Pages

10 April 2016

ನಜ಼ರುದ್ದೀನ್‌ನ ಕತೆಗಳು, ೫೧-೧೦೦

೫೧. ನಾನು ಯಾವಾಗಲೂ ಇತರರ ಕುರಿತೇ ಆಲೋಚಿಸುತ್ತೇನೆ

ವಿರಕ್ತ: “ನನ್ನ ಕುರಿತಾದ ಅನಾಸಕ್ತಿಯ ಒಂದು ನಂಬಲಸಾಧ್ಯವಾದ ಮಟ್ಟವನ್ನು ನಾನು ಸಾಧಿಸಿದ್ದೇನೆ -- ತತ್ಪರಿಣಾಮವಾಗಿ ನಾನು ಯಾವಾಗಲೂ ಇತರರ ಕುರಿತಾಗಿಯೇ ಆಲೋಚಿಸುತ್ತಿರುತ್ತೇನೆ, ನನ್ನ ಕುರಿತಾಗಿ ಎಂದೂ ಆಲೋಚಿಸುವುದಿಲ್ಲ.”
ನಜ಼ರುದ್ದೀನ್‌: “ನಾನು ಅದಕ್ಕಿಂತ ಮುಂದುವರಿದ ಸ್ಥಿತಿಯನ್ನು ತಲುಪಿದ್ದೇನೆ.”
ವಿರಕ್ತ: “ಏನದು?”
ನಜ಼ರುದ್ದೀನ್‌: “ನಾನು ಎಷ್ಟು ವಿಷಯನಿಷ್ಠನಾಗಿರುತ್ತೇನೆ ಅಂದರೆ ಇನ್ನೊಬ್ಬನನ್ನು ನಿಜವಾಗಿ ನಾನೇ ಎಂಬಂತೆ ನೋಡುತ್ತೇನೆ. ಅಂತು ಮಾಡುವುದರಿಂದ ಸದಾ ನನ್ನ ಕುರಿತೇ ನಾನು ಆಲೋಚಿಸುತ್ತಿರಲು ಸಾಧ್ಯವಾಗುತ್ತದೆ!”
*****

೫೨. ತರಕಾರಿ ಮೂಟೆ


ನಜ಼ರುದ್ದೀನ್‌ ಬೇರೆ ಯಾರದೋ ತೋಟಕ್ಕೆ ಸದ್ದಿಲ್ಲದೆ ಹೋಗಿ ತರಕಾರಿಯನ್ನು ಕೊಯ್ದು ತನ್ನೊಂದಿಗಿದ್ದ ಚೀಲಕ್ಕೆ ತುಂಬಿಸಲಾರಂಭಿಸಿದ. ತೋಟದ ಮಾಲಿಕ ಅವನನ್ನು ನೋಡಿ ಬೊಬ್ಬೆ ಹಾಕಿದ, “ನನ್ನ ತೋಟದಲ್ಲಿ ನೀನೇನು ಮಾಡುತ್ತಿರುವೆ?”
ನಜ಼ರುದ್ದೀನ್ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದ, “ಗಾಳಿ ಜೋರಾಗಿ ಬೀಸಿ ನನ್ನನ್ನು ಇಲ್ಲಿಗೆ ತಂದು ಹಾಕಿತು.”
ಮಾಲಿಕ ಹೇಳಿದ, “ಅದು ಹಸಿಹಸಿ ಸುಳ್ಳು ಎಂಬುದಾಗಿ ನನಗನ್ನಿಸುತ್ತಿದೆ. ನೀನು ಹೇಳಿದ್ದು ನಿಜ ಅಂದುಕೊಳ್ಳೋಣ. ಆದರೆ ನನ್ನ ತೋಟದ ತರಕಾರಿಯನ್ನು ನೀನು ಕಿತ್ತದ್ದು ಏಕೆ ಎಂಬುದನ್ನು ವಿವರಿಸು ನೋಡೋಣ.”
ನಜ಼ರುದ್ದೀನ್‌ ವಿವರಿಸಿದ, “ಓ ಅದು ಬಹಳ ಸರಳವಾದ ವಿಷಯ. ಗಾಳಿ ನನ್ನನ್ನು ಎಲ್ಲಿಗೋ ಬಹುದೂರಕ್ಕೆ ಒಯ್ಯುವುದನ್ನು ತಪ್ಪಿಸಲೋಸುಗ ಅವನ್ನು ನಾನು ಹಿಡಿದುಕೊಳ್ಳಬೇಕಾಯಿತು.”
ಮಾಲಿಕ ಅಷ್ಟಕ್ಕೇ ಸುಮ್ಮನಾಗಲಿಲ್ಲ, “ಹಾಗಿದ್ದರೆ ಆ ತರಕಾರಿ ನಿನ್ನ ಚೀಲದೊಳಕ್ಕೆ ಹೋದದ್ದು ಹೇಗೆ ಎಂಬುದನ್ನು ಹೇಳು ನೋಡೋಣ.”
ನಜ಼ರುದ್ದೀನ್ ಉತ್ತರಿಸಿದ, “ನಿನಗೊಂದು ವಿಷಯ ಗೊತ್ತಿದೆಯೇ? ಇಲ್ಲಿ ನಿಂತುಕೊಂಡು ಅದು ಹೇಗಾಯಿತೆಂಬುದನ್ನು ನಾನೂ ಆಶ್ಚರ್ಯ ಪಡುತ್ತಿದ್ದೆ!”
*****

೫೩. ನಜ಼ರುದ್ದೀನ್‌ ಪೆಟ್ಟು ತಿಂದದ್ದು


ಒಂದು ದಿನ ನಜ಼ರುದ್ದೀನ್‌ ಪಕ್ಕಾ ಅರಬ್‌ ಉಡುಪನ್ನು ಧರಿಸಲು ನಿರ್ಧರಿಸಿದ. ಅವನು ಮನೆಗೆ ಹಿಂದಿರುಗಿ ಬಂದಾಗ ಅವನ ಬಟ್ಟೆ ಹರಿದು ಚಿಂದಿಚಿಂದಿಯಾಗಿತ್ತು.
ಅವನ ಹೆಂಡತಿ ಕೇಳಿದಳು, “ನಿಮಗೇನಾಯಿತು? ಯಾರಾದರೂ ಹೊಡೆದರೇನು?”
ನಜ಼ರುದ್ದೀನ್‌ ಉತ್ತರಿಸಿದ, “ಹೌದು.”
ಅವಳು ವಿಚಾರಿಸಿದಳು, ಏಕೆ? ಈ ತೆರನಾದ ಉಡುಪು ಧರಿಸಿದ್ದಕ್ಕೆ ಯಾರೂ ಹೊಡೆಯುವುದಿಲ್ಲವಲ್ಲ?”
ನಜ಼ರುದ್ದೀನ್ ಹೇಳಿದ, “ಅರಬ್ಬನೊಬ್ಬನಿಗೆ ಹೊಡೆಯಲೇಬೇಕೆಂದು ತೀರ್ಮಾನಿಸಿದ್ದ ಕರ್ಡ್‌ ದೇಶವಾಸಿಗಳ ಗುಂಪಿಗೆ ಅದನ್ನು ಹೇಳು.”
*****

೫೪. ಬಲು ಚಳಿ


ಚಳಿಗಾಲದಲ್ಲಿ ವಿಪರೀತ ಚಳಿ ಇದ್ದ ಒಂದು ದಿನ ದಪ್ಪನೆಯ ಉಣ್ಣೆ ಬಟ್ಟೆಗಳನ್ನು ಧರಿಸಿದ್ದಾತನೊಬ್ಬ ಬಲು ತೆಳುವಾದ ಸಾಧಾರಣ ಬಟ್ಟೆ ಧರಿಸಿದ್ದ ನಜ಼ರುದ್ದೀನ್‌ನನ್ನು ಗಮನಿಸಿದ. ಅವನು ಕೇಳಿದ, “ಮುಲ್ಲಾ, ಇಷ್ಟೊಂದು ಬಟ್ಟೆ ಧರಿಸಿದ್ದರೂ ನನಗೆ ತುಸು ಚಳಿಯಾಗುತ್ತಿದೆ. ನೀನಾದರೋ ಬಟ್ಟೆಯೇ ಇಲ್ಲವೇನೋ ಅನ್ನಬಹುದಾದಷ್ಟು ಕಮ್ಮಿ ಬಟ್ಟೆ ಧರಿಸಿದ್ದರೂ ಈ ಶೀತಹವೆಯಿಂದ ಪ್ರಭಾವಿತನಾಗಿಲ್ಲ, ಏಕೆ?”
ನಜ಼ರುದ್ದೀನ್‌ ಉತ್ತರಿಸಿದ, “ಕಾರಣ ಇಷ್ಟೇ: ನನ್ನ ಹತ್ತಿರ ಇನ್ನೂ ಹೆಚ್ಚು ಬಟ್ಟೆಗಳಿಲ್ಲ, ಎಂದೇ ಚಳಿಯನ್ನು ಅನುಭವಿಸಲು ಸಾಧ್ಯವಿಲ್ಲ. ನಿಮ್ಮ ಹತ್ತಿರವಾದರೋ ಇನ್ನೂ ಹೆಚ್ಚು ಬಟ್ಟೆಗಳಿವೆ, ಎಂದೇ ತುಸು ಚಳಿ ಅನುಭವಿಸಲು ಸಾಧ್ಯವಾಗುತ್ತಿದೆ.”
*****

೫೫. ಊಟವೋ ಧರ್ಮೋಪದೇಶವೋ?


ಊರಿನ ಮತೀಯ ನಾಯಕನೊಬ್ಬ ನಜ಼ರುದ್ದೀನ್‌ನನ್ನು ರಾತ್ರಿಯ ಭೋಜನಕ್ಕೆ ಆಹ್ವಾನಿಸಿದ. ಆ ದಿನ ನಜ಼ರುದ್ದೀನ್‌ ಹೆಚ್ಚೇನೂ ತಿಂದಿರದೇ ಇದ್ದದ್ದರಿಂದ ನಾಯಕನ ಮನೆಗೆ ತಲುಪುವಾಗಲೇ ಬಲು ಹಸಿದಿದ್ದ. ಎಂದೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತಿನ್ನಲು ಆರಂಭಿಸುವುದರಲ್ಲಿ ಉತ್ಸುಕನಾಗಿದ್ದ. ಆ ನಾಯಕನಾದರೋ ನಜ಼ರುದ್ದೀನನಿಗೆ ಉಣಬಡಿಸುವುದಕ್ಕೆ ಬದಲಾಗಿ ಮತಕ್ಕೆ ಸಂಬಂಧಿಸದಂತೆ ಅನೇಕ ವಿಷಯಗಳ ಕುರಿತು ನಿರಂತರವಾಗಿ ಮಾತನಾಡುತ್ತಲೇ ಇದ್ದ. ಎರಡು ತಾಸು ಕಳೆದರೂ ಅವನು ಮಾತು ನಿಲ್ಲಿಸುವ ಲಕ್ಷಣಗಳೇ ನಜ಼ರುದ್ದೀನನಿಗೆ ಗೋಚರಿಸಲಿಲ್ಲ. ಕೊನೆಗೊಮ್ಮೆ ರೇಗಿದ ನಜ಼ರುದ್ದೀನ್‌ ಅವನ ಮಾತಿನ ಪ್ರವಾಹಕ್ಕೆ ತಡೆಯೊಡ್ಡಿ ಹೇಳಿದ, “ನಾನು ನಿಮ್ಮನ್ನೊಂದು ವಿಷಯ ಕೇಳಬಹುದೇ?”
ತಾನು ಮಾತನಾಡುತ್ತಿದ್ದ ವಿಷಯಗಳಿಗೆ ಸಂಬಂಧಿಸಿದಂತೆ ಏನೋ ಪ್ರಶ್ನೆಯನ್ನು ನಜ಼ರುದ್ದೀನ್ ಕೇಳಬಹುದೆಂದೂ ಅದಕ್ಕೆ ಉತ್ತರವಾಗಿ ತಾನು ಇನ್ನಷ್ಟು ಮಾತನಾಡಬಹುದೆಂದೂ ಭಾವಿಸಿ ನಾಯಕ ಕೇಳಿದ, “ಏನು?”
ನಜರುದ್ದೀನ್‌ ಕೇಳಿದ, “ನನಗೊಂದು ಕುತೂಹಲ ಉಂಟಾಗಿದೆ. ನೀವು ಹೇಳುತ್ತಿದ್ದ ಕತೆಗಳಲ್ಲಿ ಉಲ್ಲೇಖಿತರಾದ ವ್ಯಕ್ತಿಗಳು ಯಾವಾಗಲಾದರೂ ಏನನ್ನಾದರೂ ತಿನ್ನುತ್ತಿದ್ದರೋ?”
*****

೫೬. ಮಗ ತನಗೆ ಹೆಂಡತಿಯಾಗಬಲ್ಲವಳೊಬ್ಬಳನ್ನು ಹುಡುಕುತ್ತಿದ್ದಾನೆ


ಮಗ ತನಗೆ ಹೆಂಡತಿಯಾಗಬಲ್ಲವಳೊಬ್ಬಳನ್ನು ಹುಡುಕುತ್ತಿದ್ದಾನೆ ಎಂಬ ವಿಷಯ ನಜ಼ರುದ್ದೀನ್‌ನಿಗೆ ತಿಳಿಯಿತು. ಅವಳು ಯಾವ ತೆರನಾದವಳಾಗಿರಬೇಕು ಎಂಬುದನ್ನು ನಜ಼ರುದ್ದೀನ್‌ ಮಗನ ಹತ್ತಿರ ವಿಚಾರಿಸಿದ.
ಮಗ ವಿವರಿಸಿದ, “ಬುದ್ಧಿವಂತಳೂ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವಳೂ ಆಗಿರಬೇಕು.”
ಸರಿ. ಅಂಥವಳೊಬ್ಬಳನ್ನು ಹುಡುಕಲು ನಾನು ನಿನಗೆ ನೆರವು ನೀಡುತ್ತೇನೆ,” ಪ್ರತಿಕ್ರಿಯಿಸಿದ ನಜ಼ರುದ್ದೀನ್.
ಹುಡುಕುವಿಕೆಯ ಯೋಜನೆಯ ಮೊದಲನೇ ಕ್ರಮವಾಗಿ ನಜ಼ರುದ್ದೀನ್ ಮಗನನ್ನು ಪಟ್ಟಣದ ಮುಖ್ಯ ಚೌಕಿಗೆ ಕರೆದುಕೊಂಡು ಹೋದ. ಅಲ್ಲಿ ಅವನು ಎಲ್ಲರ ಎದುರು ಮಗನ ಕಪಾಳಕ್ಕೆ ಹೊಡೆದು ಹೇಳಿದ, “ನಾನು ಹೇಳಿದಂತೆಯೇ ನೀನು ಮಾಡಿದರೆ ನಿನಗೆ ಸಿಕ್ಕುವುದು ಇದೇ ಆಗಿರುತ್ತದೆ.”
ಚಿಕ್ಕ ಪ್ರಾಯದ ಒಬ್ಬಳು ಹುಡುಗಿ ಇದನ್ನು ನೋಡಿ ನಜ಼ರುದ್ದೀನ್‌ನಿಗೆ ಕೂಗಿ  ಹೇಳಿದಳು, “ಅವನಿಗೆ ಹೊಡೆಯುವುದನ್ನು ನಿಲ್ಲಿಸು. ನೀನು ಹೇಳಿದಂತೆ ಕೇಳುವ ಅವನಿಗೆ ಹೊಡೆಯುವುದು ಸರಿಯೇ?”
ಅವಳ ಮಾತುಗಳನ್ನು ಕೇಳಿದ ಮಗ ಕೇಳಿದ, “ಅವಳು ನನಗೆ ಸರಿಯಾದ ಜೋಡಿ ಆಗಬಲ್ಲಳು ಎಂಬುದಾಗಿ ನನಗನ್ನಿಸುತ್ತದೆ. ನಿನ್ನ ಅಭಿಪ್ರಾಯವೇನು?”
ನಜ಼ರುದ್ದೀನ್‌ ಉತ್ತರಿಸಿದ, “ಖಂಡಿತವಾಗಿಯೂ ಅವಳು ಬುದ್ಧಿವಂತಳೂ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವಳೂ ಆಗಿದ್ದಾಳೆ. ಅದರೂ ಅವಳಿಗಿಂತ ಉತ್ತಮವಾದವಳೊಬ್ಬಳು ಸಿಕ್ಕಿದರೂ ಸಿಕ್ಕಬಹುದು ನೋಡೋಣ.”
ನಜ಼ರುದ್ದೀನ್‌ ಮಗನನ್ನು ಪಕ್ಕದ ಪಟ್ಟಣಕ್ಕೆ ಕರೆದೊಯ್ದು ಅಲ್ಲಿಯೂ ಹಿಂದಿನಂತೆಯೇ ಮಾಡಿದ.
ಅಲ್ಲಿಯೂ ಚಿಕ್ಕ ಪ್ರಾಯದ ಒಬ್ಬಳು ಹುಡುಗಿ ಇದನ್ನು ನೋಡಿ ನಜ಼ರುದ್ದೀನ್‌ನಿಗೆ ಕೂಗಿ  ಹೇಳಿದಳು, “ಅವನಿಗೆ ಇನ್ನೂ ನಾಲ್ಕು ಬಾರಿಸು. ಒಬ್ಬ ಅವಿವೇಕಿ ಮಾತ್ರ ಆಜ್ಞೆಯನ್ನು ಕುರುಡಾಗಿ ಪಾಲಿಸುತ್ತಾನೆ.”
ನಜ಼ರುದ್ದೀನ್‌ ಹೇಳಿದ, “ಮಗನೇ, ಮೊದಲನೆಯವಳು ಬುದ್ಧಿವಂತಳೂ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವಳೂ ಆಗಿದ್ದಳು. ಈಕೆಯಾದರೋ ಸಂಪೂರ್ಣವಾಗಿ ಇನ್ನೂ ಮೇಲಿನ ಸ್ತರದಲ್ಲಿದ್ದಾಳೆ. ನಿನ್ನ ಭಾವೀ ಹೆಂಡತಿ ಸಿಕ್ಕಿದಳು ಅಂದನ್ನಿಸುತ್ತಿದೆ.”
*****

೫೭. ಗಿಟಾರ್‌ ವಾದಕ ನಜ಼ರುದ್ದೀನ್‌

ಪಟ್ಟಣದ ಮುಖ್ಯ ಚೌಕಿಯಲ್ಲಿದ್ದ ಜನರ ಗುಂಪೊಂದು ನಝರುದ್ದೀನ್‌ನನ್ನು ಅವನಿಗೆ ಗಿಟಾರ್ ನುಡಿಸಲು ಬರುತ್ತದೆಯೇ ಎಂಬುದಾಗಿ ಕೇಳಿತು. ನಜ಼ರುದ್ದೀನ್‌ನಿಗೆ ಗಿಟಾರ್‌ ನುಡಿಸಲು ಬರುತ್ತಿರಲಿಲ್ಲವಾದರೂ ಹೇಳಿದ, “, ಬರುತ್ತದೆ. ನಾನೊಬ್ಬ ನುರಿತ ಗಿಟಾರ್‌ ವಾದಕ. ನಿಜ ಹೇಳಬೇಕೆಂದರೆ ಜಗತ್ತಿನಲ್ಲಿಯೇ ಶ್ರೇಷ್ಠನಾದ ಗಿಟಾರ್‌ ವಾದಕ ನಾನು.”
ಅಲ್ಲಿದ್ದವರು ಅವನು ಆ ರೀತಿ ಬಡಾಯಿ ಕೊಚ್ಚಿಕೊಳ್ಳುತ್ತಾನೆ ಎಂಬುದನ್ನು ನಿರೀಕ್ಷಿಸಿದ್ದರು. ಆದ್ದರಿಂದ ಆ ತಕ್ಷಣವೇ ಒಬ್ಬ ಗಿಟಾರ್‌ ಒಂದನ್ನು ನಜ಼ರುದ್ದೀನ್‌ನಿಗೆ ಕೊಟ್ಟು ನುಡಿಸಲು ಹೇಳಿದ. ನಜ಼ರುದ್ದೀನ್‌ ಅದನ್ನು ತೆಗೆದುಕೊಂಡು ಒಂದೇ ಒಂದು ತಂತಿಯನ್ನು ಮೀಟುತ್ತಾ ನುಡಿಸಲಾರಂಭಿಸಿದ. ಒಂದು ನಿಮಿಷವಾದ ನಂತರ ಯಾರೋ ಅವನನ್ನು ತಡೆದು ಕೇಳಿದರು, “ಮುಲ್ಲಾ, ಗಿಟಾರ್‌ ವಾದಕರು ಅದರಲ್ಲಿರುವ ಎಲ್ಲ ತಂತಿಗಳ ಮೇಲೂ ಕೈಯಾಡಿಸುವುದನ್ನು ನೋಡಿದ್ದೇವೆ. ನೀನಾದರೋ ಒಂದೇ ಒಂದು ತಂತಿಯನ್ನು ಮಾತ್ರ ಮೀಟುತ್ತಿರುವೆಯಲ್ಲಾ, ಏಕೆ?”
ನಜ಼ರುದ್ದೀನ್ ಉತ್ತರಿಸಿದ, “ಓ ಅದೋ. ಅದೇಕೆಂದರೆ ಅವರೆಲ್ಲಾ ತಮಗೆ ಬೇಕಾದ ಒಂದು ನಿರ್ದಿಷ್ಟ ತಂತಿಯನ್ನು ಹುಡುಕುತ್ತಾ ಎಲ್ಲ ತಂತಿಗಳ ಮೇಲೆ ಕೈಯಾಡಿಸುತ್ತಾರೆ. ನಾನಾದರೋ ಮೊದಲನೇ ಪ್ರಯತ್ನದಲ್ಲಿಯೇ ನನಗೆ ಬೇಕಾದ ತಂತಿಯನ್ನು ನಿಖರವಾಗಿ ಗುರುತಿಸಿದ್ದರಿಂದ ಉಳಿದ ತಂತಿಗಳನ್ನು ಮೀಟಿ ಪರೀಕ್ಷಿಸುವ ಗೊಡವೆಗೆ ಹೋಗಲಿಲ್ಲ!”
*****

೫೮. ನಜ಼ರುದ್ದೀನ್‌ನ ಹಸು


ಒಂದು ದಿನ ನಜ಼ರುದ್ದೀನ್‌ನ ಹೆಂಡತಿ ಹೇಳಿದಳು, “ನಾವೊಂದು ಹಸು ಕೊಂಡುಕೊಳ್ಳೋಣ. ಆಗ ನಾವು ಪ್ರತೀ ದಿನ ಹಾಲು ಕುಡಿಯಬಹುದು.”
ನಜರುದ್ದೀನ್‌ ಪ್ರತಿಕ್ರಿಯಿಸಿದ, “ನಮ್ಮ ಕೊಟ್ಟಿಗೆಯಲ್ಲಿ ಈಗ ಇರುವ ನನ್ನ ಕತ್ತೆ ಹಾಗು ಹೊಸ ಹಸು ಎರಡನ್ನೂ ಕಟ್ಟಲು ಸ್ಥಳಾವಕಾಶ ಇಲ್ಲ.”
ನಜ಼ರುದ್ದೀನ್‌ನ ಪ್ರತಿರೋಧವಿದ್ದಾಗ್ಯೂ ಹೆಂಡತಿ ಪಟ್ಟು ಹಿಡಿದಿದ್ದರಿಂದ ಅವನು ಸಮ್ಮತಿಸಲೇ ಬೇಕಾಯಿತು.
ಅಂತೂ ಕೊನೆಗೊಂದು ಹಸುವನ್ನು ಮನೆಗೆ ತಂದದ್ದಾಯಿತು. ತತ್ಪರಿಣಾಮವಾಗಿ ನಜ಼ರುದ್ದೀನ್ ಮೊದಲೇ ಹೇಳಿದ್ದಂತೆ ಅವನ ಪ್ರೀತಿಯ ಕತ್ತೆ ಬಲು ಕಿರಿದಾದ ಜಾಗದಲ್ಲಿ ಇರಬೇಕಾಯಿತು. ಇದರಿಂದ ಬೇಸರಗೊಂಡ ಆತ ಒಂದು ರಾತ್ರಿ ಇಂತು ಪ್ರಾರ್ಥನೆ ಮಾಡಿದ: “ಓ ದೇವರೇ, ದಯವಿಟ್ಟು ಆ ಹಸುವನ್ನು ಸಾಯಿಸು ಹಾಗು ಮುಂದೆಂದೂ ನನ್ನ ಹೆಂಡತಿ ನನ್ನನ್ನು ಪೀಡಿಸದಂತೆ ಮಾಡು. ನನ್ನ ಕತ್ತೆ ನೆಮ್ಮದಿಯಿಂದ ಜೀವಿಸುವಂತಾಗಲಿ.”
ಮಾರನೆಯ ದಿನ ನಜ಼ರುದ್ದೀನ್ ಕೊಟ್ಟಿಗೆಗೆ ಹೋಗಿ ನೋಡಿದಾಗ ಅವನ ಪ್ರೀತಿಯ ಕತ್ತೆ ಸತ್ತು ಬಿದ್ದಿತ್ತು! ಅವನು ಆಕಾಶದತ್ತ ನೋಡುತ್ತಾ ಹೇಳಿದ, “ಓ ದೇವರೇ, ನಿನ್ನ ಮನನೋಯಿಸುವ ಉದ್ದೇಶ ನನಗಿಲ್ಲವಾದರೂ ಒಂದು ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ. ನೀನು ಅದೇಷ್ಟೋ ವರ್ಷಗಳಿಂದ ಇದ್ದರೂ ಕತ್ತೆಗೂ ಹಸುವಿಗೂ ನಡುವಣ ವ್ಯತ್ಯಾಸ ನಿನಗಿನ್ನೂ ತಿಳಿದಿಲ್ಲವೇ?”
*****

೫೯. ಒಂದು ಕಾಲಿನ ಮೇಲೆ ನಿಲ್ಲು


ಒಂದು ರಾತ್ರಿ ನಜ಼ರುದ್ದೀನ್‌ನ ಮನೆಗೆ ಕಳ್ಳರು ನುಗ್ಗಿ ಮನೆಯಲ್ಲಿರುವ ಹಣವನ್ನೆಲ್ಲ ಕೊಡುವಂತೆ ಆಜ್ಞಾಪಿಸಿದರು. ನಜ಼ರುದ್ದೀನ್ಅಯ್ಯಾ ಮಹಾಶಯರೇ, ಇದ್ದಿದ್ದರೆ ಒಂದು ಮಿಲಿಯ ದಿನಾರ್‌ಗಳನ್ನೂ ಕೊಡುತ್ತಿದ್ದೆ. ಆದರೇನು ಮಾಡಲಿ? ದುರದೃಷ್ಟವಶಾತ್ ಈಗ ನನ್ನ ಕಿಸೆಯಲ್ಲಿರುವ ೨೦ ದಿನಾರ್‌ಗಳನ್ನು ಬಿಟ್ಟರೆ ನನ್ನ ಹತ್ತಿರ ಬೇರೆ ಹಣವೇ ಇಲ್ಲ,” ಅಂದವನೇ ಕಿಸೆಯಲ್ಲಿದ್ದ ೨೦ ದಿನಾರ್‌ಗಳನ್ನು ತೆಗೆದು ಕೊಟ್ಟನು. ಇದರಿಂದ ಬಲು ಕೋಪಗೊಂಡ ಕಳ್ಳರು ಇಡೀ ರಾತ್ರಿ ಅಲ್ಲಯೇ ತಂಗಿದ್ದು ಅವನನ್ನು ಶಿಕ್ಷಿಸಲು ತೀರ್ಮಾನಿಸಿದರು. ಇಡೀ ರಾತ್ರಿ ಒಂದು ಕಾಲಿನ ಮೇಲೆ ನಿಂತಿರು,” ಎಂಬುದಾಗಿ ಆಜ್ಞಾಪಿಸಿದರು. ನಜ಼ರುದ್ದೀನ್‌ ಅಂತೆಯೇ ಮಾಡಿದ. ಕಳ್ಳರ ಪೈಕಿ ಒಬ್ಬನನ್ನು ಹೊರತುಪಡಿಸಿ ಉಳಿದವರು ಮಲಗಿ ನಿದ್ರಿಸಿದರು. ಒಂದು ಗಂಟೆಯ ನಂತರ ಕಾವಲಿಗಿದ್ದ ಕಳ್ಳ ಹೇಳಿದ, “ಇಲ್ಲಿ ಕೇಳು. ಈಗ ನಿಂತಿರುವ ಕಾಲನ್ನು ಬದಲಿಸಿ ಇನ್ನೊಂದು ಕಾಲಿನ ಮೇಲೆ ನಿಲ್ಲಲು ನಾನು ಅನುಮತಿಸುತ್ತೇನೆ.”
ನಜ಼ರುದ್ದೀನ್‌ ಉತ್ತರಿಸಿದ, “ಧನ್ಯವಾದಗಳು. ನೀನು ಉಳಿದವರಿಗಿಂತ ಒಳ್ಳೆಯವನಂತೆ ಕಾಣುತ್ತಿರುವೆ. ನಿಜ ಹೇಳಬೇಕೆಂದರೆ ನನ್ನ ಹಣ ಕಪಾಟಿನಲ್ಲಿರುವ ನನ್ನ ಪಾದರಕ್ಷೆಯೊಳಗಿದೆ. ನೀನು ಅದನ್ನು ತೆಗೆದುಕೊ, ಆದರೆ ಉಳಿದವರಿಗೆ ಅವರ ಪಾಲು ಕೊಡಬೇಡ!”
*****

೬೦. ಚಪ್ಪಟೆ ಬ್ರೆಡ್‌


ನಜ಼ರುದ್ದಿನ್‌ ವಾಸವಾಗಿದ್ದ ಪಟ್ಟಣದ ತೆರಿಗೆ ಸಂಗ್ರಾಹಕ ಭ್ರಷ್ಟನೂ ಲಂಚಕೋರನೂ ಆಗಿದ್ದ. ಒಂದು ದಿನ ನಗರಸಭಾಧ್ಯಕ್ಷನು ಲೆಕ್ಕಪತ್ರಗಳನ್ನು ತನಿಖೆಗಾಗಿ ಒಪ್ಪಿಸುವಂತೆ ತೆರಿಗೆ ಸಂಗ್ರಾಹಕನಿಗೆ ಹೇಳಿದ. ದಾಖಲೆಗಳನ್ನು ಪರಿಶೀಲಿಸಿದಾಗ ಸುಳ್ಳು ಲೆಕ್ಕಾಚಾರಗಳನ್ನು ದಾಖಲಿಸಿರುವುದು ಪತ್ತೆಯಾದ್ದರಿಂದ ಕೋಪೋದ್ರಿಕ್ತನಾದ ನಗರಸಭಾಧ್ಯಕ್ಷ ತೆರಿಗೆ ಸಂಗ್ರಾಹಕನನ್ನುದ್ದೇಶಿಸಿ ಕಿರುಚಿದ, “ಈ ಕ್ಷಣದಿಂದಲೇ ನಿನ್ನನ್ನು ಕೆಲಸದಿಂದ ತೆಗೆದು ಹಾಕಿದ್ದೇನೆ. ಅಷ್ಟೇ ಅಲ್ಲ, ಈ ಎಲ್ಲ ಖೊಟ್ಟಿ ಲೆಕ್ಕಪತ್ರಗಳನ್ನು ಈಗಲೇ ನಮ್ಮೆಲ್ಲರ ಸಮಕ್ಷಮದಲ್ಲಿಯೇ ತಿನ್ನಬೇಕೆಂದೂ ಆಜ್ಞಾಪಿಸುತ್ತಿದ್ದೇನೆ.”
ಅಲ್ಲಿದ್ದವರೆಲ್ಲ ಆಶ್ಚರ್ಯದಿಂದ ನೋಡುತ್ತಿರುವಂತೆಯೇ ತೆರಿಗೆ ಸಂಗ್ರಾಹಕ ಎಲ್ಲ ಕಾಗದಗಳನ್ನೂ ತಿಂದು ಮುಗಿಸಿದ. ಈ ಸುದ್ದಿ ಬಲು ಬೇಗನೆ ಪಟ್ಟಣದಾದ್ಯಂತ ಹರಡಿತು.
ಇದಾದ ಒಂದು ವಾರದ ನಂತರ ನಜ಼ರುದ್ದೀನ್‌ನನ್ನು ತೆರಿಗೆ ಸಂಗ್ರಾಹಕನಾಗಿ ನಗರಸಭಾಧ್ಯಕ್ಷ ನೇಮಿಸಿದ. ಒಂದು ವಾರ ಕಳೆದ ನಂತರ ನಗರಸಭಾಧ್ಯಕ್ಷ ಲೆಕ್ಕಪತ್ರಗಳನ್ನು ತನಿಖೆಗಾಗಿ ಒಪ್ಪಿಸುವಂತೆ ನಜ಼ರುದ್ದೀನ್‌ನಿಗೆ ಹೇಳಿದ. ನಜ಼ರುದ್ದೀನ್ ಕೆಲವು ಚಪ್ಪಟೆ ಬ್ರೆಡ್ಡುಗಳನ್ನು ನಗರಸಭಾಧ್ಯಕ್ಷನಿಗೆ ಕೊಟ್ಟ, ಅವುಗಳ ಮೇಲೆ ಅವನು ಲೆಕ್ಚಾಚಾರಗಳನ್ನು ಬರೆದಿದ್ದ. ಇಂತೇಕೆ ಮಾಡಿದ್ದೆಂದು ನಗರಸಭಾಧ್ಯಕ್ಷ ಕೇಳಿದಾಗ ನಜ಼ರುದ್ದೀನ್‌ ವಿವರಿಸಿದ, “ಈ ಹಿಂದೆ ತೆರಿಗೆ ಸಂಗ್ರಾಹಕನಿಗೆ ಏನಾಯಿತೆಂಬುದು ನನಗೆ ಗೊತ್ತಿದೆ. ನನಗೂ ನೀವು ಅದೇ ರೀತಿ ಲೆಕ್ಕಪತ್ರಗಳನ್ನು ತಿನ್ನಲು ಹೇಳಿದರೆ ಎಂಬುದಕ್ಕಾಗಿ ಇಂತು ಮಾಡಿದ್ದೇನೆ.”

೬೧. ವಿಚ್ಛೇದನಕ್ಕೆ ಕಾರಣ!


ನಜ಼ರುದ್ದೀನ್‌ ತನ್ನ ಹಳ್ಳಿಯ ನ್ಯಾಯಾಧೀಶನ ಹತ್ತಿರ ಹೋಗಿ ತನ್ನ ಹೆಂಡತಿಯಿಂದ ವಿವಾಹ ವಿಚ್ಛೇದನ ಬಯಸುತ್ತಿರುವುದಾಗಿಯೂ ಅದನ್ನು ಸ್ಥಳೀಯ ಕಾನೂನು ಪ್ರಕಾರ ಕೊಡಿಸಬೇಕೆಂದೂ ವಿನಂತಿಸಿದ.
ನ್ಯಾಯಾಧೀಶರು ಕೇಳಿದರು, “ಅವಳ ಹೆಸರೇನು?”
ನನಗೆ ಗೊತ್ತಿಲ್ಲ.”
ಮದುವೆಯಾಗಿ ಎಷ್ಟು ವರ್ಷಗಳಾಯಿತು,” ಆಶ್ಚರ್ಯಚಕಿತರಾದ ನ್ಯಾಯಾಧೀಶರು ಕೇಳಿದರು.
೫ ವರ್ಷಗಳು.”
೫ ವರ್ಷಗಳ ಕಾಲ ವಿವಾಹಿತ ಜೀವನ ನಡೆಸಿದ್ದರೂ ನಿನಗೆ ಅವಳ ಹೆಸರು ಗೊತ್ತಿಲ್ಲವೆಂದು ಹೇಳುತ್ತಿರುವೆಯಾ?”
ಹೌದು.”
ಏಕೆ?”
ಏಕೆಂದರೆ ನಾನು ಅವಳೊಂದಿಗೆ ಸಾಮಾಜಿಕ ಸಂಬಂಧಗಳನ್ನು ಇಟ್ಟುಕೊಂಡಿರಲಿಲ್ಲ!”
*****

೬೨. ತ್ರಿವಳಿಗಳು


ನಜ಼ರುದ್ದೀನ್‌ನ ಗರ್ಭಿಣಿ ಹೆಂದತಿ ಸಧ್ಯದಲ್ಲಿಯೇ ಮಗುವಿಗೆ ಜನ್ಮ ನೀಡುವವಳಿದ್ದಳು.
ಒಂದು ರಾತ್ರಿ ಅವರಿಬ್ಬರೂ ಮಲಗಿ ನಿದ್ರಿಸುತ್ತಿದ್ದಾಗ ಹೆಂಡತಿ ಅವನನ್ನು ಎಬ್ಬಿಸಿ ಹೇಳಿದಳು, “ಮಗು ಬರುತ್ತಿದೆ.”
ತಕ್ಷಣ ನಜ಼ರುದ್ದೀನ್ ಎದ್ದು ಮೋಂಬತ್ತಿಯನ್ನು ಹಚ್ಚುವಷ್ಟರಲ್ಲಿ ಮಗು ಜನಿಸಿಯೇ ಬಿಟ್ಟಿತು. ಅದಾದ ಕೆಲವೇ ನಿಮಿಷಗಳಲ್ಲಿ ನಜ಼ರುದ್ದೀನ್‌ ನೋಡುತ್ತಿದ್ದಂತೆಯೇ ಇನ್ನೊಂದು ಮಗು ಹೊರಬಂದಿತು. ಎರಡನೆಯ ಮಗು ಜನಿಸಿದ ಕೆಲವೇ ಕ್ಷಣಗಳ ನಂತರ ಮೂರನೆಯ ಮಗು ಜನಿಸಿತು. ಅದಾದ ತಕ್ಷಣ ನಜ಼ರುದ್ದೀನ್ ಮೋಂಬತ್ತಿಯನ್ನು ನಂದಿಸಿದ.
ಹೆಂಡತಿ ಕೇಳಿದಳು, ಮೋಂಬತ್ತಿಯನ್ನು ಆರಿಸಿದ್ದೇಕೆ?”
ನಜ಼ರುದ್ದೀನ್‌ ಹೇಳಿದ, ಬೆಳಕು ಇದ್ದಾಗ ಒಂದಾದ ನಂತರ ಒಂದರಂತೆ ಮೂರು ಮಕ್ಕಳೂ ಜನಿಸಿದವು. ಬೆಳಕು ಹಾಗೆಯೇ ಇದ್ದರೆ ಇನ್ನೂ ಎಷ್ಟು ಮಕ್ಕಳು ಜನಿಸುತ್ತಿದ್ದವೋ ಯಾರಿಗೆ ಗೊತ್ತು?”
*****

೬೩. ಮಗು ಅಳುತ್ತಿದೆ


ಒಂದು ದಿನ ಮಧ್ಯರಾತ್ರಿಯ ವೇಳೆಗೆ ನಜ಼ರುದ್ದೀನ್‌ನ ಮಗು ಅಳಲಾರಂಭಿಸಿತು.
ನಜ಼ರುದ್ದಿನ್‌ನ ಹೆಂಡತಿ ಮಲಗಿದಲ್ಲೇ ಅವನತ್ತ ತಿರುಗಿ ಹೇಳಿದಳು, “ಏಳಿ ಆ ಮಗುವನ್ನು ಸಮಾಧಾನ ಪಡಿಸಿ. ಆ ಮಗು ಕೇವಲ ನನ್ನೊಬ್ಬಳದು ಮಾತ್ರವಲ್ಲ, ಅವನ ಅರ್ಧ ಭಾಗ ನಿಮ್ಮದಲ್ಲವೇ?”
ನಜ಼ರುದ್ದೀನ್‌ ನಿದ್ದೆಗಣ್ಣಿನಲ್ಲಿಯೇ ಉತ್ತರಿಸಿದ, “ಆ ಮಗುವಿನ ನಿನ್ನ ಅರ್ಧ ಭಾಗವನ್ನು ಬೇಕಾದರೆ ನೀನೇ ಸಮಾಧಾನ ಪಡಿಸು. ನಾನಾದರೋ ನನ್ನ ಅರ್ಧ ಭಾಗ ಅಳುವಿಕೆಯನ್ನು ಮುಂದುವರಿಸಲು ಬಿಡುತ್ತೇನೆ!”
*****

೬೪. ಆನಂದವನ್ನು ಹುಡುಕುತ್ತಿದ್ದವ


ಒಂದು ದಿನ ನಜ಼ರುದ್ದೀನ್ ಬೇರೊಂದು ಪಟ್ಟಣದವನೊಟ್ಟಿಗೆ ಮಾತನಾಡಲು ಆರಂಭಿಸಿದ. ಆತ ಗೋಳಾಡಿದ ನಾನೊಬ್ಬ ಶ್ರೀಮಂತನಾಗಿದ್ದರೂ ಬಲು ಸಂಕಟ ಪಡುತ್ತಿದ್ದೇನೆ. ಸಾಕಷ್ಟು ಹಣ ವ್ಯಯಿಸಿ ಆನಂದವನ್ನು ಹುಡುಕುತ್ತಾ ಎಲ್ಲೆಡೆ ಸುತ್ತಾಡುತ್ತಿದ್ದೇನೆ. ಆದರೇನು ಮಾಡುವುದು, ಆನಂದ ಇನ್ನೂ ಸಿಕ್ಕಿಲ್ಲ.”
ಆತ ಮಾತನಾಡುತ್ತಿದ್ದಾಗ ನಜ಼ರುದ್ದೀನ್‌ ಆತನ ಕೈನಲ್ಲಿದ್ದ ಚೀಲವನ್ನು ಕಿತ್ತುಕೊಂಡು ಓಡಿ ಹೋದ. ಆ ಶ್ರೀಮಂತ ಬೆನ್ನಟ್ಟಿದನಾದರೂ ನಜ಼ರುದ್ದೀನ್ ಅವನ ಕೈಗೆ ಸಿಕ್ಕದೇ ತಪ್ಪಿಸಿಕೊಂಡ. ತದನಂತರ ಆ ಶ್ರೀಮಂತ ಅಟ್ಟಿಕೊಂಡು ಬರುತ್ತಿದ್ದ ದಾರಿಯಲ್ಲಿ ಆತನಿಗೆ ಕಾಣುವಂತೆ ಚೀಲವನ್ನು ರಸ್ತೆಯ ಮಧ್ಯದಲ್ಲಿ ಇಟ್ಟು ತಾನು ಒಂದು ಮರದ ಹಿಂದೆ ಅವಿತಿಟ್ಟಕೊಂಡು ನೋಡುತ್ತಿದ್ದ.
ನಜ಼ರುದ್ದೀನ್‌ನನ್ನು ಅಟ್ಟಿಕೊಂಡು ಬರುತ್ತಿದ್ದಾತ  ತನ್ನ ಚೀಲವನ್ನು ನೋಡಿದ. ಆ ತಕ್ಷಣವೇ ಆತನ ಸಂಕಟ ಪಡುತ್ತಿದ್ದ ಮುಖಮುದ್ರೆ ಆನಂದಭರಿತ ಮುಖಮುದ್ರೆಯಾಗಿ ಬದಲಾಯಿತು. ತನ್ನ ಚೀಲ ಸಿಕ್ಕಿದ ಸಂತೋಷ ವ್ಯಕ್ತ ಪಡಿಸಲು ಆತ ಕುಣಿಯಲಾರಂಭಿಸಿದ. ನಜ಼ರುದ್ದೀನ್‌ ತನಗೆ ತಾನೇ ಹೇಳಿಕೊಂಡ, “ದುಃಖಿತನಾದವನಿಗೆ ಆನಂದವನ್ನುಂಟು ಮಾಡುವ ಒಂದು ವಿಧಾನ ಇದು.”
*****

೬೫. ‌ ನಜ಼ರುದ್ದೀನ್ ನ್ಯಾಯಾಲಯದ ಮಟ್ಟಿಲೇರುವಂತೆ ಅವ ನ ಹೊಸ ಹೆಂಡತಿ ಮಾಡಿದ್ದು


ನಜ಼ರುದ್ದೀನ್‌ ತನ್ನ ಹೆಂಡತಿ ಸತ್ತು ಒಂದು ವರ್ಷವಾದ ನಂತರ ವಿಧವೆಯೊಬ್ಬಳನ್ನು ಮದುವೆಯಾದ.
ಒಂದು ರಾತ್ರಿ ಹಾಸಿಗೆಯಲ್ಲಿ ಇಬ್ಬರೂ ಮಲಗಿದ್ದಾಗ ಅವಳು ಹೇಳಿದಳು, “ನಿನಗೆ ಗೊತ್ತೇ? ನನ್ನ ಮೊದಲನೇ ಗಂಡ ನಿಜವಾಗಿಯೂ ಒಬ್ಬ ಆದರ್ಶಪ್ರಾಯ ವ್ಯಕ್ತಿಯಾಗಿದ್ದ.”
ಅವಳು ತನ್ನ ಮೊದಲನೇ ಗಂಡನ ಕುರಿತು ಮಾತನಾಡಿದ್ದರಿಂದ ತುಸು ಕೋಪಗೊಂಡ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಅಂತೆಯೇ ನನ್ನ ಮೊದಲನೆಯ ಹೆಂಡತಿಯೂ ನಂಬಲಸಾಧ್ಯವಾಗುವಷ್ಟು ಚೆಲುವಾಗಿಯೂ ಆಕರ್ಷಕವಾಗಿಯೂ ಇದ್ದಳು.”
ಅವಳು ಉತ್ತರಿಸಿದಳು, “ಓಹೋ, ನನ್ನ ಮೊದಲನೆಯ ಗಂಡ ಅದ್ಭುತವಾಗಿ ಉಡುಪುಗಳನ್ನು ಧರಿಸುತ್ತಿದ್ದ.”
ನನ್ನ ಮೊದಲನೆಯ ಹೆಂಡತಿ ಅಸಾಧಾರಣ ಅಡುಗೆಯವಳಾಗಿದ್ದಳು,” ಪ್ರತಿಯಾಗಿ ಹೇಳಿದ ನಜ಼ರುದ್ದೀನ್.
ನನ್ನ ಮೊದಲನೆಯ ಗಂಡ ಪ್ರತಿಭಾವಂತ ಗಣಿತಜ್ಞನಾಗಿದ್ದ.”
ನನ್ನ ಮೊದಲನೆಯ ಹೆಂಡತಿ ನಿಪುಣ ಸಂಘಟಕಳಾಗಿದ್ದಳು.”
ನನ್ನ ಮೊದಲನೆಯ ಗಂಡ ಅಸಾಧಾರಣ ಶಕ್ತಿಶಾಲಿಯಾಗಿದ್ದ.”
ಇಂತು ಇಬ್ಬರೂ ಸ್ವಲ್ಪ ಕಾಲ ತಮ್ಮ ಸತ್ತುಹೋದ ಸಂಗಾತಿಗಳ ಕುರಿತು ಹೊಗಳಿಕೊಂಡರು. ಕೊನೆಗೊಮ್ಮೆ ಸಿಟ್ಟನ್ನು ನಿಯಂತ್ರಿಸಲಾಗದೆ ನಜ಼ರುದ್ದೀನ್ ತನ್ನ ಹೊಸ ಹೆಂಡತಿಯನ್ನು ಹಾಸಿಗೆಯಿಂದ ಹೊರದಬ್ಬಿದ. ತತ್ಪರಿಣಾಮವಾಗಿ ಆಕೆಯ ಕೈಗೊಂದು ಪುಟ್ಟ ಗಾಯವಾಯಿತು.
ಕೋಪೋದ್ರಿಕ್ತಳಾದ ಆಕೆ ನಜ಼ರುದ್ದೀನ್‌ನನ್ನು ಮರುದಿನ ಸ್ಥಳೀಯ ನ್ಯಾಯಾಧೀಶರ ಹತ್ತಿರ ಕರೆದೊಯ್ದು ನಡೆದದ್ದನ್ನು ತಿಳಿಸಿ ತನಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದಳು.
ಅವಳ ಹೇಳಿಕೆಯನ್ನು ಕೇಳಿದ ನ್ಯಾಯಾಧೀಶರು ನಜ಼ರುದ್ದೀನ್‌ನತ್ತ ತಿರುಗಿ ಹೇಳಿದರು, “ಸರಿ, ಈಗ ನಿನ್ನ ಪ್ರಕಾರ ನಡೆದದ್ದೇನು ಎಂಬುದನ್ನು ಹೇಳು.”
ನಜ಼ರುದ್ದೀನ್‌ ವಿವರಿಸಿದ, “ಮಹಾಸ್ವಾಮಿ, ನಮ್ಮ ಹಾಸಿಗೆಯಲ್ಲಿ ಇಬ್ಬರು ಮಾತ್ರ ಮಲಗಲು ಸಾಧ್ಯ. ಆದರೆ ನಿನ್ನೆ ರಾತ್ರಿ ನನ್ನ ಮೊದಲನೆಯ ಹೆಂಡತಿ ಮತ್ತು ಹೊಸ ಹೆಂಡತಿಯ ಮೊದಲನೆಯ ಗಂಡ ಬಂದು ಸೇರಿಕೊಂಡದ್ದರಿಂದ ಸ್ಥಳಾವಕಾಶ ಸಾಲದೆ ಹೊಸ ಹೆಂಡತಿ ಹಾಸಿಗೆಯಿಂದ ತಳ್ಳಲ್ಪಟ್ಟಳು, ಅವಳ ಕೈಗೆ ಪುಟ್ಟ ಗಾಯವಾಯಿತು.”
*****
೬೬. ಹಸುವಿನ ತಲೆ ಸಿಕ್ಕಿಹಾಕಿಕೊಂಡದ್ದನ್ನು ಹೊರತೆಗೆದದ್ದು

ಒಂದು ದಿನ ಹಸುವೊಂದು ಅಗಲ ಕಿರಿದಾದ ಕುತ್ತಿಗೆಯುಳ್ಳ ಹಂಡೆಯಿಂದ ನೀರು ಕುಡಿಯುತ್ತಿದ್ದಾಗ ಅದರ ತಲೆ ಹಂಡೆಯ ಕತ್ತಿನಲ್ಲಿ ಸಿಕ್ಕಿಹಾಕಿಕೊಂಡಿತು. ಹಸುವಿನ ಮಾಲಿಕ ಹಾಗು ಅಲ್ಲಿ ಆಸುಪಾಸಿನಲ್ಲಿದ್ದವರು ಅದನ್ನು ಗಮನಿಸಿ ಪಾತ್ರೆಯಿಂದ ಹಸುವಿನ ತಲೆ ಹೊರತೆಗೆಯಲು ಪ್ರಯತ್ನಿಸಿದರು. ಏನೂ ಪ್ರಯೋಜನವಾಗಲಿಲ್ಲ.
ಆ ಮಾರ್ಗವಾಗಿ ಎಲ್ಲಿಗೋ ಹೋಗುತ್ತಿದ್ದ ನಜ಼ರುದ್ದೀನ್ ಹತ್ತಿರ ಬಂದು ವಿಚಾರಿಸಿದ, “ಏನಾಗಿದೆ ಇಲ್ಲಿ?”
ಹಸುವಿನ ಮಾಲಿಕ ಹೇಳಿದ, “ನನ್ನ ಹಸುವಿನ ತಲೆ ಈ ಪಾತ್ರೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅದನ್ನು ಹೊರತೆಗೆಯುವುದು ಹೇಗೆಂಬುದು ತಿಳಿಯುತ್ತಿಲ್ಲ. ಮುಲ್ಲಾ, ಹಸುವಿನ ತಲೆ ಹೊರತೆಗೆಯಲು ನಿನಗೇನಾದರೂ ಉಪಾಯಗಳು ತಿಳಿದಿದೆಯೇ?”
ನಜ಼ರುದ್ದೀನ್‌ ಹಸು ಹಾಗು ಪಾತ್ರೆಯನ್ನು ಪರಿಶೀಲಿಸಿದ ನಂತರ ಹೇ:ಳಿದ, “ಮೊದಲು ಹಸುವಿನ ತಲೆ ಕಡಿಯಿರಿ.”
ಮಾಲಿಕ ನಝರುದ್ದೀನ್‌ನ ಸೂಚನೆಯನ್ನು ಅಕ್ಷರಶಃ ಪಾಲಿಸಿದ. ತತ್ಪರಿಣಾಮವಾಗಿ ಹಸುವಿನ ತಲೆ ತುಂಡಾಗಿ ಹಂಡೆಯೊಳಗೆ ಬಿತ್ತು.
ಮಾಲಿಕ ಕೇಳಿದ, “ಈಗ ನಾನೇನು ಮಾಡಬೇಕು?”
ಹಂಡೆ ಒಡೆದು ತಲೆ ಹೊರತೆಗೆದುಕೊ!”
*****

೬೭. ಮನೆಯೊಳಗೊಬ್ಬ ಕಳ್ಳ


ನಜ಼ರುದ್ದೀನ್‌ ಮತ್ತು ಅವನ ಹೆಂಡತಿ ಒಂದು ರಾತ್ರಿ ತಮ್ಮ ಮನೆಯಲ್ಲಿ ನಿದ್ರಿಸುತ್ತಿದ್ದಾಗ ಹೆಂಡತಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಅವಳು ನಜ಼ರುದ್ದೀನ್‌ನನ್ನು ಎಬ್ಬಿಸಿ ಹೇಳಿದಳು, “ನಜ಼ರುದ್ದೀನ್‌, ನಮ್ಮ ಮನೆಯೊಳಗೆ ಒಬ್ಬ ಕಳ್ಳ ನುಗ್ಗಿದ್ದಾನೆ! ಹೋಗು ಅವನನ್ನು ಹಿಡಿ!”
ನಜ಼ರುದ್ದೀನ್ ಬಲು ತಾಳ್ಮೆಯಿಂದ ಉತ್ತರಿಸಿದ, “ಅವನಿಗೇನು ಬೇಕೋ ಅದನ್ನು ಮಾಡಲು ಬಿಡುವುದೇ ಒಳ್ಳೆಯದು ಎಂಬುದಾಗಿ ನನಗನ್ನಿಸುತ್ತಿದೆ. ಅವನು ಕದಿಯಲು ಯೋಗ್ಯವಾದದ್ದು ನಮ್ಮ ಮನೆಯಲ್ಲಿ ಏನೂ ಇಲ್ಲ. ಅದೃಷ್ಟವಿದ್ದರೆ ಅವನೇ ಇಲ್ಲಿ ಏನನ್ನಾದರೂ ಮರೆತು ಬಿಟ್ಟು ಹೋಗಬಹುದು.”
ಹೆಂಡತಿ ರೇಗಿದಳು, “ಮೂರ್ಖನಂತೆ ಮಾತನಾಡಬೇಡ. ನೀನು ಆಲೋಚಿಸಿದಂತೇನೂ ಆಗುವುದಿಲ್ಲ.”
ಸರಿ ಹಾಗಾದರೆ, ಕದಿಯಲು ಯೋಗ್ಯವಾದ್ದು ಏನಾದರೂ ಅವನಿಗೆ ಸಿಕ್ಕಲೂ ಬಹುದು. ತೊಂದರೆ ಇಲ್ಲ, ಅದನ್ನು ಆನಂತರ ನಾನು ಅವನಿಂದ ಕದಿಯಬಲ್ಲೆ!”
*****

೬೮. ಕೆರೆಗೆ ಬೀಳುವುದರಲ್ಲಿದ್ದ ನಜ಼ರುದ್ದೀನ್‌


ಒಂದು ದಿನ ನಜ಼ರುದ್ದೀನ್ ಕಾಲು ಜಾರಿ ಕೆರೆಗೆ ಬೀಳುವುದರಲ್ಲಿದ್ದಾಗ ಜೊತೆಯಲ್ಲಿಯೇ ಇದ್ದ ಸ್ನೇಹಿತ ಅವನ ಕೈಹಿಡಿದೆಳೆದು ರಕ್ಷಿಸಿದ.
ತದನಂತರ ನಜ಼ರುದ್ದೀನ್ ಸಿಕ್ಕಿದಾಗಲೆಲ್ಲ ಆ ಸ್ನೇಹಿತ ಅದನ್ನು ನೆನಪಿಸಿ ನಜ಼ರುದ್ದೀನ್‌ನಿಗೆ ತನ್ನಿಂದಾದ ಉಪಕಾರವನ್ನು ತುಸು ಉತ್ಪ್ರೇಕ್ಷಿಸಿ ಹೇಳಲಾರಂಭಿಸಿದ. ಘಟನೆ ಜರಗಿ ಅನೇಕ ತಿಂಗಳುಗಳೇ ಕಳೆದರೂ ಸ್ನೇಹಿತ ತನ್ನ ಚಾಳಿಯನ್ನು ಬಿಡದೇ ಇದ್ದಾಗ ನಜ಼ರುದ್ದೀನ್‌ನಿಗೆ ಅದು ಅಸಹನೀಯವಾಗಲಾರಂಭಿಸಿತು. ಒಂದು ದಿನ ಅವನು ಆ ಸ್ನೇಹಿತನನ್ನು ಕೆರೆಯ ಹತ್ತಿರಕ್ಕೆ ಕರೆದೊಯ್ದು ಬಟ್ಟೆ ಪಾದರಕ್ಷೆಗಳ ಸಮೇತವಾಗಿ ಬೇಕೆಂತಲೇ ಕೆರೆಗೆ ಹಾರಿದ! ನೀರಿನಲ್ಲಿ ಇದ್ದಾಗಲೇ ತನ್ನ ಸ್ನೇಹಿತನಿಗೆ ಹೇಳಿದ, “ನೀನು ಅಂದು ನನ್ನನ್ನು ರಕ್ಷಿಸದೇ ಇದ್ದಿದ್ದರೆ ಎಷ್ಟು ಒದ್ದೆಯಾಗುತ್ತಿದ್ದೆನೋ ಅಷ್ಟೇ ಒದ್ದೆ ಈಗ ಆಗಿದ್ದೇನೆ. ಆದ್ದರಿಂದ ದಯಮಾಡಿ ಇನ್ನು ಮೇಲೆ ಆ ಘಟನೆಯನ್ನು ನನಗೆ ಪದೇಪದೇ ಜ್ಞಾಪಿಸುವುದನ್ನು ನಿಲ್ಲಿಸು!”
*****

೬೯. ಈ ಹಿಂದೆ ನನ್ನನ್ನು ನೋಡಿದ್ದಿರಾ?


ನಜ಼ರುದ್ದಿನ್‌ ಒಂದು ದಿನ ಯಾವುದೋ ಅಂಗಡಿಯೊಳಕ್ಕೆ ಹೋದಾಗ ಅದರ ಮಾಲಿಕ ಅವನನ್ನು ಸ್ವಾಗತಿಸಿ ಕುಶಲಪ್ರಶ್ನೆ ಮಾಡಿದ.
ನಜ಼ರುದ್ದೀನ್‌ ಹೇಳಿದ, “ಒಂದು ಕ್ಷಣ ತಡೆಯಿರಿ. ಈ ಹಿಂದೆ ನೀವು ನನ್ನನ್ನು ಎಂದಾದರೂ ನೋಡಿದ್ದಿರಾ?”
ಎಂದೂ ನೋಡಿಲ್ಲ.”
ಅಂದ ಮೇಲೆ ಈಗ ಬಂದದ್ದು ನಾನೇ ಎಂಬುದು ನಿಮಗೆ ಹೇಗೆ ಗೊತ್ತಾಯಿತು?”
*****

೭೦. ಅಕ್ರೋಡುಗಳೂ ಕಲ್ಲಂಗಡಿ ಹಣ್ಣುಗಳೂ


ಒಂದು ಎತ್ತರವಾದ ಅಕ್ರೋಡು ಮರದ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ನಜ಼ರುದ್ದೀನ್‌ನಿಗೆ ತುಸು ದೂರದಲ್ಲಿ ಸಪುರವಾದ ಬಳ್ಳಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿರುವುದು ಕಂಡಿತು.
ನಜ಼ರುದ್ದೀನ್‌ ತಲೆ ಎತ್ತಿ ಆಕಾಶ ನೋಡುತ್ತಾ ಕೇಳಿದ, “ಓ ಮಹಾನ್‌ ದೇವರೇ ದಯವಿಟ್ಟು ನಾನೊಂದು ಪ್ರಶ್ನೆ ಕೇಳಲು ಅವಕಾಶ ನೀಡಿ: ಬಲವಾದ ದೊಡ್ಡ ಮರಗಳಲ್ಲಿ ಅಕ್ರೋಡೂ ದುರ್ಬಲವಾದ ಸಪುರ ಬಳ್ಳಿಗಳಲ್ಲಿ ಕಲ್ಲಂಗಡಿಯೂ ಏಕೆ ಬೆಳೆಯುತ್ತದೆ? ಇದು ಅದಲುಬದಲಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ?”
ಆ ಕ್ಷಣದಲ್ಲಿ ಅವನ ತಲೆಯ ಮೇಲೆ ಬಲು ಎತ್ತರದಿಂದ ಒಂದು ಅಕ್ರೋಡು ಕಾಯಿ ಬಿದ್ದಿತು.
ತಕ್ಷಣವೇ ನಜ಼ರುದ್ದೀನ್‌ ಉದ್ಗರಿಸಿದ, “ಓಹೋ. ನಿಸರ್ಗ ನಾನು ಆಲೋಚಿಸಿದಷ್ಟು ಪೆದ್ದಲ್ಲ. ಅಕ್ರೋಡಿಗೆ ಬದಲಾಗಿ ಒಂದು ಕಲ್ಲಂಗಡಿ ನನ್ನ ತಲೆಯ ಮೇಲೆ ಬಿದ್ದಿದ್ದರೆ ನಾನು ಸತ್ತೇ ಹೋಗುತ್ತಿದ್ದೆನೋ ಏನೋ!”
*****

೭೧. ಭೂಮಿಯ ಕೇಂದ್ರ


ಮಿತ್ರ: “ನಜ಼ರುದ್ದೀನ್‌ ಭೂಮಿಯ ಕೇಂದ್ರ ಎಲ್ಲಿದೆ ಎಂಬುದು ನಿನಗೇನಾದರೂ ಗೊತ್ತಿದೆಯೇ?”
ನಜ಼ರುದ್ದೀನ್‌, “ನಿಜ ಹೇಳಬೇಕೆಂದರೆ ಅದು ನಿಖರವಾಗಿ ಎಲ್ಲಿದೆ ಎಂಬುದು ನನಗೆ ಗೊತ್ತಿದೆ.”
ಎಲ್ಲಿದೆ?”
ನನ್ನ ಕತ್ತೆಯ ಬಲ ಗೊರಸಿನ ನೇರದಲ್ಲಿ ಬಹಳ ಕೆಳಗೆ ಇದೆ.”
ಏನು? ಅಷ್ಟು ಖಚಿತವಾಗಿ ನೀನು ಹೇಗೆ ಹೇಳುತ್ತಿರುವೆ?”
ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ, ನೀನೇ ಹೊಂಡ ತೆಗೆದು ಅಳತೆ ಮಾಡಿ ನೋಡು!”
*****

೭೨. ಭಕ್ಷ್ಯ ಹೇಗಿತ್ತು?


ಒಮ್ಮೆ ನಜ಼ರುದ್ದೀನ್‌ನನ್ನು ಔತಣಕ್ಕೆ ಅರಮನೆಗೆ ಆಹ್ವಾನಿಸಿದ ರಾಜ. ಭೊಜನಾವಧಿಯಲ್ಲಿ ಯಾವುದೋ ಭಕ್ಷ್ಯ ಹೇಗಿದೆಯೆಂದು ರಾಜ ಅವನನ್ನು ಕೇಳಿದ. “ಇದು ನಿಜವಾಗಿಯೂ ಅದ್ಭುತವಾಗಿದೆ,” ಉತ್ತರಿಸಿದ ನಜ಼ರುದ್ದೀನ್‌. ನಿಜವಾಗಿಯೂ? ಅದು ಬಲು ಕೆಟ್ಟದಾಗಿದೆ ಎಂಬುದಾಗಿ ನನಗನ್ನಿಸಿತು,” ಪ್ರತಿಕ್ರಿಯಿಸಿದ ರಾಜ. ಹೌದು. ನೀವು ಹೇಳಿದ್ದು ಸರಿ. ಅದು ಅಸಹನೀಯವಾಗಿದೆ,” ರಾಜನ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ ನಜ಼ರುದ್ದೀನ್‌. “ಇರಪ್ಪಾ, ಈಗ ಕೆಲವು ಕ್ಷಣಗಳ ಹಿಂದೆ ಅದು ಅದ್ಭುತವಾಗಿದೆ ಎಂಬುದಾಗಿ ನೀನು ಹೇಳಿದೆಯಲ್ಲವೇ?” ವಿಚಾರಿಸಿದ ರಾಜ. ಹೌದು. ನಾನು ವಾಸವಿರುವ ಈ ಪಟ್ಟಣದ ರಾಜನ ಸೇವೆಯನ್ನು ಮಾಡುತ್ತಿದ್ದೇನೆಯೇ ವಿನಾ ಭಕ್ಷ್ಯದ್ದಲ್ಲ!” ವಿವರಿಸಿದ ನಜ಼ರುದ್ದೀನ್‌.
*****

೭೩. ಸಂಧಿಸುವುದು


ವ್ಯವಹಾರ ಸಂಬಂಧಿಸಿದಂತೆ ಒಂದು ಭೇಟಿ ಏರ್ಪಾಡು ಮಾಡಲೋಸುಗ ನಜ಼ರುದ್ದೀನ್‌ ಒಬ್ಬ ಶ್ರೀಮಂತನ ಮನೆಗೆ ಹೋದ. ಮನೆಯ ಮುಂಬಾಗಿಲಿನತ್ತ ಹೋಗುತ್ತಿದ್ದಾಗ ಪಕ್ಕದಲ್ಲಿದ್ದ ಕಿಟಕಿಯ ಮೂಲಕ ಆಕಸ್ಮಿಕವಾಗಿ ನೋಡಿದ. ಮನೆಯ ಒಳಗೆ ಶ್ರೀಮಂತ ಏನನ್ನೋ ಕುಡಿಯುತ್ತಿರುವುದು ಗೋಚರಿಸಿತು. ನಜ಼ರುದ್ದೀನ್‌ ಮುಂಬಾಗಿಲಿಗೆ ಹೋಗಿ ಬಾಗಿಲು ತಟ್ಟಿದ. ಶ್ರೀಮಂತನ ಮಗ ಬಾಗಿಲು ತೆರೆದಾಗ ಅವನಿಗೆ ನಜ಼ರುದ್ದೀನ್‌ ಹೇಳಿದ, “ನಮಸ್ಕಾರ, ನಾನು ನಿನ್ನ ತಂದೆಯನ್ನು ಕಾಣಲೋಸುಗ ಬಂದಿದ್ದೇನೆ.” ಓ ಹೌದಾ? ಆದರೆ ನನ್ನ ತಂದೆ ಹೊರಗೆ ಹೋಗಿದ್ದಾರೆ. ಅವರು ಬೇಗನೆ ಹಿಂದಿರುಗುವ ಸಾಧ್ಯತೆ ಇಲ್ಲವಲ್ಲ,” ಹೇಳಿದ ಮಗ. ಸರಿ ಹಾಗಾದರೆ. ಮುಂದಿನ ಸಲ ಮನೆ ಬಿಟ್ಟು ಹೋಗುವಾಗ ಮಗ್ಗುಲಿನ ಕಿಟಕಿಯ ಮೂಲಕ ಹೊರಕ್ಕೆ ಕಾಣುವಂತೆ ತನ್ನ ತಲೆಯನ್ನು ಇಟ್ಟು ಹೋಗಬಾರದು ಎಂಬುದನ್ನು ಮರೆಯಕೂಡದು ಎಂಬುದಾಗಿ ನಿನ್ನ ತಂದೆಯವರಿಗೆ ಹೇಳಿಬಿಡು.”
*****

೭೪. ನಜ಼ರುದ್ದೀನ್‌ನ ಅಂಗಿ ಬಿದ್ದಿತು


ನಜ಼ರುದ್ದೀನನೂ ಅವನ ಹೆಂಡತಿಯೂ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದಾಗ ಬಲು ಜೋರಾಗಿ ಗಾಳಿ ಬೀಸಿತು. ತತ್ಪರಿಣಾಮವಾಗಿ ಮನೆಯ ಮೇಲ್ಛಾವಣಿಯಲ್ಲಿ ಒಣಹಾಕಿದ್ದ ಅಂಗಿಯೊಂದು ಹಾರಿಬಂದು ಹೆಂಡತಿಯ ಕಾಲಿನ ಪಕ್ಕದಲ್ಲಿ ಬಿದ್ದಿತು. ಇದನ್ನು ನೋಡಿದ ನಜ಼ರುದ್ದೀನ್‌ ದೇವರಿಗೆ ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸಲಾರಂಭಿಸಿದ. ಹೆಂಡತಿ ಕೇಳಿದಳು, “ಮೇಲ್ಛಾವಣಿಯಿಂದ ಅಂಗಿ ಹಾರಿಬಂದು ಬಿದ್ದದ್ದನ್ನು ನೋಡಿ ದೇವರಿಗೇಕೆ ಕೃತಜ್ಞತೆ ಅರ್ಪಿಸುತ್ತಿರುವಿರಿ?” ನಜ಼ರುದ್ದೀನ್‌ ವಿವರಿಸಿದ, “ನಾನು ಅಂಗಿಯೊಳಗಿರಲಿಲ್ಲವಲ್ಲ ಎಂಬುದಕ್ಕಾಗಿ ದೇವರಿಗೆ ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ.”
*****
೭೫. ನಜ಼ರುದ್ದೀನ್‌ನ ಧರ್ಮೋಪದೇಶ

ಪುರುಷರು ಮಾತ್ರವಿದ್ದ ಸಭೆಯಲ್ಲಿ ನಜ಼ರುದ್ದೀನನ ಮತೀಯ ಭಾಷಣವನ್ನು ಯಾರೋ ಏರ್ಪಡಿಸಿದ್ದರು. ಕೊನೆಯ ಕ್ಷಣದ ವರೆಗೂ ಯಾವ ವಿಷಯದ ಕುರಿತು ಮಾತನಾಡಬೇಕು ಎಂಬುದನ್ನು ನಜ಼ರುದ್ದೀನ್‌ ತೀರ್ಮಾನಿಸಿರಲಿಲ್ಲ. ವೇದಿಕೆ ಏರಿ ನಿಲ್ಲುವಾಗ ಯಾವ ವಿಷಯದ ಕುರಿತು ಮಾತನಾಡಬೇಕು ಎಂಬುದನ್ನು ನಿರ್ಧರಿಸಿದ, ಉಪದೇಶಿಸಲಾರಂಭಿಸಿದ:
ಮಹನೀಯರೇ, ನಾವು ನಮ್ಮ ಪತ್ನಿಯರು ಅಲಂಕರಿಸಿಕೊಳ್ಳುವುದನ್ನು, ವಿಶೇಷವಾಗಿ ಮುಖವನ್ನು ಅಲಂಕರಿಸಿಕೊಳ್ಳುವುದನ್ನು ನಿಷೇಧಿಸಬೇಕು. ಅದು ಅನುಚಿತವಾದದ್ದು, ಅಸಭ್ಯವಾದದ್ದು, ನೀತಿಗೆಟ್ಟದ್ದು, ಕೆಟ್ಟದ್ದು. ಅದೊಂದು ಪಾಪಕೃತ್ಯ. ಯಾರು ತನ್ನ ಹೆಂಡತಿಯು ಅಲಂಕರಿಸಿಕೊಳ್ಳಲು ಅನುಮತಿಸುತ್ತಾನೋ ಅವನು ನಾಚಿಕೆಯಿಂದ ತಲೆತಗ್ಗಿಸಲೇ ಬೇಕಾಗುತ್ತದೆ!”
ಸಭೆಯಲ್ಲಿದ್ದವರ ಪೈಕಿ ಒಬ್ಬ ಎದ್ದು ನಿಂತು ಕೇಳಿದ, “ಆದರೆ ಮುಲ್ಲಾ, ನಿನ್ನ ಹೆಂಡತಿ ಯಾವಾಗಲೂ ಅಲಂಕೃತಳಾಗಿಯೇ ಇರುತ್ತಾಳಲ್ಲ?”
ಹೌದು. ಅಲಂಕರಿಸಿಕೊಂಡಾಗ ಅವಳು ಬಲು ಸುಂದರವಾಗಿ ಕಾಣಿಸುತ್ತಾಳಲ್ಲವೇ?”
*****

೭೬. ವಿಜಯಿಯ ಬೆಲೆ ಎಷ್ಟು?


ಪಟ್ಟಣವನ್ನು ತನ್ನದಾಗಿಸಿಕೊಂಡ ಹೊಸ ವಿಜಯಿ ನಜ಼ರುದ್ದೀನ್ನನ್ನು ಕೇಳಿದ, “ನಾನೊಬ್ಬ ಗುಲಾಮನಾಗಿದ್ದಿದ್ದರೆ ನನ್ನ ಬೆಲೆ ಎಷ್ಟಿರುತ್ತಿತ್ತು?”
ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “೫೦೦ ದಿನಾರ್‌ಗಳು
ಏನು!” ಸಿಟ್ಟಿನಿಂದ ಕಿರುಚಿದ ಹೊಸ ವಿಜೇತ. “ಈಗ ನಾನು ಧರಿಸಿರುವ ಬಟ್ಟೆಗಳ ಬೆಲೆಯೇ ಅದಕ್ಕಿಂತ ಹೆಚ್ಚಾಗಿದೆ.”
ನಜ಼ರುದ್ದೀನ್‌ ಶಾಂತಚಿತ್ತದಿಂದ ಉತ್ತರಿಸಿದ, “ಬಟ್ಟೆಗಳನ್ನು ಗಮನದಲ್ಲಿಟ್ಟುಕೊಂಡೇ ನಾನು ಬೆಲೆಕಟ್ಟಿದ್ದು!”
*****

೭೭. ಹಿಮ್ಮುಖವಾಗಿ


ನಜ಼ರುದ್ದೀನ್‌ ಕತ್ತೆಯ ಮೇಲೆ ಹಿಮ್ಮುಖವಾಗಿ ಕುಳಿತುಕೊಂಡು ಎಲ್ಲಿಗೋ ಹೋಗುತ್ತಿದ್ದದ್ದನ್ನು ಕೆಲವು ಮಂದಿ ಸ್ಥಳೀಯರು ನೋಡಿದರು.
ನಜ಼ರುದ್ದೀನ್‌, ನೀನು ಕತ್ತೆಯ ಮೇಲೆ ಹಿಮ್ಮುಖವಾಗಿ ಕುಳಿತಿರುವೆ,” ಕೂಗಿ ಹೇಳಿದರು ಅವರು.
ನಜ಼ರುದ್ದೀನ್‌ ಉತ್ತರಿಸಿದ, “ಅದಕ್ಕೆ ನನ್ನನ್ನು ದೂಷಿಸಬೇಡಿ. ವಾಸ್ತವವಾಗಿ ಹಿಮ್ಮುಖವಾಗಿ ನಿಂತಿರುವುದು ಕತ್ತೆ!”
ಮಾರನೆಯ ದಿನವೂ ಅದೇ ಮಂದಿ ನಜ಼ರುದ್ದೀನ್ ಕತ್ತೆಯ ಮೇಲೆ ಹಿಂದುಮುಂದಾಗಿ ಕುಳಿತುಕೊಂಡು ಸವಾರಿ ಮಾಡುತ್ತಿರುವುದನ್ನು ನೋಡಿದರು. ಈ ಸಲ ಅವರು ಕೇಳಿದರು, “ಕತ್ತೆ ಸರಿಯಾದ ದಿಕ್ಕಿನತ್ತ ಮುಖಮಾಡಿ ನಿಲ್ಲುವಂತೆ ಮಾಡುವುದು ಹೇಗೆಂಬುದನ್ನು ಇನ್ನೂ ಪತ್ತೆಹಚ್ಚಲಾಗಲಿಲ್ಲವೇ?”
ನಜರುದ್ದೀನ್ ಪ್ರತಿಕ್ರಿಯಿಸಿದ, “ವಾಸ್ತವಾವಾಗಿ ಈ ಸಲ ಕತ್ತೆ ಸರಿಯಾಗಿಯೇ ನಿಂತಿದೆ, ನಾನೂ ಸರಿಯಾಗಿಯೇ ಕುಳಿತಿದ್ದೇನೆ. ಹಿಮ್ಮುಖವಾಗಿ ನಿಂತಿರುವುದು ನೀವು!”
*****

೭೮. ನಜ಼ರುದ್ದೀನ್‌ನ ಹೆಂಡತಿಯ ವಿರುದ್ಧ ದೂರು


ಒಂದು ದಿನ ಸ್ಥಳೀಯರು ನಜ಼ರುದ್ದೀನ್‌ನ ಹತ್ತಿರ ದೂರಿದರು, “ನಿನ್ನ ಹೆಂದತಿ ಯಾವಾಗಲೂ ಅಲ್ಲಿಇಲ್ಲಿ ಸುತ್ತಾಡುತ್ತಲೇ ಇರುತ್ತಾಳೆ. ಎಲ್ಲ ರೀತಿಯ ವಿಭಿನ್ನ ಸ್ಥಳಗಳಿಗೆ ಅವಳು ಹೋಗುತ್ತಿರುತ್ತಾಳೆ. ಇದು ಒಬ್ಬ ಹೆಂಗಸಿಗೆ ತಕ್ಕುದಾದ ಸನ್ನಡತೆಯಲ್ಲ. ಆದ್ದರಿಂದ ಮುಲ್ಲಾ ಇಷ್ಟೊಂದು ಸುತ್ತಾಡುವುದನ್ನು ನಿಲ್ಲಿಸುವಂತೆ ಅವಳಿಗೆ ಹೇಳು.”
ನಜ಼ರುದ್ದೀನ್‌ ಉತ್ತರಿಸಿದ, “ಓಹೋ, ಖಂಡಿತ ಹೇಳುತ್ತೇನೆ, ಯಾವಾಗಲಾದರೂ ಅವಳು ಮನೆಗೆ ಬಂದರೆ!”
*****

೭೯. ಮರೆಮಾಚುವಿಕೆ


ಒಮ್ಮೆ ನಜ಼ರುದ್ದೀನ್‌ನ ಅತಿಥಿಯೊಬ್ಬ ಅಪಾನವಾಯು ಸಡಲಿಸಿದ ಹಾಗು ಅದರ ಶಬ್ದ ಕೇಳಿಸದಂತೆ ಆ ಸಮಯಕ್ಕೆ ಸರಿಯಾಗಿ ತನ್ನ ಪಾದರಕ್ಷೆಯನ್ನು ನೆಲಕ್ಕೆ ಜೋರಾಗಿ ಉಜ್ಜಿದ. ನಜ಼ರುದ್ದೀನ್‌ ಹೇಳಿದ, “ಅಪಾನವಾಯು ಸಡಲಿಸಿದಾಗ ಆದ ಶಬ್ದವನ್ನು ಮರಮಾಚಲೋಸುಗ ನೀನು ಪಾದರಕ್ಷೆಯನ್ನು ನೆಲಕ್ಕೆ ಉಜ್ಜಿದ್ದು ನಿನ್ನ ಚತುರತೆ ಸೂಚಕ. ಆದರೆ ಆಗ ಹರಡುವ ದುರ್ವಾಸನೆಯನ್ನು ತಡೆಯುವ ಒಂದು ವಿಧಾನವನ್ನೂ ಆವಿಷ್ಕರಿಸಿರಬೇಕಿತ್ತು!”
*****

೮೦. ನಜ಼ರುದ್ದೀನ್‌ ಖರ್ಜೂರ ತಿಂದದ್ದು


ನಜ಼ರುದ್ದೀನ್ ಬೀಜಸಹಿತವಾಗಿ ಖರ್ಜೂರ ತಿನ್ನುತ್ತಿದ್ದದ್ದನ್ನು ನೋಡಿದ ಒಬ್ಬ ಕೇಳಿದ, “ನೀನೇಕೆ ಖರ್ಜೂರದ ಬೀಜಗಳನ್ನೂ ತಿನ್ನುತ್ತಿರುವೆ?”
ನಜ಼ರುದ್ದೀನ್‌ ವಿವರಿಸಿದ, “ಏಕೆಂದರೆ ನನಗೆ ಖರ್ಜೂರವನ್ನು ಮಾರಿದಾತ ತೂಕ ಕಂಡುಹಿಡಿಯುವಾಗ ಬೀಜಯುತ ಖರ್ಜೂರದ ತೂಕ ಕಂಡುಹಿಡಿದು ಹಣ ತೆಗೆದುಕೊಂಡ!”
*****

೮೧. ನಜ಼ರುದ್ದೀನ್‌ ದುಃಖಿಸುತ್ತಾನೆ


ನಜ಼ರುದ್ದೀನ್‌ನ ಹೆಂಡತಿ ಸತ್ತ ನಂತರದ ದಿವಸಗಳಲ್ಲಿ ಅವನು ತುಂಬ ತಲ್ಲಣಿಸಿ ಹೋದಂತೆ ಗೋಚರಿಸುತ್ತಿದ್ದದ್ದನ್ನು ಅವನ ಮಿತ್ರರು ಗಮನಿಸಿದ್ದರು. ಆದರೆ ಒಂದು ವಾರದ ನಂತರ ಅವನ ಕತ್ತೆ ಸತ್ತು ಹೋದಾಗ ಅವನು ಹಿಂದಿಗಿಂತ ತೀವ್ರವಾದ ಮನಃಕ್ಷೋಭೆಯಿಂದ ತತ್ತರಿಸಿ ಹೋದಂತೆಯೂ ಬಲು ದುಃಖಿತನಾದಂತೆಯೂ ಕಾಣುತ್ತಿದ್ದ.
ಈ ವ್ಯತ್ಯಾಸ ಗಮನಿಸಿದ ಮಿತ್ರರು ಕಕ್ಕಾಬಿಕ್ಕಿಯಾಗಿ ಹೆಂಡತಿ ಸತ್ತು ಹೋದಾಗಕ್ಕಿಂತ ಕತ್ತೆ ಸತ್ತು ಹೋದಾಗ ಹೆಚ್ಚು ಕ್ಷೋಭೆಗೀಡಾದದ್ದು ಏಕೆಂದು ಅವನನ್ನೇ ಕೇಳಿದರು.
ನಜರುದ್ದೀನ್‌ ವಿವರಿಸಿದ, “ಅದೋ, ಅದು ಏಕೆಂದರೆ ನನ್ನ ಹೆಂಡತಿ ಸತ್ತು ಹೋದಾಗ ಎಲ್ಲರೂ ನನಗೆ ಸಾಂತ್ವನ ಹೇಳಿದ್ದಲ್ಲದೆ ಬಲು ಬೇಗನೆ ಇನ್ನೊಬ್ಬ ಹೆಂಡತಿಯನ್ನು ಹುಡುಕಿ ಕೊಡುವುದಾಗಿ ಹೇಳಿದ್ದರು. ಆದರೆ ಕತ್ತೆ ಸತ್ತಾಗ ಯಾರೂ ಅದನ್ನು ದೊಡ್ಡ ವಿಷಯ ಎಂಬುದಾಗಿ ಪರಿಗಣಿಸಲೇ ಇಲ್ಲ. ಅಷ್ಟೇ ಅಲ್ಲದೆ ಯಾರೂ ನನಗೆ ಇನ್ನೊಂದು ಕತ್ತೆಯನ್ನು ಹುಡುಕಿ ಕೊಡುವುದಾಗಿ ಹೇಳಲೇ ಇಲ್ಲ!”
*****

೮೨. ನಜ಼ರುದ್ದೀನ್‌ನಿಗೆ ದಾರಿ ತಪ್ಪಿತು


ಒಂದು ದಿನ ಕಾಡಿನ ಮೂಲಕ ಎಲ್ಲಿಗೋ ಹೋಗುತ್ತಿದ್ದ ನಜ಼ರುದ್ದೀನ್‌ನಿಗೆ ದಾರಿ ತಪ್ಪಿತು. ಗಂಟೆಗಳು ಉರುಳಿದವು, ಕತ್ತಲಾಗತೊಡಗಿತು, ಎಷ್ಟು ಪ್ರಯತ್ನಿಸಿದರೂ ಸರಿಯಾದ ದಾರಿ ಪತ್ತೆಯಾಗಲಿಲ್ಲ. ಆಯಾಸ, ಹಸಿವು, ಭಯ ಪೀಡಿತನಾದ ನಜ಼ರುದ್ದೀನ್‌ ಮಂಡಿಯೂರಿ ಕುಳಿತು ಪ್ರಾರ್ಥಿಸಲು ಆರಂಭಿಸಿದ, “ಪ್ರೀತಿಯ ದೇವರೇ, ಇಲ್ಲಿಂದ ಹೊರಹೋಗಲು ಸರಿಯಾದ ದಾರಿ ಪತ್ತೆಹಚ್ಚಲು ನೆರವು ನೀಡು. ನೀನು ನೆರವು ನೀಡಿದರೆ ನಾನು ಇನ್ನು ಮುಂದೆ ನಿಯತವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ, ಮೊದಲಿಗಿಂತ ಹೆಚ್ಚು ಮತಾಚರಣೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬುದಾಗಿ ಮಾತು ಕೊಡುತ್ತೇನೆ.”
ಇಂತು ಪದೇಪದೇ ಪ್ರಾರ್ಥನೆ ಮಾಡುತ್ತಿರುವಾಗ ಮೇಲೆ ಹಾರುತ್ತದ್ದ ಪಕ್ಷಿಯೊಂದು ಅವನ ತಲೆಯ ಮೇಲೆ ಮಲ ವಿಸರ್ಜನೆ ಮಾಡಿತು.
ತಕ್ಷಣ ನಜ಼ರುದ್ದೀನ್‌ ಹೇಳಿದ, “ದಯವಿಟ್ಟು ಈಗಲೇ ಇಂಥದ್ದನ್ನು ನನಗೆ ಕೊಡಬೇಡ, ನಾನು ನಿಜವಾಗಿಯೂ ದಾರಿ ತಪ್ಪಿದ್ದೇನೆ!”
*****

೮೩. ನದಿಯ ಆಚೆ ಕಡೆಗೆ ----


ಒಂದು ನದಿಯ ದಡದಲ್ಲಿ ನಜ಼ರುದ್ದೀನ್‌ ನಿಂತುಕೊಂಡಿದ್ದ. ನದಿಯ ಇನ್ನೊಂದು ದಡದಲ್ಲಿದ್ದವನೊಬ್ಬ ಕೂಗಿ ಕೇಳಿದ, “ಓಹೋಯ್‌, ನಾನು ನದಿಯ ಆಚೆ ಕಡೆಗೆ ದಾಟುವುದು ಹೇಗೆ?”
ನಜ಼ರುದ್ದೀನ್ ಕೂಗಿ ಉತ್ತರಿಸಿದ, “ನೀನೀಗ ಆಚೆ ಕಡೆ ಇದ್ದೀಯಲ್ಲ.”
*****

೮೪. ನಿನ್ನ ಕಣ್ಣುಗಳು ಕೆಂಪಾಗಿವೆ


ಕಣ್ಣಿನ ಊತದಿಂದ ಸಂಕಟ ಪಡುತ್ತಿದ್ದ ನಜ಼ರುದ್ದೀನ್‌ ವೈದ್ಯರನ್ನು ಕಾಣಲು ಹೋದ.
ವೈದ್ಯರು ಅವನ ಕಣ್ಣುಗಳನ್ನು ವೀಕ್ಷಿಸಿ ಹೇಳಿದರು, “ನಿನ್ನ ಕಣ್ಣುಗಳು ಬಲು ಕೆಂಪಾಗಿವೆ.”
ನಜ಼ರುದ್ದೀನ್‌ ಕೇಳಿದ, “ಹಾಗಾದರೆ ಅವು ನೋಯುತ್ತಲೂ ಇರಬಹುದೇ?”
*****

೮೫. ಮೂರು ಎರಡ್ಲಿ?


ಬೇರೊಂದು ಪಟ್ಟಣದಲ್ಲಿ ನಜ಼ರುದ್ದೀನ್ ಕಾರ್ಯನಿಮಿತ್ತ ತಂಗಿದ್ದಾಗ ಆ ಊರಿನವನೊಬ್ಬ ಕೇಳಿದ, “ಮೂರು ಎರಡ್ಲಿ ಎಷ್ಟು?”
ನಾಲ್ಕು,” ಉತ್ತರಿಸಿದ ನಜ಼ರುದ್ದೀನ್.
ತಪ್ಪು. ಸರಿಯಾದ ಉತ್ತರ ಆರು,” ಉದ್ಗರಿಸಿದ ಪ್ರಶ್ನೆ ಕೇಳಿದವ.
ನಜ಼ರುದ್ದೀನ್‌ ವಿವರಿಸಿದ, “ವಾಸ್ತವವಾಗಿ ನಾನು ಹೇಳಿದ್ದು ತಪ್ಪಲ್ಲ. ನಮ್ಮ ಊರಿನಲ್ಲಿ ನಾವು ಬೇರೆ ನಮೂನೆಯ ಗಣಿತವನ್ನು ಉಪಯೋಗಿಸುತ್ತೇವೆ!”
*****

೮೬. ನಜ಼ರುದ್ದೀನ್‌ನ ನಿಶ್ಚಿತಾರ್ಥ


ಒಬ್ಬಳು ಪಟ್ಟಣವಾಸೀ ಹೆಂಗಸಿನೊಂದಿಗೆ  ವಿವಾಹ ನಿಶ್ಚಯವಾದಕೂಡಲೇ ನಜ಼ರುದ್ದೀನ್‌ ತನ್ನ ಭಾವೀ ಅತ್ತೆಯನ್ನು ನೋಡಲೋಸುಗ ಅವಳ ಮನೆಗೆ ಹೋದನು.
ಆಕೆ ಕೇಳಿದಳು, “ಏನಪ್ಪಾ, ನಿಜವಾಗಿಯೂ ಇದು ನೀನು ಆಗುತ್ತಿರುವ ಮೊದಲನೇ ಮದುವೆಯಷ್ಟೆ?”
ನಜ಼ರುದ್ದೀನ್‌ ಉತ್ತರಿಸಿದ, “ಹೌದು. ನನ್ನ ನಾಲ್ಕು ಮಕ್ಕಳ ಮೇಲಾಣೆ, ಇದಕ್ಕೆ ಮೊದಲು ನಾನು ಮದುವೆ ಆಗಿಯೇ ಇಲ್ಲ!”
*****

೮೭. ನಜ಼ರುದ್ದೀನ್‌ ಮಿತ್ರನಿಗೆ ನೆಲಮುಳ್ಳಿ ಹಣ್ಣು ಕೊಡುವ ಪರಿ


ಮಿತ್ರನೊಬ್ಬ ನಜ಼ರುದ್ದೀನ್‌ನನ್ನು ಭೇಟಿ ಮಾಡಲು ಅವನ ಮನೆಗೆ ಬಂದನು.
ನಜ಼ರುದ್ದೀನ್‌ ಹೇಳಿದ, “ಗೆಳೆಯ, ಈ ನೆಲಮುಳ್ಳಿ ಹಣ್ಣುಗಳನ್ನು ತೆಗದುಕೊ.”
ಮಿತ್ರ ಉತ್ತರಿಸಿದ, “ಧನ್ಯವಾದಗಳು, ನಾನು ಈಗಾಗಲೇ ಅವುಗಳ ಪೈಕಿ ಐದು ಹಣ್ಣುಗಳನ್ನು ತಿಂದಿದ್ದೇನೆ.”
ಮನೆಗೆ ಬಂದವರು ಎಷ್ಟು ಹಣ್ಣುಗಳನ್ನು ತಿನ್ನುತ್ತಾರೆಂಬುದನ್ನು ಸಾಮಾನ್ಯವಾಗಿ ನಾನು ಲೆಕ್ಕ ಹಾಕುವುದಿಲ್ಲವಾದರೂ ನೀನು ಈಗಾಗಲೇ ನಿಜವಾಗಿ ಹತ್ತು ಹಣ್ಣುಗಳನ್ನು ತಿಂದಿರುವೆ.”
*****

೮೮. ಕುಸ್ತಿಯ ಕನಸುಗಳು


ಒಂದು ದಿನ ನಜ಼ರುದ್ದೀನ್‌ ವೈದ್ಯರ ಹತ್ತಿರ ಹೋಗಿ ಹೇಳಿದ, “ಕಳೆದ ಒಂದೂವರೆ ತಿಂಗಳಲ್ಲಿ ಪ್ರತೀ ರಾತ್ರಿ ನಾನು ಕತ್ತೆಗಳೊಂದಿಗೆ ಕುಸ್ತಿ ಪಂದ್ಯವಾಡುತ್ತಿರುವಂತೆ ಕನಸುಗಳು ಬಿದ್ದಿವೆ.”
ವೈದ್ಯರು ಮೂಲಿಕೆಯೊಂದನ್ನು ಅವನಿಗೆ ಕೊಟ್ಟು ಹೇಳಿದರು, “ಇದನ್ನು ತಿನ್ನು, ನಿನ್ನ ಕನಸುಗಳು ಮಾಯವಾಗುತ್ತವೆ.”
ಇದನ್ನು ನಾಳೆಯಿಂದ ತಿನ್ನಲಾರಂಭಿಸಬಹುದೋ?” ವಿಚಾರಿಸಿದ ನಜ಼ರುದ್ದೀನ್‌.
ಏಕೆ?” ವೈದ್ಯರು ಕೇಳಿದರು.
ನಜರುದ್ದೀನ್‌ ಉತ್ತರಿಸಿದ, “ಏಕೆಂದರೆ ಇಂದು ರಾತ್ರಿ ನಾನು ಅಂತಿಮ ವಿಜೇತನ ಸ್ಥಾನಕ್ಕಾಗಿ ಕುಸ್ತಿ ಮಾಡಬೇಕಾಗಿದೆ!”
*****

೮೯. ಒಂದು ಉತ್ತರಕ್ಕೆ ಒಂದು ಸೇಬು


ಒಬ್ಬಾತ ಹಳ್ಳಿಯ ಕೆಂದ್ರಸ್ಥಾನದಲ್ಲಿ ಕುಳಿತುಕೊಂಡು ಸ್ಥಳೀಯರಿಗೆ ನಾನಾ ರೀತಿಯ ಪ್ರಶ್ನೆಗಳನ್ನು ಕೇಳಲಾರಂಭಿಸಿದ. ಯಾರಿಗೂ ಅವನ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆ ಪ್ರಶ್ನೆಗಳನ್ನು ನಜ಼ರುದ್ದೀನ್‌ನನ್ನು ಕೇಳುವಂತೆ ಅವರು ಸೂಚಿಸಿದರು.
ಆತ ನಜ಼ರುದ್ದೀನ್‌ನನ್ನು ಕೇಳಿದ, “ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಿ ನನಗೆ ಸಹಾಯ ಮಾಡುವಿಯಾ?”
ಆ ಮನುಷ್ಯನ ಕೈನಲ್ಲಿದ್ದ ಸೇಬು ಭರಿತ ಚೀಲವನ್ನು ನೋಡುತ್ತಾ ನಜ಼ರುದ್ದೀನ್‌ ಹೇಳಿದ, “ನಾನು ಉತ್ತರಿಸುವ ಪ್ರತೀ ಪ್ರಶ್ನೆಗೆ ಒಂದೊಂದು ಸೇಬು ಕೊಡುವೆಯಾದರೆ ಉತ್ತರಿಸುತ್ತೇನೆ.”
ಅವನು ಆ ಷರತ್ತಿಗೆ ಒಪ್ಪಿದ. ಅವನು ಪ್ರಶ್ನೆ ಕೇಳಿದ ತಕ್ಷಣವೇ ಉತ್ತರ ನೀಡಿ ಒಂದು ಸೇಬು ಪಡೆದು ತಕ್ಷಣವೇ ಅದನ್ನು ತಿಂದು ಇನ್ನೊಂದು ಪ್ರಶ್ನೆಯನ್ನು ಎದುರು ನೋಡುತ್ತಿದ್ದ ನಜ಼ರುದ್ದೀನ್‌. ಕೊನೆಗೆ ಆ ಮನುಷ್ಯನ ಹತ್ತಿರವಿದ್ದ ಸೇಬುಗಳೆಲ್ಲವೂ ನಜ಼ರುದ್ದೀನ್‌ನ ಹೊಟ್ಟೆಯನ್ನು ಸೇರಿದವು.
ಆತ ಹೇಳಿದ, “ಸರಿ ಹಾಗಾದರೆ ನಾನೀಗ ಹೋಗುತ್ತೇನೆ. ಆದರೆ ಹೋಗುವ ಮುನ್ನ ನನ್ನದೊಂದು ಪ್ರಶ್ನೆ ಇದೆ
ಏನದು?”
ಅಷ್ಟೊಂದು ಸೇಬುಗಳನ್ನು ನೀನು ತಿಂದದ್ದಾದರೂ ಹೇಗೆ?”
ಷರತ್ತಿನ ಪ್ರಕಾರ ಕೊಡಲು ನಿನ್ನ ಹತ್ತಿರ ಸೇಬುಗಳೇ ಇಲ್ಲವಾದ್ದರಿಂದ ಈ ಪ್ರಶ್ನೆಗೆ ನಾನು ಉತ್ತರಿಸಲು ಸಾಧ್ಯವಿಲ್ಲ!”
*****

೯೦. ನಸರುದ್ದೀನ್‌ನ ಹೊಸ ಮಗು


ಗೆಳೆಯ: “ಅಭಿನಂದನೆಗಳು ನಜ಼ರುದ್ದೀನ್‌. ನೀನೀಗ ಹೊಸದೊಂದು ಮಗುವಿನ ತಂದೆ ಎಂಬುದು ತಿಳಿಯಿತು.”
ನಜ಼ರುದ್ದೀನ್: “ಹೌದು.”
ಆದದ್ದು ಗಂಡು ಮಗುವೇ?”
ಅಲ್ಲ.”
ಹೆಣ್ಣು ಮಗುವೇ?”
ಹೌದು. ಇದು ನಿನಗೆ ಹೇಗೆ ಗೊತ್ತಾಯಿತು?”
*****

೯೧. ಅಂತಿಮ ಸೂಚನೆ


ವೃದ್ಧ ನಜ಼ರುದ್ದೀನ್‌ ಮರಣ ಶಯ್ಯೆಯಲ್ಲಿದ್ದ.
ಅವನು ತನ್ನ ಹೆಂಡತಿಯತ್ತ ತಿರುಗಿ ಹೇಳಿದ, “ನಾನು ಸತ್ತ ನಂತರ ದೇಹವನ್ನು ಹೂಳುವಾಗ ನನ್ನ ದೇಹದ ಮೇಲೆ ಕಲ್ಲಿನ ಅಲಂಕಾರ ಫಲಕವನ್ನು ಹಾಕಬೇಡಿ.”
ಏಕೆ?”
ಏಕೆಂದರೆ ನಾನು ಸ್ವರ್ಗಾರೋಹಣ ಮಾಡುವಾಗ ಅದಕ್ಕೆ ನನ್ನ ತಲೆ ಹೊಡೆದೀತು. ಅದು ನನಗೆ ಇಷ್ಟವಿಲ್ಲ.”
*****

೯೨. ನಜ಼ರುದ್ದೀನ್‌ನ ಶಾಪ


ಒಮ್ಮೆ ನಜರುದ್ದೀನ್‌ ತನ್ನ ಕತ್ತೆಯನ್ನು ಒಂದು ಅಂಗಡಿಯ ಹೊರಗೆ ಕಟ್ಟಿದ್ದನ್ನು ಗಮನಿಸಿದ ಅವನ ಶತ್ರುಗಳ ಪೈಕಿ ಒಬ್ಬ ಕತ್ತೆಯ ಮೇಲೆ ಹಾಕಿದ್ದ ಸಜ್ಜಿನ ಮೇಲೆ ಮೂತ್ರ ವಿಸರ್ಜನೆ ಮಾಡಲಾರಂಭಿಸಿದ. ಕೆಲವೇ ಕ್ಷಣಗಳ ನಂತರ ಸಜ್ಜಿನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗಲೇ ನಜರುದ್ದೀನ್ ಆ ಶತ್ರುವನ್ನು ಹಿಡಿದ.
ನಜ಼ರುದ್ದೀನ್‌ ಅವನಿಗೆ ಶಾಪ ಹಾಕಿದ, “ಎಲವೋ ದುಷ್ಟ, ದೇವರ ದಯೆ ನನ್ನ ಮೇಲಿರುವುದರಿಂದ ನಿನ್ನನ್ನು ಶಪಿಸುತ್ತೇನೆ. ಇನ್ನೊಂದು ವಾರದಲ್ಲಿ ನಿನ್ನ ಕಾಲಿಗೆ ತೀವ್ರವಾದ ಗಾಯವಾಗಲಿ.”
ಈ ಶಾಪ ಎಲ್ಲಿ ನಿಜವಾಗುವುದೋ ಎಂಬ ಭೀತಿಯಿಂದ ಚಿಂತೆ ಮಾಡುತ್ತಾ ಆತ ಅಲ್ಲಿಂದ ಕಾಲ್ಕಿತ್ತ. ಭಯ ಹಾಗೂ ಆತಂಕದಿಂದ ಆತ ಹೋಗುತ್ತಿರುವಾಗ ಆಕಸ್ಮಿಕವಾಗಿ ಕಲ್ಲೊಂದನ್ನು ಎಡವಿ ಬಿದ್ದ.
ಬಿದ್ದ ನಂತರ ತನ್ನ ಕಾಲನ್ನು ಹಿಡಿದುಕೋಂಡು ಕಿರುಚಿದ, “ಅಯ್ಯೋ ನನ್ನ ಕಾಲು! ಅಸಹನೀಯವಾದ ನೋವು. ನಜ಼ರುದ್ದೀನ್‌ ನೀನು ಶಪಿಸಿದ್ದು ಏಳುದಿನಗಳಲ್ಲಿ ಕಾಲಿಗೆ ಗಾಯವಾಗಲಿ ಎಂಬುದಾಗಿ. ಆದರೆ ಇಲ್ಲಿ ನೋಡು, ನೀನು ಶಪಿಸಿದ ನಂತರ ಕೆಲವೇ ಕ್ಷಣಗಳಲ್ಲಿ ನನ್ನ ಕಾಲು ಮುರಿದಿದೆ.”
ನಜ಼ರುದ್ದೀನ್ ಹೇಳಿದ, “ಅದು ಬೇರೆ ಯಾರದೋ ಶಾಪದ ಪರಿಣಾಮ. ನನ್ನ ಶಾಪವು ಪರಿಣಾಮ ಉಂಟುಮಾಡಿದಾಗ ನೀನು ಮೊಣಕಾಲು ಕೈಗಳ ನೆರವಿನಿಂದ ತೆವಳಬೇಕಾಗುತ್ತದೆ!”
*****

೯೩. ಜಗತ್ತಿನ ಅಂತ್ಯ ಯಾವಾಗ?


ತತ್ವಶಾಸ್ತ್ರಜ್ಞ: ಜಗತ್ತು ಅಂತ್ಯವಾಗುವುದು ಯಾವಾಗ ಎಂಬುದನ್ನು ಪತ್ತೆಹಚ್ಚಲೋಸುಗ ನಾನು ಅನೇಕ ವರ್ಷಗಳಿಂದ ದೇಶಾಟನೆ ಮಾಡುತ್ತಿದ್ದೇನೆ, ಸಂಶೋಧನೆ ಮಾಡುತ್ತಿದ್ದೇನೆ, ಆಳವಾಗಿ ಆಲೋಚಿಸುತ್ತಿದ್ದೇನೆ. ಇನ್ನೂ ನನಗೆ ಉತ್ತರ ಸಿಕ್ಕಿಲ್ಲ. ಮುಲ್ಲಾ, ನಿನಗೇನಾದರೂ ಜಗತ್ತಿನ ಅಂತ್ಯ ಯಾವಾಗ ಎಂಬುದು ಗೊತ್ತಿದೆಯೇ?”
ನಜ಼ರುದ್ದೀನ್‌: “ಆ ಮಾಹಿತಿ ನನಗೆ ಬಹಳ ಹಿಂದಿನಿಂದಲೇ ಗೊತ್ತಿದೆ.”
ಹೌದೇ? ಆ ಜ್ಞಾನವನ್ನು ನನ್ನೊಡನೆ ಹಂಚಿಕೊಳ್ಳುವೆಯಾ?”
ಖಂಡಿತ. ನಾನು ಸತ್ತಂದು ಜಗತ್ತಿನ ಅಂತ್ಯವಾಗುತ್ತದೆ.”
ಅಂದು ಅದು ನಿಜವಾಗಿಯೂ ಅಂತ್ಯವಾಗುತ್ತದೆ ಎಂಬ ಖಾತರಿ ನಿನಗಿದೆಯೇ?”
ಅಂದು ಅಂತ್ಯವಾಗುವುದು ಖಚಿತ, ನನ್ನ ಜಗತ್ತು!”
*****

೯೪. ಜಗತ್ತಿನ ಯಾವ ಕೊನೆ?


ಮುಲ್ಲಾ, ಜಗತ್ತಿನ ಕೊನೆ ಎಂದಾಗುತ್ತದೆಂದು ನೀನಗೆ ಗೊತ್ತಿದೆಯೇ?”
ಜಗತ್ತಿನ ಯಾವ ಕೊನೆಯನ್ನು ನೀನು ಉಲ್ಲೇಖಿಸುತ್ತಿರುವೆ?”
ಜಗತ್ತಿಗೆ ಎಷ್ಟು ಕೊನೆಗಳಿವೆ?”
ಎರಡು.”
ವಿವರಿಸು.”
ನನ್ನ ಹೆಂಡತಿ ಸತ್ತಾಗ, ಅದು ಮೊದಲನೆಯದು! ನಾನು ಸತ್ತಾಗ, ಅದು ಎರಡನೆಯದು!”
*****

೯೫. ಕಳ್ಳ


ಒಂದು ರಾತ್ರಿ ಕಳ್ಳನೊಬ್ಬ ನಜ಼ರುದ್ದೀನ್‌ನ ಮನೆಗೆ ನುಗ್ಗಿದ. ಅವನು ಅಲ್ಲಿ ತನ್ನ ಕೈಗೆ ಸಿಕ್ಕ ಸಾಮಾನುಗಳನ್ನು ಒಂದು ಚೀಲಕ್ಕೆ ತುಂಬಿಸಲಾರಂಭಿಸಿದ. ನಜ಼ರುದ್ದೀನ್‌ನಿಗೆ ಎಚ್ಚರವಾಗಿ ಅವನೂ ಕಳ್ಳನೊಡನೆ ಸೇರಿ ಕೆಲವು ಸಾಮಾನುಗಳನ್ನು ತಾನೇ ಅವನ ಚೀಲಕ್ಕೆ ಹಾಕಿದ.
ಆಶ್ಚರ್ಯಚಕಿತನಾದ ಕಳ್ಳ ನಜ಼ರುದ್ದೀನ್‌ನನ್ನು ಕೇಳಿದ, “ನೀನೇನು ಮಾಡುತ್ತಿರುವೆ?”
ನಾವು ಮನೆಯನ್ನು ಬದಲಿಸಲು ಸಜ್ಜಾಗುತ್ತಿದ್ದೇವೇನೋ ಅಂದುಕೊಂಡು ಸಾಮಾನುಗಳನ್ನು ಗಂಟುಕಟ್ಟಲು ನಿನಗೆ ಸಹಾಯ ಮಾಡಲಾರಂಭಿಸಿದೆ!”
*****

೯೬. ಚರ್ಚೆ-


ನಜ಼ರುದ್ದೀನ್‌ ತನ್ನ ಗೆಳೆಯರೊಂದಿಗೆ ಪಟ್ಟಣದ ಮುಖ್ಯ ಚೌಕದ ಅಂಚಿನಲ್ಲಿ ಒಂದು ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದ. ನೋವನ ನಾವೆಗೆ ಆಲಿವ್‌ನ ಸಣ್ಣ ರೆಂಬೆಯನ್ನು ತಂದ ಪಾರಿವಾಳದ ಲಿಂಗ ಯಾವುದಿದ್ದಿರಬಹುದೆಂಬುದು ಅವರ ನಡುವಿನ ಚರ್ಚಾ ವಿಷಯವಾಗಿತ್ತು.
ಚರ್ಚೆಯನ್ನು ಆಸಕ್ತಿಯಿಂದ ಮೌನವಾಗಿ ಕೇಳುತ್ತಿದ್ದ ನಜ಼ರುದ್ದೀನ್ ಕೊನೆಗೊಮ್ಮೆ ಹೇಳಿದ, “ಇದು ಬಹಳ ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ರೆಂಬೆಯನ್ನು ತಂದ ಪಾರಿವಾಳ ಗಂಡು ಎಂಬುದಾಗಿ ನಾನು ಖಚಿತವಾಗಿ ಹೇಳುತ್ತೇನೆ.”
ಒಬ್ಬ ಕೇಳಿದ, “ಅಷ್ಟು ಖಚಿತವಾಗಿ ಹೇಗೆ ಹೇಳುವೆ?”
ನಜ಼ರುದ್ದೀನ್‌ ವಿವರಿಸಿದ, “ಅಷ್ಟು ದೀರ್ಘ ಕಾಲ ಬಾಯಿ ಮುಚ್ಚಿಕೊಂಡಿರಲು ಯಾವ ಹೆಣ್ಣಿಗೂ ಸಾಧ್ಯವಿಲ್ಲ!”
*****

೯೭. ನಜ಼ರುದ್ದೀನ್‌ ಕತ್ತೆಯನ್ನು ಹೂಳಿದ್ದು

 

ಒಂದು ದಿನ ನಜ಼ರುದ್ದೀನ್‌ನ ಪ್ರೀತಿಯ ಕತ್ತೆಯು ಸತ್ತು ಬಿದ್ದಿತು. ಬಲುದುಃಖಿತನಾದ ನಜ಼ರುದ್ದೀನ್‌ ಮನುಷ್ಯರನ್ನು ಹೂಳುವ ರೀತಿಯಲ್ಲಿಯೇ ಅದನ್ನೂ ಹೂಳಿದ. ತದನಂತರ ಸಮಾಧಿಯ ಸಮೀಪದಲ್ಲಿ ಕುಳಿತು ಅಳುತ್ತಿದ್ದಾಗ ‌ಆ ಮಾರ್ಗವಾಗಿ ಹೋಗುತ್ತಿದ್ದ ಒಬ್ಬ ಕೇಳಿದ, “ಇದು ಯಾರ ಸಮಾಧಿ?”

ಅದು ತನ್ನ ಕತ್ತೆಯದ್ದು ಎಂಬುದಾಗಿ ಹೇಳಲು ಸಂಕೋಚವಾದದ್ದರಿಂದ  ನಜ಼ರುದ್ದೀನ್‌ ಹೇಳಿದ, “ಇದು ಒಬ್ಬ ಮಹಾನ್‌ ಷೇಕ್‌ನ ಸಮಾಧಿ. ಆತ ನನಗೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಸಮಾಧಿಗೆ ಯಾರೂ ಬಂದು ಗೌರವ ಸಲ್ಲಿಸುತ್ತಿಲ್ಲ ಎಂಬುದಾಗಿ ಹೇಳಿದ. ಆದ್ದರಿಂದ ನಾನು ಇಲ್ಲಗೆ ಬಂದು ಅವನನನ್ನು ನೆನಪಿಸಿಕೊಂಡು ಗೌರವ ಸಲ್ಲಿಸುತ್ತಿದ್ದೇನೆ.”
ಷೇಕ್‌ನ ಸಮಾಧಿಯೊಂದು ಇರುವ ಕುರಿತಾಗಿ ಸುದ್ದಿ ಹರಡಿ ಜನ ಆ ಸಮಾಧಿಗೆ ಬಂದು ಗೌರವ ಸಲ್ಲಿಸಲಾರಂಭಿಸಿದರು. ಮುಂದೊಂದು ದಿನ ನಜ಼ರುದ್ದೀನ್‌ ತನ್ನ ಹೊಸ ಕತ್ತೆಯೊಂದಿಗೆ ಆ ಮಾರ್ಗವಾಗಿ ಎಲ್ಲಿಗೋ ಹೋಗುತ್ತಿದ್ದ. ತನ್ನ ಕತ್ತೆಯ ಸಮಾಧಿಯ ಹತ್ತಿರ ಅನೇಕರು ಇರುವುದನ್ನೂ ಪೂಜಾವೇದಿಕೆಯೊಂದು ನಿರ್ಮಾಣವಾಗಿರುವುದನ್ನೂ ಗಮನಿಸಿದ.
ಅಲ್ಲಿ ಇದ್ದವರ ಪೈಕಿ ಒಬ್ಬನನನ್ನು ಕೇಳಿದ, “ಇಲ್ಲಿ ಏನು ನಡೆಯುತ್ತಿದೆ?”
ಅವನು ತಿಳಿಸಿದ, “ಒಬ್ಬ ಮಹಾನ್‌ ಷೇಕ್‌ನ ಸಮಾಧಿ ಇದು. ನಾವು ಅವನಿಗೆ ಗೌರವ ಸಲ್ಲಿಸುತ್ತಿದ್ದೇವೆ.”
ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, ಏನು ಷೇಕ್‌ನದ್ದೇ! ಇದು ನನ್ನ ಕತ್ತೆಯ ಸಮಾಧಿ. ಅದನ್ನು ಇಲ್ಲಿ ನಾನೇ ಸಮಾಧಿ ಮಾಡಿದ್ದು.”
ಇದನ್ನು ಕೇಳಿ ಅಲ್ಲಿದ್ದವರು ಕೋಪೋದ್ರಿಕ್ತರಾಗಿ ನಜ಼ರುದ್ದೀನ್‌ನನ್ನು ಮತೀಯ ಮುಖಂಡನೊಬ್ಬನ ಹತ್ತಿರ ಎಳೆದೊಯ್ದರು. ನಜ಼ರುದ್ದೀನ್‌ನ ಕೃತ್ಯವನ್ನು ಮತೀಯ ಅಪಚಾರ ಎಂಬುದಾಗಿ ಪರಿಗಣಿಸಿದ ಮತೀಯ ಮುಖಂಡ ಅವನಿಗೆ ಕೆಲವು ಚಡಿಯೇಟು ಕೊಡುವಂತೆ ಆದೇಶಿಸಿದ.
ಬಾಸುಂಡೆಗಳಿಂದ ಅಲಂಕೃತವಾದ ಬೆನ್ನಿನೊಂದಿಗೆ ನಜ಼ರುದ್ದೀನ್‌ ಇಂತು ಆಲೋಚಿಸಿದ, ವಾವ್, ನನ್ನ ಕತ್ತೆಯ ಸಮಾಧಿಯನ್ನು ಒಬ್ಬ ಷೇಕ್‌ ನ ಸಮಾಧಿ ಎಂಬುದಾಗಿ ಜನರೆಲ್ಲರೂ ನಂಬಬೇಕಾದರೆ ನನ್ನ ಕತ್ತೆಯ ಆತ್ಮ ಒಂದು ಮಹಾನ್‌ ಆತ್ಮವೇ ಆಗಿದ್ದಿರಬೇಕು!” 
*****

೯೮. ನಜ಼ರುದ್ದೀನ್‌ನ ಆತ್ಮ


ನಜ಼ರುದ್ದೀನ್‌ ತನ್ನ ಪತ್ನಿಯನ್ನು ಬಹಳ ಪ್ರೀತಿಸುತ್ತಿದ್ದ. ಎಂದೇ, ಅವಳನ್ನು ನನ್ನ ಅತ್ಮ ಎಂಬುದಾಗಿ ಉಲ್ಲೇಖಿಸುತ್ತಿದ್ದ. ಇಂತಿರುವಾಗ ಒಂದು ರಾತ್ರಿ ದಂಪತಿಗಳು ಮಲಗಿ ನಿದ್ರಿಸುತ್ತಿದ್ದಾಗ ಸಾವಿನ ದೂತನೊಬ್ಬ ನಜ್ರುದ್ದೀನ್‌ನ ಸಮೀಪಕ್ಕೆ ಬಂದು ಅವನನ್ನು ಎಬ್ಬಿಸಿ ಹೇಳಿದ, “ನಾನು ನಿನ್ನ ಆತ್ಮವನ್ನು ಒಯ್ಯಲು ಬಂದಿದ್ದೇನೆ.” ತಕ್ಷಣ ನಜ಼ರುದ್ದೀನ್‌ ಪತ್ನಿಯತ್ತ ತಿರುಗಿ ಹೇಳಿದ, “ಏಳು, ಎದ್ದೇಳು. ನಿನಗಾಗಿ ಇಲ್ಲಿಗೆ ಯಾರೋ ಬಂದಿದ್ದಾರೆ!”
*****

೯೯. ಸುಳ್ಳುಗಾರ, ಉತ್ಪ್ರೇಕ್ಷಕ ನಜ಼ರುದ್ದೀನ್


ನಗರಾಧ್ಯಕ್ಷ: “ನಜ಼ರುದ್ದೀನ್‌ ನೀನೊಬ್ಬ ಸುಳ್ಳುಗಾರನಷ್ಟೇ ಅಲ್ಲ, ಯಾವುದನ್ನೇ ಆಗಲಿ ಉತ್ಪ್ರೇಕ್ಷಿಸಿ ಮಾತನಾಡುವವನು ಎಂಬುದಾಗಿ ಖ್ಯಾತನಾಗಿರುವೆ ಎಂಬುದಾಗಿ ತಿಳಿಯಿತು. ಹೆಚ್ಚು ಆಲೋಚಿಸದೆ ನನಗೊಂದು ಅಂಥ ಸುಳ್ಳು ಹೇಳಿದರೆ ನಿನಗೆ ೫೦ ದಿನಾರ್‌ ಬಹುಮಾನ ಕೊಡುತ್ತೇನೆ.”
ನಜ಼ರುದ್ದೀನ್‌: ಐವತ್ತು ದಿನಾರ್ ಗಳೇ? ಈಗ ತಾನೇ ನೀವು ಒಂದುನೂರು ದಿನಾರ್‌ಗಳನ್ನು ಕೊಡುವುದಾಗಿ ಭರವಸೆ ನೀಡಿದ್ದಿರಲ್ಲವೇ?”
*****

೧೦೦. ಕುದುರೆ ವ್ಯಾಪಾರಿ


ಮಾರುಕಟ್ಟೆಯಲ್ಲಿ ಕುದುರೆ ವ್ಯಾಪಾರಿಯೊಬ್ಬ ತಾನು ಮಾರುತ್ತಿದ್ದ ಕುದುರೆಯ ಗುಣಗಾನ ಮಾಡುತ್ತಿದ್ದದ್ದನ್ನು ಕೇಳುತ್ತಾ ನಿಂತಿದ್ದ ನಜ಼ರುದ್ದೀನ್‌. ಇಡೀ ಹಳ್ಳಿಯಲ್ಲಿ ಇರುವ ಕುದುರೆಗಳ ಪೈಕಿ ಅತ್ಯಂತ ಉತ್ಕೃಷ್ಟವಾದ್ದು ಇದು. ಇದು ಮಿಂಚಿನ ವೇಗದಲ್ಲಿ ಓಡುತ್ತದೆ. ಎಷ್ಟುಹೊತ್ತು ಓಡಿದರೂ ಸುಸ್ತಾಗುವುದೇ ಇಲ್ಲ. ನಿಜ ಹೇಳಬೇಕೆಂದರೆ, ಈಗ ನೀವು ಈ ಕುದುರೆಯನ್ನೇರಿ ಇಲ್ಲಿಂದ ಹೊರಟರೆ ಬೆಳಗ್ಗೆ ೫ ಗಂಟೆಯ ವೇಳೆಗೆ ಸಮರ್‌ಕಂಡ್‌ನಲ್ಲಿ ಇರುತ್ತೀರಿ.”
ತಕ್ಷಣ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ: “ಅಯ್ಯೋ ದೇವರೇ! ಅಷ್ಟು ಬೆಳಗಿನ ಜಾವ ಸಮರ್‌ಕಂಡ್‌ ಸೇರಿ ಮಾಡಬೇಕಾದದ್ದು ಏನಿದೆ?”


No comments: