ಆಕಾಶದ ಬಣ್ಣ ನೀಲಿ ಏಕೆ ಎಂಬುದರ ವೈಜ್ಞಾನಿಕ ವಿವರಣೆಯನ್ನು ಮನೆಯಲ್ಲಿಯೇ ಪರೀಕ್ಷಿಸಿ.
ಎಚ್ಚರಿಕೆ: ಈ ಪ್ರಯೋಗದಲ್ಲಿ ನಾಟಕೀಯವಾದದ್ದೇನೂ ಜರಗುವುದಿಲ್ಲ. ಎಂದೇ, ಅತಿಯಾದ ನಿರೀಕ್ಷೆ ಬೇಡ. ತತ್ವ ಗ್ರಹಿಸಲು ನೆರವು ನೀಡುವುದಷ್ಟೇ ಇದರ ಉದ್ದೇಶ
ಭೂಮಿಯನ್ನು ಸುತ್ತುವರಿದಿರುವ ವಾಯುಮಂಡಲದಲ್ಲಿ ಪ್ರಧಾನವಾಗಿ ಇರುವುದು ಕೆಲವು ಅನಿಲಗಳ ಅಣುಗಳ ಮತ್ತು ಧೂಳಿನ ಕಣಗಳ ಮಿಶ್ರಣ ಎಂಬುದು ನಿಮಗೆ ತಿಳಿದಿದೆ. ಏಳು ಬಣ್ಣಗಳು ಸೇರಿ ಆದ ಸೂರ್ಯನ ಬಿಳಿ ಬೆಳಕು ವಾಯುಮಂಡಲವನ್ನು ದಾಟುವಾಗ ಈ ಅಣುಗಳಿಗೆ ಮತ್ತು ಧೂಳಿನ ಕಣಗಳಿಗೆ ಢಿಕ್ಕಿ ಹೊಡೆಯುವುದು ಅನಿವಾರ್ಯ. ಕೆಂಪು, ಕಿತ್ತಳೆ ಮುಂತಾದ ಕೆಲವು ಬಣ್ಣಗಳ ಕಿರಣಗಳು ಢಿಕ್ಕಿ ಹೊಡೆದರೂ ಹೆಚ್ಚು ಕಮ್ಮಿ ಅಬಾಧಿತವಾಗಿ ನೇರವಾಗಿಯೇ ಪ್ರಸರಿಸುತ್ತವೆ ಎಂದೂ ನೀಲಿ ಬಣ್ಣದ ಬೆಳಕಿನ ಕಿರಣಗಳು ಎಲ್ಲ ದಿಕ್ಕುಗಳಿಗೆ ಚದರಿ ಹೋಗುತ್ತದೆಂದೂ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ನೀವು ಓದಿರುತ್ತೀರಿ. ನೀಲಿ ಬಣ್ಣದ ಬೆಳಕು ಅತಿ ಹೆಚ್ಚು ಚದರುವುದು ನಿಜವೇ. ನೀವೇ ಪರೀಕ್ಷಿಸಿ ನೋಡಿ.
ಒಂದು ಗಾಜಿನ ಬಾಟಲ್ ಅಥವ ಲೋಟದಲ್ಲಿ ಸುಮಾರು ೨೫೦-೪೦೦ ಮಿಲೀ ನೀರು ತೆಗೆದುಕೊಂಡು ಅದಕ್ಕೆ ೧/೨ ಚಮಚೆಯಷ್ಟು ಹಾಲು ಹಾಕಿ ಚೆನ್ನಾಗಿ ಕಲಕಿ. (ಬಿಳಿ ಬಣ್ಣದ ಸಾಬೂನಿನ ದುರ್ಬಲ ದ್ರಾವಣವೂ ಆದೀತು). ಎಲ್ಇಡಿ ಟಾರ್ಚ್ ಲೈಟಿನೊಂದಿಗೆ ( ಬಿಳಿ ಬೆಳಕನ್ನು ಇದು ನೀಡುತ್ತದೆ) ಈ ಬಾಟಲ್ ಸಹಿತ ಕತ್ತಲೆ ಕೋಣೆಯೊಂದರಲ್ಲಿ ಮುಂದೆ ವಿವರಿಸಿದ ಕಾರ್ಯ ನಿರ್ವಹಿಸಿ, ವೀಕ್ಷಣೆಗಳನ್ನು ಮಾಡಿ.

೨. ಬೆಳಕಿನ ಕಿರಣಗಳು ಪಕ್ಕದಿಂದ ದ್ರಾವಣವನ್ನು ಪ್ರವೇಶಿಸುವಂತೆ ಟಾರ್ಚ್ ಲೈಟ್ ಹಿಡಿದು ಮೇಲಿನಿಂದ ಮತ್ತು ಬೆಳಕಿನ ಕಿರಣ ದ್ರಾವಣವನ್ನು ಪ್ರವೇಶಿಸಿದ ನೇರದಲ್ಲಿಯೇ ಎದುರಿನಿಂದ ವೀಕ್ಷಿಸಿ, ದ್ರಾವಣದ ಬಣ್ಣಗಳನ್ನು ವೀಕ್ಷಿಸಿ.

೩. ಬೆಳಕಿನ ಕಿರಣಗಳು ಮೇಲಿನಿಂದ ಅಥವ ಕೆಳಗಿನಿಂದ ದ್ರಾವಣವನ್ನು ಪ್ರವೇಶಿಸುವಂತೆ ಟಾರ್ಚ್ ಲೈಟ್ ಹಿಡಿದು ವಿರುದ್ಧ ದಿಕ್ಕಿನಿಂದ (ಅರ್ಥಾತ್, ಕೆಳಗಿನಿಂದ ಅಥವ ಮೇಲಿನಿಂದ) ದ್ರಾವಣದ ಬಣ್ಣಗಳನ್ನು ವೀಕ್ಷಿಸಿ.

[ಕತ್ತಲೆ ಕೋಣೆಯಲ್ಲಿ ‘ಫ್ಲಾಷ್’ ಬಳಸದೆಯೇ ಈ ವಿದ್ಯಮಾನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಹೇಗೆಂಬುದು ನನಗೆ ಗೊತ್ತಿಲ್ಲ. ಎಂದೇ, ನಾನು ವೀಕ್ಷಿಸಿದ್ದರ ನೈಜ ಛಾಯಾಚಿತ್ರಗಳನ್ನು ತೋರಿಸಲು ಸಾಧ್ಯವಾಗಿಲ್ಲ. ಫ್ಲಾಷ್ ಉಪಯೋಗಿಸಿ ಸೆರೆಹಿಡಿದ ಚಿತ್ರಗಳು ನೈಜತೆಯನ್ನು ಬಿಂಬಿಸುವುದಿಲ್ಲವಾದರೂ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಇವನ್ನು ಮಾರ್ಗದರ್ಶಿ ಎಂದು ಮಾತ್ರ ಪರಿಗಣಿಸಿ]
1 comment:
sar tumba channadide e prayoga navu madi nodutteve
Post a Comment