Pages

23 October 2016

ಮೆಲುಕು ಹಾಕಬೇಕಾದ ಕತೆಗಳು ೧-೫೦

ನನ್ನ ಕೈ ಹಿಡಿದುಕೊ
ಒಮ್ಮೆ ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಯೊಡನೆ ಗಲ ಕಿರಿದಾದ ಸೇತುವೆಯೊಂದನ್ನು ದಾಟುತ್ತಿದ್ದಳು. ಸೇತುವೆಯ ಬದಿಗಳಲ್ಲಿ ತಡೆಗೋಡೆ ಇರಲಿಲ್ಲವಾದ್ದರಿಂದ ಮಗಳ ಸುರಕ್ಷೆಯ ಕುರಿತು ತಂದೆಗೆ ತುಸು ಚಿಂತೆ ಆಯಿತು.
“ಮಗಳೇ, ಅಕಸ್ಮಾತ್ತಾಗಿ ಸೇತುವೆಯ ಅಂಚಿನಿಂದ ಕೇಳಬೀಳದಂತೆ ನನ್ನ ಕೈ ಹಿಡಿದುಕೊ”
“ಬೇಡ ಅಪ್ಪಾ. ನೀವು ನನ್ನ ಕೈ ಹಿಡಿದುಕೊಳ್ಳಿ”
“ಎರಡೂ ಒಂದೇ ಅಲ್ಲವೇ?”
“ಅಲ್ಲ. ಎರಡರ ನಡುವೆ ತುಂಬಾ ವ್ಯತ್ಯಾಸವಿದೆ. ನಾನು ನಿಮ್ಮ ಕೈ ಹಿಡಿದುಕೊಂಡಿದ್ದಾಗ ಅಕಸ್ಮಾತ್ತಾಗಿ ನನಗೇನಾದರೂ ಆದರೆ ನಾನು ನಿಮ್ಮ ಕೈಯನ್ನು ಬಿಟ್ಟುಬಿಡಬಹುದು. ನೀವು ನನ್ನ ಕೈ ಹಿಡಿದುಕೊಂಡದ್ದೇ ಆದರೆ ಏನೇ ಆದರೂ ನೀವು ನನ್ನ ಕೈ ಬಿಡುವುದಿಲ್ಲ ಎಂಬ ಭರವಸೆ ನನಗಿದೆ”
೨. ಕ್ಯಾರೆಟ್‌, ಮೊಟ್ಟೆ, ಕಾಫಿ
ಯುವತಿಯೊಬ್ಬಳು ತನ್ನ ಅಜ್ಜಿಯ ಹತ್ತಿರ ತಾನು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು, ಜೀವನದಲ್ಲಿ ಹೋರಾಡಿ ಹೋರಾಡಿ ಸಾಕಾಗಿದೆ ಎಂಬುದಾಗಿ ಗೋಳಾಡಿದಳು.
ಅಜ್ಜಿ ಅವಳನ್ನು ಅಡುಗೆಕೋಣೆಗೆ ಕರೆದೊಯ್ದಳು. ಅಲ್ಲಿ ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಅದರೊಳಕ್ಕೆ ಒಂದು ಕ್ಯಾರೆಟ್‌ ಹಾಕಿ ಉರಿಯುತ್ತಿರುವ ಸ್ಟವ್‌ ಮೇಲೆ ನೀರು ಕುದಿಯುವ ವರೆಗೆ ಇಟ್ಟಳು. ತದನಂತರ ಮೊಟ್ಟೆ, ಕಾಫಿಬೀಜದ ಪುಡಿ ಇವನ್ನೂ ಅದೇ ಪ್ರಕ್ರಿಯೆಗೆ ಒಳಪಡಿಸಿದಳು.
ತದನಂತರ ಅವನ್ನು ತೋರಿಸಿ ಅಜ್ಜಿ ಕೇಳಿದಳು, “ನಿನಗೇನು ಕಾಣುತ್ತಿದೆ?”
ಯುವತಿ ಉತ್ತರಿಸಿದಳು, “ಕ್ಯಾರೆಟ್‌, ಮೊಟ್ಟೆ, ಕಾಫಿ.”
“ಕ್ಯಾರೆಟ್‌ ಅನ್ನು ಮುಟ್ಟಿ ನೋಡು.”
“ಬಲು ಮೆತ್ತಗಾಗಿದೆ.”
“ಮೊಟ್ಟೆಯನ್ನು ತೆಗೆದುಕೊಂಡು ಚಿಪ್ಪು ಒಡೆದು ನೋಡು.”
“ಮೊಟ್ಟೆಯ ಒಳಭಾಗ ಗಟ್ಟಿಯಾಗಿದೆ.”
“ಈಗ ಕಾಫಿಪುಡಿ ಹಾಕಿದ್ದ ನೀರಿನ ರುಚಿ ನೋಡು.”
“ಒಳ್ಳೆಯ ಕಾಫಿ ಆಗಿದೆ. ಏನು ಈ ಎಲ್ಲವುಗಳ ಅರ್ಥ?”
“ಕ್ಯಾರೆಟ್‌, ಮೊಟ್ಟೆ, ಕಾಫಿಪುಡಿ ಮೂರೂ ಮುಖಾಮುಖಿಯಾದದ್ದು ಕುದಿಯುವ ನೀರಿನೊಂದಿಗೆ. ಆದಾಗ್ಯೂ ಅವುಗಳ ಮೇಲೆ ಕುದಿನೀರು ಉಂಟು ಮಾಡಿದ ಪರಿಣಾಮ ಬೇರೆ ಬೇರೆ! ಕ್ಯಾರೆಟ್‌ ಮಿದುವಾಗಿ ದುರ್ಬಲವಾಯಿತು, ಮೊಟ್ಟೆಯ ಒಳಗಿನ ದ್ರವಭಾಗ ಗಟ್ಟಿ ಆಯಿತು, ಕಾಫಿಪುಡಿಯಾದರೋ ನೀರನ್ನೇ ಬದಲಿಸಿತು.”
“ಹೌದು, ನಿಜ.”
“ಈ ಮೂರರ ಪೈಕಿ ನೀನು ಯಾವುದರಂತೆ ಆಗ ಬಯಸುವೆ?”
೩. ಹಸು, ಹಾಲು
ಹಸುವನ್ನು ನೋಡಿಯೇ ಇರದ, ಹಸುವಿನ ಹಾಲು ಉತ್ತಮಪೋಷಕಾಹಾರ ಎಂಬುದನ್ನು ಓದಿ ತಿಳಿದಿದ್ದರೂ ಹಸುವಿನ ಹಾಲಿನ ರುಚಿ ಹೇಗಿರುತ್ತದೆ ಎಂಬುದು ತಿಳಿಯದೇ ಇದ್ದ ಒಬ್ಬಾತ ತನ್ನ ಗುರುವನ್ನು ಸಮೀಪಿಸಿ ಕೇಳಿದ, “ಗುರುಗಳೇ, ನಿಮಗೆ ಹಸುವಿನ ಕುರಿತಾಗಿ ಏನಾದರೂ ತಿಳಿದಿದೆಯೇ?”
“ತಿಳಿದಿದೆ.”
“ಹಾಗಾದರೆ ನೋಡಲಿಕ್ಕೆ ಹಸು ಹೇಗಿರುತ್ತದೆ ಎಂಬುದನ್ನು ನನಗೆ ತಿಳಿಸುವಿರಾ?”
“ಹಸುವಿಗೆ ನಾಲ್ಕು ಕಾಲುಗಳಿರುತ್ತವೆ. ಅದು ಕಾಡಿನಲ್ಲಿ ವಾಸಿಸುವ ಪ್ರಾಣಿ ಅಲ್ಲ, ಅದೊಂದು ಸಾಕುಪ್ರಾಣಿ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ನಿನಗೆ ಹಸು ಕಾಣಲು ಸಿಕ್ಕುತ್ತದೆ. ಆರೋಗ್ಯ ರಕ್ಷಣೆಗೆ ನೆರವು ನೀಡುವ ಬಿಳಿ ಹಾಲನ್ನು ಅದು ನಮಗೆ ನೀಡುತ್ತದೆ.” ಈ ರೀತಿಯಲ್ಲಿ ಗುರುಗಳು ಹಸುವಿನ ಕಣ್ಣು, ಕಿವಿ, ಕಾಲು. ಹೊಟ್ಟೆ, ಕೊಂಬು ಇವೇ ಮೊದಲಾದ ಸಮಸ್ತ ವೈಶಿಷ್ಟ್ಯಗಳನ್ನೂ ವರ್ಣಿಸಿದರು.
ಮರುದಿನ ಶಿಷ್ಯ ಹಸುವನ್ನು ನೋಡುವ ಸಲುವಾಗಿ ಹಳ್ಳಿಯೊಂದಕ್ಕೆ ಹೋದನು. ಅಲ್ಲಿ ಅವನು ಹಸುವಿನ ವಿಗ್ರಹವೊಂದನ್ನು ನೋಡಿದನು. ಅದರ ಸಮೀಪದಲ್ಲಿ ಇದ್ದ ಗೋಡೆಯೊಂದಕ್ಕೆ ಬಳಿಯಲೋಸುಗ ಒಂದು ಬಾಲ್ದಿಯಲ್ಲಿ ಸ್ವಲ್ಪ ಸುಣ್ಣದ ನೀರನ್ನು ವಿಗ್ರಹದ ಸಮೀಪದಲ್ಲಿ ಯಾರೋ ಇಟ್ಟಿದ್ದರು.
ಇವೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ಶಿಷ್ಯ ಇಂತು ತೀರ್ಮಾನಿಸಿದ, “ಇದು ನಿಜವಾಗಿಯೂ ಹಸು. ಅಂದಮೇಲೆ ಬಾಲ್ದಿಯಲ್ಲಿ ಇರುವುದು ಹಸುವಿನ ಹಾಲೇ ಆಗಿರಬೇಕು.”
ಹಾಲಿನ ರುಚಿ ತಿಳಿಯಲೋಸುಗ ಅವನು ಬಾಲ್ದಿಯಲ್ಲಿದ್ದದ್ದನ್ನು ಕುಡಿದ. ತತ್ಪರಿಣಾಮವಾಗಿ ಆತನನ್ನು ಹಳ್ಳಿಯಲ್ಲಿದ್ದ ಚಿಕಿತ್ಸಾಲಯಕ್ಕೆ ದಾಖಲು ಮಾಡಬೇಕಾಯಿತು. ವಿಷಯ ತಿಳಿದ ಗುರುಗಳು ಅವನನ್ನು ನೋಡಲೋಸುಗ ಧಾವಿಸಿ ಬಂದರು.
ಅವರನ್ನು ಕಂಡ ತಕ್ಷಣ ಶಿಷ್ಯ ಗುರುಗಳಿಗೆ ಹೇಳಿದ, “ಗುರುಗಳೇ, ಹಸುವಿನ ಹಾಲಿನ ಕುರಿತು ನಿಮಗೆ ಏನೇನೂ ತಿಳಿದಿಲ್ಲ. ನೀವು ಹೇಳಿದ್ದು ಸಂಪೂರ್ಣ ತಪ್ಪು.”
ಗುರುಗಳು ವಿಚಾರಿಸಿದರು, “ಏನು ನಡೆಯಿತು ಎಂಬುದನ್ನು ವಿವರವಾಗಿ ಹೇಳು.” ಶಿಷ್ಯ ವಿವರಿಸಿದ.
ಗುರುಗಳು ಕೇಳಿದರು, “ಹಸುವಿನ ಹಾಲನ್ನು ಕರೆದು ಬಾಲ್ದಿಗೆ ತುಂಬಿಸಿದ್ದನ್ನು ನೀನು ನೋಡಿದೆಯೋ?”
“ಇಲ್ಲ.”
“ಎಲ್ಲಿಯ ವರೆಗೆ ನೀನು ಇತರರು ಹೇಳಿದ್ದನ್ನು ಮಾತ್ರ ಆಧರಿಸಿ ಕಲಿಯುತ್ತಿರುವೆಯೋ ಅಲ್ಲಿಯ ವರೆಗೆ ನಿನಗೆ ನಿಜವಾದ ಜ್ಞಾನ ಲಭಿಸುವುದಿಲ್ಲ,” ನಸುನಕ್ಕು ಹೇಳಿದರು ಗುರುಗಳು.
೪. ನಾವು ನಾಯಿಗಿಂತ ಕೀಳಾದವರೇ?
ವೈಷ್ಣವ ಸನ್ಯಾಸಿ ರಾಧಾನಾಥ ಸ್ವಾಮಿಯವರು ಹಿಮಾಲಯದಲ್ಲಿ ವಾಸಿಸುತ್ತಿದ್ದಾಗ ಪ್ರತೀ ದಿನ ಸಾಧು ನಾರಾಯಣ ಪ್ರಸಾದ ಎಂಬವರೊಂದಿಗೆ ಸಾಧು ಮೊಹಮ್ಮದ್‌ ಎಂಬುವರನ್ನು ಭೇಟಿ ಮಾಡಲು ಹೋಗುತ್ತಿದ್ದರಂತೆ. ಸಾಧು ಪ್ರಸಾದರು ಭಗವದ್ಗೀತೆ ಹಾಗು ರಾಮಾಯಣದ ಕುರಿತು, ಸಾಧು ಮೊಹಮ್ಮದ್‌ ಅವರು ಕುರ್‌ಆನ್‌ ಕುರಿತು ವಿವರಣೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಒಬ್ಬರು ಮತ್ತೊಬ್ಬರ ಸಂಪ್ರದಾಯಗಳನ್ನು ಹೀಗಳೆಯದೆ ಮಾಡುತ್ತಿದ್ದ ಈ ಚರ್ಚೆ ಬಲು ಉಪಯುಕ್ತವಾಗಿರುತ್ತಿದ್ದವಂತೆ.
ಒಂದು ದಿನ ರಾಧಾನಾಥ ಸ್ವಾಮಿಯವರು ಸಾಧು ನಾರಾಯಣ ಪ್ರಸಾದರನ್ನು ಇಂತು ಕೇಳಿದರಂತೆ, “ಕೋಮುದ್ವೇಷ ಮತ್ತು ಹಿಂಸಾಚಾರ  ಇರುವ ದೇಶದವರಾದ ನೀವಿಬ್ಬರು, ಒಬ್ಬರು ಮುಸ್ಲಿಮ್ ಇನ್ನೊಬ್ಬರು ಹಿಂದು ಆಗಿದ್ದರೂ ಬಹಳ ಒಳ್ಳೆಯ ಸ್ನೇಹಿತರಾಗಿದ್ದೀರಿ. ಇದು ಹೇಗಾಯಿತು?”
ಸಾಧು ನಾರಾಯಣ ಪ್ರಸಾದರ ಉತ್ತರ: “ಯಜಮಾನ ಯಾವ ರೀತಿಯ ದಿರಿಸನ್ನು ಧರಿಸಿದ್ದರೂ – ಅದು ಧೋತಿ ಜುಬ್ಬಾ ಆಗಿರಲಿ, ಜೀನ್ಸ್‌ ಪ್ಯಾಂಟ್ ಟಿ ಶರ್ಟ್‌ ಆಗಿರಲಿ, ಒಳ ಉಡುಪೇ ಆಗಿರಲಿ ಅಥವ ಬತ್ತಲೆಯಾಗಿಯೇ ಇರಲಿ -‌ ಸಾಕು ನಾಯಿ ಅವನನ್ನು ಸರಿಯಾಗಿಯೇ ಗುರುತಿಸುತ್ತದೆ. ನಮ್ಮ ಪ್ರಭು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ  ಜನಗಳನ್ನು ಭೇಟಿ ಮಾಡಲೋಸುಗ ಬೇರೆ ಬೇರೆ ಪೋಷಾಕು ಧರಿಸಿ ಬಂದಾಗ ನಾವು ಅವನನ್ನು ಸರಿಯಾಗಿ ಗುರುತಿಸದೇ ಇದ್ದರೆ ನಾವು ನಾಯಿಗಿಂತ ಕೀಳಾಗುವುದಿಲ್ಲವೇ? ನಾಯಿಯಿಂದಲೂ ನಾವು ಕಲಿಯ ಬೇಕಾದದ್ದು ಬಹಳಷ್ಟಿದೆ.”
. ರಾಜನೂ ಪಂಡಿತನೂ.
ಪವಿತ್ರ ಗ್ರಂಥಗಳಲ್ಲಿ ಪಾರಂಗತನಾಗಿದ್ದರೂ ಧರ್ಮಸಮ್ಮತ ರೀತಿಯಲ್ಲಿ ಜೀವಿಸದೇ ಇದ್ದ ಆಸ್ಥಾನ ವಿದ್ವಾಂಸನೊಬ್ಬ ಒಂದು ರಾಜ್ಯದಲ್ಲಿ ಇದ್ದನು. ಅವನ ಪಾಂಡಿತ್ಯಕ್ಕೆ ಮರುಳಾಗಿದ್ದ ರಾಜನು ಎಲ್ಲ ಸಂದರ್ಭಗಳಲ್ಲಿಯೂ ಅವನ ಸಲಹೆ ಪಡೆಯುತ್ತಿದ್ದ. ಆ ವಿದ್ವಾಂಸನಾದರೋ ರಾಜಾಶ್ರಯದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅವನ ಗುಣಕ್ಕೆ ಪ್ರತಿಶತ ೧೦೦ ರಷ್ಟೂ ವಿರುದ್ಧ ಗುಣಗಳಿದ್ದ ಮಗನೊಬ್ಬ ಅವನಿಗಿದ್ದ. ಆತ ಮನೆಯಲ್ಲಿ ಇರುತ್ತಿದ್ದದ್ದಕ್ಕಿಂತ ಹೆಚ್ಚು ಸಾಧುಸಂತರ ಸಾಮಿಪ್ಯದಲ್ಲಿಯೇ ಇರುತ್ತಿದ್ದ. ಅವರ ಪ್ರಭಾವದಿಂದ ಆತ ಬಹು ಸಮಯವನ್ನು ದೈವಚಿಂತನೆಗಾಗಿ ವ್ಯಯಿಸುತ್ತಿದ್ದ.
ಒಂದು ದಿನ ರಾಜ ತನ್ನ ಆಸ್ಥಾನ ವಿದ್ವಾಂಸನಿಗೆ ಇಂತು ಆಜ್ಞಾಪಿಸಿದ: “ಶುಕದೇವನಿಂದ ಭಾಗವತ ಪುರಾಣವನ್ನು ಕೇಳಿದ ಪರೀಕ್ಷಿತ ಮಹಾರಾಜನಿಗೆ ಮುಕ್ತಿ ಲಭಿಸಿತು. ಇನ್ನು ಒಂದು ತಿಂಗಳ ಒಳಗೆ ನನ್ನನ್ನು ಭವಬಂಧನದಿಂದ ನೀನು ಬಿಡುಗಡೆ ಮಾಡಿಸಬೇಕು, ತತ್ಪರಿಣಾಮವಾಗಿ ನನಗೂ ಮುಕ್ತಿ ದೊರೆಯುವಂತಾಗ ಬೇಕು. ನಿನ್ನಿಂದ ಅದು ಸಾಧ್ಯವಾಗದೇ ಇದ್ದರೆ ನಿನ್ನ ಸಂಪತ್ತೆಲ್ಲವನ್ನೂ ಮುಟ್ಟುಗೋಲು ಮಾಡಿ ನಿನ್ನನ್ನು ಗಲ್ಲಿಗೇರಿಸುತ್ತೇನೆ”
ಈ ಅಜ್ಞೆಯ ಪರಿಣಾಮವಾಗಿ ತೀವ್ರ ಚಿಂತಿತನಾದ ವಿದ್ವಾಂಸನಿಗೆ ಅನ್ನಹಾರಗಳೂ ರುಚಿಸದಾಯಿತು. ಇದನ್ನು ಗಮನಿಸಿದ ಆತನ ಮಗ ತಂದೆಯನ್ನು ವಿಚಾರಿಸಿ ನಡೆದದ್ದನ್ನು ತಿಳಿದುಕೊಂಡು ಇಂತು ಹೇಳಿದ: “ಅಪ್ಪಾ ಚಿಂತಿಸದಿರು. ನನ್ನನ್ನು ಗುರುವಾಗಿ ಸ್ವೀಕರಿಸಿ ಅಕ್ಷರಶಃ ನನ್ನ ಸೂಚನೆಗಳಂತೆ ನಡೆದುಕೊಳ್ಳಲು ಹೇಳು”.
ಮಗನ ಪಾಂಡಿತ್ಯದ ಹಾಗು ವಿವೇಕದ ಕುರಿತಾಗಿ  ಅಷ್ಟೇನೂ ಒಳ್ಳೆಯ ಅಭಿಪ್ರಾಯ ತಳೆದಿರದಿದ್ದರೂ ಬೇರೆ ದಾರಿ ಕಾಣದೇ ಇದ್ದದ್ದರಿಂದ ವಿದ್ವಾಂಸ ತನ್ನ ಮಗನನ್ನು ರಾಜನ ಸಮ್ಮುಖಕ್ಕೆ ಕರೆದೊಯ್ದು ಅವನು ಹೇಳಿದಂತೆಯೇ ಮಾಡಿದ . ವಿದ್ವಾಂಸ ಸೂಚಿಸಿದಂತೆ ಅವನ ಮಗನನ್ನು ರಾಜನು ತನ್ನ ಗುರುವಾಗಿ ಸ್ವೀಕರಿಸಿದ.
ಮೊದಲು ಬಹಳ ಬಲವಾದ ಎರಡು ದೊಡ್ಡ ಹಗ್ಗಗಗಳನ್ನು ತರಿಸುವಂತೆ ಮಗ ರಾಜನಿಗೆ ಆಜ್ಞಾಪಿಸಿದ. ರಾಜನನ್ನು ಒಂದು ಕಂಬಕ್ಕೆ ಅಲುಗಾಡಲು ಸಾಧ್ಯವಾಗದಂತೆ ಕಟ್ಟಿಹಾಕಲು ಮಗ ಸೇವಕರಿಗೆ ಆಜ್ಞಾಪಿಸಿದ. ರಾಜನು ಇದಕ್ಕೆ ಸಮ್ಮತಿಸಿದ್ದರಿಂದ ಸೇವಕರು ಅಂತೆಯೇ ಮಾಡಿದರು. ತದನಂತರ ತನ್ನ ತಂದೆಯನ್ನೂ ಅಂತೆಯೇ ಬಂಧಿಸುವಂತೆ ಮಗ ಆಜ್ಞಾಪಿಸಿದ. ಸೇವಕರು ವಿದ್ವಾಂಸನನ್ನೂ ಕಂಬಕ್ಕೆ ಕಟ್ಟಿಹಾಕಿದರು.
ತದನಂತರ ಮಗ ತಂದೆಗೆ ಇಂತು ಆಜ್ಙಾಪಿಸಿದ: “ಈಗ ನೀನು ರಾಜನನ್ನು ಬಂಧಮುಕ್ತನನ್ನಾಗಿ ಮಾಡು.”
“ಮೂರ್ಖ, ನಾನೇ ಬಂಧನದಲ್ಲಿರುವುದು ನಿನಗೆ ಕಾಣುತ್ತಿಲ್ಲವೇ? ಸ್ವತಃ ಬಂಧನದಲ್ಲಿ ಇರುವವ ಇನ್ನೊಬ್ಬನನ್ನು ಬಂಧನದಿಂದ ಬಿಡಿಸಲು ಸಾಧ್ಯವಾಗುವುದಾದರೂ ಹೇಗೆ? ನೀನು ಹೇಳುತ್ತಿರುವುದು ಅಸಾಧನೀಯ ಎಂಬುದೂ ತಿಳಿಯದಷ್ಟು ದಡ್ಡನೇ ನೀನು?”, ಕಿರುಚಿದ ವಿದ್ವಾಂಸ.
ರಾಜನಾದರೋ ತಾನಿದ್ದಲ್ಲಿಂದಲೇ ವಿದ್ವಾಂಸನ ಮಗನಿಗೆ ಕೈಮುಗಿದು ಹೇಳಿದ, “ಇಂದಿನಿಂದ ನೀವೇ ನನ್ನ ಗುರುಗಳು!”
ಅದು ನನ್ನ ಸಮಸ್ಯೆ ಅಲ್ಲ!
ರೈತನೊಬ್ಬನ ಮನೆಯನ್ನೇ ತನ್ನ ಮನೆಯಾಗಿಸಿಕೊಂಡಿದ್ದ ಇಲಿಯೊಂದು ರೈತ ಹಾಗು ಆತನ ಹೆಂಡತಿ ಭಾಂಗಿಯೊದನ್ನು ಬಿಚ್ಚುತ್ತಿರುವುದನ್ನು ತನ್ನ ಅಡಗುದಾಣದಿಂದಲೇ ನೋಡುತ್ತಿತ್ತು. ಅದರೊಳಗಿನಿಂದ ಅವರು ಹೊರತೆಗೆದದ್ದು ಒಂದು ಇಲಿ ಬೋನು. ಇಲ್ಲಿ ತಕ್ಷಣ ಮನೆಯ ಹಿತ್ತಿಲಿಗೆ ಓಡಿಹೋಗಿ ಅಲ್ಲಿದ್ದ ಇತರ ಪ್ರಾಣಿಗಳಿಗೆ ಅಪಾಯದ ಮುನ್ಸೂಚನೆ ನೀಡಿತು: ಮನೆಯಲ್ಲೊಂದು ಇಲಿ ಬೋನಿದೆ, ಮನೆಯಲ್ಲೊಂದು ಇಲಿ ಬೋನಿದೆ.”
ಕೋಳಿ ತಲೆ ಎತ್ತಿ ಹೇಳಿತು: “ಇಲಿ ರಾಯರೇ ಅದು ನಿಮಗೆ ಚಿಂತಾಜನಕ ವಿಷಯ, ನನಗಲ್ಲ. ಅದರಿಂದ ನನಗೇನೂ ಅಪಾಯವಿಲ್ಲ. ಅದು ನನ್ನ ಸಮಸ್ಯೆಯೇ ಅಲ್ಲ. ಆ ಕುರಿತು ನಾನು ತಲೆಕೆಡಿಸಿಕೊಳ್ಳ ಬೇಕಾದ ಆವಶ್ಯಕತೆ ಇಲ್ಲ.”
ಹಂದಿ ಹೇಳಿತು: “ಇಲಿ ರಾಯರೇ ಕ್ಷಮಿಸಿ. ಅದು ನನ್ನ ಸಮಸ್ಯೆಯೇ ಅಲ್ಲ. ಅಷ್ಟೇ ಅಲ್ಲದೆ ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ, ಪ್ರಾರ್ಥನೆ ಮಾಡುವುದರ ಹೊರತಾಗಿ. ನಿಮಗೆ ಹಾನಿಯಾಗದಿರಲೆಂದು ನಾನು ಪ್ರಾರ್ಥನೆ ಮಾಡುವ ಭರವಸೆ ನೀಡುತ್ತೇನೆ.”
ಹಸು ಹೇಳಿತು: “ಇಲಿ ಬೋನೇ? ಅದರಿಂದ ನನಗೇನಾದರೂ ಅಪಾಯವಿದೆಯೇ? ಹಾಂ? ಅದು ನನ್ನ ಸಮಸ್ಯೆಯೇ ಅಲ್ಲ.”
ಇಲಿ ಬಲು ಬೇಸರದಿಂದ ಆದದ್ದಾಗಲೆಂದು ಮನೆಗೆ ಹಿಂದಿರುಗಿತು. ಆ ದಿನ ರಾತ್ರಿ ಇಲಿ ಬೋನಿಗೆ ಬೇಟೆ ಬಿದ್ದ ಸದ್ದಾಯಿತು. ಬೋನಿಗೆ ಬಿದ್ದ ಇಲಿಯನ್ನು ನೋಡಲು ರೈತನ ಹೆಂಡತಿ ಎದ್ದು ಓಡಿ ಬಂದಳು. ಕತ್ತಲೆಯಲ್ಲಿ ಬೋನಿಗೆ ಸಿಕ್ಕಿಹಾಕಿಕೊಂಡದ್ದು ಒಂದು ವಿಷಯುಕ್ತ ಹಾವಿನ ಬಾಲ ಎಂಬುದು ಅವಳಿಗೆ ತಿಳಿಯಲಿಲ್ಲ. ಹಾವು ಅವಳಿಗೆ ಕಚ್ಚಿತು. ರೈತನು ತಕ್ಷಣವೇ ಅವಳನ್ನು ಚಿಕಿತ್ಸಾಲಯಕ್ಕೆ ಒಯ್ದು ಚಿಕಿತ್ಸೆ ಕೊಡಿಸಿದನು. ಆಕೆ ಬದುಕಿ ಉಳಿದರೂ ಚಿಕತ್ಸಾಲಯದಿಂದ ಮನೆಗೆ ಮರಳುವಷ್ಟರಲ್ಲಿ ಭಯದ ಪರಿಣಾಮವಾಗಿ ಜ್ವರ ಪೀಡಿತಳಾದಳು. ಆ ಹಳ್ಳಿಯ ಪ್ರತಿಯೊಬ್ಬನಿಗೂ ಗೊತ್ತಿತ್ತು ಜ್ವರಕ್ಕೆ ಕೋಳಿ ಸಾರು ದಿವ್ಯೌಷಧ ಎಂಬ ವಿಷಯ. ದಿವ್ಯೌಷಧ ತಯಾರಿಸಲು ಬೇಕಾದ ಮುಖ್ಯ ಸಾಮಗ್ರಿ ಸಿದ್ಧಪಡಿಸಲು ಚಾಕು ಹಿಡಿದುಕೊಂಡು ರೈತ ಹಿತ್ತಿಲಿಗೆ ಹೋದನು! ಕೋಳಿ ಸಾರು ಕುಡಿದರೂ ಜ್ವರ ಕಮ್ಮಿ ಆಗಲಿಲ್ಲ. ರೈತನ ಹೆಂಡತಿಯ ಶುಶ್ರೂಷೆಗೋಸ್ಕರ ಬಂಧುಮಿತ್ರನೇಕರು ಬಂದು ರೈತನ ಮನೆಯಲ್ಲಿಯೇ ಉಳಿದುಕೊಂಡರು. ಅವರಿಗೆ ಆಹಾರ ಪೂರೈಸಲೋಸುಗ ರೈತ ಹಂದಿಯನ್ನು ಕೊಂದನು. ಕೊನೆಗೊಂದು ದಿನ ರೈತನ ಹೆಂಡತಿ ಸತ್ತು ಹೋದಳು. ಅಂತಿಮ ಸಂಸ್ಕಾರಕ್ಕೆ ಬಂದವರಿಗೆ ಭೋಜನಕ್ಕೋಸ್ಕರ ಹಸುವನ್ನೂ ರೈತ ಕೊಲ್ಲಬೇಕಾಯಿತು!
ಸಮುದಾಯದಲ್ಲಿ ಒಬ್ಬರು ಸಮಸ್ಯೆಯೊಂದನ್ನು ಎದುರಿಸಬೇಕಾದ ಸನ್ನಿವೇಶ ಉಂಟಾದಾಗ ಅದು ನಮ್ಮ ಸಮಸ್ಯೆ ಅಲ್ಲ ಎಂಬುದಾಗಿ ಉಳಿದವರು ಭಾವಿಸಿದ್ದರ ಪರಿಣಾಮ!!!
. ಮರುಭೂಮಿಯಲ್ಲಿ ಸ್ನೇಹಿತರು
ಇಬ್ಬರು ಸ್ನೇಹಿತರು ಮರುಭೂಮಿಯ ಮೂಲಕ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದರು. ಪ್ರಯಾಣಾವಧಿಯಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಬಿಸಿ ಚರ್ಚೆ ನಡೆಯಿತು. ಆ ಸಂದರ್ಭದಲ್ಲಿ ಒಬ್ಬ ಇನ್ನೊಬ್ಬನ ಕಪಾಳಮೋಕ್ಷ ಮಾಡಿದ. ಪೆಟ್ಟು ತಿಂದವ ಏನೂ ಹೇಳದೆ ಮರಳಿನ ಮೇಲೆ ಇಂತು ಬರೆದ: “ಇವತ್ತು ನನ್ನ ಅತ್ಯುತ್ತಮ ಸ್ನೇಹಿತನೊಬ್ಬ ನನಗೆ ಕಪಾಳಮೋಕ್ಷ ಮಾಡಿದ.”
ತದನಂತರ ಇಬ್ಬರೂ ಮೌನವಾಗಿ ಪ್ರಯಾಣ ಮುಂದುವರಿಸಿದರು. ದಾರಿಯಲ್ಲಿ ಒಂದು ಓಯಸಿಸ್‌ ಸಿಕ್ಕಿತು. ಇಬ್ಬರೂ ಅದರಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ಓಯಸಿಸ್‌ನ ಜವುಗು ತಳದಲ್ಲಿ ಕಪಾಳಮೋಕ್ಷ ಮಾಡಿಸಿಕೊಂಡವ ಸಕ್ಕಿಹಾಕಿಕೊಂಡು ಮುಳುಗಲಾರಂಭಿಸಿದ. ತಕ್ಷಣವೇ ಅವನ ಸ್ನೇಹಿತ ಅವನನ್ನು ರಕ್ಷಿಸಿದ. ತುಸು ಸುಧಾರಿಸಿಕೊಂಡ ನಂತರ ಆತ ಅಲ್ಲಿಯೇ ಇದ್ದ ಒಂದು ಬಂಡೆಯ ಮೇಲೆ ಇಂತು ಕೆತ್ತಿದ:  “ಇವತ್ತು ನನ್ನ ಅತ್ಯುತ್ತಮ ಸ್ನೇಹಿತನೊಬ್ಬ ನನ್ನ ಪ್ರಾಣ ಉಳಿಸಿದ.”
ನೋವುಂಟು ಮಾಡಿದಾಗ ಮರಳಿನಲ್ಲಿಯೂ ರಕ್ಷಿಸಿದಾಗ ಬಂಡೆಯ ಮೇಲೂ ಬರೆಯಲು ಕಾರಣವೇನು ಎಂಬ ಪ್ರಶ್ನೆ ಕೇಳಿದಾಗ ಅವನು ನೀಡಿದ ಉತ್ತರ ಇಂತಿತ್ತು: “ನೋವುಂಟು ಮಾಡಿದ್ದನ್ನು ಕ್ಷಮಾಪಣೆಯ ಗಾಳಿ ಅಳಿಸಿ ಹಾಕಲಿ ಎಂಬುದಕ್ಕೋಸ್ಕರ ಮರಳಿನಲ್ಲಿಯೂ ಒಳಿತನ್ನು ಮಾಡಿದಾಗ ಯಾವ ಗಾಳಿಯೂ ಎಂದಿಗೂ ಅಳಿಸಿ ಹಾಕದಂತೆ ಮಾಡಲೋಸುಗ ಕಲ್ಲಿನಲ್ಲಿಯೂ ದಾಖಲಿಸಬೇಕು.”
ನರಿಯೂ ಹುಲಿಯೂ
ನರಿಯೊಂದು ದುರದೃಷ್ಟವಶಾತ್ ಕಾಡಿನಲ್ಲಿ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ಹುಲಿಗೆ ಮುಖಾಮುಖಿಯಾಯಿತು. ಹುಲಿಯು ನರಿಯನ್ನು ಕೊಲ್ಲಲು ತಯಾರಿ ನಡೆಸಿದ್ದಾಗ ಪ್ರಾಣಾಪಾಯವಿದ್ದಾಗ್ಯೂ ಅಂಜದೆ ಹುಲಿಗೆ ನರಿ ಇಂತೆಂದಿತು: “ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವೆಯಲ್ಲ, ನಿನಗೆಷ್ಟು ಧೈರ್ಯ?”
ಆಶ್ಚರ್ಯಚಕಿತವಾದ ಹುಲಿ ವಿಚಾರಿಸಿತು, “ಏಕೆ ಕೊಲ್ಲಬಾರದು?”
ನರಿ ಧ್ವನಿ ಏರಿಸಿ ಹೆಮ್ಮೆಯಿಂದ ಇಂತೆಂದಿತು: “ನಿನಗೆ ನನ್ನ ಕುರಿತಾದ ನಿಜಸಂಗತಿ ಬಹುಶಃ ತಿಳಿದಿಲ್ಲ. ಈ ಕಾಡಿನ ಸಮಸ್ತ ಪ್ರಾಣಿಗಳಿಗೆ ರಾಜ ಎಂಬುದಾಗಿ ದೇವರು ನನ್ನನ್ನು ಮಾನ್ಯ ಮಾಡಿದ್ದಾರೆ! ನೀನು ನನ್ನನ್ನು ಕೊಂದರೆ ದೇವರ ಅವಕೃಪೆಗೆ ಪಾತ್ರನಾಗುವೆ, ಇದು ನಿನಗೆ ತಿಳಿದಿರಲಿ.”
ಹುಲಿಗೆ ನರಿಯ ಮಾತಿನಲ್ಲಿ ನಂಬಿಕೆ ಉಂಟಾಗಲಿಲ್ಲ. ಇದನ್ನು ಗಮನಿಸಿದ ನರಿ ಇಂತು ಹೇಳಿತು: “ನಾನು ಹೇಳಿದ್ದು ಸುಳ್ಳೋ ನಿಜವೋ ಎಂಬುದನ್ನು ಪರೀಕ್ಷಿಸಬೇಕಾದರೆ ಕಾಡಿನಲ್ಲಿ ಸುತ್ತಾಡೋಣ. ನೀನು ನನ್ನ ಹಿಂದೆಯೇ ಬಾ. ಇತರ ಎಲ್ಲ ಪ್ರಾಣಿಗಳು ನನ್ನನ್ನು ಕಂಡರೆ ಎಷ್ಟು ಹೆದರುತ್ತವೆ ಎಂಬುದು ನಿನಗೇ ತಿಳಿಯುತ್ತದೆ.”
ಹುಲಿ ಇದಕ್ಕೆ ಸಮ್ಮತಿಸಿತು. ನರಿ ಬಲು ಜಂಬದಿಂದ ಹಾಗು ರಾಜಠೀವಿಯಿಂದ ಕಾಡಿನಲ್ಲಿ ನಡೆಯಲಾರಂಭಿಸಿತು, ಅದರ ಬೆನ್ನ ಹಿಂದೆಯೇ ಹುಲಿಯೂ ಇತ್ತು. ನರಿಯ ಹಿಂದೆಯೇ ಬರುತ್ತಿದ್ದ ಹುಲಿಯನ್ನು ನೋಡಿ ಕಾಡಿನ ಪ್ರಾಣಿಗಳೆಲ್ಲವೂ ಹೆದರಿ ಓಡಿಹೋಗುತ್ತಿದ್ದವು. ತುಸು ಸಮಯದ ನಂತರ ನರಿ ಹುಲಿಯತ್ತ ಅರ್ಥಗರ್ಭಿತ ನೋಟ ಬೀರಿತು. “ನೀನೇ ಈ ಕಾಡಿನ ರಾಜ ಎಂಬುದಾಗಿ ನೀನು ಹೇಳಿದ್ದು ನಿಜವಿರಬೇಕು,” ಎಂಬುದಾಗಿ ಉದ್ಗರಿಸಿದ ಹುಲಿ ನರಿಯನ್ನು ಬಿಟ್ಟು ಬೇರೆ ದಿಕ್ಕಿಗೆ ಹೋಯಿತು!
ಗೋಡೆಯಲ್ಲೊಂದು ತೂತು
ಬಲು ಬೇಗನೆ ಸಿಡಿಮಿಡಿಗುಟ್ಟುವ ಸ್ವಭಾವದ ಬಾಲಕನೊಬ್ಬನಿದ್ದ. ಅವನ ತಂದೆ ಅವನಿಗೆ ಒಂದು ಚೀಲ ಮೊಳೆಗಳನ್ನು ಕೊಟ್ಟು ಹೇಳಿದ, “ನಿನಗೆ ಕೋಪ ಬಂದಾಗಲೆಲ್ಲ ಸುತ್ತಿಗೆಯಿಂದ ಮನೆಯ ಹಿತ್ತಿಲಿನ ಆವರಣದ ಗೋಡೆಗೆ ಒಂದು ಮೊಳೆ ಹೊಡೆ.”
ಮೊದಲನೆಯ ದಿವಸ ಬಾಲಕ ೩೭ ಮೊಳೆಗಳನ್ನು ಹೊಡೆದ. ಮುಂದಿನ ಕೆಲವು ವಾರಗಳಲ್ಲಿ ಬಾಲಕ ನಿಧಾನವಾಗಿ ತನ್ನ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಕಲಿಯಲಾರಂಭಿಸಿದ, ಕ್ರಮೇಣ ಕೋಪಿಸುಕೊಳ್ಳುವಿಕೆಯ ಸನ್ನಿವೇಶಗಳ ಸಂಖ್ಯೆಯೇ ಕಮ್ಮಿ ಆಗತೊಡಗಿತು. ತತ್ಪರಿಣಾಮವಾಗಿ ಗೊಡೆಗೆ ಹೊಡೆಯುವ ಮೊಳೆಗಳ ಸಂಖ್ಯೆಯೂ ಕಮ್ಮಿ ಆಗಲಾರಂಭಿಸಿತು. ಗೋಡೆಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ಕೋಪಿಸಿಕೊಳ್ಳದಿರುವುದು ಎಂಬುದು ಅವನ ಆವಿಷ್ಕಾರವಾಗಿತ್ತು. ಕೊನೆಗೊಮ್ಮೆ ಇಡೀ ದಿನ ಅವನು ಕೋಪಿಸಿಕೊಳ್ಳೇ ಇಲ್ಲ. ಈ ಸಂಗತಿಯನ್ನು ಅವನು ತನ್ನ ತಂದೆಗೆ ತಿಳಿಸಿದಾಗ ಅವನು ಹೇಳಿದ, “ಬಹಳ ಸಂತೋಷ. ಇನ್ನು ಮುಂದೆ ನೀನು ಎಂದು ಇಡೀ ದಿನ ಕೋಪಿಸಿಕೊಳ್ಳುವುದಿಲ್ಲವೋ ಅಂದು ಗೋಡೆಗೆ ಹೊಡೆದಿದ್ದ ಮೊಳೆಗಳ ಪೈಕಿ ಒಂದನ್ನು ಕಿತ್ತು ಹಾಕು.”
ಗೋಡೆಯಲ್ಲಿ ಒಂದೇ ಒಂದು ಮೊಳೆ ಇಲ್ಲದೇ ಇದ್ದ ದಿನವೂ ಕೊನೆಗೊಮ್ಮೆ ಬಂದಿತು. ಈ ಸಂಗತಿಯನ್ನು ತಿಳಿದ ಅವನ ತಂದೆ ಮಗನನ್ನು ಗೋಡೆಯ ಹತ್ತಿರ ಕರೆದೊಯ್ದು ಹೇಳಿದ, “ನೀನು ಕೋಪಿಸಿಕೊಳ್ಳದೇ ಇರುವುದನ್ನು ರೂಢಿಸಿಕೊಂಡದ್ದು ಬಲು ಸಂತಸದ ಸಂಗತಿ. ಆದಾಗ್ಯೂ ಗೋಡೆಯನ್ನೊಮ್ಮೆ ನೋಡು, ಎಷ್ಟೊಂದು ತೂತುಗಳಿವೆ. ನೀನು ಎಷ್ಟು ಬಾರಿ ಕ್ಷಮೆ ಕೇಳಿದರೂ ಗೋಡೆ ಮೊದಲಿನಂತಾಗುವುದಿಲ್ಲ. ಅದು ಮೊದಲಿನಂತಾಗಬೇಕಾದರೆ ನೀನು ಬಲು ಶ್ರಮಿಸಬೇಕು. ಕೋಪೋದ್ರಿಕ್ತನಾಗಿದ್ದಾಗ ಆಡುವ ಮಾತುಗಳೂ ಇಂತೆಯೇ ಸುಲಭವಾಗಿ ಅಳಿಸಲಾಗದ ಕಲೆಗಳನ್ನು ಉಂಟುಮಾಡುತ್ತವೆ!”
೧೦. ಗಿಳಿಯ ಸ್ವಾತಂತ್ರ್ಯ!
ಒಂದಾನೊಂದು ಕಾಲದಲ್ಲಿ ಸ್ವಾತಂತ್ರ್ಯ ಗಳಿಸಲೋಸುಗ ಹೋರಾಡುವವರ ಪರವಾಗಿ ಹೋರಾಡುತ್ತಿದ್ದ ಸ್ವಾತಂತ್ರ್ಯಪ್ರಿಯ ವ್ಯಕ್ತಿಯೊಬ್ಬನಿದ್ದ. ಅವನಿಗೆ ಪಂಜರಗಳಲ್ಲಿ ಪಕ್ಷಿಗಳನ್ನು ಕೂಡಿಹಾಕುವುದು ಇಷ್ಟವಿರಲಿಲ್ಲ. ಒಂದು ದಿನ ಅವನು ಚಿನ್ನದ ಪಂಜರದಲ್ಲಿ ಇದ್ದ ಗಿಳಿಯೊಂದನ್ನು ನೋಡಿದ. ಅದು ಹೆಚ್ಚುಕಮ್ಮಿ ನಿರಂತರವಾಗಿ “ಸ್ವಾತಂತ್ರ್ಯ, ಸ್ವಾತಂತ್ರ್ಯ” ಎಂಬುದಾಗಿ ಕಿರುಚುತ್ತಿತ್ತು. ಇದನ್ನು ಗಮನಿಸಿದ ಸ್ವಾತಂತ್ರ್ಯಪ್ರಿಯನು ಆ ಗಿಳಿ ಸ್ವಾತಂತ್ರ್ಯವನ್ನು ತೀವ್ರವಾಗಿ ಬಯಸುತ್ತಿರುವುದರಿಂದ ಅಂತು ನಿರಂತರವಾಗಿ ಕಿರುಚುತ್ತಿದೆ ಎಂಬುದಾಗಿ ಭಾವಿಸಿದ. ಅವನು ಆ ಗಿಳಿ ಇದ್ದ ಪಂಜರದ ಬಾಗಿಲನ್ನು ತೆರೆದಿಟ್ಟ, ಅದು ಹಾರಿಹೋಗುತ್ತದೆ ಎಂಬ ನಿರೀಕ್ಷೆಯಿಂದ. ಪಂಜರದ ಬಾಗಿಲು ತೆರೆದಿದ್ದರೂ ಆ ಗಿಳಿ ಪಂಜರದ ಸರಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಿರುಚುವುದನ್ನು ಮುಂದುವರಿಸುತ್ತಿದ್ದದ್ದನ್ನು ನೋಡಿ ಆತ ಆಶ್ಚರ್ಯಚಕಿತನಾದ.  ಅವನು ಆ ಗಿಳಿಯನ್ನು ಬಲವಂತವಾಗಿ ಹೊರಕ್ಕೆ ತೆಗದು ಅದನ್ನು ಹಾರಿಬಿಟ್ಟು ಹೇಳಿದ, “ಈಗ ನೀನು ನಿಜವಾಗಿ ಸ್ವತಂತ್ರವಾಗಿರುವೆ. ನಿನಗೆ ಬೇಕಾದಲ್ಲಿಗೆ ಹಾರಿಹೋಗು.” ಆ ಗಿಳಿಯಾದರೋ, ತುಸು ಕಾಲ ಅಲ್ಲಿ ಇಲ್ಲಿ ಹಾರಾಡಿ ಪುನಃ ಪಂಜರದೊಳಕ್ಕೆ ಬಂದು ಕುಳಿತು ಕಿರುಚುವುದನ್ನು ಮುಂದುವರಿಸಿತು!”
೧೧ವೈದ್ಯರ ಹತ್ತಿರ ಹೋಗಬೇಕಾದವರು ಯಾರು?
೨೪ ವರ್ಷ ವಯಸ್ಸಿನ ಯುವಕನೊಬ್ಬ ಚಲಿಸುತ್ತಿರುವ ರೈಲಿನ ಕಿಟಕಿಯಿಂದ ಹೊರಗೆ ನೋಡಿ ಕಿರುಚಿದ —
“ಅಪ್ಪಾ ಇಲ್ಲಿ ನೋಡು. ಮರಗಳು ಹೇಗೆ ಹಿಂದಕ್ಕೆ ಓಡುತ್ತಿವೆ ಎಂಬುದನ್ನು!?”
ಅಪ್ಪನ ಮುಖದಲ್ಲಿ ಮುಗುಳ್ನಗು ಕಾಣಿಸಿತು. ಪಕ್ಕದ ಆಸನದಲ್ಲಿ ಕುಳಿತಿದ್ದ ದಂಪತಿಗಳು ಯುವಕನ ಬಾಲಿಶ ವರ್ತನೆಯನ್ನು ‘ಅಯ್ಯೋ ಪಾಪ’ ಅನ್ನುವ ಮುಖಭಾವದಿಂದ ನೋಡುತ್ತಿದ್ದರು. ಅಷ್ಟರಲ್ಲಿಯೇ ಆ ಯುವಕ ಹಠಾತ್ತನೆ ಕಿರುಚಿದ —-
“ಅಪ್ಪಾ, ನೋಡು ನೋಡು. ಮೋಡಗಳು ನಮ್ಮೊಂದಿಗೇ ಹೇಗೆ ಓಡಿಕೊಂಡು ಬರುತ್ತಿವೆ ಎಂಬುದನ್ನು!”
ದಂಪತಿಗಳು ತಡೆಯಲಾಗದೆ ಆ ಯುವಕನ ತಂದೆಗೆ ಹೇಳಿದರು, “ನಿಮ್ಮ ಮಗನನ್ನು ಒಳ್ಳೆಯ ಮನೋವೈದ್ಯರಿಗೆ ಏಕೆ ತೋರಿಸಬಾರದು?”
“ನಾವೀಗ ಆಸ್ಪತ್ರೆಯಿಂದಲೇ ಮನೆಗೆ ಹಿಂದಿರುಗುತ್ತಿದ್ದೇವೆ. ನನ್ನ ಮಗ ಹುಟ್ಟಿನಿಂದಲೇ ಕುರುಡನಾಗಿದ್ದ. ಹೊಸ ಕಣ್ಣುಗಳನ್ನು ಕಸಿ ಮಾಡಿದ್ದರಿಂದ ಅವನಿಗೆ ಈಗಷ್ಟೇ ದೃಷ್ಟಿ ಬಂದಿದೆ!”
ಈಗ ನೀವೇ ಹೇಳಿ, ಮನೋವೈದ್ಯರನ್ನು ಕಾಣಬೇಕಾದದ್ದು ಯಾರು?
೧೨. ಆನೆಯೂ ಹಗ್ಗವೂ
ಒಂದೆಡೆ ವಯಸ್ಕ ಆನೆಗಳ ಮುಂಗಾಲಿಗೆ ಕಟ್ಟಿದ್ದ ಸಪುರ ಹಗ್ಗವನ್ನು ಸಮೀಪದಲ್ಲಿಯೇ ನೆಲಕ್ಕೆ ಊರಿದ್ದ ಮರದ ಪುಟ್ಟ ಗೂಟಗಳಿಗೆ ಕಟ್ಟಿ ಹಾಕಿದ್ದನ್ನು ಒಬ್ಬ ಪ್ರವಾಸಿ ನೋಡಿ ಆಶ್ಚರ್ಯಚಕಿತನಾದನು. ಆನೆಗಳು ಮನಸ್ಸು ಮಾಡಿದರೆ ಒಂದೇ ಕ್ಷಣದಲ್ಲಿ ಹಗ್ಗವನ್ನು ತುಂಡು ಮಾಡಿ ಸ್ವತಂತ್ರವಾಗಬಹುದಿತ್ತಾದರೂ ಅಂತು ಮಾಡದೆಯೇ ಅಲ್ಲಿಯೇ ಏಕೆ ನಿಂತಿವೆ ಎಂಬುದು ಪ್ರವಾಸಿಗೆ ಅರ್ಥವಾಗಲಿಲ್ಲ. ಆನೆಯ ಮಾವುತನನ್ನು ವಿಚಾರಿಸಿದಾಗ ಅವನು ಕಾರಣವನ್ನು ಇಂತು ವಿವರಿಸಿದ: “ಇವು ಮರಿಗಳಾಗಿದ್ದಾಗ ಕಟ್ಟಿ ಹಾಕುತ್ತಿದ್ದ ಹಗ್ಗಗಳು ಇವು. ಆಗ ಇವುಗಳನ್ನು ಬಂಧನದಲ್ಲಿ ಇಡಲು ಈ ಹಗ್ಗಗಳು ಸಾಕಾಗಿತ್ತು. ಅವು ಈಗ ಬೆಳೆದು ದೊಡ್ಡವಾಗಿದ್ದರೂ ಬಾಲ್ಯದ ಅನುಭವದ ಪ್ರಭಾವದಿಂದಾಗಿ ಈ ಹಗ್ಗಗಳನ್ನು ತುಂಡು ಮಾಡಿ ಓಡಿ ಹೋಗಲು ಸಾಧ್ಯವಿಲ್ಲ ಎಂಬುದಾಗಿ ನಂಬಿವೆ. ಎಂದೇ, ಅವು ಹಗ್ಗ ತುಂಡು ಮಾಡಲು ಪ್ರಯತ್ನಿಸುವುದೇ ಇಲ್ಲ!”
ಇದನ್ನು ಕೇಳಿ ಪ್ರವಾಸಿ ಮೂಕವಿಸ್ಮಿತನಾದ.
೧೩ಜಗತ್ತನ್ನು ಗೆಲ್ಲುವುದು
ಒಂದಾನೊಂದು ಕಾಲದಲ್ಲಿ ಬಲು ಶಕ್ತಿಶಾಲಿಯಾಗಿದ್ದ ರಾಜನೊಬ್ಬ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಬಯಕೆಯಿಂದ ದಂಡಯಾತ್ರೆ ಹೋಗಲು ತೀರ್ಮಾನಿಸಿದ. ಅವನ ಆಸ್ಥಾನದಲ್ಲಿದ್ದ ವಿವೇಕಿ ಸಲಹೆಗಾರನೊಬ್ಬ ಕೇಳಿದ, “ಮಹಾಪ್ರಭು, ಇಂತಹುದೊಂದು ತೀರ್ಮಾನ ಕೈಗೊಂಡದ್ದರ ಹಿಂದಿದ್ದ ಉದ್ದೇಶವೇನು?”
“ಇಡೀ ಏಷ್ಯಾ ಖಂಡದ ಪ್ರಭು ನಾನಾಗಲೋಸುಗ,” ಠೀವಿಯಿಂದ ಘೋಷಿಸಿದನು ರಾಜ.
“ಅದಾದ ನಂತರ?” ಕೇಳಿದ ಸಲಹೆಗಾರ.
“ಅರೇಬಿಯಾದ ಮೇಲೆ ದಾಳಿ ಮಾಡುತ್ತೇನೆ.”
“ಅದಾದ ನಂತರ?”
“ಯುರೋಪ್‌ ಹಾಗು ಆಫ್ರಿಕಾ ಖಂಡಗಳನ್ನು ಜಯಸಿತ್ತೇನೆ. ಅದೇ ರೀತಿಯಲ್ಲಿ ಇಡೀ ಪ್ರಪಂಚವನ್ನೇ ವಶಪಡಿಸಿಕೊಳ್ಳುತ್ತೇನೆ. ತದನಂತರ ಆರಾಮವಾಗಿ ನನ್ನ ಸಾಮ್ರಾಜ್ಯವನ್ನು ಆಳುತ್ತಾ ನಿಶ್ಚಿಂತೆಯಿಂದ ಇರುತ್ತೇನೆ.”
“ಆರಾಮವಾಗಿ ವಶದಲ್ಲಿ ಇರುವ ಸಾಮ್ರಾಜ್ಯವನ್ನು ಆಳುತ್ತಾ ನಿಶ್ಚಿಂತೆಯಿಂದ ಇರುವುದೇ ಗುರಿಯಾಗಿದ್ದಲ್ಲಿ ಅಪಾಯಕಾರೀ ದಂಡಯಾತ್ರೆ ಕೈಗೊಳ್ಳದೆಯೇ ಆ ಗುರಿ ಸಾಧಿಸಬಹುದಲ್ಲವೇ? ಅಗಾಧ ಪ್ರಮಾಣದಲ್ಲಿ ಪ್ರಾಣಹಾನಿಯಾಗುವುದೂ ತಪ್ಪುತ್ತದಲ್ಲವೇ?”
೧೪ಬಡ ಬಾಲಕ ಒಂದು ಕಪ್‌ ಐಸ್‌ ಕ್ರೀಮ್‌ ತಿಂದದ್ದು
ಬಹಳ ವರ್ಷಗಳ ಹಿಂದೆ ೧೦ ವರ್ಷ ವಯಸ್ಸಿನ ಬಡವನಂತೆ ತೋರುತ್ತಿದ್ದ ಬಾಲಕನೊಬ್ಬ ಐಸ್‌ ಕ್ರೀಮ್‌ ದೊರೆಯುವ ಉಪಾಹಾರಗೃಹಕ್ಕೆ ಹೋಗಿ ಒಂದೆಡೆ ಕುಳಿತು ನೀರಿನ ಲೋಟದೊಂದಿಗೆ ಬಂದ ಮಾಣಿಯನ್ನು ಕೇಳಿದ: “ಒಂದು ಐಸ್‌ ಕ್ರೀಮ್‌ ಸಂಡೇ ಬೆಲೆ ಎಷ್ಟು?”
“೫೦ ಪೈಸೆ,” ತಿಳಿಸಿದ ಮಾಣಿ.
ಬಾಲಕ ತನ್ನ ಚಡ್ಡಿ ಜೇಬಿಗೆ ಕೈಹಾಕಿ ಅಲ್ಲಿದ್ದ ನಾಣ್ಯಗಳನ್ನು ಹೊರತೆಗೆದು ಎಣಿಸಿದ ನಂತರ ಪುನಃ ಕೇಳಿದ, “ಸಾಮಾನ್ಯ ಐಸ್‌ ಕ್ರೀಮ್‌ನದ್ದು?”
ಇತರ ಗಿರಾಕಿಗಳತ್ತ ಹೋಗಲು ತಡವಾಗುತ್ತದೆಂಬ ಕಾರಣಕ್ಕಾಗಿ ಮಾಣಿ ತುಸು ತಾಳ್ಮೆ ಕಳೆದುಕೊಂಡು ಒರಟಾಗಿ ಹೇಳಿದ, “೩೫ ಪೈಸೆ.”
ಬಾಲಕ ತನ್ನಲ್ಲಿದ್ದ ನಾಣ್ಯಗಳನ್ನು ಮತ್ತೊಮ್ಮೆ ಎಣಿಸಿ ನೋಡಿ ಹೇಳಿದ, “ನನಗೆ ಒಂದು ಸಾಮಾನ್ಯ ಐಸ್‌ ಕ್ರೀಮ್‌ ಕೊಡಿ.”
ಮಾಣಿ ಒಂದು ಕಪ್‌ ಐಸ್‌ ಕ್ರೀಮ್‌ ಹಾಗು ಅದರ ಬಿಲ್‌ ತಂದು ಮೇಜಿನ ಮೇಲಿಟ್ಟು ಬೇರೆ ಗಿರಾಕಿಗಳತ್ತ ಹೋದ. ಬಾಲಕ ಐಸ್‌ ಕ್ರೀಮ್‌ ತಿಂದು ಮುಗಿಸಿ, ನಗದು ಮುಂಗಟ್ಟೆಯಲ್ಲಿ ಬಿಲ್‌ ಹಣ ಪಾವತಿಸಿ ಹೊರ ನಡೆದ.
ಬಾಲಕ ಕುಳಿತಿದ್ದ ಮೇಜು ಒರೆಸಿ ಕಪ್‌ ತೆಗೆದುಕೊಂಡು ಹೋಗಲು ಬಂದ ಮಾಣಿಯು ಮೇಜಿನ ಮೇಲೆ ಭಕ್ಷೀಸಿನ ಬಾಬ್ತು ೧೫ ಪೈಸೆಗಳನ್ನು ಬಾಲಕ ಇಟ್ಟು ಹೋಗಿರುವುದನ್ನು ಗಮನಿಸಿ ಮೂಕವಿಸ್ಮಿತನಾದ.
೧೫ಗುಂಡಿಯೊಳಕ್ಕೆ ಬಿದ್ದ ಕತ್ತೆ
ಒಬ್ಬಾತನಿಗೆ ಬಲು ಪ್ರಿಯವಾಗಿದ್ದ ಕತ್ತೆಯೊಂದು ತುಸು ಆಳವಾದ ಗುಂಡಿಯೊಳಕ್ಕೆ ಅಕಸ್ಮಾತ್ತಾಗಿ ಬಿದ್ದಿತು. ಆದರೂ ಅದಕ್ಕೆ ತೀವ್ರವಾದ ಪೆಟ್ಟೇನೂ ಆಗಿರಲಿಲ್ಲ. ಅಷ್ಟೇ ಅಲ್ಲದೆ ಅದರ ಕುತ್ತಿಗೆಗೆ ಕಟ್ಟಿದ್ದ ಹಗ್ಗದ ತುದಿ ಮಾಲೀಕನ ಕೈನಲ್ಲಿಯೇ ಇತ್ತು. ಕತ್ತೆಯನ್ನು ಹಗ್ಗದ ನೆರವಿನಿಂದ ಗುಂಡಿಯಿಂದ ಮೇಲೆತ್ತಲು ಮಾಲೀಕ ಎಷ್ಟು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಬೇಸತ್ತ ಮಾಲಿಕ ಕತ್ತೆಯನ್ನು ಅದೇ ಗುಂಡಿಯಲ್ಲಿ ಜೀವಂತವಾಗಿಯೇ ಸಮಾಧಿ ಮಾಡಲು ನಿರ್ಧರಿಸಿದ. ಗುದ್ದಲಿಯಿಂದ ಮಣ್ಣು ಅಗೆದು ಗುಂಡಿಯಲ್ಲಿದ್ದ ಕತ್ತೆಯ ಮೇಲೆ ಸುರಿಯಲಾರಂಭಿಸಿದ. ಬೆನ್ನ ಮೇಲೆ ಬಿದ್ದ ಮಣ್ಣನ್ನು ಮೈಕೊಡವಿ ಕೆಳಕ್ಕೆ ಹಾಕಲಾರಂಭಿಸಿತು ಕತ್ತೆ. ಕೆಳಗೆ ಮಣ್ಣಿನ ದಪ್ಪನೆಯ ಪದರ ಉಂಟಾದಾಗ ಕತ್ತೆ ಅದರ ಮೇಲೆ ಹತ್ತಿ ನಿಲ್ಲುತ್ತಿತ್ತು. ಮಧ್ಯಾಹ್ನದ ವೇಳೆಗೆ ಕತ್ತೆ ಗುಂಡಿಯ ಹೊರಗಿದ್ದ ಬಯಲ್ಲಿನಲ್ಲಿ ಹುಲ್ಲು ಮೇಯುತ್ತಿತ್ತು, ಮಾಲೀಕ ಅಚ್ಚರಿಯಿಂದ ಕತ್ತೆಯನ್ನು ನೋಡುತ್ತಿದ್ದ.
೧೬ಜೇಡಿಮಣ್ಣಿನ ಚೆಂಡುಗಳು
ಒಬ್ಬ ಅನ್ವೇಷಕನಿಗೆ ಸಮುದ್ರಕಿನಾರೆಯಲ್ಲಿದ್ದ ಗುಹೆಯೊಂದರಲ್ಲಿ ಒಂದು ಚೀಲದಲ್ಲಿ ಗಟ್ಟಿಯಾಗಿದ್ದ ಜೇಡಿಮಣ್ಣಿನ ಚೆಂಡುಗಳು ಸಿಕ್ಕಿತು. ನೋಡಲು ಅವೇನೂ ಬೆಲೆಬಾಳುವ ವಸ್ತುಗಳಂತಾಗಲೀ ಸುಂದರವಾದ ಚೆಂಡುಗಳಂತಾಗಲೀ ತೋರದಿದ್ದರೂ ಅನ್ವೇಷಕನ ಆಸಕ್ತಿಯನ್ನು ಕೆರಳಿಸಿದವು. ಎಂದೇ ಅವನು ಆ ಚೆಂಡುಗಳಿದ್ದ ಚೀಲವನ್ನು ತನ್ನೊಡನೆ ಹೊತ್ತೊಯ್ದನು.
ತದನಂತರ ಸಮುದ್ರ ತೀರದ ಮರಳದಂಡೆಯಲ್ಲಿ ಆತ ಅಡ್ಡಾಡುತ್ತಿರುವಾಗ ಚೀಲದಿಂದ ಚೆಂಡುಗಳನ್ನು ಒಂದೊಂದಾಗಿ ಹೊರತೆಗೆದು ಎಷ್ಟು ದೂರಕ್ಕೆ ಸಾಧ್ಯವೋ ಅಷ್ಟು ದೂರಕ್ಕೆ ಎಸೆಯಲಾರಂಭಿಸಿದನು. ತುಸು ಸಮಯ ಕಳೆದ ನಂತರ ಎಸೆಯಲೋಸುಗ ಕೈನಲ್ಲಿ ಹಿಡಿದುಕೊಂಡಿದ್ದ ಚೆಂಡೊಂದು ಆಕಸ್ಮಿಕವಾಗಿ ಕೈನಿಂದ ಜಾರಿ ಕೆಳಗೆ ಬಿದ್ದು ಒಡೆಯಿತು. ಆಗ ಚೆಂಡಿನ ಒಳಗೆ ಒಂದು ಬಲು ಸುಂದರವಾದ ಅಮೂಲ್ಯ ರತ್ನವೊಂದು ಗೋಚರಿಸಿತು.
ಇದರಿಂದ ಉತ್ತೇಜಿತನಾದ ಆತ ಚೀಲದಲ್ಲಿ ಉಳಿದಿದ್ದ ಚೆಂಡುಗಳನ್ನು ಒಂದೊಂದಾಗಿ ತೆಗೆದು ಒಡೆದು ನೋಡಲಾರಂಭಿಸಿದ. ಬಿಸಾಡದೇ ಉಳಿದಿದ್ದ ೨೦ ಚೆಂಡುಗಳಲ್ಲಿ ಪ್ರತಿಯೊಂದರೊಳಗೂ ಅಮೂಲ್ಯ ರತ್ನವಿತ್ತು. ಇಂತು ಲಕ್ಷಗಟ್ಟಲೆ ರೂಪಾಯಿ ಮೌಲ್ಯದ ರತ್ನಗಳು ಅವನದಾದವು. ಆ ವರೆಗೆ ಬಿಸಾಡಿದ್ದ ಸುಮಾರು ೫೦ ಅಥವ ೬೦ ಚೆಂಡುಗಳಲ್ಲಿ ಪ್ರತಿಯೊಂದರಲ್ಲಿಯೂ ರತ್ನವಿದ್ದಿರಬೇಕು ಎಂಬುದಾಗಿ ಆಗ ಅವನು ಆಲೋಚಿಸಿದ. ಚೆಂಡುಗಳು ಸಿಕ್ಕಿದ ತಕ್ಷಣವೇ ಅವು ಜೇಡಿಮಣ್ಣಿನ ಚೆಂಡುಗಳು ಎಂಬುದಾಗಿ ನಿರ್ಲಕ್ಷಿಸದೆ ಪರೀಕ್ಷಿಸಿದ್ದಿದ್ದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ರತ್ನಗಳು ತನ್ನದಾಗುತ್ತಿದ್ದವು ಎಂಬುದಾಗಿ ಕೊರಗಿದ.
೧೭ಬಡವ-ಶ್ರೀಮಂತ
ಶ್ರೀಮಂತನೊಬ್ಬ ತನ್ನ ಮಗನಿಗೆ ತೀವ್ರ ಬಡತನ ಅಂದರೇನು ಎಂಬುದು ತಿಳಿಯಲಿ ಎಂಬ ಉದ್ದೇಶದಿಂದ ಅವನನ್ನು ಗ್ರಾಮೀಣ ಪ್ರದೇಶಕ್ಕೆ ಕರೆದೊಯ್ದ. ಬಲು ಬಡ ರೈತ ಕುಟುಂಬವೊಂದು ತಮ್ಮ ಪುಟ್ಟ ಜಮೀನಿನಲ್ಲಿ ಇದ್ದ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದದ್ದು ಅವರ ಗಮನಕ್ಕೆ ಬಂದಿತು. ಆ ಜಮೀನಿನಲ್ಲಿಯೇ ಶ್ರೀಮಂತ ಹಾಗು ಅವನ ಮಗ ಒಂದು ಹಗಲು ಮತ್ತು ಒಂದು ರಾತ್ರಿ ಕಳೆದರು. ಪ್ರವಾಸದಿಂದ ಹಿಂದಿರುಗಿದ ನಂತರ ತಂದೆ ಮಗನನ್ನು ಕೇಳಿದ, “ಪ್ರವಾಸ ಹೇಗಿತ್ತು?”
“ಬಲು ಚೆನ್ನಾಗಿತ್ತಪ್ಪ”
“ಜನ ಎಷ್ಟು ಬಡವರಾಗಿರಬಹುದು ಎಂಬುದು ತಿಳಿಯಿತಲ್ಲವೇ?”
“ತಿಳಿಯಿತು”
“ಈ ಕುರಿತು ನೀನೇನು ಕಲಿತೆ?”
“ನಮ್ಮ ಹತ್ತಿರ ಒಂದು ನಾಯಿ ಇದೆ, ಅವರ ಹತ್ತಿರ ನಾಲ್ಕುನಾಯಿಗಳು ಇದ್ದವು. ನಮ್ಮ ಹೂದೋಟದ ಮಧ್ಯದಲ್ಲಿ ಒಂದು ಕೊಳ ಇದೆ, ಅವರ ಮನೆಯ ಸಮೀಪದಲ್ಲಿ ಹರಿಯುವ ನೀರಿನಿಂದ ಕೂಡಿದ, ಆದಿ ಅಂತ್ಯಗಳು ಕಾಣಿಸದ ತೋಡು ಇದೆ. ನಮ್ಮ ಹೂದೋಟದಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ವಿದ್ಯುದ್ದೀಪಗಳಿವೆ, ಅವರ ಜಮೀನಿಗೆ ಬೆಳಕು ಬೀರುತ್ತವೆ ತಾರೆಗಳು. ನಮ್ಮ ಮನೆಯ ತೆರೆದ ಒಳಾಂಗಣ ಮನೆಯ ಮುಂದಿನ ಪ್ರಾಂಗಣವನ್ನು ಸ್ಪರ್ಶಿಸುತ್ತದೆ, ಅವರದ್ದರ ಮುಂದಿದೆ ಇಡೀ ಕ್ಷಿತಿಜ.”
ಮಗನ ವಿವರಣೆ ಕೇಳಿದ ಶ್ರೀಮಂತ ತಂದೆಗೆ ಎಂತು ಪ್ರತಿಕ್ರಿಯೆ ತೋರಬೇಕೆಂಬುದು ಹೊಳೆಯದೆ ಅಚ್ಚರಿಯಿಂದ ಮಗನನ್ನು ಪೆದ್ದುಪೆದ್ದಾಗಿ ನೋಡಿದ.
“ಧನ್ಯವಾದಗಳು ಅಪ್ಪಾ, ನಾವೆಷ್ಟು ಬಡವರು ಎಂಬುದನ್ನು ತೋರಿಸಿ ಕೊಟ್ಟದ್ದಕ್ಕಾಗಿ!” ಒಗ್ಗರಣೆ ಹಾಕಿ ಸಂಭಾಷಣೆ ಮುಗಿಸಿದ ಮಗ.
೧೮. ವಿವೇಕಿ ಹೆಂಗಸು ಮತ್ತು ಯಾತ್ರಿಕ
ಪರ್ವತ ಪ್ರದೇಶದಲ್ಲಿ ಪಯಣಿಸುತ್ತಿದ್ದ ವಿವೇಕಿ ಹೆಂಗಸೊಬ್ಬಳಿಗೆ ತೊರೆಯೊಂದರಲ್ಲಿ ಅಮೂಲ್ಯ ರತ್ನವೊಂದು ಸಿಕ್ಕಿತು. ಮಾರನೆಯ ದಿವಸ ಹಸಿದಿದ್ದ ಯಾತ್ರಿಕನೊಬ್ಬನನ್ನು ಅವಳು ಸಂಧಿಸಿದಳು. ತನ್ನ ಹತ್ತಿರವಿದ್ದ ಆಹಾರವನ್ನು ಅವನೊಂದಿಗೆ ಹಂಚಿಕೊಳ್ಳುವ ಸಲುವಾಗಿ ಕೈಚೀಲವನ್ನು ತೆರೆದಾಗ ಅದರಲ್ಲಿ ಇದ್ದ ಅಮೂಲ್ಯ ರತ್ನವನ್ನು ಯಾತ್ರಿಕ ನೋಡಿದ. ಆ ರತ್ನವನ್ನು ತನಗೆ ನೀಡುವಂತೆ ಅವನು ಅವಳನ್ನು ಕೇಳಿಕೊಂಡ. ಒಂದಿನಿತೂ ಹಿಂದುಮುಂದು ನೋಡದೆ ಆಕೆ ಅದನ್ನು ಅವನಿಗೆ ಕೊಟ್ಟಳು. ಆ ಅಮೂಲ್ಯ ರತ್ನವನ್ನು ಮಾರಿದರೆ ಜೀವಮಾನ ಪೂರ್ತಿ ಆರಾಮವಾಗಿ ಇರುವಷ್ಟು ಸಂಪತ್ತು ದೊರೆಯುತ್ತದೆ ಎಂಬುದು ಅವನಿಗೆ ತಿಳಿದಿತ್ತು. ಎಂದೇ ಅವನು ಬಲು ಆನಂದದಿಂದ ಆ ರತ್ನವನ್ನು ತೆಗೆದುಕೊಂಡು ತೆರಳಿದನು. ಕೆಲವು ದಿವಸಗಳು ಕಳೆದ ನಂತರ ಅವನು ಪುನಃ ಅವಳನ್ನು ಹುಡುಕಿಕೊಂಡು ಬಂದು ಹೇಳಿದ, “ಈ ರತ್ನದ ಬೆಲೆ ಎಷ್ಟು ಎಂಬುದು ನನಗೆ ತಿಳಿದಿದೆ. ಆದರೂ ಅದನ್ನು ನಿನಗೆ ಹಿಂದಿರುಗಿಸಲು ಬಂದಿದ್ದೇನೆ, ಇನ್ನೂ ಅಮೂಲ್ಯವಾದದ್ದನ್ನು ನೀನು ನನಗೆ ಕೊಡುವೆ ಎಂಬ ನಿರೀಕ್ಷೆಯೊಂದಿಗೆ. ಈ ಅಮೂಲ್ಯ ರತ್ನವನ್ನು ಸುಲಭವಾಗಿ ನನಗೆ ಕೊಡುವಂತೆ ಮಾಡಿದ್ದು ಯಾವುದೋ ಅದನ್ನು ನನಗೆ ಕೊಡು!”
೧೯. ನನಗೆ ವಿಮೋಚನೆ ಬೇಕು.
ಶಿಷ್ಯನಾಗಲೋಸುಗ ತನ್ನ ಹತ್ತಿರ ಬಂದ ಬಂದವನೊಬ್ಬನನ್ನು ಗುರುಗಳು ಕೇಳಿದರು, “ನಿನಗೇನು ಬೇಕು?”
“ನನಗೆ ವಿಮೋಚನೆ ಬೇಕು?”
“‘ನಾನು’ ಅನ್ನುವುದು ಅಹಂ. ‘ಬೇಕು’ ಅನ್ನುವುದು ಆಸೆ. ಅಂದಮೇಲೆ ನೀನು ವಿಮೋಚನೆಗೆ ಅರ್ಹನೋ?”
೨೦ಒಗೆದರೂ ಕೊಳಕಾಗಿರುವ ಬಟ್ಟೆಗಳು
ಬಹುಮಹಡಿ ವಸತಿಗೃಹ ಸಂಕೀರ್ಣವೊಂದರಲ್ಲಿ ಒಂದು ವಸತಿಗೃಹವನ್ನು ನವದಂಪತಿಗಳು ಬಾಡಿಗೆಗೆ ಪಡೆದು ಬಂದು ನೆಲಸಿದರು. ಮೊದಲನೆಯ ದಿನ ಬೆಳಗ್ಗೆ ಪತ್ನಿ ಬೆಳಗಿನ ಕಾಫಿ ಕುಡಿಯುತ್ತಾ ತನ್ನ ಮನೆಯ ಕಿಟಕಿಯಿಂದ ಹೊರನೋಡಿದಾಗ ಎದುರುಮನೆಯಾಕೆ ಆಗಷ್ಟೇ ಒಗೆದ ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದದ್ದನ್ನು ನೋಡಿದಳು. “ಬಟ್ಟೆಗಳು ಎಷ್ಟು ಕೊಳಕಾಗಿವೆ! ಬಹುಶಃ ಆಕೆಗೆ ಮಾರ್ಜಕವನ್ನು ಸರಿಯಾಗಿ ಉಪಯೋಗಿಸಲು ಬರುವುದಿಲ್ಲವೇನೋ ಅಥವ ಕಳಪೆ ಗುಣಮಟ್ಟದ ಮಾರ್ಜಕ ಉಪಯೋಗಿಸತ್ತಿರಬೇಕು,” ಎಂದೆಲ್ಲ ಅವಳು ತನ್ನ ಗಂಡನಿಗೆ ಹೇಳಿದಳು. ಈ ವಿದ್ಯಮಾನ ಸುಮಾರು ಒಂದು ತಿಂಗಳ ಕಾಲ ಜರಗಿತು. ಒಂದು ದಿನ ಎದುರುಮನೆಯಾಕೆ ಒಣಗಲು ಹಾಕುತ್ತಿದ್ದ ಬಟ್ಟೆಗಳು ಬಲು ಶುಭ್ರವಾಗಿದ್ದ್ದನ್ನು ಕಂಡು ಆಶ್ಚರ್ಯವಾಯಿತು. “ಈಗ  ಆಕೆ ಬಟ್ಟೆಗಳನ್ನು ಸರಿಯಾಗಿ ಒಗೆಯುವುದನ್ನು ಕಲಿತಂತಿದೆ,” ಎಂಬುದಾಗಿ ಗಂಡನಿಗೆ ಹೇಳಿದಳು. ಆತ ಮೆಲ್ಲಗೆ ಉಸುರಿದ, “ಈ ದಿನ ಬೆಳಗ್ಗೆ ನಾನು ಬೇಗನೆ ಎದ್ದದ್ದರಿಂದ ಕಿಟಕಿಯ ಗಾಜುಗಳನ್ನು ಸ್ವಚ್ಛಗೊಳಿಸಿದೆ!”
೨೧ಇನ್ನು ನಗಲು ಸಾಧ್ಯವಿಲ್ಲ ಅನ್ನುವ ವರೆಗೆ ನಗುವುದು
ವಿವೇಕಿಯೊಬ್ಬ ತನ್ನ ಉಪನ್ಯಾಸದ ನಡುವೆ ಒಂದು ನಗೆ ಚಟಾಕಿ ಸಿಡಿಸಿದ.
ಶ್ರೋತೃಗಳೆಲ್ಲರೂ ಹುಚ್ಚು ಹಿಡಿದವರಂತೆ ನಕ್ಕರು. ಒಂದೆರಡು ನಿಮಿಷಗಳ ನಂತರ ಆತ ಅದೇ ನಗೆ ಚಟಾಕಿಯನ್ನು ಪುನಃ ಸಿಡಿಸಿದ. ಈ ಸಲ ಮೊದಲಿಗಿಂತ ಕಮ್ಮಿ ಸಂಖ್ಯೆಯ ಶ್ರೋತೃಗಳು ನಕ್ಕರು. ಒಂದೆರಡು ನಿಮಿಷಗಳ ನಂತರ ಆತ ಅದೇ ನಗೆ ಚಟಾಕಿಯನ್ನು ಪುನಃ ಪುನಃ ಅನೇಕ ಸಲ ಸಿಡಿಸಿದ. ಕೊನೆಗೊಂದು ಸಲ ಯಾರೂ ನಗಲಿಲ್ಲ.
ವಿವೇಕಿ ನಸುನಕ್ಕು ಕೇಳಿದ, “ಒಂದೇ ನಗೆ ಚಟಾಕಿಯನ್ನು ಪುನಃ ಪುನಃ ಸಿಡಿಸಿದರೆ ನಿಮಗೆ ನಗಲು ಸಾಧ್ಯವಾಗುವುದಿಲ್ಲ ಅನ್ನುವುದಾದರೆ ಒಂದೇ ಸಂಗತಿಗೆ ಸಂಬಂಧಿಸಿದಂತೆ ಪುನಃ ಪುನಃ ಅಳಲು ನಿಮಗೆ ಹೇಗೆ ಸಾಧ್ಯವಾಗುತ್ತದೆ?”
೨೨. ಜೀವನವು ಒಂದು ಕಪ್‌ ಕಾಫಿಯಂತೆ
ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಗುಂಪೊಂದು ನಿವೃತ್ತ ಜೀವನ ನಡೆಸುತ್ತಿದ್ದ ತಮ್ಮ ಪ್ರಾಧ್ಯಾಪಕರೊಬ್ಬರನ್ನು ಭೇಟಿ ಮಾಡಲೋಸುಗ ಅವರ ಮನೆಗೆ ಹೋದರು. ಆ ವಿದ್ಯಾರ್ಥಿಗಳೆಲ್ಲರೂ ತಮ್ಮ ವೃತ್ತಿಯಲ್ಲಿ ಬಲು ಯಶಸ್ವಿಗಳಾಗಿದ್ದರು. ಬಲು ಬೇಗನೆ ಅವರ ಸಂಭಾಷಣೆ ಜೀವನ ಹಾಗು ವೃತ್ತಿಯಲ್ಲಿ ಎದುರಿಸಬೇಕಾದ ಒತ್ತಡದ ಕುರಿತಾದ ದೂರುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಸೀಮಿತವಾಯಿತು.
ಪ್ರಾಧ್ಯಪಕರು ಅಡುಗೆ ಮನೆಗೆ ಹೋಗಿ ತಮ್ಮ ಅತಿಥಿಗಳಿಗೆ ಕೊಡಲೋಸುಗ ಒಂದು ದೊಡ್ಡ ಚೆಂಬು‌ ಕಾಫಿಯನ್ನೂ ನಾನಾ ರೀತಿಯ – ಪಿಂಗಾಣಿಯವು, ಗಾಜಿನವು, ಪ್ಲಾಸ್ಟಿಕ್‌ನವು, ಸ್ಫಟಿಕದವು, ಸರಳವಾಗಿ ಕಾಣುತ್ತಿದ್ದವು, ಬಹಳ ಬೆಲೆಬಾಳುವಂಥವು, ಬಲು ಸೊಗಸಾದವು – ಕಪ್‌ಗಳನ್ನೂ ತಂದು ಮೇಜಿನ ಮೇಲಿಟ್ಟರು. ತಾವೇ ಕಪ್‌ ತೆಗೆದುಕೊಂಡು ಅದಕ್ಕೆ ಕಾಫಿ ಬಗ್ಗಿಸಿಕೊಂಡು ಕುಡಿಯುವಂತೆ ವಿನಂತಿಸಿದರು ಪ್ರಾಧ್ಯಾಪಕರು.
ಎಲ್ಲರೂ ಅಂತೆಯೇ ಮಾಡಿ ಕಾಫಿ ಕುಡಿಯುತ್ತಿರುವಾಗ ಪ್ರಾಧ್ಯಾಪಕರು ಹೇಳಿದರು, “ನೀವೆಲ್ಲರೂ ಈಗ ಒಂದು ಅಂಶ ಗಮನಿಸಬೇಕು. ಇಲ್ಲಿರುವ ಕಪ್‌ಗಳ ಪೈಕಿ ಚೆನ್ನಾಗಿ ಕಾಣುವ ಬೆಲೆಬಾಳುವ ಹಾಗು ಸೊಗಸಾದ ಕಪ್‌ಗಳನ್ನು ನೀವು ಆಯ್ಕೆ ಮಾಡಿ ಸರಳವಾದವು ಹಾಗು ಅಗ್ಗದವನ್ನು ಬಿಟ್ಟಿದ್ದೀರಿ. ಅತ್ಯುತ್ತಮವಾದದ್ದೇ ನಮಗೆ ಬೇಕು ಎಂಬುದಾಗಿ ನೀವು ಆಲೋಚಿಸಿದ್ದು ಪ್ರಸಾಮಾನ್ಯವೇ ಆಗಿದ್ದರೂ ಅದೇ ನಿಮ್ಮ ಸಮಸ್ಯೆಗಳ ಹಾಗು ಒತ್ತಡದ ಆಕರವಾಗಿದೆ. ಕಾಫಿಯ ಗುಣಮಟ್ಟಕ್ಕೂ ಕಪ್‌ನ ಗುಣಮಟ್ಟಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದು ನಿಮಗೆ ತಿಳಿದಿದ್ದರೂ ನೀವು ಪ್ರಜ್ಞಾಪೂರ್ವಕವಾಗಿ ಅತ್ಯುತ್ತಮ ಕಪ್‌ ಆಯ್ಕೆ ಮಾಡಿದ್ದು ಮಾತ್ರವಲ್ಲದೆ ಇತರರು ಆಯ್ಕೆ ಮಾಡಿಕೊಂಡದ್ದು ನಿಮ್ಮದಕ್ಕೆ ಹೋಲಿಸಿದಾಗ ಹೇಗಿದೆ ಎಂಬುದನ್ನು ನಿರ್ಧರಿಸಲು ಕಳ್ಳನೋಟ ಬೀರಿದಿರಿ.
ಈಗ ನಾನು ಹೇಳುವುದನ್ನು ಕೇಳಿ ಮನಸ್ಸಿನಲ್ಲಿಯೇ ಮೆಲುಕು ಹಾಕಿ. ಜೀವನವೇ ಕಾಫಿ; ವೃತ್ತಿ, ಹಣ, ಸ್ಥಾನಮಾನ ಎಲ್ಲವೂ ಕಪ್‌ಗಳು. ಅವು ಜೀವನದ ಸೌಂದರ್ಯ ಆಸ್ವಾದಿಸಲು ಉಪಯೋಗಿಸಬಹುದಾದ ಉಪಕರಣಗಳು ಮಾತ್ರ. ಅವು ಜೀವನದ ಗುಣಮಟ್ಟವನ್ನೇ ಆಗಲಿ ಸೌಂದರ್ಯವನ್ನೇ ಆಗಲಿ ನಿರ್ಧರಿಸುವುದಿಲ್ಲ.
ಅನೇಕ ವೇಳೆ ನಾವು ಕಪ್‌ನ ಮೇಲೆ ಗಮನ ಕೇಂದ್ರೀಕರಿಸಿ ಕಾಫಿಯ ಸ್ವಾದವನ್ನು ಆಸ್ವಾದಿಸುವುದನ್ನು ಮರೆಯುತ್ತೇವೆ. ಕಾಫಿಯ ಸ್ವಾದವನ್ನು ಆಸ್ವಾದಿಸಿ ಕಪ್‌ನದ್ದನ್ನಲ್ಲ. ಸಂತೋಷಭರಿತ ಜೀವನ ನಡೆಸುವವರ ಹತ್ತಿರ ಅತ್ಯುತ್ತಮವಾದ ವಸ್ತುಗಳು ಇರುವುದಿಲ್ಲವಾದರೂ ಎಲ್ಲ ವಸ್ತುಗಳನ್ನೂ ಅವರು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸುತ್ತಾರೆ!”
೨೩ಪ್ರತಿಬಿಂಬ
ವ್ಯಕ್ತಿಯೊಬ್ಬ ಒಂದು ದಿನ ವಿಪರೀತ ದುರ್ವಾಸನೆಯ ಮಲಿನ ನೀರು ಹರಿಯುತ್ತಿದ್ದ ನದಿಯೊಂದರ ದಂಡೆಯಗುಂಟ ಇದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆ ಮಲಿನ ನೀರಿನಲ್ಲಿ ಏನೋ ಒಂದು ಹೊಳೆಯುತ್ತಿರುವಂತೆ ತೋರಿದ್ದರಿಂದ ಆತ ಅದೇನೆಂಬುದನ್ನು ಪತ್ತೆಹಚ್ಚಲೋಸುಗ ತುಸು ಹೊತ್ತು ಗಮನ ಕೇಂದ್ರೀಕರಿಸಿ ವೀಕ್ಷಿಸಿದಾಗ ಅದೊಂದು ಅಮೂಲ್ಯ ರತ್ನಹಾರದಂತೆ ಕಂಡಿತು. ಅದನ್ನು ತನ್ನದಾಗಿಸಿಕೊಳ್ಳುವ ಆಸೆಯಿಂದ ಆತ ಮೂಗು ಮುಚ್ಚಿಕೊಂಡು ಆ ಮಲಿನ ನೀರಿನೊಳಕ್ಕೆ ಕೈಹಾಕಿ ಹಾರವನ್ನು ಹಿಡಿಯಲು ಪ್ರಯತ್ನಿಸಿದರೂ ಯಾವುದೋ ಕಾರಣಕ್ಕೆ ಅವನ ಕೈಗೆ ಅದು ಸಿಕ್ಕಲಿಲ್ಲ.
ನೀರಿನಿಂದ ಕೈ ಹೊರಕ್ಕೆ ತೆಗೆದಾಗ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಆ ಹಾರ ಆತ ತಳ ಮುಟ್ಟುವ ವರೆಗೆ ಕೈಯನ್ನು ನೀರಿನೊಳಕ್ಕೆ ಹಾಕಿ ಎಷ್ಟೇ ಪ್ರಯತ್ನಿಸಿದರೂ ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದದ್ದಾಗಲಿ, ಏನಾದರೂ ಮಾಡಿ ಆ ಹಾರವನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಹಠದಿಂದ ಆತ ನೀರಿಗೆ ಇಳಿದು ಮುಳುಗಿ ಹಾರವನ್ನು ಹುಡುಕಿದಾಗ ಅದು ಗೋಚರಿಸಲೇ ಇಲ್ಲ. ಈ ವಿದ್ಯಮಾನದಿಂದ ದಿಗ್ಭ್ರಮೆಗೊಂಡ ಆತ ನೀರಿನಿಂದ ಹೊರಬಂದ ಆತನಿಗೆ ಹಾರ ನೀರಿನಲ್ಲಿ ಗೋಚರಿಸುತ್ತಿತ್ತು.
ಹಾರವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ದುಃಖಿತನಾದ ಆತ ಅಲ್ಲಿಯೇ ಕುಳಿತು ಆಲೋಚಿಸುತ್ತಿದ್ದಾಗ ಆ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದ ಸನ್ಯಾಸಿಯೊಬ್ಬ ಅವನ ದುಃಖಕ್ಕೆ ಕಾರಣ ಕೇಳಿದ. ನಿಜ ಸಂಗತಿ ತಿಳಿಸಿದರೆ ಆ ಸನ್ಯಾಸಿ ಹಾರದಲ್ಲಿ ಪಾಲು ಕೇಳಬಹುದೆಂಬ ಕಾರಣಕ್ಕಾಗಿ ತನ್ನ ದುಃಖದ ಕಾರಣದ ಕುರಿತು ಮಾತನಾಡಲು ನಿರಾಕರಿಸಿದ. ಆದಾಗ್ಯೂ ಕಾರಣ ತಿಳಿಸಿದರೆ ತನ್ನಿಂದಾದ ನೆರವನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದಾಗಿಯೂ ಅದನ್ನು ಬೇರೆ ಯಾರಿಗೂ ತಿಳಿಸದೇ ಇರುವುದಾಗಿಯೂ ಸನ್ಯಾಸಿ ಭರವಸೆ ನೀಡಿದ ನಂತರ ಆ ವ್ಯಕ್ತಿ ತನ್ನ ಸಂಕಟಕ್ಕೆ ಕಾರಣವನ್ನು ವಿವರಿಸಿದ. ಆ ಸನ್ಯಾಸಿಯಾದರೋ ನಸುನಕ್ಕು ಮಲಿನ ನೀರಿನೊಳಕ್ಕೆ ನೋಡುವುದಕ್ಕೆ ಬದಲಾಗಿ ಆಕಾಶದತ್ತ ನೋಡಲು ಸೂಚಿಸಿ ಅಲ್ಲಿಂದ ಹೊರಟುಹೋದ. ಆ ವ್ಯಕ್ತಿ ತಲೆ ಎತ್ತಿ ನೋಡಿದಾಗ ಅವನಿಗೊಂದು ಅಚ್ಚರಿ ಕಾದಿತ್ತು! ನೀರಿನ ಮೇಲೆ ಚಾಚಿದ್ದ ಮರದ ಕೊಂಬೆಯೊಂದರಲ್ಲಿ ಹಾರ ನೇತಾಡುತ್ತಿತ್ತು!!!
೨೪. “ಐಸ್‌ ಕ್ರೀಮ್‌ಗಾಗಿ ಪ್ರಾರ್ಥನೆ
ಜಾನ್‌ ತನ್ನ ಮಕ್ಕಳನ್ನು ಒಂದು ದಿನ ಭೋಜನಕ್ಕೆ ಉಪಾಹಾರಗೃಹಕ್ಕೆ ಕರೆದೊಯ್ದ. ಊಟ ಮಾಡಲು ಆರಂಭಿಸುವ ಮುನ್ನ ದೇವರಿಗೆ ಧನ್ಯವಾದ ಅರ್ಪಿಸಲೋಸುಗ ಪ್ರಾರ್ಥನೆ ಮಾಡಲು ಅವನ ೬ ವರ್ಷ ವಯಸ್ಸಿನ ಮಗ ಅನುಮತಿ ಕೇಳಿದ. ತಂದೆಯ ಒಪ್ಪಿಗೆ ದೊರೆತ ನಂತರ ಅವನು ಗಟ್ಟಿಯಾಗಿ ಇಂತು ಪ್ರಾರ್ಥನೆ ಮಾಡಿದ: “ದೇವರು ಒಳ್ಳೆಯವನು. ದೇವರು ದೊಡ್ಡವನು. ಈ ಆಹಾರಕ್ಕಾಗಿ ನಿನಗೆ ಧನ್ಯವಾದಗಳು. ಭೋಜನಾನಂತರದ ತಿನಿಸಿಗಾಗಿ ಐಸ್‌ ಕ್ರೀಮ್‌ ಅನ್ನು ಅಪ್ಪ ಕೊಡಿಸಿದರೆ ಇನ್ನೂ ಹೆಚ್ಚು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲರಿಗೂ ಸ್ವಾತಂತ್ರ್ಯ ಹಾಗು ನ್ಯಾಯ ಸಿಕ್ಕಲಿ. ತಥಾಸ್ತು.”
ಇದನ್ನು ಕೇಳಿ ಅಕ್ಕಪಕ್ಕದಲ್ಲಿ ಕುಳಿತಿದ್ದವರು ನಕ್ಕರು. ಒಬ್ಬ ಹೆಂಗಸು, “ಇಂದಿನ ಮಕ್ಕಳಿಗೆ ಪ್ರಾರ್ಥನೆ ಕೂಡ ಸರಿಯಾಗಿ ಮಾಡಲು ಬರುವುದಿಲ್ಲ. ದೇವರನ್ನು ಐಸ್‌ ಕ್ರೀಮ್‌ಗಾಗಿ ಪ್ರಾರ್ಥಿಸುವುದೇ? ಛೆ ಛೆ, ಇಂತಾದರೆ ದೇಶ ಉದ್ಧಾರವಾಗುವುದಾದರೂ ಹೇಗೆ?” ಎಂಬುದಾಗಿ ಉದ್ಗರಿಸಿದಳು. ಇದನ್ನು ಕೇಳಿಸಿಕೊಂಡ ಬಾಲಕ ಅಳುತ್ತಾ ತಂದೆಯನ್ನು ಕೇಳಿದ, “ನಾನೇನಾದರೂ ತಪ್ಪಾಗಿ ಪ್ರಾರ್ಥನೆ ಮಾಡಿದೆನೇ? ದೇವರು ನನ್ನ ಮೇಲೆ ಸಿಟ್ಟಾಗಿರಬಹುದೇ?”
ಅವನು ಮಾಡಿದ ಪ್ರಾರ್ಥನೆ ಬಲು ಚೆನ್ನಾಗಿತ್ತೆಂಬುದಾಗಿ ಹೇಳಿ ಮಗನನ್ನು ಜಾನ್‌  ಸಮಾಧಾನ ಪಡಿಸುತ್ತಿದ್ದಾಗ ಹಿರಿಯರೊಬ್ಬರು ಅವರ ಹತ್ತಿರ ಬಂದು ಆ ಬಾಲಕನನ್ನು ನೋಡಿ ಕಣ್ಣುಮಿಟುಕಿಸಿ ಮೆಲುಧ್ವನಿಯಲ್ಲಿ ಹೇಳಿದರು, “ನಿನ್ನ ಪ್ರಾರ್ಥನೆ ಬಲು ಚೆನ್ನಾಗಿತ್ತೆಂಬುದಾಗಿ ದೇವರು ಭಾವಿಸಿರುವ ಸಂಗತಿ ನನಗೆ ಗೊತ್ತಾಗಿದೆ.”
“ನಿಜವಾಗಿಯೂ?”
“ನಿಜವಾಗಿಯೂ, ನನ್ನ ಮೇಲಾಣೆ.”
ತದನಂತರ ಆ ಹಿರಿಯರು ನಾಟಕೀಯವಾಗಿ ಆ ಹೆಂಗಸಿನತ್ತ ನೋಡುತ್ತಾ ಬಾಲಕನ ಕಿವಿಯ ಹತ್ತಿರ ಪಿಸುಗುಟ್ಟಿದರು, “ಆಕೆ ದೇವರಲ್ಲಿ ಐಸ್‌ಕ್ರೀಮ್‌ ಕೇಳದಿರುವುದು ಸರಿಯಲ್ಲ. ಆಗೊಮ್ಮೆ ಈಗೊಮ್ಮೆ ಐಸ್‌ಕ್ರೀಮ್‌ ತಿನ್ನುವುದರಿಂದ ಆತ್ಮಕ್ಕೆ ಒಳ್ಳೆಯದಾಗುತ್ತದೆ.” ತದನಂತರ ಅವರು ಬಾಲಕನಿಗೆ ಶುಭಕೋರಿ ಅಲ್ಲಿಂದ ನಿರ್ಗಮಿಸಿದರು. ಭೋಜನಾಂತ್ಯದಲ್ಲಿ ಜಾನ್‌ ಮಕ್ಕಳಿಗೆ ಐಸ್‌ಕ್ರೀಮ್‌ ಕೊಡಿಸಿದ.
ಬಾಲಕ ತನ್ನ ಐಸ್‌ಕ್ರೀಮ್‌ ಅನ್ನು ಆ ಹೆಂಗಸಿನ ಹತ್ತಿರ ಒಯ್ದು ಅವಳ ಮೇಜಿನ ಮೇಲಿರಿಸಿ ಹೇಳಿದ, “ಇದನ್ನು ದಯವಿಟ್ಟು ತೆಗೆದುಕೊಳ್ಳಿ. ಆಗೊಮ್ಮೆ ಈಗೊಮ್ಮೆ ಐಸ್‌ಕ್ರೀಮ್‌ ತಿನ್ನುವುದರಿಂದ ಆತ್ಮಕ್ಕೆ ಒಳ್ಳೆಯದಾಗುತ್ತದಂತೆ. ನನ್ನ ಆತ್ಮಕ್ಕೆ ಈಗಾಗಲೇ ಒಳ್ಳೆಯದಾಗಿದೆ!”
೨೫. ಮುತ್ತುಗಳು ತುಂಬಿದ ಪೆಟ್ಟಿಗೆ
ಕ್ರಿಸ್‌ಮಸ್‌ ಹಬ್ಬದ ಹಿಂದಿನ ದಿನ ಕ್ರಿಸ್‌ಮಸ್‌ ಮರದ ಅಡಿಯಲ್ಲಿ ಇಡಲೋಸುಗ ಉಡುಗೊರೆ ಇರುವ ಪೆಟ್ಟಿಗೆಯನ್ನು ಚಿನ್ನದ ಬಣ್ಣದ ಸುತ್ತುವ-ಕಾಗದದಿಂದ ಸುತ್ತಲು ೩ ವರ್ಷ ವಯಸ್ಸಿನ ಬಾಲಕಿಯೊಬ್ಬಳು ಪ್ರಯತ್ನಿಸುತ್ತಿದ್ದಾಗ ಅದು ಹರಿದು ಹೋಯಿತು. ಹಣದ ಮುಗ್ಗಟ್ಟಿನಿಂದ ಕಷ್ಟ ಪಡುತ್ತಿದ್ದ ಆಕೆಯ ತಂದೆಗೆ ಕೋಪ ಬಂದು ಆಕೆಗೆ ಒಂದು ಪೆಟ್ಟುಕೊಟ್ಟು ಬಯ್ದನು.
ಮಾರನೆಯ ದಿನ ಬೆಳಗ್ಗೆ ಆಕೆ ಆ ಪೆಟ್ಟಿಗೆಯನ್ನು ತಂದು ಆತನಿಗೆ ಕೊಟ್ಟು ಹೇಳಿದಳು, “ಅಪ್ಪಾ, ಇದು ಕ್ರಿಸ್‌ಮಸ್‌ ಹಬ್ಬಕ್ಕಾಗಿ ನಾನು ನಿನಗೆ ಕೊಡುತ್ತಿರುವ ಉಡುಗೊರೆ.”
ತನ್ನ ಹಿಂದಿನ ದಿನದ ವರ್ತನೆಯಿಂದ ಆತನಿಗೆ ಕಸಿವಿಸಿಯಾದರೂ ಅದನ್ನು ತೋರಿಸಿಕೊಳ್ಳದೆ ಧನ್ಯವಾದಗಳನ್ನು ಹೇಳಿ ಅದರೊಳಗೆ ಏನಿದೆ ಎಂಬುದನ್ನು ಮುಚ್ಚಳ ತೆರೆದು ನೋಡಿದನು. ಅದು ಖಾಲಿಯಾಗಿತ್ತು! ಇದರಿಂದ ಸಿಟ್ಟಿಗೆದ್ದ ಆತ ಕಿರುಚಿದ, “ಪೆದ್ದ ಹುಡುಗಿ. ಖಾಲಿ ಪೆಟ್ಟಿಗೆಯನ್ನು ಉಡುಗೊರೆಯಾಗಿ ಕೊಡಬಾರದು ಎಂಬ ಸಣ್ಣ ವಿಷಯವೂ ನಿನಗೆ ಗೊತ್ತಿಲ್ಲವೇ?”
ಇದರಿಂದ ದುಃಖಿತಳಾದ ಆಕೆ ಕಣ್ಣಿರು ಸುರಿಸುತ್ತಾ ಹೇಳಿದಳು, “ಅಪ್ಪಾ ಅದು ಖಾಲಿ ಪೆಟ್ಟಿಗೆಯಲ್ಲ. ಆ ಪೆಟ್ಟಿಗೆಯ ತುಂಬಾ ನಿನಗೋಸ್ಕರ ಸಿಹಿಮುತ್ತುಗಳನ್ನು ತುಂಬಿಸಿದ್ದೇನೆ!!!”
ಇದನ್ನು ಕೇಳಿದ ತಂದೆಯ ಕಣ್ಣುಗಳಲ್ಲಿ ನೀರು ತುಂಬಿತು.
೨೬ಒಂದು ಲೋಟ ಹಾಲು
ಒಂದು ದಿನ ಬಡ ಬಾಲಕನೊಬ್ಬ ತನ್ನ ಶಾಲಾ ಶುಲ್ಕಕ್ಕೆ ಹಣ ಸಂಗ್ರಹಿಸಲೋಸುಗ ಬೀದಿಬೀದಿ ಸುತ್ತಿ ಕೆಲವು ಸಾಮಾನುಗಳನ್ನು ಮಾರುವುದರಲ್ಲಿ ನಿರತನಾಗಿದ್ದ. ದಿನವಿಡೀ ಸುತ್ತಿದ ನಂತರ ಅವನ ಜೇಬಿನಲ್ಲಿ ಒಂದು ಡೈಮ್‌ (೧೦ ಸೆಂಟ್ಸ್) ಮಾತ್ರ ಇತ್ತು. ಆಗ ಅವನಿಗೆ ಬಲು ಹಸಿವಾಗಿತ್ತು. ಮುಂದಿನ ಮನೆಯಲ್ಲಿ ತಿನ್ನಲು ಏನಾದರೂ ಕೊಡಿ ಎಂಬುದಾಗಿ ಕೇಳಲು ನಿರ್ಧರಿಸಿದ. ಆ ಮನೆಯ ಕದ ತಟ್ಟಿದಾಗ ಸುಂದರ ಯುವತಿಯೊಬ್ಬಳು ಬಾಗಿಲು ತೆರೆದಳು. ತಿನ್ನಲು ಏನಾದರೂ ಕೊಡಿ ಎಂಬುದಾಗಿ ಕೇಳಲು ಧೈರ್ಯ ಸಾಲದೆ ಕುಡಿಯಲು ನೀರು ಕೊಡಿ ಎಂಬುದಾಗಿ ಕೇಳಿದ.
ಆತ ಬಲು ಹಸಿವಾಗಿದ್ದವನಂತೆ ಆ ಯುವತಿಗೆ ಕಾಣಿಸಿದ್ದರಿಂದ ಅವಳು ಒಂದು ಲೋಟ ಭರ್ತಿ ಹಾಲನ್ನು ಅವನಿಗೆ ಕೊಟ್ಟಳು. ಅದನ್ನು ಬಲು ನಿಧಾನವಾಗಿ ಕುಡಿದು ಮುಗಿಸಿ ಅವನು ಕೇಳಿದ, “ಈ ಹಾಲು ಕುಡಿದಿದ್ದಕ್ಕೆ ನಾನೀಗ ಎಷ್ಟು ಹಣ ಕೊಡಬೇಕು?”
“ನೀನು ಏನೂ ಕೊಡಬೇಕಾಗಿಲ್ಲ. ಇನ್ನೊಬ್ಬರಿಗೆ ಉಪಕಾರ ಮಾಡಿದಾಗ ಅದಕ್ಕೆ ಬದಲಾಗಿ ಅವರಿಂದ ಏನನ್ನೂ ತೆಗೆದುಕೊಳ್ಳ ಕೂಡದು ಎಂಬುದನ್ನು ನನ್ನ ಅಮ್ಮ ನನಗೆ ಕಲಿಸಿದ್ದಾರೆ,” ಎಂಬುದಾಗಿ ಉತ್ತರಿಸಿದಳು ಅವಳು.
“ಓ, ಹಾಗೋ. ನೀವು ಹಾಲು ಉಚಿತವಾಗಿ ಕೊಟ್ಟದಕ್ಕೆ ನಿಮಗೆ ಅನಂತಾನಂತ ಧನ್ಯವಾದಗಳು,” ಎಂಬುದಾಗಿ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ತಿಳಿಸಿ ಅವನು ಅಲ್ಲಿಂದ ಮುಂದಕ್ಕೆ ಹೋದನು. ಈ ವಿದ್ಯಮಾನದಿಂದ ಅವನ ಹಸಿವು ಕಮ್ಮಿ ಆದದ್ದು ಮಾತ್ರವಲ್ಲದೆ  ದೇವರಲ್ಲಿ ಹಾಗು ಮಾನವರ ಒಳ್ಳೆಯತನದಲ್ಲಿ ಅವನಿಗಿದ್ದ ನಂಬಿಕೆ ಹೆಚ್ಚಿತು. ತತ್ಪರಿಣಾಮವಾಗಿ, ಶಾಲಾಶಿಕ್ಷಣಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದ ಆತ ದೃಢ ಸಂಕಲ್ಪದಿಂದ ಮುಂದುವರಿಯಲು ನಿರ್ಧರಿಸಿದ.
ಅನೇಕ ವರ್ಷಗಳು ಉರುಳಿದವು. ಬಾಲಕನಿಗೆ ಹಾಲು ಕೊಟ್ಟಿದ್ದಾಕೆ ಅಪರೂಪದ ಗಂಭೀರ ಸ್ವರೂಪದ ರೋಗ ಪೀಡಿತಳಾದಳು. ಸ್ಥಳೀಯ ವೈದ್ಯರು ಅವಳನ್ನು ನಗರದ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿನ ವೈದ್ಯರು ಈ ಅಪರೂಪದ ಕಾಯಿಲೆಯ ಚಿಕಿತ್ಸಾ ವಿಧಾನ ನಿರ್ಧರಿಸಲು ಡಾ. ಹೋವಾರ್ಡ್‌ ಕೆಲ್ಲಿಯ ಸಲಹೆ ಪಡೆಯಲು ನಿರ್ಧರಿಸಿ ಅವನನ್ನು ಆಸ್ಪತ್ರೆಗೆ ಬಂದು ರೋಗಿಯನ್ನು ಪರೀಕ್ಷಿಸುವಂತೆ ವಿನಂತಿಸಿಕೊಂಡರು.
ಆಸ್ಪತ್ರೆಗೆ ಬಂದ ಆತ ರೋಗಿಯನ್ನು ನೋಡಿದ ತಕ್ಷಣವೇ ಅವಳು ಯಾರೆಂಬುದನ್ನು ಗುರುತಿಸಿದ. ವಿಶೇಷ ಕಾಳಜಿಯಿಂದ ಔಷಧೋಪಚಾರ ಮಾಡಿದ. ಅವಳು ಸಂಪೂರ್ಣವಾಗಿ ಗುಣಮುಖಳಾದಳು. ಆಕೆ ಆಸ್ಪತ್ರೆಗೆ ಪಾವತಿಸಬೇಕಾದ ಹಣ ನಮೂದಿಸಿದ ಬಿಲ್‌ ಅನ್ನು ಆಕೆಗೆ ಕೊಡುವ ಮುನ್ನ ತನ್ನ ಒಪ್ಪಿಗೆ ಪಡೆಯುವಂತೆ ಆಡಳಿತ ವರ್ಗಕ್ಕೆ ಅವನು ಮೊದಲೇ ಹೇಳಿದ್ದ. ಅಂತೆಯೇ ಬಿಲ್‌ ಅವನ ಕೈ ಸೇರಿದಾಗ ಅದನ್ನು ನೋಡಿದ ನಂತರ ಆಡಳಿತಾಧಿಕಾರಿಯ ಕಿವಿಯಲ್ಲಿ ಏನೋ ಹೇಳಿ ತದನಂತರ ಆ ಬಿಲ್‌ ಮೇಲೆ ಏನನ್ನೋ ಬರೆದು ಅವಳಿಗೆ ಕೊಡುವಂತೆ ಹೇಳಿ ಅಲ್ಲಿಂದ ಹೊರಟುಹೋದ. ಆಸ್ಪತ್ರೆಯ ವೆಚ್ಚವನ್ನು ಭರಿಸುವ ವಿಧಾನ ತಿಳಿಯದೇ ಕಂಗಾಲಾಗಿದ್ದ ಆಕೆ ಬಿಲ್‌ಅನ್ನು ನಡುಗುವ ಕೈಗಳಿಂದಲೇ ಸ್ವೀಕರಿಸಿದಳು. ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಇಂತು ಬರೆದಿತ್ತು:
“ಒಂದು ಲೋಟ ಹಾಲನ್ನು ಕೊಡುವುದರ ಮೂಲಕ ಈ ಆಸ್ಪತ್ರೆಯ ಬಿಲ್‌ಅನ್ನು ಪೂರ್ಣವಾಗಿ ಈ ಮೊದಲೇ ಪಾವತಿಸಲಾಗಿದೆ.
ಡಾ. ಹೋವಾರ್ಡ್‌ ಕೆಲ್ಲಿ”
೨೭ದಯೆ
ಚಳಿಗಾಲದಲ್ಲಿ ಒಂದು ದಿನ ಒಳ್ಳೆಯ ಸ್ಥಿತಿವಂತಳಂತೆ ಕಾಣುತ್ತಿದ್ದ ಹೆಂಗಸೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯ ಮೂಲೆಯಲ್ಲಿ ಕುಳಿತಿದ್ದ ಭಿಕ್ಷುಕನೊಬ್ಬನನ್ನು ನೋಡಿದಳು. ವಯಸ್ಸಿನಲ್ಲಿ ಹಿರಿಯನಾಗಿದ್ದ ಆತ ಚಳಿಗಾಲದಲ್ಲಿ ಧರಿಸಲು ಯೋಗ್ಯವಲ್ಲದ ಕೊಳಕು ಚಿಂದಿ ಬಟ್ಟೆ ಧರಿಸಿದ್ದ. ಮುಖಕ್ಷೌರ ಹಾಗು ಸ್ನಾನ ಮಾಡದೆ ಬಹುದಿನಗಳಾದಂತಿದ್ದವು. ಅವನನ್ನೇ ತುಸು ಸಮಯ ನೋಡಿದ ಆಕೆ ಅವನ ಹತ್ತಿರ ಹೋಗಿ ಕೇಳಿದಳು, “ಅಯ್ಯಾ, ನಿಮ್ಮ ಆರೋಗ್ಯ ಚೆನ್ನಾಗಿದೆಯಲ್ಲವೇ?” ಅವನು ನಿಧಾನವಾಗಿ ತಲೆ ಎತ್ತಿ ಅವಳನ್ನು ನೋಡಿದ. ಇತರರಂತೆ ತನ್ನನ್ನು ತಮಾಷೆ ಮಾಡಲೋಸುಗ ಕೇಳುತ್ತಿದ್ದಾಳೆ ಅಂದುಕೊಂಡು, “ನನ್ನನ್ನು ನನ್ನಷ್ಟಕ್ಕೇ ಇರಲು ಬಿಡು. ಇಲ್ಲಿಂದ ಹೋಗು” ಎಂಬುದಾಗಿ ಗುರುಗುಟ್ಟಿದ.
ಆಕೆ ಒಂದಿನಿತೂ ಅಂಜದೆ ನಸುನಗುತ್ತಾ ಕೇಳಿದಳು, “ನಿಮಗೆ ಹಸಿವಾಗಿದೆಯೇ?”
“ಇಲ್ಲ. ಈಗಷ್ಟೇ ನಾನು ಆಧ್ಯಕ್ಷರ ಮನೆಯಲ್ಲಿ ಅವರೊಟ್ಟಿಗೆ ಭೋಜನ ಮಾಡಿ ಬಂದಿದ್ದೇನೆ. ಈಗ ಇಲ್ಲಿಂದ ತೊಲಗು,” ವ್ಯಂಗ್ಯವಾಗಿ ಉತ್ತರಿಸಿದ ಆತ.
ಇದನ್ನು ಕೇಳಿದ ಆಕೆ ತುಸು ಗಟ್ಟಿಯಾಗಿಯೇ ನಕ್ಕು ಅವನ ತೋಳನ್ನು ಹಿಡಿದು ಮೇಲಕ್ಕೆ ಎಬ್ಬಿಸಲು ಪ್ರಯತ್ನಿಸಿದಳು.
“ಏಯ್‌, ನೀನೇನು ಮಾಡಬೇಕೆಂದಿರುವೆ. ನನ್ನನ್ನು ನನ್ನಷ್ಟಕ್ಕೆ ಇರಲು ಬಿಟ್ಟು ತೊಲಗು ಎಂಬುದಾಗಿ ಆಗಲೇ ಹೇಳಲಿಲ್ಲವೇ?” ಕಿರುಚಿದ ಆತ.
ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ಪೋಲೀಸಿನವನು ಅವಳನ್ನು ಕೇಳಿದ, “ಏನಾದರೂ ಸಮಸ್ಯೆ ಇದೆಯೇ ಮ್ಯಾಡಮ್‌?”
“ಸಮಸ್ಯೆ ಏನೂ ಇಲ್ಲ. ಇವರನ್ನು ಎಬ್ಬಿಸಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ ಅಷ್ಟೆ. ಅದಕ್ಕೆ ನೀವು ನನಗೆ ತುಸು ಸಹಾಯ ಮಾಡುವಿರಾ?” ಕೇಳಿದಳು ಆಕೆ.
“ಈತನೋ? ಇವ ಅನೇಕ ವರ್ಷಗಳಿಂದ ಶಾಶ್ವತವಾಗಿ ಇಲ್ಲಿ ನೆಲಸಿರುವ ಜ್ಯಾಕ್‌. ಅವನಿಂದ ನಿಮಗೇನಾಗ ಬೇಕಿದೆ?” ಕೇಳಿದ ಪೋಲಿಸಿನವ.
“ಅಲ್ಲೊಂದು ಉಪಾಹಾರ ಗೃಹ ಕಾಣುತ್ತಿದೆ ನೋಡಿ. ಅಲ್ಲಿಗೆ ಇವರನ್ನು ಕರೆದೊಯ್ದು ತಿನ್ನಲು ಏನಾದರೂ ಕೋಡಿಸೋಣ, ಅಂದುಕೊಂಡಿದ್ದೇನೆ,” ಹೇಳಿದಳು ಆಕೆ.
“ನಿಮಗೇನಾದರೂ ಹುಚ್ಚು ಹಿಡಿದಿದೆಯೇ? ಅದರೊಳಕ್ಕೆ ನಾನು ಬರುವುದೇ?” ಪ್ರತಿಭಟಿಸಿದ ಆ ಭಿಕ್ಷುಕ.
“ಹೊಟ್ಟೆ ತುಂಬ ತಿನ್ನಲು ನಿನಗೊಂದು ಒಳ್ಳೆಯ ಅವಕಾಶ ಜ್ಯಾಕ್. ಅದನ್ನು ಕಳೆದುಕೊಳ್ಳಬೇಡ, “ ಎಂಬುದಾಗಿ ಹೇಳಿದ ಆ ಪೋಲೀಸಿನವ ಅವನನ್ನು ಬಲವಂತವಾಗಿ ಎಬ್ಬಿಸಿ ಉಪಾಹಾರ ಗೃಹದತ್ತ ಎಳೆದೊಯ್ದ.
ಇಬ್ಬರೂ ಅವನನ್ನು ಉಪಾಹಾರಗೃಹದೊಳಕ್ಕೆ ಕರೆದೊಯ್ದು ಒಂದು ಮೇಜಿನ ಸಮೀಪದಲ್ಲಿ ಇದ್ದ ಖಾಲಿ ಕುರ್ಚಿಯಲ್ಲಿ ಕೂರಿಸಿದರು. ಇದನ್ನು ನೋಡಿದ ಆ ಉಪಾಹಾರಗೃಹದ ವ್ಯವಸ್ಥಾಪಕ ಅಲ್ಲಿಗೆ ಬಂದು ವಿಚಾರಿಸಿದ, “ಇಲ್ಲಿ ಏನು ನಡೆಯುತ್ತಿದೆ? ಈ ಮನುಷ್ಯನಿಗೇನಾದರೂ ತೊಂದರೆ ಆಗಿದೆಯೇ?”
“ತೊಂದರೆ ಏನೂ ಇಲ್ಲ. ಈತನಿಗೆ ಹೊಟ್ಟೆ ತುಂಬ ತಿನ್ನಲು ಏನನ್ನಾದರೂ ಕೊಡಿಸಲೋಸುಗ ಈ ಮಹಿಳೆ ಇಲ್ಲಿಗೆ ಕರೆ ತಂದಿದ್ದಾರೆ,” ಎಂಬುದಾಗಿ ಹೇಳಿದ ಪೋಲಿಸಿನವ.
“ಇಲ್ಲಿ ಸಾಧ್ಯವಿಲ್ಲ. ಇಂಥವರು ಇಲ್ಲಿಗೆ ಬರಲಾರಂಭಿಸಿದರೆ ನಮ್ಮ ವ್ಯಾಪಾರ ಹಾಳಾಗುತ್ತದೆ,” ಪ್ರತಿಕ್ರಿಯಿಸಿದ ವ್ಯವಸ್ಥಾಪಕ.
ತಕ್ಛಣ ಆ ಮಹಿಳೆ ವ್ಯವಸ್ಥಾಪಕನನ್ನು ಕೇಳಿದಳು, “ಈ ಬೀದಿಯಲ್ಲಿಯೇ ಇನ್ನೂ ಮುಂದೆ ಇರುವ ಲೇವಾದೇವಿ ಸಂಸ್ಥೆಯ ಪರಿಚಯ ನಿಮಗೆ ಇದೆಯೇ?”
“ಇದೆ. ವಾರದಲ್ಲಿ ಒಂದು ದಿನ ಅವರು ತಮ್ಮ ವ್ಯವಹಾರದ ಸಭೆಯನ್ನು ನಮ್ಮ ಭೋಜನಕೂಟಕ್ಕಾಗಿ ಮೀಸಲಿರುವ ಸಭಾಂಗಣದಲ್ಲಿ ನಡೆಸುತ್ತಾರೆ. ನಮ್ಮ ಒಳ್ಳೆಯ ಗಿರಾಕಿಗಳ ಪೈಕಿ ಅವರೇ ಪ್ರಮುಖರು. ಅದರೆ ಅದಕ್ಕೂ ಈಗ ಇಲ್ಲಿ ನಡೆಯುತ್ತಿರುವುದಕ್ಕೂ ಏನು ಸಂಬಂಧ?” ಕೇಳಿದ ವ್ಯವಸ್ಥಾಪಕ.
“ನನ್ನ ಹೆಸರು ಪೆನೆಲೋಪ್‌ ಎಡ್ಡಿ. ನಾನೇ ಆ ಸಂಸ್ಥೆಯ ಮುಖ್ಯಸ್ಥೆ,” ಎಂಬುದಾಗಿ ಘೋಷಿಸಿದ ಆ ಮಹಿಳೆ ವ್ಯವಸ್ಥಾಪಕನತ್ತ ವಿಶಿಷ್ಟ ನೋಟ ಬೀರಿ ಪೋಲೀಸಿನವನನ್ನು ಕೇಳಿದಳು, “ನಿಮ್ಮ ಸಹಾಯಕ್ಕೆ ಧನ್ಯವಾದಗಳು. ಅಂದ ಹಾಗೆ ಹೋಗುವ ಮುನ್ನ ಒಂದು ಲೋಟ ಕಾಫಿ ಕುಡಿದು ಹೋಗಿ. ಹೊರಗೆ ಬಹಳ ಚಳಿ ಇದೆ.”
ಬೆಪ್ಪಾಗಿ ನಿಂತಿದ್ದ ವ್ಯವಸ್ಥಾಪಕ, “ಇವರಿಗೆ ಒಳ್ಳೆಯ ಭೋಜನ ಹಾಗು ಪೋಲೀಸಿನವರಿಗೆ ಕಾಫಿ ವ್ಯವಸ್ಥೆ ಈಗಲೇ ಮಾಡುತ್ತೇನೆ,” ಅಂದವನೇ ಅಲ್ಲಿಂದ ಓಡಿದ. ಮುಸಿಮುಸಿ ನಗುತ್ತಿದ್ದ ಪೋಲಿಸಿನವನನ್ನು ನೋಡಿ ಆ ಮಹಿಳೆ ನಸುನಗುತ್ತಾ ಹೇಳಿದಳು, “ನಾನು ಯಾರೆಂಬುದು ತಿಳಿದಾಗ ಎಲ್ಲವೂ ಸರಿಯಾಗುತ್ತದೆ ಎಂಬುದು ನನಗೆ ಗೊತ್ತಿತ್ತು!”
ತದನಂತರ ಆಕೆ ಜ್ಯಾಕ್‌ನತ್ತ ತಿರುಗಿ ಕೇಳಿದಳು, “ನನ್ನ ಗುರುತು ಸಿಕ್ಕಲಿಲ್ಲವೇ?
“ಸರಿಯಾಗಿ ನೆನಪಾಗುತ್ತಿಲ್ಲ. ಆದರೆ ಹಿಂದೆ ಯಾವಾಗಲೋ ನೋಡಿದಂತೆ ಭಾಸವಾಗುತ್ತಿದೆ,” ಅಂದನಾತ.
ಆಕೆ ವಿವರಿಸಿದಳು, “ಬಹಳ ವರ್ಷಗಳ ಹಿಂದೆ ಕೆಲಸ ಹುಡುಕುತ್ತಾ ನಾನು ಈ ಊರಿಗೆ ಬಂದಿದ್ದೆ. ಇಲ್ಲಿಗೆ ಬಂದು ಸೇರಿದಾಗ ನನಗೆ ಬಹಳ ಹಸಿವಾಗಿತ್ತಾದರೂ ತಿನ್ನಲು ಏನನ್ನಾದರೂ ಕೊಂಡುಕೊಳ್ಳುವಷ್ಟು ನನ್ನ ಹತ್ತಿರ ಹಣ ಇರಲಿಲ್ಲ. ಈ ಉಪಾಹಾರಗೃಹದಲ್ಲಿ ಏನಾದರೂ ಕೆಲಸ ಮಾಡಿದರೆ ತಿನ್ನಲು ಸಿಕ್ಕಬಹುದು ಎಂಬುದಾಗಿ ಅಂದುಕೊಂಡು ಒಳಬಂದೆ.”
ಜ್ಯಾಕ್‌ ತಕ್ಷಣವೇ ಮಧ್ಯಪ್ರವೇಶಿಸಿ ಮುಂದುವರಿಸಿದ, “ಈಗ ನನೆನಪಿಗೆ ಬಂದಿತು. ನಾನು ಅಲ್ಲಿ ಊಟ ನೀಡುವ ಕಟ್ಟೆಯ ಹಿಂದೆ ನಿಂತಿದ್ದೆ. ನೀವು ನನ್ನ ಹತ್ತಿರ ಬಂದು ಏನಾದರೂ ಕೆಲಸ ಮಾಡಿಸಿಕೊಂಡು ಊಟ ಕೊಡಲು ಸಾಧ್ಯವೇ ಎಂಬುದಾಗಿ ಕೇಳಿದಿರಿ. ಅಂತು ಮಾಡುವುದು ಈ ಉಪಾಹಾರಗೃಹದ ನೀತಿಗೆ ವಿರುದ್ಧ ಎಂಬುದಾಗಿ ನಾನು ಹೇಳಿದೆ.”
ಪುನಃ ಮಹಿಳೆ ಮುಂದುವರಿಸಿದಳು, “ ಹೌದು, ಆನಂತರ ಹುರಿದ ಮಾಂಸದ ಅತ್ಯಂತ ದೊಡ್ಡ ಸ್ಯಾಂಡ್‌ವಿಚ್ ಹಾಗು ಒಂದು ದೊಡ್ಡ ಲೋಟ ತುಂಬ ಕಾಫಿ ಕೊಟ್ಟು ಅಗೋ, ಅಲ್ಲಿ ಕಾಣಿಸುತ್ತಿರುವ ಮೂಲೆಮೇಜಿನ ಹತ್ತಿರ ಇರುವ ಕುರ್ಚಿಯಲ್ಲಿ ಕುಳಿತುಕೊಂಡು ಬೋಜನದ ಸವಿಯನ್ನು ಆನಂದಿಸುವಂತೆ ಹೇಳಿದಿರಿ. ಅಷ್ಟೇ ಅಲ್ಲ, ಅದರ ಬಾಬ್ತಿನ ಹಣವನ್ನು ನೀವೇ ಗಲ್ಲಾಪೆಟ್ಟಿಗೆಯೊಳಕ್ಕೆ ಹಾಕಿದಿರಿ. ಅಂದು ಮಧ್ಯಾಹ್ನವೇ ನನಗೆ ಒಂದು ಕೆಲಸ ಸಿಕ್ಕಿತು. ಆನಂತರ ನಾನು ಹಿಂದಿರುಗಿ ನೋಡಲೇ ಇಲ್ಲ.”
ಪೋಲಿಸಿನವನ ಹಾಗು ಜ್ಯಾಕ್‌ನ ಕಣ್ಣುಗಳು ತೇವವಾಗಿದ್ದವು.
ಅವಳು ತನ್ನ ವಿಸಿಟಿಂಗ್‌ ಕಾರ್ಡ್‌ ಅನ್ನು ಅವನಿಗೆ ಕೊಟ್ಟು ಇಂತೆಂದಳು: “ಇಲ್ಲಿ ಊಟ ಮಾಡಿ ಆದ ಮೇಲೆ ಈ ವಿಳಾಸಕ್ಕೆ ಬಂದು ನಮ್ಮ ಸಂಸ್ಥೆಯ ಸಿಬ್ಬಂದಿ ವರ್ಗದ ನಿರ್ದೇಶಕರನ್ನು ಭೇಟಿ ಮಾಡಿ. ಕಾರ್ಯಲಯದಲ್ಲಿ ಏನಾದರೊಂದು ಕೆಲಸಕ್ಕೆ ನಿಮ್ಮನ್ನು ನೇಮಿಸುತ್ತಾರೆ. ಆ ಕುರಿತು ನಾನು ಅವರ ಹತ್ತಿರ ಈಗಲೇ ಮಾತನಾಡಿರುತ್ತೇನೆ. ಅಂದ ಹಾಗೆ ಈ ಹಣವನ್ನು ತೆಗೆದುಕೊಳ್ಳಿ. ಅದರಿಂದ ಹೊಸ ಉಡುಪುಗಳನ್ನು ಖರೀದಿಸಿ ಹಾಗು ವಾಸಕ್ಕಾಗಿ ಒಂದು ಸ್ಥಳವನ್ನೂ ಬಾಡಿಗಗೆ ಪಡೆಯಿರಿ. ಈ ಹಣವನ್ನು ಮುಂಗಡ ಸಂಬಳ ಎಂಬುದಾಗಿ ಪರಿಗಣಿಸಿ. ಪುನಃ ಏನಾದರೂ ಸಹಾಯ ಬೇಕಿದ್ದರೆ ನೇರವಾಗಿ ನನ್ನನ್ನು ಕಾಣಿ,” ಅಂದವಳೇ ಅಲ್ಲಿಂದ ಹೊರಟುಹೋದಳು.
ಪೋಲೀಸಿನವ ಹಾಗು ಜ್ಯಾಕ್ ಇಬ್ಬರೂ ಬೆರಗುಗಣ್ಣುಗಳಿಂದ ಅವಳು ಹೋಗುತ್ತಿರುವುದನ್ನೇ ನೋಡುತ್ತಿದ್ದರು.
“ನಾನು ಇವತ್ತು ಒಂದು ಪವಾಡ ನೋಡಿದೆ,” ಎಂಬುದಾಗಿ ಉದ್ಗರಿಸಿದ ಪೋಲಿಸಿನವ.
೨೮. ಜಗತ್ತಿನ ಏಳು ಅದ್ಭುತಗಳು
ಷಿಕಾಗೋ ನಗರದ ಕಿರಿಯ ಪ್ರೌಢಶಾಲೆಯ ಮಕ್ಕಳು ಜಗತ್ತಿನ ಏಳು ಅದ್ಭುತಗಳ ಕುರಿತು ಅಧ್ಯಯಿಸುತ್ತಿದ್ದರು. ಪಾಠದ ಬೋಧನೆ ಮುಗಿದ ನಂತರ ತಾವು ಅಧ್ಯಯಿಸಿದ ಅದ್ಭುತಗಳ ಪೈಕಿ ಯಾವ ಏಳನ್ನು ಅವರು ಜಗತ್ತಿನ ಏಳು ಅದ್ಭುತಗಳು ಎಂಬುದಾಗಿ ಪರಿಗಣಿಸುತ್ತಾರೆ ಎಂಬುದನ್ನು ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಮಾಡುವಂತೆ ಶಿಕ್ಷಕರು ಅವರಿಗೆ ಹೇಳಿದರು. ಬಹು ಮಂದಿ ಮಾಡಿದ ಪಟ್ಟಿ ಇಂತಿತ್ತು:
೧. ಈಜಿಪ್ಟಿನ ಮಹಾ ಪಿರಮಿಡ್‌
೨. ಭಾರತದ ತಾಜ್‌ ಮಹಲ್‌
೩. ಆರಿಝೋನಾದ  ಮಹಾ ಕಣಿವೆ
೪. ಪನಾಮಾ ಕಾಲುವೆ
೫. ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌
೬. ಸಂತ ಪೀಟರ್‌ನ ಬೆಸಿಲಿಕಾ
೭. ಚೀನಾದ ಮಹಾ ಗೋಡೆ
ಒಬ್ಬ ಹುಡುಗಿ ಈ ಚಟುವಟಿಕೆಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ಸೂಚಿಸಿಲ್ಲದೇ ಇದ್ದದ್ದನ್ನು ಗಮನಿಸಿದ ಶಿಕ್ಷಕರು ಅವಳನ್ನು ಕಾರಣ ಕೇಳಿದರು.
ತುಸು ಹಿಂದೆಮುಂದೆ ನೋಡಿದ ಹುಡುಗಿ ತಡವರಿಸುತ್ತಾ ಇಂತು ಹೇಳಿದಳು: “ಇರುವ ಬಹು ಸಂಖ್ಯೆಯ ಅದ್ಭುತಗಳ ಪೈಕಿ ಏಳನ್ನು ಮಾತ್ರ ಅದ್ಭುತಗಳು ಎಂಬುದಾಗಿ ನಿರ್ಧರಿಸಲು ನನಗೆ ತುಸು ಕಷ್ಟವಾಗುತ್ತಿದೆ. ಆದಗ್ಯೂ ನನ್ನ ಪ್ರಕಾರ ಜಗತ್ತಿನ ಏಳು ಅದ್ಭುತಗಳು ಇವು –
೧. ಕೈನಿಂದ ಮುಟ್ಟಿ ಅನುಭವಿಸುವುದು
೨. ನಾಲಗೆಯಿಂದ ರುಚಿ ನೋಡಿ ಅನುಭವಿಸುವುದು
೩. ಕಣ್ಣುಗಳಿಂದ ನೋಡಿ ಅನುಭವಿಸುವುದು
೪. ಕಿವಿಗಳಿಂದ ಕೇಳಿ ಅನುಭವಿಸುವುದು
೫. ಮೂಗಿನಿಂದ ವಾಸನೆ ಗ್ರಹಿಸಿ ಅನುಭವಿಸುವುದು
(ಇಷ್ಟು ಹೇಳಿದ ನಂತರ ತುಸು ತಡವರಿಸಿ ಮುಂದುವರಿಸಿದಳು)
೬. ನಗುವುದು
೭. ಪ್ರೀತಿಸುವುದು
ಇದನ್ನು ಕೇಳಿದ ಇಡೀ ತರಗತಿ ನಿಶ್ಶಬ್ದವಾಯಿತು, ಎಲ್ಲರೂ ಅವಳನ್ನು ಬೆರಗುಗಣ್ಣುಗಳಿಂದ ನೋಡಿದರು.
೨೯ತೊಂದರೆ ಮರ
ನನ್ನ ತೋಟದಮನೆಯ ನವೀಕರಣದಲ್ಲಿ ನೆರವು ನೀಡಲು ನಿಗದಿ ಮಾಡಿದ್ದ ಬಡಗಿಯ ಕೆಲಸದ ಮೊದಲನೇ ದಿನ ಅವನಿಗೆ ಅಷ್ಟೇನೂ ಹಿತಕರವಾಗಿರಲಿಲ್ಲ. ಕೆಲಸಕ್ಕೆ ಬರುವಾಗ ಅವನ ವಾಹನದ ಚಕ್ರದ ಟೈರು ತೂತು ಆದದ್ದರಿಂದ ಒಂದು ಗಂಟೆ ಕಾಲ ವ್ಯರ್ಥವಾಯಿತು. ಅವನ ವಿದ್ಯುತ್‌ ಗರಗಸ ಕೈಕೊಟ್ಟಿತು. ದಿನದ ಕೊನೆಯಲ್ಲಿ ಅವನ ವಾಹನ ಚಾಲೂ ಆಗಲೇ ಇಲ್ಲ. ಎಂದೇ, ನಾನು ಅವನನ್ನು ನನ್ನ ವಾಹನದಲ್ಲಿ ಅವನ ಮನೆಗೆ ಕರೆದೊಯ್ಯಬೇಕಾಯಿತು.
ಅವನ ಮನೆ ತಲುಪಿದಾಗ ಮನೆಯ ಒಳಬಂದು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಒಂದು ಕಪ್‌ ಚಹಾ ಸ್ವೀಕರಿಸಬೇಕಾಗಿ ವಿನಂತಿಸಿದ. ನಾವು ಅವನ ಮನೆಯ ಮುಂಬಾಗಿಲಿನತ್ತ ಹೋಗುತ್ತಿರುವಾಗ ದಾರಿಯಲ್ಲಿ ಇದ್ದ ಪುಟ್ಟ ಮರವೊಂದರ ಬಳಿ ನಿಂತು ತನ್ನೆರಡೂ ಕೈಗಳಿಂದ ಆ ಮರದ ಕೊಂಬೆಗಳ ತುದಿಗಳನ್ನು ಅವನು ಸವರಿದ. ತದನಂತರ ಮನೆಯ ಬಾಗಿಲು ತೆರೆಯುತ್ತಿದ್ದಾಗ ಆತನಲ್ಲಿ ಅತ್ಯಾಶ್ಚರ್ಯಕರ ಬದಲಾವಣೆ ಆದದ್ದನ್ನು ನೋಡಿದೆ. ಅವನ ಮುಖದಲ್ಲಿ ನಿಜವಾದ ಮುಗುಳ್ನಗು ಕಾಣಿಸಿಕೊಂಡಿತು. ಓಡಿ ಬಂದ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಅಪ್ಪಿಕೊಂಡು ಮುದ್ದಾಡಿದ, ಅಲ್ಲಿಗೆ ಬಂದ ತನ್ನ ಹೆಂಡತಿಗೆ ಒಂದು ಮುತ್ತು ಕೊಟ್ಟ.
ಚಹಾಸೇವನೆಯ ನಂತರ ನನ್ನ ವಾಹನದ ವರೆಗೆ ಬಂದು ನನ್ನನ್ನು ಬೀಳ್ಕೊಡುವ ಉದ್ದೇಶ ಅವನದಾಗಿತ್ತು. ನಾವಿಬ್ಬರೂ ಪುನಃ ನಡೆದುಕೊಂಡು ಬರುತ್ತಿರುವಾಗ ಆ ಮರವನ್ನು ಕಂಡೊಡನೆ ಕುತೂಹಲ ತಡೆಯಲಾರದೆ ಆ ಮರದ ಹತ್ತಿರ ಅವನು ವರ್ತಿಸಿದ ರೀತಿಗೆ ಕಾರಣ ಕೇಳಿದೆ.
ಅವನು ಇಂತು ವಿವರಿಸಿದ: “ಇದು ನನ್ನ ತೊಂದರೆ ಮರ. ನನ್ನ ವೃತ್ತಿಯಲ್ಲಿ ಪ್ರತೀದಿನ ಒಂದಲ್ಲ ಒಂದು ತೊಂದರೆ ಆಗುವುದು ಸ್ವಾಭಾವಿಕ. ಕೆಲವೊಮ್ಮೆ ಅನೇಕ ತೊಂದರೆಗಳು ಆಗುವುದೂ ಉಂಟು, ಇಂದು ಆದಂತೆ. ಹೀಗಿದ್ದರೂ ಆಗುವ ತೊಂದರೆಗಳಿಗೂ ನನ್ನ ಹೆಂಡತಿ ಮಕ್ಕಳಿಗೂ ಏನೂ ಸಂಬಂಧವಿಲ್ಲ. ಅಂದ ಮೇಲೆ ಅವು ಮನೆಯನ್ನು ಪ್ರವೇಶಿಸಕೂಡದು. ಅದಕ್ಕಾಗಿಯೇ ಪ್ರತೀದಿನ ನಾನು ಮನೆಗೆ ಹಿಂದಿರುಗುವಾಗ ಅಂದು ನನಗಾದ ತೊಂದರೆಗಳನ್ನು ಮಾನಸಿಕವಾಗಿ ಈ ಮರಕ್ಕೆ ನೇತು ಹಾಕಿ ತದನಂತರ ಮನೆಯೊಳಕ್ಕೆ ಹೋಗುತ್ತೇನೆ. ಮರುದಿನ ಬೆಳಗ್ಗೆ ಮನೆಬಿಡುವಾಗ ಪುನಃ ಅವನ್ನು ತೆಗೆದುಕೊಳ್ಳುತ್ತೇನೆ. ತಮಾಷೆಯ ವಿಷಯ ಏನು ಗೊತ್ತೇ? ಪ್ರತೀ ದಿನ ಬೆಳಗ್ಗೆ ತೊಂದರೆಗಳನ್ನು ತೆಗೆದುಕೊಳ್ಳಲು ಬಂದಾಗ ಹಿಂದಿನ ದಿನ ಎಷ್ಟು ತೊಂದರೆಗಳನ್ನು ನೇತುಹಾಕಿದ್ದೆನೋ ಅಷ್ಟು ಇರುವುದಿಲ್ಲ. ಅವುಗಳ ಸಂಖ್ಯೆ ಪವಾಡ ಸದೃಶ ರೀತಿಯಲ್ಲಿ ಕಮ್ಮಿ ಆಗಿರುತ್ತದೆ!”
೩೦. ನಮ್ಮ ಹಾದಿಯಲ್ಲಿ ಎದುರಾಗುವ ಅಡತಡೆಗಳು
ಒಂದಾನೊಂದು ಕಾಲದಲ್ಲಿ ರಾಜನೊಬ್ಬ ಜನಸಂಚಾರಕ್ಕೆ ತೊಂದರೆ ಆಗುವಂತೆ ರಸ್ತೆಯ ಮಧ್ಯದಲ್ಲಿ ಒಂದು ಏನೋ ಇದ್ದ ಪುಟ್ಟ ಕೈಚೀಲ ಇಟ್ಟು ಅದರ ಮೇಲೆ ಬೃಹದಾಕಾರದ ಬಂಡೆಯನ್ನು ಇಡಿಸಿದ. ತದನಂತರ ತುಸುದೂರದಲ್ಲಿ ಅಡಗಿ ಕುಳಿತು ಏನು ನಡೆಯುತ್ತದೆ ಎಂಬುದನ್ನು ನೋಡಲಾರಂಭಿಸಿದ. ಆ ದಾರಿಯಾಗಿ ಎಲ್ಲಿಗೋ ಹೋಗುತ್ತಿದ್ದ ರಾಜ್ಯದ ಶ್ರೀಮಂತ ವ್ಯಾಪರಿಗಳು ಹಾಗು ಆಸ್ಥಾನಿಕರು ಆ ಬಂಡೆಯ ಪಕ್ಕದಲ್ಲಿ ನಡೆದು ಹೋದರು. ಕೆಲವರು ರಸ್ತೆಯನ್ನು ಸುಸ್ಥಿತಿಯಲ್ಲಿ ಇಡದೆ ಇರುವುದಕ್ಕಾಗಿ ರಾಜನನ್ನು ಬಯುತ್ತಾ ಬಂಡೆಯನ್ನು ದಾಟಿಹೋದರು. ಯಾರೂ ಅದನ್ನು ಮಾರ್ಗದ ಅಂಚಿಗೆ ಸರಿಸುವ ಕುರಿತು ಆಲೋಚಿಸಲೇ ಇಲ್ಲ. ಆನಂತರ ತರಕಾರಿಗಳ ಹೊರೆ ಹೊತ್ತುಕೊಂಡಿದ್ದ ರೈತನೊಬ್ಬ ಅಲ್ಲಿಗೆ ಬಂದ. ಬಂಡೆಯ ಸಮೀಪಕ್ಕೆ ಬಂದಾಗ ಆತ ಹೊರೆಯನ್ನು ಇಳಿಸಿ ಬಂಡೆಯನ್ನು ರಸ್ತೆಯ ಅಂಚಿಗೆ ತಳ್ಳಲು ಪ್ರಯತ್ನಿಸಿದ. ಬಹಳ ಶ್ರಮ ಪಟ್ಟು ಅದನ್ನು ರಸ್ತೆಯ ಅಂಚಿಗೆ ಸರಿಸುವುದರಲ್ಲಿ ಯಶಸ್ವಿಯಾದ. ಆಗ ಅವನಿಗೆ ಅದರ ಅಡಿಯಲ್ಲಿ ಇದ್ದ ಪುಟ್ಟ ಕೈಚೀಲ ಕಾಣಿಸಿತು. ಅದರೊಳಗೆ ಕೆಲವು ಚಿನ್ನದ ನಾಣ್ಯಗಳೂ ‘ಬಂಡೆಯನ್ನು ಪಕ್ಕಕ್ಕೆ ಸರಿಸಿ ಜನಸಂಚಾರಕ್ಕೆ ಅನುಕೂಲ ಮಾಡಿಕೊಟ್ಟವರಿಗೆ ಇದು ರಾಜನ ಉಡುಗೊರೆ’ ಎಂಬುದಾಗಿ ಬರೆದಿದ್ದ ಚೀಟಿಯೂ ಇತ್ತು.
೩೧ಪ್ರಿಯತಮನ ಮೇಲಿನ ಪ್ರೀತಿಯ ತೀವ್ರತೆ
ತನ್ನ ಪ್ರಿಯತಮನನ್ನು ಗಾಢವಾಗಿ ಪ್ರೀತಿಸುತ್ತಿದ್ದ ಯುವತಿಯೊಬ್ಬಳು ನಾನಾ ಕಾರಣಗಳಿಂದಾಗಿ ಸುದೀರ್ಘ ಕಾಲ ಅವನನ್ನು ಭೇಟಿ ಮಾಡಲು ಸಾಧ್ಯವಾಗದೇ ಇದ್ದದ್ದರಿಂದ ಮಂಕಾಗಿದ್ದಳು. ಆದಾಗ್ಯೂ ತನ್ನ ಅಚ್ಚುಮೆಚ್ಚಿನ ಆಧ್ಯಾತ್ಮಿಕ ಗುರುವನ್ನು ಪುನಃ ಭೇಟಿಮಾಡಿ ಮುಂದಿನ ಬೋಧನೆಯನ್ನು ಸ್ವೀಕರಿಸಲು ಉತ್ಸುಕಳಾಗಿದ್ದಳು. ನಿಗದಿತ ದಿನದಂದು ಬಲು ಉತ್ಸಾಹದಿಂದ ಆಕೆ ಗುರುವಿನ ಹತ್ತಿರ ಹೋದಳು. ಆಕೆಯನ್ನು ಸ್ವಾಗತಿಸಿದ ಗುರು ಪರಿಪೂರ್ಣವಾಗಿ ಪಕ್ವವಾಗಿದ್ದ ತಾಜಾ ನೆಲಮುಳ್ಳಿ ಹಣ್ಣುಗಳಿದ್ದ ಒಂದು ದೊಡ್ಡ ಬುಟ್ಟಿಯನ್ನು ಕೊಟ್ಟು ಕೇಳಿದರು, “ಅಗೋ ಅಲ್ಲಿ ಒಂದು ಬೆಟ್ಟ ಕಾಣುತ್ತಿದೆಯಲ್ಲವೇ?” ಆಕೆ ಅತ್ತ ನೋಡಿದಾಗ ಬಂಡೆಕಲ್ಲುಗಳಿಂದ ಕೂಡಿದ್ದ ದೊಡ್ಡ ಬೆಟ್ಟವೊಂದು ಕಾಣಿಸಿತು. “ಈ ನೆಲಮುಳ್ಳಿ ಹಣ್ಣುಗಳಿರುವ ಬುಟ್ಟಿಯನ್ನು ಆ ಬೆಟ್ಟದ ತುದಿಗೆ ತೆಗೆದುಕೊಂಡು ಹೋಗು,” ಎಂಬುದಾಗಿ ಹೇಳಿ ಎಲ್ಲಿಗೋ ಹೊರಟುಹೋದರು, ಆಕೆ ಪ್ರತಿಭಟಿಸಲು ಅಥವ ಪ್ರಶ್ನೆ ಕೇಳಲು ಅವಕಾಶ ಕೊಡದೆ. ಇಷ್ಟವಿಲ್ಲದಿದ್ದರೂ ಆ ಬುಟ್ಟಿಯನ್ನು ಹೊತ್ತುಕೊಂಡು ಆಕೆ ಬೆಟ್ಟದತ್ತ ಹೆಜ್ಜೆ ಹಾಕಿದಳು. ಈ ನಿಯೋಜಿತ ಕಾರ್ಯದ ಉದ್ದೇಶವೇನು ಎಂಬುದೇ ಆಕೆಗೆ ತಿಳಿಯಲಿಲ್ಲ. ಬಹುಶಃ ತನಗೆ ತಕ್ಕ ಗುರು ಈತನಲ್ಲವೋ ಏನೋ ಎಂಬುದಾಗಿ ಆಲೋಚಿಸುತ್ತಾ ಆಕೆ ಬಲು ತ್ರಾಸದಾಯಕ ಹಾದಿಯಲ್ಲಿ ಆ ಬೆಟ್ಟವನ್ನು ಏರಲಾರಂಭಿಸಿದಳು. ಸಮಯ ಕಳೆದಂತೆ ಬಿಸಿಲಿನ ತಾಪ ಹೆಚ್ಚಾಯಿತು, ಹೊತ್ತಿದ್ದ ಬುಟ್ಟಿಯ ತೂಕವೂ ಹೆಚ್ಚಾಗುತ್ತಿರುವಂತೆ ತೋರುತ್ತಿತ್ತು! ಆದಾಗ್ಯೂ ಆಕೆ ಬೆಟ್ಟವೇರುವುದನ್ನು ನಿಲ್ಲಿಸಲಿಲ್ಲ. ಸಂಜೆಯ ವೇಳೆಗೆ ಆಕೆ ಬೆಟ್ಟದ ತುದಿಯನ್ನು ಏದುಸಿರು ಬಿಡುತ್ತಾ ತಲುಪಿದಳು.
ಆಹ್ಲಾದಕರ ತಂಪಾದ ಗಾಳಿ ಬೀಸುತ್ತಿದ್ದ ಆ ತಾಣ ವಾಸ್ತವವಾಗಿ ಒಂದು ಹುಲ್ಲುಗಾವಲು ಆಗಿತ್ತು. ತಾನು ಬಹುದಿನಗಳಿಂದ ಭೇಟಿ ಮಾಡಲು ಸಾಧ್ಯವಾಗದಿದ್ದ ಪ್ರಿಯತಮ ತನ್ನನ್ನು ಸ್ವಾಗತಿಸಲೋ ಎಂಬಂತೆ ಹುಲ್ಲುಗಾವಲಿನ ಇನ್ನೊಂದು ತುದಿಯಿಂದ ಬರುತ್ತಿರುವುದನ್ನು ನೋಡಿದಾಗ ಆಕೆಯ ದಣಿವು ಮಾಯವಾಯಿತು. ಗುರುಗಳು ಇಂತು ಮಾಡಲು ಹೇಳಿದ್ದು ತಾವೀರ್ವರನ್ನು ಭೇಟಿ ಮಾಡಿಸಲೋಸುಗ ಎಂಬುದಾಗಿ ಅವಳು ಭಾವಿಸಿದಳು. ಈ ಉದ್ದೇಶ ಮೊದಲೇ ತಿಳಿದಿದ್ದರೆ ಬೆಟ್ಟದ ಏರುವಿಕೆ ಒಂದು ಆಹ್ಲಾದಕರ ಅನುಭವ ಆಗುತ್ತಿತ್ತೋ ಏನೋ!
೩೨. ದರಿದ್ರ ವಿವೇಕಿ
ಬಲು ಸರಳ ಜೀವನ ನಡೆಸುತ್ತಿದ್ದ ವಿವೇಕಿಯೊಬ್ಬನಿದ್ದ. ಅವನ ಜೀವನ ಶೈಲಿಗೆ ತಕ್ಕಂತೆ ಅವನ ಆಹಾರಾಭ್ಯಾಸಗಳೂ ಬಲು ಸರಳವಾಗಿದ್ದವು. ರಾಜನ ಮುಖಸ್ತುತಿ ಮಾಡುವುದರ ಮೂಲಕ ವಿಲಾಸೀ ಜೀವನ ನಡೆಸುತ್ತಿದ್ದ ಮಿತ್ರನೊಬ್ಬ ಅವನಿಗಿದ್ದ. ಒಂದು ದಿನ ಆತ ಬಂದಾಗ ವಿವೇಕಿ ಊಟ ಮಾಡುತ್ತಿದ್ದ. ಆ ತಿನಿಸುಗಳನ್ನು ನೋಡಿ ಆತ ಹೇಳಿದ, “ಅಯ್ಯಾ ಮಿತ್ರನೇ, ನನ್ನಂತೆ ರಾಜನ ಮುಖಸ್ತುತಿ ಮಾಡುವುದನ್ನು ನೀನು ರೂಢಿಸಿಕೊಂಡರೆ ಈ ದರಿದ್ರ ಆಹಾರದಿಂದ ನೀನು ಮುಕ್ತಿ ಪಡೆಯುವೆ.” ವಿವೇಕಿ ನಸುನಗುತ್ತಾ ಉತ್ತರಿಸಿದ, “ಅಯ್ಯಾ ಮಿತ್ರನೇ, ನನ್ನಂತೆ ಈ ಸರಳ ಆಹಾರ ಸೇವಿಸುವುದನ್ನು ರೂಢಿಸಿಕೊಂಡರೆ ರಾಜನ ಮುಖಸ್ತುತಿ ಮಾಡುವ ದರಿದ್ರ ಕೆಲಸದಿಂದ ನೀನು ಮುಕ್ತಿ ಪಡೆಯುವೆ!”
೩೩. ಏಳು ಜಾಡಿಗಳು
ಒಂದಾನೊಂದು ಕಾಲದಲ್ಲಿ ವಿಧುರ ವ್ಯಾಪರಿಯೊಬ್ಬ ಬೆಟ್ಟದ ತಪ್ಪಲಿನಲ್ಲಿ ಇದ್ದ ತನ್ನ ಒಂಟಿ ಮನೆಯಿಂದ ಪ್ರತೀ ದಿನ ತುಸು ದೂರದಲ್ಲಿ ಇದ್ದ ಪಟ್ಟಣಕ್ಕೆ ಹೋಗಿ ವ್ಯಾಪಾರ ಮಾಡಿ ಹಿಂದಿರುಗುತ್ತಿದ್ದ. “ನಾನೊಂದು ದಿನದ ರಜೆಯ ಸುಖವನ್ನು ಅನುಭವಿಸಬೇಕು” ಎಂಬುದಾಗಿ ಮನಸ್ಸಿನಲ್ಲಿ ಅಂದುಕೊಂಡು ನಿಸರ್ಗ ಸೌಂದರ್ಯವನ್ನು ಆಸ್ವಾದಿಸಲೋಸುಗ ಬೆಟ್ಟದ ತುದಿಗೆ ಹತ್ತಲಾರಂಭಿಸಿದ. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲೋಸುಗ ಕಿರುನಿದ್ರೆ ಮಾಡಲು ಪ್ರಶಸ್ತವಾದ ತಾಣ ಹುಡುಕಲಾರಂಭಿಸಿದ. ಕಡಿಬಂಡೆಯೊಂದರಲ್ಲಿ ಇದ್ದ ಗುಹೆಯೊಂದನ್ನು ಆವಿಷ್ಕರಿಸಿದ. ಹೊರಗಿನ ಬೆಳಕು ಪ್ರವೇಶಿಸಲು ಸಾಧ್ಯವಿಲ್ಲದಿದ್ದ ಗುಹೆಯ ಒಳಭಾಗದ ಕತ್ತಲಿನಲ್ಲಿಯೇ ಒಂದೆಡೆ ಮಲಗಿ ನಿದ್ರೆ ಮಾಡಿದ. ಎಚ್ಚರವಾದ ನಂತರ ಕತ್ತಲಿನಲ್ಲಿ ಆತ ಅತ್ತಿತ್ತ ಕೈ ಅಲ್ಲಾಡಿಸಿದಾಗ ಏನೋ ತಗುಲಿದಂತಾಯಿತು. ಪರೀಕ್ಷಿಸಿದಾಗ ಅದೊಂದು ಮಣ್ಣಿನ ದೊಡ್ಡ ಜಾಡಿ ಎಂಬುದು ತಿಳಿಯಿತು. ಅದರ ಆಸುಪಾಸಿನಲ್ಲಿ ಇನ್ನೂ ಅಂಥದ್ದೇ ಆರು ಜಾಡಿಗಳು ಇರುವುದನ್ನು ಪತ್ತೆಹಚ್ಚಿದ. ‌ಒಂದರ ಮುಚ್ಚಳ ತೆರೆದು ಒಳಗೆ ಇದ್ದದ್ದರಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಹೊರತಂದು ನೋಡಿದಾಗ ಅವು ಚಿನ್ನದ ನಾಣ್ಯಗಳಾಗಿದ್ದವು. ತದನಂತರ ಪರಿಶೀಲಿಸಿದ ನಾಲ್ಕು ಜಾಡಿಗಳಲ್ಲಿಯೂ ಚಿನ್ನದ ನಾಣ್ಯಗಳು ಇದ್ದವು. ಐದನೆಯ ಜಾಡಿಯ ಮುಚ್ಚಳದ ಕೆಳಗೆ ಒಂದು ಪುರಾತನ ಕಾಗದವಿತ್ತು ಅದರಲ್ಲಿ ಇಂತು ಬರೆದಿತ್ತು: “ಇದು ಸಿಕ್ಕಿದವನೇ ಎಚ್ಚರದಿಂದಿರು! ಚಿನ್ನದ ನಾಣ್ಯಗಳಿರುವ ಏಳು ಜಾಡಿಗಳೂ ನಿನ್ನವು, ಒಂದು ಷರತ್ತಿಗೆ ಒಳಪಟ್ಟು. ಇವುಗಳೊಂದಿಗೆ ಒಂದು ಶಾಪವೂ ಇದೆ. ಶಾಪವನ್ನೂ ಸ್ವೀಕರಿಸದೆ ಕೇವಲ ಚಿನ್ನದ ನಾಣ್ಯಗಳನ್ನು ಮಾತ್ರ ಯಾರೂ ಒಯ್ಯುವಂತಿಲ್ಲ!” ಅಗಾಧ ಪ್ರಮಾಣದ ಚಿನ್ನ ಸಿಕ್ಕಿದ ಖುಷಿಯಲ್ಲಿ ಏಳನೆಯ ಜಾಡಿಯನ್ನು ಪರೀಕ್ಷಿಸದೆ, ಮುಂದೆ ಶಾಪ ವಿಮೋಚನೆಗಾಗಿ ಯುಕ್ತ ಕ್ರಮ ಕೈಗೊಳ್ಳಬಹುದು ಎಂಬ ನಿರ್ಧಾರಕ್ಕೆ ಬಂದ ವ್ಯಾಪಾರಿ ಯಾರಿಗೂ ತಿಳಿಯದಂತೆ ಚಿನ್ನವನ್ನು ಮನೆಗೆ ಸಾಗಿಸುವ ಯೋಜನೆ ರೂಪಿಸಿದ. ಭಾರೀ ಗಾತ್ರದ ಜಾಡಿಗಳಾಗಿದ್ದದ್ದರಿಂದ ಒಂದು ಬಾರಿಗೆ ಎರಡು ಜಾಡಿಗಳಂತೆ ತಳ್ಳುಗಾಡಿಯಲ್ಲಿ ರಾತ್ರಿಯ ವೇಳೆ ಅವನ್ನು ಮನೆಗೆ ಸಾಗಿಸಿದ. ಕೊನೆಯ ಬಾರಿ ಸಾಗಿಸಿದ ಏಳನೆಯ ಜಾಡಿ ತುಸು ಹಗುರವಾಗಿದ್ದಂತೆ ತೋರಿದರೂ ಆ ಕುರಿತು ಹೆಚ್ಚು ಕಾಳಜಿ ವಹಿಸಲಿಲ್ಲ. ಬಲು ತ್ರಾಸದಾಯಕ ಕಾರ್ಯವಾಗಿದ್ದರೂ ಚಿನ್ನ ಸಿಕ್ಕಿದ ಖುಷಿಯಲ್ಲಿ ಸಾಗಿಸಲು ಪಡಬೇಕಾದ ಕಷ್ಟ ಗೌಣವಾಗಿ ಕಂಡಿತು ವ್ಯಾಪಾರಿಗೆ. ಎಲ್ಲ ಜಾಡಿಗಳನ್ನೂ ಮನೆಗೆ ಸಾಗಿಸಿದ ನಂತರ ಪ್ರತೀ ಜಾಡಿಯಲ್ಲಿ ಇರುವ ಚಿನ್ನದ ನಾಣ್ಯಗಳನ್ನು ಎಣಿಸಲು ಆತ ಆರಂಭಿಸಿದ. ಮೊದಲನೆಯ ಆರೂ ಜಾಡಿಗಳ ಪೈಕಿ ಪ್ರತಿಯೊಂದೂ ನಾಣ್ಯಗಳಿಂದ ಭರ್ತಿಯಾಗಿತ್ತು.  ಏಳನೆಯ ಜಾಡಿಯ ಅರ್ಧದಷ್ಟು ಮಾತ್ರ ನಾಣ್ಯಗಳಿದ್ದವು. “ಏನಿದು ಅನ್ಯಾಯ! ಏಳು ಜಾಡಿಗಳಷ್ಟು ಚಿನ್ನದ ನಾಣ್ಯಗಳಿರುವುದಕ್ಕೆ ಬದಲಾಗಿ ಕೇವಲ ಆರೂವರೆ ಜಾಡಿಗಳಷ್ಟು ಮಾತ್ರ ಚಿನ್ನದ ನಾಣ್ಯಗಳಿವೆ,” ಎಂಬುದಾಗಿ ಕಿರುಚಿದ ವ್ಯಾಪಾರಿ. ಶಾಪದ ವಿಷಯವನ್ನು ಸಂಪೂರ್ಣವಾಗಿ ಮರೆತ ಆತ ಹೇಗಾದರೂ ಮಾಡಿ ಏಳನೆಯ ಜಾಡಿಯನ್ನೂ ಚಿನ್ನದ ನಾಣ್ಯಗಳಿಂದ ಭರ್ತಿ ಮಾಡಲೇಬೇಕೆಂದು ನಿರ್ಧರಿಸಿದ. ಸದಾ ಕಾಲವೂ “ಏಳನೆಯ ಜಾಡಿಯನ್ನು ನಾನು ಭರ್ತಿ ಮಾಡಲೇಬೇಕು” ಎಂಬುದೊಂದೇ ಅವನ ಆಲೋಚನೆಯಾಗಿತ್ತು. ವಿಚಿತ್ರವೆಂದರೆ ಅವನು ಎಷ್ಟೇ ಚಿನ್ನದ ನಾಣ್ಯಗಳನ್ನು ಸಂಪಾದಿಸಿ ಜಾಡಿಯೊಳಕ್ಕೆ ಹಾಕಿದರೂ ಅದು ಭರ್ತಿಯಾಗುವ ಲಕ್ಷಣಗಳೇ ಕಾಣಿಸುತ್ತಿರಲಿಲ್ಲ. ತತ್ಪರಿಣಾಮವಾಗಿ ಆತ ತನ್ನ ಶೇಷಾಯುಷ್ಯವನ್ನೆಲ್ಲ ಚಿನ್ನದ ನಾಣ್ಯ ಸಂಪಾದಿಸುವುದರಲ್ಲಿಯೇ ಕಳೆದನೇ ವಿನಾ ಅದನ್ನು ವೆಚ್ಚಮಾಡಿ ಸುಖಿಸಲು ಅಲ್ಲ!
೩೪. ಲಾವೋ ಟ್ಸುರವರ ಆಳ್ವಿಕೆ
ಲಾವೋ ಟ್ಸು ಒಬ್ಬ ವಿವೇಕಿಯೂ ಜ್ಞಾನಿಯೂ ಆಗಿದ್ದ ಎಂಬ ವಿಷಯ ಎಲ್ಲರಿಗೂ ತಿಳಿದಿತ್ತು. ಅವನಿಗಿಂತ ಚೆನ್ನಾಗಿ ದೇಶದ ಕಾನೂನುಗಳ ಅನುಷ್ಠಾನಕ್ಕೆ ಮಾರ್ಗದರ್ಶನ ಮಾಡಬಲ್ಲವರು ಬೇರೆ ಯಾರೂ ಇಲ್ಲ ಎಂಬುದೂ ಎಲ್ಲರಿಗೂ ತಿಳಿದಿತ್ತು. ಎಂದೇ, ಸರ್ವೋಚ್ಛ ನ್ಯಾಯಾಲಯದ ಮುಖ್ಯಸ್ಥನಾಗುವಂತೆ ಅವನನ್ನು ಚೀನಾ ದೇಶದ ಚಕ್ರವರ್ತಿಯು ಮನವಿ ಮಾಡಿದ. ಲಾವೋ ಟ್ಸುಗೆ ಆ ಹುದ್ದೆಗೇರಲು ಇಷ್ಟವಿರಲಿಲ್ಲ. ಎಂದೇ ಆತ, “ಆ ಕೆಲಸಕ್ಕೆ ಯುಕ್ತ ವ್ಯಕ್ತಿ ನಾನಲ್ಲ,” ಎಂಬುದಾಗಿ ಚಕ್ರವರ್ತಿಗೆ ಹೇಳಿದರೂ ಅವನು ಆ ಸ್ಥಾನವನ್ನು ಅಲಂಕರಿಸಲೇಬೇಕೆಂದು ಚಕ್ರವರ್ತಿ ಒತ್ತಾಯಿಸಿದ.
ಲಾವೋ ಟ್ಸು ಹೇಳಿದ, “ನಾನು ಹೇಳುವುದನ್ನು ನೀನು ಸರಿಯಾಗಿ ಕೇಳಿಸಿಕೊಳ್ಳದಿದ್ದರೆ- – – – ನಾನು ನ್ಯಾಯಾಲಯದಲ್ಲಿ ಕೇವಲ ಒಂದು ದಿನ ಕಾರ್ಯ ನಿರ್ವಹಿಸಿದರೆ ಸಾಕು, ನಾನು ಆ ಕೆಲಸಕ್ಕೆ ಯುಕ್ತ ವ್ಯಕ್ತಿಯಲ್ಲ ಎಂಬುದರ ಅರಿವು ನಿನಗೆ ಆಗುತ್ತದೆ, ಏಕೆಂದರೆ ವ್ಯವಸ್ಥೆಯೇ ಸರಿ ಇಲ್ಲ. ನಿನ್ನ ಮನ ನೋಯಿಸಬಾರದು ಎಂಬ ಕಾರಣಕ್ಕಾಗಿ ನಾನು ನಿನಗೆ ನಿಜವನ್ನು ಹೇಳಲಿಲ್ಲ. ಒಂದೋ ನಾನು ಅಸ್ತಿತ್ವದಲ್ಲಿ ಇರುತ್ತೇನೆ ಅಥವ ನಿನ್ನ ಕಾನೂನು ವ್ಯವಸ್ಥೆ ಹಾಗು ಸಮುದಾಯ ಅಸ್ತಿತ್ವದಲ್ಲಿ ಇರುತ್ತದೆ. ಆದ್ದರಿಂದ – – – ಒಂದು ದಿನ ಪ್ರಯತ್ನಿಸಿ ನೋಡೋಣ.”
ರಾಜಧಾನಿಯಲ್ಲಿ ಅತ್ಯಂತ ಶ್ರೀಮಂತನಾಗಿದ್ದವನ ಹೆಚ್ಚುಕಮ್ಮಿ ಅರ್ಧದಷ್ಟು ಸಂಪತ್ತನ್ನು ಕದ್ದ ಕಳ್ಳನನ್ನು ಮೊದಲನೇ ದಿನ ನ್ಯಾಯಾಲಯಕ್ಕೆ ಹಿಡಿದು ತಂದಿದ್ದರು. ಲಾವೋ ಟ್ಸು ಪ್ರಕರಣ ವಿವರಗಳನ್ನು ಮೌನವಾಗಿ ಕೇಳಿದ ನಂತರ ಕಳ್ಳ ಹಾಗು ಶ್ರೀಮಂತ ಇಬ್ಬರಿಗೂ ಆರು ತಿಂಗಳ ಕಾಲ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ.
“ನೀವೇನು ಹೇಳುತ್ತಿದ್ದೀರಿ? ಅನ್ಯಾಯವಾಗಿರುವುದು ನನಗೆ, ಕಳ್ಳತನವಾಗಿರುವುದು ನನ್ನ ಸಂಪತ್ತು – ಇದೆಂಥಾ ನ್ಯಾಯ? ಕಳ್ಳನಿಗೆ ವಿಧಿಸಿದ ಶಿಕ್ಷೆಯನ್ನೇ ನನಗೂ ವಿಧಿಸಿರುವುದು ಏಕೆ?” ಕಿರುಚಿದ ಶ್ರೀಮಂತ.
ಲಾವೋ ಟ್ಸು ಹೇಳಿದ, “ನನ್ನಿಂದೇನಾದರೂ ಅನ್ಯಾಯವಾಗಿದ್ದರೆ ಅದು ಕಳ್ಳನಿಗೆ. ವಾಸ್ತವಾವಾಗಿ ಅವನಿಗಿಂತ ಹೆಚ್ಚು ಕಾಲ ನೀನು ಸೆರೆಮನೆಯಲ್ಲಿರಬೇಕು. ಏಕೆಂದರೆ ನೀನು ವಿಪರೀತ ಹಣ ಸಂಗ್ರಹಿಸಲು ಆರಂಭಿಸಿದ್ದರಿಂದ ಅನೇಕರಿಗೆ ಅದು ಸಿಕ್ಕದಂತಾಯಿತು. ಸಾವಿರಾರು ಮಂದಿ ಬಡತನದಿಂದ ನರಳುತ್ತಿದ್ದಾರೆ, ನೀನಾದರೋ ಹಣ ಸಂಗ್ರಹಿಸುತ್ತಲೇ ಇರುವೆ, ಹಣ ಸಂಗ್ರಹಿಸುತ್ತಲೇ ಇರುವೆ. ಏನಕ್ಕಾಗಿ? ನಿನ್ನ ದುರಾಸೆಯೇ ಇಂಥ ಕಳ್ಳರು ಸೃಷ್ಟಿಯಾಗಲು ಕಾರಣ. ಇದಕ್ಕೆಲ್ಲ ನೀನೇ ಹೊಣೆಗಾರ. ಮೊದಲನೇ ಅಪರಾಧಿಯೇ ನೀನು!”
೩೫. ಸತ್ಯದ ರುಚಿ
ಸತ್ಯ ಎಂದರೇನು ಎಂಬುದನ್ನು ವಿವರಿಸುವಂತೆ ರಾಜನೊಬ್ಬ ಒಬ್ಬ ಋಷಿಯನ್ನು ಕೇಳಿದ. ಯಾವುದೇ ರೀತಿಯ ಸಿಹಿಯನ್ನು ಎಂದೂ ತಿನ್ನದೇ ಇದ್ದವನಿಗೆ ಮಾವಿನಹಣ್ಣಿನ ರುಚಿ ಹೇಗಿರುತ್ತದೆಂಬುದನ್ನು ನೀನು ಹೇಗೆ ತಿಳಿಸುವೆ ಎಂಬುದಾಗಿ ರಾಜನಿಗೆ ಮರುಪ್ರಶ್ನೆ ಹಾಕಿದ ಋಷಿ. ರಾಜ ಎಷ್ಟೇ ಪ್ರಯತ್ನಿಸಿದರೂ ಸಮರ್ಪಕ ವಿವರಣೆ ನೀಡಲು ಸಾಧ್ಯವಾಗಲಿಲ್ಲ. ಹತಾಶನಾದ ರಾಜ ಋಷಿಯನ್ನೇ ಕೇಳಿದ, “ವಿವರಿಸಲು ನಿಮ್ಮಿಂದ ಸಾಧ್ಯವೇ?”
ಋಷಿ ತನ್ನ ಜೋಳಿಗೆಯಿಂದ ಮಾವಿನಹಣ್ಣೊಂದನ್ನು ಹೊರತೆಗೆದು ರಾಜನಿಗೆ ಕೊಟ್ಟು ಹೇಳಿದ, “ಇದು ಬಲು ಸಿಹಿಯಾಗಿದೆ ತಿಂದು ನೋಡು!”
೩೬. ಶಾಂತಿಯ ನಿಜವಾದ ಅರ್ಥ
ಶಾಂತಿಯ ಅರ್ಥವನ್ನು ಬಿಂಬಿಸುವ ಅತ್ಯುತ್ತಮ ಚಿತ್ರವನ್ನು ಬರೆಯುವ ಕಲಾವಿದನಿಗೆ ಬಹುಮಾನ ಕೊಡುವುದಾಗಿ ರಾಜನೊಬ್ಬ ಘೋಷಿಸಿದ. ಬಹುಮಂದಿ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಅವರು ರಚಿಸಿದ ಚಿತ್ರಗಳನ್ನು ರಾಜ ವೀಕ್ಷಿಸಿದ. ಅವುಗಳ ಪೈಕಿ ಅವನಿಗೆ ನಿಜವಾಗಿ ಮೆಚ್ಚುಗೆ ಆದದ್ದು ಎರಡು ಚಿತ್ರಗಳು ಮಾತ್ರ. ಅವುಗಳ ಪೈಕಿ ಒಂದನ್ನು ಆತ ಆಯ್ಕೆ ಮಾಡಬೇಕಿತ್ತು.
ಒಂದು ಪ್ರಶಾಂತ ಸರೋವರದ ಚಿತ್ರ ಮೊದಲನೆಯದು. ಸುತ್ತಲೂ ಇದ್ದ ಪರ್ವತಶ್ರೇಣಿಯ ಪರಿಪೂರ್ಣ ಪ್ರತಿಬಿಂಬ ಸರೋವರದಲ್ಲಿ ಗೋಚರಿಸುತ್ತಿತ್ತು. ಸರೋವರದ ಮೇಲಿದ್ದ ನೀಲಾಕಾಶ ಹಾಗು ಅದರಲ್ಲಿದ ಹತ್ತಿಯ ರಾಶಿಯನ್ನು ಹೋಲುತ್ತಿದ್ದ ಬಿಳಿಮೋಡಗಳೂ ಅವುಗಳ ಪ್ರತಿಬಿಂಬವೂ ಸೊಗಸಾಗಿ ಮೂಡಿಬಂದಿತ್ತು. ಈ ಚಿತ್ರವೇ ಶಾಂತಿಯನ್ನು ಪ್ರತಿನಿಧಿಸುವ ಚಿತ್ರ ಎಂಬುದಾಗಿ ಪ್ರೇಕ್ಷಕರ ಅಭಿಪ್ರಾಯವಾಗಿತ್ತು. ಏಕೆಂದರೆ, ಎರಡನೆಯ ಚಿತ್ತದಲ್ಲಿ ಇದ್ದದ್ದು ಒಡ್ಡೊಡ್ಡಾಗಿದ್ದ ಬೋಳು ಪರ್ವತಗಳು. ಅವುಗಳ ಮೇಲಿತ್ತು ಕೋಪಗೊಂಡಿದ್ದ ಆಕಾಶ. ಅಲ್ಲಲ್ಲಿ ಮಿಂಚು ಗೋಚರಿಸುತ್ತಿದ್ದ ಆಕಾಶದಿಂದ ಮಳೆ ಸುರಿಯುತ್ತಿತ್ತು. ಪರ್ವತವೊಂದರ ಅಂಚಿನಲ್ಲಿ ಜಲಪಾತವೊಂದು ನೊರೆಯುಕ್ಕಿಸುತ್ತಾ ಬೀಳುತ್ತಿತ್ತು. ಚಿತ್ರದಲ್ಲಿ ಬಿಂಬಿತವಾಗಿದ್ದ ಸನ್ನಿವೇಶ ಶಾಂತಿಯ ಪ್ರತೀಕವಾಗಿರಲು ಹೇಗೆ ಸಾಧ್ಯ? ರಾಜನು ಚಿತ್ರವನ್ನು ಬಲು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಜಲಪಾತದ ಹಿಂಬದಿಯಲ್ಲಿ ಬಂಡೆಯ ಬಿರುಕೊಂದರಲ್ಲಿ ಬೆಳೆಯುತ್ತಿದ್ದ ಪುಟ್ಟ ಪೊದೆಯೂ ಅದರಲ್ಲಿ ಗೂಡು ಕಟ್ಟಿ ಕುಳಿತಿದ್ದ ಪಕ್ಷಿಯೂ ಕಾಣಿಸಿತು. ಬೋರ್ಗರೆಯುತ್ತಾ ಬೀಳುತ್ತಿದ್ದ ಜಲಪಾತದ ಹಿಂದೆ ಬೆಳೆದಿದ್ದ ಪೊದೆಯಲ್ಲಿ ಗೂಡು ಕಟ್ಟಿ ಕುಳಿತಿದ್ದ ತಾಯಿ ಪಕ್ಷಿ – ಪರಿಪೂರ್ಣ ಶಾಂತ ಸ್ಥಿತಿಯಲ್ಲಿ!
ಈ ಎರಡನೆಯ ಚತ್ರವನ್ನು ರಾಜ ಆಯ್ಕೆ ಮಾಡಿದ!
೩೭ಮರದ ಬಟ್ಟಲು
ನಿಶ್ಶಕ್ತ ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗು ೬ ವರ್ಷ ವಯಸ್ಸಿನ ಮೊಮ್ಮಗನೊಂದಿಗೆ ವಾಸಿಸುತ್ತಿದ್ದ. ಅವನ ಕೈಗಳು ನಡುಗುತ್ತಿದ್ದವು, ದೃಷ್ಟಿ ಮಂದವಾಗಿತ್ತು, ಹೆಜ್ಜೆಗಳು ಅಸ್ಥಿರವಾಗದ್ದವು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಆ ಕುಟುಂಬದ ಸಂಪ್ರದಾಯವಾಗಿತ್ತು. ವೃದ್ಧನ ನಡುಗುತ್ತಿದ್ದ ಕೈಗಳು ಹಾಗು ಮಂದ ದೃಷ್ಟಿ ಸರಾಗವಾಗಿ ತಿನ್ನಲು ಅಡ್ಡಿ ಉಂಟು ಮಾಡುತ್ತಿದ್ದವು. ಕೈ ನಡುಗುತ್ತಿದ್ದದ್ದರಿಂದ ಚಮಚೆಯಲ್ಲಿನ ಆಹಾರದ ಹಾಗು ಲೋಟದಲ್ಲಿನ ಹಾಲಿನ ಬಹು ಭಾಗ ಮೇಜಿನ ಮೇಲೆ ಹಾಕಿದ್ದ ಬಟ್ಟೆಗೆ ಚೆಲ್ಲುತ್ತಿತ್ತು, ಕೊಳಕಾಗುತ್ತಿದ್ದ ಬಟ್ಟೆ ನೋಡಿ ಮಗ ಹಾಗು ಸೊಸೆಗೆ ಸಿಟ್ಟು ಬರುತ್ತಿತ್ತು. ಕೊನೆಗೊಂದು ದಿನ ವೃದ್ಧನಿಂದಾಗುವ ತೊಂದರೆಯನ್ನು ನಿವಾರಿಸಲು ಅವರು ನಿರ್ಧರಿಸಿದರು. ಕೋಣೆಯ ಮೂಲೆಯೊಂದರಲ್ಲಿ ಪುಟ್ಟ ಮೇಜೊಂದನ್ನಿಟ್ಟು ಅಲ್ಲಿ ವೃದ್ಧನಿಗೆ ಊಟಕ್ಕೆ ವ್ಯವಸ್ಥೆ ಮಾಡಿದರು. ಒಂದೆರಡು ಬಾರಿ ಪಿಂಗಾಣಿ ಊಟದ ಬಟ್ಟಲನ್ನು ಆತ ಬೀಳಿಸಿ ಒಡೆದು ಹಾಕಿದ್ದರಿಂದ ಮರದ ಬಟ್ಟಲಿನಲ್ಲಿ ಆತನಿಗೆ ತಿನಿಸುಗಳನ್ನು ಕೊಡುತ್ತಿದ್ದರು. ಅವನೊಬ್ಬ ಮಾತ್ರ ಏಕಾಂಗಿಯಾಗಿ ಮೂಲೆಯಲ್ಲಿ ಕುಳಿತು ತಿನ್ನುತ್ತಿರುವಾಗ ಅವನ ಮಗ ಹಾಗು ಸೊಸೆ ಹರಟುತ್ತಾ ಬಲು ಸಂತೋಷದಿಂದ ಊಟ ಮಾಡುತ್ತಿದ್ದರು. ವೃದ್ಧ ಚಮಚೆಯನ್ನೋ ಇನ್ನೇನನ್ನೋ ಬೀಳಿಸಿದಾಗ ಅವನನ್ನು ಬಯ್ಯುವುದನ್ನು ಹೊರತುಪಡಿಸಿದರೆ ಅವನತ್ತ ತಿರುಗಿ ಸಹ ನೋಡುತ್ತಿರಲಿಲ್ಲ. ಇದನ್ನೆಲ್ಲ ಮೌನವಾಗಿ ೬ ವರ್ಷದ ಪುಟ್ಟ ಬಾಲಕ ಗಮನಿಸುತ್ತಿದ್ದ.
ಒಂದು ದಿನ ಬಾಲಕ ಮರದ ತುಂಡೊಂದನ್ನು ಹಿಡಿದು ಕೆತ್ತುತ್ತಿದ್ದದ್ದನ್ನು ನೋಡಿದ ಅವನ ತಂದೆ ಕೇಳಿದ, “ಇದೇನು ಮಾಡುತ್ತಿರುವೆ?”
ಬಾಲಕ ಉತ್ತರಿಸಿದ, “ನೀನು ಮತ್ತು ಅಮ್ಮ ಮುದುಕರಾದಾಗ ನಿಮಗೆ ಊಟ ಕೊಡಲು ಅಗತ್ಯವಾದ ಬಟ್ಟಲುಗಳನ್ನು ಮಾಡುತ್ತಿದ್ದೇನೆ!”
ಅಂದಿನಿಂದಲೇ ಮಗ ಹಾಗು ಸೊಸೆ ವೃದ್ಧನನ್ನು ತಮ್ಮ ಜೊತೆಯಲ್ಲಿಯೇ ಕುಳಿತು ಊಟಮಾದುವ ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲ, ಅವನು ಏನನ್ನಾದರೂ ಬೀಳಿಸಿದರೆ, ಮೇಜಿನ ಬಟ್ಟೆಯ ಮೇಲೆ ಏನನ್ನಾದರೂ ಚೆಲ್ಲಿದರೆ ಸಿಟ್ಟಿಗೇಳುತ್ತಿರಲಿಲ್ಲ!
೩೮. ಅಪರಿಪೂರ್ಣತೆಯನ್ನು ಅಪ್ಪಿಕೊಳ್ಳುವಿಕೆ
ನಾನು ಚಿಕ್ಕವಳಾಗಿದ್ದಾಗ, ನನ್ನ ಅಮ್ಮ ಬೆಳಗ್ಗಿನ ಉಪಾಹಾರಕ್ಕೆ ಮಾಡಬೇಕಾದ ತಿನಿಸನ್ನು ಒಮ್ಮೊಮ್ಮೆ ರಾತ್ರಿಯ ಭೊಜನಕ್ಕೆ ಮಾಡುತ್ತಿದ್ದಳು. ಒಂದು ಸಲ ದಿನವಿಡೀ ಬಲು ಶ್ರಮದಾಯಕ ಕೆಲಸಗಳನ್ನು ಮಾಡಿ ಆಯಾಸಗೊಂಡಿದ್ದ ಆಕೆ ರಾತ್ರಿಯ ಭೋಜನಕ್ಕೆ ಬೆಳಗ್ಗಿನ ಉಪಾಹಾರಕ್ಕೆ ಮಾಡಬೇಕಾದ ತಿನಿಸುಗಳನ್ನು ಮಾಡಿದಳು. ಅಂದು ರಾತ್ರಿ ಅಮ್ಮ ನನ್ನ ಅಪ್ಪನ ಮುಂದೆ ಬೇಯಿಸಿದ ಮೊಟ್ಟೆಗಳನ್ನೂ ಹದಗೊಳಿಸಿದ ಮಾಂಸವನ್ನೂ ಬಹಳ ಸುಟ್ಟುಹೋಗಿದ್ದ ಬ್ರೆಡ್ ‌ಅನ್ನೂ ಇಟ್ಟಳು. ಇದನ್ನು ನೋಡಿ ಅಪ್ಪ ಏನು ಹೇಳುವರೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೆ. ನನ್ನ ಅಪ್ಪನಾದರೋ ಆ ಸುಟ್ಟಬ್ರೆಡ್‌ ಅನ್ನು ತೆಗೆದುಕೊಂಡು ಅಮ್ಮನನ್ನು ನೋಡಿ ನಸುನಕ್ಕು ನನ್ನತ್ತ ತಿರುಗಿ ಆ ದಿನ ನನ್ನ ಶಾಲಾ ಚಟುವಟಿಕಗಳು ಹೇಗೆ ಜರಗಿದವು ಎಂಬುದನ್ನು ವಿಚಾರಿಸಿದರು.
ಬ್ರೆಡ್‌ ಬಹಳ ಸುಟ್ಟು ಹೋಗಿರುವುದನ್ನು ಅಮ್ಮ ಪ್ರಸ್ತಾಪಿಸಿ ಅದಕ್ಕಾಗಿ ಕ್ಷಮೆ ಕೋರಿದಳು. ಅದಕ್ಕೆ ಅಪ್ಪನ ಪ್ರತಿಕ್ರಿಯೆಯನ್ನು ನಾನು ಎಂದಿಗೂ ಮರೆಯಲಾರೆ: “ನನಗೆ ಸುಟ್ಟು ಹೋದ ಬ್ರೆಡ್‌ ಬಲು ಇಷ್ಟ.” ತದನಂತರ ಆ ಬ್ರೆಡ್‌ನ ಮೇಲೆ ಬೆಣ್ಣೆ ಹಾಗು ಜ್ಯಾಮ್‌ ಸವರಿ ಒಂದು ಚೂರನ್ನೂ ಬಿಡದೆ ನಿಧಾನವಾಗಿ ತಿಂದರು.
ಆ ದಿನ ರಾತ್ರಿ ಶುಭರಾತ್ರಿ ಹೇಳಲು ನಾನು ಅಪ್ಪನ ಹತ್ತಿರ ಹೋದಾಗ ಅವರಿಗೆ ನಿಜವಾಗಿಯೂ ಬಹಳ ಸುಟ್ಟುಹೋದ ಬ್ರೆಡ್‌ ಇಷ್ಟವೇ ಎಂಬುದನ್ನು ವಿಚಾರಿಸಿದೆ. “ಮಗಳೇ. ನಿನ್ನ ಅಮ್ಮ ದಿನವಿಡೀ ದುಡಿದು ಆಯಾಸವಾಗಿದ್ದರೂ ನಮಗೋಸ್ಕರ ಈ ತಿನಿಸುಗಳನ್ನು ಮಾಡಿದ್ದಾಳೆ. ಅಷ್ಟೇ ಅಲ್ಲದೆ, ತುಸು ಹೆಚ್ಚು ಸುಟ್ಟುಹೋದ ಬ್ರೆಡ್‌ ತಿಂದರೆ ಯಾರಿಗೂ ತೊಂದರೆ ಆಗುವುದಿಲ್ಲ,” ಎಂಬುದಾಗಿ ಹೇಳಿದರು.
೩೯ಆಯ್ಕೆ
ಭಿಕ್ಷುಕನೊಬ್ಬ ಸೂಫಿ ಸಂತ ಇಬ್ರಾಹಿಂ ಇಬ್ನ್ ಅಲ್‌ ಅಧಾಮ್‌ನ ಹತ್ತಿರ ಭಿಕ್ಷೆ ಬೇಡಿದ. ಇಬ್ರಾಹಿಂ ಹೇಳಿದ, “ನಾನು ನಿನಗೆ ಇನ್ನೂ ಉತ್ತಮವಾದದ್ದೊಂದನ್ನು ಕೊಡುತ್ತೇನೆ. ಬಾ ನನ್ನೊಂದಿಗೆ.” ಇಬ್ರಾಹಿಂ ಅವನನ್ನು ಪರಿಚಿತ ವ್ಯಾಪಾರಿಯೊಬ್ಬನ ಹತ್ತಿರಕ್ಕೆ ಕರೆದೊಯ್ದು ಭಿಕ್ಷುಕನಿಗೆ ಏನದರೊಂದು ಉದ್ಯೋಗ ಒದಗಿಸುವಂತೆ ವಿನಂತಿಸಿದ. ವ್ಯಾಪಾರಿಗೆ ಇಬ್ರಾಹಿಂನ ಮೇಲೆ ಸಂಪೂರ್ಣ ವಿಶ್ವಾಸವಿದ್ದದ್ದರಿಂದ ಭಿಕ್ಷಕನಿಗೆ ಕೆಲವು ಸಾಮಾನುಗಳನ್ನು ಕೊಟ್ಟು ಅವನ್ನು ಬೇರೆ ಊರುಗಳಿಗೆ ಒಯ್ದು ಮಾರಾಟ ಮಾಡಲು ಹೇಳಿದ.
ಕೆಲವು ದಿನಗಳ ನಂತರ ಆ ಭಿಕ್ಷುಕ ತನ್ನ ಹಿಂದಿನ ಸ್ಥಳದಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡು ಆಶ್ಚರ್ಯದಿಂದ ಅಂತಾಗಲು ಕಾರಣ ಏನೆಂಬುದನ್ನು ವಿಚಾರಿಸಿದ.
ಭಿಕ್ಷುಕ ವಿವರಿಸಿದ, “ನಾನು ಪ್ರಯಾಣ ಮಾಡುತ್ತಿರುವಾಗ ಮರುಭೂಮಿಯಲ್ಲಿ ಕುರುಡು ಹದ್ದೊಂದನ್ನು ನೋಡಿದೆ. ಮರುಭೂಮಿಯಲ್ಲಿ ಅದಕ್ಕೆ ಆಹಾರ ಹೇಗೆ ಸಿಕ್ಕುತ್ತಿದೆ ಎಂಬುದನ್ನು ತಿಳಿಯುವ ಕುತೂಹಲದಿಂದ ಅಲ್ಲಿಯೇ ನಿಂತಿದ್ದೆ. ಸ್ವಲ್ಪ ಸಮಯ ಕಳೆಯುವುದರೊಳಗೆ ಇನ್ನೊಂದು ಹದ್ದು ಆಹಾರವನ್ನು ತಂದು ಕುರುಡು ಹದ್ದಿಗೆ ತಿನ್ನಿಸುವುದನ್ನು ಕಂಡು ಆಶ್ಚರ್ಯಚಕಿತನಾದೆ. ಕುರುಡು ಹದ್ದನ್ನು ಯಾರು ಸಂರಕ್ಷಿಸುತ್ತಿದ್ದಾರೋ ಅವರೇ ನನ್ನನ್ನೂ ಸಂರಕ್ಷಿಸುತ್ತಾರೆ ಎಂಬುದಾಗಿ ನನಗೆ ನಾನೇ ಹೇಳಿಕೊಂಡು ಈ ಊರಿಗೆ ಮರಳಿ ಬಂದು ವ್ಯಾಪಾರಿಗೆ ಅವನ ಸಾಮಾನುಗಳನ್ನು ಹಿಂದಿರುಗಿಸಿ ಇಲ್ಲಿಗೆ ಬಂದು ನಿಂತುಕೊಂಡೆ!”
ತುಸು ಸಮಯ ಆಲೋಚಿಸಿದ ಇಬ್ರಾಹಿಂ ಅವನನ್ನು ಕೇಳಿದ, “ಒಂದು ವಿಷಯ ನನಗೆ ಅರ್ಥವಾಗಲಿಲ್ಲ. ಹಾರಿ ಹೋಗಿ ಬೇಟೆಯಾಡಿ ಆಹಾರ ಸಂಪಾದಿಸಿ ತಾನೂ ತಿಂದು ಅಸಹಾಯಕ ಕುರುಡು ಹದ್ದಿಗೂ ತಿನ್ನಿಸುತ್ತಿದ್ದ ಹದ್ದನ್ನು ಅನುಕರಿಸುವುದಕ್ಕೆ ಬದಲಾಗಿ ಕುರುಡು ಹದ್ದನ್ನು ನೀನು ಅನುಕರಿಸಿದ್ದೇಕೆ?”
೪೦ನಿಜವಾದ ಪ್ರೀತಿ
ಒಂದು ದಿನ ಬೆಳಗ್ಗೆ ಸುಮಾರು ೮.೩೦ ಗಂಟೆಗೆ ಸುಮಾರು ೮೦ ರ ಆಸುಪಾಸಿನ ವಯಸ್ಸಿನ ಹಿರಿಯರೊಬ್ಬರು ತಮ್ಮ ಹೆಬ್ಬೆರಳಿನ ಗಾಯಕ್ಕೆ ಹಾಕಿದ್ದ ಹೊಲಿಗೆಯನ್ನು ಬಿಚ್ಚಿಸಿಕೊಳ್ಳಲೋಸುಗ ಆಸ್ಪತ್ರೆಗೆ ಬಂದರು. ಸರತಿಸಾಲಿನಲ್ಲಿ ಬಹಳ ಹಿಂದೆ ಇದ್ದ ಅವರು ಆಗಿಂದಾಗ್ಗೆ ತಮ್ಮ ಕೈಗಡಿಯಾರದಲ್ಲಿ ಸಮಯ ನೋಡಿಕೊಳ್ಳುತ್ತಿದ್ದರು. ಬಲು ತುರ್ತಾಗಿ ಮಾಡಬೇಕಾದ ಬೇರ ಏನೋ ಕೆಲಸ ಅವರಿಗೆ ಇತ್ತು ಎಂಬುದನ್ನು ಅವರ ಚಡಪಡಿಸುವಿಕೆ ಸೂಚಿಸುತ್ತಿತ್ತು. ಇದನ್ನು ಗಮನಿಸಿದ ಸ್ವಾಗತಕಾರಿಣಿ ಅವರನ್ನು ಕರೆದು ಅವರ  ಹೆಬ್ಬೆರಳಿನ ಹೊಲಿಗೆ ಹಾಕಿದ್ದ ಗಾಯವನ್ನು ನೋಡಿದಳು. ಅದು ಚೆನ್ನಾಗಿ ವಾಸಿಯಾಗಿತ್ತಾದ್ದರಿಂದ ಹೊಲಿಗೆ ತೆಗೆಯುವುದು ಕೆಲವೇ ಕೆಲವು ನಿಮಿಷಗಳ ಕಾರ್ಯ ಎಂಬುದಾಗಿ ಅವಳು ಅನುಮಾನಿಸಿದಳು. ಎಂದೇ, ಆ ಕಾರ್ಯವನ್ನು ತಕ್ಷಣವೇ ಮಾಡಲು ಒಬ್ಬ ವೈದ್ಯರನ್ನು ಮನವೊಲಿಸಿದಳು. ವೈದ್ಯರು ಹೊಲಿಗೆ ಬಿಚ್ಚುತ್ತಿರುವಾಗ ಅವರಿಗಿದ್ದ ತುರ್ತು ಪರಿಸ್ಥಿತಿ ಏನೆಂಬುದನ್ನು ಅವಳು ವಿಚಾರಿಸಿದಳು. ಅವರ ಹೆಂಡತಿ ಯಾವುದೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿಯೂ ಪ್ರತೀ ದಿನ ಬೆಳಗ್ಗೆ ಅವರೀರ್ವರೂ ಒಟ್ಟಿಗೆ ಉಪಾಹಾರ ಸೇವಿಸುತ್ತಿರುವುದಾಗಿಯೂ ಆ ದಿನ ಆ ಆಸ್ಪತ್ರೆಗೆ ಹೋಗಲು ತುಸು ತಡವಾದದ್ದಕ್ಕೆ ಚಿಂತೆ ಆಗಿದೆ ಎಂಬುದಾಗಿಯೂ ತಿಳಿಸಿದರು. ಅವರ ಪತ್ನಿಗೆ ಆಲ್‌ಝೈಮರ್ಸ್ ಕಾಯಿಲೆ ಎಂಬ ವಿಷಯವನ್ನೂ ಕಳೆದ ೫ ವರ್ಷಗಳಿಂದ ಆಕೆಗೆ ತನ್ನನ್ನು ಗುರುತಿಸಲೂ ಆಗುತ್ತಿಲ್ಲವೆಂದೂ ತಿಳಿಸಿದರು.
ಆಶ್ಚರ್ಯಚಕಿತಳಾದ ಸ್ವಾಗತಕಾರಿಣಿ ಕೇಳಿದಳು, “ಅವರಿಗೆ ನೀವು ಯಾರೆಂಬುದೇ ತಿಳಿಯದಿದ್ದರೂ ನೀವು ಪ್ರತೀ ದಿನ ಬೆಳಿಗ್ಗೆ ಅವರೊಂದಿಗೆ ಉಪಾಹಾರ ಸೇವಿಸಲು ಹೋಗುತ್ತಿರುವಿರಾ?”
ಅವರು ನಸುನಕ್ಕು ಸ್ವಾಗತಕಾರಿಣಿಯ ಕೈತಟ್ಟಿ ಹೇಳಿದರು, “ಅವಳಿಗೆ ನಾನು ಯಾರೆಂಬುದು ಗೊತ್ತಿಲ್ಲವಾದರೂ ನನಗೆ ಅವಳು ಯಾರೆಂಬುದು ಗೊತ್ತಿದೆ!”
೪೧. ಮುಳ್ಳುಹಂದಿಗಳೂ ಅತ್ಯಂತ ತೀವ್ರವಾದ ಚಳಿಗಾಲವೂ
ಹಿಂದೊಮ್ಮೆ ಮುಳ್ಳುಹಂದಿಗಳು ಬಹುಸಂಖ್ಯೆಯಲ್ಲಿ ವಾಸಿಸುತ್ತಿದ್ದ ಭೂಪ್ರದೇಶದಲ್ಲಿ ಚಳಿಗಾಲದ ಚಳಿ ತೀವ್ರವಾಗಿತ್ತು. ಹಿಂದಿನ ಅನೇಕ ವರ್ಷಗಳಲ್ಲಿ ಯಾರೂ ಕಂಡಿರದೇ ಇದ್ದ ತೀವ್ರ ಚಳಿಗಾಲ ಅದಾಗಿತ್ತು. ಮುಳ್ಳುಹಂದಿಗಳು ಪರಿಸ್ಥಿತಿಯ ಗಂಭೀರತೆಯನ್ನು ತಿಳಿದು ವಿಶ್ರಾಂತಿ ತೆಗದುಕೊಳ್ಳುವಾಗ ಒಂದಕ್ಕೊಂದು ಅಂಟಿಕೊಂಡು ಗುಂಪಾಗಿ ಇರಲು ನಿರ್ಧರಿಸಿದವು. ಅಂತೆಯೇ ಇರಲು ಪ್ರಯತ್ನಿಸಿದಾಗ ದೇಹದ ಶಾಖವನ್ನು ಹಂಚಿಕೊಂಡು ಚಳಿಯ ತೀವ್ರತೆಯನ್ನು ಕಮ್ಮಿ ಮಾಡಿಕೊಳ್ಳುವುದರಲ್ಲಿ ಯಶಸ್ವಿಗಳಾದರೂ ಒಂದರ ಮುಳ್ಳು ಅದಕ್ಕೆ ಅಂಟಿಕೊಂಡು ಕುಳಿತದ್ದರ ದೇಹಕ್ಕೆ ಚುಚ್ಚಿ ಗಾಯಗಳಾದವು. ಒಂದೆರಡು ಪ್ರಯತ್ನಗಳ ನಂತರ ಗಾಯಗಳಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೇರೆಬೇರೆಯಾಗಿಯೇ ಇರಲು ನಿರ್ಧರಿಸಿದವು. ಈ ನಿರ್ಧಾರದ ಪರಿಣಾಮವಾಗಿ ಮುಳ್ಳುಹಂದಿಗಳು ಚಳಿಯಿಂದ ಮರಗಟ್ಟಿ ಒಂದೊಂದಾಗಿ ಸಾಯಲಾರಂಭಿಸಿದವು. ಉಳಿದ ಕೆಲವು ಮುಳ್ಳುಹಂದಿಗಳು ಸಭೆ ಸೇರಿ ಅತ್ಯಂತ ನಿಕಟ ಸಂಬಂಧ ಏರ್ಪಟ್ಟಾಗ ಸಣ್ಣಪುಟ್ಟ ನೋವುಗಳಾಗುವುದು ಹಾಗು ಅವನ್ನು ನಿಭಾಯಿಸಬೇಕಾದದ್ದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದವು. ಎಂದೇ, ಮುಳ್ಳುಹಂದಿಗಳ ವಂಶ ನಿರ್ನಾಮವಾಗದೇ ಇರಬೇಕಾದರೆ ಗಾಯವಾದರೂ ಸಹಿಸಿಕೊಂಡು ಒಟ್ಟಾಗಿ ಇರುವುದೇ ಒಳ್ಳೆಯದು ಎಂಬುದಾಗಿ ತೀರ್ಮಾನಿಸಿದವು.
೪೨. ಪುಟಾಣಿ ಜ್ಯಾಮಿ ಸ್ಕಾಟ್‌
ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದ್ದ ನಾಟಕವೊಂದರಲ್ಲಿ ಪಾತ್ರವೊಂದನ್ನು ಗಿಟ್ಟಿಸಿಕೊಳ್ಳಲು ಜ್ಯಾಮಿ ಪ್ರಯತ್ನಿಸುತ್ತಿದ್ದ. ಶಾಲಾ ನಾಟಕದಲ್ಲಿ ಒಬ್ಬ ಪಾತ್ರಧಾರಿಯಾಗಿ ಇರಲು ತೀವ್ರವಾಗಿ ಅವನು ಹಂಬಲಿಸುತ್ತಿದ್ದ ವಿಷಯ ಅವನ ಅಮ್ಮನಿಗೆ ತಿಳಿದಿತ್ತು. ಅವನು ತುಂಬ ಚಿಕ್ಕವನಾಗಿದ್ದದ್ದರಿಂದ  ಆಯ್ಕೆಯಾಗುವ ಸಂಭವನೀಯತೆ ಇಲ್ಲ ಅನ್ನುವ ಅರಿವೂ ಆಕೆಗಿತ್ತು.
ಪಾತ್ರಗಳನ್ನು ಹಂಚುವ ದಿನ ಅವನ ಅಮ್ಮ ಎಂದಿನಂತೆ ಅವನನ್ನು ಮನೆಗೆ ಕರೆತರಲು ಶಾಲೆಗೆ ಸಂಜೆ ಹೋದಳು. ಅವಳನ್ನು ಕಂಡೊಡನೆ ಹೆಮ್ಮೆಯಿಂದ ಹೊಳೆಯುತ್ತಿದ್ದ ಕಣ್ಣುಗಳ ಜ್ಯಾಮಿ ಓಡಿಬಂದು ಏರು ಧ್ವನಿಯಲ್ಲಿ ಹೇಳಿದ, “ನಿನಗೆ ಗೊತ್ತೇನಮ್ಮ, ಕೈಚಪ್ಪಾಳೆ ತಟ್ಟಿ ಉಳಿದ ಪಾತ್ರಧಾರಿಗಳನ್ನು ಪ್ರೋತ್ಸಾಹಿಸುವ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ!”
೪೩. ಧನಾತ್ಮಕ ಮನೋಧರ್ಮ
ಪುಟ್ಟ ಬಾಲಕಿಯೊಬ್ಬಳು ಮನೆಯಿಂದ ತುಸು ದೂರದಲ್ಲಿ ಇದ್ದ ಶಾಲೆಗೆ ಪ್ರತೀ ದಿನ ಒಬ್ಬಳೇ ನಡೆದುಕೊಂಡು ಹೋಗಿ ಬರುತ್ತಿದ್ದಳು. ಒಂದು ದಿನ ಶಾಲೆ ಬಿಡುವ ವೇಳೆಗೆ ದಟ್ಟವಾದ ಕಪ್ಪುಮೋಡ ಕವಿದ ವಾತಾವರಣವಿತ್ತು. ಜೋರಾಗಿ ಗಾಳಿ ಬೀಸಲಾರಂಭಿಸಿತ್ತು, ಗುಡುಗು ಮಿಂಚುಗಳು ಗಾಬರಿ ಹುಟ್ಟಿಸುವಷ್ಟು ಪ್ರಮಾಣದಲ್ಲಿದ್ದವು.
ಮಗಳ ಸುರಕ್ಷೆಯ ಕುರಿತು ಚಿಂತಿತಳಾಗಿದ್ದ ತಾಯಿ ಮಗಳನ್ನು ಕರೆತರಲು ತಾನೇ ಶಾಲೆಯ ಕಡೆಗೆ ವೇಗವಾಗಿ ನಡೆಯಲಾರಂಭಿಸಿದಳು.
ಸ್ವಲ್ಪ ದೂರ ನಡೆದಾಗ ದೂರದಲ್ಲಿ ಮಗಳು ಬರುತ್ತಿರುವುದನ್ನು ಅವಳು ನೋಡಿದಳು, ಪ್ರತೀ ಸಲ ಮಿಂಚು ಹೊಳೆದಾಗಲೂ ಆಕೆ ಆಕಾಶದತ್ತ ನೋಡಿ ನಸುನಗುತ್ತಿರುವುದನ್ನು ಗಮನಿಸಿದಳು. ಮಗಳ ಈ ವರ್ತನೆಯಿಂದ ಆಶ್ಚರ್ಯಚಕಿತಳಾದ ತಾಯಿ ಅವಳನ್ನು ಸಂಧಿಸಿದಾಗ ಕೇಳಿದಳು, “ಮಿಂಚು ಕಂಡಾಗ ಆಕಾಶದತ್ತ ನೋಡಿ ನಸುನಗುತ್ತಿರುವುದೇಕೆ?”
“ನೋಡಿದೆಯ ಅಮ್ಮ, ದೇವರು ನನ್ನ ಫೋಟೋ ಎಷ್ಟು ಸಲ ತೆಗೆಯತ್ತಿದ್ದಾನೆ?” ಖುಷಿಯಿಂದ ಉದ್ಗರಿಸಿದಳು ಆಕೆ.
೪೪. ಮೂರು ಕೂದಲುಗಳು
ಹಿಂದೊಂದು ದಿನ ಓರ್ವ ಮಹಿಳೆ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ತಲೆಯಲ್ಲಿ ಕೇವಲ ಮೂರು ಕೂದಲುಗಳು ಮಾತ್ರ ಇದ್ದದ್ದನ್ನು ಗಮನಿಸಿದಳು.
ಅವಳು ತನಗೆ ತಾನೇ ಹೇಳಿಕೊಂಡಳು, “ಒಳ್ಳೆಯದಾಯಿತು, ಈ ದಿನ ನಾನು ಜಡೆ ಹಾಕುತ್ತೇನೆ.” ಅವಳು ಅಂದುಕೊಂಡಂತೆಯೇ ಮಾಡಿದಳು, ಆ ದಿನವನ್ನು ಅವಳು ಅದ್ಭುತವಾಗಿ ಕಳೆದಳು.
ಮಾರನೆಯ ದಿನ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ತಲೆಯಲ್ಲಿ ಕೇವಲ ಎರಡು ಕೂದಲುಗಳು ಮಾತ್ರ ಇದ್ದದ್ದನ್ನು ಗಮನಿಸಿದಳು.
ಅವಳು ತನಗೆ ತಾನೇ ಹೇಳಿಕೊಂಡಳು, “ಓ, ಈ ದಿನ ಮಧ್ಯದಲ್ಲಿ ಬೈತಲೆ ಇರುವಂತೆ ಕೂದಲು ಬಾಚುತ್ತೇನೆ.” ಅವಳು ಅಂದುಕೊಂಡಂತೆಯೇ ಮಾಡಿದಳು, ಆ ದಿನವನ್ನು ಅವಳು ಅತ್ಯುತ್ತಮವಾಗಿ ಕಳೆದಳು.
ಮರುದಿನ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ತಲೆಯಲ್ಲಿ ಕೇವಲ ಒಂದು ಕೂದಲು ಮಾತ್ರ ಇದ್ದದ್ದನ್ನು ಗಮನಿಸಿದಳು.
ಅವಳು ತನಗೆ ತಾನೇ ಹೇಳಿಕೊಂಡಳು, “ಹಂಂ, ಈ ದಿನ ಕುದುರೆಬಾಲದಂತೆ ಇರುವ ಜುಟ್ಟು ಕಟ್ಟುತ್ತೇನೆ.” ಅವಳು ಅಂದುಕೊಂಡಂತೆಯೇ ಮಾಡಿದಳು, ಆ ದಿನವನ್ನು ಅವಳು ಮೋಜಿನಿಂದ ಕಳೆದಳು.
ಮರುದಿನ ಬೆಳಗ್ಗೆ ಎದ್ದು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ತಲೆಯಲ್ಲಿ ಕೂದಲೇ ಇಲ್ಲದ್ದನ್ನು ಗಮನಿಸಿದಳು.
ಅವಳು ತನಗೆ ತಾನೇ ಹೇಳಿಕೊಂಡಳು, “ವಾವ್‌, ಈ ದಿನ ತಲೆಗೂದಲು ಬಾಚುವ ಕೆಲಸವೇ ಇಲ್ಲ.”
೪೫. ಒಳಗಿನ ಯುದ್ಧ
ಒಬ್ಬ ಹಿರಿಯ ಚೆರೋಕೀ ತನ್ನೊಳಗೆ ಜರಗುತ್ತಿರುವುದರ ಅನುಭವವನ್ನು ತನ್ನ ಮೊಮ್ಮಗನಿಗೆ ಇಂತು ವರ್ಣಿಸಿದ:
“ಎರಡು ತೋಳಗಳ ನಡುವೆ ಭೀಕರ ಕಾಳಗ ನಡೆಯುತ್ತಿದೆ.
ಒಂದು ದುಷ್ಟ ತೋಳ – ಕೋಪ, ಅಸೂಯೆ, ದುಃಖ, ದುರಾಸೆ, ದುರಹಂಕಾರ, ಸ್ವಾನುಕಂಪ, ತಪ್ಪಿತಸ್ಥ ಪ್ರಜ್ಞೆ, ಅಸಮಾಧಾನ, ಕೀಳರಿಮೆ, ಸುಳ್ಳುಗಳು, ಒಣಜಂಭ, ಮೇಲರಿಮೆ, ಅಹಂಗಳು ಮೇಳೈಸಿರುವ ತೋಳ.
ಇನ್ನೊಂದು ಒಳ್ಳೆಯ ತೋಳ – ಸಂತೋಷ, ಶಾಂತಿ, ಪ್ರೀತಿ, ಭರವಸೆ, ನಿರಾಕುಲತೆ, ನಮ್ರತೆ, ದಯೆ, ಔದಾರ್ಯ, ಸಹಾನುಭೂತಿ, ಪರೋಪಕಾರ ಗುಣ, ಸತ್ಯ, ಅನುಕಂಪ, ನಂಬಿಕೆಗಳು ಮೇಳೈಸಿರುವ ತೋಳ.
ಅಂದ ಹಾಗೆ ಇಂಥದ್ದೇ ಯುದ್ಧ ನಿನ್ನೊಳಗೂ ನಡೆಯುತ್ತಿರುತ್ತದೆ. ವಾಸ್ತವವಾಗಿ ಎಲ್ಲರೊಳಗೂ ನಡೆಯುತ್ತಿರುತ್ತದೆ.”
ಮೊಮ್ಮಗ ಒಂದು ನಿಮಿಷ ಆ ಕುರಿತು ಆಲೋಚನೆ ಮಾಡಿ ಕೇಳಿದ, “ಯಾವ ತೋಳ ಗೆಲ್ಲುತ್ತದೆ?”
ಹಿರಿಯ ಚೆರೋಕೀ ಬಲು ಸರಳವಾಗಿ ಉತ್ತರಿಸಿದ: “ನೀನು ಯಾವ ತೋಳಕ್ಕೆ ಉಣ್ಣಿಸುತ್ತೀಯೋ ಅದು!”
೪೬. ಹತ್ತು ಮಿಲಿಯನ್‌ ಡಾಲರ್‌ಗಳು
ಸರ್ಕಾರೀ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ೯೫ ವರ್ಷ ವಯಸ್ಸಿನ ಹಣ್ಣಹಣ್ಣು ಮುದುಕನೊಬ್ಬನನ್ನು ಮಾತನಾಡಿಸಿ ಮಾನವಾಸಕ್ತಿ ಕೆರಳಿಸುವ ಕಥಾವಸ್ತು ಸಂಪಾದಿಸಲು ಪತ್ರಿಕಾ ವರದಿಗಾರನೊಬ್ಬ ಪ್ರಯತ್ನಿಸುತ್ತಿದ್ದ.
“ಅಜ್ಜ, ನಿಮ್ಮ ದೂರದ ಬಂಧುವೊಬ್ಬ ತನ್ನ ಉಯಿಲಿನ ಮುಖೇನ ನಿಮಗೆ ೧೦ ಮಿಲಿಯನ್‌ ಡಾಲರ್‌ ಅನ್ನು ವರ್ಗಾಯಿಸಿ ಮರಣಿಸಿದ ಸುದ್ದಿ ಇರುವ ಪತ್ರವೊಂದು ಹಠಾತ್ತನೆ ನಿಮಗೆ ಬಂದರೆ ನಿಮ್ಮ ಭಾವನೆಗಳು ಏನಾಗಿರುತ್ತವೆ? ಕೇಳಿದ ವರದಿಗಾರ.
“ಮಗಾ, ಆಗಲೂ ನನ್ನ ವಯಸ್ಸು ತೊಂಭತ್ತೈದೇ ಆಗಿರುತ್ತದಲ್ಲವೇ?” ಎಂಬುದಾಗಿ ನಿಧಾನವಾಗಿ ನಡುಗುವ ಧ್ವನಿಯಲ್ಲಿ ಉತ್ತರಿಸಿದ ಆ ವೃದ್ಧ.
೪೭. ಕನಸು
ಮಹಿಳೆಯೊಬ್ಬಳಿಗೆ ಪ್ರತೀ ದಿನ ರಾತ್ರಿ ನಿದ್ದೆಯಲ್ಲಿ ಆಕೆಯನ್ನು ಪೆಡಂಭೂತವೊಂದು ದೆವ್ವದ ಕಾಟವಿದ್ದ ಮನೆಯ ಎಲ್ಲಕಡೆ ಅಟ್ಟಿಸಿಕೊಂಡು ಹೋಗುತ್ತಿದ್ದಂತೆಯೂ, ಅದರ ಬಿಸಿಯುಸಿರು ಆಮ್ಲದಂತೆ ಕುತ್ತಿಗೆಯ ಹಿಂಬಾಗವನ್ನು ಸ್ಪರ್ಷಿಸುತ್ತಿದ್ದಂತೆಯೂ ಕನಸು ಬೀಳುತ್ತಿತ್ತು. ಆ ವೇಳೆಯಲ್ಲಿ
ನಿಜವಾಗಿಯೂ ಇಂತಾಗುತ್ತಿರುವಂತೆ ಆಕೆಗೆ ತೋರುತ್ತಿತ್ತು.
ಕೊನೆಗೊಂದು ರಾತ್ರಿ ಕನಸು ಬೀಳಲಾರಂಭಿಸಿತು, ಒಂದು ವ್ಯತ್ಯಾಸದೊಂದಿಗೆ – ಪೆಡಂಭೂತ ಭಯಭೀತಳಾಗಿದ್ದ ಆಕೆಯನ್ನು ಕೋಣೆಯ ಮೂಲೆಗೆ ತಳ್ಳಿ ಅವಳನ್ನು ಸಿಗಿದು ಹಾಕುವುದರಲ್ಲಿದ್ದಾಗ, ಆಕೆ ಬಲು ಧೈರ್ಯದಿಂದ ಗಟ್ಟಿಯಾಗಿ ಕಿರುಚಿದಳು, “ಯಾರು ನೀನು? ನನ್ನನ್ನೇಕೆ ಅಟ್ಟಿಸಿಕೊಂಡು ಬರುತ್ತಿರುವೆ? ನನ್ನನ್ನು ಏನು ಮಾಡಬೇಕೆಂದುಕೊಂಡಿರುವೆ?
ಆ ತಕ್ಷಣವೇ ಪೆಡಂಭೂತ ಗೊಂದಲದ ಮುಖಭಾವದೊಂದಿಗೆ ಸೊಂಟದ ಮೇಲೆ ಕೈಗಳನ್ನಿಟ್ಟು ನೆಟ್ಟಗೆ ನಿಂತುಕೊಂಡು ಹೇಳಿತು, “ನನಗೆ ಅದೆಲ್ಲ ಹೇಗೆ ಗೊತ್ತಿರಲು ಸಾಧ್ಯ? ಇದು ನಿನ್ನ ಕನಸು.”
೪೮. ಉತ್ತಮ ಬೆಳೆ ಬೆಳೆಯುವುದು
ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರತೀ ವರ್ಷ ಉತ್ತಮ ಬೆಳೆ ಬೆಳೆದುದಕ್ಕಾಗಿ ಪ್ರಶಸ್ತಿಗಳನ್ನು ಗಳಿಸುತ್ತಿದ್ದ ರೈತನೊಬ್ಬನಿದ್ದ. ಅವನು ಬೆಳೆಯುತ್ತಿದ್ದದ್ದು ಮುಸುಕಿನ ಜೋಳವನ್ನು.
ಒಂದು ವರ್ಷ ಆತನನ್ನು ಪತ್ರಿಕಾ ವರದಿಗಾರನೊಬ್ಬ ಭೇಟಿ ಮಾಡಿ ಅವನು ಅನುಸರಿಸುತ್ತಿದ್ದ ಕೃಷಿ ವಿಧಾನವನ್ನು ತಿಳಿಯಬಯಸಿದ. ಪ್ರತೀ ವರ್ಷ ತಾನು ಉಪಯೋಗಿಸುತ್ತಿದ್ದ ಬಿತ್ತನೆ ಬೀಜಗಳನ್ನು ಆತ ತನ್ನ ಆಸುಪಾಸಿನ ರೈತರಿಗೂ ವಿತರಣೆ ಮಾಡುತ್ತಿದ್ದ ಎಂಬುದನ್ನು ತಿಳಿದು ವರದಿಗಾರನಿಗೆ ಆಶ್ಚರ್ಯವಾಯಿತು. ಅವನಿಂದ ಬಿತ್ತನೆ ಬೀಜ ಪಡೆದು ಬೆಳೆ ಬೆಳೆದು ಅವರೂ ಅವನೊಂದಿಗೆ ಸ್ಪರ್ಧಿಸುತ್ತಿದ್ದ ವಿಷಯ ತಿಳಿದು ಅವನು ಕೇಳಿದ, “ನಿಮ್ಮೊಂದಿಗೆ ಸ್ಪರ್ಧಿಸುವ ರೈತರಿಗೆ ನೀವು ಬಿತ್ತನೆ ಮಾಡುವ ಬೀಜದಲ್ಲಿ ಸ್ವಲ್ಪವನ್ನು ಹಂಚುವುದರಿಂದ ನಿಮಗೆ ಸ್ಪರ್ಧೆಯಲ್ಲಿ ಹಿನ್ನಡೆ ಆಗುವುದಿಲ್ಲವೇ?”
ರೈತ ಉತ್ತರಿಸಿದ, “ಸ್ವಾಮೀ, ನಿಮಗೆ ಪರಾಗವನ್ನು ಗಾಳಿ ಒಂದೆಡೆಯಿಂದ ಆಸುಪಾಸಿನ ಜಮೀನಿಗೆ ಒಯ್ಯುತ್ತದೆ ಎಂಬ ವಿಷಯ ತಿಳಿದಿಲ್ಲವೇ? ನನ್ನ ಆಸುಪಾಸಿನ ರೈತರೇನಾದರೂ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಉಪಯೋಗಿಸಿದರೆ ಪರಕೀಯ ಪರಾಗಸ್ಪರ್ಷದ ಪರಿಣಾಮವಾಗಿ ನನ್ನ ಬೆಳೆಯ ಗುಣಮಟ್ಟವೂ ಕುಸಿಯುತ್ತದೆ. ನಾನು ಉತ್ತಮ ಬೆಳೆ ಬೆಳೆಯಬೇಕಾದರೆ ಉತ್ತಮ ಬೆಳೆ ಬೆಳೆಯಲು ಅವರಿಗೆ ನಾನು ನೆರವು ನೀಡಲೇ ಬೇಕು.”
೪೯. ಕಡಲದಂಡೆಯಗುಂಟ ನಡೆಯುತ್ತಿದ್ದ ಯುವಕ
 ತನಗಿಂತ ತುಸು ಮುಂದೆ ನಡೆಯುತ್ತಿದ್ದ ಯುವಕನೊಬ್ಬನ ವಿಶಿಷ್ಟ ವರ್ತನೆ ಕಡಲದಂಡೆಯಗುಂಟ ನಡೆಯುತ್ತಿದ್ದ ಮುದುಕನೊಬ್ಬನ ಗಮನ ಸೆಳೆಯಿತು. ಆತ ಸಮುದ್ರದ ಅಲೆಗಳಲ್ಲಿ ಕೊಚ್ಚಿಕೊಂಡು ಬಂದು ಕಿನಾರೆಯ ಮರಳಲ್ಲಿ ಬೀಳುತ್ತಿದ್ದ ನಕ್ಷತ್ರಮೀನುಗಳನ್ನು  ಹೆಕ್ಕಿ ಸಮುದ್ರಕ್ಕೆ ಎಸೆಯುತ್ತಿದ್ದ. ಮುದುಕ ತುಸು ವೇಗವಾಗಿ ನಡೆದು ಆ ಯುವಕನ ಜೊತೆ ಸೇರಿ ಆತ ಅಂತು ಮಾಡುತ್ತಿರುವುದೇಕೆಂಬುದನ್ನು ವಿಚಾರಿಸಿದ.
“ಸಮುದ್ರ ಕಿನಾರೆಯ ಮರಳಿನ ಮೇಲೆಯೇ ಬಹುಕಾಲ ಇದ್ದರೆ ಸೂರ್ಯನ ತಾಪಕ್ಕೆ ಈ ನಕ್ಷತ್ರಮೀನುಗಳು ಸುಟ್ಟು ಸಾಯುತ್ತವೆ,” ವಿವರಿಸಿದ ಆ ಯುವಕ.
“ಸಮುದ್ರ ಕಿನಾರೆ ಅನೆಕ ಮೈಲುಗಳಷ್ಟು ಉದ್ದವಾಗಿದೆ. ಇಲ್ಲಿ ನೂರಾರು ನಕ್ಷತ್ರಮೀನುಗಳು ಬಂದು ಬೀಳುತ್ತವೆ. ನೀನು ಕೆಲವನ್ನು ಎತ್ತಿ ಹಿಂದಕ್ಕೆ ಎಸೆದರೆ ಒಟ್ಟಾರೆ ಸನ್ನಿವೇಶದಲ್ಲಿ ಏನಾದರೂ ವ್ಯತ್ಯಾಸ ಆಗುತ್ತದೆಯೇ?” ಕೇಳಿದ ಮುದುಕ.
ಆ ಯುವಕ ತನ್ನ ಮುಂದೆ ಬಿದ್ದಿದ್ದ ನಕ್ಷತ್ರಮೀನೊಂದನ್ನು ಹೆಕ್ಕಿ ತೆಗೆದು ಅದನ್ನೊಮ್ಮೆ ನೋಡಿ, “ವ್ಯತ್ಯಾಸ ಆಗುತ್ತದೆ, ಈ ನಕ್ಷತ್ರಮೀನಿಗೆ,” ಎಂಬುದಾಗಿ ಹೇಳಿ ಅದನ್ನು ಸಮುದ್ರಕ್ಕೆ ಎಸೆದ.
೫೦. ಸೋರುವ ಬಿಂದಿಗೆ
ಮಹಿಳೆಯೊಬ್ಬಳು ಒಂದು ಸದೃಢವಾದ ಉದ್ದನೆಯ ಕೋಲಿನ ತುದಿಗಳಿಗೆ ನೀರು ತುಂಬಿದ ಎರಡು ಬಿಂದಿಗೆಗಳನ್ನು ನೇತುಹಾಕಿ ಅದನ್ನು ತನ್ನ ಕುತ್ತಿಗೆಯ ಹಿಂಭಾಗದಲ್ಲಿ ಅಡ್ಡಡ್ಡವಾಗಿ ಹೊತ್ತುಕೊಂಡು ತುಸು ದೂರದಲ್ಲಿದ್ದ ಕೆರೆಯಿಂದ ಮನೆಗೆ ನೀರು ತರುತ್ತಿದ್ದಳು. ಆ ಎರಡು ಬಿಂದಿಗೆಗಳ ಪೈಕಿ ಒಂದರಲ್ಲಿ ಸಣ್ಣ ರಂಧ್ರವೊಂದು ಇದ್ದದ್ದರಿಂದ ಮನೆ ತಲುಪುವಷ್ಟರಲ್ಲಿ ಸುಮಾರು ಅರ್ಧದಷ್ಟು ನೀರು ಸೋರಿ ಹೋಗಿರುತ್ತಿತ್ತು. ಮಹಿಳೆಗೆ ಇದು ತಿಳಿದಿದ್ದರೂ ಆಕೆ ಆ ಬಿಂದಿಗೆಯನ್ನು ಬದಲಿಸಲಿಲ್ಲ.
ಹೆಚ್ಚುಕಮ್ಮಿ ಎರಡು ವರ್ಷಗಳ ಕಾಲ ಪರಿಸ್ಥಿತಿ ಇಂತೆಯೇ ಇತ್ತು. ರಂಧ್ರರಹಿತ ಬಿಂದಿಗೆಗೆ ತನ್ನ ಸ್ಥಿತಿಯ ಕುರಿತು ಅಪಾರ ಹೆಮ್ಮೆ ಇತ್ತು. ತೂತು ಬಿಂದಿಗೆಗಾದರೋ ತನ್ನ ಸ್ಥಿತಿಯ ಕುರಿತು ನಾಚಿಕೆ ಆಗುತ್ತಿತ್ತು.
ಸೋರುತ್ತಿದ್ದ ಬಿಂದಿಗೆ ತನ್ನ ದುಸ್ಥಿತಿಯಿಂದ ಬೇಸರಗೊಂಡು ಒಂದು ದಿನ ಮಹಿಳೆಗೆ ಹೇಳಿತು, “ನನಗೆ ನನ್ನ ದುಸ್ಥಿತಿಯಿಂದ ಬಹಳ ನಾಚಿಕೆ ಆಗುತ್ತಿದೆ.”
ಅದು ಮಾತು ಮುಂದುವರಿಸುವ ಮುನ್ನವೇ ಮಹಿಳೆ ನಸುನಕ್ಕು ಹೇಳಿದಳು, “ಅದು ಅಂತಿರಲಿ. ಮನೆಗೆ ಬರುವ ದಾರಿಯಲ್ಲಿ ನೀನು ಇರುವ ಬದಿಯಲ್ಲಿ ಮಾತ್ರ ಹೂವಿನ ಗಿಡಗಳು ನಳನಳಿಸುತ್ತಿರುವದನ್ನು ಗಮನಿಸಿರುವೆಯಾ? ಒಳ್ಳೆಯ ಬಿಂದಿಗೆ ಇರುವ ಬದಿ ಖಾಲಿಯಾಗಿಯೇ ಒಣಗಿಕೊಂಡಿರುವುದನ್ನು ಗಮನಿಸಿರುವೆಯಾ? ನಿನ್ನಲ್ಲಿರುವ ನ್ಯೂನತೆ ಗಮನಿಸಿದ ನಾನು ಆ ಬದಿಯಲ್ಲಿ ಹೂವಿನ ಗಿಡಗಳ ಬೀಜಗಳನ್ನು ಬಿತ್ತಿದ್ದೆ. ಪ್ರತೀ ದಿನ ನಾನು ಕೊಳದಿಂದ ನೀರು ತರುವಾಗ ನೀನು ಅವುಗಳಿಗೆ ನೀರೆರೆಯುತ್ತಿದ್ದೆ. ತತ್ಪರಿಣಾಮವಾಗಿ ಗಿಡಗಳು ಚೆನ್ನಾಗಿ ಬೆಳೆದು ನನ್ನ ಮನೆಯ ಮೇಜನ್ನು ಅಲಂಕರಿಸಲು ಅಗತ್ಯವಾದ ಹೂವುಗಳು ಸಿಗುತ್ತಿವೆ. ನೀನು ಈಗಿರುವಂತೆಯೇ ಇಲ್ಲದಿರುತ್ತಿದ್ದರೆ ನನಗೆ ಹೂವುಗಳು ಸಿಗುತ್ತಿರಲಿಲ್ಲ!”

No comments: