Pages

12 July 2011

ನಾಯಿ ಸನ್ಯಾಸಿಗೆ ನೀಡಿದ ಶಿಕ್ಷೆ

ಇಂದಿನ ಮಠಾಧಿಪತಿಗಳೂ ಅಸಂಖ್ಯ ‘ಜಗದ್ಗುರು’ಗಳೂ ‘ಧರ್ಮ’ ಪ್ರಚಾರಕರೂ ಮುಂದಿನ ಜನ್ಮದಲ್ಲಿ ಏನಾಗುತ್ತಾರೆ? ಈ ಪ್ರಶ್ನೆಗೆ ಉತ್ತರ ಇತ್ತೀಚೆಗೆ ನಾನು ಓದಿದ ಕಥೆಯಲ್ಲಿ ಹುದುಗಿದೆ. ಅದು ಇಂತಿದೆ:

ನಾಯಿಯೊಂದು ಶ್ರೀರಾಮಚಂದ್ರನ ಹತ್ತಿರ ಸನ್ಯಾಸಿಯೊಬ್ಬ ತನಗೆ ಕಲ್ಲು ಹೊಡೆದು ಹಿಂಸಿಸಿದ್ದಾನೆ ಎಂದು ದೂರು ಕೊಟ್ಟಿತು. ಶ್ರೀರಾಮಚಂದ್ರನ ಆಜ್ಞೆಯಂತೆ ಆ ಸನ್ಯಾಸಿಯನ್ನು ರಾಜಭಟರು ಹಿಡಿದು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನಾಯಿಗೆ ಕಲ್ಲು ಹೊಡೆದದ್ದು ನಿಜವೆಂದು ಸನ್ಯಾಸಿ ಒಪ್ಪಿಕೊಂಡ. ನಾಯಿ ಅಗಲ ಕಿರಿದಾದ ಕಾಲುದಾರಿಯಲ್ಲಿ ದಾರಿಗೆ ಅಡ್ಡವಾಗಿ ಮಲಗಿತ್ತೆಂದೂ ಎಷ್ಟೇ ಗದರಿಸಿದರೂ ಎದ್ದು ತನಗೆ ದಾರಿ ಬಿಡದೇ ಇದ್ದದ್ದರಿಂದ ಕಲ್ಲುಹೊಡೆದು ಎಬ್ಬಿಸಬೇಕಾಯಿತೆಂದೂ ಆತ ಹೇಳಿದ. ಅಹಿಂಸೆಯ ದೀಕ್ಷೆ ಪಡೆದಿರುವ ಸನ್ಯಾಸಿ ನಾಯಿಗೆ ಕಲ್ಲು ಹೊಡೆದದ್ದು ಅಕ್ಷಮ್ಯ ಅಪರಾಧವೆಂದು ತೀರ್ಪು ನೀಡಿದ ಶ್ರೀರಾಮಚಂದ್ರ ಸನ್ಯಾಸಿಗೆ ಏನು ಶಿಕ್ಷೆ ನೀಡಬೇಕು ಎಂದು ಸಭಾಸದರನ್ನು ಕೇಳಲಾಗಿ ಅವರೆಲ್ಲರೂ ಒಮ್ಮತದಿಂದ ಫಿರ್ಯಾದುದಾರ ನಾಯಿಯೇ ಶಿಕ್ಷೆ ಏನಿರಬೇಕು ಎಂಬುದನ್ನು ತಿಳಿಸಲಿ ಎಂದರು. “ಇಲ್ಲಿಂದ ಒಂದುನೂರು ಹರದಾರಿ ದೂರದಲ್ಲಿ ಸನ್ಯಾಸಿಗಳು ವಾಸವಿರುವ ಆಶ್ರಮ ಒಂದಿದೆ. ಅದರ ಮುಖ್ಯಸ್ತ ದೈವಾಧೀನನಾಗಿ ಎರಡು ವರ್ಷಗಳು ಕಳೆದರೂ ಬೇರೊಬ್ಬ ಮುಖ್ಯಸ್ಥ ನೇಮಕಗೊಂಡಿಲ್ಲ. ಈ ಸನ್ಯಾಸಿಯನ್ನು ಆ ಆಶ್ರಮದ ಮುಖ್ಯಸ್ಥನನ್ನಾಗಿ ನೇಮಿಸಿ” ಎಂದಿತು ನಾಯಿ. ಎಲ್ಲರೂ ಆಶ್ಚರ್ಯಚಕಿತರಾಗಿ ಇದೂ ಒಂದು ಶಿಕ್ಷೆಯೇ ಎಂದು ಕೇಳಲಾಗಿ ಅದು “ಎರಡು ವರ್ಷದ ಹಿಂದೆ ತೀರಿಕೊಂಡ ಮುಖ್ಯಸ್ಥ ನಾನೇ. ಮುಖ್ಯಸ್ಥನಾಗಿದ್ದಾಗ ಐಷಾರಾಮೀ ಭೋಗ ಜೀವನ ನಡೆಸಿದ್ದರಿಂದ ಈ ಜನ್ಮದಲ್ಲಿ ನಾಯಿಯಾಗಿದ್ದೇನೆ. ಈ ಸನ್ಯಾಸಿಗೂ ಇದೇ ಗತಿಯಾಗಲಿ ಎಂದೇ ಈ ಮನವಿ” ಎಂದು ಹೇಳಿತು.

1 comment:

my pen from shrishaila said...

ಇಂದಿನ ಮಠಾಧಿಪತಿಗಳೂ ಅಸಂಖ್ಯ ‘ಜಗದ್ಗುರು’ಗಳೂ ‘ಧರ್ಮ’ ಪ್ರಚಾರಕರೂ ಈ ಜನ್ಮದಲ್ಲಿ ಐಷಾರಾಮೀ ಭೋಗ ಜೀವನ ನಡೆಸಿದ್ದರಿಂದ ಮುಂದಿನ ಜನ್ಮದಲ್ಲಿ ನಾಯಿಯಾಗಲಿ ಎಂದೇ ಈ ಕಥೆಯ ತಾತ್ಪರ್ಯ !
ಶೈಲಜ