Pages

6 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೨

ಮೊದಲನೇ ಕಂತಿನಲ್ಲಿ ಪ್ರೌಢಶಾಲೆಯ ಶಿಕ್ಷಕನಾಗಿದ್ದಾಗಿನ ನೆನಪುಗಳನ್ನು ಹಂಚಿಕೊಂಡಿದ್ದೆ. ಈ ಕಂತಿನಲ್ಲಿ ಬಿ ಎಡ್ ಕಾಲೇಜಿನ ಸೇವಾವಧಿಯಲ್ಲಿನ ಕೆಲವು ಸ್ವಾರಸ್ಯಕರ ನೆನಪುಗಳನ್ನು ಹಂಚಿಕೊಳ್ಳುತ್ತೇನೆ. ಬಿ ಎಡ್ ತರಬೇತಿಯ ಭಾಗವಾಗಿ ವಿದ್ಯಾರ್ಥಿ-ಶಿಕ್ಷಕರು ಪ್ರಾಯೋಗಿಕ ಅನುಭವ ಪಡೆಯಲೋಸುಗ ನಿಗದಿತ ಸಂಖ್ಯೆಯ ಪಾಠಗಳನ್ನು ನಿಗದಿತ ಪ್ರೌಢಶಾಲೆಗಳಲ್ಲಿ ಬೋಧಿಸಿಬೇಕು. ಅವನ್ನು ಬಿ ಎಡ್ ಕಾಲೇಜಿನ ಸಂಬಂಧಿತ ಉಪನ್ಯಾಸಕರು ವೀಕ್ಷಿಸಿ ಒಪ್ಪುತಪ್ಪುಗಳನ್ನು ವಿಮರ್ಶಿಸಬೇಕು. ಇಲ್ಲಿ ಉಲ್ಲೇಖಿಸಿದ ಅನುಭವಗಳು ಇಂಥ ವೀಕ್ಷಣಾವಧಿಯಲ್ಲಿ ಆದವುಗಳು. ಶಿಕ್ಷಣಶಾಸ್ತ್ರದ ತತ್ವಗಳನ್ನು ಮನೋಗತ ಮಾಡಿಕೊಳ್ಳದೆಯೆ ಬೋಧಿಸಿದರೆ ಏನಾದೀತು ಎಂಬುದನ್ನು ಇವು ಸೂಚಿಸುತ್ತವೆ. ಇಂದಿನ ಶಿಕ್ಷಕರಲ್ಲಿ ಬಹುಮಂದಿ ಇಂಥವರೇ ಆಗಿರುವುದು ವಿಷಾದನೀಯ. (ಯಾವುದೇ ವೃತ್ತಿಪರ ಕಾಲೇಜುಗಳಿಗೆ ಹೇಗಾದರೂ ಪ್ರವೇಶ ಪಡೆದರೆ ಸಾಕು ಉನ್ನತ ದರ್ಜೆಯಲ್ಲಿ ತೇರ್ಗಡೆ ಆಗುವುದು ಖಾತರಿ ಅನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿರುವಂತೆ ತೋರುತ್ತಿದೆ). ಪ್ರತೀ ಅನುಭವದಲ್ಲಿ ಹುದುಗಿರುವ ಸ್ವಾರಸ್ಯ ಏನು ಎಂಬುದು ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಅವಶ್ಯವಿದ್ದೆಡೆ ತುಸು ವಿವರಣೆ ನೀಡಿದ್ದೇನೆ.

೧. ಯಾವುದೇ ಪಾಠ ಆರಂಭಿಸುವ ಮುನ್ನ ಒಂದು ಪೀಠಿಕೆ ಹಾಕಬೇಕು ಅನ್ನುತ್ತದೆ ಶಾಸ್ತ್ರ. ಅಂದು ಏನನ್ನು ಕಲಿಯಬೇಕೋ ಅದನ್ನು ಗ್ರಹಿಸಲು ಅಗತ್ಯವಾದ ಜ್ಞಾನ ಕೌಶಲಗಳು ವಿದ್ಯಾರ್ಥಿಗಳಲ್ಲಿ ಇದೆಯೇ ಎಂಬುದನ್ನು ಪತ್ತೆಹಚ್ಚುವುದೂ ಅಂದು ಕಲಿಯಬೇಕಾದ್ದನ್ನು ಕಲಿಯುವುದರ ಉಪಯುಕ್ತತೆಯನ್ನು ಮನವರಿಕೆ ಮಾಡುವುದರ ಮುಖೇನ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದೂ ಈ ಹಂತದಲ್ಲಿ ಆಗಬೇಕಾದ ಕಾರ್ಯಗಳು. ಇದು ಜರಗಿದ್ದು ವಿದ್ಯಾರ್ಥಿ-ಶಿಕ್ಷಕಿಯೊಬ್ಬಳು ಮೈಸೂರಿನ ಒಂದು ಬಾಲಕಿಯರ ಪ್ರೌಢಶಾಲೆಯಲ್ಲಿ ಪಾಠ ಆರಂಭಿಸುವ ಮುನ್ನ ಹಾಕಿದ ಪೀಠಿಕೆಯ ಸಂಭಾಷಣೆಯ ತಿರುಳಿನ ಭಾಗ ಮಾತ್ರ ಒದಗಿಸಿದ್ದೇನೆ, ಉಳಿದದ್ದನ್ನು ನೀವೇ ಕಲ್ಪಿಸಿಕೊಳ್ಳಿ

“ಮಕ್ಕಳೇ, ನಾವು ಬದುಕಲು ಆಹಾರ ಸೇವಿಸಲೇ ಬೇಕು ಎಂಬುದು ನಿಮಗೆ ತಿಳಿದಿದೆ. ಸಾಮಾನ್ಯವಾಗಿ ಆಹಾರ ರೂಪದಲ್ಲಿ ಏನನ್ನು ಸೇವಿಸುತ್ತೇವೆ?” “ಅನ್ನ” “ಗುಡ್, ಮತ್ತೆ?” “ಸಾರು, ಸಾಂಬಾರು” “ಕರೆಕ್ಟ್. ಸಾಂಬಾರ್ ಮಾಡಲು ಮುಖ್ಯವಾಗಿ ಏನು ಬೇಕು?” “ತರಕಾರಿ” “ಗುಡ್. ಮತ್ತೆ ಇನ್ನೇನು ಸೇವಿಸುತ್ತೇವೆ?” “ಹಾಲು, ಮಜ್ಜಿಗೆ”,“ಹೌದು, ಮತ್ತೆ?” “ಹಣ್ಣುಗಳು” “ವೆರಿ ಗುಡ್. (ಶಿಕ್ಷಕಿಗೆ ಪರಮಾನಂದವಾದಂತಿತ್ತು) ಸಾಮಾನ್ಯವಾಗಿ ನಾವು ಯಾವ ಯಾವ ಹಣ್ಣುಗಳನ್ನು ತಿನ್ನುತ್ತೇವೆ?”

(ವಿದ್ಯಾರ್ಥಿನಿಯರು ತಮಗೆ ತಿಳಿದಿದ್ದ ಹಣ್ಣುಗಳ ಹೆಸರುಗಳನ್ನು ಹೇಳ ತೋಡಗಿದರು)

“ಬಾಳೆಹಣ್ಣು, ಕಿತ್ತಲೆಹಣ್ಣು, ದ್ರಾಕ್ಷಿ, ಸೇಬು, ಮಾವಿನ ಹಣ್ಣು---“ (ಮಾವಿನ ಹಣ್ಣಿನ ಹೆಸರು ಕೇಳಿದೊಡನೆ ಶಿಕ್ಷಕಿಯ ಮುಖದಲ್ಲಿ ಗೆಲುವಿನ ಸಂಭ್ರಮ ಕಾಣಿಸಿತು) “ವೆರಿ ಗುಡ್. ನಾವು ಮಾವಿನ ಹಣ್ಣನ್ನು ಆಹಾರವಾಗಿ ಸೇವಿಸುತ್ತೇವೆ. ಮಾವಿನ ಹಣ್ಣನ್ನು ನಾವು ಹೇಗೆ ತಿನ್ನುತ್ತೇವೆ?” (ಈ ಪ್ರಶ್ನೆಗೆ ಏನು ಉತ್ತರ ಕೊಡಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಯಲಿಲ್ಲ) “ಹೀಗೆ ಮಿಸ್” ಅಂದ ಒಬ್ಬ ವಿದ್ಯಾರ್ಥಿನಿ ಮಾವಿನ ಹಣ್ಣಿನ ಸಿಪ್ಪೆಯನ್ನು ಹಲ್ಲಿನಿಂದ ಕಚ್ಚಿ ಸುಲಿದು ಹಣ್ಣು ತಿನ್ನುವುದನ್ನು ಅಭಿನಯಿಸಿ ತೋರಿಸಿದಳು “ಹೌದು. ಸಿಪ್ಪೆ ತೆಗೆದು ತಿರುಳನ್ನು ತಿನ್ನುತ್ತೇವೆ. ತಿರುಳು ತಿಂದ ಮೇಲೆ ಉಳಿಯುವುದೇನು?” “ಗೊರಟು” “ಕರೆಕ್ಟ್. ಗೊರಟನ್ನು ಏನು ಮಾಡುತ್ತೇವೆ?” “ಬಿಸಾಡುತ್ತೇವೆ” (ಶಿಕ್ಷಕಿಯ ಮುಖದಲ್ಲಿ ಒಂದು ಮಹಾಯುದ್ಧ ಗೆದ್ದ ಸಂಭ್ರಮ) “ವೆರಿ ಗುಡ್. ಈ ದಿನ ನಾವು ಸಸ್ಯಗಳಲ್ಲಿ ಹೇಗೆಲ್ಲ ಬೀಜ ಪ್ರಸಾರವಾಗುತ್ತದೆ ಎಂಬುದನ್ನು ತಿಳಿಯೋಣ”

ವೀಕ್ಷಕನಾಗಿದ್ದ ನನಗೆ ದಿಗ್ಭ್ರಮೆ. ಆಲ್ ಫ್ರೆಡ್ ಹಿಚ್ ಕಾಕ್ ಸಿನೆಮಗಳಲ್ಲಿ ಇರುವಂತೆ, ಪೀಠಿಕೆ ಮುಗಿಯುವ ತನಕ ಪಾಠ ಎತ್ತ ಸಾಗುತ್ತಿದೆ ಎಂಬ ಸುಳಿವೇ ಸಿಕ್ಕಿರಲಿಲ್ಲ. ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದಕ್ಕೆ ಅತ್ಯುತ್ತಮ ಉದಾಹರಣೆ ಆಗಬಹುದೇನೋ?. ಅಂದಹಾಗೆ ಈ ಪೀಠಿಕೆ ಸಾಧಿಸಿದ್ದೇನು, ನೀವೇ ಆಲೋಚಿಸಿ. ಉದ್ದೇಶಿತ ಕಾರ್ಯಗಳು ಜರಗಿದವೇ ಎಂಬುದನ್ನು ನೀವೇ ನಿರ್ಧರಿಸಿ.

೨. ಈ ಮುಂದೆ ಉದಾಹರಿಸಿರುವ ಪೀಠಿಕೆಗಳನ್ನು ಗಮನಿಸಿ. ಇವು ನಾನು ವೀಕ್ಷಿಸಿದ ಸಾವಿರಾರು ಪಾಠಗಳಲ್ಲಿ ವಿದ್ಯಾರ್ಥಿ-ಶಿಕ್ಷಕರು ಹಾಕಿದ ಪೀಠಿಕೆಗಳ ಪ್ರಾತಿನಿಧಿಕ ನಮೂನೆಗಳು.

(ಅ) ಕನ್ನಡ ಭಾಷಾ ಪಾಠ: “ಮಕ್ಕಳೇ, ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದು ಯಾವಾಗ?” “ಆಗಸ್ಟ್ ೧೫, ೧೯೪೭” “ಗುಡ್, ಈ ಸ್ವಾತಂತ್ರ್ಯ ನಮಗೆ ದೊರೆಯುವಂತೆ ಮಾಡಲು ಹೋರಾಡಿದವರ ಪೈಕಿ ನಿಮಗೆ ತಿಳಿದಿರುವವರನ್ನು ಹೆಸರಿಸಿ” “ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರ ಲಾಲ್ ನೆಹರು” “ಗುಡ್, ಗಾಂಧಿಯವರ ಪೂರ್ಣ ಹೆಸರೇನು?” “ -----“ “ಯಾರಿಗೂ ಗೊತ್ತಿಲ್ವ. ಪರವಾಗಿಲ್ಲ, ನಾನೇ ಹೇಳ್ತೇನೆ. ಅವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದ್ ಗಾಂಧಿ ಅಂತ. ಅವರ ಪೂರ್ಣ ಹೆಸರೇನು?” “ಮೋಹನ್ ದಾಸ್ ಕರಮಚಂದ್ ಗಾಂಧಿ” “ಸರಿ. ಇವತ್ತು ನಾವು ಅವರ ಬಾಲ್ಯ ಹೇಗಿತ್ತು ಎಂಬುದನ್ನು ‘ನನ್ನ ಬಾಲ್ಯ’ ಎಂಬ ಪಾಠದಿಂದ ತಿಳಿಯೋಣ

(ಆ) ವಿಜ್ಞಾನ ಪಾಠ: “ಮಾನವ ದೇಹದಲ್ಲಿ ಇರುವ ಜ್ಞಾನೇಂದ್ರಿಯಗಳು ಯಾವುವು?” “ಕಣ್ಣು, ಕಿವಿ, ಮೂಗು, ಚರ್ಮ, ನಾಲಗೆ” “ಗುಡ್. ಇವುಗಳ ಪ್ರಧಾನ ಕಾರ್ಯಗಳೇನು?” “ನೋಡಲು ಕಣ್ಣು, ಕೇಳಲು ಕಿವಿ, ------“ “ವೆರಿ ಗುಡ್. ಇವತ್ತು ನಾವು ಕಣ್ಣಿನ ರಚನೆ ಹೇಗಿದೆ, ಭಾಗಗಳು ಯಾವುವು ಎಂಬುದನ್ನು ತಿಳಿಯೋಣ”

(ಇ) ಇತಿಹಾಸ ಪಾಠ: “ದಕ್ಷಿಣ ಭಾರತವನ್ನು ಹಿಂದೆ ಆಳಿದ ರಾಜವಂಶಗಳ ಪೈಕಿ ನಿಮಗೆ ತಿಳಿದವನ್ನು ಹೆಸರಿಸಿ” “ ಪಾಂಡ್ಯರು” “ಗುಡ್. ಮತ್ತೆ?” “ಚೋಳರು” “ಸರಿ. ಮತ್ತೆ?” ‘ಹೊಯ್ಸಳರು” “ಸರಿ. ಮತ್ತೆ?” “ಚೇರರು” “ ಸರಿ. ಮತ್ತೆ, ಕರ್ನಾಟಕದಲ್ಲಿ?” “ಕದಂಬರು” “ ಸರಿ. ಮತ್ತೆ” “ಚಾಲುಕ್ಯರು” “ವೆರಿ ಗುಡ್. ಈ ದಿನ ನಾವು ಚಾಲುಕ್ಯರ --------“

(ಈ) ಗಣಿತ ಪಾಠ: “ನಾವು ನಮ್ಮ ಉಳಿತಾಯದ ಹಣವನ್ನು ಸಾಮಾನ್ಯವಾಗಿ ಎಲ್ಲಿ ಇಡುತ್ತೇವೆ?” “ಬ್ಯಾಂಕಿನಲ್ಲಿ” “ಗುಡ್. ಬ್ಯಾಂಕಿನಲ್ಲಿ ಹಣ ಇಟ್ಟದ್ದರಿಂದ ನಮಗೇನು ಲಾಭವಾಗುತ್ತದೆ?” “ಕಳ್ಳರು ಕದಿಯುವುದಿಲ್ಲ” “ ಹೌದು. ನಮ್ಮ ಹಣ ಭದ್ರವಾಗಿರುತ್ತದೆ. ಅದು ಬಿಟ್ಟು, ಬೇರೇನು ಲಾಭ?” “ಬಡ್ಡಿ ಸಿಕ್ಕುತ್ತದೆ” “ವೆರಿ ಗುಡ್. ಈ ದಿನ ನಾವು ಸರಳ ಬಡ್ಡಿ ಅಂದರೇನು -------“

ಈ ಪೀಠಿಕೆಗಳನ್ನು ನೋಡಿದಾಗ ಇವು ಕಾಟಾಚಾರಕ್ಕೆ ಪೀಠಿಕೆ ಹಾಕಿದ ಶಾಸ್ತ್ರ ಮಾಡಲೋಸುಗ ಹಾಕಿದವು ಅನ್ನಿಸುವುದಿಲ್ಲವೇ? ಹೇಗಾದರೂ ಮಾಡಿ ಪಾಠದ ಹೆಸರನ್ನು ಹೇಳಿಸುವುದೇ ಪೀಠಿಕೆಯ ಉದ್ದೇಶವಾಗಿತ್ತು ಅನ್ನಿಸುವುದಿಲ್ಲವೇ? ಇಲ್ಲಿ ನಮೂದಿಸಿದ ಎಲ್ಲ ಉದಾಹರಣೆಗಳಲ್ಲಿ ಪಾಠದ ಹೇಳಿಸಿದ್ದನ್ನು ಬಿಟ್ಟರೆ ಬೇರೇನನ್ನೂ ಸಾಧಿಸಿಲ್ಲ. ಇಂಥ ಪೀಠಿಕೆಗಳು ನಿಷ್ಪ್ರಯೋಜಕ ಅನ್ನುವುದು ಶಿಕ್ಷಕರಿಗೂ ತಿಳಿದಿದೆ. ದುರದೃಷ್ಟವಶಾತ್ ಉತ್ತಮ ಪೀಠಿಕೆ ಹೇಗೆ ಹಾಕಬೇಕೆಂಬುದು ಅವರಿಗೆ ತಿಳಿದಿಲ್ಲ ಅಥವ ಅದಕ್ಕೆ ಬೇಕಾದ ಸಾಮರ್ಥ್ಯ ಅವರಲ್ಲಿ ಇಲ್ಲ. ಎಂದೇ, ತನಿಖೆಯ ಸನ್ನಿವೇಶ ಬಿಟ್ಟರೆ ಬೇರೆ ಸಮಯದಲ್ಲಿ ಪೀಠಿಕೆ ಹಾಕುವ ಗೋಜಿಗೇ ಹೋಗುವುದಿಲ್ಲ. ಬಹುಮಂದಿ ಶಿಕ್ಷಕರು ಶಾಸ್ತ್ರೋಕ್ತವಾಗಿ ಪಾಠ ಆರಂಭಿಸುವುದು ಹೇಗೆಂಬುದನ್ನು ಅರ್ಥಮಾಡಿಕೊಂಡೇ ಇಲ್ಲ. ತತ್ಪರಿಣಾಮವಾಗಿ ಅವರು ಶಾಸ್ತ್ರೋಕ್ತವಾಗಿ ಪಾಠ ಆರಂಭಿಸುವುದೇ ಇಲ್ಲ. ಪರಿವೀಕ್ಷಕರು ಅಥವ ಇತರ ಮೇಲಧಿಕಾರಿಗಳು ಪಾಠವೀಕ್ಷಣೆಗೆ ಬಂದಂದು ಮಾತ್ರ ಕಾಟಾಚಾರಕ್ಕೆ ಪೀಠಿಕೆ ಹಾಕಿದ ಶಾಸ್ತ್ರ ಮಾಡುತ್ತಾರೆ. ಅವರ ಪೈಕಿ ಬಹುಮಂದಿ ಅದನ್ನು ಆಕ್ಷೇಪಿಸುವುದೂ ಇಲ್ಲ.

೩. ವಿದ್ಯಾರ್ಥಿ-ಶಿಕ್ಷಕನೊಬ್ಬ ಮಾಡುತ್ತಿದ್ದ ಇತಿಹಾಸ ಪಾಠದಲ್ಲಿ ಪಾಟಲೀಪುತ್ರದ ಉಲ್ಲೇಖವಿತ್ತು. ಆ ಸಂದರ್ಭ ಬಂದಾಗ ಆತ ತಾನು ತಂದಿದ್ದ ಭಾರತ ಭೂಪಟವನ್ನು ಕಪ್ಪುಹಲಗೆಯ ಪಕ್ಕದಲ್ಲಿದ್ದ ಮೊಳೆಗೆ ನೇತು ಹಾಕಿದ. “ನೀನು ಬಾಪ್ಪ. ಭೂಪಟದಲ್ಲಿ ಪಾಟಲೀಪುತ್ರ ಎಲ್ಲಿದೆ ಎಂಬುದನ್ನು ತೋರಿಸು” ಆ ವಿದ್ಯಾರ್ಥಿ ಭೂಪಟದಲ್ಲಿ ಕನ್ಯಾಕುಮಾರಿಯಿಂದ ಆರಂಭಿಸಿ ಎಲ್ಲ ಮುದ್ರಿತ ಹೆಸರುಗಳ ನಡುವೆ ಪಾಟಲೀಪುತ್ರ ಹುಡುಕಲಾರಂಭಿಸಿದ, ಸಿಕ್ಕಲಿಲ್ಲ. “ಸಿಕ್ಕಲಿಲ್ವೇನೋ. ನೀನು ಬಾರೋ. ತೋರಿಸು ಪಾಟಲೀಪುತ್ರ ಭೂಪಟದಲ್ಲಿ ಎಲ್ಲಿದೆ ಅಂತ” ಅವನೂ ಮೊದಲಿನವನಂತೆಯೇ ಹುಡುಕಿದ, ಸಿಕ್ಕಲಿಲ್ಲ. “ಇಬ್ರಿಗೂ ಗೊತ್ತಾಗ್ಲಿಲ್ವ. ಸರಿ ಬಿಡಿ, ನಾನೇ ತೋರಿಸ್ತೇನೆ. ಸರಿಯಾಗಿ ನೋಡ್ಕೊಳ್ಳಿ”. ಭೂಪಟದಲ್ಲಿ ಪಾಟಲೀಪುತ್ರ ಇರಬೇಕಾದ ಸ್ಥಳದಲ್ಲಿ ಇರಲೇ ಇಲ್ಲ. ದಿಗ್ಭ್ರಾಂತನಾಗಿ ಭೂಪಟವನ್ನೇ ದುರುಗುಟ್ಟಿ ನೋಡಿ “ಓ ರಾಂಗ್ ಮ್ಯಾಪ್ ತಂದ್ಬಿಟ್ಟಿದ್ದೇನೆ. ಇದರಲ್ಲಿ ಪಾಟಲೀಪುತ್ರ ಗುರುತಿಸಿಲ್ಲ. ಪಾಟಲೀಪುತ್ರ ಸುಮಾರಾಗಿ ಇಲ್ಲಿ ಬರುತ್ತೆ ನೋಡಿ” ಅಂದು ತನ್ನ ಅಂಗೈಯನ್ನು ಭೂಪಟದ ಮೇಲೆ ಒಂದೆಡೆ ಇಟ್ಟ.

ಇದಕ್ಕೆ ಪ್ರತಿಕ್ರಿಯೆಯಾಗಿ ನನ್ನದು ಮೂರು ಪ್ರಶ್ನೆಗಳಿವೆ. ತರಬೇಕಾಗಿದ್ದ ಭೂಪಟಕ್ಕೆ ಬದಲಾಗಿ ಯಾವುದೋ ಭೂಪಟ ತರುವವ ಎಂಥ ಶಿಕ್ಷಕ? ಭೂಪಟದಲ್ಲಿ ಮುದ್ರಿಸಿರುವ ಹೆಸರುಗಳ ಪೈಕಿ ಅಪೇಕ್ಷಿತ  ಸ್ಥಳ ತೋರಿಸುವುದಕ್ಕೆ ಬದಲಾಗಿ ಒಂದಷ್ಟಗಲದ ಕ್ಷೇತ್ರ ತೋರಿಸಿ ‘ಸುಮಾರಾಗಿ ಇಲ್ಲಿದೆ’ ಅಂದದ್ದರಿಂದ ಏನು ಕಲಿಸಿದಂತಾಯಿತು? ಭೂಪಟದಲ್ಲಿ ಮುದ್ರಿಸಿರುವ ಹೆಸರುಗಳ ಪೈಕಿ ಅಪೇಕ್ಷಿತ ಹೆಸರು ಹುಡುಕಿಸುವುದರ ಉದ್ದೇಶ ಏನು?

ಇನ್ನೊಂದು ಅನುಭವ: ವಿದ್ಯಾರ್ಥಿ-ಶಿಕ್ಷಕನೊಬ್ಬ ಮಾಡುತ್ತಿದ್ದ ಭೂಗೋಲಶಾಸ್ತ್ರ ಪಾಠದಲ್ಲಿ ನರ್ಮದಾ ನದಿಯ ಉಲ್ಲೇಖವಿತ್ತು. ಆ ಸಂದರ್ಭ ಬಂದಾಗ ಆತ ತಾನು ತಂದಿದ್ದ ಭಾರತದ ರಾಜಕೀಯ ಭೂಪಟವನ್ನು ಕಪ್ಪುಹಲಗೆಯ ಪಕ್ಕದಲ್ಲಿದ್ದ ಮೊಳೆಗೆ ನೇತು ಹಾಕಿದ. “ನೀನು ಬಾಪ್ಪ. ಭೂಪಟದಲ್ಲಿ ನರ್ಮದಾ ನದಿ ಎಲ್ಲಿದೆ ಎಂಬುದನ್ನು ತೋರಿಸು” ಆ ವಿದ್ಯಾರ್ಥಿ ಭೂಪಟದಲ್ಲಿ ಕನ್ಯಾಕುಮಾರಿಯಿಂದ ಆರಂಭಿಸಿ ಎಲ್ಲ ಮುದ್ರಿತ ಹೆಸರುಗಳ ನಡುವೆ ನರ್ಮದಾ ನದಿ ಎಂದು ಮುದ್ರಿಸಿದ್ದನ್ನು ಹುಡುಕಿ ಬಲು ಖುಷಿಯಿಂದ “ಇಲ್ಲಿದೆ ಸಾರ್” ಅನ್ನುತ್ತಾ ತೋರಿಸಿಯೇ ಬಿಟ್ಟ, ವಿದ್ಯಾರ್ಥಿ-ಶಿಕ್ಷಕನೂ ಸಂತೋಷದಿಂದ “ವೆರಿ ಗುಡ್. ಎಲ್ಲರೂ ನೋಡಿದಿರಿ ತಾನೆ? ನರ್ಮದಾ ನದಿ ಎಲ್ಲಿದೆಯೆಂದು” ಅನ್ನುತ್ತಾ ತಾನೂ ನರ್ಮದಾ ನದಿ ಎಂಬ ಅಕ್ಷರಗಳನ್ನು ತೋರಿಸಿ ಪಾಠ ಮುಂದುವರಿಸಿದ.

ಪುನಃ ಇದಕ್ಕೆ ಪ್ರತಿಕ್ರಿಯೆಯಾಗಿ ನನ್ನದು ಕೆಲವು ಪ್ರಶ್ನೆಗಳಿವೆ. ಭೂಪಟದಲ್ಲಿ ಮುದ್ರಿಸಿರುವ ಹೆಸರುಗಳ ಪೈಕಿ ಅಪೇಕ್ಷಿತ ಹೆಸರು ಹುಡುಕಿಸುವುದರ ಉದ್ದೇಶ ಏನು? ನದಿಯ ಪಥವನ್ನು ಗರುತಿಸುವುದಕ್ಕೆ ಬದಲಾಗಿ ಅದರ ಮುದ್ರಿತ ಹೆಸರನ್ನು ತೋರಿಸಿದರೆ ಏನು ಪ್ರಯೋಜನ? ಭೂಗೋಲಶಾಸ್ತ್ರದ ಪಾಠ ಮಾಡುವಾಗ ರಾಜಕೀಯ ಭೂಪಟವನ್ನು ಪ್ರದರ್ಶಿಸುವುದು ಸರಿಯೇ?

ಭೂಪಟ ಓದುವ ಕೌಶಲ ಬೆಳೆಸುವುದು ಇತಿಹಾಸ ಮತ್ತು ಭೂಗೋಲಶಾಸ್ತ್ರ ಬೋಧನೆಯ ಉದ್ದೇಶೀತ ಗುರಿಗಳ ಪೈಕಿ ಒಂದು. ಈ ಗುರಿ ಸಾಧನೆಗಾಗಿ ನಾನು ನೋಡಿದ ಬಹುಮಂದಿ ಶಿಕ್ಷಕರು ಅನುಸರಿಸುತ್ತಿರುವ ಈ ಕ್ರಮ ಸರಿಯೇ? ನಾನು ಓದುತ್ತಿರುವಾಗ ಪರಿಸ್ಥಿತಿ ಇಂತಿರಲಿಲ್ಲ. ನಿಗದಿತ ದಿನಗಳಂದು ನಾವು ಒಳ್ಳೆಯ ‘ಅಟ್ಲಾಸ್’ ಒಂದನ್ನು ಸಮಾಜಶಾಸ್ತ್ರ ಪಾಠ ಇರುವ ದಿನಗಳಂದು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಿತ್ತು. ‘ಅಟ್ಲಾಸ್’ ನೆರವಿನಿಂದ ಅಪೇಕ್ಷಿತ ಸ್ಥಳವನ್ನು ಗುರುತಿಸುವುದು ಹೇಗೆಂಬುದನ್ನು ಅಂದು ಕಲಿತದ್ದು ಇಂದೂ ನೆನಪಿದೆ.

೪. ಭೌತಶಾಸ್ತ್ರದ ವಿದ್ಯಾರ್ಥಿ-ಶಿಕ್ಷಕನೊಬ್ಬ ಮಾಡಿದ ಕಸರತ್ತು ಇಂತಿತ್ತು:

“(ಲಾಳಾಕೃತಿಯ ಕಾಂತ ತೋರಿಸಿ) ಈ ಕಾಂತ ಯಾವ ಆಕಾರದಲ್ಲಿದೆ?” “ಕುದುರೆ ಲಾಳದ ಹಾಗಿದೆ ಸಾರ್” “ಗುಡ್. ಇದು ನೋಡಲು ಲಾಳದಂತಿದೆ. ಹಾಗಾದರೆ ಇದನ್ನು ಏನಂತ ಕರೀಬಹುದು?” “ಲಾಳದಂತಿರುವ ಕಾಂತ” “ಲಾಳಕಾಂತ ಅಂತ ಕರಿಬಹುದಲ್ವ?” ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು. “(ಆಯತಾಕಾರದ ಪಟ್ಟಿಯಂತಿದ್ದ ಕಾಂತ ತೋರಿಸಿ) ಈ ಕಾಂತ ಯಾವ ಆಕಾರದಲ್ಲಿದೆ?” “ಮರದ ಪಟ್ಟಿಯ ಆಕಾರದಲ್ಲಿದೆ” “ಪಟ್ಟಿಯ ಹಾಗಿದೆಯಾ? ಇನ್ಯಾರಾದರೂ ಹೇಳ್ತೀರಾ” “ಕೋಲಿನ ಹಾಗಿದೆ ಸಾರ್” “ಸರಿ. ಕೋಲಿಗೆ ಇನ್ನೊಂದು ಹೆಸರಿದೆ. ಯಾರಿಗೆ ಗೊತ್ತಿದೆ?” ತರಗತಿಯಲ್ಲಿ ದಿವ್ಯಮೌನ. “ಯಾರಿಗೂ ಗೊತ್ತಿಲ್ವ? ಸರಿ ಹಾಗಾದರೆ ನಾನೇ ಹೇಳ್ತೇನೆ. ಕೋಲಿಗೆ ದಂಡ ಅಂತಲೂ ಹೇಳ್ತಾರೆ. ಹಾಗಾದರೆ ಈ ಕಾಂತವನ್ನು ಏನಂತ ಕರೀಬಹುದು?” ಇಡೀ ತರಗತಿ ಕಿರುಚಿತು “ದಂಡಕಾಂತ (ಬಾರ್ ಮ್ಯಾಗ್ನೆಟ್)” ವಿದ್ಯಾರ್ಥಿ-ಶಿಕ್ಷಕ ವಿಜಯದ ನಗೆಯೊಂದಿಗೆ ನನ್ನತ್ತ ನೋಡಿ ಪಾಠ ಮುಂದುವರಿಸಿದ.

ನನ್ನ ಪ್ರತಿಕ್ರಿಯೆ: ಕ್ಷುಲ್ಲಕವೂ ಅಮುಖ್ಯವೂ ಆದ ಅಂಶಗಳಿಗೆ ಅತೀ ಪ್ರಾಮುಖ್ಯ ನೀಡಲಾಗಿದೆ. ಹೆಸರು ಹೇಳಿಸುವುದಕ್ಕೆ ಕಸರತ್ತು ಮಾಡುವುದಕ್ಕೆ ಬದಲಾಗಿ “ವಸ್ತುವಿನ ಆಕಾರವನ್ನು ಆಧರಿಸಿ ಅದಕ್ಕೆ ನಾಮಕರಣ ಮಾಡುವ ಸಂಪ್ರದಾಯವೂ ವಿಜ್ಞಾನದಲ್ಲಿ ಇದೆ” ಎಂಬುದನ್ನು ವಿದ್ಯಾರ್ಥಿಗಳಿಂದ ಹೇಳಿಸಿದ್ದರೆ ಪಾಠ ಅರ್ಥಪೂರ್ಣವಾಗುತ್ತಿತ್ತು.

೫. ರಸಾಯನ ವಿಜ್ಞಾನದ ವಿದ್ಯಾರ್ಥಿ-ಶಿಕ್ಷಕಿಯೊಬ್ಬಳ ಫಜೀತಿ ಮತ್ತು ಆಕೆ ಅದನ್ನು ನಿಭಾಯಿಸಿದ ರೀತಿ ಇಂತಿತ್ತು:

ಪಾಠ: ಪ್ರಯೋಗಶಾಲೆಯಲ್ಲಿ ಕ್ಲೋರಿನ್ ಅನಿಲ ತಯಾರಿಸುವ ವಿಧಾನ. ಕಾಟಾಚಾರದ ಪೀಠಿಕೆ ಹಾಕಿದ ನಂತರ ಹೆಚ್ಚುಕಮ್ಮಿ ಶಾಸ್ತ್ರೋಕ್ತ ವಿಧಾನದಲ್ಲಿ ಪಾಠ ಮಾಡುತ್ತಾ ಕ್ಲೋರಿನ್ ತಯಾರಿಸಿ ತೋರಿಸುವ ಹಂತಕ್ಕೆ ತಲುಪಿದ ಬಳಿಕ ನಡೆದ ವಿದ್ಯಮಾನ ಇದು.

“(ಸ್ಪಿರಿಟ್ ದೀಪ ಹೊತ್ತಿಸಿ) ಈಗ ನಾನೇನು ಮಾಡಿದೆ?” “ಸ್ಪಿರಿಟ್ ದೀಪ ಹೊತ್ತಿಸಿದಿರಿ ಟೀಚರ್” “ಏಕೆ?” ಪ್ಲಾಸ್ಕ್ ನಲ್ಲಿರುವ ರಾಸಾಯನಿಕಗಳನ್ನು ಕಾಯಿಸಲು” “ಫ್ಲಾಸ್ಕ್ ಒಳಗೆ ಏನಾಗುತ್ತಿದೆ ಎಂಬುದನ್ನೂ ಅನಿಲದ ಜಾಡಿಯ ಒಳಗೆ ಬಣ್ಣದಲ್ಲಿ ಆಗುವ ವ್ಯತ್ಯಾಸವನ್ನೂ ಗಮನವಿಟ್ಟು ನೋಡುತ್ತಿರಿ” ಮಕ್ಕಳು ಕುತೂಹಲದಿಂದ ನೋಡುತ್ತಿರುತ್ತಾರೆ. ೫-೬ ನಿಮಿಷಗಳ ಬಳಿಕ “ ಫ್ಲಾಸ್ಕಿನೊಳಗೆ ಏನಾಗುತ್ತಿದೆ?” “ಗುಳ್ಳೆಗಳು ಉಂಟಾಗುತ್ತಿವೆ” “ಅಂದರೆ ಕ್ಲೋರಿನ್ ಅನಿಲ ಉತ್ಪತ್ತಿ ಆಗುತ್ತಿದೆ. ಈಗ ಅನಿಲದ ಜಾಡಿಯನ್ನು ನೋಡುತ್ತಿರಿ. ಅದರೊಳಗೆ ಬಣ್ಣದಲ್ಲಿ ಏನಾದರೂ ಬದಲಾವಣೆ ಆಗತ್ತದೆಯೇ ಎಂಬುದನ್ನು ಗಮನಿಸುತ್ತಿರಿ” ವಿದ್ಯಾರ್ಥಿಗಳೂ ನಾನೂ ವಿದ್ಯಾರ್ಥಿ-ಶಿಕ್ಷಕಿಯೂ ಬಲು ಕುತೂಹಲದಿಂದ ಎಷ್ಟು ಸಮಯ ನೋಡಿದರೂ ಏನೂ ಆಗಲಿಲ್ಲ. ವಿದ್ಯಾರ್ಥಿ-ಶಿಕ್ಷಕಿ ನಸು ಹಸಿರು ಬಣ್ಣದ ಕ್ಲೋರಿನ್ ಅನಿಲದ ಜಾಡಿಯಲ್ಲಿ ಏಕೆ ಸಂಗ್ರಹವಾಗುತ್ತಿಲ್ಲ ಎಂದು ಚಿಂತಿತಳಾದಂತಿತ್ತು. ವಿದ್ಯಾರ್ಥಿಗಳು ತಮ್ಮತಮ್ಮಲ್ಲಿ ಮಾತನಾಡ ತೊಡಗಿದರು. ಪ್ರಯೋಗ ಏಕೆ ವಿಫಲವಾಯಿತೆಂಬುದು ವಿದ್ಯಾರ್ಥಿ-ಶಿಕ್ಷಕಿಗೆ ಹೊಳೆಯಲೇ ಇಲ್ಲ. “ಮಕ್ಕಳೇ, ಇಷ್ಟು ಹೊತ್ತಿಗೆ ಕ್ಲೋರಿನ್ ಅನಿಲದ ಜಾಡಿಯಲ್ಲಿ ಸಂಗ್ರಹವಾಗ ಬೇಕಿತ್ತು. ಈ ರಾಸಾಯನಿಕಗಳು ಬಹಳ ಹಳೆಯವಾಗಿರಬೇಕು. ಅವು ಸತ್ವಹೀನವಾಗಿರುವುದರಿಂದ ಅನಿಲ ಉತ್ಪತ್ತಿ ಆಗುತ್ತಿಲ್ಲ” ಎಂದು ತೇಪೆ ಹಾಕಿ ಪಾಠ ಮುಂದುವರಿಸಿದಳು.

ಫ್ಲಾಸ್ಕಿನಲ್ಲಿ ಅನಿಲ ಉತ್ಪತ್ತಿಯಾಗುತ್ತಿದ್ದರೂ ಅದು ಅನಿಲದ ಜಾಡಿಯನ್ನು ತಲುಪುತ್ತಿಲ್ಲ ಅಂದ ಮೇಲೆ ಅದು ಮಧ್ಯದಲ್ಲಿ ಎಲ್ಲಿಯೋ ಸೋರಿ ಹೋಗುತ್ತಿರ ಬೇಕು ಎಂಬ ಸರಳ ಅಂಶ ಆಕೆಗೆ ಹೊಳೆಯಲೇ ಇಲ್ಲ. ವಾಸ್ತವವಾಗಿ ಆಕೆ ಉಪಕರಣದ ಜೋಡಣೆಯಲ್ಲಿ ಎಡವಿದ್ದಳು. ತಿಸೆಲ್ ಆಲಿಕೆಯ ಕೆಳತುದಿ ರಾಸಾಯನಿಕಗಳ ದ್ರವೀಯ ಮಿಶ್ರಣದಲ್ಲಿ ಮುಳುಗಿರಲಿಲ್ಲ. ಆದ್ದರಿಂದ ಉತ್ಪತ್ತಿಯಾದ ಅನಿಲ ತಿಸಲ್ ಆಲಿಕೆಯ ಮೂಲಕವೇ ವಾತಾವರಣಕ್ಕೆ ಸೇರುತ್ತಿತ್ತು. ಅಜಾಗರೂಕತೆಯೋ ಅಜ್ಞಾನವೋ ಪಾಠವನ್ನು ಕುಲಗೆಡಿಸಿತ್ತು. ಇಂಥ ಸನ್ನಿವೇಶದಲ್ಲಿ ಪರಿಪೂರ್ಣ ಕಲಿಕೆ ಜರಗಲು ಸಾಧ್ಯವೇ ಇಲ್ಲ.

1 comment:

Chandrashekar said...

Very well analysed article