Pages

28 May 2010

ಪುನರ್ಜನ್ಮ ಕುರಿತಾದ ದೂರದರ್ಶನ ಯಥಾರ್ಥತೆ ಪ್ರದರ್ಶನಗಳು

ಇತ್ತೀಚೆಗೆ ದೂರದರ್ಶನ ಮಾಧ್ಯಮಗಳಲ್ಲಿ ಹರಡಿರುವ ಸಾಂಕ್ರಾಮಿಕ ’ಪುನರ್ಜನ್ಮ-ಯಥಾರ್ಥತೆ (ರಿಯಾಲಿಟಿ) ಪ್ರದರ್ಶನ’ಗಳು ಒದಗಿಸುತ್ತಿರುವ ರೋಚಕ ಮಾಹಿತಿಯನ್ನು  ಪುನರ್ಜನ್ಮ ಇದೆ ಎಂಬುದನ್ನು ಸಾಬೀತು ಪಡಿಸುವ ವಿಶ್ವಾಸಾರ್ಹ ಸಾಕ್ಷ್ಯಾಧಾರ ಎಂದು ಪರಿಗಣಿಸ ಬಹುದೇ?


ಹಿನ್ನೆಲೆ


ಸಮ್ಮೋಹಿತ ಸ್ಥಿತಿಯಲ್ಲಿ ಇರುವ ವ್ಯಕ್ತಿಯನ್ನು ಯುಕ್ತ ಪ್ರಶ್ನೆ ಕೇಳುವುದರ ಮೂಲಕ ಪೂರ್ವಜನ್ಮದ ಘಟನಾವಳಿಗಳನ್ನು ಜ್ಞಾಪಿಸಿಕೊಳ್ಳಲು ಪ್ರೇರೇಪಿಸಿದಾಗ ಆ ವ್ಯಕ್ತಿ ಅಭಿವ್ಯಕ್ತಿಗೊಳಿಸುವ ಸ್ಮ್ರರಣೆಗಳನ್ನು ಆಧರಿಸಿರುವ ಪ್ರದರ್ಶನಗಳು ಇವು.  ಇಂಥ ಸ್ಮರಣೆಗಳಿಗೆ ’ಸಮ್ಮೋಹಿತ ನಿವರ್ತನ (ಹಿಪ್ನಾಟಿಕ್ ರಿಗ್ರೆಷನ್) ತಂತ್ರ ಪ್ರಯೋಗದಿಂದ ಆಗುವ ಪೂರ್ವಜನ್ಮ ಸ್ಮರಣೆಗಳು’ ಎಂದು ಹೆಸರು. ಬಹುಕಾಲದಿಂದ ಅತಾರ್ಕಿಕ ಭಯ, ಖಿನ್ನತೆ, ಗೀಳು ಇವೇ ಮೊದಲಾದವುಗಳಿಂದ ಬಳಲುತ್ತಿದ್ದವರ ಪೈಕಿ ಅನೇಕರ ಈ ಸ್ಥಿತಿಗೆ  ಅವರ ಹಿಂದಿನ ಯಾವುದೋ ಜನ್ಮದ ಘಟನೆಗಳು ಕಾರಣವಾಗಿದ್ದದ್ದನ್ನು ಸಮ್ಮೋಹಿತ ನಿವರ್ತನ ತಂತ್ರದಿಂದ ತಾವು ಪತ್ತೆಹಚ್ಚಿದ್ದಾಗಿ ಕೆಲವು ಆಧುನಿಕ ಮನೋವೈದ್ಯರು ಘೋಷಿಸಿದ್ದೇ ಈ ಸಾಂಕ್ರಾಮಿಕ ಹರಡಲು ಕಾರಣ. ಇಂಥ ರೋಗಿಗಳು ಜ್ಞಾಪಿಸಿಕೊಂಡ ಪೂರ್ವಜನ್ಮ ಘಟನೆಗಳ ವಿವರಗಳೂ ಸಂಭವನೀಯತೆಯೂ ನಂಬಬಹುದಾದವೂ ರೋಗಕ್ಕೆ ಕಾರಣವಾಗಬಲ್ಲವೂ ಆಗಿದ್ದವು ಎಂದು ಇವರ ಅಂಬೋಣ. ಈ ತೆರನಾದ ಸಮ್ಮೋಹನ ಚಿಕಿತ್ಸೆಯ ತರುವಾಯ ರೋಗಿಗಳ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಆಗುತ್ತಿದ್ದುದೇ ಈ ಸ್ಮರಣೆಗಳ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸುತ್ತವೆ ಅನ್ನುತ್ತಾರೆ ಇವರು. ಇವರ ಪ್ರಕಾರ ಈ ಜನ್ಮದಲ್ಲಿ ಪ್ರಕಟವಾಗುವ ವಿಶಿಷ್ಟ ಅದಮ್ಯ ಒಲವುಗಳು, ಹವ್ಯಾಸಗಳು, ವ್ಯಕ್ತಿತ್ವ ಲಕ್ಷಣಗಳು ಇವೇ ಮೊದಲಾದವುಗಳಿಗೆ ಕಾರಣವಾದ ಪೂರ್ವಜನ್ಮಾನುಭವಗಳನ್ನೂ ಈ ತಂತ್ರದಿಂದ ಪತ್ತೆಹಚ್ಚಲು ಸಾಧ್ಯ. ಇಂಥ ಮನೋವೈದ್ಯರ ಪೈಕಿ ಒಬ್ಬನಾದ ಬ್ರಯನ್ ವೈಸ್ ಎಂಬಾತ ೧೯೮೦ರ ನಂತರ ತಾನು ಸಮ್ಮೋಹನ ಚಿಕಿತ್ಸೆ ನೀಡಿದ ಒಬ್ಬ ರೋಗಿಯ ಮುಖೇನ ಆದ ಅನುಭವಗಳನ್ನು ’ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು (೧೯೮೮) ದೂರದರ್ಶನದ ’ಯಥಾರ್ಥತೆ ಪ್ರದರ್ಶನ’ಗಳ ಹುಟ್ಟಿಗೆ ಕುಮ್ಮಕ್ಕು ಕೊಟ್ಟಿತು.


ವಿಶ್ವಾಸರ್ಹತೆ


ಕಾರ್ಲ್ಟನ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ಪ್ರಾಚಾರ್ಯನೂ ಪ್ರಾಯೋಗಿಕ ಸಮ್ಮೋಹನ ಪ್ರಯೋಗಾಲಯದ ನಿರ್ದೇಶಕನೂ ಆಗಿದ್ದ ನಿಕೋಲಸ್ ಪಿ ಸ್ಪ್ಯಾನೋಸ್ (೧೯೪೨-೯೪) ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯೋಗ ಮಾಲಿಕೆ ಆಧಾರಿತ ವೀಕ್ಷಣೆಗಳು ಇಂತಿವೆ:


* ಸ್ಮರಿಸಿಕೊಂಡ ಪೂರ್ವಜನ್ಮ ವಿವರಗಳು ಬಲು ಜಾಗರೂಕತೆಯಿಂದ ಪರ್ಯಾಲೋಚಿಸಿ ಸೃಷ್ಟಿಸಿದವುಗಳಂತೆ ತೋರುತ್ತಿದ್ದವು. ಸ್ಮರಿಸಿಕೊಂಡ ಘಟನೆಗಳ ವರ್ಣನೆಯಲ್ಲಿ ಸ್ಪಷ್ಟ ವಿವರಗಳು ಇಲ್ಲದೇ ಇರುವುದು ಪ್ರಸಾಮಾನ್ಯ. ಸ್ಮರಿಸಿಕೊಂಡ ಪೂರ್ವಜನ್ಮದ  ವರ್ಣನೆಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟವಾದ ವಿವರಗಳಿಂದ ಕೂಡಿರುತ್ತಿದ್ದದ್ದೇ ಈ ತೀರ್ಮಾನ ಕ್ಕೆ ಬರಲು ಕಾರಣ.


*ಬಲು ಸುಲಭವಾಗಿ ಸಮ್ಮೋಹಿತರಾಗುವಂಥ ವ್ಯಕ್ತಿಗಳು ಮಾತ್ರ ಪೂರ್ವಜನ್ಮದ ಘಟನೆಗಳನ್ನು ಸ್ಮ್ರರಿಸಿಕೊಳ್ಳುತ್ತಿದ್ದರು.


*ಪೂರ್ವಜನ್ಮದಲ್ಲಿ ನಂಬಿಕೆ ಇದ್ದವರು ಮತ್ತು ಪೂರ್ವಜನ್ಮದ ಘಟನೆಗಳನ್ನು ತಾವು ಸ್ಮರಿಸಿಕೊಳ್ಳುವ ನಿರೀಕ್ಷೆ ಇದ್ದವರು ಮಾತ್ರ ತಾವು ಸ್ಮರಿಸಿಕೊಂಡದ್ದನ್ನು ನಂಬುತ್ತಿದ್ದರು.


*ಸ್ಮರಣೆಯ ವರದಿಯಲ್ಲಿ ಇರುತ್ತಿದ್ದ ವೈಲಕ್ಷಣ್ಯಗಳು ಪ್ರಶ್ನೆಗಳ ಮೂಲಕ ಪ್ರಯೋಗಕರ್ತೃ ಅಭಿವ್ಯಕ್ತಿಗೊಳಿಸುತ್ತಿದ್ದ ನಿರೀಕ್ಷೆಗಳನ್ನು ಅವಲಂಬಿಸಿರುತ್ತಿದ್ದವು.


ಈ ವೀಕ್ಷಣೆಗಳನ್ನು ಆಧರಿಸಿ ಆತ ಕೈಗೊಂಡ ತೀರ್ಮಾನ ಇಂತಿದೆ: ’ಸಮ್ಮೋಹಿತ ನಿವರ್ತನಾವಧಿಯಲ್ಲಿ ಆಗುವ ಪೂರ್ವಜನ್ಮ ಸ್ಮರಣೆಗಳು ನಿಜವಾಗಿ ಸ್ಮರಣೆಗಳೇ ಅಲ್ಲ. ಹಿಂದೆಂದೋ ಓದಿದ್ದ, ಕೇಳಿದ್ದ, ನೋಡಿದ್ದ ಮಾಹಿತಿಗಳನ್ನು ಆಧರಿಸಿ ಸೃಷ್ಟಿಸಿದ ಕಾಲ್ಪನಿಕ ವರ್ಣನೆಗಳು ಇವು. ತಾವು ಬೇರೊಬ್ಬನಾಗಿರುವಂತೆಮಾಡಿದ ನಟನೆಯನ್ನು ಆಧರಿಸಿದ ಸಾಮಾಜಿಕ ಮನಃಪ್ರತಿಮೆಗಳು ಇವು’


ಸಮ್ಮೋಹನ ಚಿಕಿತ್ಸಾವಧಿಯಲ್ಲಿ ಪೂರ್ವಜನ್ಮದ ಸ್ಮರಣೆ ಆಗುತ್ತದೆಯೇ ಇಲ್ಲವೇ ಎಂಬುದು ಆ ವ್ಯಕ್ತಿ ಪುನರ್ಜನ್ಮ ಸಿದ್ಧಾಂತವನ್ನು ನಂಬಿದ್ದಾನೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿರುವುದರಿಂದ ಆತ್ಮತೃಪ್ತಿಗಾಗಿ ವ್ಯಕ್ತಿ ಅರಿವಿಲ್ಲದೆಯೇ ಮಾಡಿದ ಕಾಲ್ಪನಿಕ ಸುಳ್ಳುಸೃಷ್ಟಿಗಳು  ಇಂಥ ವರದಿಗಳು ಅನ್ನುತ್ತಾರೆ ವಿಚಾರವಾದಿಗಳು.  ಗುಪ್ತ ಮರೆವು (ಕ್ರಿಪ್ಟೋ ಆಮ್ನೀಸಿಯ), ಮಿಥ್ಯಾಕಲ್ಪನೆ (ಕನ್ ಫ್ಯಾಬ್ಯುಲೇಷನ್), ದೃಢೀಕರಣ ಮುನ್ನೊಲವು (ಕಾನ್ ಫರ್ಮೇಷನ್ ಬೈಆಸ್) ಮುಂತಾದ ಮನೋವೈಜ್ಞಾನಿಕ ಪರಿಕಲ್ಪನೆಗಳ ನೆರವಿನಿಂದ ಈ ವಿದ್ಯಮಾನಗಳನ್ನು ವಿವರಿಸಬಹುದು. ಈ ಚಿಕಿತ್ಸೆಗೆ ಒಳಪಡುವ ರೋಗಿಗಳ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯು ವೈದ್ಯಕೀಯ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಹುಸಿಮದ್ದು (ಪ್ಲಸಿಬೋ) ಪರಿಣಾಮ ಅಲ್ಲ ಎಂದು ಸಾಬೀತು ಪಡಿಸಲೂ ಇಂಥ ವರದಿಗಳಲ್ಲಿ ಇರುವ ವಿವರಗಳ ಸತ್ಯಾಸತ್ಯತೆಯನ್ನು ನಿರ್ಧರಿಸಲೂ ಸಾಧ್ಯವಿಲ್ಲ. ಈ ಜನ್ಮದ ಕೆಲವು ವಿಶಿಷ್ಟ ಲಕ್ಷಣ ಅಥವ ತೊಂದರೆಗೆ ಕಾರಣ ಎನ್ನಲಾಗುವ ಪೂರ್ವಜನ್ಮ ವಿದ್ಯಮಾನಗಳ ಸ್ಮರಣೆ  ಮಾತ್ರ ಆಗುವುದೇಕೆ ಎಂಬ ಪ್ರಶ್ನೆಗೂ ಉತ್ತರ ಇಲ್ಲ. ಎಂದೇ, ಪುನರ್ಜನ್ಮ ಸಿದ್ಧಾಂತವನ್ನು ಪುಷ್ಟೀಕರಿಸಬಲ್ಲ ಸಾಕ್ಷ್ಯಾಧಾರ ಮೌಲ್ಯ ಇಂಥ ವರದಿಗಳಿಗೆ ಇಲ್ಲ.


ಈ ವಿಧಾನದ ಚಿಕಿತ್ಸೆ ಪರಿಣಾಮಕಾರಿ ಎಂಬುದನ್ನು ನಂಬುವವರು ಹವ್ಯಾಸಿ ’ತಜ್ಞರು’, ಸ್ವಘೋಷಿತ ’ಗುರು’ಗಳು, ಈ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡುವ ಸಾಮರ್ಥ್ಯ ತಮಗೆ ಇದೆ ಎಂದು ಪ್ರಚಾರ ಮಾಡುವವರು -ಇಂಥವರಿಗೆ ಬದಲಾಗಿ ಸಮ್ಮೋಹಿಸುವ ತಂತ್ರಗಳಲ್ಲಿ ಪೂರ್ಣ ಪರಿಣತಿ ಪಡೆದಿರುವ ಪ್ರಮಾಣೀಕೃತ ಮನೋವೈದ್ಯರನ್ನು   ಸಂಪರ್ಕಿಸುವುದು ಒಳಿತು.

4 comments:

ಜಿ.ಎನ್.ಅಶೋಕವರ್ಧನ said...

ಪ್ರಸಂಗದ ನಿಮ್ಮ ವಿಶ್ಲೇಷಣೆಯೇ ಬುದ್ಧಿಯಿದ್ದವರಿಗೆ ಸಾಕು. ಆದರೂ ಭರತ ವಾಕ್ಯದಲ್ಲಿ ಮತ್ತೂ ಪ್ರಚುರಿಸುವವರಿಗೆ, ನಂಬುವವರಿಗೆ ಹುಚ್ಚರ ಡಾಕ್ಟರರನ್ನು ಶಿಫಾರಸು ಮಾಡಿರುವುದು ಸತ್ಯವನ್ನು ತೊಳೆದಿಟ್ಟದ್ದು ಮಾತ್ರವಲ್ಲ ಕೇಂದ್ರೀಕೃತ ದೀಪ ಬೆಳಗಿಸಿ ತೋರಿದ ಹಾಗಾಗಿದೆ. ಆದರೆ ಒಂದು ನೆನಪಿರಲಿ, ಈ ದೂರದರ್ಶನ ವಾಹಿನಿಗಳಲ್ಲಿ ಬರುತ್ತಿರುವುದೆಲ್ಲಾ ಎಲ್ಲಾ (ಬರಿಯ ಪುನರ್ ಜನ್ಮದ ಕಥೆ ಮಾತ್ರವಲ್ಲ) ವೀಕ್ಷಕರ ಸಂಖ್ಯೆ ಏರಿಸಿಕೊಂಡು, ಜಾಹೀರಾತು ದರ ಹೆಚ್ಚಿಸಿಕೊಳ್ಳುವ ವಂಚನೆ. ‘ಸಾಮಾಜಿಕ ಸ್ವಾಸ್ಥ್ಯ’ ಎಂಬ ಶಬ್ದದ ಇರವೇ ಇವರಿಗೆ ಬೇಕಿಲ್ಲ.
ಅಶೋಕವರ್ಧನ

rukminimala said...

blog Odide. hige munduvarisi.
mala

shailajsbhat said...

ನಾನು ಈ ವಿಚಾರದಲ್ಲಿ ಇನ್ನೊಂದು ಲೇಖನ ಓದಿದ್ದೆ. ಅವರೂ ನಿಮ್ಮಂತೇ ಅಭಿಪ್ರಾಯಿಸಿದ್ದಾರೆ. ಅದರಲ್ಲಿ ಅವರು ಎತ್ತಿದ ವಿಚಾರವೆಂದರೆ ಪುನರ್ಜನ್ಮ ನಿಜವೋ ಅಥವಾ ಕಾಲ್ಪನಿಕವೋ, ಕೇವಲ ೫-೬ ವರ್ಷದೊಳಗಿನ ಕೆಲವೊಂದು ಮಕ್ಕಳ ಮೊದಲ ಜನ್ಮದ ನೆನೆಪುಗಳ ಆಧಾರದ ಮೇಲೆ ಅವರು ಈ ವಿಚಾರವನ್ನು ಎತ್ತಿದ್ದಾರೆ.
ಶೈಲಜ
http://v-s-gopal.sulekha.com/blog/post/2010/06/the-force-of-reincarnation.htm
ಈ ಮೇಲಿನ ಲಿಂಕನ್ನು ಉಪಯೋಗಿಸಿದರೆ ಆ ಲೇಖನ ತೆರೆದುಕೊಳ್ಳುತ್ತದೆ.

raoavg said...

ಬಾಲ ಅದ್ಭುತಗಳು (ಚೈಲ್ಡ್ ಪ್ರಾಡಿಜೀಸ್), ಪೂರ್ವಜನ್ಮ ಸ್ಮರಣೆಗಳು, ಮೃತ್ಯು ಸದೃಶ ಸನ್ನಿವೇಶದಲ್ಲಿ ಆದ ಅನುಭವಗಳು, ಎಡ್ಗರ್ ಕೇಸೀ ನೀಡಿದ ‘ಜೀವನ ಪಠನ’ಗಳು- ಇವನ್ನೂ ಪುನರ್ಜನ್ಮ ಇದೆಯೆಂದು ಸಾಬೀತು ಪಡಿಸುವ ಪುರಾವೆಗಳು ಎಂದು ಪುನರ್ಜನ್ಮ ಪಂಥೀಯರು ವಾದಿಸುತ್ತಾರೆ. ಈ ಕುರಿತು ನನ್ನ ವಿವೇಚನೆಯನ್ನು ಪ್ರತ್ಯೇಕ ಬ್ಲಾಗ್ ನಲ್ಲಿ ತಿಳಿಸುತ್ತೇನೆ.