Pages

17 August 2010

ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಬಯಸುವವರಿಗೆ ----

ಮದುವೆ ಶಾಸ್ತ್ರೋಕ್ತವಾಗಿ ಆಯಿತೇ ಇಲ್ಲವೇ ಅನ್ನುವುದು ಮುಖ್ಯವಲ್ಲ, ವಿವಾಹಾನಂತರ ದಂಪತಿಗಳ ನಡುವಿನ ಸಂಬಂಧ ಹೇಗಿರುತ್ತದೆ ಅನ್ನುವುದು, ಅರ್ಥಾತ್ ದಾಂಪತ್ಯ ಸಾಮರಸ್ಯ ಬಲು ಮುಖ್ಯ. ಅನಿವಾರ್ಯವಾಗಿ ಬಾಳಸಂಗಾತಿಯನ್ನು ಬಿಟ್ಟು ಕೆಲವು ದಿನಗಳ ಕಾಲ ಮನೆಯಿಂದ ದೂರ ಹೋದಾಗ ಮನೆಗೆ ಹಿಂದಿರುಗುವ ದಿನವನ್ನು ಕಾತರದಿಂದ ಎದುರು ನೋಡುವಂತೆ ಇದ್ದರೆ ಒಳ್ಳೆಯದಲ್ಲವೆ?

ಹೀಗಾಗಬೇಕಾದರೆ

೧. ನಿಮ್ಮ ಅತ್ಯುತ್ತಮ ಮಿತ್ರರ ಪಟ್ಟಿಯಲ್ಲಿ ನಿಮ್ಮ ಬಾಳಸಂಗಾತಿಯ ಹೆಸರು ಇರಬೇಕು.

೨. ನಿಮ್ಮ ಮತ್ತು ನಿಮ್ಮ ಬಾಳ ಸಂಗಾತಿಯ ಧಾರ್ಮಿಕ/ಮತೀಯ/ಆಧ್ಯಾತ್ಮಿಕ, ಆರ್ಥಿಕ, ಲೈಂಗಿಕತೆಯ ಮೌಲ್ಯಗಳೂ ಹೇಗೆ ಬಾಳಬೇಕು ಎಂಬುದರ ಕುರಿತಾದ ನಂಬಿಕೆಗಳೂ ಹೆಚ್ಚುಕಮ್ಮಿ ಒಂದೇ ಆಗಿರಬೇಕು.

೩. ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಬಾಳಸಂಗಾತಿಯ ಮೂಲಭೂತ ಗುಣಲಕ್ಷಣಗಳ, ಅಭ್ಯಾಸಗಳ, ವರ್ತನೆಗಳ ಶೇ ೭೦ ರಷ್ಟನ್ನು ಬದಲಿಸುವುದು ಬಲುಕಷ್ಟ, ಬದಲಿಸಲು ಪ್ರಯತ್ನಿಸುವುದು ಘರ್ಷಣೆಗೆ ಕಾರಣವಾಗುತ್ತದೆ ಎಂಬ ಅರಿವು ಇರಬೇಕು. ಎಂದೇ, ನಿಮ್ಮ ಬಾಳಸಂಗಾತಿಯನ್ನು ಬಲಾಬಲಗಳ ಸಹಿತ ಸ್ವೀಕರಿಸಬೇಕು,

೪. ಬಾಳಸಂಗಾತಿಯ ಅಭಿಪ್ರಾಯಗಳನ್ನೂ ರೀತಿನೀತಿಗಳನ್ನೂ ಅವು ನಿಮ್ಮದ್ದರಿಂದ ಭಿನ್ನವಾಗಿದ್ದಾಗ್ಗ್ಯೂ ಗೌರವಿಸಬೇಕು, ಅವಕ್ಕೆ ಅನುಗುಣವಾಗಿ ಬಾಳುವ ಸ್ವಾತಂತ್ರ್ಯ ನೀಡುವ ಮನೋಧರ್ಮ ಇರಬೇಕು.

೫. ದೈಹಿಕ ಆಕರ್ಷಣೆ ಇರಬೇಕಾದದ್ದು ಎಷ್ಟು ಮುಖ್ಯವೋ ನೂರಕ್ಕೆ ನೂರರಷ್ಟು ಪರಸ್ಪರ ಗೌರವ ಇರಬೇಕಾದದ್ದೂ ಅಷ್ಟೇ ಮುಖ್ಯ ಎಂಬ ಅರಿವು ಇರಬೇಕು.

೬. ಬಾಳಸಂಗಾತಿ ಹಿಂದೆಂದೋ ಮಾಡಿದ ತಪ್ಪುಗಳನ್ನು ಪದೇಪದೇ ನೆನಪಸಿ ಹಂಗಿಸುವುದಾಗಲೀ,  ಇನ್ನೊಬ್ಬ ವ್ಯಕ್ತಿಯೊಂದಿಗೆ ತುಲನೆ ಮಾಡಿ ಹಂಗಿಸುವುದಾಗಲೀ ಸಲ್ಲದು ಎಂಬ ಅರಿವೂ ಇರಬೇಕು.

೭. ದಾಂಪತ್ಯ ಜೀವನದ ಸಾಮರಸ್ಯ ಕಾಯ್ದುಕೊಳ್ಳ ಬೇಕಾದರೆ ‘ತನ್ನತನ’ವನ್ನು ಸ್ವಲ್ಪಮಟ್ಟಿಗೆ ತ್ಯಾಗ ಮಾಡಬೇಕಾದದ್ದು ಅನಿವಾರ್ಯ ಎಂಬ ಅರಿವೂ ಇರಬೇಕು.

೮. ತಮಗೆ ಆಪತ್ತುಗಳು ಎದುರಾದಾಗ ಮಿತ್ರರು ಯಾವುದೋ ಒಂದು ಹಂತದ ತನಕ ನೆರವು ನೀಡುತ್ತಾರೆ, ಹೆತ್ತವರಾದರೋ ಸಂಪೂರ್ಣ ನೆರವು ನೀಡುತ್ತಾರೆ. ಅಂತೆಯೇ ಹಣದಿಂದ ಎಲ್ಲ ಸುಖವನ್ನೂ ಪಡೆಯಲು ಸಾದ್ಯವಿಲ್ಲ. ಎಂದೇ, ಈ ಮೊದಲು ಪಟ್ಟಿಮಾಡಿದ ೭ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಹೆತ್ತವರ ಆಶೀರ್ವಾದ ಪಡೆದು ಆಗುವ ಮದುವೆಗಳು ವಿಚ್ಛೇದನದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಬಲುಕಮ್ಮಿ.

೯. ನೆನಪಿರಲಿ: ಸಮ ಸ್ವಾತಂತ್ರ್ಯ, ಪರಸ್ಪರ ಅವಲಂಬನೆ, ಪರಸ್ಪರ ಪ್ರತಿ-ಸಹಾಯಮಾಡುವಿಕೆ ಇವು ಮೂರೂ ಲಕ್ಷಣಗಳು ಇರುವ ಸ್ತ್ರೀ-ಪುರುಷ ಸಂಬಂಧ ಸ್ಥಾಪನೆಯೇ ಮದುವೆ ಎಂಬ ಸಂಸ್ಕಾರದ ಉದ್ದೇಶ. ಎಂದೇ, ‘ಈ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಬಲ್ಲೆ’ ಎಂದು ಭಾವಿಸುವ ವ್ಯಕ್ತಿಯನ್ನು ಮದುವೆ ಆಗುವುದಕ್ಕಿಂತ ‘ಈ ವ್ಯಕ್ತಿಯೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಸನ್ನಿವೇಶವೇ ಉದ್ಭವಿಸುವುದಿಲ್ಲ’ ಎಂದು ಭಾವಿಸುವ ವ್ಯಕ್ತಿಯನ್ನು ಬಾಳಸಂಗಾತಿಯಾಗಿ ಆಯ್ಕೆ ಮಾಡುವುದು ಒಳ್ಳೆಯದು.

No comments: