Pages

19 October 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೪೭

ಧ್ವನಿ ವಾಹಕಗಳು

೧. ಮೇಜಿನ ಒಂದು ತುದಿಯಲ್ಲಿ ನೀವೂ ವಿರುದ್ಧ ತುದಿಯಲ್ಲಿ ನಿಮ್ಮ ಮಿತ್ರನೂ ನಿಂತುಕೊಳ್ಳಿ. ನಿಮಗೆ ಕೇಳಿಸದಷ್ಟು ಕ್ಷೀಣವಾದ ಧ್ವನಿ ಉತ್ಪತ್ತಿ ಆಗುವಂತೆ ಮೇಜನ್ನು ಬೆರಳಿನಿಂದ ಕುಟ್ಟುವಂತೆ ನಿಮ್ಮ ಮಿತ್ರನಿಗೆ ಹೇಳಿ. ತದನಂತರ ಮೇಜಿನ ಇನ್ನೊಂದು ತುದಿಯಲ್ಲಿ ಇರುವ ನೀವು ಮೇಜಿಗೆ ಕಿವಿ ಕೊಟ್ಟು ನಿಂತು ಇನ್ನೊಮ್ಮೆ ಅದೇ ರೀತಿ ಕುಟ್ಟಲು ಹೇಳಿ. ಕುಟ್ಟಿದ್ದು ಸ್ಪಷ್ಟವಾಗಿ ಕೇಳಿಸುತ್ತದಲ್ಲವೇ?. ಮರ ವಾಯುವಿಗಿಂತ ಉತ್ತಮವಾದ ಧ್ವನಿ ವಾಹಕವೇ ಎಂಬುದನ್ನು ನೀವೇ ತೀರ್ಮಾನಿಸಿ.

೨. ಒಂದು ಬಕೆಟ್ಟಿನಲ್ಲಿ ನೀರು ತುಂಬಿಸಿ. ನೀರಿನೊಳಗೆ ಬಾಚಣಿಗೆಯೊಂದನ್ನು ಮುಳುಗಿಸಿ ಅದರ ಹಲ್ಲುಗಳನ್ನು ಬೆರಳಿನಿಂದ ಕೆರೆಯುವಂತೆ ನಿಮ್ಮ ಮಿತ್ತನಿಗೆ ಹೇಳಿ. ಉತ್ಪತ್ತಿಯಾದ ಧ್ವನಿ ನಿಮಗೆ ಕೇಳಿಸುತ್ತದೆಯೇ? ಬಕೆಟ್ಟಿನ ಹೊರಮೈಗೆ ನಿಮ್ಮ ಕಿವಿ ತಾಗಿಸಿದರೆ ಧ್ವನಿ ಕೇಳಿಸುತ್ತದೆಯೇ ಎಂಬುದನ್ನು ಪರಿಶೀಲಿಸಿ. ಧ್ವನಿ ಯಾವ ಮಾಧ್ಯಮಗಳ ಮೂಲಕ ಹಾಯ್ದು ನಿಮ್ಮನ್ನು ತಲುಪಿರಬೇಕು ಎಂಬುದನ್ನು ತರ್ಕಿಸಿ

೩. ಹ್ಯಾಕ್ ಸಾ ಬ್ಲೇಡ್ ಅಥವ ಅದರಂತೆಇರುವ ಯಾವುದಾದರೂ ಲೋಹದ ಪಟ್ಟಿಯೊಂದನ್ನು ಸಂಗ್ರಹಿಸಿ. ಮೇಜಿನ ೊಂದು ತುದಿಯ ಅಂಚಿನಲ್ಲಿ ಒಂದು ಲೋಟ ಇಟ್ಟು ಅದಕ್ಕೆ ಕಿವಿ ತಾಗಿಸಿ ಕುಳಿತುಕೊಳ್ಳಿ. ತುಸು ದೂರದಲ್ಲಿ ಹ್ಯಾಕ್ ಸಾ ಬ್ಲೇಡನ್ನು ಮೇಜಿಗೆ ತಾಗಿಸಿ ನಿಲ್ಲಿಸಿ ಮೀಟಿ ಧ್ವನಿ ಉತ್ಪತ್ತಿ ಮಾಡುವಂತೆ ನಿಮ್ಮ ಮಿತ್ರನಿಗೆ ಹೇಳಿ. ಲೋಟದಿಂದ ಧ್ವನಿ ಹೊರಹೊಮ್ಮುತ್ತಿರುವಂತೆ ಭಾಸವಾಗುವ ವಿದ್ಯಮಾನ ಗಮನಿಸಿ. ಧ್ವನಿ ಯಾವ ಮಾಧ್ಯಮಗಳ ಮೂಲಕ ಹಾಯ್ದು ನಿಮ್ಮನ್ನು ತಲುಪಿರಬೇಕು ಎಂಬುದನ್ನು ತರ್ಕಿಸಿ.

೪. ಕಿವಿಯ ಹತ್ತಿರ ಕೈಗಡಿಯಾರ ಹಿಡಿದರೆ ಅದರ ಟಿಕ್ ಟಿಕ್ ಧ್ವನಿ ಕೇಳಿಸದಂತೆ ಕಿವಿಗೆ ಹತ್ತಿಯ ಬೆಣೆ ಹಾಕಿ. ತದನಂತರ ಕೈಗಡಿಯಾರವನ್ನು ಕಿವಿಯ ಹಿಂಭಾಗದಲ್ಲಿ ಮೂಳೆಗೆ ತಾಗಿಸಿ ಹಿಡಿಯಿರಿ. ಕೈಗಡಿಯಾರದ ಟಿಕ್ ಟಿಕ್ ಧ್ವನಿ ಕೇಳಿಸುವ ವಿದ್ಯಮಾನ ಗಮನಿಸಿ. ಕಿವಿ ಮುಚ್ಚಿದ್ದರೂ ಧ್ವನಿ ಕೇಳಿಸಿದ್ದು ಹೇಗೆ?

೫. ದಾರದ ಒಂದು ತುದಿಯನ್ನು ಹಲ್ಲಿನಲ್ಲಿ ಗಟ್ಟಿಯಾಗಿ ಕಚ್ಚಿ ಹಿಡಿಯಿರಿ. ಇನ್ನೊಂದು ತುದಿಯನ್ನು ದಾರ ಬಿಗಿಯಾಗಿರುವಂತೆ ಕೈನಿಂದ ೆಳೆದು ಹಿಡಿದುಕೊಂಡು ಮೀಟಿ. ಉತ್ಪತ್ತಿಯಾದ ಧ್ವನಿ ಸ್ಪಷ್ಟವಾಗಿ ಕೇಳಿಸುವ ವಿದ್ಯಮಾನ ಗಮನಿಸಿ. ಈ ಪ್ರಯೋಗದಲ್ಲಿ ಧ್ವನಿವಾಹಕಗಳಾಗಿ ಕಾರ್ಯ ನಿರ್ವಹಿಸಿದವು ಯಾವುವು? ತರ್ಕಿಸಿ.

೬. ನೀರು ತುಂಬಿ ಕಾಯಿಸಿದರೆ ಒಡೆಯದ, ರಬ್ಬರ್ ಬಿರಡೆ ಹಾಕಿದರೆ ವಾಯು ಅಭೇದ್ಯ ಆಗಬಲ್ಲ ಅಗಲಕಿರಿದಾದ ಬಾಯಿ ಉಳ್ಳ ಗಾಜಿನ ಬಾಟಲ್ ಅಥವ ಪ್ರಯೋಗಶಾಲೆಗಳಲ್ಲಿ ಉಪಯೋಗಿಸುವ ಬಿರಡೆಯುತ ಗಾಜಿನ ಫ್ಲಾಸ್ಕ್ ಸಂಗ್ರಹಿಸಿ. ಇಂಥ ಬಾಟಲ್ ಲಭ್ಯವಿಲ್ಲದಿದ್ದರೆ ಹಾಳಾದ ಟಂಗ್ಸ್ಟನ್ ಫಿಲಮೆಂಟ್ ವಿದ್ಯತ್ ಬಲ್ಬಿನಿಂದ ಒಂದನ್ನು ದೊಡ್ಡವರ ನೆರವಿನಿಂದ ನೀವೇ ತಯಾರಿಸಿ ಅದಕ್ಕೆ ತಕ್ಕುದಾದ ರಬ್ಬರ್ ಬಿರಡೆ ಸಂಗ್ರಹಿಸಿ. ಬಾಟಲಿನ ಬಿರಡೆಯ ಒಳತುದಿಗೆ ಬಳುಕದ ತಂತಿಯ ತುಂಡನ್ನು ಚು್ಚಿ ನಿಲ್ಲಿಸಿ. ಅದರ ತುದಿಗೆ ಪುಟ್ಟ ಗಂಟೆಮಣಿಯೊಂದನ್ನು ಭದ್ರವಾಗಿ ಸಿಕ್ಕಿಸಿ.  ಬಿರಡೆ ಹಾಕಿದ ಬಾಟಲನ್ನು ಅಲುಗಾಡಿಸಿ ಗಂಟೆಮಣಿ ಹೊಮ್ಮಿಸುವ ನಾದ ಎಷ್ಟು ಜೋರಾಗಿ ಕೇಳಿಸುತ್ತದೆ ಎಂಬುದನ್ನು ಗಮನಿಸಿ. ಬಾಟಲಿನೊಳಕ್ಕೆ ತುಸು ನೀರು ಹಾಕಿ ೪-೫ ನಿಮಿಷ ಕಾಲ ಬಿರಡೆ ಹಾಕದೆಯೇ ಕುದಿಸಿ. ಬಾಟಲಿನ ಒಳಗಿದ್ದ ವಾಯುವಿನ ಮೇಲೆ ಇದು ಏನು ಪರಿಣಾಮ ಉಂಟುಮಾಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ನೀರು ಕುದಿಯುತ್ತಿರುವಾಗಲೇ ಬಿಗಿಯಾಗಿ ಬಿರಡೆ ಹಾಕಿ ತಕ್ಷಣ ಉಷ್ಣದ ಆಕರವನ್ನು ತೆಗೆಯಿರಿ. ತಕ್ಷಣ ತೆಗೆಯದಿದ್ದರೆ ಸ್ಫೋಟವಾದೀತು. ಬಾಟಲನ್ನು ತಣಿಯಲು ಬಿಡಿ. ವಾಯು ಅಭೇದ್ಯ ಬಿರಡೆ ಹಾಕದೇ ಇದ್ದರೆ ಈ ಅವಧಿಯಲ್ಲಿ ಏನಾಗುತ್ತದೆ ಎಂಬುದೂ ನಿಮಗೆ ತಿಳಿದಿದೆ. ಚೆನ್ನಾಗಿ ತಣಿದ ನಂತರ ಬಾಟಲನ್ನು ಅಲ್ಲಾಡಿಸಿ ಗಂಟೆಮಣಿ ಹೊಮ್ಮಿಸುವ ನಾದ ಎಷ್ಟು ಜೋರಾಗಿ ಕೇಳಿಸುತ್ತದೆ ಎಂಬುದನ್ನು ಗಮನಿಸಿ. ಕಾಯಿಸುವುದಕ್ಕೆ ಮುನ್ನ ಕೇಳಿಸಿದ್ದಕ್ಕೂ ಈಗ ಕೇಳಿಸುತ್ತಿರುವುದಕ್ಕೂ ಏನು ವ್ಯತ್ಯಾಸ? ಏಕೆ?

ಈ ಎಲ್ಲ ಪ್ರಯೋಗಗಳು ಏನನ್ನು ಸಾಬೀತು ಪಡಿಸುತ್ತವೆ? ಅನಿಲ, ದ್ರವ ಮತ್ತು ಘನ ಮಾಧ್ಯಮಗಳ ಪೈಕಿ ಉತ್ತಮ ಧ್ವನಿ ವಾಹಕ ಯಾವುದು ಎಂಬುದನ್ನು ಈ ಪ್ರಯೋಗಗಳಿಂದ ದೊರೆತ ಮಾಹಿತಿ ಆಧರಿಸಿ ಅಂದಾಜಿಸಿ.

No comments: