Pages

8 November 2010

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೦

ವಾಯುವಿನಲ್ಲಿ ಬೆಂಕಿ ಉರಿದಾಗ ----

೧. ಮೂರು ಚಿಕ್ಕ ಮೋಂಬತ್ತಿಗಳು, ಅಗಲ ಬಾಯಿಯ ಪಾರದರ್ಶಕ ಗಾಜಿನ ಒಂದು ಚಿಕ್ಕ ಬಾಟಲ್  ಮತ್ತು ಒಂದು ದೊಡ್ಡ ಬಾಟಲ್ ( ಗಾಜಿನ ಲೋಟ ಒಂದು ಚಿಕ್ಕದು, ಒಂದು ದೊಡ್ಡದು ಇದ್ದರೂ ಸಾಕು), ಒಳತಳ ಸಪಾಟಾಗಿರುವ ಮೂರು ತಟ್ಟೆಗಳು - ಇವಿಷ್ಟನ್ನು ಸಂಗ್ರಹಿಸಿ. ಮೂರೂ ತಟ್ಟೆಗಳನ್ನು ಸಾಲಾಗಿ ಮೇಜಿನ ಮೇಲಿಟ್ಟು ಅವುಗಳ ಮಧ್ಯದಲ್ಲಿ ಉರಿಯುತ್ತಿರುವ ಮೋಂಬತ್ತಿಗಳನ್ನು ನಿಲ್ಲಿಸಿ. ೨ ನೇ ಮೋಂಬತ್ತಿಯ ಮೇಲೆ ಚಿಕ್ಕ ಬಾಟಲನ್ನೂ ೩ ನೇ ಮೋಂಬತ್ತಿಯ ಮೇಲೆ ದೊಡ್ಡ ಬಾಟಲನ್ನೂ ಏಕಕಾಲದಲ್ಲಿ ಕವುಚಿ ಇಡಿ. ಮೂರು ಮೋಂಬತ್ತಿಗಳ ಪೈಕಿ ಯಾವುದು ಮೊದಲು ನಂದುತ್ತದೆ? ಯಾವುದು ನಂತರ ನಂದುತ್ತದೆ? ಯಾವುದು ಹೆಚ್ಚು ಕಾಲ ಉರಿಯುತ್ತಿರುತ್ತದೆ? ಪತ್ತೆ ಹಚ್ಚಿ. ಹಾಗಾಗಲು ಕಾರಣವೇನು? - ಅನುಮಾನಿಸಿ.

೨. ಒಂದು ಗಾಜಿನ ಲೋಟ, ಒಂದು ದೊಡ್ಡ ತಟ್ಟೆ (ನೇರ ಅಂಚಿನದ್ದು ಒಳ್ಳೆಯದು), ಒಂದು ಚೆಂಬು ನೀರು, ಒಂದು ಸಣ್ಣ ಮೋಂಬತ್ತಿ - ಇವಿಷ್ಟನ್ನು ಸಂಗ್ರಹಿಸಿ.ಮೋಂಬತ್ತಿಯನ್ನು ತಟ್ಟೆಯ ಮಧ್ಯದಲ್ಲಿ ನಿಲ್ಲಿಸಿ. ತಟ್ಟೆಯ ತುಂಬ ನೀರು ಹಾಕಿ. ಮೋಂಬತ್ತಿಯ ಮೇಲೆ ಲೋಟವನ್ನು ಕವುಚಿ ಹಾಕಿ ಲೋಟದ ಒಳಗೆ ನೀರಿನ ಮಟ್ಟ ಎಲ್ಲಿದೆ ಎಂಬುದನ್ನು ಗುರುತಿಸಿ. ಲೋಟವನ್ನು ತೆಗೆದು, ಮೋಂಬತ್ತಿಯನ್ನು ಉರಿಸಿ ಲೋಟವನ್ನು ಅದರ ಮೇಲೆ ಪುನಃ ಕವುಚಿ ಹಾಕಿ. ಹಿಂದಿನ ಚಟುವಟಿಕೆಯಲ್ಲಿ ಆದಂತೆ ಮೋಬತ್ತಿ ಅಲ್ಪಕಾಲ ಉರಿದು ನಂದುತ್ತದೆ. ನಂದುವಾಗ ಲೋಟದ ಒಳಗೆ ನೀರಿನ ಮಟ್ಟದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ.

ನಿಮ್ಮ ಈಗಿನ ವೀಕ್ಷಣೆ ಹಿಂದಿನ ಪ್ರಯೋಗದಲ್ಲಿ ನೀವು ಅನುಮಾನಿಸಿದ್ದನ್ನು ಪುಷ್ಠೀಕರಿಸುತ್ತದೆಯೇ ಎಂಬುದರ ಕುರಿತು ಆಲೋಚಿಸಿ. ವಾಯುವಿನಲ್ಲಿ ಮಿಶ್ರವಾಗಿದ್ದ ಯಾವುದೋ ಒಂದು ಅನಿಲವನ್ನು ಉಪಯೋಗಿಸಿಕೊಂಡು ಮೋಂಬತ್ತಿ ಉರಿದಿರಬೇಕು, ತತ್ಪರಿಣಾಮವಾಗಿ ಉಂಟಾದ ಖಾಲಿ ಜಾಗವನ್ನು ಭರ್ತಿ ಮಾಡಲೋಸುಗ ಹೊರಗಡೆಯ ವಾಯುವಿನ ಒತ್ತಡದಿಂದಾಗಿ ನೀರು ಒಳಹೋಗಿರಬೇಕು ಎಂಬುದು ನಿಮ್ಮ ಅನುಮಾನವಾಗಿದ್ದರೆ ಪುನಃ ಆಲೋಚಿಸಿ. ಮೋಂಬತ್ತಿ ಉರಿದಾಗ ಏನೋ ಒಂದು ಉತ್ಪತ್ತಿ ಆಗಿರಬೇಕಲ್ಲವೇ? ಹಾಗೆ ಉತ್ಪತ್ತಿ ಆದದ್ದು ಲೋಟದ ಒಳಗೇ ಇರಬೇಕಿತ್ತಲ್ಲವೇ? ಖಾಲಿ ಸ್ಥಳ ಉಂಟಾದದ್ದು ಹೇಗೆ?

೩. ನೀವು ಮಾಡಿದ ೨ ನೇ ಪ್ರಯೋಗವನ್ನು ಕೊಂಚ ಬದಲಿಸಿ ನಿಮ್ಮ ಮಿತ್ರರ ಬುದ್ಧಿಶಕ್ತಿಗೊಂದು ಸವಾಲೆಸೆಯಿರಿ. ಪೂರ್ವಸಿದ್ಧತೆ ಇಂತಿರಲಿ - ತಟ್ಟೆಯಲ್ಲಿ ೧ ಅಥವ ೨ ರೂಪಾಯಿಯ ನಾಣ್ಯ ಇಡಿ. ಅದು ಅಲ್ಲಿಂದಲ್ಲಿಗೆ ಮುಳುಗುವಷ್ಟು ನೀರು ಹಾಕಿ. ಮೇಜಿನ ತಟ್ಟೆಯ ಪಕ್ಕದಲ್ಲಿ ಒಂದು ದೊಡ್ಡ ಲೋಟ, ಒಂದು ಚಿಕ್ಕ ಮೋಂಬತ್ತಿ, ಒಂದು ಬೆಂಕಿ ಪಟ್ಟಿಗೆ ಇಡಿ.

ಸವಾಲು ಇಂತಿರಲಿ - ತಟ್ಟೆಯನ್ನು ಎತ್ತದೆಯೇ, ನೀರನ್ನು ಚೆಲ್ಲದೆಯೇ, ಮೇಜಿನ ಮೇಲೆ ಇಟ್ಟಿರುವ ಸಾಮಗ್ರಿಗಳನ್ನು ಮಾತ್ರ ಉಪಯೋಗಿಸಿಕೊಂಡು ಕೈ ಒದ್ದೆಯಾಗದಂತೆ ನೀರಿನಲ್ಲಿ ಮುಳುಗಿರುವ ನಾಣ್ಯವನ್ನು ಹೊರತೆಗೆಯಬೇಕು.

(ನೀರು ಬಟ್ಟಲಿನಿಂದ ಲೋಟದೊಳಕ್ಕೆ ಹೋಗುವಂತೆ ಮಾಡುವ ವಿಧಾನ ನಿಮಗೆ ತಿಳಿದಿದೆಯಲ್ಲವೇ?)

ಕೆಲವು ಢೋಂಗಿ ಮಾಂತ್ರಿಕರು ಈ ನೈಸರ್ಗಿಕ ವಿದ್ಯಮಾನದ ಲಾಭ ಪಡೆದು ಅಮಾಯಕರಿಗೆ ಮೋಸ ಮಾಡುತ್ತಾರೆ. ಉದಾಹರಣೆ: ಒಂದು ಚಿಕ್ಕ ಬೋಗುಣಿಯಲ್ಲಿ ಮುಕ್ಕಾಲು ಭಾಗ ನೀರು ತುಂಬಿ. ನೀರಿನಲ್ಲಿ ತೇಲಬಲ್ಲ ಅತೀ ಪುಟ್ಟ ತಟ್ಟೆಯೊಂದನ್ನು ತುಪ್ಪದ ದೀಪವಾಗಿ ಪರಿವರ್ತಿಸಿ. ಒಂದು ಚೆಂಬಿನ ಬಾಯಿಯ ಸಮೀಪದಲ್ಲಿ ಒಳ ಭಾಗಕ್ಕೆ ಬೇವಿ ಎಣ್ಣೆ (ಅಥವ ಬೇರೆ ಯಾವುದಾದರೂ ನೀರಿನಲ್ಲಿ ಕರಗಿ ಕಹಿ ರುಚಿ ಉಂಟುಮಾಡಬಲ್ಲ ವಿಷವಲ್ಲದ ಬಣ್ಣರಹಿತ ವಸ್ತು) ತೆಳುವಾಗಿ ಸವರಿ. ಈಗ ದೀಪವನ್ನು ನೀರಿನಲ್ಲಿ ತೇಲಿಸಿ ಅದರ ಮೇಲೆ ಚೆಂಬನ್ನು ಕವುಚಿ ಹಾಕಿ. ಮಂತ್ರ ಪಠಿಸಿದಂತೆ ನಟಿಸಿ. ಅಲ್ಪ ಕಾಲಾನಂತರ ಚೆಂಬನ್ನು ಮೇಲೆತ್ತಿ. ದೀಪ ನಂದಿರುತ್ತದೆ. ನೀರು ಕಹಿಯಾಗಿರುತ್ತದೆ.

2 comments:

rukminimala said...

nannadondu salahe. ivannu yavudadaru vijnana lekhana hakuva patrikege kaluhisabahudalla. balavijnana iga prakatavaguttillave?

ಗೋವಿಂದ ರಾವ್ ವಿ ಅಡಮನೆ said...

ಸಲಹೆಗೆ ಧನ್ಯವಾದಗಳು.
ಹಿಂದೆ ಸುಧಾದಲ್ಲಿ ಬೇರೆ ಒಬ್ಬರು ಇಂಥ ಪ್ರಯತ್ನ ಮಾಡಿದ್ದರು. ಕೆಲವು ವಾರಗಳ ನಂತರ ಮಾಲಿಕೆ ನಿಂತು ಹೋಯಿತು. ಕಾರಣ ಗೊತ್ತಿಲ್ಲ. ಇಂದಿನ 'ಹೈಟೆಕ್' ಯುಗದಲ್ಲಿ ವಾಚಕರ ಕೊರತೆ ಉಂಟಾಯಿತು ಎಂದು ತೋರುತ್ತದೆ. ಬಾಲವಿಜ್ಞಾನದಲ್ಲಿ ಈಗ ಪ್ರಕಟವಾಗುತ್ತಿರುವ 'ನೀನೇ ಮಾಡಿ ನೋಡು' ಪ್ರಯೋಗಗಳ ಸ್ವರೂಪ ಬದಲಾಗಿದೆ. ಮಿಗಿಲಾಗಿ ಇವು ಬಲು ಹಿಂದೆ (ನಾನು ವಿದ್ಯಾರ್ಥಿ ಆಗಿದ್ದಾಗಿನಿಂದ ಮೊದಲ್ಗೊಂಡು) ವಿಭಿನ್ನ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ (ಬಹುತೇಕ ಇಂಗ್ಲಿಷ್) ಪ್ರಕಟವಾಗಿವೆ. ನನ್ನ ಆವಿಷ್ಕಾರದ ಪ್ರಯೋಗಗಳನ್ನು ಈ ಮೊದಲೇ ಪತ್ರಿಕೆಗಳಲ್ಲಿ ಪ್ರಕಟಿಸಿ ಆಗಿದೆ. ಇವನ್ನು ಈಗಾಗಲೇ ಕಾರ್ಯಾಗಾರಗಳಲ್ಲಿ ವಸ್ತುಪ್ರದರ್ಶನಗಳಲ್ಲಿ ಪ್ರದರ್ಶಿಸಿ ಆಗಿದೆ. ಎಂದೇ ಈ ಮಾಲಿಕೆಯಲ್ಲಿ ನಾನು ಬೇರೆಬೇರೆ ಮೂಲಗಳಿಂದ ಸಂಗ್ರಹಿಸಿದ (ನಮ್ಮ ಪರಿಸರಕ್ಕೆ ಹೊಂದಾಣಿಕೆ ಆಗುವಂತೆ ಮಾರ್ಪಾಟು ಮಾಡಿದ) ಮತ್ತು ನಾನೇ ಸೃಷ್ಟಿಸಿದ ಎಲ್ಲ ಪ್ರಯೋಗಗಳನ್ನೂ ಹಾಕುತ್ತಿದ್ದೇನೆ. ಯಾರಿಗಾದರೂ ಉಪಯೋಗ ಆದೀತು ಎಂದು (ಇದು ಭ್ರಮೆಯೂ ಆಗಿರಬಹುದು). ವಾಸ್ತವವಾಗಿ ಇವು ಶಿಕ್ಷಕರಿಗೆ ತಿಳಿದಿರಬೇಕು. ಆದರೆ, ಇಂದಿನ ಬಹುಮಂದಿ ಶಿಕ್ಷಕರು ಪಾಠಕ್ಕೆ ಜೀವತುಂಬುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಮಾಡುವವರಿದ್ದರೆ ಅವರಿಗೆ ಇದು ಉಪಯೋಗವಾದೀತು.