Pages

21 May 2012

ಜಿ ಟಿ ಎನ್ - ಕೆಲವು ನೆನಪುಗಳು

ಅದೇಕೋ ಗೊತ್ತಿಲ್ಲ. ಜೀವನ ಪಯಣದಲ್ಲಿ ನಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪೈಕಿ ಕೆಲವರ ನೆನಪುಗಳು ಪದೇಪದೇ ಅಗುತ್ತಲೇ ಇರುತ್ತದೆ. ಅಂಥವರಲ್ಲಿ ಒಬ್ಬರು ಜಿ ಟಿ ಎನ್ ಎಂದೇ ಪರಿಚಿತರು ಉಲ್ಲೇಖಿಸುತ್ತಿದ್ದ ದಿವಂಗತ ಜಿ ಟಿ ನಾರಾಯಣ ರಾವ್. ಸಂಬಂಧದಲ್ಲಿ ಅವರು ನನಗೆ ಭಾವ. ಸ್ನಾತಕ ಪದವಿ ತರಗತಿಯಲ್ಲಿ ಗಣಿತದ ಉಪನ್ಯಾಸಕ. ನಾನು ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿದ್ದು ೧೯೭೦ ರಲ್ಲಿ. ೧೯೭೬ ರಲ್ಲಿ  ಬರೆದ ‘ಶೈಕ್ಷಣಿಕ ಮನೋವಿಜ್ಞಾನ’ ಪುಸ್ತಕದ ಮೊದಲ ಅಧ್ಯಾಯ ಓದಿ ಯುಕ್ತ ಸಲಹೆ ಮುಖೇನ ನನ್ನ ಬರವಣಿಗೆಯನ್ನು ಪ್ರಭಾವಿಸಿದ ಮಾರ್ಗದರ್ಶಿ. ಮೈಸೂರಿನ ಗಾನಭಾರತೀ ಸಂಗೀತಸಭೆಯ ಆಡಳಿತ ಮಂಡಲಿಯಲ್ಲಿ ನಾನು ಸಕ್ರಿಯ ಸದಸ್ಯನಾಗಿದ್ದಾಗ ಸಹವರ್ತಿ.  ನಾವೀರ್ವರೂ ನಮ್ಮ ನಮ್ಮ ವೃತ್ತಿಯಿಂದ ನಿವೃತ್ತರಾದ ಬಳಿಕ ೭ ತಿಂಗಳ ಕಾಲ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ಕನ್ನಡ ವಿಶ್ವಕೋಶದ ಕೊನೆಯ ಸಂಪುಟದ ವಿಜ್ಞಾನ ವಿಭಾಗದ ಗೌರವ ಸಂಪಾದಕರಾಗಿ ಸಹೋದ್ಯೋಗಿ. ಅಂದ ಮೇಲೆ ನೆನಪುಗಳು ಇರಲೇ ಬೇಕಲ್ಲವೇ? ಇವುಗಳ ಪೈಕಿ ಆಯ್ದ ಕೆಲವನ್ನು ಪುನಃ ಮೆಲುಕು ಹಾಕಲು ಪ್ರಚೋದಿಸಿದ್ದು ಅವರ ಸೊಸೆಯ ಬ್ಲಾಗ್ ತಾಣದಲ್ಲಿ (ಮಾಲಾ ಲಹರಿ) ಪ್ರಕಟವಾಗಿರುವ ಮೊಮ್ಮಗಳು ಅಕ್ಷರಿ ಮಹೇಶ್ ಅವಳ ‘ಅಜ್ಜನ ನೆನಪುಗಳು’ ಲೇಖನ.

ನೆನಪು ೧: ನನ್ನ ನೆನಪಿನಲ್ಲಿ ಇರುವಂತೆ ಜಿ ಟಿ ಎನ್ ಅವರನ್ನು ನಾನು ಮೊದಲಸಲ ನೋಡಿದ್ದು ಕೊಡಗಿನ ಸುಂಟಿಕೊಪ್ಪದಲ್ಲಿ. ನನ್ನ ತಂದೆಯವರು ಸರ್ಕಾರೀ ಆಸ್ಪತ್ರೆಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಊರು. ನನಗಾಗ ೯-೧೦ ವರ್ಷ ವಯಸ್ಸು. ಆಗ ತಾನೇ ವಿವಾಹವಾಗಿದ್ದ ಜಿ ಟಿ ಎನ್ ದಂಪತಿಗಳನ್ನು ನಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದರು. ಭೋಜನಾನಂತರ ಒಂದು ಕೋಣೆಯಲ್ಲಿ ನಮ್ಮ ತಂದೆ ಮತ್ತು ಜಿ ಟಿ ಎನ್ ಅವರ ಇನ್ನೊಂದು ಕೋಣೆಯಲ್ಲಿ ನನ್ನ ಚಿಕ್ಕಮ್ಮ (ಮಲತಾಯಿ, ದಿ ಗೌರಮ್ಮ) ಮತ್ತು ಶ್ರೀಮತಿ ಜಿ ಟಿ ಎನ್ (ಲಕ್ಷ್ಮೀದೇವಿ, ಅರ್ಥಾತ್ ಲಕ್ಷ್ಮಿ ಅಕ್ಕ) ಅವರ ಲೋಕಾಭಿರಾಮವಾದ ಮಾತುಕತೆ ನಡೆದಿತ್ತು. ನನ್ನದು ಮೂಕಪ್ರೇಕ್ಷಕನ ಪಾತ್ರ. ಸುಮಾರು ೧ ತಾಸು ಸಮಯವಾದ ಬಳಿಕ ಜಿ ಟಿ ಎನ್ ಅವರು ಹೆಂಗಸರು ಮಾತನಾಡುತ್ತಿದ್ದಲ್ಲಿಗೆ ಬಂದು  ಎದುರಿನ ಗೋಡೆಗೆ ‘ನಾವಿನ್ನು ಹೊರಡೋಣವೇ’ ಎಂದು ಕೇಳಿದ್ದು ‘ಹೇಳಬೇಕಾದವರಿಗೆ ಮುಖನೋಡಿ ಹೇಳದೆಯೇ ಗೋಡೆಗೆ ಹೇಳಿದರೆ ಅದು ಅವರ ಪರವಾಗಿ ಉತ್ತರಿಸುತ್ತದೆಯೇ’ ಎಂದು ನನ್ನ ಚಿಕ್ಕಮ್ಮ ತಮಾಷೆ ಮಾಡಿದ್ದು ಅದೇಕೋ ಇನ್ನೂ ನೆನಪಿನಿಂದ ಮಾಸಿಲ್ಲ. ಅಂದಹಾಗೆ ಶ್ರೀಯುತರು ಮಾತನಾಡುವಾಗ ಪತ್ನಿಯ ಹೆಸರು ಹೇಳಿದ್ದನ್ನು ನಾನು ಕೇಳಿಯೇ ಇಲ್ಲ.

ನೆನಪು ೨: ಪ್ರೌಢಶಾಲಾ ವ್ಯಾಸಂಗಕ್ಕಾಗಿ ನಾನು ಮಡಿಕೇರಿಯಲ್ಲಿ ಇದ್ದ ದೊಡ್ಡಪ್ಪ ದಿ ಎ ಪಿ ಶ್ರೀನಿವಾಸ ರಾವ್ ಅವರ ಮನೆಯಲ್ಲಿ ಠಿಕಾಣಿ ಹೂಡಿದ್ದೆ. ಪ್ರೌಢಶಾಲೆಯ ಮೊದಲನೆಯ ವರ್ಷಕ್ಕೆ ಜಿ ಟಿ ಎನ್ ಬರೆದಿದ್ದ ಪುಟ್ಟಪುಟ್ಟ ಕಥೆಗಳ ಸಂಗ್ರಹ ‘ವನಸುಮ’ ಎಂಬ ಪುಸ್ತಕ ‘ನಾನ್ ಡಿಟೇಲ್ಡ್ ಟೆಕ್ಸ್ಟ್’ ಆಗಿತ್ತು. ಅದೊಂದು ದಿನ ದೊಡ್ಡಪ್ಪನ ಮಗ ಲಲಿತಮೋಹನ ‘ನೋಡೋ ನೋಡೋ ನಿನ್ನ ‘ನಾನ್ ಡಿಟೇಲ್ಡ್ ಟೆಕ್ಸ್ಟ್’ ಬೆರದವರು ಹೋಗ್ತಾ ಇದ್ದಾರೆ’ ಎಂದು ಬೊಬ್ಬೆ ಹೊಡೆದ. ನಾನೂ ಈ ಅದ್ಭುತ ವ್ಯಕ್ತಿಯನ್ನು ನೋಡಲೋಸುಗ ಗೇಟಿನ ಬಳಿ ಓಡಿದೆ. ಕಂಡದ್ದೇನು? ಬಿಳಿ ಪ್ಯಾಂಟ್ ಮತ್ತು ಬಿಳಿ ಷರ್ಟು ಧರಿಸಿ ಎದೆಗೆ ತಗಲುವಂತೆ ಮಡಚಿದ ಬಲಗೈನಲ್ಲಿ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಸೈನಿಕನೋರ್ವನ ಶಿಸ್ತಿನ ನಡಿಗೆಯನ್ನು ನೆನಪಿಸುವ ನಡಿಗೆಯಲ್ಲಿ ಹೋಗುತ್ತಿದ್ದ, ಗೇಟಿನ ಬಳಿ ನನ್ನನ್ನು ಕಂಡಾಗ ‘ಹೈಸ್ಕೂಲಿಗೆ ಬಂದಾಯಿತೋ’ ಅನ್ನುತ್ತಾ ಮುಂದೆ ಸಾಗಿದ ಜಿ ಟಿ ಎನ್. ಉಡುಗೆ ಮತ್ತು ನಡಿಗೆಯಲ್ಲಿನ ವಿಶಿಷ್ಟತೆಯನ್ನು ಹೊರತುಪಡಿಸಿದರೆ ಅವರು ಇತರ ಮನುಷ್ಯರಂತೆಯೇ ಇದ್ದರೇ ವಿನಾ ‘ಇವರು ವನಸುಮ ಪುಸ್ತಕ ಬರೆದವರು’ ಎಂದು ಘೋಷಿಸುವ ಯಾವ ವಿಶಿಷ್ಟ ಲಕ್ಷಣವೂ ನನಗೆ ಆಗ ಗೋಚರಿಸಲಿಲ್ಲ.

[ಶ್ರೀಯುತರೊಡನೆ ನಿಕಟ ಸಂಪರ್ಕ ಏರ್ಪಟ್ಟದ್ದು ನಾನು ಕಾಲೇಜು ಮೆಟ್ಟಿಲು ಹತ್ತಿದ ಮೇಲೆಯೇ. ಮಡಿಕೇರಿಯ ಸರ್ಕಾರೀ ಕಾಲೇಜಿನಲ್ಲಿ ಪಿ ಯು ಸಿ ತರಗತಿಯಿಂದ ಮೊದಲ್ಗೊಂಡು ಸ್ನಾತಕ ಪದವಿ ಮುಗಿಸುವ ತನಕ ಕಾಲೇಜಿನ ವಿದ್ಯಾರ್ಥಿನಿಲಯವಾಸಿಯಾಗಿದ್ದ ನನಗೆ ಶ್ರೀಯುತರು ಸ್ಥಳೀಯ ರಕ್ಷಕರು. ನಾನು ಎನ್ ಸಿ ಸಿ ಕೆಡೆಟ್, ಶ್ರೀಯುತರು ಎನ್ ಸಿ ಸಿ ಕ್ಯಾಪ್ಟನ್. ಗಣಿತ ನನ್ನ ಐಚ್ಛಿಕ ವಿಷಯಗಳ ಪೈಕಿ ಒಂದು, ಶ್ರೀಯುತರು ಗಣಿತದ ಉಪನ್ಯಾಸಕರು. ಮಡಿಕೇರಿ ಕಾಲೇಜಿನ ಏಕಮೇವಾದ್ವಿತೀಯ ಸಹಕಕಾರೀ ಮಳಿಗೆಯ ಸೂತ್ರಧಾರಿ ಅವರು, ನನಗೆ ಅಗತ್ಯವಿದ್ದ ಪದಾರ್ಥಗಳನ್ನು ಅಲ್ಲಿಂದಲೇ ಖರೀದಿಸಬೇಕೆಂಬುದು ನನ್ನ ತಂದೆಯವರ ಕಟ್ಟಾಜ್ಞೆ. ಅದಕ್ಕೆ ಅಗತ್ಯವಿರುವ ಹಣವನ್ನು ತಂದೆಯವರು ಜಿಟಿಎನ್ ಅವರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಇತ್ತು, ಹುಡುಗನ ಕೈಗೆ ಹಣ ಕೊಟ್ಟರೆ ಈ ಸತ್ಪುತ್ರ ದುಂದುವೆಚ್ಚ ಮಾಡಿಯಾನು ಎಂಬ ಭಯ ಅವರಿಗಿದ್ದದ್ದರಿಂದ. ಎಂದೇ, ಪದೇಪದೇ ಅವರನ್ನು ಭೇಟಿಯಾಗಲೇ ಬೇಕಾದ ಅನಿವಾರ್ಯತೆಯೂ ಇತ್ತು]

ನೆನಪು ೩: ತರಗತಿಗೆ ೧/೨ ನಿಮಿಷ ತಡವಾಗಿ ಬಂದದ್ದೇ ಆಗಲಿ ತರಗತಿಯನ್ನು ೧/೨ ನಿಮಿಷ ತಡವಾಗಿ ಬಿಟ್ಟದ್ದೇ ಆಗಲಿ ನನಗೆ ನೆನಪಿಲ್ಲ. ತರಗತಿಯ ಒಳಕ್ಕೆ ಶ್ರೀಯತರ ಪ್ರವೇಶಿದ ತಕ್ಷಣ ಎದ್ದು ನಿಲ್ಲುತ್ತಿದ್ದ ನಮ್ಮನ್ನು ಉದ್ದೇಶಿಸಿ ತಕ್ಷಣವೇ ‘ಸಿಟ್ ಡೌನ್’ ಹೇಳಿ ತಮ್ಮ ಟೇಬಲ್ ಬಳಿ ಬರುವ ಮುನ್ನವೇ ಪಾಠ ಆರಂಭಿಸುತ್ತಿದ್ದದ್ದನ್ನೂ ‘ಬೆಲ್’ ಆದ ತಕ್ಷಣ ಪಾಠದ ಮುಕ್ತಾಯದ ವಾಕ್ಯ ಉದ್ಗರಿಸುತ್ತಲೇ ಬಾಗಿಲಿನಿಂದ ಹೊರನಡೆಯತ್ತಿದ್ದದ್ದನ್ನೂ ಮರೆಯಲು ಸಾಧ್ಯವೇ ಇಲ್ಲ. ಅಂತೆಯೇ, ಪಾಠ ಮಾಡುತ್ತಲೇ ಒಳಬಂದವರು ಮೊದಲು ಕಪ್ಪುಹಲಗೆಯನ್ನು ಸ್ವಚ್ಛಗೊಳಿಸುತ್ತಿದ್ದದ್ದನ್ನೂ ಪಾಠ ಮಾಡುತ್ತಲೇ ಹೊರನಡೆಯುವ ಮುನ್ನ ಕಪ್ಪುಹಲಗೆಯನ್ನು ಸ್ವಚ್ಛಗೊಳಿಸುತ್ತಿದ್ದದ್ದನ್ನೂ ಮರೆಯಲು ಸಾಧ್ಯವಿಲ್ಲ.

ನೆನಪು ೪: ನಾನು ಪಿ ಯು ಸಿ ವಿದ್ಯಾರ್ಥಿ ಆಗಿದ್ದಾಗಿನ ಒಂದು ಮರೆಯಲಾಗದ ಅನುಭವ - ಕಾಲೇಜಿನಿಂದ ಬೆಳಗ್ಗೆ ನಡಿಗೆ ಆರಂಭಿಸಿ ನಿಶಾನಿಮೊಟ್ಟೆ ಎಂಬ ಬೆಟ್ಟವೇರಿ ಏರಿದ್ದಕ್ಕೆ ವಿರುದ್ಧ ದಿಕ್ಕಿನಲ್ಲಿ ಇಳಿದು ಮಡಿಕೇರಿ-ಅಂಪಾಜೆ ರಸ್ತೆಯ ಜೋಡುಪಾಲ ಎಂಬ ಸ್ಥಳ ತಲುಪಿ ತದನಂತರ ರಸ್ತೆಯಲ್ಲೇ ನಡೆದು ‘ರಾಜಾ ಸೀಟ್’ ಮೂಲಕವಾಗಿ ಕಾಲೇಜೆಗೆ ಬಂದು ಸೇರುವ ‘ರೂಟ್ ಮಾರ್ಚ್’ ಎಂಬ ಎನ್ ಸಿ ಸಿ ಕಾರ್ಯಕ್ರಮ. ಒಬ್ಬರ ಹಿಂದೆ ಒಬ್ಬರಂತೆಯೇ ಸಾಗಬೇಕಿದ್ದ ಅಗಲಕಿರಿದಾದ ಕಾಲು ಹಾದಿ (ಯಾವ ಮಹಾನುಭಾವರು ಇಲ್ಲಿ ಓಡಾಡಿ ಈ ಹಾದಿ ಉಂಟಾಗಿತ್ತೋ ಗೊತ್ತಿಲ್ಲ). ಸುಮಾರು ೩೫-೪೦ ಕಿಮೀ ದೂರವನ್ನು ಎನ್ ಸಿ ಸಿ ಬೂಟು ಧರಿಸಿ ಕ್ರಮಿಸಲು ನಮಗಿದ್ದ ವಿಶೇಷ ಸೌಲಭ್ಯ - ೧ ಮಿಲಿಟರಿ ಬಾಟಲ್ ನೀರು ಮತ್ತು ಜೋಡುಪಾಲದಲ್ಲಿ ಕೊಟ್ಟ ‘ಪ್ಯಾಕೆಟ್ ಮೀಲ್ಸ್’. ಮಾರ್ಗ ಮಧ್ಯದಲ್ಲೆಲ್ಲೂ ಬಾಟಲ್ ಮರುಭರ್ತಿ ಮಾಡವಂತಿಲ್ಲ ಎಂದು ತಿಳಿದಿದ್ದರೂ ೧/೨ ಕ್ಕಿಂತಲೂ ಕಮ್ಮಿ ದೂರ ಕ್ರಮಿಸುವಷ್ಟರಲ್ಲಿಯೇ ಅನೇಕರ ನೀರು ಖಾಲಿಯಾಗಿತ್ತು. ಇದ್ದವರ ಕೈನಿಂದ ಬೇಡಿ ಗುಟುಕು ನೀರು ಕುಡಿಯುವ ಪರಿಸ್ಥಿತಿ ಅವರದ್ದು. ಅನತಿ ದೂರ ಕ್ರಮಿಸುವಷ್ಟರಲ್ಲಿಯೇ (ನಾನೂ ಸೇರಿದಂತೆ) ಅನೇಕರಿಗೆ ‘ಶೂ ಕಡಿತ’ವಾಗಿದ್ದರಿಂದ ಅವನ್ನು ಕಳಚಿ ‘ಲೇಸ್’ನ ನೆರವಿನಿಂದ ಎರಡನ್ನೂ ಜೋಡಿಸಿ ಮಾಲೆಯಂತೆ ಧರಿಸಿ ಬರಿಗಾಲಿನಲ್ಲಿಯೇ ಪಯಣದ ಮುಂದುವರಿಕೆ. ನಮ್ಮ ಈ ಮೆರವಣಿಗೆಯ ಅಗ್ರಸ್ಥಾನದಲ್ಲಿ ಜಿ ಟಿ ಎನ್, ಕೊನೆಯಲ್ಲಿ ಭಾರತದ ಭೂಸೈನ್ಯದಿಂದ ನಿಯೋಜಿತರಾಗಿದ್ದ ಕ್ಯಾಪ್ಟನ್. ಇವರೀರ್ವರು ಮಹನೀಯರ ಆದಿಯಿಂದ ಅಂತ್ಯದ ತನಕವೂ ನಡೆದ ಹೆಚ್ಚುಕಮ್ಮಿ ಸಮವೇಗದ ಮಿಲಟರಿ ನಡಿಗೆಯನ್ನೇ ಆಗಲಿ, ಪಯಣದ ಅಂತ್ಯದಲ್ಲಿ ತಮ್ಮ ಬಾಟಲ್ ಗಳಲ್ಲಿ ೧/೨ ಕ್ಕಿಂತ ತುಸು ಹೆಚ್ಚು ನೀರು ಉಳಿದಿದ್ದನ್ನು ತೋರಿಸಿದ್ದನ್ನೇ ಆಗಲಿ ಮರೆಯುವುದು ಹೇಗೆ?

ನೆನಪು ೫: ಸ್ನಾತಕ ಪದವಿ ವಿದ್ಯಾರ್ಥಿಯಾಗಿದ್ದಾಗಿನ ಅವಧಿಯಲ್ಲಿ ನಾನು ಪ್ರಾಧಾನ್ಯ ನೀಡುತ್ತಿದ್ದದ್ದು ಇವಕ್ಕೆ: ಚರ್ಚಾ ಸ್ಪರ್ಧೆಗಳು, ಭಾಷಣ ಸ್ಪರ್ಧೆಗಳು, ನಾಟಕಗಳಲ್ಲಿ ಅಭಿನಯಿಸುವುದು ಮತ್ತು ಟೇಬಲ್ ಟೆನ್ನಿಸ್, ಕನ್ನಡ ಕಾದಂಬರಿಗಳನ್ನು ಓದುವುದು. ಇವುಗಳ ನಡುವೆ ಬಿಡುವಾದಾಗ ತರಗತಿ. (ಈ ಅವಧಿಯಲ್ಲಿ ಕಾಲೇಜು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ಗಳಿಸಿದ ಪ್ರಥಮ/ದ್ವಿತೀಯ ಬಹುಮಾನಗಳ ಮತ್ತು ಪ್ರಶಸ್ತಿ ಪತ್ರಗಳ ಪೈಕಿ ಕೆಲವು ಇಂದೂ ನನ್ನ ಮನೆಯಲ್ಲಿ ಎಲ್ಲಿಯೋ ಇರಬೇಕು) ಅಂದ ಮೇಲೆ ತರಗತಿಯ ಪರೀಕ್ಷೆಗಳಲ್ಲಿ ‘ಜೀವನಾಂಶ’ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಂಗತಿಯಾಗಿತ್ತು. ಒಂದು ಬಾರಿ ಒಂದೂ ಪೀರಿಯಡ್ ತಪ್ಪಿಸಿಕೊಳ್ಳದೆಯೇ ೧-೨ ತಿಂಗಳು ತರಗತಿಗೆ ಹಾಜರಾಗಿದ್ದೆ (ಬೇರೆ ಯಾವ ಸ್ಪರ್ಧೆಗಳೂ ಇರಲಿಲ್ಲವಾದ್ದರಿಂದ). ಆ ಬಾರಿಯ ತರಗತಿ ಮಟ್ಟದ ಕಿರು ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದಿದ್ದವು. ಅದನ್ನು ನೋಡಿದ ಜಿ ಟಿ ಎನ್ ಉವಾಚ - “ನೀನು ತರಗತಿಗೆ ತಪ್ಪಿಸಿಕೊಳ್ಳದೆ ಹಾಜರಾಗುತ್ತಿದ್ದರೆ ಸಾಕಲ್ಲ ಮಾರಾಯ.ಒಳ್ಳೇ ‘ಮಾರ್ಕ್ಸ್’ ಬರುತ್ತದಲ್ಲ”. ಆಗ ಪ್ರಾಶುಪಾಲರಾಗಿದ್ದ ಎಮ್ ಎ ರಾಮಚಂದ್ರ ರಾವ್ ಉವಾಚ - “ಗೋವಿಂದ ನಿನ್ನ ಭಾಷಣ ಸಾಮರ್ಥ್ಯ ಇತ್ಯಾದಿ ಇತ್ಯಾದಿಗಳು ಈಗ ಕೀರ್ತಿ ತಂದುಕೊಟ್ಟಂತೆ ತೋರಿದರೂ ಮುಂದೆ ಅನ್ನ ನೀಡಲಾರವು”. ಆಗ ಇವಕ್ಕೆಲ್ಲ ಮಾನ್ಯತೆ ನೀಡವ ಮನಃಸ್ಥಿತಿಯಲ್ಲಿ ನಾನಿಲ್ಲದಿದ್ದರೂ ಮುಂದಿನ ಜೀವನಾನುಭವಗಳು ಇವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಷ್ಟೇ ಅಲ್ಲ ಈಗಲೂ ಇವು ಮನಃಪಟಲದ ಮುಂದೆ ಹಾದುಹೋಗುತ್ತಿರುತ್ತವೆ.

ನೆನಪು ೬: ಒಂದು ವರ್ಷ ಎನ್ ಸಿ ಸಿ ಯ ವಾರ್ಷಿಕ ಕ್ಯಾಂಪ್  ಉಪ್ಪಿನಂಗಡಿಯ ನೇತ್ರಾವತೀ ನದಿಗೆ ತಾಗಿಕೊಂಡಿದ್ದ ಬಯಲೊಂದರಲ್ಲಿ ಎಂದು ತೀರ್ಮಾನಿಸಿದ್ದರು. ನಿಗದಿತ ದಿನದಂದು ನಮ್ಮ ಎನ್ ಸಿ ಸಿ ದಳ ಬಸ್ಸೊಂದರಲ್ಲಿ ಉಪ್ಪಿನಂಗಡಿಯತ್ತ ಜಯಘೋಷ ---- ಇತ್ಯಾದಿ ಇತ್ಯಾದಿಗಳೊಂದಿಗೆ ಪಯಣಿಸುತ್ತಿತ್ತು. ಅಧಿಕಾರೀ ವರ್ಗದವರು ಪೂರ್ವಸಿದ್ಧತೆ ಮಾಡಲೋಸುಗ ಮುಂದಾಗಿಯೇ ಉಪ್ಪಿನಂಗಡಿ ತಲುಪಿದ್ದರು. ನಮ್ಮ ಬಸ್ಸು ಘಾಟಿ ರಸ್ತೆಯಲ್ಲಿ ಜೋಡುಪಾಲಕ್ಕೂ ಮುನ್ನ ಇರುವ ರಬ್ಬರ್ ತೋಟದ ಸಮೀಪದಲ್ಲಿ ಬಸ್ಸಿನ ಬ್ರೇಕ್ ಕೆಟ್ಟು ಪಕ್ಕದ ಬರೆಗೆ ಢಿಕ್ಕಿ ಹೊಡೆದು ನಿಂತಿತು. ಬಸ್ಸಿನ ನಿರ್ವಾಹಕನಿಗೆ ಮಾತ್ರ ಬಲು ಪೆಟ್ಟಾಗಿತ್ತು, ಬೇರೆಯವರಿಗೆ ಯಾರಿಗೂ ಏನೂ ಆಗಿರಲಿಲ್ಲ. ಅಪಘಾತ ಸುದ್ದಿ ಬೇರೆ ಬಸ್ಸಿನವರ ಮೂಲಕ ಮಡಿಕೇರಿಗೂ ಉಪ್ಪಿನಂಗಡಿಗೂ ಸುದ್ದಿ ತಲುಪಿ ಇನ್ನೊಂದು ಬಸ್ ಬರುವ ತನಕ ಅಲ್ಲಿಯೇ ಇದ್ದೆವು (ಕೆಲವರು ರಬ್ಬರ್ ತೋಟದೊಳಗೆ ನುಸುಳಿ ಒಂದಷ್ಟು ರಬ್ಬರ್ ಹಾಲು ಕದ್ದು ತಂದು ಅದರಿಂದ ಚೆಂಡು ಮಾಡಲು ಸಾಧ್ಯವೇ ಎಂಬ ಸಂಶೋಧನೆಯಲ್ಲಿ ಮಗ್ನರಾಗಿದ್ದರು). ಏತನ್ಮಧ್ಯೆ, ಕೆಲವರು ಆಘಾತಕ್ಕೊಳಗಾದವರಂತೆಯೂ ಕೆಲವರು ಮೈಕೈ ನೋವಿನಂದ ನರಳುತ್ತಿರುವಂತೆಯೂ ನಟಿಸಿ ಕ್ಯಾಂಪಿನ ಚಟುವಟಿಕೆಗಳಿಂದ ಒಂದು ದಿನದ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಯೋಜನೆ ರೂಪಿಸಿದ್ದೆವು. ಶಿಬಿರಕ್ಕೆಂದು ನಿಗದಿಯಾಗಿದ್ದ ಸ್ಥಳ ತಲುಪಿದ್ಧಾಯಿತು. ಸ್ವಾಗತಿಸಲು ಜಿ ಟಿ ಎನ್ ಸ್ವತಃ ಹಾಜರಾಗಿದ್ದರು. ನಾವೆಲ್ಲ ಯೋಜನೆಯನ್ವಯ ನಟಿಸುತ್ತಾ ಬಸ್ಸಿನಿಂದ ಕೆಳಗಿಳಿದೆವು. ಎಲ್ಲರ ಮೇಲೆ ಒಮ್ಮೆ ಕಣ್ಣು ಹಾಯಿಸಿದ ಜಿ ಟಿ ಎನ್ ಘರ್ಜಿಸಿದರು - ‘ಯೆಸ್. ಆಲ್ ಆಫ್ ಯು ಫಾಲ್ ಇನ್ ಎ ಲೈನ್. ಕ್ವಿಕ್. ವಿ ಆರ್ ಅಲ್ರೆಡಿ ಲೇಟ್’ ನಮ್ಮ ನಟನೆ ಎಲ್ಲವೂ ಮಾಯವಾಗಿ ದಡದಡನೆ ‘ಫೆಲ್ ಇನ್ ಎ ಲೈನ್’.  ಪುನಃ ಮೊಳಗಿತು ಜಿ ಟಿ ಎನ್ ವಾಣಿ - ‘ನೌ ದ ಟೈಮ್ ಈಸ್ ಎಲೆವೆನ್ ತರ್ಟಿಫೈವ್ ಅವರ್ಸ್. ಲಂಚ್ ಈಸ್ ಎಟ್ ೧೩೦೦ ಅವರ್ಸ್. ಬೈ ದೆಟ್ ಟೈಮ್ ಯು ಶುಡ್ ಹ್ಯಾವ್ ಕಂಪ್ಲೀಟೆಡ್ ದ ಟಾಸ್ಕ್ ಆಫ್ ಪಿಚ್ಚಿಂಗ್ ಯುವರ್ ಟೆಂಟ್ಸ್. ಅಫ್ ಕೋರ್ಸ್ ಆಫ್ಟರ್ ಹ್ಯಾಂಡಿಂಗ್ ಓವರ್ ಯುವರ್ ರೈಫಲ್ಸ್ ಎಟ್ ದ ಸ್ಟೋರ್ಸ್. ಅದರ್ ವೈಸ್ ಯು ಮೇ ಹ್ಯಾವ್ ಟು ಸ್ಲೀಪ್ ಇನ್ ದ ಓಪನ್ ಫೀಲ್ಡ್. ಡಿಸ್ಸಮಿಸ್ಡ್’ ಅವರು ಅದೆಲಿಗೋ ಹೋದರು, ನಾವು ಅವರನ್ನೂ ಇಂಥ ನಿಷ್ಕರುಣಿ ಆಫಿಸರ್ ಅನ್ನು ಪಡೆಯುವಂತೆ ಮಾಡಿದ ನಮ್ಮ ಹಣೆಬರೆಹವನ್ನೂ ಶಪಿಸುತ್ತ ಕಾರ್ಯೋನ್ಮುಖರಾದೆವು.

ನೆನಪು ೭: ಅದೇ ಅವಧಿಯಲ್ಲಿ ಯಾವುದೋ ಸಂದರ್ಭದಲ್ಲಿ  ೨-೩ ಬಹುಮಾನಗಳು ಏಕಕಾಲದಲ್ಲಿ ಲಭಿಸಿದವು. ಕಾಲೇಜಿನಲ್ಲಿ ಕೊಡುತ್ತಿದ್ದ ಬಹುಮಾನಗಳು ಪೂರೈಕೆ ಆಗುತ್ತಿದ್ದದ್ದು ಜಿ ಟಿ ಎನ್ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಸಹಕಾರೀ ಮಳಿಗೆಯಿಂದ. ಎಂದೇ, ನನ್ನನ್ನು ಕರೆಸಿ “ನಿನಗೆ ಬಂದಿರುವ ಬಹುಮಾನಗಳ  ಮೌಲ್ಯ ಗಣನೀಯವಾಗಿದೆ. ಈ ಹಣದಿಂದ ಒಳ್ಳೆಯ ಪುಸ್ತಕಗಳನ್ನು ಪಡೆಯಬಹುದು. ನಮ್ಮಲ್ಲಿ ಇರುವ ಪುಸ್ತಕಗಳ ಪೈಕಿ ನಿನಗೆ ಇಷ್ಟವಾದವನ್ನು ಆಯ್ಕೆ ಮಾಡಿಕೊಟ್ಟರೆ ಅವುಗಳ ಪೈಕಿ ಬಹುಮಾನದ ಮೊಬಲಗಿಗೆ ಸರಿದೂಗುವ ಪುಸ್ತಕಗಳನ್ನು ಬಹುಮಾನವಾಗಿ ಕೊಡಿಸುತ್ತೇನೆ” ಅಂದದ್ದನ್ನೂ ಮರೆಯುವಂತಿಲ್ಲ.

ನೆನಪು ೮: ಜಿ ಟಿ ಎನ್ ಅವರ ಸಹೋದರ ಜಿ ಟಿ ರಾಘವೇಂದ್ರನ ಮದುವೆಯ ಅಥವ ತತ್ಸಂಬಂಧಿತ ವಧೂಗೃಹ ಪ್ರವೇಶದ ಸಮಾರಂಭ (ಯಾವುದೆಂಬುದು ಸರಿಯಾಗಿ ನೆನಪಿಲ್ಲ), ಮೋದೂರಿನ ಮನೆಯಲ್ಲಿ. ಆ ದಿನಗಳಲ್ಲಿ ಇಂಥ ಸಮಾರಂಭಗಳಲ್ಲಿ ಇಂದಿನಂತೆ ಜಾತ್ರೆಯೋಪಾದಿಯಲ್ಲಿ ಜನಜಂಗುಳಿ ಇರುತ್ತಿರಲಿಲ್ಲ. ಆಪ್ತೇಷ್ಟರನ್ನು ಮಾತ್ರ ಆಹ್ವಾನಿಸುತ್ತಿದ್ದ ದಿನಗಳವು. ವಧೂವರರಿಗೆ ಆಹ್ವಾನಿತರು ಮಂತ್ರಾಕ್ಷತೆ ಹಾಕಿ ಉಡುಗೊರೆ ನೀಡಿ ಆಶೀರ್ವದಿಸುವುದು ಕೊನೆಯ ಕಾರ್ಯಕ್ರಮ. ಮೊದಲು ಹಿರಿಯರು ಒಬ್ಬೊಬ್ಬರಾಗಿ ಹೋಗಿ (ಸರತಿ ಸಾಲಿನಲ್ಲಿ ನಿಂತು ಹೋಗುವ ಕ್ರಮ ಇರಲಿಲ್ಲ) ಆಶೀರ್ವದಿಸಿ ಹಿಂದಿರುಗುವಾಗ ಪುರೋಹಿತರು ‘ಏನಯ್ಯಾ, ---- ಅವರೇ, ನೀವು ನಮ್ಮ ಆಹ್ವಾನವನ್ನು ಮನ್ನಿಸಿ ಸಮರಾಂಭಕ್ಕೆ ಆಗಮಿಸಿ ವಧೂವರರನ್ನು ಆಶೀರ್ವದಿಸಿ ಉಡುಗೊರೆ ನೀಡಿದ್ದೀರಿ. ಇದರಿಂದ ನಮಗೆ ಮಹದಾನಂದವಾಗಿದೆ. ನಮ್ಮ ಆತಿಥ್ಯದಲ್ಲಿ ಯಾವ ಕೊರತೆಯೂ ಆಗಿಲ್ಲವೆಂದು ನಂಬಿದ್ದೇನೆ. ಅಕಸ್ಮಾತ್ ಏನಾದರೂ ಅಪಚಾರವಾಗಿದ್ದರೆ ಸಹೃದಯಿಗಳಾದ ತಾವು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆಯೇ ಮನ್ನಿಸಿದ್ದೇರೆಂದು ನಂಬುತ್ತೇವೆ. ತಮ್ಮ ಆಗಮನಕ್ಕೆ ನಾನೂ ನನ್ನ ಕುಟುಂಬದವರೂ ಋಣಿಗಳಾಗಿದ್ದೇವೆ ಎಂಬುದಾಗಿ ಯಜಮಾನರು ಹೇಳುತ್ತಾರೆ’ ಎಂದು ಹೇಳುವ ವಾಡಿಕೆ ಇತ್ತು. ಅವರ ಹೇಳಿಕೆ ಮುಗಿದಾಗ ತಮ್ಮ ಎದುರು ಮನೆಯವರು ಹಿಡಿಯುತ್ತಿದ್ದ ತಾಂಬೂಲದ ತಟ್ಟೆಯನ್ನು ಸ್ಪರ್ಶಿಸಿ ಆ ಹಿರಿಯರು ಸ್ವಸ್ಥಾನ ಸೇರುತ್ತಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಪುರೋಹಿತರ ಹೇಳಿಕೆ ಬಲು ಕೃತಕವಾಗಿಯೂ ವ್ಯಾಕರಣ ದೋಷಯುಕ್ತ ವಾಕ್ಯಗಳಿಂದ ಮುಜುಗರವಾಗುವಷ್ಟು ಉದ್ದವಾಗಿಯೂ  ಇರುತ್ತಿತ್ತು,  ಇದನ್ನು ಕೇಳಿ ಕೇಳಿ ಜಿ ಟಿ ಎನ್ ಅವರಿಗೆ ರೋಸಿಹೋಯಿತೋ ಏನೋ. ಇದ್ದಕ್ಕಿದ್ದಂತೆ ರಂಗಪ್ರವೇಶ ಮಾಡಿ ತಮ್ಮ ವಿಶಿಷ್ಟ ಭಾಷಾಶೈಲಿಯಲ್ಲಿ ಪುರೋಹಿತರನ್ನು ಅನುಕರಿಸುವ ಧ್ವನಿಯಲ್ಲಿ ‘---ಆಭಾರಿಯಾಗಿದ್ದೇವೆ’ ಹೇಳಿಕೆ ನೀಡತೊಡಗಿದರು. ಆ ಸನ್ನಿವೇಶದಲ್ಲಿ ಪುರೋಹಿತರ ಮತ್ತು ಅಲ್ಲಿದ್ದವರ ಮುಖಭಾವ ಮರೆಯಲು ಸಾಧ್ಯವೇ ಇಲ್ಲ.

ನೆನಪು ೯: ಗೃಹಶಾಂತಿ ಕಾಯ್ದುಕೊಳ್ಳಲೋಸುಗವೋ ಏನೋ, ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲು (!) ಜಿ ಟಿ ಎನ್ ಅನುಮತಿ ನೀಡಿದ್ದರು (ಇಸವಿ ಮರೆತು ಹೋಗಿದೆ)! ನಮಗೆ (ನನಗೂ ನನ್ನ ಹೆಂಡತಿಗೂ) ಶ್ರೀಯುತರೇ ಖುದ್ದಾಗಿ ಬಂದು ಮೌಕಿಖ ಆಹ್ವಾನ ನೀಡಿ, ‘ಬೆಳಿಗ್ಗೆ ೮ ಗಂಟೆಗೇ ಪೂಜೆ ಆರಂಭ, ಮಧ್ಯಾಹ್ನ ೧೨.೩೦ ಕ್ಕೆ ಭೋಜನ. ತಪ್ದೇ ಬನ್ನಿ ಎರಡನೆಯದಕ್ಕೆ’ ಅಂದಿದ್ದರು. ಜಿ ಟಿ ಎನ್ ಅವರ ಸಮಯನಿಷ್ಠೆಯ ಪರಿಚಯವಿದ್ದದ್ದರಿಂದ ನಿಗದಿತ ದಿನದಂದು ಮಧ್ಯಾಹ್ನ ಸುಮಾರು ೧೨ ಗಂಟೆಯ ಹೊತ್ತಿಗೆ ಅವರ ಮನೆಗೆ ಹೋಗೋಣ ಎಂದು ನನ್ನ ಹೆಂಡತಿಗೆ ಹೇಳಿದ್ದೆ. ಅವಳು ೧೨.೩೦ ಕ್ಕೆ ಊಟಕ್ಕೆ ಬಡಿಸಲಾರರು, ಅಷ್ಟು ಬೇಗನೆ ಯಾರು ತಾನೇ ಊಟ ಮಾಡುತ್ತಾರೆ ಅಂದಿದ್ದಳು. ಅಂತೂ ಇಂತೂ ನಾವು ಅವರ ಮನೆ ತಲುಪಿದಾಗ ಗಂಟೆ ೧೨.೪೦. ಮನೆಯ ಗೇಟಿನ ಬಳಿಯೇ ಇದ್ದ ಜಿ ಟಿ ಎನ್ ಸ್ವಾಗತಿಸಿದ್ದು ಹೀಗೆ: ‘ಬರಬೇಕು ಬರಬೇಕು. ಬಲು ದೂರದಿಂದ ಬಂದಿದ್ದೀರಿ (ನಮ್ಮ ಮನೆಯಿಂದ ಅವರ ಮನೆಗೆ ನಡೆಯಲು ೫ ನಿಮಿಷ ಧಾರಾಳ ಸಾಕು), ಸುಖಪ್ರಯಾಣವಾಯಿತೇ? ಪ್ರಯಾಣದ ದಣಿವಾರಿಸಿಕೊಳ್ಳಿ. ಅಷ್ಟು ಹೊತ್ತಿಗೆ ಈಗಾಗಲೇ ಶುರುವಾಗಿರುವ ಮೊದಲನೇ ಪಂಕ್ತಿಯ ಭೋಜನ ಮುಗಿದಿರುತ್ತದೆ’ ಶ್ರೀಯುತರ ಸ್ವಭಾವದ ಪರಿಚಯವಿದ್ದ ನನಗೇನೂ ಅನ್ನಿಸಲೇ ಇಲ್ಲ. ನನ್ನ ಹೆಂಡತಿಗಾದರೋ -------.

ನೆನಪು ೧೦: ನನ್ನ ತಂದೆಯವರ ಮರಣಾನಂತರ ನನ್ನ ತಮ್ಮನ ಮನೆಯಲ್ಲಿ ವಾರ್ಷಿಕ ಶ್ರಾದ್ಧಾವಿಧಿಗಳನ್ನು ಶಾಸ್ತ್ರೋಕ್ತವಾಗಿ ಮಾಡುತ್ತಿದ್ದಾಗ ನಡೆದ ಘಟನೆ ಇದು. ಒಂದು ಬಾರಿ ಅಡುಗೆಯವರು ಮಾಡಿದ್ದ ಶುಂಠಿ ತಂಬುಳಿ ಬಲು ಸಿಹಿಯಾಗಿತ್ತು! ಜಿ ಟಿ ಎನ್ ಅವರಿಗೆ ಅದು ಬಹಳ ರುಚಿಸಿರಬೇಕು. ಎಂದೇ,  ಊಟ ಮಾಡುವಾಗ ‘ತಂಬುಳಿ ಅಂಬೋ ಪಾಯಸ ಬರಲಿ’ ಅಂದು ೨-೩ ಬಾರಿ ಜೋರಾಗಿಯೇ ಕೇಳಿ ಹಾಕಿಸಿಕೊಂಡು ಖುಷಿ ಪಟ್ಟದ್ದನು ಮರೆಯಲು ಸಾಧ್ಯವೇ?

ನೆನಪು ೧೧: ನನ್ನ ಚಿಕ್ಕಮ್ಮ (ಮಲತಾಯಿ) ವಿಧಿವಶರಾದಾಗ ುತ್ತರಕ್ರಿಯೆಗಳನ್ನು ಮಾಡಿದ್ದು ಗೋಕರ್ಣದಲ್ಲಿ. ತದಂಗವಾಗಿ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಅಪ್ತೇಷ್ಟರಿಗೆ ಭೋಜನಕೂಟದ ವ್ಯವಸ್ಥೆ ಮಾಡಿದ್ದೆವು. ಅಲ್ಲಿ ಮಧ್ಯಾಹ್ನದ ಮಹಾಮಂಗಳಾರತಿ ಆಗುವ ಮುನ್ನ ಭೋಜನಾರಂಭಿಸುವಂತಿಲ್ಲ. ಾ ದಿನ ಅದೇನೋ ಕಾರಣಕ್ಕಾಗಿ ಅಪರಾಹ್ನ ೧ ಗಂಟೆಯಾದರೂ ಮಹಾಮಂಗಳಾರತಿ ಜರಗುವ ಸೂಚನೆಯೇ ಇರಲಿಲ್ಲ. ೧೨.೩೦ ರಿಂದಲೇ ಚಡಪಡಿಸುತ್ತಿದ್ದ ಜಿ ಟಿ ಎನ್ ‘ಸರಿ, ಮಧ್ಯಾಹ್ನ ನಿಗದಿತ ಸಮಯದಲ್ಲಿ ಊಟ ಮಾಡದೇ ಇದ್ದರೆ ನನಗೆ ತೊಂದರೆ ಆಗುತ್ತದೆ, ಮನೆಯಲ್ಲಿ ಅನ್ನ ಮೊಸರು ಇದ್ದೇ ಇರುತ್ತದೆ. ನಿಮಗೆ ಶುಭವಾಗಲಿ’ ಎಂದು ಹೇಳಿ ನಡೆದೇ ಬಿಟ್ಟರು. ಅವರ ಈ ಕಠಿನ ನಿಲುವಿಗೆ ಕಾರಣ ಅವರ ಆರೋಗ್ಯಸ್ಥಿತಿಯೇ ಆಗಿದ್ದರೂ ಅಲ್ಲಿ ಸೇರಿದ್ದ ಮಂದಿಗೆ ಮುಜಗರವಾದದ್ದಂತೂ ನಿಜ.

ನೆನಪು ೧೨: ನಾವೀರ್ವರೂ ನಿವೃತ್ತರಾದ ಬಳಿಕದ ಘಟನೆ ಇದು. ಒಂದು ಸಂಜೆ ಏನನ್ನೋ ಆಲೋಚಿಸುತ್ತಾ ತಲೆ ಬಾಗಿಸಿಕೊಂಡು ನಿಧಾನವಾಗಿ ಸರಸ್ವತೀಪುರಂನ ಪಾರ್ಕ್ ಬಳಿ ‘ವಾಕಿಂಗ್’ ಹೋಗುತ್ತಿದ್ದೆ. ‘ಏನಾಗಿದೆ? ಆರೋಗ್ಯ ಕೆಟ್ಟಿದೆಯೇ?’ ಎಂಬ ಜಿ ಟಿ ಎನ್ ತನ್ನದೇ ಆಧ ಶೈಲಿಯಲ್ಲಿ ಕೇಳಿದ್ದು ನನ್ನ ಕಿವಿಗಪ್ಪಳಿಸಿದಾಗ ತಬ್ಬಿಬ್ಬಾಗಿ ತಲೆ ಎತ್ತಿ ನೋಡಿದೆ. ಮಾಮೂಲಿನ ಬಿಳಿ ದಿರಿಸಿನಲ್ಲಿ ‘ಮಂಕಿಕ್ಯಾಪ್’ ಮತ್ತು ‘ವಾಕಿಂಗ್ ಸ್ಟಿಕ್’ಧಾರೀ ಜಿ ಟಿ ಎನ್ ದರ್ಶನವಾಯಿತು (ಆಗ ಅವರ ವಯಸ್ಸು ೮೦ ರ ಆಸುಪಾಸಿನಲ್ಲಿ, ನನ್ನದು ೬೦ ರ ಆಸುಪಾಸಿನಲ್ಲಿ). ‘ಏನೂ ಆಗಿಲ್ಲ, ಚೆನ್ನಾಗಿಯೇ ಇದ್ದೇನೆ’ ಅಂದೆ. ‘ಮತ್ತೇಕೆ ಹೀಗೆ ರೋಗಗ್ರಸ್ತನ ನಡಿಗೆ? ಕೊಡಗಿನಲ್ಲಿ ಹುಟ್ಟಿಬೆಳೆದವರು, ಎನ್ ಸಿ ಸಿ ತರಬೇತಿ ಪಡೆದವರು ಸುಮ್ಮಸುಮ್ಮನೆ ಹೀಗೆ ನಡೆಯುವುದುಂಟೇ?’ ಅಂದು ಮುಂದೆ ನಡೆದರು. ಅಂದಿನಿಂದ ಆ ರಸ್ತೆಗಳಲ್ಲಿ ‘ವಾಕಿಂಗ್’ ಹೋಗುವುದೇ ಅಪಾಯ ಅಂದುಕೊಂಡು ಬೇರೆ ರಸ್ತೆಗಳನ್ನು ಆಯ್ಕೆ ಮಾಡಿಕೊಂಡೆ. ಆ ರಸ್ತೆಯಲ್ಲಿ ಹೋಗುವಾಗ ಎಲ್ಲಾದರೂ ಜಿ ಟಿ ಎನ್ ಕಾಣಿಸುತ್ತಾರೋ ಎಂಬುದರ ಕಡೆ ಗಮನವಿಟ್ಟಿರುತ್ತಿದ್ದೆ.

ನೆನಪುಗಳು ಇನ್ನೂ ಇವೆ. ಅವೆಲ್ಲವನ್ನೂ ಹೇಳಹೊರಟರೆ ವಾಚಿಸುತ್ತಿರುವ ನೀವು ನಿದ್ರಾವಸ್ಥಗೆ ಜಾರುವ ಸಾಧ್ಯತೆ ಇರುವುದರಿಂದ ಮುಂದುವರಿಸುವುದಿಲ್ಲ.

5 comments:

rukminimala said...

ನಿಮ್ಮ ಗಣಿಯಿಂದ ಇನ್ನೂ ಮುಂದೆಯೂ ಇಂಥ ನೆನಪಿನ ಪುಟಗಳು ಬರಲಿ. ಆತ್ಮೀಯವಾಗಿತ್ತು. ಓದಿ ಸಂತಸವಾಯಿತು.

ksnayak20 said...

ಸರ್, ನಿದ್ದೆಯೆಲ್ಲಾ ಹಾರಿಹೋಗಿದೆ....ಇನ್ನೂ ಜಿ ಟಿ ಎನ್ ಅವರ ಬಗ್ಗೆ ತಿಳಿಯಬೇಕೆಂದಾಗಿದೆ...ನಿಮ್ಮ ಬರವಣಿಗೆಯ ಶೈಲಿಯೂ ಸೂಪರ್ ಆಗಿದೆ. ಇನ್ನೊಂದು ನೆನಪುಗಳು ಪೋಸ್ಟ್ ಎದುರು ನೋಡುತ್ತಿದ್ದೇವೆ ಸರ್!

ಅಶೋಕವರ್ಧನ ಜಿ.ಎನ್ said...

"ನಾವಿನ್ನು ಹೊರಡೋಣವೇ" ಯಿಂದ (ಪ್ರಥಮ ಭೇಟಿ) ನಡೆಯುವಲ್ಲಿನ ಪಾಠದವರೆಗೆ (ಕೊನೆಯ ದಿನಗಳ ದರ್ಶನ) ನಿಮ್ಮ ನೆನಪುಗಳ ತೋರ ಮುತ್ತುಗಳ ಹಾರವೇನೋ ಚೆನ್ನಾಗಿದೆ. ಆದರೆ ಅದರ ನಡುವೆ ಸಣ್ಣ ಸಣ್ಣ ಮಣಿಗಳ ಕೊರತೆ ತುಂಬಾ ಕಾಡುತ್ತದೆ. ದಯವಿಟ್ಟು ಭಾವ-ಮಾಲೆ ವಿಸ್ತರಿಸಿ.

ಪಂಡಿತಾರಾಧ್ಯ said...

ಪ್ರಿಯ ಮಿತ್ರ ಅಶೋಕವರ್ಧನರು ಕೊಟ್ಟಿ ನಿಮ್ಮ ತಾಣದ ಸಂಪರ್ಕದಿಂದ ತುಂಬ ಸಂತೋಪಟ್ಟೆ.
ಪ್ರೀತಿಯ ಹಿರಿಯರಾದ ಜಿಟಿ ನಾರಾಯಣರಾಯರ ನೆನಪುಗಳನ್ನು ಕೇಳುವುದು ತುಂಬ ಸಂತೋಷದ ಸಂಗತಿ.
ನಿಮ್ಮ ನೆನಪಿನ ಗಣಿಯಿಂದ ಮತ್ತಟು ಅಮೂಲ್ಯ ನಿಕ್ಷೇಪಗಳು ನಮಗೆ ದೊರೆಯಲಿ.

Dr.S.M.Shivaprakash said...

Dear Ashokanna, GTN was " Kannadadalli Vijnana Sahitya"- workshop Director, way back in 1985 at Bangalore.His adviseas to how to use the most appropriate words- is memorable.Brevity in writing was his point of stress.He had shown us how to write kannada effectively and crisp.I follow it even now.He used to say,Ganita shastra is outdated, it should be Ganita Vijnana, likewise , Matsya Vijnana, Samaja Vijnana etc.Ganeshayya, UB Rajalakshmi were also participants in that workshop.I had drawn his portrait sketch during leisure hour( my passionate hobby).He was so happy , then.I have to search where I have kept the copy of it.I remember, I had shown it to you also.His inspirational talks, explanations are vivid in my memory. Where are his tribe nowadays? AVG's recollections are touching( I read both parts)Thanks-S.M.Shivaprakash, Mangalore