Pages

9 April 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೧೬

ಜೆಟ್ ವಿಮಾನ/ರಾಕೆಟ್ ಮುಂದಕ್ಕೆ ಚಲಿಸುವಂತೆ ಮಾಡುವ ಬಲ

ಸರಿಸುಮಾರಾಗಿ ಸ್ತಂಭಾಕೃತಿಯಲ್ಲಿ ಇರುವ ದೊಡ್ಡ ಬೆಲೂನಿಗೆ ಗಾಳಿ ತುಂಬಿಸಿ. ಬಾಲ್ ಪಾಇಂಟ್ ಪೆನ್ನಿನ ಖಾಲಿ ರೀಫಿಲ್ ಒಂದನ್ನು ಅದರ ಮೇಲೆ ಚಿತ್ರದಲ್ಲಿ ತೋರಿಸಿದಂತೆ ಅಂಟು ಟೇಪಿನ ನೆರವಿನಿಂದ ಬಂಧಿಸಿ. ರೀಫಿಲ್ಲಿನ ಮೂಲಕ ಯಾವುದಾದರೂ ಲೋಹದ ಸಪುರವಾದ  ತಂತಿಯೊಂದನ್ನು ತೂರಿಸಿ. ತಂತಿ ಎಷ್ಟು ಉದ್ದ ಇರಬೇಕು ಎಂಬುದು ಬೆಲೂನ್ ಎಷ್ಟು ದೂರ ಚಲಿಸುತ್ತದೆ ಎಂಬುದನ್ನು ಆಧರಿಸಿರುವುದರಿಂದ ಅದನ್ನು ಪ್ರಯೋಗ ಮುಖೇನ ನೀವೇ ಪತ್ತೆ ಹಚ್ಚಬೇಕು. ಗಾಳಿ ತುಂಬಿದ ಬೆಲೂನಿನ ಬಾಯಿ ತಂತಿಯ ಕೆಳಮಟ್ಟದಲ್ಲಿ ಇರುವ ತುದಿಯ ಕಡೆಗೆ ಇರುವಂತೆ ತಂತಿಯನ್ನು ತುಸು ಓರೆಯಾಗಿ ಯಾವುದಾದರೂ ಆಧಾರಗಳಿಗೆ ಎಳೆದು ಕಟ್ಟಿ ಅಥವ ಇಬ್ಬರು ಮಿತ್ರರಿಗೆ ಎಳೆದು ಹಿಡಿದುಕೊಳ್ಳುವಂತೆ ಹೇಳಿ. ತದನಂತರ ಬೆಲೂನಿನಿಂದ ಗಾಳಿ ವೇಗವಾಗಿ ಬಾಯಿಯ ಮೂಲಕ ಹೊರಹೋಗಲು ಬಿಡಿ. ಗಾಳಿ ಬೆಲೂನಿನಿಂದ ಯಾವ ದಿಕ್ಕಿನಲ್ಲಿ ಹೊರಹೋಗುತ್ತಿದೆಯೋ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ತುಸು ದೂರ ತಂತಿಯಗುಂಟ ಚಲಿಸುವುದನ್ನು ವೀಕ್ಷಿಸಿ.

ಈ ವಿದ್ಯಮಾನಕ್ಕೆ ಕಾರಣ ೇನಿರಬಹುದೆಂಬುದನ್ನು ತರ್ಕಿಸಲು ಪ್ರಯತ್ನಿಸಿ. ಯುಕ್ತ ವ್ಯಾಸದ ಖಾಲಿ ರೀಫಿಲ್ ನೆರವಿನಿಂದ ಗಾಳಿ ಒಂದೇ ದಿಕ್ಕಿನಲ್ಲಿ ನಿರ್ದಿಷ್ಟ ವೇಗದಲ್ಲಿ ಹೊರಹೋಗುವಂತೆ ಮಾಡುವ ಸಾಧ್ಯತೆ ಪರೀಕ್ಷಿಸಿ. ಗಾಳಿ ಹೊರಬರುವ ವೇಗಕ್ಕೂ ಬೆಲೂನ್ ಚಲಿಸುವ ವೇಗಕ್ಕೂ ಸಂಬಂಧ ಿದೆಯೇ ಪರೀಕ್ಷಿಸಿ. ಬೆಲೂನ್ ಹೆಚ್ಚು ದೂರ ಹೆಚ್ಚು ವೇಗದಲ್ಲಿ ಚಲಿಸುವಂತೆ ಮಾಡಬೇಕಾದರೆ ಪ್ರಯೋಗದಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಅಂದಾಜಿಸಿ ಅವು ಸರಿಯೇ ಎಂಬುದನ್ನು ಪ್ರಯೋಗ ಮುಖೇನ ಪರೀಕ್ಷಿಸಿ.

ಈಗ ಇಂತಹುದೇ ಇನ್ನೊಂದು ಪ್ರಯೋಗ ಮಾಡಿ ಹಿಂದಿನ ಪ್ರಯೋಗ ಮುಖೇನ ನೀವು ಕಲಿತದ್ದು ಸರಿಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಒಂದು ದೊಡ್ಡ ದುಂಡನೆಯ ಬೆಲೂನ್, ರಬ್ಬರ್ ಬ್ಯಾಂಡುಗಳು, ಒಂದು L ಆಕಾರದಲ್ಲಿ ಬಾಗಿರುವ ಚಿಕ್ಕ ಹೀರುಗೊಳವೆ (ತಂಪು ಪಾನೀಯದ ಅಂಗಡಿಗಳಲ್ಲಿ ಲಭ್ಯ) ಸಂಗ್ರಹಿಸಿ. ಅಪೇಕ್ಷಿತ ಆಕಾರದ ಹೀರುಗೊಳವೆ ಸಿಕ್ಕದೇ ಇದ್ದರೆ ಒಂದನ್ನು ಜೆಲ್ ಪೆನ್ನಿನ ಖಾಲಿ ರೀಫಿಲ್ಲಿನಿಂದ ನೀವೇ ತಯಾರಿಸಬಹುದು. ಹೀರುಗೊಳವೆಯನ್ನು ಬೆಲೂನಿನ ಬಾಯಿಯಲ್ಲಿ ತೂರಿಸಿ ರಬ್ಬರ್ ಬ್ಯಾಂಡುಗಳಿಂದ ಬಿಗಿಯಾಗಿ ಬಂಧಿಸಿ. ಬೆಲೂನಿಗೆ ಹೀರುಗೊಳವೆಯ ಮೂಲಕ ಗಾಳಿ ತುಂಬಿಸಿ. ತುಂಬಿಸಿದ ಗಾಳಿ ಹೊರ ಹೋಗದಂತೆ ಹೀರುಗೊಳವೆಯ ತೆರೆದ ತುದಿಯನ್ನು ಬೆರಳಿನಿಂದ ಮುಚ್ಚಿ ಹಿಡಿದುಕೊಂಡು ಬೆಲೂನನ್ನು ಮೇಜಿನ ಮೇಲೆ ಅಡ್ಡವಾಗಿ ಇಟ್ಟು ಬೆರಳು ತೆಗೆಯಿರಿ. ಬೆಲೂನಿನ ಚಲನೆಯ ದಿಕ್ಕನ್ನು ವೀಕ್ಷಿಸಿ. ಹೀರುಗೊಳವೆಯ ತುದಿಯನ್ನು ಈಗ ಇದ್ದದ್ದರ ವಿರುದ್ಧ ದಿಕ್ಕಿಗೆ ತಿರುಗಿಸಿ ಪ್ರಯೋಗ ಪುನರಾವರ್ತಿಸಿ.

ಹಿಂದಿನ ಪ್ರಯೋಗದಲ್ಲಿ ನೀವು ಕೈಗೊಂಡಿದ್ದ ತೀರ್ಮಾನಗಳನ್ನು ಈ ಪ್ರಯೋಗದ ವೀಕ್ಷಣೆಗಳು ಪುಷ್ಟೀಕರಿಸುತ್ತವೆಯೇ?

No comments: