Pages

13 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩೧

ನಮ್ಮ ಕಣ್ಣುಗಳನ್ನು ನಾವು ನಂಬಬಹುದೇ?

ಬಾಹ್ಯಜಗತ್ತಿನ ಮಾಹಿತಿಯನ್ನು ಮಿದುಳಿಗೆ ಸಾಗಿಸುವ ಕಾರ್ಯ ಜ್ಞಾನೇಂದ್ರಿಯಗಳದ್ದು. ದುರದೃಷ್ಟವಶಾತ್ ಇವುಗಳಿಗೂ ಇತಿಮಿತಿಗಳಿವೆ. ಕೆಲವು ಸಂದರ್ಭಗಳಲ್ಲಿ ಇವು ಒದಗಿಸುವ ಮಾಹಿತಿಯನ್ನು ಮಿದುಳು ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ. ಇವಕ್ಕೆ ಲಭ್ಯವಿರುವ ಸರಳ ಉದಾಹರಣೆಗಳು ದೃಷ್ಟಿಭ್ರಮೆಗಳು (ಆಪ್ಟಿಕಲ್ ಇಲ್ಯೂಷನ್ಸ್). ಇಲ್ಲಿ ಅಂಥ ಕೆಲವು ಸರಳವಾದ ಉದಾಹರಣೆಗಳನ್ನು ಪುನರುತ್ಪಾದಿಸಿದ್ದೇನೆ. ಮೊದಲನೇ ಎರಡನ್ನು ಬಿಟ್ಟು ಉಳಿದ ಪ್ರತಿಯೊಂದನ್ನೂ ಪ್ರತ್ಯೇಕಪ್ರತ್ಯೇಕವಾಗಿ ದೊಡ್ಡ ಡ್ರಾಇಂಗ್ ಹಾಳೆಗಳ ಮೇಲೆ ಪುನರುತ್ಪಾದಿಸಿ ಶಾಲಾ ವಸ್ತುಪ್ರದರ್ಶನಗಳಲ್ಲಿ ‘ನಿಮ್ಮ ಕಣ್ಣನ್ನು ನೀವು ನಂಬಬಹುದೇ?’ ಎಂಬ ಶೀರ್ಷಿಕೆಯಲ್ಲಿ ಪ್ರದರ್ಶಿಸಬಹುದು. ನಮ್ಮ ಜ್ಞಾನೇಂದ್ರಿಯಗಳು ಒದಗಿಸುವ ಮಾಹಿತಿಯ ವಿಶ್ವಸನೀಯತೆ ಪ್ರಶ್ನಾರ್ಹವಾದ್ದರಿಂದ ವಿಷಯನಿಷ್ಠ ಮಾಹಿತಿ ಸಂಗ್ರಹಣೆಗೆ ಯುಕ್ತ ಸಾಧನಗಳನ್ನು ಉಪಯೋಗಿಸಬೇಕು. ಇವನ್ನು ನಮ್ಮ ಜ್ಞಾನೇಂದ್ರಿಯಗಳ ವಿಸ್ತರಣೆಗಳು ಎಂದೂ ಕಲ್ಪಿಸಿಕೊಳ್ಳಬಹುದು. ಇಲ್ಲಿ ಉದಾಹರಿಸಿರುವ ದೃಷ್ಟಿಭ್ರಮೆಗಳ ಪೈಕಿ ಪ್ರತಿಯೊಂದರಲ್ಲಿಯೂ ಪ್ರಶ್ನೆಗಳಿವೆ. ಮೊದಲು ನಿಮ್ಮ ಕಣ್ಣು ಒದಗಿಸುವ ಮಾಹಿತಿಯನ್ನು ಆಧರಿಸಿ ಅವಕ್ಕೆ ಉತ್ತರಿಸಿ. ತದನಂತರ ಯುಕ್ತ ಸಾಧನ ಉಪಯೋಗಿಸಿ ನೀವು ನೀಡಿದ ಜ್ಞಾನೇಂದ್ರಿಯ ಆಧಾರಿತ ಉತ್ತರ ಸರಿಯೇ ಎಂಬುದನ್ನು ಪರಿಶೀಲಿಸಿ.

೧. ಒಂದು ಕಾಗದದ ಹಾಳೆಯನ್ನು ಕೊಳವೆಯ ಆಕಾರಕ್ಕೆ ಸುತ್ತಿ ಅದರ ಮೂಲಕ ಒಂದು ಕಣ್ಣಿನಿಂದ ದೂರದಲ್ಲಿ ಇರುವ ಯಾವುದಾದರೂ ವಸ್ತುವನ್ನು ನೋಡಿ, ಇನ್ನಂದು ಕಣ್ಣು  ತೆರೆದಿರಲಿ. ಇನ್ನಂದು ಕೈನ ಅಂಗೈಯನ್ನು ಬಿಡಿಸಿ ಕೊಳವೆಯಗುಂಟ ದೂರದ ತುದಿಯಿಂದ ಕಣ್ಣಿನತ್ತ ಜರುಗಿಸಿ (ಚಿತ್ರ ೧).



ಹೀಗೆ ಜರುಗಿಸುವಾಗ  ಒಂದು ಕಣ್ಣಿನಿಂದ ಕೊಳವೆಯ ಮೂಲಕ ದೂರದ ವಸ್ತುವನ್ನು ನೋಡುತ್ತಾ ಇರಬೇಕು. ಯಾವುದೋ ಒಂದು ಸ್ಥಳದಲ್ಲಿ ಅಂಗೈನಲ್ಲಿ ಕೊಳವೆಯಷ್ಟೇ ದೊಡ್ಡ ರಂಧ್ರವಾಗಿರುವಂತೆ ಭಾಸವಾಗುತ್ತದೆ. ತದನಂತರ ಕೊಳವೆಯ ಮೂಲಕ ನೋಡಲು ಉಪಯೋಗಿಸದಿರುವ ಕಣ್ಣನ್ನು ಮುಚ್ಚಿ ಪ್ರಯೋಗ ಪುನರಾವರ್ತಿಸಿ, ವ್ಯತ್ಯಾಸ ಗಮನಿಸಿ. ಅಂಗೈನಲ್ಲಿ ರಂಧ್ರ ಕಂಡದ್ದು ಏಕೆ? ತರ್ಕಿಸಿ.

೨. ನಿಮ್ಮ ಎರಡೂ ಕೈಗಳನ್ನು ಮುಂದಕ್ಕೆ ಸಂಪೂರ್ಣವಾಗಿ ಚಾಚಿ ಎರಡೂ ಕೈಗಳ ತೋರು ಬೆರಳುಗಳನ್ನು ಕೈಗಳ ನೇರಕ್ಕೆ ಲಂಬವಾಗಿರುವಂತೆ ಬಾಗಿಸಿ ಅವುಗಳ ತುದಿಗಳು ಒಂದನ್ನೊಂದು ಮುಟ್ಟುವಂತೆ ನಿಮ್ಮ ಕಣ್ಣಿನ ನೇರದಲ್ಲಿ ಹಿಡಿದುಕೊಳ್ಳಿ (ಚಿತ್ರ ೨).



ಎರಡು ತೋರುಬೆರಳುಗಳು ಪರಸ್ಪರ ಸಂಪರ್ಕಿಸಿರುವುದನ್ನೇ ನೋಡುತ್ತಾ ಬಲು ನಿಧಾನವಾಗಿ ಪರಸ್ಪರ ಸಂಪರ್ಕಿಸಿರುವ ಬೆರಳತುದಿಗಳನ್ನು ನಿಮ್ಮ ಕಣ್ಣುಗಳ ಸಮೀಪಕ್ಕೆ ತನ್ನಿ ಯಾವುದೋ ಒಂದು ಸ್ಥಳವನ್ನು ಅವು ತಲುಪಿದಾಗ ಎರಡು ತುದಿಗಳ ನಡುವೆ ನಿಮ್ಮದೇ ಬೆರಳಿನ ತುಂಡೊಂದರ ವಿಚಿತ್ರ ಆಕೃತಿ (ಚಿತ್ರ ೩) ಕಾಣಿಸಿಕೊಳ್ಳುವ ವೈಚಿತ್ರ್ಯ ವೀಕ್ಷಿಸಿ. ಇದೇಕೆಂದು ವಿವರಿಸಲು ಪ್ರಯತ್ನಿಸಿ.

೩. ಈ ಕೆಳಗಿನ ಚಿತ್ರಗಳಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗಳಿಗೆ ಕಣ್ಣಿನಿಂದ ನೋಡಿ ಅಂದಾಜು ಮಾಡಿ ಉತ್ತರಿಸಿ. ತದನಂತರ ನಿಮ್ಮ ುತ್ತರ ಸರಿಯೇ ಎಂಬುದನ್ನು ಯುಕ್ತ ಸಾಧನದ ನೆರವಿನಿಂದ ಪರೀಕ್ಷಿಸಿ.

No comments: