Pages

14 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೫

ಈ ಕೊನೆಯ ಕಂತಿನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ನೆನಪುಗಳು ವಿವಿಧ ಸ್ತರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿದ್ದಾಗ ಅಥವ ವಿಶ್ವವಿದ್ಯಾನಿಲಯದ ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯ ಮೇಲುಸ್ತುವಾರಿ ಮಾಡುತ್ತಿದ್ದಾಗಿನವು. ‘ಇಂಥ ಶಿಕ್ಷಕರೂ ಇರುತ್ತಾರೆಯೇ’ ಎಂದು ಅಚ್ಚರಿ ಮೂಡಿಸುವಂಥವು.

೧. ವಿಶ್ವವಿದ್ಯಾನಿಲಯದ ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯ ಮೇಲುಸ್ತುವಾರಿ ಕಾರ್ಯನಿರ್ವಹಿಸುತ್ತಿದ್ದ ಒಂದು ಸಂದರ್ಭದಲ್ಲಿ ನಡೆದದ್ದು ಇದು. ನಿವೃತ್ತಿಯ ಅಂಚಿನಲ್ಲಿ ಇದ್ದ ಬಲು ಹಿರಿಯ ಪ್ರಾಧ್ಯಪಕರೊಬ್ಬರು ಅಸಹಜ ಅನ್ನಿಸುವಷ್ಟು ಪದೇಪದೇ ಇತರ ಮೌಲ್ಯಮಾಪಕರ ಬಳಿ ಹೋಗಿ ಮಾತನಾಡುತ್ತಿದ್ದರು.

ರಹಸ್ಯವಾಗಿ ವಿಚಾರಿಸಿದಾಗ ತಿಳಿದದ್ದು - ಶ್ರೀಯುತರು ತಮ್ಮ ಬಳಿ ಇದ್ದ ಪುಟ್ಟ ಡೈರಿಯಲ್ಲಿ ಕೆಲವು ರಿಜಿಸ್ಟರ್ ನಂಬರುಗಳನ್ನು ದಾಖಲಿಸಿ ಇಟ್ಟುಕೊಂಡಿದ್ದರು. ಆ ರಿಜಿಸ್ಟರ್ ನಂಬರಿನ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು. ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದಾಗ ಆ ಅಭ್ಯರ್ಥಿ ತಮ್ಮ ನಿಕಟ ಸಂಬಂಧಿ ಎಂದೋ ತಮ್ಮ ಆಪ್ತರೊಬ್ಬರ ಕುಟುಂಬದವರೆಂದೋ ಹೇಳಿ ತುಸು ಅಧಿಕ ಅಂಕ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರಲ್ಲದೆ ತಮ್ಮ ಮನವಿಯಂತೆ ಅಧಿಕ ಅಂಕ ನೀಡಿರುವುದನ್ನು ಖಾತರಿ ಪಡಿಸಿಕೊಳ್ಳುತ್ತಿದ್ದರು. ಹಣ ಅಥವ ಬೇರೆ ಆಮಿಷದ ವ್ಯವಹಾರ ಇರಲಿಲ್ಲ.

ಈ ಆಕ್ಷೇಪಾರ್ಹ, ಶಿಕ್ಷಾರ್ಹ ವರ್ತನೆಯನ್ನು ಪರೀಕ್ಷಾಂಗದ ಕುಲಸಚಿವರಿಗೆ ವರದಿ ಮಾಡಿ ಶ್ರೀಯುತರಿಗೆ ಶಿಕ್ಷೆ ಕೊಡಿಸುವುದು ಬಲು ಸುಲಭದ ಕೆಲಸವಾಗಿತ್ತಾದರೂ ಅವರ ವಯಸ್ಸು, ಸೇವಾಹಿರಿತನ, ಉತ್ತಮ ಶಿಕ್ಷಕರು ಎಂದು ಗಳಿಸಿದ್ದ ಹೆಸರನ್ನು ನಿವೃತ್ತಿಯ ಅಂಚಿನಲ್ಲಿದ್ದಾಗ ಕಳೆದುಕೊಳ್ಳುತ್ತಾರಲ್ಲ ಎಂಬ ತಥ್ಯ ಮುಂತಾದವನ್ನು ಪರಿಗಣಿಸಿದಾಗ ವರದಿ ನೀಡಲು ಮನಸ್ಸೊಪ್ಪಲಿಲ್ಲ. ಕುಲಸಚಿವರೊಂದಿಗೆ ಅನೌಪಚಾರಿಕವಾಗಿ ಈ ಕುರಿತು ಚರ್ಚಿಸಿದಾಗ ನಾನೇ ಅವರಿಗೆ ಮೌಖಿಕವಾಗಿ ಎಚ್ಚರಿಕೆ ನೀಡುವಂತೆಯೂ ಅದನ್ನವರು ನಿರ್ಲಕ್ಷಿಸಿದರೆ ಲಿಖಿತ ವರದಿ ನೀಡುವಂತೆಯೂ ಸೂಚಿಸಿದರು. ವಯಸ್ಸು, ಸೇವಾಹಿರಿತನ ಈ ಎರಡರಲ್ಲೂ ನನಗಿಂತ ಅನೇಕಪಟ್ಟು ದೊಡ್ಡವರಿಗೆ ಮೌಖಿಕ ಎಚ್ಚರಿಕೆ ನೀಡಲೂ ಮುಜುಗರವಾದ್ದರಿಂದ ಅವರ ಆಪ್ತಮಿತ್ರರೊಬ್ಬರ ಮೂಲಕ ಸಂದೇಶ ರವಾನಿಸಿದೆ. ತತ್ಪರಿಣಾಮವಾಗಿ ಅವರ ಆಕ್ಷೇಪಾರ್ಹ ವರ್ತನೆ ಮಾಯವಾಯಿತು. ನಾನು ಅವರನ್ನು ರಕ್ಷಿಸಿದ್ದಾಕ್ಕಾಗಿ ಒಂದು ‘ತ್ಯಾಂಕ್ಸ್’ ಮತ್ತು ಒಂದು ‘ಬೈ ಟೂ’ ಕಾಫಿಯ ಉಡುಗೊರೆ ದೊರೆಯಿತು.

೨. ಕೇಂದ್ರೀಕೃತ ಮೌಲ್ಯಮಾಪನದ ಅವಧಿಯಲ್ಲಿ ಇನ್ನೊಬ್ಬ ಹಿರಿಯ ಪ್ರಾಧ್ಯಪಕರು ಸುಲಭದಲ್ಲಿ ಅಲ್ಪ ಪ್ರಮಾಣದ ಹಣ (ಕಾಫಿ ಖರ್ಚಿಗೆ) ಸಂಪಾದಿಸುತ್ತಿದ್ದ ವಿಧಾನ ಇಂತಿತ್ತು. ಶ್ರೀಯುತರು ಉತ್ತಮ ವಾಗ್ಮಿಗಳೂ ಕೆಲವು ಸ್ವಯಂಸೇವಾ ಸಂಘಟನೆಗಳ ಜನಪ್ರಿಯ ಕಾರ್ಯಕರ್ತರೂ ಆಗಿದ್ದರು. ಮೌಲ್ಯಮಾಪನ ನಡೆಯುತ್ತಿರುವಾಗ ಆಗೊಮ್ಮೆ ಈಗೊಮ್ಮೆ ಶ್ರೀಯುತರು ಕಾಫಿ ಕುಡಿಯಲು ಮೌಲ್ಯಮಾಪನ ಕೇಂದ್ರದಿಂದ ಅನತಿ ದೂರದಲ್ಲಿ ಇದ್ದ ‘ಕ್ಯಾಂಟೀನ್’ಗೆ ಹೋಗಿ ಬರುತ್ತಿದ್ದರು. ಅವರೊಂದಿಗೆ ನಾನೂ ಒಮ್ಮೆ ಹೊರಹೋದಾಗ ಅಲ್ಲಿಯೇ ಟಳಾಯಿಸುತ್ತಿದ್ದ ಶ್ರೀಯುತರ ಶಿಷ್ಯನೊಬ್ಬ ಅವರನ್ನು ಕಂಡೊಡನೆ ಓಡಿಬಂದ. “ಏನಯ್ಯಾ ಇಲ್ಲಿ” “ನಿಮ್ಮನ್ನೇ ನೋಡೋಕ್ಕೆ ಅಂತಲೇ ಬಂದಿದ್ದೆ” “ಏನು ವಿಷಯ?” “ನನಗೆಷ್ಟು ಅಂಕ ಬಂದಿದೆ ಅಂತ ನೋಡಿ ಹೇಳೋಕಾಗುತ್ತಾ ಸರ್?” “ಅದೇನು ಅಷ್ಟು ಸುಲಭವೇನಯ್ಯಾ? ಗೊತ್ತಾದರೆ ಮಾರ್ಕ್ಸ್ ಲೀಕ್ ಮಾಡಿದವರೆಲ್ಲರಿಗೂ ಶಿಕ್ಷೆ ಆಗುತ್ತೆ ಗೊತ್ತಾ? ಯಾಕೆ ನೀನು ಪರೀಕ್ಷೇಲಿ ಚೆನ್ನಾಗಿ ಬರೆದಿಲ್ವಾ?” “ಸರ್ ಸರ್ ಸ್ವಲ್ಪ ನೋಡಿ ಸರ್. ಚೆನ್ನಾಗೇ ಬರ್ದಿದ್ದೇನೆ, ಆದರೂ ಯಾಕೋ ಭಯ ಆಗ್ತಾ ಇದೆ ಸರ್” ಆತ ಹೀಗೆ ಹಲವು ಬಾರಿ ಅಂಗಲಾಚಿದ ಬಳಿಕ “ಆಯ್ತು ಟ್ರೈ ಮಾಡ್ತೇನೆ. ಬಟ್ ನಿನ್ ಪೇಪರ್ ಯಾರು ವ್ಯಾಲ್ಯುಯೇಶನ್ ಮಾಡ್ತಾ ಇದ್ದಾರೇಂತ ಪತ್ತೆ ಹಚ್ಚಿ ಅವರನ್ನ ಸುಮ್ನೇ ಕೇಳೋಕಾಗೋತ್ತಾ? ಒಂದು ಕಾಫಿನಾದ್ರೂ ಕೊಡಿಸಬೇಕಲ್ಲ. ಎಷ್ಟಿದೆ ಜೇಬಲ್ಲಿ ದುಡ್ಡು?” ಅವನ ಹತ್ತಿರ ಇದ್ದ ೫ ರೂಪಾಯಿ ಕಸಿದು ಜೇಬಿಗಿಳಿಸಿದರು. ಮುಂದೇನಾಯಿತು ಎಂಬುದನ್ನು ಪತ್ತೆಹಚ್ಚಲು ನಾನು ಪ್ರಯತ್ನಿಸಲಿಲ್ಲ.

ತದನಂತರ ಇತರ ಮಿತ್ರರಿಂದ ತಿಳಿದದ್ದು - ಅವರು ಮಾರ್ಕ್ಸ್ ಪತ್ತೆಹಚ್ಚಲು ಅತೀ ಶ್ರಮ ಪಡುತ್ತಿರಲಿಲ್ಲ. ತಮ್ಮ ಪರಿಚಯದವರನ್ನು ವಿಚಾರಿಸಿ ಅವರ ಪೈಕಿ ಯಾರಾದರೂ ಆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡುತ್ತಿದ್ದರೆ ಎಷ್ಟು ಅಂಕ ಬಂದಿದೆಯೆಂದು ತಿಳಿದುಕೊಂಡು ಶಿಷ್ಯನಿಗೆ ತಿಳಿಸುತ್ತಿದ್ದರು. ಸಾಧ್ಯವಾಗದಿದ್ದರೆ ಕಸಿದುಕೊಂಡಿದ್ದ ಹಣ ಹಿಂದಿರುಗಿಸುತ್ತಿದ್ದರು! ಇಷ್ಟು ಅಂಕ ಹಾಕಿ ಎಂಬುದಾಗಿ  ಮನವಿ ಎಂದೂ ಮಾಡುತ್ತಿರಲಿಲ್ಲವಂತೆ. ಆ ಶಿಷ್ಯ ತಾನಾಗಿಯೇ ಕನಿಷ್ಠ ಅಂಕ ಗಳಿಸಿದ್ದರೆ ಅಥವ ದ್ವಿತೀಯ/ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಲು ಬೇಕಾಗುವ ಕನಿಷ್ಠ ಅಂಕ ಗಳಿಸಿದ್ದರೆ “೧ ಮಾರ್ಕ್ ಕಮ್ಮಿ ಇತ್ತಯ್ಯಾ. ನಾನು ರಿಕ್ವೆಸ್ಟ್ ಮಾಡಿ ಕೊಡಿಸಿದ್ದೇನೆ” ಅಂದು ಇನ್ನೂ ಐದೋ ಹತ್ತೋ ರೂಪಾಯಿ ಗಿಟ್ಟಿಸುತ್ತಿದ್ದರಂತೆ!!

೩. ಬಿ ಎಡ್ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುತ್ತಿದ್ದಾಗ ನಡೆದದದ್ದು - ಒಂದು ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿ ನೀಡಿದ ಎಲ್ಲ ಉದಾಹರಣೆಗಳಲ್ಲಿ ಒಂದೇ ಹೆಸರು ಇದ್ದದ್ದು ನನ್ನ ಗಮನ ಸೆಳೆಯಿತು. ಬಿ ಎಡ್ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ನಮೂದಿಸುವುದು ಶಿಕ್ಷಾರ್ಹ ಅಪರಾಧ. ಈ ಉತ್ತರ  ಪತ್ರಿಕೆಯಲ್ಲಿ ಇದ್ದದ್ದು ಕಾಲ್ಪನಿಕ ಹೆಸರೋ ಅಭ್ಯರ್ಥಿಯ ನಿಜವಾದ ಹೆಸರೋ ಎಂಬುದನ್ನು ಪತ್ತೆಹಚ್ಚುವುದು ಹೇಗೆ? ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳನ್ನು ಕೊಡುವ ಮುನ್ನ ಅಭ್ಯರ್ಥಿಗಳು ನಮೂದಿಸಿದ್ದ ರಿಜಿಸ್ಟರ್ ನಂಬರಿನ ಭಾಗ ಹರಿದು ಅದಕ್ಕೆ ಬದಲಾಗಿ ಬೇರೊಂದು ಸಂಖ್ಯೆಯನ್ನು ಅದರ ಮೇಲೆ ಬರೆಯಲಾಗುತ್ತಿತ್ತು. ಮೌಲ್ಯಮಾಪನ ಮಾಡುವವರಿಗೆ ತಾವು ಯಾವ ಕಾಲೇಜಿನಿಂದ ಬಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿದ್ದೇವೆ ಎಂಬುದು ತಿಳಿಯದಂತೆ ಮಾಡುವ ತಂತ್ರ ಇದಾಗಿತ್ತು. ಈ ತಂತ್ರಕ್ಕೆ ಪ್ರತಿತಂತ್ರವಾಗಿ ಈ ರೀತಿ ಹೆಸರು ಬರೆಯಲು ಕಾಲೇಜಿನವರೇ ಮಾರ್ಗದರ್ಶನ ನೀಡಿರಬೇಕು ಎಂಬುದು ನನ್ನ ಗುಮಾನಿ. ನನ್ನ ಗುಮಾನಿ ಸರಿಯೇ ಎಂಬುದನ್ನು ಪತ್ತೆಹಚ್ಚಲೋಸುಗ “---- ಹೆಸರಿನ ಹುಡುಗಿ ಯಾವ ಕಾಲೇಜಿನ ವಿದ್ಯಾರ್ಥಿ?” ಎಂಬುದಾಗಿ ಮೌಲ್ಯಮಾಪನ ನಡೆಯುತ್ತಿದ್ದ ಕೊಠಡಿಯಲ್ಲಿ ಇರುವವರೆಲ್ಲರಿಗೂ ಕೇಳುವಂತೆ ಪ್ರಶ್ನೆ ಹಾಕಿದೆ. ಕೊಠಡಿಯನ್ನು ದಿವ್ಯಮೌನ ಆವರಿಸಿತು. ಇಬ್ಬರು ಮೌಲ್ಯಮಾಪಕರು ಒಬ್ಬರತ್ತ ಇನ್ನೊಬ್ಬರು ಕಳ್ಳನೋಟ ಬೀರಿದ್ದನ್ನು ಗಮನಿಸಿದರೂ ಏನೂ ತಿಳಿಯದವನಂತೆ ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಿದೆ. ಆ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿ ಮುಗಿಸುವ ಸಮಯಕ್ಕೆ ಸರಿಯಾಗಿ ಕಳ್ಳನೋಟ ಬೀರುತ್ತಿದ್ದವರ ಪೈಕಿ ಒಬ್ಬರು ಬಂದು ನನ್ನ ಸಮೀಪದ ಖಾಲಿ ಕುರ್ಚಿಯಲ್ಲಿ ಆಸೀನರಾಗಿ ಲೋಕಾಭಿರಾಮವಾಗಿ ಮಾತನಾಡಲಾರಂಭಿಸಿದರು. ಆ ಉತ್ತರಪತ್ರಿಕೆಗೆ ನಾನು ನೀಡಿದ್ದ ಒಟ್ಟು ಅಂಕ ತಿಳಿಯಲೋಸುಗ ಬಂದಿದ್ದಾರೆಂಬುದನ್ನು ಅವರ ದೇಹಭಾಷೆಯಿಂದ ಯಾರು ಬೇಕಾದರೂ ಊಹಿಸಬಹುದಿತ್ತು. ನಾನು ಏನೂ ತಿಳಿಯದವನಂತೆ “ಈ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಲು ತುಂಬಾ ಸಮಯ ತೆಗೆದುಕೊಂಡಿತು. ಏನೇನೂ ಚೆನ್ನಾಗಿ ಉತ್ತರಿಸಿಲ್ಲ. ಪಾಸಾಗುವಷ್ಟು ಅಂಕ ನೀಡಲು ಸಾಧ್ಯವೇ ಎಂದು ಎರಡೆರಡು ಬಾರಿ ಪರಿಶಿಲಿಸಿದೆ. ಸಾಧ್ಯವೇ ಇಲ್ಲ. ಇನ್ನೊಂದು ಬಾರಿಯಾದರೂ ಈ ಅಭ್ಯರ್ಥಿ ಪರೀಕ್ಷೆ ತೆಗೆದುಕೊಳ್ಳಲೇ ಬೇಕು” ಎಂದು ತುಸು ಜೋರಾಗಿಯೇ ಘೋಷಿಸಿದೆ. ಶ್ರೀಯುತರು ಏನೂ ಮಾತನಾಡದೆ ನಿರ್ಗಮಿಸಿದರು.

೪. ವಿಶ್ವವಿದ್ಯಾನಿಲಯದ ಬಿ ಕಾಮ್ ಪರೀಕ್ಷೆಯ ಮೌಲ್ಯಮಾಪನ ಕೇಂದ್ರದ ಮೇಲುಸ್ತುವಾರಿಯ ಜವಾಬ್ದಾರಿ ನನ್ನದಾಗಿದ್ದಾಗಿನ ಘಟನೆ ಇದು. ನಮ್ಮ ಕಾಲೇಜೇ ಮೌಲ್ಯಮಾಪನ ಕೇಂದ್ರ. ಆ ದಿನಗಳಲ್ಲಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲ ಪರೀಕ್ಷಾಕೇಂದ್ರಗಳಿಂದ (ಆಗಿನ್ನೂ ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಸ್ಥಾಪನೆ ಆಗಿರಲಿಲ್ಲ) ಉತ್ತರ ಪತ್ರಿಕೆಗಳ ಕಟ್ಟುಗಳು ‘ನೋಂದಾಯಿತ’ ಅಂಚೆ ಮೂಲಕ ನನ್ನ ವೈಯಕ್ತಿಕ ಹೆಸರು ನಮೂದಿಸಿದ ಕಾಲೇಜು ವಿಳಾಸಕ್ಕೆ ಬರುತ್ತಿದ್ದವು. ಅವನ್ನು ವಿಷಯವಾರು ವರ್ಷವಾರು ವರ್ಗೀಕರಿಸಿ ಮೌಲ್ಯಮಾಪನಕ್ಕೆ ವಿತರಿಸಲು ತಕ್ಕುದಾದ ರೀತಿಯಲ್ಲಿ ಇಟ್ಟುಕೊಂಡಿರ ಬೇಕಿತ್ತು. ಮೌಲ್ಯಮಾಪನದ ಅವಧಿಯಲ್ಲಿ ಪ್ರತೀದಿನ ಅವನ್ನು ನಿಗದಿತ ಸಂಖ್ಯೆಯ ಉತ್ತರ ಪತ್ರಿಕೆಗಳಿರುವ ಪುಟ್ಟಪುಟ್ಟ ಕಂತೆ ಮಾಡಿ ಮೌಲ್ಯಮಾಪನ ಮಾಡುವವರಿಗೆ ವಿತರಿಸಿ, ಮೌಲ್ಯಮಾಪನವಾದ ಬಳಿಕ ಹಿಂದಕ್ಕೆ ಪಡೆದು ಪುನಃ ಮೊದಲಿನಂತೆ ಪಿಂಡಿ ಮಾಡಬೇಕಿತ್ತು. ಅಂಕಪಟ್ಟಿಗಳನ್ನು ಮೌಲ್ಯಮಾಪಕರಿಂದ ಪಡೆದು ಸುರಕ್ಷಿತವಾಗಿ ಇಟ್ಟುಕೊಂಡಿದ್ದು ನಿಗದಿತ ದಿನಾಂಕದಂದು ವಿಶ್ವವಿದ್ಯಾನಿಲಯಕ್ಕೆ ತಲುಪಿಸಬೇಕಿತ್ತು.

ಈ ಸಂದರ್ಭದಲ್ಲೊಂದು ದಿನ ನನಗೆ ಬಹಳ ಪರಿಚಿತರಾಗಿದ್ದ ಉಪ ನೋಂದಣಾಧಿಕಾರಿಯೊಬ್ಬರು (ಸಬ್ ರಿಜಿಸ್ಟ್ರಾರ್) ಹುಡುಗನೊಬ್ಬನನ್ನು ಕರೆದುಕೊಂಡು ಮನೆಗೆ ಬಂದರು. ಉಭಯಕುಶಲೋಪರಿ ಆದ ಬಳಿಕ - “ಈ ಹುಡುಗ ನಮ್ಮ ಊರಿನವನು. ತುಂಬಾ ಬಡವ. ಹೇಗೋ ಕಷ್ಟಪಟ್ಟು ಕಾಲೇಜಿಗೆ ಸೇರಿ ಓದುತ್ತಿದ್ದಾನೆ. ಈ ಬಾರಿಯ ಪರೀಕ್ಷೆಯಲ್ಲಿ ದುರದೃಷ್ಟವಶಾತ್ ಒಂದು ವಿಷಯದಲ್ಲಿ ಚೆನ್ನಾಗಿ ಮಾಡಿಲ್ಲವಂತೆ. ವಿಶ್ವವಿದ್ಯಾನಿಲಯದಲ್ಲಿ ನೀವು ಮೌಲ್ಯಮಾಪನದ ಮೇಲುಸ್ತುವಾರಿ ಮಾಡುತ್ತಿರುವರೆಂದು ತಿಳಿಯಿತು (ವಿಶ್ವವಿದ್ಯಾನಿಲಯದವರು ಇದನ್ನು ತಿಳಿಸಿದ್ದು ತಪ್ಪು). ಏನಾದರೂ ಮಾಡಿ ಪಾಸು ಮಾಡಿಸಲು ಸಾಧ್ಯವೇ” “ಖಂಡಿತ ಸಾಧ್ಯ. ಏಕೆಂದರೆ, ಎಲ್ಲ ಉತ್ತರಪತ್ರಿಕೆಗಳೂ ನನ್ನ ಸುಪರ್ದಿನಲ್ಲಿವೆ. ಈತನ ಉತ್ತರಪತ್ರಿಕೆಯನ್ನು ಅರ್ಧಗಂಟೆಯೊಳಗೆ ಹುಡುಕಿ ತೆಗೆಯಬಲ್ಲೆ. ಅದನ್ನು ಮನೆಗೆ ತಂದು ಸ್ಥಳಾವಕಾಶವಿದ್ದರೆ ಸರಿ ಉತ್ತರ ಬರೆಯಿಸಿ ಹಿಂದಕ್ಕೆ ಸೇರಿಸಲೂ ಸಾಧ್ಯ” “ಸರ್, ಉತ್ತರಪತ್ರಿಕೆಯಲ್ಲಿ ೩-೪ ಪುಟ ಖಾಲಿ ಬಿಟ್ಟಿದ್ದೇನೆ ಸರ್” - ಹುಡುಗನ ಅಂಬೋಣ. “ಅದೆಲ್ಲ ಸರಿ. ನಾನು ಹಾಗೆ ಮಾಡುವುದು ಸರಿ ಎಂದು ನಿಮಗನ್ನಿಸುತ್ತದೆಯೇ? ವಿಶ್ವವಿದ್ಯಾನಿಲಯ ನನ್ನನ್ನು ನಂಬಿ ಈ ಜವಾಬ್ದಾರಿಯನ್ನು ಕೊಟ್ಟಿದೆ. ಹೀಗೆ ಮಾಡುವುದು ವಿಶ್ವಾಸದ್ರೋಹವಾಗುವುದಿಲ್ಲವೇ?” “ಮೌಲ್ಯಮಾಪಕರಿಗೆ ಸ್ವಲ್ಪ ಹೇಳಿ ------” “ಸ್ವಾಮೀ, ಅದೂ ಸಾದ್ಯವಿಲ್ಲದ ಮಾತು. ಏಕೆಂದರೆ, ಅದರಿಂದ ನನ್ನ ಕುರಿತು ಕೆಟ್ಟ ಅಭಿಪ್ರಾಯ ಮೂಡುವುದಷ್ಟೇ ಅಲ್ಲ, ನಾನು ಹಾಗೆ ಪ್ರಭಾವ ಬೀರಲು ಯತ್ನಿಸುವುದೂ ಅಪರಾಧ. ಈ ಹುಡುಗ ಹೇಳುವುದನ್ನು ಕೇಳಿದರೆ ಆತ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಅನ್ನುವುದರಲ್ಲಿ ಸಂಶಯವಿಲ್ಲ. ಬರೆದಿರುವುದರಲ್ಲಿ ಎಷ್ಟು ತಪ್ಪಿದೆಯೋ. ಹೀಗಿರುವಾಗ ಎಷ್ಟೇ ‘ಲಿಬರಲ್’ ಆಗಿ ‘ವ್ಯಾಲ್ಯೂ’ ಮಾಡಿದರೂ ಇವ ಪಾಸಾಗಲಾರ. ಬರೆಯದಿರುವುದಕ್ಕೆ ‘ಮಾರ್ಕ್ಸ್’ ಹಾಕಿದರೆ ಮಾತ್ರ ಸಾಧ್ಯವಾಗಬಹುದೇನೋ” ನನ್ನ ಮಾತುಗಳಿಂದ ಈ ಮನುಷ್ಯನ ಹತ್ತಿರ ಈ ಕುರಿತು ಮಾತನಾಡುವುದು ವ್ಯರ್ಥ ಅಂದು ಅವರಿಗನ್ನಿಸಿರ ಬೇಕು. “ಸಾರಿ ಸರ್. ನಿಮಗೆ ತೊಂದರೆ ಕೊಟ್ಟೆ” “ತೊಂದರೆ ಏನಿಲ್ಲ. ನಿಮ್ಮನ್ನು ನೋಡದೆ ಬಹಳ ದಿನಗಳಾಗಿದ್ದವು. ಈ ನೆಪದಲ್ಲಿಯಾದರೂ ಮಾತಾಡುವ ಅವಕಾಶ ಸಿಕ್ಕಿತಲ್ಲ” ಅಂದು ನಮಸ್ಕಾರ ಹೇಳಿ ಹೋದವರನ್ನು ತದನಂತರ ನೋಡಲೇ ಇಲ್ಲ.

[ ಇದಕ್ಕೇ ಏನೋ “ಎ ವಿ ಜಿನಾ. ಅವರ ಹತ್ತಿರ ಹೋಗಬೇಡಿ. ಅವರೊಂಥರಾ ಜನ” ಅಂದು ಬೆನ್ನಹಿಂದೆ ಕೆಲವರು ಆಡಿಕೊಳ್ಳುತ್ತಿದ್ದದ್ದೂ ನನ್ನ ಗಮನಕ್ಕೆ ಬಂದಿದೆ. ಆದರೇನು ಮಾಡುವುದು? “ನೋಡಿ ಸ್ವಾಮೀ, ನಾನಿರೋದೇ ಹೀಗೆ”]

1 comment:

ಜಿ.ಎನ್.ಅಶೋಕವರ್ಧನ said...

ಪರೀಕ್ಷೆ, ಸ್ಪರ್ಧೆ ಶುರುವಾದಂದಿನಿಂದಲೂ ಈ ಪರಿಯ `ತಿದ್ದುಪಾಡು' ನಡೆದಿದೆ ಎಂದು ಮಹಾಭಾರತ ಕಾಲದ ಏಕಲವ್ಯ, ಕರ್ಣ ಪಾತ್ರಗಳಿಂದ ತಿಳಿದುಬರುತ್ತದೆ. ಅವೆಲ್ಲ ಕವಿಕಲ್ಪನೆ ಎಂದುಕೊಂಡರೆ, ಎಸ್.ಎಲ್. ಭೈರಪ್ಪನವರ ಶಾಲಾ ವಿದ್ಯಾರ್ಥಿ ದೆಸೆಯಲ್ಲೇ ಇತ್ತೆಂದು ಅವರ ಆತ್ಮಕಥೆ ಭಿತ್ತಿಯಲ್ಲಿ ಕಂಡು ಬೆರಗಾಗಿದ್ದೆ. ನೀವು ಹೆಚ್ಚಿನ ಸಾಕ್ಷಿಗಳನ್ನು ಕೊಟ್ಟದ್ದು ನೋಡಿ ಹೆಚ್ಚಿನ ವಿಷಾದವಾಯ್ತು. ಪ್ರಾಥಮಿಕ ಶಿಕ್ಷಣದ ಮಟ್ಟದಲ್ಲಿ ತೊಡಗಿರುವ ಪರೀಕ್ಷಾರಹಿತ ದಿನಗಳು ಎಲ್ಲಾ ಮಟ್ಟದಲ್ಲೂ ಬೇಗ ಬರಲಿ ಎಂದು ಹಾರೈಸಬಲ್ಲೆ.
ಅಶೋಕವರ್ಧನ