Pages

19 April 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೭

ಜಲಾಂತರ್ಗಾಮಿ ನೌಕೆಯ ಚಲನೆಯ ಮರ್ಮ

ಜಲಾಂತರ್ಗಾಮಿ ನೌಕೆಗಳು (ಸಬ್ ಮರೀನ್) ಚಾಲಕ ಬಯಸಿದಾಗ ನೀರಿನಲ್ಲಿ ಮುಳುಗುವಂತೆಯೋ ಅಥವ ನೀರಿನ ಮೇಲಕ್ಕೆ ಬರುವಂತೆಯೋ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಈ ಪ್ರಯೋಗ ಮಾಡಿ. ಚುಚ್ಚುಮದ್ದಿನ ಔಷಧಿಯ ರಬ್ಬರ್ ಬಿರಡೆ ಇರುವ ಒಂದು ಖಾಲಿ ಬಾಟಲ್ ಸಂಗ್ರಹಿಸಿ (ಆಸ್ಪತ್ರೆಗಳಲ್ಲಿ ಇವು ಉಚಿತವಾಗಿ ಸಿಕ್ಕುವ ಸಾಧ್ಯತೆ ಇದೆ). ಸಾಮಾನ್ಯ ಬಾಲ್ ಪಾಇಂಟ್ ಪೆನ್ನುಗಳ ಎರಡು ಖಾಲಿ ರೀಫಿಲ್ಲುಗಳನ್ನು ಸ್ವಚ್ಛಗೊಳಿಸಿ ಒಂದು ಮೋಟಾದ ಮತ್ತು ಒಂದು ಉದ್ದನೆಯ ನಿರ್ಗಮ ನಳಿಕೆಗಳನ್ನು ತಯಾರಿಸಿ. ಬಾಟಲ್ಲಿನ ಬಿರಡೆಯ ಮೂಲಕ ಅವನ್ನು ತೂರಿಸಿ. ಬಾಟಲ್ಲಿನ ಒಳಗೆ ಅವುಗಳ ತುದಿಗಳು ಇರಬೇಕಾದ ಸ್ಥಳಗಳನ್ನು ಗಮನಿಸಿ. ಬಾಟಲಿನ ಹೊರಗಿರುವ ತುದಿಗಳಿಗೆ ಸೈಕಲ್ ವಾಲ್ ಟ್ಯೂಬ್ ರಬ್ಬರ್ ಕೊಳವೆಗಳನ್ನು ಸಿಕ್ಕಿಸಿ. ಮೋಟು ನಿರ್ಗಮ ನಳಿಕೆಗೆ ಸಿಕ್ಕಿಸುವ ಕೊಳವೆ ಸರಿಸುಮಾರು ಅರ್ದ ಮೀಟರ್ ಉದ್ದ ಇರಲಿ. ಉದ್ದನೆಯ ನಿರ್ಗಮ ನಳಿಕೆಗೆ ಸಿಕ್ಕಿಸಿದ ರಬ್ಬರ್ ಕೊಳವೆಯ ತುದಿ ಬಾಟಲಿನ ಹೊರಮೈನ ತಳಭಾಗದ ಸಮೀಪ ಇರುವಂತೆ ದಾರ/ಅಂಟು ಟೇಪ್/ರಬ್ಬರ್ ಬ್ಯಾಡ್ ನೆರವಿನಿಂದ ಬಂಧಿಸಿ. ಬಾಟಲಿನ ತಳಭಾಗದಲ್ಲಿ ಜೇನುಮೇಣ/ಅರಗು ಅಂಟಿಸಿ ಖಾಲಿ ಬಾಟಲ್ ನೀರಿನಲ್ಲಿ ನೇರವಾಗಿ ತೇಲುವಂತೆ ಮಾಡಿ. ಬಾಟಲ್ ತೇಲುವಾಗ ಅದರ ಮೇಲ್ಮೈಗೆ ಬಂಧಿಸಿದ ರಬ್ಬರ್ ಕೊಳವೆಯ ತುದಿ ಸದಾ ನೀರಿನಲ್ಲಿ ಮುಳುಗುವಂತೆ ಇರಬೇಕು. ಬಾಟಲ್ ನೀರಿನಲ್ಲಿ ಅಡ್ಡಡ್ಡವಾಗಿ ತೇಲುವಂತೆಯೂ ಮಾಡಬಹುದಾದರೂ  ಹಾಗೆ ಮಾಡಿದಾಗ ಅದರ ಮೇಲ್ಮೈಗೆ ಬಂಧಿಸಿದ ರಬ್ಬರ್ ಕೊಳವೆಯ ತುದಿ ಸದಾ ನೀರಿನಲ್ಲಿ ಮುಳುಗುವಂತೆ ಮಾಡುವುದು ಸ್ವಲ್ಪ ಕಷ್ಟ. ಇದೇ ನಿಮ್ಮ ಪ್ರಾಯೋಗಿಕ ಜಲಾಂತರ್ಗಾಮಿ ನೌಕೆ.

ನೀವು ತಯಾರಿಸಿದ ಜಲಾಂತರ್ಗಾಮಿ ನೌಕೆಯನ್ನು ಒಂದು ಬಕೆಟ್ ನೀರಿನಲ್ಲಿ ತೇಲಿಸಿ. ಮೋಟು ನಿರ್ಗಮ ನಳಿಕೆಗೆ ಸಿಕ್ಕಿಸಿದ ರಬ್ಬರ್ ಕೊಳವೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ಗಾಳಿ ಎಳೆಯಿರಿ. ಗಾಳಿ ಎಳೆದಂತೆಲ್ಲ ಬಾಟಲಿನ ಒಳಗೆ ನೀರು ತುಂಬುವುದನ್ನೂ ನೀರು ತುಂಬಿಂತೆಲ್ಲ ಬಾಟಲ್ ನೀರಿನಲ್ಲಿ ಮುಳುಗುವುದನ್ನೂ ವೀಕ್ಷಿಸಿ. ತದನಂತರ ಅದೇ ಕೊಳವೆಯ ಮೂಲಕ ಜೋರಾಗಿ ಗಾಳಿ ಊದಲಾರಂಭಿಸಿ. ಗಾಳಿ ಊದಿದಂತೆಲ್ಲ ಬಾಟಲಿನ ಒಳಗಿದ್ದ ನೀರು ಹೊರ ಹೋಗುವುದನ್ನೂ ಬಾಟಲ್ ನೀರಿನಲ್ಲಿ ಮೇಲೇರುವುದನ್ನೂ ವೀಕ್ಷಿಸಿ. ನೀವು ಅಪೇಕ್ಷಿಸಿದ ಆಳದಲ್ಲಿ ಬಾಟಲ್ ಇರುವಂತೆ ಮಾಡುವುದು ಸಾಧ್ಯವೇ ಎಂಬುದನ್ನು ಪರೀಕ್ಷಿಸಿ.

ಜೋರಾಗಿ ಗಾಳಿ ಎಳೆದಾಗ ಬಾಟಲಿನಲ್ಲಿ ನೀರು ತುಂಬಿದ್ದು ಏಕೆ? ಗಾಳಿ ಊದಿದಾಗ ನೀರು ಹೊರ ಹೋದದ್ದು ಏಕೆ? ನೀರು ತುಂಬಿದಂತೆಲ್ಲ ಬಾಟಲ್ ನೀರಿನಲ್ಲಿ ಆಳಕ್ಕೆ ಇಳಿದದ್ದು ಏಕೆ? ನೀರು ಹೊರ ಹೋದಂತೆಲ್ಲ ಅದು ಮೇಲೇರಿದ್ದು ಏಕೆ?

ಜಲಾಂತರ್ಗಾಮಿ ನೌಕೆಗಳಲ್ಲಿ ಬ್ಯಾಲಸ್ಟ್ ಟ್ಯಾಂಕ್ ಎಂಬ ಹೆಸರಿನ ವಾಯು-ಜಲ ಅಭೇದ್ಯ ಕೊಠಡಿಯೊಂದು ಇರುತ್ತದೆ. ಶಕ್ತಿಯುತ ಪಂಪುಗಳ ನೆರವಿನಿಂದ ಅದರೊಳಕ್ಕೆ ನೀರು ತುಂಬುವ ಅಥವ ಅದರೊಳಗಿನಿಂದ ನೀರು ಹೊರಹಾಕುವ ವ್ಯವಸ್ಥೆ ಇರುತ್ತದೆ.

No comments: