Pages

1 October 2011

ತ್ರಿವಳಿ ಶೋಧಕ (ಫಿಲ್ಟರ್) ಪರೀಕ್ಷೆ

“ನಿಮ್ಮ ಮಿತ್ರನ ಕುರಿತು ನಾನು ಈಗ ತಾನೇ ಕೇಳಿದ್ದೇನು ಗೊತ್ತೇ” ಎಂದು ನಿಮ್ಮ ಪರಿಚಿತರೊಬ್ಬರು ಹೇಳಿದರೆ ನೀವೇನು ಮಾಡುವಿರಿ? ನೀವೇನು ಮಾಡುವಿರೋ ಅದನ್ನು ಸಾಕ್ರೆಟಿಸ್ ಮಾಡಿದ್ದರೊಂದಿಗೆ ತುಲನೆ ಮಾಡಿ, ನೀವು ಕಲಿಯುವಂಥದ್ದು ಇದೆಯೇ ಎಂಬುದನ್ನು ನೀವೇ ತೀರ್ಮಾನಿಸಿ.

ಸಾಕ್ರೆಟಿಸ್: “ ಒಂದು ನಿಮಿಷ ತಡೆ ಮಹಾರಾಯ. ನೀನೇನು ಹೇಳಬೇಕೆಂದುಕೊಂಡಿರುವುದನ್ನು ಹೇಳುವ ಮೊದಲು ನಾನು ಕೇಳುವ ೩ ಪ್ರಶ್ನೆಗಳಿಗೆ ಉತ್ತರ ಕೊಡು. ನಾನು ಈ ಪ್ರಶ್ನೆಗಳಿಗೆ ತ್ರಿವಳಿ ಶೋಧಕ ಪರೀಕ್ಷೆ ಎಂದು ಹೆಸರಿಟ್ಟಿದ್ದೇನೆ”

ಪರಿಚಿತ: “ತ್ರಿವಳಿ ಶೋಧಕ ಪರೀಕ್ಷೆ?”

ಸಾಕ್ರೆಟಿಸ್: “ಹೌದು. ನನ್ನ ಮಿತ್ರನ ಕುರಿತು ನನ್ನೊಂದಿಗೆ ನೀನು ಮಾತನಾಡುವ ಮುನ್ನ ನೀನು ಏನು ಹೇಳಬೆಕೆಂದಿರುವುದನ್ನು ಈ ಶೋಧಕದಲ್ಲಿ ಸೋಸುವುದು ಒಳ್ಳೆಯದು. ಮೊದಲನೆಯ ಪ್ರಶ್ನೆ- ನೀನು ಏನು ಹೇಳಬೇಕೆಂದಿರುವೆಯೋ ಅದು ನೂರಕ್ಕೆ ನೂರರಷ್ಟು ಸತ್ಯ ಎಂಬ ಖಾತರಿ ನಿನಗಿದೆಯೇ?”

ಪರಿಚಿತ: “ ಇಲ್ಲ. ಏಕೆಂದರೆ, ಅದನ್ನು ನಾನು ಈಗ ತಾನೇ ಅದನ್ನು ----“

ಸಾಕ್ರೆಟಿಸ್: “ಸರಿ ಬಿಡು. ನೀನು ಹೇಳಬೇಕೆಂದಿರುವುದು ನಿಜವೋ ಸುಳ್ಳೋ ಎಂಬುದು ನಿನಗೇ ತಿಳಿದಿಲ್ಲ. ಈಗ ಎರಡನೆಯ ಪ್ರಶ್ನೆ- ನೀನು ನನ್ನ ಮಿತ್ರನ ಕುರಿತು ಹೇಳಬೆಕೆಂದುಕೊಂಡಿರುವುದು ಏನಾದರೂ ಒಳ್ಳೆಯ ಸುದ್ದಿಯೇ?”

ಪರಿಚಿತ: “ ಇಲ್ಲ. ವಾಸ್ತವವಾಗಿ ಅದೂ----“

ಸಾಕ್ರೆಟಿಸ್: “ ಓ, ನೀನು ನನ್ನ ಮಿತ್ರನ ಬಗ್ಗೆ ಹೇಳಬೇಕೆಂದುಕೊಂಡಿರುವ ಕೆಟ್ಟ ಸುದ್ದಿ ನಿಜವೋ ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ. ಪರವಾಗಿಲ್ಲ, ಈ ಮುಂದಿನ ಪ್ರಶ್ನೆಗೆ ನಿನ್ನ ಉತ್ತರ ಕೇಳಿದ ಬಳಿಕ ಆ ವಿಷಯ ನಾನು ಕೇಳಲೇ ಬೇಕಾದದ್ದೋ ಅಲ್ಲವೋ ಎಂಬುದನ್ನು ತೀರ್ಮಾನಿಸೋಣ - ನೀನು ಹೇಳಬೇಕೆಂದು ಕೊಂಡಿರುವ ವಿಷಯ ನನಗೆ ಉಪಯುಕ್ತವಾದದ್ದೇ?”

ಪರಿಚಿತ: “ ಇಲ್ಲ. ವಾಸ್ತವವಾಗಿ ಅದೂ----“

ಸಾಕ್ರೆಟಿಸ್: “ ನನ್ನ ಮಿತ್ರನ ಬಗ್ಗೆ ನೀನು ನನಗೆ ಹೇಳಬೇಕೆಂದುಕೊಂಡಿರುವುದು ನಿಜವೂ ಅಲ್ಲ, ಒಳ್ಳೆಯದೂ ಅಲ್ಲ, ನನಗೆ ಉಪಯೋಗವಾಗುವಂಥಾದ್ದೂ ಅಲ್ಲ ಅಂದ ಮೇಲೆ ಅದನ್ನು ನನಗೇಕೆ ಹೇಳಬೇಕು?”

No comments: