Pages

16 May 2015

ಝೆನ್ (Zen) ಕತೆಗಳು: ಸಂಚಿಕೆ ೬

ಝೆನ್‌ (Zen) ಕತೆ ೧೨೬. ಅತೀ ಶ್ರೇಷ್ಠ ಬೋಧನೆ
ಪ್ರಖ್ಯಾತ ಝೆನ್‌ ಗುರುವೊಬ್ಬ ತನ್ನ ಅತೀ ಶ್ರೇಷ್ಠ ಬೋಧನೆ ಎಂಬುದಾಗಿ ಹೇಳಿಕೊಂಡದ್ದು ಇದನ್ನು: ’ನಿಮ್ಮ ಮನಸ್ಸೇ ಬುದ್ಧ.’ ಅಧ್ಯಯನ ಮತ್ತು ಚಿಂತನಗಳನ್ನು ಕೋರುವ ಗಹನವಾದ ಆಲೋಚನೆ ಇದು ಎಂಬುದಾಗಿ ಭಾವಿಸಿದ ಸನ್ಯಾಸಿಯೊಬ್ಬ ಆಶ್ರಮವನ್ನು ಬಿಟ್ಟು ಕಾಡಿಗೆ ಹೋಗಿ ಈ ಒಳನೋಟದ ಕುರಿತು ಧ್ಯಾನ ಮಾಡಲು ನಿರ್ಧರಿಸಿದ. ಅಂತೆಯೇ ೨೦ ವರ್ಷ ಕಾಲ ಏಕಾಂತವಾಸಿಯಾಗಿದ್ದುಕೊಂಡು ಆ ಶ್ರೇಷ್ಠ ಬೋಧನೆಯ ಕುರಿತು ಆಳವಾದ ಚಿಂತನೆ ಮಾಡಿದ. ಒಂದು ದಿನ ಕಾಡಿನ ಮೂಲಕ ಪಯಣಿಸುತ್ತಿದ್ದ ಇನ್ನೊಬ್ಬ ಸನ್ಯಾಸಿಯನ್ನು ಸಂಧಿಸಿದ. ಆ ಸನ್ಯಾಸಿಯೂ ತನ್ನ ಗುರುವಿನ ಶಿಷ್ಯನಾಗಿದ್ದ ಎಂಬುದು ತಿಳಿದ ನಂತರ ಅವನನ್ನು ಕೇಳಿದ, ನಮ್ಮ ಗುರುವಿನ ಅತೀ ಶ್ರೇಷ್ಠ ಬೋಧನೆಯ ಕುರಿತು ನಿನಗೇನು ತಿಳಿದಿದೆ ಎಂಬುದನ್ನು ದಯವಿಟ್ಟು ಹೇಳು. ಪ್ರಯಾಣಿಕನ ಕಣ್ಣುಗಳು ಹೊಳೆಯತೊಡಗಿದವು, ಆಹಾ, ಈ ವಿಷಯದ ಕುರಿತು ಬಲು ಸ್ಪಷ್ಟವಾಗಿ ತಿಳಿಸಿದ್ದಾರೆ. ತನ್ನ ಅತೀ ಶ್ರೇಷ್ಠ ಬೋಧನೆ ಇಂತಿದೆ ಎಂಬುದಾಗಿ ಅವರು ಹೇಳಿದ್ದಾರೆ: ’ನಿಮ್ಮ ಮನಸ್ಸು ಬುದ್ಧ ಅಲ್ಲ.’

ಝೆನ್‌ (Zen) ಕತೆ ೧೨೭. ವಿಮೋಚನೆ.
ಸನ್ಯಾಸಿಯೊಬ್ಬ ಬುದ್ಧನನ್ನು ಪತ್ತೆಹಚ್ಚಲೋಸುಗ ಸುದೀರ್ಘ ಯಾತ್ರೆ ಕೈಗೊಂಡ. ಹುಡುಕುವಿಕೆಗೆ ಅನೇಕ ವರ್ಷಗಳನ್ನು ಮೀಸಲಾಗಿಟ್ಟ ಆತ ಕೊನೆಗೊಮ್ಮೆ ಬುದ್ಧ ಜೀವಿಸಿದ್ದ ಎಂಬುದಾಗಿ ಹೇಳಲಾಗುತ್ತಿದ್ದ ದೇಶವನ್ನು ತಲುಪಿದ. ಆ ದೇಶವನ್ನು ಪ್ರವೇಶಿಸಲೋಸುಗ ನದಿಯೊಂದನ್ನು ದೋಣಿಯೊಂದರಲ್ಲಿ ಅಂಬಿಗನ ನೆರವಿನಿಂದ ದಾಟುತ್ತಿದ್ದಾಗ ಸನ್ಯಾಸಿ ಸುತ್ತಲೂ ನೋಡಿದ. ಏನೋ ಒಂದು ಅವರತ್ತಲೇ ತೇಲಿಕೊಂಡು ಬರುತ್ತಿದ್ದದ್ದನ್ನು ಗಮನಿಸಿದ. ಒಬ್ಬ ವ್ಯಕ್ತಿಯ ಶವ ಅದು ಎಂಬುದು ಅದು ತುಸು ಹತ್ತಿರ ಬಂದಾಗ ಅವನಿಗೆ ಅರಿವಾಯಿತು. ಕೈನಿಂದ ಮುಟ್ಟುವಷ್ಟು ಹತ್ತಿರ ಅದು ಬಂದಾಗ ಇದಕ್ಕಿದ್ದಂತೆಯೇ ಆ ದೇಹ ಯಾರದ್ದೆಂಬುದನ್ನು ಆತ ಗುರುತಿಸಿದ - ಅದು ಅವನದೇ ಆಗಿತ್ತು! ನದಿಯ ಪ್ರವಾಹದೊಂದಿಗೆ ಗೊತ್ತುಗುರಿ ಇಲ್ಲದೆ ತೇಲಿಕೊಂಡು ಹೋಗುತ್ತಿದ್ದ ನಿಶ್ಚಲವೂ ನಿರ್ಜೀವವೂ ಆಗಿದ್ದ ತನ್ನನ್ನು ಕಂಡಾಗ ಎಲ್ಲ ಸ್ವನಿಯಂತ್ರಣವನ್ನೂ ಕಳೆದುಕೊಂಡು ಆತ ಬಹುವಾಗಿ ಗೋಳಾಡಿದ. ಅದು ಅವನ ವಿಮೋಚನೆಯ ಕ್ಷಣವಾಗಿತ್ತು.

ಝೆನ್‌ (Zen) ಕತೆ ೧೨೮. ಪ್ರೀತಿ.
ಆತನ ಮೇಲೆ ಭಯವಿಸ್ಮಿತಗೊಳಿಸುವಷ್ಟು ಅಗಾಧ ಪ್ರೀತಿಯ ಭಾವನೆಗಳಿರುವುದಾಗಿಯೂ ಅದು ಆಕೆಯನ್ನು ಗೊಂದಲಕ್ಕೀಡು ಮಾಡಿರುವುದಾಗಿಯೂ ತನ್ನ ಅಂತರಂಗದ ಗುಟ್ಟನ್ನು ಗುರು ಸುಝುಕಿ ರೋಶಿ ಹತ್ತಿರ ಶಿಷ್ಯೆಯೊಬ್ಬಳು ನಿವೇದಿಸಿಕೊಂಡಳು. ಏನೂ ಚಿಂತೆ ಮಾಡಬೇಡ, ಅವನು ಹೇಳಿದ. ನಿನ್ನ ಗುರುವಿನ ಕುರಿತಾಗಿ ಎಲ್ಲ ಭಾವನೆಗಳೂ ನಿನ್ನಲ್ಲಿ ಇರಲು ಅವಕಾಶ ನೀಡು. ಅದು ಒಳ್ಳೆಯದು. ನಮ್ಮಿಬ್ಬರಿಗೂ ಸಾಕಾಗುವಷ್ಟು ಶಿಸ್ತು ಸಂಯಮ ನನ್ನಲ್ಲಿದೆ.

ಝೆನ್‌ (Zen) ಕತೆ ೧೨೯. ಮಹಾತ್ಮ
ಪರ್ವತದ ತುದಿಯಲ್ಲಿ ಇರುವ ಪುಟ್ಟ ಮನೆಯಲ್ಲಿ ವಿವೇಕಿಯಾದ ಮಹಾತ್ಮನೊಬ್ಬ ವಾಸಿಸುತ್ತಿದ್ದಾನೆ ಎಂಬ ಸುದ್ದಿ ಗ್ರಾಮಾಂತರ ಪ್ರದೇಶದಲ್ಲಿ ಹರಡಿತು.  ಹಳ್ಳಿಯ ನಿವಾಸಿಯೊಬ್ಬ ಸುದೀರ್ಘವೂ ಕಠಿಣವೂ ಆದ ಪ್ರಯಾಣ ಮಾಡಿ ಅವನನ್ನು ಭೇಟಿಯಾಗಲು ನಿರ್ಧರಿಸಿದ.
ಆ ಮನೆಯನ್ನು ಅವನು ತಲುಪಿದಾಗ ಒಳಗಿದ್ದ ವೃದ್ಧ ಸೇವಕನೊಬ್ಬ ಬಾಗಿಲಿನಲ್ಲಿ ತನ್ನನ್ನು ಸ್ವಾಗತಿಸಿದ್ದನ್ನು ಗಮನಿಸಿದ.
ಅವನು ಸೇವಕನಿಗೆ ಹೇಳಿದ, ವಿವೇಕಿಯಾದ ಮಹಾತ್ಮನನ್ನು ನಾನು ನೋಡಬಯಸುತ್ತೇನೆ.
ಸೇವಕ ನಸುನಕ್ಕು ಅವನನ್ನು ಮನೆಯೊಳಕ್ಕೆ ಕರೆದೊಯ್ದ. ಮನೆಯಲ್ಲಿ ಕೋಣೆಯಿಂದ ಕೋಣೆಗೆ ಹೋಗುತ್ತಿರುವಾಗ ಮಹಾತ್ಮನನ್ನು ಸಂಧಿಸುವ ನಿರೀಕ್ಷೆಯಿಂದ ಅವನು ಸುತ್ತಲೂ ನೋಡುತ್ತಿದ್ದ. ಏನಾಗುತ್ತಿದ್ದೆ ಎಂಬುದು ಅರಿವಿಗೆ ಬರುವುದರೊಳಗಾಗಿ ಅವನನ್ನು ಮನೆಯ ಹಿಂಬಾಗಿಲಿನ ಮೂಲಕ ಹೊರಕ್ಕೆ ಕರೆದೊಯ್ಯಲಾಗಿತ್ತು. ತಕ್ಷಣ ಹಿಂದಕ್ಕೆ ತಿರುಗಿ ಸೇವಕನಿಗೆ ಹೇಳಿದ, ನಾನು ಮಹಾತ್ಮನನ್ನು ನೋಡಬಯಸುತ್ತೇನೆ!
ವೃದ್ಧ ಹೇಳಿದ, ನೀನು ಈಗಾಗಲೇ ನೋಡಿರುವೆ. ಜೀವನದಲ್ಲಿ ಸಂಧಿಸುವ ಪ್ರತಿಯೊಬ್ಬರನ್ನೂ, ಅವರು ಎಷ್ಟೇ ಸಾಮಾನ್ಯರಂತೆಯೋ ಅಮುಖ್ಯರಂತೆಯೋ ಗೋಚರಿಸಿದರೂ, ಮಹಾತ್ಮ ಎಂಬಂತೆಯೇ ನೋಡು. ನೀನು ಹಾಗೆ ಮಾಡಿದರೆ ಇಂದು ನೀನು ಕೇಳಬೇಕೆಂದಿದ್ದ ಸಮಸ್ಯೆ, ಅದು ಏನೇ ಆಗಿರಲಿ, ಪರಿಹಾರವಾಗುತ್ತದೆ.

ಝೆನ್‌ (Zen) ಕತೆ ೧೩೦. ನನಗೆ ಗೊತ್ತಿಲ್ಲ
ಬೌದ್ಧ ಮತಾನುಯಾಯಿಯಾಗಿದ್ದ ಚಕ್ರವರ್ತಿಯು ಬೌದ್ಧ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲೋಸುಗ ಖ್ಯಾತ ಝೆನ್‌ ಗುರುವೊಬ್ಬನನ್ನು ಅರಮನೆಗೆ ಆಹ್ವಾನಿಸಿದ.
ಪವಿತ್ರವಾದ ಬೌದ್ಧ ಸಿದ್ಧಾಂತದ ಪ್ರಕಾರ ಶ್ರೇಷ್ಠ ಸತ್ಯ ಯಾವುದು? ವಿಚಾರಿಸಿದ ಚಕ್ರವರ್ತಿ.
ಅತೀ ವಿಶಾಲವಾದ ಶೂನ್ಯತೆ, ಪಾವಿತ್ರ್ಯದ ಕುರುಹೂ ಇಲ್ಲದಿರುವಿಕೆ, ಉತ್ತರಿಸಿದರು ಗುರುಗಳು.
ಪಾವಿತ್ರ್ಯವೇ ಇಲ್ಲ ಎಂಬುದಾದರೆ ನೀವು ಯಾರು ಅಥವ ಏನು? ವಿಚಾರಿಸಿದ ಚಕ್ರವರ್ತಿ.
ಗುರುಗಳು ಉತ್ತರಿಸಿದರು, ನನಗೆ ಗೊತ್ತಿಲ್ಲ.

ಝೆನ್‌ (Zen) ಕತೆ ೧೩೧. ನಿನ್ನ ಕೈನಲ್ಲಿದೆ
ಯುವಕನೊಬ್ಬ ಪುಟ್ಟ ಪಕ್ಷಿಯೊಂದನ್ನು ಹಿಡಿದು ಅದನ್ನು ತನ್ನ ಬೆನ್ನಿನ ಹಿಂದೆ ಅಡಗಿಸಿ ಹಿಡಿದುಕೊಂಡ. ಆ ನಂತರ ಕೇಳಿದ, ಗುರುಗಳೇ ನನ್ನ ಕೈಯಲ್ಲಿ ಇರುವ ಪಕ್ಷಿಯು ಜೀವಂತವಾಗಿದೆಯೇ ಅಥವ ಸತ್ತಿದೆಯೇ? ಗುರುಗಳನ್ನು ಏಮಾರಿಸಲು ಇದೊಂದು ಸುವರ್ಣಾವಕಾಶ ಎಂಬುದಾಗಿ ಅವನು ಆಲೋಚಿಸಿದ್ದ. ಗುರುಗಳು ಸತ್ತಿದೆ ಅಂದರೆ ಅದನ್ನು ಹಾರಲು ಬಿಡುವುದೆಂಬುದಾಗಿಯೂ ಜೀವಂತವಾಗಿದೆ ಅಂದರೆ ಅದರ ಕತ್ತು ಹಿಸುಕಿ ಸಾಯಿಸಿ ತೋರಿಸುವುದೆಂಬುದಾಗಿಯೂ ನಿರ್ಧಿರಿಸಿದ್ದ.
ಗುರುಗಳು ಉತ್ತರಿಸಿದರು, ಉತ್ತರ ನಿನ್ನ ಕೈನಲ್ಲಿದೆ.

ಝೆನ್‌ (Zen) ಕತೆ ೧೩೨. ನಿಲುವಂಗಿಯನ್ನು ಆಹ್ವಾನಿಸುವುದು
ಶ್ರೀಮಂತ ಪೋಷಕರು ಇಕ್ಕ್ಯುನನ್ನು ಔತಣಕೂಟಕ್ಕೆ ಆಹ್ವಾನಿಸಿದರು. ಬಿಕ್ಷುಕನ ನಿಲುವಂಗಿ ಧರಿಸಿ ಇಕ್ಕ್ಯು ಆಗಮಿಸಿದ. ಅವನು ಯಾರು ಎಂಬುದನ್ನು ಗುರುತಿಸಲಾಗದೆ ಅತಿಥೇಯ ಅವನನ್ನು ಓಡಿಸಿದ. ಇಕ್ಕ್ಯು ಮನೆಗೆ ಹೋಗಿ ಉತ್ಸವಾಚರಣೆಯಲ್ಲಿ ಧರಿಸುವ ಎದ್ದು ಕಾಣುವ ಕೆನ್ನೀಲಿ ಬಣ್ಣದ ಕಸೂತಿಯಿಂದ ಅಲಂಕೃತವಾದ ನಿಲುವಂಗಿ ಧರಿಸಿ ಹಿಂದಿರುಗಿದ. ಬಲು ಗೌರವದಿಂದ ಅವನನ್ನು ಸ್ವಾಗತಿಸಿ ಔತಣಕೂಟದ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಅವನು ತಾನು ಧರಿಸಿದ್ದ ನಿಲುವಂಗಿಯನ್ನು ಕಳಚಿ ಕುಳಿತುಕೊಳ್ಳಲು ಇಟ್ಟಿದ್ದ ಮೆತ್ತೆಯ ಮೇಲಿರಿಸಿ ಹೇಳಿದ, ನೀವು ಪ್ರಾಯಶಃ ಈ ನಿಲುವಂಗಿಯನ್ನು ಆಹ್ವಾನಿಸಿದ್ದೀರಿ, ಏಕೆಂದರೆ ಸ್ವಲ್ಪ ಕಾಲಕ್ಕೆ ಮೊದಲು ನೀವು ನನ್ನನ್ನು ಇಲ್ಲಿಂದ ಓಡಿಸಿದ್ದಿರಿ. ಇಂತು ಹೇಳಿದ ಇಕ್ಕ್ಯು ಅಲ್ಲಿಂದ ಹೊರನಡೆದ.

ಝೆನ್‌ (Zen) ಕತೆ ೧೩೩. ಅದು ಹೋಗುತ್ತದೆ.
ತನಗೆ ಧ್ಯಾನ ಮಾಡುವುದನ್ನು ಕಲಿಸುತ್ತಿದ್ದ ಗುರುವಿನ ಹತ್ತಿರ ಶಿಷ್ಯನೊಬ್ಬ ಹೋಗಿ ಹೇಳಿದ, ನನ್ನ ಧ್ಯಾನ ಮಾಡುವಿಕೆ ಅಸಹನೀಯವಾಗಿದೆ. ಮನಸ್ಸು ಬಲು ಚಂಚಲವಾಗುತ್ತದೆ, ಅಥವ ಕಾಲುಗಳು ನೋಯಲಾರಂಭಿಸುತ್ತವೆ, ಅಥವ ಅಗಾಗ್ಗೆ ನಿದ್ದೆ ಮಾಡುತ್ತೇನೆ!
ಗುರುಗಳು ಹೇಳಿದರು, ಅದು ಹೋಗುತ್ತದೆ.
ಒಂದು ವಾರದ ನಂತರ ಆ ಶಿಷ್ಯ ಪುನಃ ಗುರುವಿನ ಹತ್ತಿರ ಬಂದು ಹೇಳಿದ, ನನ್ನ ಧ್ಯಾನ ಮಾಡುವಿಕೆ ಅದ್ಭುತವಾಗಿದೆ. ತಿಳಿದ ಭಾವನೆ ಮೂಡುತ್ತದೆ, ತುಂಬ ಶಾಂತಿಯ ಅನುಭವ ಆಗುತ್ತದೆ, ಜೀವಕಳೆಯಿಂದ ತುಂಬಿರುತ್ತದೆ, ಅದ್ಭುತವಾಗಿದೆ.
ಗುರುಗಳು ಪ್ರತಿಕ್ರಿಯಿಸಿದರು, ಅದು ಹೋಗುತ್ತದೆ.

ಝೆನ್‌ (Zen) ಕತೆ ೧೩೪. ಈನೊನ ಒಳ್ಳೆಯದು ಮತ್ತು ಕೆಟ್ಟದ್ದು
ಆರನೇ ಕುಲಪತಿಯನ್ನು ಡೈಯುರೈ ಪರ್ವತದ ವರೆಗೂ ಸನ್ಯಾಸಿ ಮೈಓ ಬೆಂಬತ್ತಿ ಹೋದ. ಮೈಓ ಬರುತ್ತಿರುವುದನ್ನು ನೋಡಿದ ಕುಲಪತಿಗಳು ತನ್ನ ನಿಲುವಂಗಿ ಮತ್ತು ಬಟ್ಟಲನ್ನು ಒಂದು ಬಂಡೆಯ ಮೇಲಿಟ್ಟು ಹೇಳಿದರು, ಈ ನಿಲುವಂಗಿ ಧರ್ಮ ಶ್ರದ್ಧೆಯನ್ನು ಪ್ರತಿನಿಧಿಸುತ್ತದೆ, ಅವುಗಳಿಗಾಗಿ ಕಾದಾಡಬೇಕೇ? ನೀನು ಅವನ್ನು ತೆಗೆದುಕೊಳ್ಳಲು ಅನುಮತಿಸಿದ್ದೇನೆ. ಮೈಓ ಅವನ್ನು ಮೇಲೆತ್ತಲು ಪ್ರಯತ್ನಿಸಿದನಾದರೂ ಅವು ಪರ್ವತದಷ್ಟು ಭಾರವಾಗಿದ್ದದ್ದರಿಂದ ಅಲುಗಾಡಿಸಲೂ ಸಾಧ್ಯವಾಗಲಿಲ್ಲ. ಅವನು ಸಂದಿಗ್ಧಮನಸ್ಕನಾಗಿ ನಡುಗುತ್ತಾ ಹೇಳಿದ, ನಾನು ಬಂದದ್ದು ಸಿದ್ಧಾಂತಕ್ಕಾಗಿ, ನಿಲುವಂಗಿಗಾಗಿ ಅಲ್ಲ. ಈ ನಿಮ್ಮ ಸೇವಕನಿಗೆ ಬೋಧಿಸುವ ಕೃಪೆ ಮಾಡಬೇಕಾಗಿ ಬೇಡುತ್ತೇನೆ! ಕುಲಪತಿಗಳು ಹೇಳಿದರು, ’ಇದು ಒಳ್ಳೆಯದು!, ಇದು ಕೆಟ್ಟದ್ದು! ಎಂಬುದಾಗಿ ಆಲೋಚಿಸಬೇಡ. ಇಂಥ ಕ್ಷಣದಲ್ಲಿ ಸನ್ಯಾಸಿ ಮೈಓನ ಮೂಲ ಆತ್ಮ ಯಾವುದು? ಇದನ್ನು ಕೇಳಿದಾಗ ತಕ್ಷಣ ಮೈಓನಿಗೆ ಜ್ಞಾನೋದಯವಾಯಿತು, ತತ್ಪರಿಣಾಮವಾಗಿ ಅವನ ಇಡೀ ದೇಹ ಬೆವರಿತು. ಕಣ್ಣೀರು ಸುರಿಸುತ್ತಾ ನಮಸ್ಕರಿಸಿ ಅವನು ಕೇಳಿದ, ಗುಟ್ಟಾಗಿಡಬೇಕಾದ ಈ ಪದಗಳು ಮತ್ತು ಅವುಗಳ ಅರ್ಥದ ಹೊರತಾಗಿ ಇನ್ನೂ ಗಹನವಾದದ್ದು ಬೇರೇನಾದರೂ ಇದೆಯೇ?ಕುಲಪತಿಗಳು ಉತ್ತರಿಸಿದರು, ನೀನು ನಿನ್ನ ನಿಜ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡಿರುವೆ. ಆದ್ದರಿಂದ ಇನ್ನೂ ಗಹನವಾದದ್ದು ನಿನ್ನ ಸ್ವಂತದ್ದಾಗಿರುತ್ತದೆ. ಮೈಓ ಹೇಳಿದ, ಒಬೈನಲ್ಲಿ ಇತರ ಸನ್ಯಾಸಿಗಳೊಂದಿಗೆ ನಾನು ಇದ್ದಾಗ ನನ್ನ ನಿಜ ಸ್ವರೂಪದ ಅರಿವೇ ನನಗಿರಲಿಲ್ಲ. ಈಗ ನಾನು ನಿಮ್ಮಿಂದ ಸೂಚನೆ ಪಡೆದಿದ್ದೇನೆ. ಒಬ್ಬ ಮನುಷ್ಯ ಸ್ವತಃ ನೀರು ಕುಡಿದಂತೆಯೂ ಕುಡಿದ ನೀರು ತಣ್ಣಗಿದೆಯೋ ಬೆಚ್ಚಗಿದೆಯೋ ಎಂಬುದನ್ನು ತಿಳಿದಂತೆಯೂ ಇದು ಇದೆ. ನೀವೇ ನನ್ನ ಗುರುಗಳು!ಕುಲಪತಿಗಳು ಹೇಳಿದರು, ಒಬೈ ನಮ್ಮಿಬ್ಬರಿಗೂ ಗುರು. ಒಬೈನಿಂದ ನೀನೇನು ಕಲಿತಿದ್ದಿಯೋ ಅದನ್ನು ಗಟ್ಟಿಯಾಗಿ ಹಿಡಿದುಕೊ!

ಝೆನ್‌ (Zen) ಕತೆ ೧೩೫. ನ್ಯಾನ್ಸೆನ್‌ ಮತ್ತು ಬೆಕ್ಕು ಕೊಲ್ಲುವಿಕೆ
ಪೌರಾತ್ಯ ಮತ್ತು ಪಾಶ್ಚಿಮಾತ್ಯ ಸಭಾಂಗಣಗಳ ಸನ್ಯಾಸಿಗಳು ಒಂದು ಬೆಕ್ಕಿಗೆ ಸಂಬಂಧಿಸಿದಂತೆ ಒಮ್ಮೆ ಜಗಳವಾಡುತ್ತಿದ್ದಾಗ ನ್ಯಾನ್ಸೆನ್‌ ಬೆಕ್ಕನ್ನು ಎತ್ತಿ ಹಿಡಿದು ಹೇಳಿದ, ಎಲೈ ಸನ್ಯಾಸಿಗಳೇ, ನಿಮ್ಮ ಪೈಕಿ ಯಾರಾದರೂ ಒಬ್ಬರು ಝೆನ್‌ನ ಒಂದು ಪದವನ್ನು ಹೇಳಬಲ್ಲಿರಾದರೆ ನಾನು ಈ ಬೆಕ್ಕನ್ನು ಬಿಟ್ಟುಬಿಡುತ್ತೇನೆ, ಇಲ್ಲದೇ ಇದ್ದರೆ ಇದನ್ನು ಕೊಲ್ಲುತ್ತೇನೆ! ಯಾರೂ ಉತ್ತರ ನೀಡಲಿಲ್ಲವಾದ್ದರಿಂದ ನ್ಯಾನ್ಸೆನ್ ಅದನ್ನು ಕೊಂದು ಹಾಕಿದ. ಎಲ್ಲಿಗೋ ಹೋಗಿದ್ದ ಜೋಶು ಅಂದು ಸಾಯಂಕಾಲ ಹಿಂದಿರುಗಿದಾಗ ನ್ಯಾನ್ಸೆನ್ ನಡೆದುದನ್ನು ಅವನಿಗೆ ಹೇಳಿದ. ಆಗ ಜೋಶು ತನ್ನ ಪಾದರಕ್ಷೆಯನ್ನು ಕಳಚಿ ತಲೆಯ ಮೇಲಿಟ್ಟುಕೊಂಡು ಅಲ್ಲಿಂದ ಹೊರನಡೆದ. ನ್ಯಾನ್ಸೆನ್‌ ಹೇಳಿದ, ಆಗ ನೀನು ಇಲ್ಲಿ ಇದ್ದಿದ್ದರೆ ಆ ಬೆಕ್ಕನ್ನು ನಾನು ಕೊಲ್ಲಬೇಕಾಗುತ್ತಿರಲಿಲ್ಲ!

ಝೆನ್‌ (Zen) ಕತೆ ೧೩೬. ಮೀನಿನ ಕುರಿತು ತಿಳಿಯುವುದು.
ಚುಆಂಗ್‌ ಝು ಒಂದು ದಿನ ತನ್ನ ಮಿತ್ರನೊಂದಿಗೆ ನದೀ ತಟದಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಚುಆಂಗ್‌ ಝು ತನ್ನ ಮಿತ್ರನಿಗೆ ಹೇಳಿದ, ಮೀನುಗಳು ಈಜಾಡುತ್ತಿರುವುದನ್ನು ನೋಡು. ಅವು ಅದರಿಂದ ನಿಜವಾಗಿಯೂ ಸುಖಿಸುತ್ತಿವೆ.
ನೀನು ಮೀನಲ್ಲವಲ್ಲ, ಆದ್ದರಿಂದ ಅವು ಸುಖಿಸುತ್ತಿವೆಯೋ ಇಲ್ಲವೋ ಎಂಬುದನ್ನು ನೀನು ನಿಜವಾಗಿಯೂ ತಿಳಿಯಲು ಸಾಧ್ಯವಿಲ್ಲ, ಪ್ರತಿಕ್ರಿಯಿಸಿದ ಆ ಮಿತ್ರ.
ಚುಆಂಗ್‌ ಝು ಹೇಳಿದ, ನೀನು ನಾನಲ್ಲ. ಅಂದ ಮೇಲೆ ಮೀನುಗಳು ಸುಖಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ
ಎಂಬುದು ನಿನಗೆ ಹೇಗೆ ತಿಳಿಯಿತು?

ಝೆನ್‌ (Zen) ಕತೆ ೧೩೭. ಟಾವೋ ಅನುಯಾಯಿ.
ವಿದ್ಯಾರ್ಥಿಯೊಬ್ಬ ಒಮ್ಮೆ ಕೇಳಿದ, ಟಾವೋ ಅನುಯಾಯಿಗೂ ಸಣ್ಣ ಮನುಷ್ಯನಿಗೂ ನಡುವಣ ವ್ಯತ್ಯಾಸ ಏನು?
ಝೆನ್‌ ಗುರು ಉತ್ತರಿಸಿದರು, ಅದು ಬಹಳ ಸರಳವಾಗಿದೆ. ಸಣ್ಣ ಮನುಷ್ಯ ವಿದ್ಯಾರ್ಥಿಯಾದಾಗ ಮನೆಗೆ ಓಡಿ ಹೋಗಿ ಸಾಧ್ಯವಿರುವಷ್ಟು ದೊಡ್ಡ ದನಿಯಲ್ಲಿ ಎಲ್ಲರಿಗೂ ಅದನ್ನು ಹೇಳಲು ಇಚ್ಛಿಸುತ್ತಾನೆ. ಗುರುವಿನ ಮಾತುಗಳನ್ನು ಕೇಳಿದ ನಂತರ ಮನೆಯ ಮೇಲೆ ಹತ್ತಿ ಜನಗಳಿಗೆ ಕೇಳುವಂತೆ ಅದನ್ನು ಬೊಬ್ಬೆ ಹೊಡೆದು ಹೇಳುತ್ತಾನೆ. ಗುರುವಿನ ವಿಧಾನಗಳನ್ನು ತಿಳಿದ ನಂತರ ಪಟ್ಟಣದಲ್ಲಿ ಭೇಟಿಯಾಗುವ ಪ್ರತಿಯೊಬ್ಬರ ಮುಂದೆಯೂ ತಾನು ಗಳಿಸಿದ ಹೊಸ ಜ್ಞಾನವನ್ನು ಆಡಂಬರದಿಂದ ಪ್ರದರ್ಶಿಸುತ್ತಾನೆ.
ಝೆನ್‌ ಗುರು ಮುಂದುವರಿದು ಹೇಳುತ್ತಾನೆ, ಟಾವೋ ಅನುಯಾಯಿ ವಿದ್ಯಾರ್ಥಿಯಾದಾಗ ಕೃತಜ್ಞತೆಯಿಂದ ತಲೆ ಬಾಗಿಸಿ ವಂದಿಸುತ್ತಾನೆ. ಗುರುವಿನ ಮಾತುಗಳನ್ನು ಕೇಳಿದ ನಂತರ ತಲೆ ಮತ್ತು ಭುಜಗಳನ್ನು ಬಾಗಿಸಿ ವಂದಿಸುತ್ತಾನೆ. ಗುರುವಿನ ವಿಧಾನಗಳನ್ನು ತಿಳಿದ ನಂತರ ಸೊಂಟ ಬಾಗಿಸಿ ವಂದಿಸುತ್ತಾನೆ, ಜನ ತನ್ನನ್ನು ಗಮನಿಸದ ರೀತಿಯಲ್ಲಿ ಗೋಡೆಯಪಕ್ಕದಲ್ಲಿ ಸದ್ದಿಲ್ಲದೆ ನಡೆಯುತ್ತಾನೆ.

ಝೆನ್‌ (Zen) ಕತೆ ೧೩೮. ಚಲಿಸುವ ಮನಸ್ಸು.
ಗಾಳಿಯಲ್ಲಿ ಹಾರಾಡುತ್ತಿರುವ ಬಾವುಟವೊಂದರ ಕುರಿತು ಇಬ್ಬರ ನಡುವೆ ಉದ್ರಿಕ್ತ ಚರ್ಚೆ ನಡೆಯುತ್ತಿತ್ತು.
ಮೊದಲನೆಯವ ಹೇಳಿದ, ನಿಜವಾಗಿ ಚಲಿಸುತ್ತಿರುವುದು ಗಾಳಿ.
ಎರಡನೆಯವ ಹೇಳಿದ, :ಇಲ್ಲ ಇಲ್ಲ. ನಿಜವಾಗಿ ಚಲಿಸುತ್ತಿರುವುದು ಬಾವುಟ.
ಅವರ ಸಮೀಪದಲ್ಲಿ ಹಾದು ಹೋಗುತ್ತಿದ್ದ ಝೆನ್‌ ಗುರುವಿಗೆ ಈ ವಾದವಿವಾದ ಕೇಳಿಸಿ, ಅವರು ಮಧ್ಯಪ್ರವೇಶ ಮಾಡಿ ಹೇಳಿದರು, ಚಲಿಸುತ್ತಿರುವುದು ಮನಸ್ಸು

ಝೆನ್‌ (Zen) ಕತೆ ೧೩೯. ಸಹಜ ಸ್ವಭಾವಗಳು.
ಇಬ್ಬರು ಸನ್ಯಾಸಿಗಳು ನದಿಯಲ್ಲಿ ತಮ್ಮ ಬಟ್ಟಲುಗಳನ್ನು ತೊಳೆಯುತ್ತಿದ್ದಾಗ ಮುಳುಗುತ್ತಿರುವ ಚೇಳೊಂದನ್ನು ನೋಡಿದರು. ತಕ್ಷಣ ಒಬ್ಬ ಸನ್ಯಾಸಿ ಅದನ್ನು ಮೊಗೆದು ತೆಗೆದು ದಡದಲ್ಲಿ ನೆಲದ ಮೇಲೆ ಬಿಟ್ಟನು. ಈ ಪ್ರಕ್ರಿಯೆಯಲ್ಲಿ ಅವನಿಗೆ ಅದು ಕುಟುಕಿತ್ತು. ಅವನು ಪುನಃ ತನ್ನ ಬಟ್ಟಲು ತೊಳೆಯುವ ಕಾಯಕ ಮುಂದುವರಿಸಿದನು. ಚೇಳು ಪುನಃ ನೀರಿಗೆ ಬಿದ್ದಿತು. ಆ ಸನ್ಯಾಸಿ ಪುನಃ ಅದನ್ನು ರಕ್ಷಿಸಿದನು, ಅದು ಅವನಿಗೆ ಪುನಃ ಕುಟುಕಿತು.
ಇನ್ನೊಬ್ಬ ಸನ್ಯಾಸಿ ಕೇಳಿದ, ಮಿತ್ರನೇ, ಕುಟುಕುವುದು ಚೇಳಿನ ಸಹಜ ಸ್ವಭಾವ ಎಂಬುದು ತಿಳಿದಿದ್ದರೂ ಅದನ್ನು ರಕ್ಷಿಸುವುದನ್ನು ಮುಂದುವರಿಸಿದ್ದು ಏಕೆ?
ಮೊದಲನೆಯ ಸನ್ಯಾಸಿ ಉತ್ತರಿಸಿದ, ಏಕೆಂದರೆ, ಅದನ್ನು ರಕ್ಷಿಸುವುದು ನನ್ನ ಸಹಜ ಸ್ವಭಾವ.

ಝೆನ್‌ (Zen) ಕತೆ ೧೪೦. ನಿಸರ್ಗದ ಸೌಂದರ್ಯ.
ಒಂದು ಖ್ಯಾತ ಝೆನ್‌ ದೇವಾಲಯದ ಉದ್ಯಾನದ ಹೊಣೆಗಾರಿಕೆ ಪೂಜಾರಿಯೊಬ್ಬನದಾಗಿತ್ತು. ಅವನು ಹೂವುಗಳನ್ನೂ ಪೊದೆಗಳನ್ನೂ ಮರಗಳನ್ನೂ ಪ್ರೀತಿಸುತ್ತಿದ್ದದ್ದರಿಂದ ಅವನಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಈ ದೇವಾಲಯದ ಪಕ್ಕದಲ್ಲಿ ಇದ್ದ ಪುಟ್ಟ ದೇವಾಲಯದಲ್ಲಿ ತುಂಬ ವಯಸ್ಸಾಗಿದ್ದ ಒಬ್ಬ ಝೆನ್‌ ಗುರು ವಾಸಿಸುತ್ತಿದ್ದ. ಒಂದು ದಿನ ವಿಶೇಷ ಅತಿಥಿಗಳು ಬರುವ ನಿರೀಕ್ಷೆ ಇದ್ದದ್ದರಿಂದ ಪೂಜಾರಿಯು ಉದ್ಯಾನ ನೋಡಿಕೊಳ್ಳುವುದರ ಕಡೆಗೆ ವಿಶೇಷ ಗಮನ ನೀಡಿದ. ಕಳೆಗಳನ್ನು ಕಿತ್ತೆಸೆದ, ಪೊದೆಗಳನ್ನು ಕತ್ತರಿಸಿ ಒಪ್ಪಮಾಡಿದ, ಹಾವಸೆಯನ್ನು ತೆಗೆದು ಹಾಕಿದ. ಬಿದ್ದಿದ್ದ ಶರತ್ಕಾಲದ ಒಣ ಎಲೆಗಳನ್ನು ಅತ್ಯಂತ ಜಾಗರೂಕತೆಯಿಂದ ಒಟ್ಟುಗೂಡಿಸಿ ರಾಶಿ ಮಾಡಲು ಸುಮಾರು ಸಮಯವನ್ನು ವಿನಿಯೋಗಿಸಿದ. ಆತ ಕೆಲಸ ಮಾಡುತ್ತಿರುವುದನ್ನು ಎರಡು ದೇವಾಲಯಗಳ ನಡುವೆ ಇದ್ದ ಗೋಡೆಯ ಆಚೆ ಬದಿಯಿಂದ ವೃದ್ಧ ಗುರು ಬಲು ಆಸಕ್ತಿಯಿಂದ ನೋಡುತ್ತಿದ್ದ.
ತನ್ನ ಕೆಲಸ ಮುಗಿಸಿದ ನಂತರ ಪೂಜಾರಿ ಸುಮ್ಮನೆ ನಿಂತು ತನ್ನ ಶ್ರಮದ ಫಲದತ್ತ ಮೆಚ್ಚುಗೆಯ ನೋಟ ಬೀರಿದ. ಈಗ ಇದು ಬಲು ಸುಂದರವಾಗಿದೆಯಲ್ಲವೇ? ಎಂಬುದಾಗಿ ವೃದ್ಧ ಗುರುವನ್ನು ಕರೆದು ಕೇಳಿದ. ವೃದ್ಧ ಉತ್ತರಿಸಿದ, ಹೌದು. ಆದರೂ ಏನೋ ಕೊರತೆ ಕಾಣಿಸುತ್ತಿದೆ. ಈ ಗೋಡೆ ದಾಟಲು ನನಗೆ ನೀನು ಸಹಾಯ ಮಾಡಿದರೆ ಆ ಕೊರತೆಯನ್ನು ನೀಗಿಸುತ್ತೇನೆ. ತುಸು ಹಿಂದುಮುಂದು ನೋಡಿ, ಪೂಜಾರಿ ವೃದ್ಧನನ್ನು ಎತ್ತಿ ಗೊಡೆಯ ಈ ಬದಿಗೆ ಇಳಿಸಿದ. ಗುರು ನಿಧಾನವಾಗಿ ಉದ್ಯಾನದ ಮಧ್ಯದಲ್ಲಿ ಇದ್ದ ಪುಟ್ಟ ಮರದ ಹತ್ತಿರ ಹೋಗಿ ಅದರ ಕಾಂಡವನ್ನು ಹಿಡಿದು ಜೋರಾಗಿ ಅಲುಗಾಡಿಸಿದ. ಉದ್ಯಾನದೆಲ್ಲೆಡೆ ಆ ಮರದ ಒಣಗಿದ ಎಲೆಗಳು ಬಿದ್ದವು. ಹಾಂ, ಈಗ ಸರಿಯಾಯಿತು. ನನ್ನನ್ನು ಈಗ ನೀನು ಹಿಂದಕ್ಕೆ ರವಾನಿಸಬಹುದು, ಎಂಬುದಾಗಿ ಹೇಳಿದ ವೃದ್ಧ ಗುರು.

 

ಝೆನ್‌ (Zen) ಕತೆ ೧೪೧. ರ್ಯುತಾನ್‌ನ ಮೋಂಬತ್ತಿ
ತೋಕುಸಾನ್‌ ಒಂದು ರಾತ್ರಿ ರ್ಯುತಾನ್‌ನ ಹತ್ತಿರ ಹೋಗಿ ತನಗೆ ಏನನ್ನಾದರೂ ಬೋಧಿಸುವಂತೆ ಕೇಳಿದ. ಸುದೀರ್ಘ ಸಮಯದ ನಂತರ ರ್ಯುತಾನ್‌ ಹೇಳಿದ, ತುಂಬ ತಡವಾಗಿದೆ, ನೀನು ಹಿಂದಿರುಗಿ ಹೋಗುವುದು ಒಳ್ಳೆಯದು. ತೋಕುಸಾನ್‌ ವಿಧ್ಯುಕ್ತವಾಗಿ ವಂದಿಸಿ ಬಾಗಿಲು ತೆರೆದು ಹೊರಕ್ಕೆ ಹೋದ. ಹೊರಗೆ ಗಾಢಾಂಧಕಾರ ಇದ್ದದ್ದನ್ನು ನೋಡಿ ಪುನಃ ಒಳಕ್ಕೆ ಬಂದು ಹೇಳಿದ, ಹೊರಗೆ ತುಂಬ ಕತ್ತಲಾಗಿದೆ. ರ್ಯೂತಾನ್‌ ಲಾಟೀನೊಂದನ್ನು ಉರಿಸಿ ಅವನಿಗೆ ಕೊಟ್ಟ. ತೋಕುಸಾನ್‌ ಅದನ್ನು ಎತ್ತಿಕೊಳ್ಳುವಷ್ಟರಲ್ಲಿ ರ್ಯೂತಾನ್‌ ಅದನ್ನು ಆರಿಸಿದ. ಆ ಕ್ಷಣದಲ್ಲಿ ತೋಕುಸಾನ್‌ನಿಗೆ ಜ್ಞಾನೋದಯವಾಯಿತು. ಅವನು ತಲೆಬಾಗಿ ವಂದಿಸಿದ. ರ್ಯೂತಾನ್‌ ಕೇಳಿದ, ನಿನಗೇನು ತಿಳಿಯಿತು? ತೋಕುಸಾನ್‌ ಉತ್ತರಿಸಿದ, ನೀವೇನು ಹೇಳುತ್ತೀರೋ ಅದರ ಸತ್ಯತೆಯ ಕುರಿತು ಇವತ್ತಿನಿಂದ ನಾನು ಸಂಶಯ ಪಡುವುದಿಲ್ಲ.ಮರುದಿನ ರ್ಯೂತಾನ್‌ ಉಪನ್ಯಾಸ ವೇದಿಕೆಯನ್ನೇರಿ ಘೋಷಿಸಿದ, ಖಡ್ಗದ ಅಲಗಿನಂತೆ ಹರಿತವಾದ ಹಲ್ಲುಗಳೂ ರಕ್ತದ ಬಟ್ಟಲಿನಂತಿರುವ ಬಾಯಿಯೂ ಇರುವ ಒಬ್ಬಾತ ನಿಮ್ಮ ನಡುವೆ ಇದ್ದಾನೆ. ನೀವು ಅವನಿಗೆ ಕೋಲಿನಿಂದ ಹೊಡೆದರೆ ತಲೆ ತಿರುಗಿಸಿ ನಿಮ್ಮತ್ತ ಅವನು ನೋಡುವುದಿಲ್ಲ. ಒಂದಲ್ಲ ಒಂದು ದಿವಸ ಅವನು ಅತ್ಯಂತ ಎತ್ತರವಾದ ಪರ್ವತ ಶಿಖರವನ್ನೇರಿ ಅಲ್ಲಿ ನನ್ನ ಬೋಧನೆಗಳ ತಿರುಳನ್ನು ಸ್ಥಾಪಿಸುತ್ತಾನೆ.ತದನಂತರ ತೋಕುಸಾನ್‌ ಸೂತ್ರಗಳಿಗೆ ತಾನು ಬರೆದಿದ್ದ ವ್ಯಾಖ್ಯಾನಗಳನ್ನೆಲ್ಲ ಸಭಾಂಗಣದ ಮುಂಭಾಗದಲ್ಲಿ ರಾಶಿಮಾಡಿ ಬೆಂಕಿ ಹಚ್ಚಿ ಸುಟ್ಟುಹಾಕಿ ಘೋಷಿಸಿದ, ಅತೀ ಗಹನವಾದ ಬೋಧನೆಗಳೆಲ್ಲವೂ ಈ ವಿಶಾಲ ವ್ಯೋಮದಲ್ಲಿ ಒಂದು ಕೂದಲು ಇದ್ದಂತೆ. ಮನುಷ್ಯನ ಅತ್ಯುತ್ತಮ ವಿವೇಕವು ಆಳವಾದ ಕಂದರದೊಳಕ್ಕೆಸೆದ ಒಂದು ತೊಟ್ಟು ನೀರಿನಂತೆ. ತನ್ನ ಎಲ್ಲ ಟಿಪ್ಪಣಿಗಳನ್ನೂ ಸುಟ್ಟು ಹಾಕಿದ ಆತ ಅಲ್ಲಿಂದ ತೆರಳಿದ.

 

ಝೆನ್‌ (Zen) ಕತೆ ೧೪೨. ಚಹಾ ಅಧಿಕಾರಿ (Tea Master)
ಪುರಾತನ ಜಪಾನಿನಲ್ಲಿ ಚಹಾ ಕರ್ಮಾಚರಣೆಯ ಅಧಿಕಾರಿಯೊಬ್ಬ ಒಮ್ಮೆ ಸೈನಿಕನೊಬ್ಬನನ್ನು ಆಕಸ್ಮಿಕವಾಗಿ ಉಪೇಕ್ಷಿಸಿದ. ತಕ್ಷಣ ಆತ ಸೈನಿಕನ ಕ್ಷಮೆ ಯಾಚಿಸಿದರೂ ದುಡುಕಿನ ಸ್ವಭಾವದ ಸೈನಿಕ ಈ ವಿಷಯವನ್ನು ಖಡ್ಗ ದ್ವಂದ್ವಯುದ್ಧದ ಮುಖೇನ ಇತ್ಯರ್ಥಗೊಳಿಸಬೇಕೆಂದು ಪಟ್ಟು ಹಿಡಿದ. ಚಹಾ ಅಧಿಕಾರಿಗೆ ಖಡ್ಗಗಳ ಅನುಭವವೇ ಇರಲಿಲ್ಲವಾದ್ದರಿಂದ ಅವನು ತನ್ನ ಮಿತ್ರ ಝೆನ್‌ ಗುರುವಿನ ಸಲಹೆ ಕೇಳಿದ. ಆ ಗುರುವಿಗೆ ಖಡ್ಗ ಯುದ್ಧದಲ್ಲಿ ಪರಿಣತಿಯೂ ಇತ್ತು.
ಚಹಾ ಅಧಿಕಾರಿಯು ತನಗೆ ಚಹಾ ನೀಡುವಾಗ ಚಹಾ ನೀಡುವ ಕರ್ಮಾಚರಣೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಸಂಪೂರ್ಣ ಏಕಾಗ್ರತೆ ಮತ್ತು ಶಾಂತಚಿತ್ತತೆಯಿಂದ ಕಾರ್ಯ ನಿರ್ವಹಿಸುತ್ತಿದ್ದದ್ದನ್ನು ಝೆನ್‌ ಗುರು ಗಮನಿಸಿದ್ದರು.
ಚಹಾ ಅಧಿಕಾರಿಗೆ ಝೆನ್ ಗುರು ಇಂತು ಸಲಹೆ ನೀಡಿದರು: ನಾಳೆ ಸೈನಿಕನೊಂದಿಗೆ ದ್ವಂದ್ವಯುದ್ಧ ಮಾಡುವ ಸಂದರ್ಭದಲ್ಲಿ ಹೊಡೆಯಲೋಸುಗವೋ ಎಂಬಂತೆ ಖಡ್ಗವನ್ನು ನಿನ್ನ ತಲೆಯ ಮೇಲೆ ಎತ್ತಿ ಹಿಡಿದುಕೊಂಡು ಚಹಾ ಕರ್ಮಾಚರಣೆಯ ವೇಳೆ ನೀನು ಪ್ರದರ್ಶಿಸಿದ ಏಕಾಗ್ರತೆ ಮತ್ತು ಶಾಂತಚಿತ್ತತೆಯಿಂದ ಅವನನ್ನು ಎದುರಿಸು.
ಮಾರನೆಯ ದಿನ ದ್ವಂದ್ವ ಯುದ್ಧಕ್ಕೆಂದು ನಿಗದಿಯಾಗಿದ್ದ ಸ್ಥಳಕ್ಕೆ ನಿಗದಿತ ಸಮಯದಲ್ಲಿ ಬಂದ ಚಹಾ ಅಧಿಕಾರಿಯು ಝೆನ್‌ ಗುರುವಿನ ಸಲಹೆಯಂತೆ ನಡೆದುಕೊಂಡ. ಸೈನಿಕನೂ ಖಡ್ಗದಿಂದ ಹೊಡೆಯಲು ಸಿದ್ಧನಾಗಿ ಚಹಾ ಅಧಿಕಾರಿಯ ಏಕಾಗ್ರತೆಯಿಂದ ಕೂಡಿದ ಶಾಂತ ಮುಖಮುದ್ರೆಯನ್ನು ಸುದೀರ್ಘಕಾಲ ದುರುಗುಟ್ಟಿ ನೋಡಿದ. ಕೊನೆಗೊಮ್ಮೆ ಸೈನಿಕ ಖಡ್ಗವನ್ನು ಕೆಳಕ್ಕಿಳಿಸಿ, ತನ್ನ ಉದ್ಧಟತನಕ್ಕೆ ಕ್ಷಮೆ ಯಾಚಿಸಿ ಅಲ್ಲಿಂದ ಹೊರಟುಹೋದ. ಒಂದೇ ಒಂದು ಖಡ್ಗದೇಟು ಬೀಳದೆ ದ್ವಂದ್ವಯುದ್ಧ ಮುಗಿಯಿತು.

ಝೆನ್‌ (Zen) ಕತೆ ೧೪೩. ಮತಕ್ರಿಯಾ ವಿಧಿ (Ritual).
ಆಧ್ಯಾತ್ಮಿಕ ಗುರು ಮತ್ತು ಶಿಷ್ಯರು ಸಂಜೆಯಲ್ಲಿ ಎಂದಿನಂತೆ ಮಾಡಬೇಕಾಗಿದ್ದ ಧ್ಯಾನ ಮಾಡಲು ಆರಂಭಿಸುವ ಸಮಯಕ್ಕೆ ಸರಿಯಾಗಿ ಆಶ್ರಮದಲ್ಲಿದ್ದ ಬೆಕ್ಕು ಅವರ ಏಕಾಗ್ರತೆಗೆ ಅಡ್ಡಿಯಾಗುವಷ್ಟು ಗದ್ದಲ ಮಾಡುತ್ತಿತ್ತು. ಸಂಜೆಯ ಧ್ಯಾನಾಭ್ಯಾಸದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಒಂದು ದಿನ ಗುರುಗಳು ಆದೇಶಿಸಿದರು. ಎಷ್ಟೋ ವರ್ಷಗಳ ನಂತರ ಆ ಗುರು ಸತ್ತರೂ ಸಂಜೆಯ ಧ್ಯಾನಾಭ್ಯಾಸ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕುವ ಪದ್ಧತಿ ಮುಂದುವರಿಯಿತು. ಆ ಬೆಕ್ಕು ಸತ್ತು ಹೋದಾಗ ಆಶ್ರಮಕ್ಕೆ ಇನ್ನೊಂದು ಬೆಕ್ಕನ್ನು ತಂದು ಕಟ್ಟಿ ಹಾಕುವುದನ್ನು ಮುಂದುವರಿಸಿದರು. ಶತಮಾನಗಳು ಉರಳಿದ ನಂತರ ಆಧ್ಯಾತ್ಮಿಕ ಗುರುವಿನ ವಂಶಸ್ಥರು ಧ್ಯಾನ ಮಾಡುವ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕುವುದರ ಮತೀಯ (ಧಾರ್ಮಿಕ!)  ಮಹತ್ವದ ಕುರಿತು ಪಾಂಡಿತ್ಯಪೂರ್ಣ ಗ್ರಂಥಗಳನ್ನು ಬರೆದರು.

ಝೆನ್‌ (Zen) ಕತೆ ೧೪೪. ಇನ್ನೇನೂ ಪ್ರಶ್ನೆಗಳಿಲ್ಲ.
ಸಾಮಾಜಿಕ ಸಮಾರಂಭವೊಂದರಲ್ಲಿ ಝೆನ್‌ ಗುರುವನ್ನು ಸಂಧಿಸಿದ ಮನೋವೈದ್ಯನೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳಲು ತೀರ್ಮಾನಿಸಿದ. ನಿಜವಾಗಿ ನೀವು ಜನರಿಗೆ ಹೇಗೆ ಸಹಾಯ ಮಾಡುತ್ತೀರಿ? ವಿಚಾರಿಸಿದ ಮನೋವೈದ್ಯ.
ಇನ್ನೇನೂ ಪ್ರಶ್ನೆಗಳನ್ನು ಕೇಳಲಾಗದ ಸ್ಥಿತಿಗೆ ಅವರನ್ನು ಕೊಂಡೊಯ್ಯುತ್ತೇನೆ, ಉತ್ತರಿಸಿದರು ಝೆನ್‌ ಗುರುಗಳು.

ಝೆನ್‌ (Zen) ಕತೆ ೧೪೫. ಸ್ವರ್ಗ.
ಮರುಭೂಮಿಯಲ್ಲಿ ಇಬ್ಬರು ದಾರಿ ತಪ್ಪಿ ಅಸಹಾಯಕರಗಿದ್ದಾರೆ. ಹಸಿವು ಮತ್ತು ಬಾಯಾರಿಕೆಯಿಂದ ಸಾಯುವಂತಾಗಿದ್ದಾರೆ. ಕೊನೆಗೆ ಅವರು ಅತೀ ಎತ್ತರವಾಗಿದ್ದ ಗೋಡೆಯೊಂದರ ಸಮೀಪಕ್ಕೆ ಬರುತ್ತಾರೆ. ಗೋಡೆಯ ಆಚೆ ಬದಿಯಲ್ಲಿ ಜಲಪಾತದ ಸದ್ದು ಮತ್ತು ಪಕ್ಷಿಗಳ ಇಂಚರ ಕೇಳುತ್ತಿದೆ. ಮೇಲೆ ಹುಲುಸಾಗಿ ಬೆಳೆದ ಮರದ ಕೊಂಬೆಗಳು ಕಾಣಿಸುತ್ತಿವೆ. ಅದರ ಹಣ್ಣುಗಳು ರಸವತ್ತಾಗಿರುವಂತೆ ಕಾಣುತ್ತಿವೆ.
ಅವರ ಪೈಕಿ ಒಬ್ಬ ಕಷ್ಟಪಟ್ಟು ಹೇಗೋ ಗೋಡೆ ಹತ್ತಿ ಆಚೆಕಡೆಗೆ ಇಳಿದು ಕಾಣದಾಗುತ್ತಾನೆ. ಇನ್ನೊಬ್ಬ ಅಂತೆಯೇ ಮಾಡುವುದಕ್ಕೆ ಬದಲಾಗಿ ಕಳೆದು ಹೋದ ಇತರ ಪ್ರಯಾಣಿಕರು ಓಯಸಿಸ್‌ನತ್ತ ಬರಲು ಸಹಾಯ ಮಾಡಲೋಸುಗ ಮರುಭೂಮಿಗೆ ಹಿಂದಿರುಗುತ್ತಾನೆ.

ಝೆನ್‌ (Zen) ಕತೆ ೧೪೬. ಅಭ್ಯಾಸದಿಂದ ಪರಿಪೂರ್ಣತೆ.
ಅಭಿನಯಾತ್ಮಕ ಹಾಡುಕತೆ ಗಾಯಕನೊಬ್ಬ ಕಠಿನ ಶಿಸ್ತುಪ್ರಿಯನಾಗಿದ್ದ ಶಿಕ್ಷಕನ ಹತ್ತಿರ ತನ್ನ ಕಲೆ ಅಧ್ಯಯಿಸುತ್ತಿದ್ದ. ಆ ಶಿಕ್ಷಕನಾದರೋ ತಿಂಗಳುಗಟ್ಟಳೆ ಕಾಲ ಪ್ರತೀ ದಿನ ಒಂದು ಹಾಡಿನ ಒಂದು ಚರಣವನ್ನು ಮಾತ್ರ ಅಭ್ಯಾಸ ಮಾಡಿಸುತ್ತಿದ್ದನೇ ವಿನಾ ಮುಂದುವರಿಯಲು ಬಿಡಲಿಲ್ಲ. ಕೊನೆಗೆ ಹತಾಶೆ, ಆಶಾಭಂಗಗಳಿಂದ ಚಿತ್ತಸ್ಥೈರ್ಯ ಕಳೆದುಕೊಂಡ ಆ ಯುವ ವಿದ್ಯಾರ್ಥಿ ಬೇರೆ ಯಾವುದಾದರೂ ವೃತ್ತಿಯನ್ನು ಅವಲಂಬಿಸಲು ತೀರ್ಮಾನಿಸಿ ಅಲ್ಲಿಂದ ಓಡಿಹೋದ. ಒಂದು ರಾತ್ರಿ ವಸತಿಗೃಹವೊಂದರಲ್ಲಿ ತಂಗಿದ್ದಾಗ ಆಕಸ್ಮಿಕವಾಗಿ ಬಾಯಿಪಾಠ ಸ್ಪರ್ಧೆಯೊಂದನ್ನು ನೋಡುವ ಅವಕಾಶ ಸಿಕ್ಕಿತು. ಕಳೆದುಕೊಳ್ಳುವಂಥದ್ದು ಏನೂ ಇರಲಿಲ್ಲವಾದ್ದರಿಂದ ಅವನು ಸ್ಪರ್ಧೆಯಲ್ಲಿ ಭಾಗವಹಿಸಿದ. ತನಗೆ ಬಲು ಚೆನ್ನಾಗಿ ತಿಳಿದಿದ್ದ ಒಂದೇ ಒಂದು ಚರಣವನ್ನು ಹಾಡಿದ. ಅವನ ಪ್ರದರ್ಶನ ಮುಗಿದ ಕೂಡಲೆ ಆ ಸ್ಪರ್ಧೆಯ ಪ್ರಾಯೋಜಕ ಅದನ್ನು ಬಹುವಾಗಿ ಹೊಗಳಿದ. ಮುಜುಗರಕ್ಕೀಡಾದ ಯುವಕ ತಾನೊಬ್ಬ ಆರಂಭಿಕ ಗಾಯಕ ಎಂಬುದಾಗಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ಪ್ರಾಯೋಜಕ ನಿರಾಕರಿಸಿದ. ಪ್ರಾಯೋಜಕ ಕೇಳಿದ, ನಿನಗೆ ಹೇಳಿಕೊಟ್ಟವರು ಯಾರೆಂಬುದನ್ನು ಹೇಳು. ಆತನೋರ್ವ ಮಹಾನ್‌ ಗುರುವಾಗಿದ್ದಿರಲೇ ಬೇಕು. ಆ ವಿದ್ಯಾರ್ಥಿಯೇ ಮುಂದೆ ಕೊಶಿಜಿ ಎಂಬ ಹೆಸರಿನ ಮಹಾನ್‌ ಗಾಯಕನಾದ.

 

ಝೆನ್‌ (Zen) ಕತೆ ೧೪೭. ಸಿದ್ಧತೆ.
ಪೂರ್ವ ಕರಾವಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂಬ್ರಿಜ್‌ ಬೌದ್ಧ ಸಂಘದ ಸಭಾಂಗಣಕ್ಕೆ ಸುಝುಕಿ ರೋಶಿ ಆಗಮಿಸಿದಾಗ ಅಲ್ಲಿನ ಪ್ರತಿಯೊಬ್ಬರೂ ಅವನ ಭೇಟಿಯ ನಿರೀಕ್ಷೆಯಲ್ಲಿ ಒಳಭಾಗವನ್ನು ತಿಕ್ಕಿ ತೊಳೆಯುತ್ತಿದ್ದದ್ದನ್ನು ನೋಡಿದ. ಅವರೆಲ್ಲರಿಗೂ ಅವನನ್ನು ಕಂಡು ಆಶ್ಚರ್ಯವಾಯಿತು. ಏಕೆಂದರೆ ಅವನು ಮರುದಿನ ಬರುವುದಾಗಿ ಪತ್ರ ಬರೆದಿದ್ದ. ಸುಝುಕಿ ರೋಶಿ ತನ್ನ ನಿಲುವಂಗಿಯ ತೋಳುಗಳನ್ನು ಮಡಚಿ ನನ್ನ ಆಗಮನದ ಮಹಾದಿನದ ಸಿದ್ಧತೆಯಲ್ಲಿ ಪಾಲ್ಗೊಳ್ಳುವುದಾಗಿ ಪಟ್ಟು ಹಿಡಿದ.

ಝೆನ್‌ (Zen) ಕತೆ ೧೪೮. ಬುದ್ಧನ ಹೂವು
ಪುರಾತನ ಕಾಲದಲ್ಲಿ ಒಂದು ದಿನ ವಿಶ್ವವಂದ್ಯನಾದವನು (ಅರ್ಥಾತ್, ಬುದ್ಧ) ಗೃಧ್ರಕೂಟ ಪರ್ವತದ ಮೇಲೆ ಇದ್ದಾಗ ಅಲ್ಲಿ ಜಮಾಯಿಸಿದ್ದ ಎಲ್ಲ ಸನ್ಯಾಸಿಗಳಿಗೆ ಕಾಣಿಸುವಂತೆ ಹೂವೊಂದನ್ನು ಎತ್ತಿ ಹಿಡಿದ. ಆ ಸಮಯದಲ್ಲಿ ಉಳಿದವರೆಲ್ಲ ಮೌನವಾಗಿದ್ದರೂ ಪೂಜ್ಯ ಕಶ್ಯಪ ಮಾತ್ರ ನಸುನಕ್ಕ. ವಿಶ್ವವಂದ್ಯ ಇಂತು ಹೇಳಿದ, ನಿಜವಾದ ನಿಯಮದ ತಿರುಳು, ನಿರ್ವಾಣದ ಸಾರದ ರಹಸ್ಯ, ಆಕಾರರಹಿತ ಆಕಾರ, ನಿಗೂಢವಾದ ನಿಯಮದ ಮಹಾದ್ವಾರ ನನ್ನ ಹತ್ತಿರ ಇವೆ. ಪದಗಳನ್ನೂ ಅಕ್ಷರಗಳನ್ನೂ ಅವಲಂಬಿಸದೆ, ಎಲ್ಲ ಬೋಧನೆಯನ್ನು ಮೀರಿದ ವಿಶೇಷ ಸಂವಹನದಿಂದ ಇವೆಲ್ಲವನ್ನೂ ನಾನು ಮಹಾಕಶ್ಯಪನಿಗೆ ವರ್ಗಾಯಿಸುತ್ತೇನೆ.

ಝೆನ್‌ (Zen) ಕತೆ ೧೪೯. ದೈತ್ಸು ಚಿಶೊ
ಕೋಯೋ ದೇವಾಲಯದ ಸೈಜೊನನ್ನು ಒಬ್ಬಸನ್ಯಾಸಿ ಕೇಳಿದ, ದೈತ್ಸು ಚಿಶೊ ಬುದ್ಧ ಧ್ಯಾನ ಮಂದಿರದಲ್ಲಿ ಹತ್ತು ಕಲ್ಪ ಕಾಲ ಕುಳಿತು ಧ್ಯಾನ ಮಾಡಿದನಾದರೂ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲೂ ಆಗಲಿಲ್ಲ, ಬುದ್ಧ ಮಾರ್ಗವನ್ನು ಪ್ರವೇಶಿಸಲೂ ಆಗಲಿಲ್ಲ. ಏಕೆ? ಅದಕ್ಕೆ ಸೈಜೋ ಹೇಳಿದ, ನಿನ್ನ ಪ್ರಶ್ನೆ ಅತ್ಯಂತ ಯೋಗ್ಯವಾದದ್ದಾಗಿದೆ. ಸನ್ಯಾಸಿ ಹಠ ಬಿಡದೆ ಪುನಃ ಕೇಳಿದ, ಧ್ಯಾನ ಮಂದಿರದಲ್ಲಿ ಕುಳಿತು ಧ್ಯಾನ ಮಾಡಿದನಾದರೂ ಅವನೇಕೆ ಬುದ್ಧತ್ವ ಗಳಿಸಲಿಲ್ಲ? ಸೈಜೊ ಉತ್ತರಿಸಿದ, ಏಕೆಂದರೆ ಅವನು ಗಳಿಸಲಿಲ್ಲ.

ಝೆನ್‌ (Zen) ಕತೆ ೧೫೦. ಆತ್ಮಸಂಯಮ (Self-control)
ಇಡೀ ಝೆನ್‌ ದೇವಾಲಯ ಅಲುಗಾಡುವಷ್ಟು ತೀವ್ರತೆಯ ಭೂಕಂಪ ಒಂದು ದಿನ ಆಯಿತು. ಆ ದೇವಾಲಯದ ಕೆಲವು ಭಾಗಗಳು ಕುಸಿದೂ ಬಿದ್ದವು. ಅನೇಕ ಸನ್ಯಾಸಿಗಳು ಭಯಗ್ರಸ್ತರಾಗಿದ್ದರು. ಭೂಕಂಪನ ನಿಂತಾಗ ಗುರುಗಳು ಹೇಳಿದರು, ಅಪಾಯ ಕಾಲದಲ್ಲಿ ಝೆನ್ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವ ಅವಕಾಶ ನಿಮಗೆ ಈಗ ದೊರಕಿತು. ಆತುರದ ವ್ಯವಹಾರಕ್ಕೆ ಎಡೆ ಕೊಡುವ ತೀವ್ರ ಭಯ ನನ್ನನ್ನು ಬಾಧಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ದೇವಾಲಯದ ಅತ್ಯಂತ ಗಟ್ಟಿಮುಟ್ಟಾದ ಭಾಗವಾಗಿರುವ ಅಡುಗೆಮನೆಗೆ ನಿಮ್ಮೆಲ್ಲರನ್ನು ನಾನು ಕರೆದೊಯ್ದೆ. ಅದು ಒಳ್ಳೆಯ ತೀರ್ಮಾನವೇ ಆಗಿತ್ತು. ಎಂದೇ, ಯಾವ ಗಾಯವೂ ಆಗದೆ ನೀವೆಲ್ಲರೂ ಬದುಕಿ ಉಳಿದಿದ್ದೀರಿ. ನನ್ನ ಆತ್ಮಸಂಯಮಕ್ಕೆ ಮತ್ತು ಶಾಂತ ಮನಸ್ಥಿತಿಗೆ ಧಕ್ಕೆಯಾಗದೇ ಇದ್ದರೂ, ತುಸು ಉದ್ವಿಗ್ನತೆ ಕಾಡಿದ್ದು ನಿಜ - ನಾನು ಒಂದು ದೊಡ್ಡ ಲೋಟದಲ್ಲಿ ನೀರನ್ನು ಕುಡಿದದ್ದನ್ನು ನೋಡಿ ಇದನ್ನು ನೀವು ಊಹಿಸಿರುತ್ತೀರಿ. ಏಕೆಂದರೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ನಾನು ಅಂತು ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತಿದೆ.
ಸನ್ಯಾಸಿಗಳ ಪೈಕಿ ಒಬ್ಬಾತ ಏನೂ ಮಾತನಾಡದೇ ಇದ್ದರೂ ಮುಗುಳುನಗೆ ನಕ್ಕ.
ನೀನೇಕೆ ನಗುತ್ತಿರುವೆ? ಕೇಳಿದರು ಗುರುಗಳು.

ಸನ್ಯಾಸಿ ಉತ್ತರಿಸಿದ, ನೀವು ಕುಡಿದದ್ದು ನೀರನ್ನಲ್ಲ, ದೊಡ್ಡ ಲೋಟ ಭರ್ತಿ ಸೋಯಾ ಅವರೆಯ ಸಾರನ್ನು.

No comments: