Pages

2 November 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೪೮

ಗುರುತ್ವಕೇಂದ್ರದ ಕರಾಮತ್ತು

೧. ನಿಮ್ಮ ಬೆರಳಿನ ತುದಿಯಲ್ಲಿ ಒಂದು ಪೆನ್ಸಿಲನ್ನು ಅದರ ಮೊನಾಚದ ತುದಿಯ ಮೇಲೆ ನಿಲ್ಲಿಸಬಲ್ಲಿರಾ? ಪ್ರಯತ್ನಿಸಿ ನೋಡಿ. ಸಾಧ್ಯವಾಗದಿದ್ದರೆ ಏಕೆ ಎಂಬುದರ ಕುರಿತು ಆಲೋಚಿಸಿ. ಸುಮಾರು ೩೦ ಸೆಂಮೀ ಉದ್ದದ ಸುಲಭವಾಗಿ ಬಳುಕದ ತಂತಿಯ ತುಂಡೊಂದನ್ನು ಸಂಗ್ರಹಿಸಿ. ಅದನ್ನು ಚಿತ್ರ ೧ ರಲ್ಲಿ ತೋರಿಸಿದಂತೆ ಬಾಗಿಸಿ ಪೆನ್ಸಿಲ್ಲಿಗೆ ಜೋಡಿಸಿ. ತಂತಿಯ ತುದಿಗೆ ಜೇಡಿಮಣ್ಣಿನ ಮುದ್ದೆ ಲೋಹದ ಬೋಲ್ಟ್ ನಟ್ ಇಂಥವೇ ಮೊದಲಾದ ಯಾವುದಾದರೂ ಭಾರವಾದ ವಸ್ತುಗಳನ್ನುಸಿಕ್ಕಿಸಿ. ೀ ಮುನ್ನವೇ ಸೂಚಿಸಿದಂತೆ ಪೆನ್ಸಿಲನ್ನು ಬೆರಳಿನ ತುದಿಯಲ್ಲಿ ನಿಲ್ಲಿಸಿ. ತಂತಿಯ ಆಕಾರ ಮತ್ತು ಅದರ ತುದಿಗಳಿಗೆ ಸಿಕ್ಕಿಸಿದ ತೂಕಗಳು ಸಮರ್ಪಕವಾಗಿ ಇದ್ದರೆ ಪೆನ್ಸಿಲ್ ನೆಟ್ಟಗೆ ನಿಲ್ಲುವ ವೈಚಿತ್ರ್ಯ ವೀಕ್ಷಿಸಿ. ಕಾರಣ ತರ್ಕಿಸಿ.

೨. ಒಂದು ರಬ್ಬರ್/ಪ್ಲಾಸ್ಟಿಕ್ ಚೆಂಡಿನಲ್ಲಿ ರಂಧ್ರ ಕೊರೆಯಿರಿ. ಇಂಕ್ ಫಿಲ್ಲರ್ (ಇಲ್ಲದಿದ್ದರೆ ಪರ್ಯಾಯ ನೀವೇ ಆಲೋಚಿಸಿ) ನೆರವಿನಿಂದ ಚೆಂಡಿನೊಳಗೆ ತಳದಲ್ಲಿ ನಿಲ್ಲುವಂತೆ ತುಸು ಫೆವಿಕಾಲ್ ಹಾಕಿ.  ಫೆವಿಕಾಲ್ ಮೇಲೆ ಬೀಳುವಂತೆ ಚಿಕ್ಕಚಿಕ್ಕ ಕಲ್ಲುಗಳನ್ನು ಅಥವಾ ಮರಳನ್ನು ಹಾಕಿ. ಅದು ಚೆಂಡಿಗೆ ಅಂಟಿಕೊಳ್ಳಬೇಕು. ರಂಧ್ರ ಕಾಣದಂತೆ ಇನ್ನೊಂದು ಚಿಕ್ಕ ರಬ್ಬರ್/ಪ್ಲಾಸ್ಟಿಕ್ ಚೆಂಡನ್ನು ಅಂಟಿಸಿ. ಚೆಂಡು ಮನುಷ್ಯನ ಮುಖದಂತೆ ಕಾಣುವಂತೆ ಮಾಡಲೋಸುಗ ಯುಕ್ತ ಬಣ್ಣ ಹಚ್ಚಿ ಕಣ್ಣು, ಮೂಗು, ಬಾಯಿ---- ಬಿಡಿಸಿ (ಚಿತ್ರ ೨). ಈ ಆಟಿಕೆಯನ್ನು ಎಷ್ಟು ಅಲ್ಲಾಡಿಸಿದರೂ ನೆಟ್ಟಗೆ ನಿಲ್ಲುವ ವೈಚಿತ್ರ್ಯ ವೀಕ್ಷಿಸಿ, ಕಾರಣ ತರ್ಕಿಸಿ. (ಕೋಳಿ ಮೊಟ್ಟೆಯಿಂದಲೂ ಈ ಆಟಿಕೆ ಮಾಡಬಹುದು)

೩. ಸುಮಾರು ೧೦ ಸೆಂಮೀ ಅಗಲ ೨೦ ಸೆಂಮೀ ಉದ್ದದ ಕಾಗದದ ಪಟ್ಟಿಯೊಂದನ್ನು ಮೇಜಿನ ಮೇಲೆ ಇಡಿ. ಅದರ ೊಂದು ತುದಿಯ ಮೇಲೆ ಅಗಲ ಕಿರಿದಾದ ಬಾಯಿ ಉಳ್ಳ ಗಾಜಿನ ಬಾಟಲನ್ನು ತಲೆಕೆಳಗಾಗಿ ನಿಲ್ಲಿಸಿ. ‘ಬಾಟಲನ್ನು ಕೈನಿಂದ ಮುಟ್ಟಕೂಡದು, ಕೈನಿಂದಾಗಲಿ ಅಥವ ಬೇರೆ ಯಾವುದೇ ಸಾಧನದಿಂದಾಗಲಿ ಎತ್ತಕೂಡದು, ಬಾಟಲನ್ನು ಬೀಳಿಸದೆಯೇ ಕಾಗದದ ಪಟ್ಟಿಯನ್ನು ಹೊರತೆಗೆ’ ಎಂದು ನಿಮ್ಮ ಮಿತ್ರರಿಗೆ ಪಂಥಾಹ್ವಾನ ನೀಡಿ. ಸಮಭಾರ ಸ್ಥಿತಿಯ ಕುರಿತಾದ ತಿಳಿವಳಿಕೆ ಇಲ್ಲದವರಿಗೆ ಇದು ಅಸಾಧ್ಯವಾದ ಕಾರ್ಯ. ನಿಮ್ಮ ಮಿತ್ರರು ಅನೇಕ ಪ್ರಯತ್ನಗಳನ್ನು ಮಾಡಿ ನಿರಾಶರಾದಾಗ ೀ ತಿಳಿವಳಿಕೆ ಉಳ್ಳ ನೀವು ಬಲು ಸುಲಭವಾಗಿ ಈ ಕಾರ್ಯ ಸಾಧಿಸಿ ಅವರನ್ನು ಚಕಿತಗೊಳಿಸಿ.

ನೀವು ಮಾಡಿದ್ದಾದರೂ ಏನು? ಒಂದು ಪೆನ್ಸಿಲನ್ನು ಕಾಗದದ ಪಟ್ಟಿಯ ಇನ್ನೊಂದು ತುದಿಯ ಮೇಲೆ ಅಡ್ಡಲಾಗಿಟ್ಟು ಪಟ್ಟಿ ಅದಕ್ಕೆ ಸುತ್ತಿಕೊಳ್ಳುವಂತೆ ಬಲು ಜಾಗರೂಕತೆಯಿಂದ ನಿಧಾನವಾಗಿ ಪೆನ್ಸಿಲನ್ನು ಉರುಳಿಸುತ್ತಾ ಬಾಟಲ್ ಕಾಗದಿಂದ ನಿಧಾನವಾಗಿ ಜರುಗುವಂತೆ ಮಾಡಿ. (ಚಿತ್ರ ೩)

೪. ಒಂದಿನಿತೂ ಬಳುಕದ  ಅಳತೆಪಟ್ಟಿ (ಅಥವ ಅಂತಹದೇ ಮರದ ಪಟ್ಟಿ), ಸುಲಭವಾಗಿ ತುಂಡಾಗದ ದಾರ, ಒಂದು ಸುತ್ತಿಗೆ (ಮನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂತಹುದು) - ಇವಿಷ್ಟನ್ನು ಸಂಗ್ರಹಿಸಿ. ಸುತ್ತಿಗೆಯನ್ನು ದಾರದ ನೆರವಿನಿಂದ ಅಳತೆ ಪಟ್ಟಿಗೆ ನೇತು ಹಾಕಿದರೆ ಅದು ಮುರಿಯದಿರುವಷ್ಟು ಗಟ್ಟಿಯಾಗಿರಬೇಕು.

ಚಿತ್ರ ೪ ರಲ್ಲಿ ತೋರಿಸಿದಂತೆ ಸುತ್ತಿಗೆಯನ್ನು ದಾರದ ನೆರವಿನಿಂದ ಅಳತೆ ಪಟ್ಟಿಗೆ ಸಿಕ್ಕಿಸಿ ಮೇಜಿನ ಮೇಲೆ ಇಡಿ. ಅಳತೆ ಪಟ್ಟಿಯ ಚಿಕ್ಕ ಭಾಗ ಮಾತ್ರ ಮೇಜಿನ ಮೇಲಿರುವುದನ್ನು ಗಮನಿಸಿ. ಸುತ್ತಿಗೆ ರಹಿತ ಅಳತೆ ಪಟ್ಟಿಯನ್ನು ಈ ರೀತಿ ನಿಲ್ಲಿಸಲು ಸಾಧ್ಯವಿಲ್ಲ, ಏಕೆ?

No comments: