Pages

2 June 2010

ಹೀಗಿದ್ದರು, ನನ್ನ ಶಿಕ್ಷಕರು

ಶಿಕ್ಷಕರ ದಿನಾಚರಣೆ ಎಂಬ ಹಣೆಪಟ್ಟಿಯಲ್ಲಿ ಜರಗುವ ಯಾಂತ್ರಿಕ ಆಚರಣೆಯನ್ನು ಕುರಿತು ಹಿಂದಿನ ಬ್ಲಾಗ್ ನಲ್ಲಿ ವರ್ಣಿಸಿದ್ದೆ.  ನಿತ್ಯವೂ ನಾನು ನಾನಾಗಲು ಕಾರಣರಾದ ಶಿಕ್ಷಕರನ್ನು ನಾನು ಸ್ಮರಿಸಿಕೊಳ್ಳುತ್ತೇನೆ, ಶಿಕ್ಷಕರ ದಿನಾಚರಣೆಯಂದು ಮಾತ್ರವಲ್ಲ. ಏಕೆ? ಮುಂದಿನ ವಿವರಣೆ ಓದಿ.

ನನ್ನ ಶಿಕ್ಷಕರ ಪೈಕಿ ಬಹು ಮಂದಿ ಸ್ವಇಚ್ಛೆಯಿಂದ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡವರು, ಅರ್ಥಾತ್ ಮನೋಧರ್ಮ/ಪ್ರವೃತ್ತಿಯಿಂದ ಶಿಕ್ಷಕರಾಗಿದ್ದವರು. ತಿಳಿದೂ ತಿಳಿದೂ ಬಡತನವನ್ನು ಆಲಂಗಿಸಿಕೊಂಡಿದ್ದವರು (ಬಡ ಮೇಷ್ಟ್ರು). ಬೋಧಿಸುವುದು ಅವರ ಜೀವನದ ಗುರಿಯಾಗಿತ್ತು, ದಂಧೆಯಾಗಿರಲಿಲ್ಲ. 'ಟ್ಯೂಷನ್' ಹೇಳಲು ಅವರು ಬಡ ಪಟ್ಟಿಗೆ ಒಪ್ಪಿಕೊಳ್ಳುತ್ತಿರಲಿಲ್ಲ. ಒಪ್ಪಿಕೊಂಡರೂ ಅದು ಬಲು ನಿಧಾನ ಗತಿಯಲ್ಲಿ ಕಲಿಯುತ್ತಿದ್ದ ಅಥವ ಅನುತ್ತೀರ್ಣರಾಗಿದ್ದ 1-2 ವಿದ್ಯಾರ್ಥಿಗಳಿಗೆ ಸೀಮಿತವಾಗಿರುತ್ತಿತ್ತು. ಎಂದೇ, ಅವರು ಪ್ರಾಥಃಸ್ಮರಣೀಯರು, ಅನುಕರಣ ಯೋಗ್ಯರು.

ನಾವು ತಪ್ಪು ಮಾಡಿದಾಗ, ವಿಶೇಷತಃ, ತಿಳಿದೂ ತಿಳಿದೂ ತಪ್ಪು ಮಾಡಿದಾಗ, ಅವರು ನಮ್ಮನ್ನು ದಂಡಿಸುತ್ತಿದ್ದರಾದರೂ ನಾವು ಅವರನ್ನು ದ್ವೇಷಿಸುತ್ತಿರಲಿಲ್ಲ. ಅವರು ನಮ್ಮನ್ನು ದಂಡಿಸುತ್ತದ್ದದ್ದು ನಮ್ಮ ತಪ್ಪು ನಡೆವಳಿಕೆಗಾಗಿಯೇ ವಿನಾ  ನಮ್ಮನ್ನು ಕಂಡರೆ ಆಗದೇ ಇದ್ದದ್ದರಿಂದ ಅಲ್ಲ ಎಂಬುದು ನಮಗೆ ತಿಳಿದಿದ್ದುದೇ ಇದಕ್ಕೆ ಕಾರಣ. ನಮ್ಮ ಶಿಕ್ಷಕರು ನಮ್ಮನ್ನು ಪ್ರೀತಿಸುತ್ತಿದ್ದರು. ಎಂದೇ, ಅವರು ನಮ್ಮ ನಡೆನುಡಿಯನ್ನು (ಕೇವಲ ಪಠ್ಯವಸ್ತು ಕಲಿಕೆಯನ್ನಲ್ಲ) ಉತ್ತಮೀಕರಿಸಲು ಸದಾ ಪ್ರಯತ್ನಿಸುತ್ತಿದ್ದರು (ಇಂದಿನ ಅನೇಕ ಶಿಕ್ಷಕರು ಅವರ ಹತ್ತಿರ 'ಟ್ಯೂಷನ್'ಗೆ ಹೋಗುವವರಿಗೆ ಮಾತ್ರ ವಿಶೇಷ ಪ್ರೀತಿ ತೋರುತ್ತಾರೆ. ಅಲ್ಲೊಬ್ಬ ಇಲ್ಲೊಬ್ಬರು 'ಶಿಷ್ಯೆ'ಯರಿಗೆ 'ವಿಶೇಷ ಪ್ರೀತಿ' ತೋರಿ 'ಒದೆ'ಯ ಸನ್ಮಾನಕ್ಕೆ ಪಾತ್ರರಾದ ವರದಿಗಳು ಪತ್ರಿಕೆಯಲ್ಲಿ ಬಂದಿವೆ).

ನನಗಿದ್ದ ಶಿಕ್ಷಕರ ಪೈಕಿ ಬಹು ಮಂದಿ  ತರಗತಿಗಳಲ್ಲಿ ವೃಥಾ ಕಾಲಹರಣ ಮಾಡುತ್ತಿರಲಿಲ್ಲ, ಕಾಡುಹರಟೆ ಹೊಡೆಯುತ್ತಿರಲಿಲ್ಲ. ನಮ್ಮ ಸಂಶಯಗಳನ್ನು ನಿವಾರಿಸಲು ಅಗತ್ಯವಾದ ಮಾಹಿತಿ ಅವರಲ್ಲಿ ಇಲ್ಲದೇ ಇದ್ದ ಸನ್ನಿವೇಶಗಳೇ ನನಗೆ ನೆನಪಿಲ್ಲ. ಬೋಧಿಸಬೇಕಾದ ವಿಷಯವನ್ನು ಸಂಪೂರ್ಣವಾಗಿ ಮನೋಗತ ಮಾಡಿಕೊಳ್ಳದೇ ಬೋಧಿಸಲು ಪ್ರಯತ್ನಿಸುವುದು ನಿಷ್ಪ್ರಯೋಜಕ ಎಂದು ನಾನು ನಂಬಲು ಇದೇ ಕಾರಣ. ಆದ್ದರಿಂದ ಪೂರ್ವಸಿದ್ಧತೆ ಇಲ್ಲದೇ ನಾನು ಉಪನ್ಯಾಸ ನೀಡುವುದೇ ಇಲ್ಲ. ನನಗೆ ತಿಳಿಯದೇ ಇರುವ ವಿಷಯಗಳ ಕುರಿತು ನಾನು ಉಪನ್ಯಾಸ ನೀಡಲು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳಲೇ ಬೇಕಾದ ಸಂದರ್ಭ ಬಂದರೆ ಸ್ವಾಧ್ಯಯನದ ಮೂಲಕ ಅದನ್ನು ಸುಮಾರಾಗಿ 'ಜೀರ್ಣಿಸಿಕೊಂಡೇ' ಮಾತನಾಡುತ್ತೇನೆ. ಇದು ನನಗೆ ಬಲು ದೊಡ್ಡ ಸಮಸ್ಯೆ ಅನ್ನಿಸುವುದೂ ಇಲ್ಲ. ಇದಕ್ಕೆ ಕಾರಣ ನನ್ನ ಶಿಕ್ಷಕರು ಅನ್ನುವುದು ಅತಿಶಯೋಕ್ತಿಯಲ್ಲ. ಕಲಿಯುವಿಕೆಯನ್ನು ಪ್ರೀತಿಸಲು ನಮ್ಮನ್ನು ಉದ್ದೀಪಿಸಿದ್ದಲ್ಲದೆ ಸ್ವಾಧ್ಯಯನಕ್ಕೆ ಬೇಕಾದ ಆದರ್ಶ-ಅಭ್ಯಾಸ-ಕುಶಲತೆಗಳು ವಿಕಸಿಸಲು ಅಗತ್ಯವಾದ ಅನೇಕ ಅನುಭವಗಳು ನಮಗೆ ಆಗುವಂತೆ ಅವರು ಮಾಡಿದ್ದರ ಫಲವೇ ಇದು.


ತರಗತಿಯಲ್ಲಿ ಅವರ ಕ್ರಿಯಾಶೀಲತೆ,  ಹಾವಭಾವಗಳು, ಧ್ವನಿಯ ಏರಿಳಿತಗಳು, ನೀಡುತ್ತಿದ್ದ ಸ್ಥಳೀಕ ಉದಾಹರಣೆಗಳು (ಕುರ್ಚಿಯಲ್ಲಿ ಸುಖಾಸೀನರಾಗಿ ಪಠ್ಯಪುಸ್ತಕವನ್ನು ಓದಿಕೊಂಡು ಬೋಧಿಸುತ್ತಿದ್ದ ಶಿಕ್ಷಕರು ಇರಲೇ ಇಲ್ಲ) ಕೊನೆಯ ಬೆಂಚಿನವರನ್ನೂ ಆಕರ್ಷಿಸುತ್ತಿದ್ದವು. ಅರ್ಥಾತ್, ನನ್ನ ಶಿಕ್ಷಕರ ಪೈಕಿ ಬಹು ಮಂದಿ 'ಕಲಿಯ ಬೇಕಾದ ವಿಷಯದ ಮೇಲೆ ವಿದ್ಯಾರ್ಥಿಗಳು ತಮ್ಮ ಅವಧಾನ ಕೇಂದ್ರೀಕರಿಸುವಂತೆ' ಮಾಡಬಲ್ಲ ಕುಶಲಿಗಳಾಗಿದ್ದರು.  ನನ್ನ ಅನೇಕ ಶಿಕ್ಷಕರ ಬೋಧನ ಶೈಲಿಗಳಲ್ಲಿ ನನ್ನನ್ನು ಪ್ರಭಾವಿಸಿದ ಅಂಶಗಳು ನನಗರಿವಿಲ್ಲದೆಯೇ ನನ್ನ ಬೋಧನ ಶೈಲಿಯನ್ನು ರೂಪಿಸಿವೆ.


ನನ್ನ ಆಡುಭಾಷೆಯೂ ನನ್ನ ಶಿಕ್ಷಕರ ಕೊಡುಗಡಯೇ ಆಗಿದೆ. ಅವರು ತರಗತಿಯಲ್ಲಿ ಬಳಸಿತ್ತಿದ್ದ ವ್ಯಾಕರಣಬದ್ಧ ಸರಳ ಭಾಷೆ ಹಿತಮಿತವಾಗಿ ಬೆರೆಸುತ್ತಿದ್ದ ಆಡುಮಾತು ಮುಂತಾದವು 'ಶಿಕ್ಷಕನು ತರಗತಿಯಲ್ಲಿ ಬಳಸುವ ಭಾಷೆ  ಆರಂಭದಲ್ಲಿ ಉಭಯಸಾಮಾನ್ಯವಾಗಿದ್ದು, ನಿಧಾನವಾಗಿ ವಿದ್ಯಾರ್ಥಿ ಅನುಕರಣೆಯಿಂದ ತನ್ನ  ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೆರವು ನೀಡುವಂಥದ್ದು ಆಗಿರಬೇಕು' ಎಂಬ ತತ್ವಕ್ಕೆ ಅನುಗುಣವಾಗಿ ಇದ್ದದ್ದರಿಂದ ನನ್ನ ಅಭಿವ್ಯಕ್ತಿ ಸಾಮರ್ಥ್ಯವೂ ವರ್ಧಿಸಿತು. (ಸುಮಾರು 4-5ನೇ ತರಗತಿಯ ತನಕವೂ ಇಂಗ್ಲಿಷ್ ಮತ್ತು ಕನ್ನಡ 'ಕಾಪಿ ರೈಟಿಂಗ್' ಕಡ್ಡಾಯವಾಗಿದ್ದದ್ದರಿಂದ ನಮ್ಮ ಕೈಬರೆಹ ಹೆಚ್ಚುಕಮ್ಮಿ 'ಸುಂದರ'ವೂ ಆಯಿತು)


ಕ್ಲಿಷ್ಟ ಪಠ್ಯಾಂಶ ವಿವರಿಸುವಾಗ ಅವರು ನೀಡುತ್ತಿದ್ದ ಉದಾಹರಣೆಗಳು ನಮ್ಮ ಅನುಭವದ ವ್ಯಾಪ್ತಿಯಲ್ಲಿಯೇ ಇರುತ್ತಿದ್ದುದರಿಂದ ಪಠ್ಯಾಂಶ ಅರ್ಥವಾಗದೇ ಇರುವ ಸನ್ನಿವೇಶಗಳು ನಿರ್ಮಾಣವಾಗುತ್ತಿದ್ದುದು ಅತಿ ವಿರಳ. ತತ್ಪರಿಣಾಮವಾಗಿ, ಶಿಕ್ಷಕ ತರಬೇತಿಯ ಅವಧಿಯಲ್ಲಿ  ಕೇಳಿದ 'ಅಜ್ಞಾತವನ್ನು ಜ್ಞಾತದ ನೆರವಿನಿಂದ ವಿವರಿಸು' ೆಂಬ ತತ್ವದ ತಿರುಳು ಹೊಸತು ಎಂದು ನನಗೆ ಅನ್ನಿಸಲೇ ಇಲ್ಲ.


ಟಿಪ್ಪಣಿ (ನೋಟ್ಸ್) ಯನ್ನೇ ಆಗಲಿ, ಅಭ್ಯಾಸ ಪ್ರಶ್ನೆಗಳಿಗೆ ಉತ್ತರಗಳನ್ನೇ ಆಗಲಿ ಹೇಳಿ ಬರೆಸುತ್ತಿದ್ದ ಶಿಕ್ಷಕರ ಸಂಖ್ಯೆ ಸೊನ್ನೆ ಎನ್ನಬಹುದಾದಷ್ಟು ಕಮ್ಮಿ ಇತ್ತು. 'ಹೋಮ್ ವರ್ಕ್' ಹೆಸರಿನಲ್ಲಿ ಕೊಡುತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ನಾವೇ ಪತ್ತೆಹಚ್ಚಿ ಬರೆಯಬೇಕಿತ್ತು (ಮನೆಯಲ್ಲಿ ಯಾರೂ ಇವನ್ನು ಹೇಳಿಕೊಡುತ್ತಿರಲಿಲ್ಲ). ಪಠ್ಯೇತರ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಒಂದು, ಇಂಗ್ಲಿಷ್ ನಲ್ಲಿ ಒಂದು ಪ್ರಬಂಧ/ಪತ್ರವನ್ನು ಪ್ರತೀವಾರ ಬರೆಉಬೇಕಿತ್ತು. ಹಾಗೆಂದು ''ಹೋಮ್್ ವರ್ಕ್' ಒಂದು ಹೊರೆ ಅನ್ನಿಸುವಷ್ಟು ಅತಿಯಾಗಿಯೂ ಇರುತ್ತಿರಲಿಲ್ಲ. ನಾವು ಮಾಡಿದ 'ಹೋಮ್ ವರ್ಕ್'ಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ ಯುಕ್ತ ಟೀಕೆ ಟಿಪ್ಪಣಿಗಳೊಂದಿಗೆ ಹೀಮದಿರುಗಿಸುತ್ತದ್ದರು. ಕೆಲವೊಮ್ಮೆ ಒಮ್ಮೆ ಮಾಡಿದ ಹೋಮ್ ವರ್ಕ್ ಅನ್ನು ಪುನಃ ಮಾಡಬೇಕಾದ ಶಿಕ್ಷೆಯೂ ದೊರೆಯುತ್ತಿತ್ತು. ಕಲಿತದ್ದನ್ನು ದೃಢೀಕರಿಸುವ ಪ್ರಕ್ರಿಯೆಗಳಾದ ಕಲಿತದ್ದರ ಪುನರಾವಲೋಕನ, ಮೆಲುಕು ಹಾಕುವಿಕೆ, ಪುನರುತ್ಪಾದನೆ ಇವೇ ಮೊದಲಾದವುಗಳನ್ನು ನಾವು ಮಾಡುವಂತೆ 'ಹೋಮ್ ವರ್ಕ್'ಗಳು ನೋಡಿಕೊಳ್ಳುತ್ತಿದ್ದದ್ದರಿಂದ ಪರೀಕ್ಷೆಗೆ ಸಿದ್ಧವಾಗುವ ಪ್ರಕ್ರಿಯೆ ಕಠಿಣ ಅನ್ನಿಸುತ್ತಿರಲಿಲ್ಲ. (ಕಡಿಮೆ ಅಂಕ ತೆಗೆದವರನ್ನು ಅವಮಾನಿಸುವ ಪರಿಪಾಠ ಶಾಲೆಯಲ್ಲಿಯೇ ಆಗಲಿ ಮನೆಯಲ್ಲಿಯೇ ಆಗಲಿ ಇರಲಿಲ್ಲ)


ನನ್ನ ಶಿಕ್ಷಕರು ಅಂದು ನನಗೆ ಕಲಿಸಿದ್ದ ಪಠ್ಯವಿಷಯದ ಬಹುಭಾಗವನ್ನು ನಾನು ಮರೆತಿದ್ದೇನೆ. (ನಿರುಪಯುಕ್ತವಾದದ್ದನ್ನು ಮರೆಯುವುದು ಅಪರಾಧವಲ್ಲ). ಅವರ ನಡೆ ನುಡಿಗಳ ಕೆಲವು ಅಂಶಗಳಿಂದ ಪ್ರಭಾವಿತನಾಗಿ ಅರಿವಿಲ್ಲದೆಯೇ ಅವನ್ನು ಸ್ವಾಂಗೀಕರಿಸಿಕೊಂಡದ್ದರಿಂದ ಮರೆಯುವ ಪ್ರಶ್ನೆ ಉದ್ಭವಿಸುವುದೇ ಇಲ್ಲ. (ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಏನು ಮಾಡಲು ಹೇಳುತ್ತಾರೆ ಎಂಬುದಕ್ಕಿಂತ ಅವರ ಮುಂದೆ ತಾವೇನು ಮಾಡುತ್ತಾರೆ ಎಂಬುದು ಬಲು ಮುಖ್ಯ- ಜಾಣ್ನುಡಿ) ನಾವು ನಡೆಯಬೇಕಾದ ಅಪೇಕ್ಷಿತ ಹಾದಿಯಲ್ಲಿ ನನ್ನ ಶಿಕ್ಷಕರು ತಾವೇ ನಡೆದು ತೋರಿಸುತ್ತಿದ್ದದ್ದು, ಬಹುಮಟ್ಟಿಗೆ ಅನುಕರಣಯೋಗ್ಯ ಜೀವಂತ ಮಾದರಿಗಳು ತಾವೇ ಆಗಿರುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದದ್ದು - ಇವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. (ುದಾಹರಣೆಗಳನ್ನು ನೀಡಿದರೆ ಈ ಲೇಖನ ದೊಡ್ಡ ಗ್ರಂಥವಾದೀತು). 'ಶಿಸ್ತಿನಿಂದ ಕೂಡಿದ ಜವಾಬ್ದಾರಿಯುತ ಜೀವನಶೈಲಿ', 'ಒಪ್ಪಿಕೊಂಡ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿಷ್ಠೆಯಿಂದ ಮಾಡುವುದು', 'ದುಡಿಮೆ ದುಡಿಮೆಯೇ, ಅವುಗಳಲ್ಲಿ ಮೇಲು, ಕೀಳು ಎಂಬ ಭೇದ ಇಲ್ಲ' ಇವೇ ಮೊದಲಾದ ಮೌಲ್ಯಗಳನ್ನು ಸ್ವಲ್ಪಮಟ್ಟಿಗಾದರೂ ನಾನು ನನ್ನದಾಗಿಸಿಕೊಳ್ಳಲು ಕಾರಣ ನನ್ನ ಶಿಕ್ಷಕರು (ನನ್ನ ಓದು ಅಲ್ಲ).


ಇಂದೂ ಇಂಥ ಶಿಕ್ಷಕರು (ಬಲು ಕಮ್ಮಿ ಸಂಖ್ಯೆಯಲ್ಲಿ ಆದರೂ) ಇದ್ದಾರೆ, ಮುಂದೆಯೂ ಇರುತ್ತಾರೆ. ಅಂಥವರಿಂದ ಶಿಕ್ಷಣ ಪಡೆಯುವವರೇ ಭಾಗ್ಯವಂತರು. ಶಿಕ್ಷಣವನ್ನು ಹಣ ಗಳಿಸುವ ದಂಧೆಯಾಗಿ ಪರಿಗಣಿಸುವವರ ಸಂಖ್ಯೆಯ ಹೆಚ್ಚಳದಿಂದಾಗಿ, ಅಧಿಕ ಹಣ ಗಳಿಸುವ ಉದ್ಯೋಗ ಗಿಟ್ಟಿಸಿಕೊಳ್ಳಲೋಸುಗವೇ ಶಿಕ್ಷಣ ಪಡೆಯ ಬಯಸುವವರ ಸಂಖ್ಯೆಯ ಹೆಚ್ಚಳದಿಂದಾಗಿ ಇಂದಿನ ವಿಷಾದನೀಯ ಪರಿಸ್ಥಿತಿ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರವೃತ್ತಿಯಿಂದ  ಶಿಕ್ಷಕ ವೃತ್ತಿಯನ್ನು ಆಲಂಗಿಸಿದವರನ್ನು ಗುರುತಿಸಿ ಅವರು ಧೃತಿಗೆಡದಂತೆ ಮನಃಸ್ಥೈರ್ಯ ಹೆಚ್ಚಿಸುವ ಕಾರ್ಯ ಆಗಬೇಕಿದೆ.


6 comments:

rukminimala said...

nimage kalisida ondibbaru shikShakara hesaru namUdisidare innu hechchu chennagirutta ittu.

raoavg said...

ರುಕ್ಮಿಣಿಮಾಲಾ ಸಲಹೆಗೆ ಧನ್ಯವಾದಗಳು (ಕನ್ನಡದಲ್ಲಿ ನೀನೇಕೆ ಟೈಪಿಸುತ್ತಿಲ್ಲ?). ಹೆಸರುಗಳು ಹಾಕಿದರೆ ಕೆಲವರಿಗೆ ಬೇಜಾರು ಆದೀತೋ ಏನೋ ಎಂಬ ಭಯ ಇತ್ತು. 1ನೇ ಕ್ಲಾಸ್: ಜಮಾಲ್ ಖಾನ್. 6-7: ಶಾಂತಕುಮಾರ್, ರಾಮರಾವ್ (ಇವರು ದಿ ಗುಂಡೂರಾವ್ ತಂದೆ). ಪ್ರೌಢಶಾಲೆ: ಎ ಪಿ ಶ್ರೀನಿವಾಸ ರಾವ್ (ವಿಜ್ಞಾನ), ನಾಗರಾಜ್ (ಇಂಗ್ಲಿಷ್), ಸುಬ್ಬರಾವ್ (ಗಣಿತ), ದೊರೆಸ್ವಾಮಿ ಐಯ್ಯಂಗಾರ್, ಸಚ್ಚಿದಾನಂದಯ್ಯ (ಕನ್ನಡ). ಕಾಲೇಜು: ಜಿಟಿಎನ್ (ಗಣಿತ), ನಾ ಸುಬ್ರಹ್ಮಣ್ಯಂ, ರಾಮಕೃಷ್ಣ ಉಡುಪ(ಕನ್ನಡ), ಎಲ್ ಎಸ್ ಶೇಷಗಿರಿ ರಾವ್, ಭಗವಾನ್ (ಇಂಗ್ಲಿಷ್), ಜನಾರ್ಧನ ಬಾಳಿಗ, ಎಮ್ ಎ ರಾಮಚಂದ್ರ ರಾವ್ (ಭೌತ ಶಾಸ್ತ್ರ). ಗಂಗೋತ್ರಿ: ಆರ್ ಪಿ ಸಿಂಗ್, ಸೋಮಶೆಟ್ಟಿ, ಡಿ ಎನ್ ಸೀತಾರಾಮಯ್ಯ

rukminimala said...

namma ganakaddu tondare. kannadalli taipisi hakidare . hoguvude illa blag ge. adakke kanglishe gati. vandanegalu. shikshakara hesaru hakiddakke.

shailaja s bhat said...

ನಿಮ್ಮ ಉನ್ನತ ಶಿಕ್ಷಣ ಮಂಗಳೂರಿನಲ್ಲಿ ಆದುದು ಎಂದು ಕೇಳಿ ನನಗೆ ಒಂದು ವಿಚಾರ ಬಂತು, ಹಾಗಿದ್ದಲ್ಲಿ ನಿಮ್ಮ ಕಾಲದಲ್ಲೂ ಕಾಲೇಜು ಶಿಕ್ಷಣಕ್ಕೆ ಮಡಿಕೇರಿಯವರು ಮಂಗಳೂರಿಗೇ ಬರುತ್ತಿದ್ದರು. ನೀವು ಎಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಿರಾ?
ಇನ್ನೊಂದು ವಿಚಾರ, ನಮ್ಮ ಊರ ಕಡೆ(ದಕ್ಷಿಣ ಕನ್ನಡ)ವಿದ್ಯಾಭ್ಯಾಸ ತಳವೂರಲು ಕಾರಣ ಯಾರು ? ಮೊದಲಲ್ಲಿ ಬ್ರಿಟಿಷರು(ಅಂದರೆ ಕ್ರಿಸ್ತ ಮಿಶನರಿಗಳ ಕೆಲಸ) , ನಂತರ ಮಣಿಪಾಲದವರು ಎಂದು ನನ್ನ ಎಣಿಕೆ. ನಿಮ್ಮ ಅಭಿಪ್ರಾಯವೇನು?
ಶೈಲಜ

raoavg said...

ನಾನು ಉನ್ನತ ಶಿಕ್ಷಣಕ್ಕೆ ಮಂಗಳೂರಿಗೆ ಬರಲಿಲ್ಲ (ಈ ಅಭಿಪ್ರಾಯ ನೀವು ತಳೆಯಲು ಕಾರಣ ಏನೋ ಅರ್ಥವಾಗಲಿಲ್ಲ). ಪದವಿ - ಮಡಿಕೇರಿಯಲ್ಲಿ. ಸ್ನಾತಕೋತ್ತರ ಪದವಿ ಮೈಸೂರಿನಲ್ಲಿ. ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೇ ಭಾರತದ ಇತರ ಕಡೆಗಳಲ್ಲಿ ಕೂಡ ಕ್ರೈಸ್ತ ಮತ ಬಡ-ಹಿಂದುಳಿದ-ಶೋಷಿತ-ಅಸ್ಪೃಶ್ಯ ಸಮುದಾಯಗಳನ್ನು ಆಕರ್ಷಿಸಲು ಕಾರಣಗಳು ಇಂತಿವೆ (ಇವು ನನ್ನ ಖಾಸಗಿ ಅಭಿಪ್ರಾಯ) 1. ಉಚಿತ ಶಿಕ್ಷಣ (ವಸತಿಯುತ/ವಸತಿರಹಿತ ಶಾಲೆಗಳ ಮೂಲಕ) ಎಲ್ಲರಿಗೂ ಒದಗಿಸಲು ಮುಂದಾದದ್ದು 2. ಉಚಿತ ವೈದ್ಯಕೀಯ ಸೇವೆ ಒದಗಿಸಲು ಮುಂದಾದದ್ದು 3. ಹಿಂದೂಮತದಲ್ಲಿ ಇರುವ 'ಮೇಲ್ಜಾತಿ-ಕೀಳ್ಜಾತಿ' ಬೇಧ ಕ್ರೈಸ್ತಮತದಲ್ಲಿ ಇಲ್ಲ ಎಂದು ನಂಬಿಸಿದ್ದು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಊಳಿಗಮಾನ್ಯ ಪದ್ಧತಿ ಪ್ರಬಲವಾಗಿತ್ತು ಎಂದೇ ಕ್ರೈಸ್ತಮತ ಪ್ರಚಾರಕ್ಕೆ ತಕ್ಕುದಾದ ಪರಿಸರ ಇತ್ತು.
ಮಣಿಪಾಲ ಸಮೂಹದವರು ಶಿಕ್ಷಣದ ಪ್ರಗತಿಗೆ ಉತ್ತಮ ಕೊಡುಗೆ ನೀಡಿದ್ದಾರಾದರೂ ಎಲ್ಲರಿಗೂ ಅದು ಲಭ್ಯವೇ ಎಂಬುದು ವಿವಾದಾಸ್ಪದ ವಿಷಯ.

my pen from shrishaila said...

After seeing G T N mavas name and Udupa's name I thought it was Mangalore.
Regarding Education in D.K. I feel whatever is our personal feeling it reached to every vilages only because of Christian Missionaries in those days. Manipal people have established all kind of Educational institutes, MGM College, and other Colleges in Karkala ,Mulki and schools also. Later others followed their steps. Kasturba college is famous all over the world(may be difficult to reach for the common people) .It was the vision of T.M.A.Pai.
I thought about it because, here in Hyderabad (belongs to Telangana) except the city education has not come up.I was discussing this with one of my friend, he said education was not promoted in telangana from the past (Nizam's time). Of course we are not best in this field, but better than many people. Many telugu and Kerala people come to our state for education.
Shailaja