್ಷಣ ನೀಡಬೇಕಾದ ರೀತಿಯಲ್ಲಿ ನೀಡಲ್ಪಡುತ್ತಿದೆಯೇ ಎಂಬುದನ್ನು ನೀವೇ ನಿರ್ಧರಿಸಿ.
ಪಾಠಪಟ್ಟಿಯಲ್ಲಿ ನಮೂದಿಸಿದ ಗುರಿ: ವಿದ್ಯಾರ್ಥಿಗಳು ಮಾದರಿಯ/ಪ್ರಾತಿನಿಧಿಕ (ಟಿಪಿಕಲ್) ಸಸ್ಯವೊಂದರ ಚಿತ್ರ ಬರೆದು ಅದರಲ್ಲಿ ಸಾಮಾನ್ಯ ಭಾಗಗಳನ್ನು ನಿಖರವಾಗಿ ಗುರುತಿಸುತ್ತಾರೆ. (ಗಮನಿಸಿ: ಇಲ್ಲಿ ಸಸ್ಯದ ಹೆಸರನ್ನು ನಮೂದಿಸಿಲ್ಲ. ಸಾಮಾನ್ಯವಾಗಿ ಬಹುತೇಕ ಸಸ್ಯಗಳಲ್ಲಿ ಕಂಡುಬರುವ ಭಾಗಗಳನ್ನು ಗುರುತಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಗಳಿಸಬೇಕೆಂಬುದೇ ಇದರ ಆಶಯವೇ ವಿನಾ ಯಾವುದೋ ಒಂದು ಸಸ್ಯದ ಭಾಗಗಳನ್ನು ಮಾತ್ರವಲ್ಲ ಎಂಬುದನ್ನೂ ನಿಜವಾದ ಸಸ್ಯ ನೋಡಿ ಚಿತ್ರ ಬರೆಯುವುದನ್ನು ಕಲಿಯಬೇಕೆಂಬುದು ಆಶಯವೇ ವಿನಾ ಯಾರೋ ಬರೆದ ಚಿತ್ರವನ್ನು ನಕಲು ಮಾಡುವುದನ್ನು ಕಲಿಯಲಿ ಎಂಬುದಲ್ಲ.)
ಪಠ್ಯಪುಸ್ತಕದಲ್ಲಿ ಇರುವ ಪಾಠ: ಮಾದರಿಯ/ಪ್ರಾತಿನಿಧಿಕ ಸಸ್ಯದ ಸಾಮಾನ್ಯ ಭಾಗಗಳು. (ಪಾಠದಲ್ಲಿ ಹುರುಳಿಕಾಯಿ (ಬೀನ್ಸ್‌) ಗಿಡದ ಚಿತ್ರ ಮತ್ತು ಅದರ ಪ್ರಮುಖ ಭಾಗಗಳನ್ನು ವಿವರಿಸಿರುತ್ತಾರೆ.)
ಶಿಕ್ಷಕರು ತರಗತಿಯಲ್ಲಿ ಬೋಧಿಸುವ ವಿಧಾನ: ಶಿಕ್ಷಕರು ಕಪ್ಪು ಹಲಗೆಯ ಮೇಲೆ ಪಠ್ಯಪುಸ್ತಕದಲ್ಲಿ ಇರುವಂತೆ ಹುರುಳಿಕಾಯಿ ಗಿಡದ ಚಿತ್ರ ಬರೆಯುತ್ತಾರೆ. ಆ ಚಿತ್ರವನ್ನು ತಮ್ಮ ಟಿಪ್ಪಣಿ ಪುಸ್ತಕದಲ್ಲಿ ಬರೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಆದೇಶಿಸುತ್ತಾರೆ. (ಗಮನಿಸಿ: ವಿದ್ಯಾರ್ಥಿಗಳು ಬಹಳ ಶ್ರಮಪಟ್ಟು ಮುತುವರ್ಜಿಯಿಂದ ಶಿಕ್ಷಕರು ಬರೆದ ಚಿತ್ರವನ್ನು ಯಥಾವತ್ತು ನಕಲು ಮಾಡುತ್ತಾರೆ) ತದನಂತರ ಸಸ್ಯದ ಭಾಗಗಳನ್ನು ಸಂಖ್ಯೆಗಳಿಂದ ನಮೂದಿಸಿ, ಪಕ್ಕದಲ್ಲಿ ಭಾಗಗಳನ್ನು ಅನುಕ್ರಮವಾಗಿ ಪಟ್ಟಿ ಮಾಡುತ್ತಾರೆ, ಅಂತೆಯೇ ಮಾಡುವಂತೆ ವಿದ್ಯಾರ್ಥಿಗಳಿಗೂ ಆದೇಶಿಸುತ್ತಾರೆ. ತದನಂತರ ಔಪಚಾರಿಕವಾಗಿ ಹುರುಳಿಕಾಯಿ ಗಿಡವನ್ನು ಇಲ್ಲಿ ಸಾಮಾನ್ಯ ಸಸ್ಯಗಳ ಪ್ರತಿನಿಧಿಯಾಗಿ ಅಥವ ಮಾದರಿ ಸಸ್ಯವಾಗಿ ಪರಿಗಣಿಸಲಾಗಿದೆ ಎಂಬುದಾಗಿ ತಿಳಿಸುತ್ತಾರೆಯೇ ವಿನಾ ಏಕೆ ಎಂಬುದನ್ನು ತಿಳಿಸುವುದಿಲ್ಲ. (ಗಮನಿಸಿ: ಬಹುಮಂದಿ ಶಿಕ್ಷಕರು ನಿಜವಾದ ಹುರುಳಿಕಾಯಿ ಗಿಡವನ್ನು ವಿದ್ಯಾರ್ಥಿಗಳಿಗೆ ತೋರಿಸುವುದೇ ಇಲ್ಲ. ಅಂದ ಮೇಲೆ, ಶಿಕ್ಷಕರು ಪಾಠಪಟ್ಟಿಯಲ್ಲಿ ನಮೂದಿಸಿದ ಗುರಿಗೆ ಬದಲಾಗಿ ’ಪ್ರಾತಿನಿಧಿಕ ಸಸ್ಯದ ಚಿತ್ರವನ್ನು ನಕಲು ಮಾಡಿ ಭಾಗಗಳನ್ನು ಗುರುತಿಸಲು’ ಕಲಿಸಿದಂತಾಯಿತಲ್ಲವೇ?) ತದನಂತರ, ಆ ಚಿತ್ರ ಬರೆದು ಬಾಗಗಳನ್ನು ಗುರುತಿಸಲು ಅಭ್ಯಾಸ ಮಾಡಿ ಎಂಬುದಾಗಿ ಆದೇಶಿಸಿ ಪಾಠ ಮುಗಿಸುತ್ತಾರೆ.
ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆ: ಹುರುಳಿಕಾಯಿ ಗಿಡದ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ. (ಗಮನಿಸಿ: ಇಲ್ಲಿ ಪರೀಕ್ಷಿಸುತ್ತಿರುವುದು ’ವಿದ್ಯಾರ್ಥಿಗಳು ಎಂದೋ ನಕಲು ಮಾಡಲು ಕಲಿತಿದ್ದ ಹುರುಳಿಕಾಯಿ ಗಿಡದ ಚಿತ್ರವನ್ನು ಪುನಃ ಜ್ಞಾಪಿಸಿಕೊಂಡು ಬರೆದು ಭಾಗಗಳನ್ನು ಗುರುತಿಸಬಲ್ಲರೇ?’ ಎಂಬುದನ್ನೇ ವಿನಾ ಪಾಠಪಟ್ಟಿಯಲ್ಲಿ ನಮೂದಾಗಿದ್ದ ಗುರಿ ಸಾಧನೆ ಆಗಿದೆಯೇ ಎಂಬುದನ್ನಲ್ಲ!)

ಬಾಲಂಗೋಚಿ: ವಿದ್ಯಾರ್ಥಿಗಳು ಪರಿಕ್ಷೆಯಲ್ಲಿ ನಪಾಸಾಗಿದ್ದಾರೆ ಅನ್ನುವುದಕ್ಕಿಂತ ಪಾಠಪಟ್ಟಿಯಲ್ಲಿ ನಮೂದಿಸಿದ ಗುರಿಗಳನ್ನು ಶಿಕ್ಷಕರು ಸಾಧಿಸಿಲ್ಲ ಅನ್ನುವುದು ಹೆಚ್ಚು ಸರಿ ಅಲ್ಲವೇ?

No comments: