Pages

6 March 2015

ಝೆನ್ (Zen) ಕತೆಗಳು: ಸಂಚಿಕೆ ೩

ಝೆನ್‌ (Zen) ಕತೆ ೫೧. ಶ್ಲೋಕಗಳನ್ನು (Sutras) ಪ್ರಕಟಿಸುವಿಕೆ

ಜಪಾನ್‌ವಾಸಿ ಝೆನ್ ಭಕ್ತ ಟೆಟ್ಸುಜೆನ್‌ ಅವನ ಕಾಲದಲ್ಲಿ ಚೀನೀ ಭಾಷೆಯಲ್ಲಿ ಮಾತ್ರ ಲಭ್ಯವಿದ್ದ ಶ್ಲೋಕಗಳನ್ನು ಎಲ್ಲರಿಗೂ ತಿಳಿಯುವಂತೆ ಪ್ರಕಟಿಸಬೇಕೆಂದು ತೀರ್ಮಾನಿಸಿದನು. ಪುಸ್ತಕದ ೭೦೦೦ ಪ್ರತಿಗಳನ್ನು ಮರದ ಪಡಿಯಚ್ಚುಗಳಿಂದ ಮುದ್ರಿಸುವ ಪ್ರಚಂಡ ಕಾರ್ಯ ಇದಾಗಿತ್ತು.

ಈ ಉದ್ದೇಶಕ್ಕಾಗಿ ಊರಿಂದೂರಿಗೆ ಪಯಣಿಸಿ ದೇಣಿಗೆ ವಸೂಲಿ ಮಾಡಲು ಟೆಟ್ಸುಜೆನ್ ಆರಂಭಿಸಿದನು. ಸಹಾನುಭೂತಿಯುಳ್ಳ ಕೆಲವರು ಅವನಿಗೆ ೧೦೦ ಚಿನ್ನದ ನಾಣ್ಯಗಳನ್ನು ಕೊಡುತ್ತಿದ್ದರಾದರೂ ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಅಲ್ಪ ಮೌಲ್ಯದ ನಾಣ್ಯಗಳೇ ಲಭಿಸುತ್ತಿತ್ತು. ಪ್ರತೀ ದಾನಿಗೂ ಅವನೂ ಒಂದೇ ರೀತಿಯಲ್ಲಿ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದನು. ೧೦ ವರ್ಷಗಳ ನಂತರ ಕಾರ್ಯಾರಂಭಿಸಲು ಅವಶ್ಯವಿರುವಷ್ಟು ಹಣ ಟೆಟ್ಸುಜೆನ್ ಹತ್ತಿರವಿತ್ತು.

ಆ ಸಮಯಕ್ಕೆ ಸರಿಯಾಗಿ ಉಜಿ ನದಿ ಉಕ್ಕಿ ಹರಿಯಿತು. ಅದರ ಬೆನ್ನ ಹಿಂದೆಯೇ ಬರಗಾಲ ಬಂದಿತು. ಹೊಟ್ಟೆಗಿಲ್ಲದೇ ನರಳುವುದರಿಂದ ಇತರರನ್ನು ಬಚಾವು ಮಾಡಲೋಸುಗ ಪುಸ್ತಕಗಳಿಗಾಗಿ ತಾನು ಸಂಗ್ರಹಿಸಿದ್ದ ನಿಧಿಯನ್ನು ಟೆಟ್ಸುಜೆನ್ ದಾನವಾಗಿ ಕೊಟ್ಟನು. ತದನಂತರ ಪುನಃ ನಿಧಿ ಸಂಗ್ರಹಿಸುವ ಕಾರ್ಯ ಆರಂಭಿಸಿದನು.

ಅನೇಕ ವರ್ಷಗಳ ನಂತರ ಸಾಂಕ್ರಮಿಕ ರೋಗವೊಂದು ದೇಶದಾದ್ಯಂತ ಹರಡಿತು. ಜನರಿಗೆ ಸಹಾಯ ಮಾಡಲೋಸುಗ ಟೆಟ್ಸುಜೆನ್ ಪುನಃ ತಾನು ಸಂಗ್ರಹಿಸಿದ್ದನ್ನು ದಾನವಾಗಿ ನೀಡಿದನು.

ಮೂರನೆಯ ಸಲ ಪುನಃ ಮೊದಲಿನಂತೆಯೇ ತನ್ನ ಕಾರ್ಯ ಮಾಡಲಾರಂಭಿಸಿದ, ೨೦ ವರ್ಷಗಳ ನಂತರ ಅವನ ಆಸೆ ಈಡೇರಿತು. ಶ್ಲೋಕಗಳ ಮೊದಲ ಆವೃತ್ತಿಯನ್ನು ಉತ್ಪಾದಿಸಲು ಉಪಯೋಗಿಸಿದ ಮರದ ಪಡಿಯಚ್ಚುಗಳನ್ನು ಕ್ಯೋಟೋದ ಒಬಾಕು ಆಶ್ರಮದಲ್ಲಿ ಇಂದೂ ನೋಡಬಹುದು.

ಟೆಟ್ಸುಜೆನ್ ಶ್ಲೋಕಗಳ ಮೂರು ಸಂಚಯಗಳನ್ನು ಮಾಡಿದ್ದನೆಂದೂ ಅವುಗಳ ಪೈಕಿ ಕೊನೆಯದ್ದಕ್ಕಿಂತ ಅಕ್ಷಿಗೋಚರವಲ್ಲದ ಮೊದಲ ಎರಡು ಸಂಕಲನಗಳು ಶ್ರೇಷ್ಠವಾದವು ಎಂದೂ ಜಪಾನೀಯರು ತಮ್ಮ ಮಕ್ಕಳಿಗೆ ಹೇಳುತ್ತಾರೆ.

 

ಝೆನ್‌ (Zen) ಕತೆ ೫೨. ಹಗಲುಹೊತ್ತು ನಿದ್ರಿಸುವಿಕೆ

ಗುರು ಸೋಯೆನ್‌ ಶಾಕು ತಮಗೆ ೬೧ ವರ್ಷ ವಯಸ್ಸು ಆದಾಗ ಈ ಪ್ರಪಂಚದಿಂದ ತೆರಳಿದರು. ತಮ್ಮ ಜೀವನದ ಕೆಲಸವನ್ನು ಪೂರೈಸಿದ ಅವರು ಇತರ ಝೆನ್‌ ಗುರುಗಳ ಪೈಕಿ ಬಹಳಷ್ಟು ಮಂದಿಗಿಂತ ಎಷ್ಟೋ ಪಟ್ಟು ಹೆಚ್ಚು ಶ್ರೀಮಂತವಾದ ಮಹಾನ್‌ ಬೋಧನೆಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಶಿಷ್ಯರು ನಡುಬೇಸಗೆಯಲ್ಲಿ ಹಗಲು ಹೊತ್ತು ಮಲಗುತ್ತಿದ್ದರು. ಗುರುಗಳು ಅದನ್ನು ನಿರ್ಲಕ್ಷಿಸುತ್ತಿದ್ದರಾದರೂ ತಾವು ಒಂದು ಕ್ಙಣವನ್ನೂ ಹಾಳು ಮಾಡುತ್ತಿರಲಿಲ್ಲ.

ಅವರು ತಮ್ಮ ೧೩ ನೆಯ ವಯಸ್ಸಿನಲ್ಲಿಯೇ ಟೆಂಡೈ ದಾರ್ಶನಿಕ ಚಿಂತನೆಯನ್ನು ಅಧ್ಯಯಿಸುತ್ತಿದ್ದರು. ಬೇಸಗೆಯಲ್ಲಿ ಉಸಿರುಗಟ್ಟಿಸುವ ಧಗೆ ಇದ್ದ ಒಂದು ದಿನ ಗುರುಗಳು ಹೊರಗೆಲ್ಲಿಗೋ ಹೋಗಿದ್ದಾಗ ಬಾಲಕ ಸೋಯೆನ್‌ ಕಾಲು ಚಾಚಿ ಮಲಗಿದವ ಹಾಗೇ ನಿದ್ದೆ ಮಾಡಿದ.

ಮೂರು ಗಂಟೆಗಳ ನಂತರ ದಿಢೀರನೆ ಎಚ್ಚರವಾದಾಗ ಅವನ ಗುರುಗಳು ಒಳಗೆ ಬರುತ್ತಿರುವ ಸಪ್ಪಳ ಕೇಳಿಸಿತಾದರೂ ತುಂಬ ತಡವಾಗಿತ್ತು. ಅವನು ಬಾಗಿಲಿಗೆ ಅಡ್ಡಲಾಗಿ ಒಡ್ಡೊಡ್ಡಾಗಿ ಕೈಕಾಲು ಚಾಚಿಕೊಂಡು ಮಲಗಿಯೇ ಇದ್ದ.

ನಾನು ನಿನ್ನ ಕ್ಷಮೆ ಕೋರುತ್ತೇನೆ, ನಾನು ನಿನ್ನ ಕ್ಷಮೆ ಕೋರುತ್ತೇನೆ ಎಂಬುದಾಗಿ ಪಿಸುಧ್ವನಿಯಲ್ಲಿ ಹೇಳುತ್ತಾ ಗುರುಗಳು ಅವನು ಒಬ್ಬ ಗೌರವಾನ್ವಿತ ಅತಿಥಿಯೋ ಎಂಬಂತೆ ಬಲು ಜಾಗರೂಕತೆಯಿಂದ ಅವನನ್ನು ದಾಟಿದರು. ಸೋಯೆನ್‌ ಅಂದಿನಿಂದ ಎಂದೂ ಮಧ್ಯಾಹ್ನದ ವೇಳೆಯಲ್ಲಿ ಮಲಗಲೇ ಇಲ್ಲ.

 

ಝೆನ್‌ (Zen) ಕತೆ ೫೩. ಕನಸಿನಲೋಕದಲ್ಲಿ

ಗುರು ಸೋಯೆನ್‌ ಶಾಕುವಿನ ಶಿಷ್ಯನೊಬ್ಬ ತನ್ನ ಬಾಲ್ಯದ ಪ್ರಸಂಗವೊಂದನ್ನು ಇಂತು ವಿವರಿಸಿದ:

ನಮ್ಮ ಶಾಲಾ ಮಾಸ್ತರರು ಪ್ರತೀ ಮಧ್ಯಾಹ್ನ ನಸುನಿದ್ರೆ ಮಾಡುತ್ತಿದ್ದರು. ಇಂತೇಕೆ ಮಾಡುವಿರಿ ಎಂಬುದಾಗಿ ನಾವು ಕೇಳಿದಾಗ ಅವರು ಹೇಳಿದರು: ’ಕನ್‌ಫ್ಯೂಶಿಯಸ್‌ ಮಾಡುತ್ತಿದ್ದಂತೆ ನಾನೂ ಹಳೆಯ ಮಹಾಜ್ಞಾನಿಗಳನ್ನು ಸಂಧಿಸಲು ಕನಸಿನ ಲೋಕಕ್ಕೆ ಹೋಗುತ್ತೇನೆ. ಕನ್‌ಫ್ಯೂಶಿಯಸ್‌ ನಿದ್ದೆ ಮಾಡಿದಾಗ ಪುರಾತನ ಮಹಾಜ್ಞಾನಿಗಳ ಕನಸು ಕಾಣುತ್ತಿದ್ದನಂತೆ ಮತ್ತು ಆ ನಂತರ ಅವರ ಕುರಿತು ತನ್ನ ಶಿಷ್ಯರಿಗೆ ಹೇಳುತ್ತಿದ್ದನಂತೆ.

ವಿಪರೀತ ಸೆಕೆ ಇದ್ದ ಒಂದು ದಿನ ನಾವು ಕೆಲವರು ನಸುನಿದ್ದೆ ಮಾಡಿದೆವು. ನಮ್ಮ ಶಾಲಾಮಾಸ್ತರರು ಅದಕ್ಕಾಗಿ ನಮ್ಮನ್ನು ಬಯ್ದರು. ’ಕನ್‌ಫ್ಯೂಶಿಯಸ್‌ ಮಾಡುತ್ತಿದ್ದಂತೆ ನಾವೂ ಹಳೆಯ ಮಹಾಜ್ಞಾನಿಗಳನ್ನು ಸಂಧಿಸಲು ಕನಸಿನ ಲೋಕಕ್ಕೆ ಹೋಗಿದ್ದೆವು’ ಎಂಬುದಾಗಿ ವಿವರಿಸಿದೆವು. ನಮ್ಮ ಶಾಲಾಮಾಸ್ತರರು ಕೇಳಿದರು:’ ಮಹಾಜ್ಞಾನಿಗಳ ಸಂದೇಶವೇನು?’ ನಮ್ಮ ಪೈಕಿ ಒಬ್ಬ ಉತ್ತರಿಸಿದ:’ನಾವು ಕನಸಿನಲೋಕಕ್ಕೆ ಹೋಗಿ ಮಹಾಜ್ಞಾನಿಗಳನ್ನು ಸಂಧಿಸಿದೆವು ಮತ್ತು ಪ್ರತೀ ದಿನ ಮಧ್ಯಾಹ್ನ ಅಲ್ಲಿಗೆ ನಮ್ಮ ಶಾಲಾಮಾಸ್ತರರು ಬರುತ್ತಾರೆಯೇ ಎಂಬುದಾಗಿ ಕೇಳಿದೆವು. ಅಂಥ ಯಾವುದೇ ವ್ಯಕ್ತಿಯನ್ನು ನಾವು ನೋಡಿಯೇ ಇಲ್ಲ ಅಂದರವರು.

 

ಝೆನ್‌ (Zen) ಕತೆ ೫೪. ಹುಲ್ಲು ಮತ್ತು ಮರಗಳಿಗೆ ಜ್ಞಾನೋದಯವಾಗುವುದು ಹೇಗೆ?

ಕಾಮಕುರಾ ಕಾಲದಲ್ಲಿ ಶಿಂಕನ್‌ ೬ ವರ್ಷ ಕಾಲ ಟೆಂಡೈ ಅನ್ನೂ ತದನಂತರ ೭ ವರ್ಷ ಕಾಲ ಝೆನ್‌ ಅನ್ನೂ ಅಧ್ಯಯಿಸಿದ.  ತದನಂತರ ಅವನು ಚೀನಾಕ್ಕೆ ಹೋಗಿ ಇನ್ನೂ ೧೩ ವರ್ಷ ಕಾಲ ಝೆನ್‌ ಕುರಿತು ಆಲೋಚಿಸಿದ.

ಅವನು ಜಪಾನಿಗೆ ಹಿಂದಿರುಗಿ ಬಂದಾಗ ಅನೇಕರು ಅವನನ್ನು ಸಂದರ್ಶಿಸಲು ಇಚ್ಛಿಸಿದರು ಮತ್ತು ಅಸ್ಪಷ್ಟ ಪ್ರಶ್ನೆಗಳನ್ನು ಕೇಳಿದರು. ಅಪರೂಕ್ಕೊಮ್ಮೆ ಅವನು ಭೇಟಿಗಾರರನ್ನು ಭೇಟಿ ಮಾಡಿದಾಗಲೂ ಅವರ ಪ್ರಶ್ನಗಳಿಗೆ ಉತ್ತರಿಸುತ್ತಿದ್ದದ್ದೂ ವಿರಳ.

ಒಂದು ದಿನ ’ಜ್ಞಾನೋದಯ ಅಥವ ಅರಿವು ಮೂಡುವಿಕೆ’ಯ ೫೦ ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬ ಶಿಂಕನ್‌ಗೆ ಇಂತೆಂದ: ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಟೆಂಡೈ ಪಂಥವನ್ನು ಅಧ್ಯಯಿಸಿದ್ದೇನಾದರೂ ಅದರಲ್ಲಿನ ಒಂದು ವಿಷಯ ನನಗೆ ಅರ್ಥವಾಗಲಿಲ್ಲ. ಹುಲ್ಲು ಮತ್ತು ಮರಗಳಿಗೂ ಜ್ಞಾನೋದಯವಾಗುತ್ತದೆ ಎಂಬುದಾಗಿ ಘೋಷಿಸುತ್ತದೆ ಟೆಂಡೈ. ನನಗೆ ಇದು ಬಲು ವಿಚಿತ್ರ ಅನ್ನಿಸುತ್ತದೆ.

ಹುಲ್ಲು ಮತ್ತು ಮರಗಳಿಗೆ ಹೇಗೆ ಜ್ಞಾನೋದಯವಾಗುತ್ತದೆ ಎಂಬುದನ್ನು ಚರ್ಚಿಸುವುದರಿಂದ ಏನು ಉಪಯೋಗ? ಕೇಳಿದ ಶಿಂಕನ್‌. ನಿನಗೆ ಜ್ಞಾನೋದಯವಾಗುವುದು ಹೇಗೆ ಎಂಬುದು ಪ್ರಶ್ನೆ. ಎಂದಾದರೂ ಅದನ್ನು ನೀನು ಆಲೋಚಿಸಿರುವೆಯಾ?

ಆ ರೀತಿಯಲ್ಲಿ ನಾನು ಎಂದೂ ಆಲೋಚಿಸಲೇ ಇಲ್ಲ, ಅಚ್ಚರಿಯಿಂದ ಹೇಳಿದ ಆ ವಿದ್ಯಾರ್ಥಿ.

ಹಾಗಿದ್ದರೆ ಮನೆಗೆ ಹೋಗು ಮತ್ತು ಆ ಕುರಿತು ಚಿಂತನೆ ಮಾಡು, ಎಂಬುದಾಗಿ ಸಲಹೆ ನೀಡಿ ಭೇಟಿಯನ್ನು ಮುಗಿಸಿದ ಶಿಂಕನ್

 

ಝೆನ್‌ (Zen) ಕತೆ ೫೫. ಬೈಸಿಕಲ್ಲು

 

ಝೆನ್‌ ಗುರುವೊಬ್ಬ ತನ್ನ ಐದು ಮಂದಿ ವಿದ್ಯಾರ್ಥಿಗಳು ಮಾರುಕಟ್ಟೆಯಿಂದ ಸೈಕಲ್ಲು ಸವಾರಿ ಮಾಡುತ್ತಾ ಹಿಂದಿರುಗುತ್ತಿರುವುದನ್ನು ನೋಡಿದ. ಅವರು ಬಂದು ಬೈಸಿಕಲ್ಲುಗಳಿಂದ ಕೆಳಗಿಳಿದ ಮೇಲೆ ಕೇಳಿದ:

ನೀವೇಕೆ ಸೈಕಲ್ಲು ಸವಾರಿ ಮಾಡುತ್ತೀರಿ?

ಒಂದನೇ ವಿದ್ಯಾರ್ಥಿ ಹೇಳಿದ: ಬಟಾಟೆಯ ಚೀಲವನ್ನು ನನ್ನ ಬೈಸಿಕಲ್ಲು ಹೊರುತ್ತಿದೆ. ನಾನು ಅದನ್ನು ನನ್ನ ಬೆನ್ನ ಮೇಲೆ ಹೊರಬೇಕಿಲ್ಲ ಎಂಬುದು ಸಂತೋಷದ ವಿಷಯ.

ಗುರುಗಳು ಹೊಗಳಿದರು: ನಿನೊಬ್ಬ ಜಾಣ ಹುಡುಗ. ವಯಸ್ಸಾದ ನಂತರ ನನ್ನಂತೆ ಗೂನು ಬೆನ್ನಿನವನಾಗುವುದಿಲ್ಲ.

ಎರಡನೆಯವ ಹೇಳಿದ: ನಾನು ದಾರಿ ಕ್ರಮಿಸುವಾಗ ಗಿಡಮರಗಳೂ ಗದ್ದೆಗಳೂ ನನ್ನನ್ನು ದಾಟಿ ಹಿಂದೆ ಹೋಗುವುದನ್ನು ನೋಡುವುದೆಂದರೆ ನನಗೆ ಬಹಳ ಖುಷಿಯಾಗುತ್ತದೆ.

ಗರುಗಳು ಪ್ರತಿಕ್ರಿಯಿಸಿದರು: ನಿನ್ನ ಕಣ್ಣುಗಳು ತೆರೆದಿವೆ, ನೀನು ಜಗತ್ತನ್ನು ನೋಡುವೆ.

ಮೂರನೆಯವ ಹೇಳಿದ: ನಾನು ಸ್ತೋತ್ರವೊಂದನ್ನು ಪುನಃಪುನಃ ಹೇಳುತ್ತಾ ಸೈಕಲ್ಲು ಸವಾರಿ ಮಾಡುವಾಗ ತೃಪ್ತಿ ದೊರೆಯುತ್ತದೆ.

ಗುರುಗಳು ಹೊಗಳಿದರು: ಸಲೀಸಾಗಿ ತಿರುಗುವಂತೆ ಹೊಸದಾಗಿ ಅಣಿಗೊಳಿಸಿದ ಚಕ್ರದಂತೆ ನಿನ್ನ ಮನಸ್ಸೂ ಸುಲಭವಾಗಿ ಉರುಳುತ್ತದೆ.

 ನಾಲ್ಕನೆಯವನು ಹೇಳಿದ: ನಾನು ಸೈಕಲ್ಲು ಸವಾರಿ ಮಾಡುವಾಗ ಎಲ್ಲ ಜೀವಿಗಳೊಂದಿಗೆ ಸಾಮರಸ್ಯದಿಂದ ಬಾಳುತ್ತೇನೆ.

ಗುರುಗಳು ಸಂತುಷ್ಟರಾಗಿ ಹೇಳಿದರು: ಅಹಿಂಸೆಯ ಸುವರ್ಣಪಥದಲ್ಲಿ ನೀನು ಸವಾರಿ ಮಾಡುತ್ತಿರುವೆ.

ಐದನೆಯವ ಹೇಳಿದ: ನಾನು ಸೈಕಲ್ಲು ಸವಾರಿ ಮಾಡಲೋಸುಗ ಸೈಕಲ್ಲು ಸವಾರಿ ಮಾಡುತ್ತೇನೆ.

ಗುರುಗಳು ಹೋಗಿ ಅವನ ಪಾದಗಳ ಬಳಿ ಕುಳಿತು ಹೇಳಿದರು:ನಾನು ನಿನ್ನ ಶಿಷ್ಯ.

 

ಝೆನ್‌ (Zen) ಕತೆ ೫೬. ಗೀಶೋಳ ಕೆಲಸ

ಗೀಶೋ ೧೦ ವರ್ಷ ವಯಸ್ಸಿನಲ್ಲಿಯೇ ಸನ್ಯಾಸಿನಿಯಾಗಿ ದೀಕ್ಷೆ ಪಡೆದಿದ್ದಳು. ಚಿಕ್ಕ ಹುಡುಗರಂತೆಯೇ ಆಕೆಯೂ ತರಬೇತಿ ಪಡೆದಳು. ಅವಳು ೧೬ ವರ್ಷ ವಯಸ್ಸಾದ ನಂತರ ಒಬ್ಬ ಝೆನ್ ಗುರುವಿನಿಂದ ಇನ್ನೊಬ್ಬರ ಹತ್ತಿರಕ್ಕೆ ಪ್ರಯಾಣ ಮಾಡುತ್ತಾ ಎಲ್ಲರೊಂದಿಗೂ ಅಧ್ಯಯಿಸಿದಳು.

ಉನ್‌ಝಾನ್‌ ಹತ್ತಿರ ೩ ವರ್ಷಗಳು, ಗೂಕೈ ಹತ್ತಿರ ೬ ವರ್ಷಗಳು ಇದ್ದರೂ ಆಕೆಗೆ ಒಂದು ಸ್ಪಷ್ಟ ಚಿತ್ರಣ ಲಭಿಸಲಿಲ್ಲ. ಕೊನೆಗೆ ಅವಳು ಗುರು ಇನ್‌ಝಾನ್‌ ಹತ್ತಿರ ಹೋದಳು.

ಲಿಂಗದ ಕಾರಣಕ್ಕಾಗಿ ಅವಳಿಗೆ ಇನ್‌ಝಾನ್‌ ಯಾವ ರಿಯಾಯಿತಿಯನ್ನೂ ನೀಡಲಿಲ್ಲ. ಚಂಡಮಾರುತದಂತೆ ಅವಳನ್ನು ಬಯ್ಯುತ್ತಿದ್ದ. ಅವಳ ಅಂತರಾಳದ ಸ್ವರೂಪವನ್ನು ಜಾಗೃತಗೊಳಿಸಲೋಸುಗ ಅವಳಿಗೆ ಗುದ್ದುತ್ತಿದ್ದ.

ಗೀಶೋ ೧೩ ವರ್ಷಗಳ ಕಾಲ ಇನ್‌ಝಾನ್‌ ಜೊತೆಯಲ್ಲಿ ಇದ್ದಳು. ತದನಂತರಅವಳು ಏನನ್ನು ಹುಡುಕುತ್ತಿದ್ದಳೋ ಅದು ಲಭಿಸಿತು!

ಅವಳ ಗೌರವಾರ್ಥ, ಇನ್‌ಝಾನ್‌ ಪದ್ಯವೊಂದನ್ನು ಬರೆದ:

ಈ ಸನ್ಯಾಸಿನಿ ನನ್ನ ಮಾರ್ಗದರ್ಶನದಲ್ಲಿ ಹದಿಮೂರು ವರ್ಷ ಅಧ್ಯಯಿಸಿದಳು.

ಸಂಜೆಯ ಹೊತ್ತು ಪರ್ಯಾಲೋಚಿಸುತ್ತಿದ್ದಳು ಗಹನವಾದ ಕೋಅನ್‌ಗಳನ್ನು

ಚೀನೀ ಸನ್ಯಾಸಿನಿ ಟೆಟ್ಸುಮಾ ತನಗಿಂತ ಹಿಂದಿನವರೆಲ್ಲರನ್ನೂ ಮೀರಿಸಿದ್ದಳು,

ಮುಜಾಕು ನಂತರ ಈ ಗೀಶೋನಷ್ಟು ಪ್ರಾಮಾಣಿಕರು ಯಾರೂ ಇರಲಿಲ್ಲ!

ಆದರೂ ಅವಳು ದಾಟಲು ಇನ್ನೂ ಅನೇಕ ದ್ವಾರಗಳಿವೆ.

ನನ್ನ ಕಬ್ಬಿಣದ ಮುಷ್ಟಿಯಿಂದ ಇನ್ನೂ ಅನೇಕ ಪೆಟ್ಟುಗಳನ್ನು ಅವಳು ಸ್ವೀಕರಿಸಬೇಕು.

ಜ್ಞಾನೋದಯವಾದ ನಂತರ ಗೀಶೋ ಬಾನ್‌ಶು ಪ್ರಾಂತ್ಯಕ್ಕೆ ಹೋಗಿ ತನ್ನದೇ ಆದ ದೇವಾಲಯವನ್ನು ಆರಂಭಿಸಿದಳು, ಇನ್ನೂರು ಸನ್ಯಾಸಿನಿಯರಿಗೆ ಬೋಧಿಸಿದಳು. ಕೊನೆಗೊಂದು ವರ್ಷ ಆಗಸ್ಟ್‌ನಲ್ಲಿ ಆಕೆ ತೀರಿಕೊಂಡಳು.

 

ಕೋಅನ್‌: ದೊಡ್ಡ ಸಂಶಯವನ್ನು ಉಂಟು ಮಾಡಲು ಮತ್ತು ಝೆನ್‌ ಅಭ್ಯಾಸದಲ್ಲಿ ವಿದ್ಯಾರ್ಥಿಯ ಪ್ರಗತಿಯನ್ನು ಪರೀಕ್ಷಿಸಲೋಸುಗ ಝೆನ್‌ ಅಭ್ಯಾಸಕ್ರಮದಲ್ಲಿ ಉಪಯೋಗಿಸುವ ’ಒಂದು ಕಥೆ, ಸಂಭಾಷಣೆ ಅಥವ ಹೇಳಿಕೆ’ ಈ ಮಾಲಿಕೆಯಲ್ಲಿ ಇರುವ ಕತೆಗಳಲ್ಲವೂ ಕೋಅನ್‌ಗಳೇ ಆಗಿವೆ.

 

ಝೆನ್‌ (Zen) ಕತೆ ೫೭. ಭಿಕ್ಷುಕನ ಜೀವನದಲ್ಲಿ ಝೆನ್‌

ತೋಸುಯ್‌ ಅವನ ಕಾಲದ ಪ್ರಖ್ಯಾತ ಝೆನ್‌ ಗುರುವಾಗಿದ್ದ. ಅನೇಕ ದೇವಾಲಯಗಳಲ್ಲಿ ಅವನು ವಾಸವಾಗಿದ್ದ, ಅನೇಕ ಪ್ರಾಂತ್ಯಗಳಲ್ಲಿ ಬೋಧಿಸಿದ್ದ.

ಅವನು ಭೇಟಿ ನೀಡಿದ ಕೊನೆಯ ದೇವಾಲಯದಲ್ಲಿ ಅನೇಕ ಅನುಯಾಯಿಗಳು ಒಟ್ಟು ಸೇರಿದ್ದರಾದರೂ ತಾನು ಉಪನ್ಯಾಸ ಮಾಡುವ ವ್ಯವಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದಾಗಿ ತೋಸುಯ್‌ ಅವರಿಗೆ ಹೇಳಿದ. ಅಲ್ಲಿಂದ ಹೊರಟು ಹೋಗುವಂತೆಯೂ ಇಷ್ಟವಾದಲ್ಲಿಗೆ ಹೋಗುವಂತೆಯೂ ಅವರಿಗೆ ಸೂಚನೆ ನೀಡಿದ. ಆ ನಂತರ ಯಾರಿಗೂ ಎಲ್ಲಿಯೂ ಅವನ ಇರುವಿಕೆಯ ಕುರುಹೂ ಸಿಕ್ಕಲಿಲ್ಲ.

ಕ್ಯೋಟೋದಲ್ಲಿ ಒಂದು ಸೇತುವೆಯ ಅಡಿಯಲ್ಲಿ ಕೆಲವು ಭಿಕ್ಷುಕರೊಂದಿಗೆ ಅವನು ವಾಸಿಸುತ್ತಿರುವುದನ್ನು ಮೂರು ವರ್ಷಗಳ ನಂತರ ಅವನ ಒಬ್ಬ ಶಿಷ್ಯ ಆವಿಷ್ಕರಿಸಿದ. ತನಗೆ ಬೋಧಿಸುವಂತೆ ಅವನು ತಕ್ಷಣ ತೋಸುಯ್‌ಗೆ ಅಂಗಲಾಚಿದ.

ನಾನು ಮಾಡಿದಂತೆಯೇ ನೀನೂ ಒಂದೆರಡು ದಿನಗಳ ಕಾಲ ಮಾಡಿದರೆ ನಾನು ಬೋಧಿಸಲೂ ಬಹುದು ಎಂಬುದಾಗಿ ಉತ್ತರಿಸಿದ ತೋಸುಯ್‌.

ಅಂತೆಯೇ ಹಿಂದಿನ ಶಿಷ್ಯ ಭಿಕ್ಷುಕನಂತೆ ಉಡುಪು ತೊಟ್ಟು ಆ ದಿನವನ್ನು ತೋಸುಯ್‌ ಜೊತೆ ಕಳೆದನು. ಮರು ದಿನ ಭಿಕ್ಷುಕರ ಪೈಕಿ ಒಬ್ಬ ಸತ್ತು ಹೋದ. ತೋಸುಯ್‌ ಮತ್ತು ಅವನ ಶಿಷ್ಯ ಮಧ್ಯರಾತ್ರಿಯಲ್ಲಿ ಆ ದೇಹವನ್ನು ಹೊತ್ತೊಯ್ದು ಬೆಟ್ಟದ ಬುಡದಲ್ಲಿ ಹೂಳಿದರು. ತದನಂತರ ಸೇತುವೆಯ ಕೆಳಗಿನ ತಮ್ಮ ಆಸರೆಯ ತಾಣಕ್ಕೆ ಹಿಂದಿರುಗಿದರು.

ರಾತ್ರಿಯ ಉಳಿದ ಭಾಗದಲ್ಲಿ ತೋಸುಯ್‌ ಚೆನ್ನಾಗಿ ನಿದ್ದೆ ಮಾಡಿದನಾದರೂ ಅವನ ಶಿಷ್ಯನಿಗೆ ನಿದ್ದೆ ಮಾಡಲಾಗಲಿಲ್ಲ. ಬೆಳಗ್ಗೆ ಆದಾಗ ತೋಸುಯ್‌ ಹೇಳಿದ: ಇವತ್ತು ನಾವು ಆಹಾರಕ್ಕಾಗಿ ಭಿಕ್ಷೆ ಬೇಡಬೇಕಾಗಿಲ್ಲ. ಸತ್ತುಹೋದ ನಮ್ಮ ಸ್ನೇಹಿತ ಸ್ವಲ್ಪ ಆಹಾರವನ್ನು ಅಲ್ಲಿ ಬಿಟ್ಟಿದ್ದಾನೆ. ಶಿಷ್ಯನಿಗೆ ಅದರಿಂದ ಒಂದು ತುತ್ತನ್ನೂ ತಿನ್ನಲಾಗಲಿಲ್ಲ.

ನಾನು ಮಾಡಿದಂತೆ ನಿನ್ನಿಂದ ಮಾಡಲಾಗುವುದಿಲ್ಲ ಎಂಬುದಾಗಿ ಹೇಳಿದ್ದೆ ಮುಕ್ತಾಯಗೊಳಿಸಿದ ತೋಸುಯ್‌. ಇಲ್ಲಿಂದ ಹೊರಹೋಗು, ಇನ್ನೆಂದೂ ನನ್ನನ್ನು ಕಾಡಬೇಡ.

 

ಝೆನ್‌ (Zen) ಕತೆ ೫೩. ಪ್ರತಿಯೊಂದು ಕ್ಷಣವೂ ಝೆನ್‌

ಝೆನ್‌ ವಿದ್ಯಾರ್ಥಿಗಳು ತಾವು ಇತರರಿಗೆ ಬೋಧಿಸುವ ಮುನ್ನ ತಮ್ಮ ಗುರುಗಳೊಂದಿಗೆ ಕನಿಷ್ಠ ಎರಡು ವರ್ಷ ಕಾಲ ತರಬೇತಿ ಪಡೆಯಬೇಕಿತ್ತು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಬೋಧಕನಾಗಿದ್ದ ಟೆನ್ನೋ ಗುರು ನ್ಯಾನ್‌-ಇನ್ ಅನ್ನು ಭೇಟಿ ಮಾಡಿದ. ಆ ದಿನ ಮಳೆ ಬರುತ್ತಿತ್ತು, ಟೆನ್ನೋ ಮರದ ಚಡಾವುಗಳನ್ನು ಹಾಕಿದ್ದ ಮತ್ತು ಛತ್ರಿಯನ್ನೂ ಒಯ್ದಿದ್ದ. ಕುಶಲ ಪ್ರಶ್ನೆ ಮಾಡಿದ ನಂತರ ನ್ಯಾನ್‌-ಇನ್ ಹೇಳಿದ: ನೀನು ನಿನ್ನ ಮರದ ಚಡಾವುಗಳನ್ನು ಮುಖಮಂಟಪದಲ್ಲಿ ಬಿಟ್ಟಿರುವೆ ಎಂಬುದಾಗಿ ಭಾವಿಸುತ್ತೇನೆ. ನಿನ್ನ ಛತ್ರಿಯು ಚಡಾವುಗಳ ಎಡ ಬಾಗದಲ್ಲಿದೆಯೋ ಬಲ ಭಾಗದಲ್ಲಿದೆಯೋ ಎಂಬುದನ್ನು ನಾನು ತಿಳಿಯಲು ಇಚ್ಛಿಸುತ್ತೇನೆ

ಗೊಂದಲಕ್ಕೀಡಾದ ಟೆನ್ನೊಗೆ ತಕ್ಷಣ ಉತ್ತರ ನೀಡಲಾಗಲಿಲ್ಲ. ಜೀವನದ ಪ್ರತೀ ಕ್ಷಣದಲ್ಲಿಯೂ ಝೆನ್‌ಧಾರಿಯಾಗಿ ಇರಲು ತಾನು ಅಸಮರ್ಥನಾಗಿದ್ದೇನೆ ಎಂಬ ಅರಿವು ಆತನಿಗೆ ಉಂಟಾಯಿತು. ಈ ಸಿದ್ಧಿ ಗಳಿಸಲೋಸುಗ ಅವನು ನ್ಯಾನ್‌-ಇನ್‌ನ ವಿದ್ಯಾರ್ಥಿಯಾಗಿ ಇನ್ನೂ ಆರು ವರ್ಷಗಳ ಕಾಲ ಅಧ್ಯಯನ ಮಾಡಿದ.

 

ಝೆನ್‌ (Zen) ಕತೆ ೫೪. ಸರಿ ಮತ್ತು ತಪ್ಪು

ಏಕಾಂಗೀ ಧ್ಯಾನ ಸಪ್ತಾಹಗಳನ್ನು ಬಾಂಕೈ ನಡೆಸುತ್ತಿದ್ದಾಗ ಜಪಾನಿನ ಅನೇಕ ಭಾಗಗಳಿಂದ ವಿದ್ಯಾರ್ಥಿಗಳು ಭಾಗವಹಿಸಲೋಸುಗ ಬರುತ್ತಿದ್ದರು. ಇಂತಹ ಒಂದು ಸಪ್ತಾಹದಲ್ಲಿ ಕಳ್ಳತನ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಇತರರ ಕೈಗೆ ಸಿಕ್ಕಿ ಹಾಕಿಕೊಂಡ. ವಿಷಯವನ್ನು ಬಾಂಕೈಗೆ ವರದಿ ಮಾಡಲಾಯಿತು ಮತ್ತು ಅಪರಾಧಿಯನ್ನು ಹೊರಹಾಕುವಂತೆ ವಿನಂತಿಸಲಾಯಿತು. ಬಾಂಕೈ ಇಡೀ ವಿದ್ಯಮಾನವನ್ನು ನಿರ್ಲಕ್ಷಿಸಿದ.

ಅದೇ ವಿದ್ಯಾರ್ಥಿ ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡಾಗಲೂ ಬಾಂಕೈ ನಿರ್ಲಕ್ಷಿಸಿದ. ಇದರಿಂದ ಕೋಪಗೊಂಡ ಇತರ ವಿದ್ಯಾರ್ಥಿಗಳು ಆ ಕಳ್ಳನನ್ನು ಹೊರಹಾಕುವಂತೆಯೂ, ಹಾಕದೇ ಇದ್ದರೆ ತಾವೆಲ್ಲರೂ ಒಟ್ಟಾಗಿ ಬಿಟ್ಟು ಹೋಗುವುದಾಗಿಯೂ ಅರ್ಜಿಯೊಂದನ್ನು ಬರೆದು ಕೊಟ್ಟರು.

ಅರ್ಜಿಯನ್ನು ಓದಿದ ಬಾಂಕೈ ಎಲ್ಲರನ್ನೂ ತನ್ನೆದುರು ಒಟ್ಟು ಸೇರಿಸಿ ಇಂತೆಂದ: ನೀವೆಲ್ಲರೂ ವಿವೇಕೀ ಸಹೋದರರು. ನಿಮಗೆ ಯಾವುದು ದರಿ ಯಾವುದು ತಪ್ಪು ಎಂಬುದು ತಿಳಿದಿದೆ. ನೀವು ಇಷ್ಟಪಟ್ಟರೆ ಬೇರೆ ಎಲ್ಲಿಯಾದರೂ ಹೋಗಿ ಅಧ್ಯಯನ ಮಾಡಬಹುದು. ಈ ಬಡಪಾಯಿ ಸಹೋದರನಾರೋ ಯಾವುದು ಸರಿ ಯಾವುದು ತಪ್ಪು ಎಂಬುದನ್ನೇ ತಿಳಿದುಕೊಂಡಿಲ್ಲ. ನಾನು ಅವನಿಗೆ ಹೇಳಿಕೊಡದೇ ಇದ್ದರೆ ಬೇರೆ ಯಾರು ತಾನೇ ಅವನಿಗೆ ಬೋಧಿಸುತ್ತಾರೆ? ಅವನನ್ನು ನಾನು ಇಲ್ಲಿಯೇ ಇಟ್ಟುಕೊಳ್ಳುತ್ತೇನೆ, ಉಳಿದ ನೀವೆಲ್ಲರೂ ಬಿಟ್ಟು ಹೋದರು ಕೂಡ.

ಕಳ್ಳತನ ಮಾಡಿದ್ದ ಸಹೋದರನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿದು ಅವನ ಮುಖವನ್ನು ಸ್ವಚ್ಛಗೊಳಿಸಿತು. ಕದಿಯಬೇಕೆಂಬ ಬಯಕೆ ಸಂಪೂರ್ಣವಾಗಿ ಮಾಯವಾಯಿತು.

ಝೆನ್‌ (Zen) ಕತೆ ೫೫. ಕಪ್ಪು ಮೂಗಿನ ಬುದ್ಧ

ಜ್ಞಾನೋದಯಕ್ಕಾಗಿ ಹುಡುಕಾಡುತ್ತಿದ್ದ ಸನ್ಯಾಸಿನಿಯೊಬ್ಬಳು ಬುದ್ಧನ ವಿಗ್ರಹವೊಂದನ್ನು ತಯಾರಿಸಿ ಅದನ್ನು ಚಿನ್ನದ ತಗಡಿನ ಹೊದಿಕೆಯಿಂದ ಮುಚ್ಚಿದಳು. ತಾನು ಹೋಗುವೆಡೆಗಳಿಗೆಲ್ಲಾ ಆ ಚಿನ್ನದ ಬುದ್ಧನ ವಿಗ್ರಹವನ್ನೂ ಒಯ್ಯುತ್ತಿದ್ದಳು.

ವರ್ಷಗಳು ಉರುಳಿದವು. ತನ್ನ ಬುದ್ಧನ ಸಹಿತ ದೇಶ ಪರ್ಯಟನೆ ಮಾಡುತ್ತಾ ಆ ಸನ್ಯಾಸಿನಿಯು ಅನೇಕ ಬುದ್ಧ ವಿಗ್ರಹಗಳಿದ್ದ ಚಿಕ್ಕ ದೇವಾಲಯವೊಂದನ್ನು ತಲುಪಿ ಅಲ್ಲಿ ವಾಸಿಸತೊಡಗಿದಳು. ಆ ದೇವಾಲಯದಲ್ಲಿದ್ದ ಪ್ರತಿಯೊಂದು ಬುದ್ಧ ವಿಗ್ರಹಕ್ಕೂ ಅದರದ್ದೇ ಆದ ಪೂಜಾಮಂದಿರವಿತ್ತು.

ತನ್ನ ಚಿನ್ನದ ಬುದ್ಧನ ಎದುರು ಧೂಪ ಉರಿಸಬೇಕೆಂಬ ಬಯಕೆ ಆ ಸಂನ್ಯಾಸಿನಿಗೆ ಇತ್ತು. ತಾನು ಉರಿಸಿದ ಧೂಪದ ಸುಗಂಧಯುತ ಧೂಮ ಚದುರಿ ಇತರ ವಿಗ್ರಹಗಳನ್ನು ತಲುಪುವುದು ಅವಳಿಗೆ ಇಷ್ಟವಿರಲಿಲ್ಲ. ಎಂದೇ, ತನ್ನ ವಿಗ್ರಹದತ್ತ ಮಾತ್ರ ಧೂಮವು ಮೇಲೇರುವಂತೆ ಮಾಡುವ ಆಲಿಕೆಯೊಂದನ್ನು ಆಕೆ ರಚಿಸಿದಳು. ತತ್ಪರಿಣಾಮವಾಗಿ ಚಿನ್ನದ ಬುದ್ಧನ ಮೂಗು ಕಪ್ಪಾಗಿ ನೋಡಲು ವಿಪರೀತ ಅಸಹ್ಯವಾಯಿತು.

 

ಝೆನ್‌ (Zen) ಕತೆ ೫೬. ರ್ಯೋನೆನ್‌ನ ಸ್ಪಷ್ಟ ಅರಿವು

ಬೌದ್ಧ ಸನ್ಯಾಸಿನಿ ರ್ಯೋನೆನ್‌ ೧೭೯೭ ನೇ ಇಸವಿಯಲ್ಲಿ ಜನಿಸಿದಳು. ಆಕೆ ಜಪಾನಿನ ಪ್ರಖ್ಯಾತ ಯೋಧ ಶಿಂಗೆನ್‌ ನ ಮೊಮ್ಮಗಳು. ಅವಳ ಕವಿಯೋಗ್ಯ ಮೇಧಾವೀತನ ಮತ್ತು ಮನಮೋಹಕ ರೂಪ ಎಂತಹುದು ಆಗಿತ್ತೆಂದರೆ ೧೭ ನೆಯ ವಯಸ್ಸಿನಲ್ಲಿಯೇ ಆಕೆ ಆಸ್ಥಾನ ಸ್ತ್ರೀಯರ ಪೈಕಿ ಒಬ್ಬಳಾಗಿ ಸಾಮ್ರಾಜ್ಞಿಗೆ ಸೇವೆ ಸಲ್ಲಿಸುತ್ತಿದ್ದಳು.  ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಅವಳದಾಗಲು ಕಾಯುತ್ತಿತ್ತು.

ಇದ್ದಕ್ಕಿದ್ದಂತೆಯೇ ಸಾಮ್ರಾಜ್ಞಿ ಸತ್ತು ಹೋದಳು. ರ್ಯೋನೆನ್‌ಳ ಆಶಾಭರಿತ ಕನಸುಗಳು ಅದೃಶ್ಯವಾದವು. ಈ ಪ್ರಪಂಚದಲ್ಲಿನ ಜೀವನದ ನಶ್ವರತೆಯ ಸೂಕ್ಷ್ಮ ಅರಿವು ಅವಳಿಗಾಯಿತು. ಆಗ ಆಕೆ ಝೆನ್‌ ಅಧ್ಯಯಿಸಲು ಬಯಸಿದಳು.

ಆದರೂ ಅವಳ ಬಂಧುಗಳು ಅದನ್ನು ಒಪ್ಪಲಿಲ್ಲ ಮತ್ತು ಮದುವೆ ಆಗುವಂತೆ ಅವಳನ್ನು ಬಲು ಒತ್ತಾಯಿಸಿದರು. ಮೂರು ಮಕ್ಕಳು ಆದ ತರುವಾಯ ಆಕೆ ಸನ್ಯಾಸಿ ಅಗಲು ತಾವು ಅಡ್ಡಿಯಾಗುವುದಿಲ್ಲ ಎಂಬ ಆಶ್ವಾಸನೆಯನ್ನು ಅವರಿಂದ ಪಡೆದು ನಂತರ ಮದುವೆ ಆಗಲು ಒಪ್ಪಿದಳು. ೨೫ ವರ್ಷ ವಯಸ್ಸು ತುಂಬುವ ಮೊದಲೇ ಕರಾರಿನಂತೆ ತಾನು ಮಾಡಬೇಕಾದದ್ದನ್ನು ಮಾಡಿ ಮುಗಿಸಿದಳು. ಆ ನಂತರ ಅವಳು ತನ್ನ ಬಯಕೆಯನ್ನು ಪುರೈಸಿಕೊಳ್ಳುವುದನ್ನು ಅವಳ ಗಂಡನಿಂದಲೇ ಆಗಲಿ ಬಂಧುಗಳಿಂದಲೇ ಆಗಲಿ ತಡೆಯಲು ಸಾಧ್ಯವಾಗಲಿಲ್ಲ. ತನ್ನ ತಲೆ ಬೋಳಿಸಿಕೊಂಡು, ರ್ಯೋನೆನ್‌, ಅರ್ಥಾತ್ ಪೂರ್ಣವಾಗಿ ಅರಿತುಕೊಂಡವಳು ಎಂಬುದಾಗಿ ಹೆಸರು ಬದಲಿಸಿಕೊಂಡು ಯಾತ್ರೆ ಆರಂಭಿಸಿದಳು.

ಎಡೋ ನಗರಕ್ಕೆ ಬಂದು ತನ್ನನ್ನು ಶಿಷ್ಯಳನ್ನಾಗಿ ಸ್ವೀಕರಿಸುವಂತೆ ಗುರು ಟೆಟ್ಸುಗ್ಯರನ್ನು ವಿನಂತಿಸಿಕೊಂಡಳು. ಬಲು ಸುಂದರಿ ಅನ್ನುವ ಕಾರಣಕ್ಕಾಗಿ ನೋಡಿದ ತಕ್ಷಣ ಆಕೆಯ ಮನವಿಯನ್ನು ಆತ ತಿರಸ್ಕರಿಸಿದ.

‌ಇನ್ನೊಬ್ಬ ಗುರು ಹಕುಒ ಬಳಿಗೆ ರ್ಯೋನೆನ್ ಹೋದಳು. ಅವಳ ಸೌಂದರ್ಯವು ತೊಂದರೆಯ ವಿನಾ ಬೇರೇನನ್ನೂ ಉಂಟುಮಾಡಲಾರದು ಎಂಬುದಾಗಿ ಹೇಳಿ ಅವನೂ ಅವಳ ಮನವಿಯನ್ನು ತಿರಸ್ಕರಿಸಿದ.

ರ್ಯೋನೆನ್ ಒಂದು ಕೆಂಪಗೆ ಕಾದ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ತನ್ನ ಮುಖದ ಮೇಲೆ ಇಟ್ಟುಕೊಂಡಳು. ಕೆಲವೇ ಕ್ಷಣಗಳಲ್ಲಿ ಅವಳ ಸೌಂದರ್ಯ ಮಾಯವಾಯಿತು. ತದನಂತರ ಹಕುಒ ಅವಳನ್ನು ಶಿಷ್ಯಳನ್ನಾಗಿ ಸ್ವೀಕರಿಸಿದ.

ಈ ಸನ್ನಿವೇಶದ ನೆನಪಿನಲ್ಲಿ ಪುಟ್ಟ ಕನ್ನಡಿಯ ಹಿಂಬದಿಯಲ್ಲಿ ಪದ್ಯವೊಂದನ್ನು ಆಕೆ ಬರೆದಳು:

ಸಾಮ್ರಾಜ್ಞಿಯ ಸೇವೆಯಲ್ಲಿ ಬಲು ಅಂದವಾದ ನನ್ನಉಡುಗೆಗಳನ್ನು ಕಂಪುಗೊಳಿಸಲೋಸುಗ ನಾನು ಧೂಪ ಸುಡುತ್ತಿದ್ದೆ,

ಮನೆ ಇಲ್ಲದ ಭಿಕ್ಷುಕಿಯಾಗಿ ಈಗ ನನ್ನ ಮುಖ ಸುಡುತ್ತಿದ್ದೇನೆ ಝೆನ್‌ ದೇವಾಲಯ ಪ್ರವೇಶಿಸಲೋಸುಗ.

ಈ ಪ್ರಪಂಚಕ್ಕೆ ವಿದಾಯ ಹೇಳುವ ಸಮಯ ಸಮೀಪಿಸಿದಾಗ ರ್ಯೋನೆನ್‌ ಇನ್ನೊಂದು ಪದ್ಯ ಬರೆದಳು:

ಅರುವತ್ತಾರು ಸಲ ನೋಡಿವೆ ಈ ಕಣ್ಣುಗಳು ಶರತ್ಕಾಲದ ಬದಲಾಗುತ್ತಿರುವ ದೃಶ್ಯಗಳನ್ನು. ಬೆಳದಿಂಗಳ ಕುರಿತು ನಾನು ಸಾಕಷ್ಟು ಹೇಳಿದ್ದೇನೆ, ಈ ಕುರಿತು ಇನ್ನೂ ಕೇಳದಿರಿ. ಗಾಳಿ ಅಲುಗಾಡದಿರುವಾಗ ದೇವದಾರು ಮತ್ತು ಪೀತದಾರು ಮರಗಳ ಧ್ವನಿಯನ್ನು ಮಾತ್ರ ಕೇಳಿ.

 

ಝೆನ್‌ (Zen) ಕತೆ ೫೭. ಜಿಪುಣ ಕಲಾವಿದ

ಗೆಸ್ಸೆನ್ ಒಬ್ಬ ಸನ್ಯಾಸಿ ಕಲಾವಿದ. ಸಂಭಾವನೆಯನ್ನು ಚಿತ್ರ ಬಿಡಿಸುವ ಮೊದಲು ಮುಂಗಡವಾಗಿಯೇ ಕೊಡಬೇಕೆಂದು ಪಟ್ಟು ಹಿಡಿಯುತ್ತಿದ್ದ. ಅವನ ಶುಲ್ಕ ಬಲು ಹೆಚ್ಚಾಗಿಯೇ ಇರುತ್ತಿತ್ತು. ’ಜಿಪುಣ ಕಲಾವಿದ’ ಎಂಬುದಾಗಿಯೇ ಅವನು ಗುರುತಿಸಲ್ಪಟ್ಟಿದ್ದ.

ಚಿತ್ರ ಬಿಡಿಸಲು ಒಮ್ಮೆ ಒಬ್ಬಳು ಗೇಷ ಅವನನ್ನು ನಿಯೋಜಿಸಿದಳು. ನೀನು ಎಷ್ಟು ಹಣ ಕೊಡಬಲ್ಲೆ? ವಿಚಾರಿಸಿದ ಗೆಸ್ಸೆನ್‌.

ನೀನೆಷ್ಟು ಶುಲ್ಕ ವಿಧಿಸುವೆಯೋ ಅಷ್ಟು ಎಂಬುದಾಗಿ ಉತ್ತರಿಸಿದಳು ಅವಳು, ಆದರೆ ನೀನು ನನ್ನ ಮುಂದೆಯೇ ಕೆಲಸ ಮಾಡಬೇಕು.

ಗೆಸ್ಸೆನ್‌ಅನ್ನು ನಿಗದಿತ ದಿನದಂದು ಗೇಷ ಬರಹೇಳಿದಳು. ಅಂದು ಅವಳು ತನ್ನ ಖಾಯಂ ಗಿರಾಕಿಯಬ್ಬನಿಗೆ ಔತಣ ಏರ್ಪಡಿಸಿದ್ದಳು. ಉತ್ತಮ ಕುಂಚವೊಂದನ್ನು ಉಪಯೋಗಿಸಿ ಗೆಸ್ಸೆನ್‌ ಚಿತ್ರ ಬಿಡಿಸಿದ. ಅದು ಪೂರ್ಣಗೊಂಡಾಗ ಆ ಕಾಲದಲ್ಲಿ ಅತೀ ಹೆಚ್ಚು ಎಂಬುದಾಗಿ ಪರಿಗಣಿಸಬಹುದಾದಷ್ಟು ಹಣ ಕೇಳಿದ.

ಅವನು ಕೇಳಿದ ಮೊಬಲಗು ಸಿಕ್ಕಿತು. ಆನಂತರ ಗೇಷ ತನ್ನ ಅತಿಥಿಯತ್ತ ತಿರುಗಿ ಇಂತೆದಳು: ಈ ಕಲಾವಿದನಿಗೆ ಬೇಕಾಗಿರುವುದೇ ಹಣ. ಅವನ ಚಿತ್ರಗಳು ಬಲು ಚೆನ್ನಾಗಿವೆಯಾದರೂ ಅವನ ಮನಸ್ಸು ಕೊಳಕಾಗಿದೆ, ಹಣ ಅದನ್ನು ರಾಡಿಯಾಗಿಸಿದೆ. ಇಷ್ಟು ಕೊಳಕು ಮನಸ್ಸಿನವನಿಂದ ಬಿಡಿಸಲ್ಪಟ್ಟವು ಪ್ರದರ್ಶನಯೋಗ್ಯವಾದವು ಅಲ್ಲ. ನನ್ನ ಯಾವುದಾದರೊಂದು ಒಳಲಂಗಕ್ಕೆ ಅದು ಅಲ್ಲಿಂದಲ್ಲಿಗೆ ತಕ್ಕುದಾಗಿದೆ.

ತಾನು ಧರಿಸಿದ್ದ ಲಂಗವನ್ನು (skirt) ತೆಗದು ಒಳಲಂಗದ ಹಿಂಭಾಗದಲ್ಲಿ ಇನ್ನೊಂದು ಚಿತ್ರ ಬಿಡಿಸುವಂತೆ ಗೆಸ್ಸೆನ್‌ಗೆ ಹೇಳಿದಳು.

ಗೆಸ್ಸೆನ್‌ ಕೇಳಿದ: ಎಷ್ಟು ಹಣ ಕೊಡುವಿರಿ?

ಒಃ, ಎಷ್ಟಾದರೂ ಸರಿಯೇ: ಉತ್ತರಿಸಿದಳು ಹುಡುಗಿ.

ಗೆಸ್ಸೆನ್‌ ಮನಸ್ಸಿಗೆ ಬಂದಷ್ಟು ಹೆಚ್ಚಿನ ಮೊಬಲಗು ಹೇಳಿದ, ಅವಳ ಅಪೇಕ್ಷೆಯಂತೆ ಚಿತ್ರ ಬಿಡಿಸಿ ಹೊರಟು ಹೋದ.

ಈ ಮುಂದೆ ನಮೂದಿಸಿದ ಕಾರಣಗಳಿಗಾಗಿ ಗೆಸ್ಸೆನ್‌ ಬಹಳ ಹೆಚ್ಚು ಹಣ ಗಳಿಸಲು ಬಯಸುತ್ತಿದ್ದ ಎಂಬುದು ಬಲು ತಡವಾಗಿ ಎಲ್ಲರಿಗೂ ತಿಳಿಯಿತು.

ವಿನಾಶಕಾರೀ ಬರಗಾಲವೊಂದಕ್ಕೆ ಅವನ ಪ್ರಾಂತ್ಯ ತುತ್ತಾಗಿತ್ತು. ಶ್ರೀಮಂತರು ಬಡವರಿಗೆ ಸಹಾಯ ಮಾಡುತ್ತಿರಲಿಲ್ಲ. ಆದ್ದರಿಂದ ತುರ್ತುಪರಿಸ್ಥಿತಿಯಲ್ಲಿ ಉಪಯೋಗಿಸಲೋಸುಗ ಧಾನ್ಯಭರಿತ ಕೋಠಿಯೊಂದನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದ ಗೆಸ್ಸೆನ್.‌

ಅವನ ಹಳ್ಳಿಯಿಂದ ರಾಷ್ಟ್ರೀಯ ಪೂಜಾಮಂದಿರಕ್ಕೆ  ಹೋಗುವ ರಸ್ಥೆ ಬಲು ದುಸ್ಥಿತಿಯಲ್ಲಿ ಇತ್ತು. ಅದರಿಂದಾಗಿ ಆ ರಸ್ತೆಯಲ್ಲಿ ಪಯಣಿಸುವವರು ಬಲು ಸಂಕಷ್ಟಕ್ಕೆ ಈಡಾಗುತ್ತಿದ್ದರು. ಒಂದು ಒಳ್ಳೆಯ ರಸ್ತೆ ನಿರ್ಮಿಸುವ ಬಯಕೆ ಅವನಿಗಿತ್ತು.

ಅವನ ಗುರುಗಳು ತಾವು ಬಯಸಿದಂತೆ ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗದೆಯೇ ಮರಣಿಸಿದ್ದರು. ಅವರಿಗಾಗಿ ಆ ದೇವಾಲಯವನ್ನು ಪೂರ್ಣಗೊಳಿಸುವ ಬಯಕೆ ಗೆಸ್ಸೆನ್‌ಗೆ ಇತ್ತು.

ತನ್ನ ಈ ಮೂರೂ ಬಯಕೆಗಳನ್ನು ಈಡೇರಿಸಿದ ನಂತರ ಗೆಸ್ಸೆನ್ ತನ್ನ ಕುಂಚಗಳನ್ನೂ ಕಲಾವಿದನ ಸಾಮಗ್ರಿಗಳನ್ನೂ ಎಸೆದು ಪರ್ವತಪ್ರದೇಶಕ್ಕೆ ತೆರಳಿದನು. ಮುಂದೆಂದೂ ಅವನು ಚಿತ್ರ ಬಿಡಿಸಲಿಲ್ಲ.

 

ಝೆನ್‌ (Zen) ಕತೆ ೫೮. ನಿಖರವಾದ ಸಾಮಂಜಸ್ಯ

ಚಹಾ ಅಧಿಕಾರಿ (Tea master) ಸೆನ್‌ ನೊ ರಿಕ್ಯು ಹೂವಿನ ಬುಟ್ಟಿಯೊಂದನ್ನು ದುಂಡುಗಂಬವೊಂದರ ಮೇಲೆ ನೇತು ಹಾಕಲು ಇಚ್ಛಿಸಿದ. ಇದಕ್ಕಾಗಿ ಒಬ್ಬ ಬಡಗಿಯನ್ನು ಸಹಾಯ ಮಾಡುವಂತೆ ಕೋರಿದ. ಅದನ್ನು ನೇತು ಹಾಕಲು ಸಂಪೂರ್ಣವಾಗಿ ಸರಿಯಾದ ಸ್ಥಳ ಗುರುತಿಸಲೋಸುಗ ಹೂಬುಟ್ಟಿಯನ್ನು ತುಸು ಮೇಲಕ್ಕೆ ಅಥವ ಕೆಳಕ್ಕೆ, ತುಸು ಎಡಕ್ಕೆ ಅಥವ ಬಲಕ್ಕೆ ಇಡುವಂತೆ ಬಡಗಿಗೆ ನಿರ್ದೇಶನ ನೀಡಿ ಸ್ಥಳ ಗುರುತಿಸಿದ. ಕೊನೆಗೊಮ್ಮೆ ಅದೀಗ ಸರಿಯಾದ ಸ್ಥಳ ಎಂಬುದಾಗಿ ಘೋಷಿಸಿದ ಸೆನ್‌ ನೊ ರಿಕ್ಯು.

ಅವನನ್ನು ಪರೀಕ್ಷಿಸಲೋಸುಗ ಬಡಗಿ ಮೊದಲು ತಾನು ಗುರುತು ಮಾಡಿದ್ದ ಸ್ಥಳ ಮರೆತು ಹೋದವನಂತೆ ನಟಿಸಿದ. ನಾವು ಗುರುತಿಸಿದ್ದು ಈ ಸ್ಥಳವೋ, ಅಥವ ಇದೋ? ಬಡಗಿ ದುಂಡುಗಂಬದ ಮೇಲೆ ವಿಭಿನ್ನ ಸ್ಥಳಗಳನ್ನು ತೋರಿಸುತ್ತಾ ಕೇಳತೊಡಗಿದ.

ಚಹಾ ಅಧಿಕಾರಿಯ ಸಾಮಂಜಸ್ಯ ಪ್ರಜ್ಞೆ ಎಷ್ಟು ನಿಖರವಾಗಿತ್ತೆಂದರೆ ಬಡಗಿ ಮೊದಲು ಗುರುತಿಸಿದ್ದ ಸ್ಥಳವನ್ನು ನಿಖರವಾಗಿ ತೋರಿಸಿದ ನಂತರವೇ ಅತ ತನ್ನ ಒಪ್ಪಿಗೆ ಸೂಚಿಸಿದ.

 

ಝೆನ್‌ (Zen) ಕತೆ ೫೯. ಚಹಾ ಅಧಿಕಾರಿ (Tea Master) ಮತ್ತು ಕೊಲೆಗಡುಕ

ಟೋಕುಗವ ಕಾಲಕ್ಕಿಂತಲೂ ಹಿಂದೆ ಜಪಾನಿನಲ್ಲಿ ವಾಸಿಸುತ್ತಿದ್ದ ಒಬ್ಬ ಯೋಧ ಟೈಕೊ. ಸೆನ್‌ ನೊ ರಿಕ್ಯು ಎಂಬ ಚಹಾ ಅಧಿಕಾರಿಯ ಮಾರ್ಗದರ್ಶನದಲ್ಲಿ ಚಾ-ನೊ-ಯು, ಅರ್ಥಾತ್ ಚಹಾ ಶಿಷ್ಟಾಚಾರ, ಅಧ್ಯಯಿಸುತ್ತಿದ್ದ. ಸೆನ್‌ ನೊ ರಿಕ್ಯುವಾದರೋ ಒಬ್ಬ ಶಾಂತತೆ ಮತ್ತು ಸಂತುಷ್ಟಿಯ ಸುಂದರವಾದ ಅಭಿವ್ಯಕ್ತಿಯ ಮೂರ್ತರೂಪದಂತಿದ್ದ ಬೋಧಕನಾಗಿದ್ದ.

ಚಹಾ ಶಿಷ್ಟಾಚಾರಕ್ಕೆ ತನ್ನ ಮೇಲಧಿಕಾರಿ ತೋರುತ್ತಿದ್ದ ಉತ್ಸಾಹವನ್ನು ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳ ನಿರ್ಲಕ್ಷಿಸುವಿಕೆ ಎಂಬುದಾಗಿ ಟೈಕೋನ ಸೇವಕನಾಗಿದ್ದ ಯೋಧ ಕ್ಯಾಟೋ ಪರಿಗಣಿಸಿದ. ಎಂದೇ, ಸೆನ್‌ ನೊ ರಿಕ್ಯುನನ್ನು ಕೊಲ್ಲಲು ಆತ ನಿರ್ಧರಿಸಿದ.

ಸಾಮಾಜಿಕ ಶಿಷ್ಟಾಚಾರದ ನೆಪದಲ್ಲಿ ಚಹಾ ಅಧಿಕಾರಿಯನ್ನು ಆತ ಔಪಚಾರಿಕವಾಗಿ ಭೇಟಿಯಾಗಲು ಇಚ್ಛಿಸಿದ, ಚಹಾ ಅಧಿಕಾರಿ ಅವನನ್ನು ಚಹಾ ಕುಡಿಯಲು ಆಮಂತ್ರಿಸಿದ.

ಯೋಧನ ಉದ್ದೇಶ ಏನು ಎಂಬುದು ತನ್ನ ಕಲೆಯಲ್ಲಿ ಕುಶಲಿಯಾಗಿದ್ದ ಅಧಿಕಾರಿಗೆ ಮೊದಲ ನೋಟದಲ್ಲಿಯೇ ತಿಳಿಯಿತು. ಎಂದೇ, ಚಾ-ನೊ-ಯು ಶಾಂತಿಯ ಪ್ರತೀಕವಾಗಿರುವುದರಿಂದ ಖಡ್ಗವನ್ನು ಕೊಠಡಿಯ ಹೊರಗೆ ಬಿಟ್ಟು ಸಮಾರಂಭಕ್ಕೆ ಒಳ ಬರುವಂತೆ  ಕ್ಯಾಟೋನನ್ನು ಅವನು ವಿನಂತಿಸಿದ.

ಕ್ಯಾಟೋ ಆ ಸೂಚನೆಯನ್ನು ಪಾಲಿಸಲು ಸಿದ್ಧನಿರಲಿಲ್ಲ. ಅವನು ಹೇಳಿದ: ನಾನೊಬ್ಬ ಯೋಧ. ಖಡ್ಗವನ್ನು ಯಾವಾಗಲೂ ನನ್ನ ಬಳಿಯೇ ಇಟ್ಟುಕೊಂಡಿರುತ್ತೇನೆ. ಚಾ-ನೊ-ಯು ಇದ್ದರೂ ಸರಿಯೇ ಇಲ್ಲದಿದ್ದರೂ ಸರಿಯೇ, ಖಡ್ಗ ನನ್ನ ಬಳಿಯೇ ಇರುತ್ತದೆ.

ಸರಿ ಹಾಗಾದರೆ. ನಿನ್ನ ಖಡ್ಗವನ್ನು ಒಳಕ್ಕೆ ತೆಗೆದುಕೊಂಡು ಬಂದು ಸ್ವಲ್ಪ ಚಹಾ ತೆಗೆದುಕೊ ಒಪ್ಪಿಗೆ ಸೂಚಿಸಿದ ಸೆನ್‌ ನೊ ರಿಕ್ಯು.

ಇದ್ದಲಿನ ಬೆಂಕಿಯ ಮೇಲೆ ಕೆಟಲಿನಲ್ಲಿ ನೀರು ಕುದಿಯುತ್ತಿತ್ತು. ಇದ್ದಕ್ಕಿದ್ದಂತೆ ಸೆನ್‌ ನೊ ರಿಕ್ಯು ಅದನ್ನು ಉರುಳಿಸಿದ. ತತ್ಪರಿಣಾಮವಾಗಿ ಹಿಸ್ ಶಬ್ದದೊಂದಿಗೆ ಹಬೆ ಮೇಲೆದ್ದಿತು. ಕೊಠಡಿಯಲ್ಲಿ ಹೊಗೆ ಮತ್ತು ಬೂದಿ ತುಂಬಿತು. ಇದರಿಂದ ಬೆಚ್ಚಿಬಿದ್ದ ಯೋಧ ಖಡ್ಗವನ್ನು ಅಲ್ಲಿಯೇ ಬಿಟ್ಟು ಹೊರಗೋಡಿದ.

ಚಹಾ ಅಧಿಕಾರಿ ಅವನ ಕ್ಷಮೆ ಯಾಚಿಸಿದ: ಅದು ನನ್ನ ತಪ್ಪು. ಒಳಗೆ ಬಂದು ಸ್ವಲ್ಪ ಚಹಾ ಸೇವಿಸಿ. ನನ್ನ ಬಳಿ ಇರುವ ನಿಮ್ಮ ಖಡ್ಗದ ಮೇಲೆ ತುಂಬಾ ಬೂದಿ ಇದೆ. ಅದನ್ನು ಸ್ವಚ್ಛಗೊಳಿಸಿ ನಿಮಗೆ ಕೊಡುತ್ತೇನೆ.

ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಹಾ ಅಧಿಕಾರಿಯನ್ನು ಕೊಲ್ಲಲು ತನ್ನಿಂದಾಗದು ಎಂಬ ಅರಿವು ಯೋಧನಿಗಾಯಿತು. ಅವನು ಅದರ ಆಲೋಚನೆಯನ್ನೇ ಬಿಟ್ಟುಬಿಟ್ಟನು.

 

ಝೆನ್‌ (Zen) ಕತೆ ೬೦. ಸೊನೋಮ್ - ಒಂಟಿ ದೀಪ
ಸೊನೋಮ್‌ ಒಬ್ಬ ಸುಪರಿಚಿತ ಕವಯಿತ್ರಿ ಮತ್ತು ಬೌದ್ಧ ಸಿದ್ಧಾಂತದ ಗಂಭೀರ ವಿದ್ಯಾರ್ಥಿನಿ. ಝೆನ್‌ ಗುರು ಉಂಕೊನಿಗೆ ಅವಳು ಒಮ್ಮೆ ಪತ್ರ ಬರೆದಳು: ಸತ್ಯತೆಯನ್ನೇ ಆಗಲಿ ಮಿಥ್ಯತೆಯನ್ನೇ ಆಗಲಿ ಹುಡುಕದೇ ಇರುವುದೇ ಶ್ರೇಷ್ಠ ವಿಧಾನದ ಮೂಲ ಉಗಮ ಸ್ಥಾನ. ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಆದ್ದರಿಂದ, ಹೀಗನ್ನುವುದು ಉದ್ಧಟತನ ಅನ್ನಿಸಿದರೂ, ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂಬುದು ನನ್ನ ಅಭಿಮತ. ಒಂದು ಮನಸ್ಸಿನ ಉಗಮದಲ್ಲಿ ಜರಗುವ ಸಂಗತಿಗಳಂತೆ, ವಿಲೋ ಸಸ್ಯಗಳು ಹಸಿರಾಗಿವೆ, ಹೂವುಗಳು ಕೆಂಪಗಿವೆ. ಅದು ಈಗ ಹೇಗಿದೆಯೋ ಹಾಗೆಯೇ ಇರುವುದರಿಂದ ನಾನು ಪದ್ಯಗಳನ್ನು ಪಠಿಸುತ್ತಾ ಮತ್ತು ಕಾವ್ಯಗಳನ್ನು ರಚಿಸುತ್ತಾ ಕಾಲ ಕಳೆಯುತ್ತೇನೆ. ಇದು ನಿರುಪಯುಕ್ತ ವಿವೇಕರಹಿತ ಹರಟುವಿಕೆ ಎಂದಾದರೆ ಪವಿತ್ರ ಗ್ರಂಥಗಳೂ ನಿರುಪಯುಕ್ತ ವಿವೇಕರಹಿತ ಹರಟುವಿಕೆ ಗಳೇ ಆಗಿವೆ. ಮತೀಯ ವಾಸನೆ ಇರುವ ಯಾವುದನ್ನೂ ನಾನು ಇಷ್ಟಪಡುವುದಿಲ್ಲ. ಪ್ರಾರ್ಥನೆ, ಕಾವ್ಯ ಮತ್ತು ಹಾಡು ಇವು ನನ್ನ ದೈನಂದಿನ ಅಭ್ಯಾಸಗಳು. ನಾನು ಸ್ವರ್ಗಕ್ಕೆ ಹೋದರೆ ಅದು ಒಳ್ಳೆಯದೆ, ನಾನು ನರಕದಲ್ಲಿ ಬಿದ್ದರೆ ಅದು ಶ್ರೇಯಸ್ಕರವಾದದ್ದು.
ನನ್ನಷ್ಟಕ್ಕೆ ನಾನು ನೆನಪಿಸಿಕೊಳ್ಳುತ್ತೇನೆ
ಮನಸ್ಸನ್ನು ಹುಡುಕದಿರಲು;
ಹಸಿರು ದೀಪವು ಈಗಾಗಲೇ ಬೆಳಗಿದೆ
ನನ್ನ ಒಂಟಿ ಹೃದಯ ದೀಪವನ್ನು.
ಗಲಭೆಯಲ್ಲಾಗಲಿ ನಿಶ್ಶಬ್ದದಲ್ಲಾಗಲಿ
ನನ್ನಲ್ಲಿರುತ್ತದೆ ಶುಭ್ರ ದರ್ಪಣ:
ಅದು ಗ್ರಹಿಸುತ್ತದೆ ಪಕ್ಕಾ ರೀತಿಯಲ್ಲಿ
ಮಾನವ ಗುಂಪಿನಲ್ಲಿರುವ ಶುದ್ಧ ಹೃದಯಗಳನ್ನು.

ಯಾರಾದರೂ ನೋಡಬಹುದಾದ ತಿಳಿಯಬಹುದಾದ
ಅಸ್ತಿತ್ವದಲ್ಲಿರುವ ಏನೋ ಒಂದು ಅದಲ್ಲ,
ಅದು ಅಸ್ತಿತ್ವದಲ್ಲಿ ಇಲ್ಲದ್ದೂ ಅಲ್ಲ:
ಸತ್ಯದ ದೀಪವೇ ಅಂಥದ್ದು.
ಸೊನೋಮ್‌ ಸಾವಿನ ಅಂಚಿನಲ್ಲಿ ಇದ್ದಾಗ, ಈ ಕವಿತೆಯ ಮುಖೇನ ಜಗತ್ತಿಗೆ ವಿದಾಯ ಹೇಳಿದಳು
ಶರತ್ಕಾಲದ ಚಂದಿರನ ಆಗಸ
ವಸಂತದ ಸುಖೋಷ್ಣತೆ:
ಇದೊಂದು ಕನಸೇ? ಇದು ನಿಜವೇ?
ಅಸೀಮ ಬೆಳಕಿನ ಬುದ್ಧನಿಗೆ ವಂದನೆ!

 

ಝೆನ್‌ (Zen) ಕತೆ ೬೧. ಕೊಲ್ಲುವುದು

ಗಾಸನ್ ತನ್ನ ಅನುಯಾಯಿಗಳಿಗೆ ಒಂದು ದಿನ ಇಂತು ಉಪದೇಶಿಸಿದ:

ಯಾರು ಕೊಲ್ಲುವುದರ ವಿರುದ್ಧ ಮಾತನಾಡುತ್ತಾರೋ ಯಾರು ಎಲ್ಲ ಜೀವಿಗಳ ಪ್ರಾಣ ಉಳಿಸಲು ಬಯಸುತ್ತಾರೋ ಅವರೇ ಸರಿಯಾದವರು.

 

ಪ್ರಾಣಿಗಳನ್ನು ಮತ್ತು ಕೀಟಗಳನ್ನು ಸಂರಕ್ಷಿಸುವುದೂ ಒಳ್ಳೆಯದೆ. ಆದರೆ ಸಮಯವನ್ನು ಕೊಲ್ಲುವವರ ವಿಷಯ ಏನು, ಸಂಪತ್ತನ್ನು ನಾಶ ಮಾಡುವವರ ವಿಷಯ ಏನು, ರಾಜಕೀಯ ಆರ್ಥಿಕತೆಯನ್ನು ನಾಶ ಮಾಡುವವರ ವಿಷಯ ಏನು?

ಅವರನ್ನು ನಾವು ಉಪೇಕ್ಷಿಸಕೂಡದು. ಇಷ್ಟೇ ಅಲ್ಲದೆ, ಜ್ಞಾನೋದಯವಾಗದೆ ಉಪದೇಶ ಮಾಡುವವನ ವಿಷಯ ಏನು? ಅವನು ಬೌದ್ಧ ಸಿದ್ಧಾಂತವನ್ನೇ ಕೊಲ್ಲುತ್ತಿದ್ದಾನೆ.

 

ಝೆನ್‌ (Zen) ಕತೆ ೬೨. ಜೋಶುನ ಝೆನ್‌

ತನಗೆ ೬೦ ವರ್ಷ ವಯಸ್ಸು ಆದಾಗ ಜೋಶು ಝೆನ್‌ಅನ್ನು ಅಧ್ಯಯಿಸಲು ಆರಂಭಿಸಿ ೮೦ ವರ್ಷ ವಯಸ್ಸು ಆಗುವ ವರೆಗೆ ಅಧ್ಯಯನವನ್ನು ಮುಂದುವರಿಸಿದ. ಆಗ ಅವನಿಗೆ ಝೆನ್‌ನ ಅರಿವು ಉಂಟಾಯಿತು.

೮೦ ವರ್ಷ ವಯಸ್ಸು ಆದಾಗಿನಿಂದ ಆರಂಭಿಸಿ ೧೨೦ ವರ್ಷ ವಯಸ್ಸು ಆಗುವ ವರೆಗೆ ಆತ ಝೆನ್‌ಅನ್ನು ಬೋಧಿಸಿದ.

ಒಮ್ಮೆ ವಿದ್ಯಾರ್ಥಿಯೊಬ್ಬ ಕೇಳಿದ: ನನ್ನ ಮನಸ್ಸಿನಲ್ಲಿ ಏನೂ ಇಲ್ಲದಿದ್ದರೆ ನಾನೇನು ಮಾಡಬೇಕು?

ಜೋಶು ಉತ್ತರಿಸಿದ: ಅದನ್ನು ಹೊರಕ್ಕೆ ಎಸೆ.

ಪ್ರಶ್ನಿಸಿದಾತ ಮುಂದುವರಿಸಿದ: ನನ್ನ ಮನಸ್ಸಿನಲ್ಲಿ ಏನೂ ಇಲ್ಲವೆಂದಾದರೆ, ಅದನ್ನು ನಾನು ಎಸೆಯುವುದು ಹೇಗೆ?

ಜೋಶು ಹೇಳಿದ: ಸರಿ, ಹಾಗಾದರೆ ಅದನ್ನು ಕಾರ್ಯರೂಪಕ್ಕೆ ತಾ.

 

ಝೆನ್‌ (Zen) ಕತೆ ೬೩. ಶಿಷ್ಯನಾದ ಕಳ್ಳ

ಒಂದು ಸಂಜೆ ಶಿಚಿರಿ ಕೋಜುನ್‌ ಶ್ಲೋಕಗಳನ್ನು ಪಠಿಸುತ್ತಿದ್ದಾಗ ಹರಿತವಾದ ಖಡ್ಗಧಾರೀ ಕಳ್ಳನೊಬ್ಬ ಒಳಕ್ಕೆ ಪ್ರವೇಶಿಸಿ ಹಣ ಅಥವ ಪ್ರಾಣ ಎರಡರಲ್ಲೊಂದು ನೀಡಬೇಕೆಂಬ ಒತ್ತಾಯಪೂರ್ವಕ ಬೇಡಿಕೆ ಮುಂದಿಟ್ಟ.

ಶಿಚಿರಿ ಅವನಿಗೆ ಇಂತು ಹೇಳಿದ: ನನ್ನ ನೆಮ್ಮದಿ ಕೆಡಿಸಬೇಡ. ಆ ಪೆಠಾರಿಯ ಒಳಗೆ ಹಣವಿದೆ, ನೋಡು. ಆನಂತರ ಅವನು ಪಠನವನ್ನು ಮುಂದಿವರಿಸಿದ.

ತುಸು ಸಮಯದ ನಂತರ ಪಠನ ನಿಲ್ಲಿಸಿ ಕರೆದು ಇಂತು ಹೇಳಿದ: ಅಲ್ಲಿರುವುದೆಲ್ಲವನ್ನೂ ತೆಗೆದುಕೊಳ್ಳ ಬೇಡ. ನಾಳೆ ತೆರಿಗೆ ಕಟ್ಟಲೋಸುಗ ನನಗೆ ಸ್ವಲ್ಪ ಹಣ ಬೇಕಾಗುತ್ತದೆ.

ಅತಿಕ್ರಮ ಪ್ರವೇಶ ಮಾಡಿದವ ಇದ್ದ ಹಣದ ಹೆಚ್ಚಿನ ಭಾಗವನ್ನು ತೆಗೆದುಕೊಂಡು ಹೊರಟ. ಒಂದು ಕೊಡುಗೆಯನ್ನು ಪಡೆದಾಗ ಅದನ್ನು ಕೊಟ್ಟವರಿಗೆ ಧನ್ಯವಾದಗಳನ್ನು ಅರ್ಪಿಸು ಸಲಹೆ ನೀಡಿದ ಶಿಚಿರ. ಆ ಮನುಷ್ಯ ಧನ್ಯವಾದಗಳನ್ನು ಅರ್ಪಿಸಿ ಹೊರಟು ಹೋದ.

ಕೆಲವು ದಿನಗಳ ನಂತರ ಆ ಕಳ್ಳ ಹಿಡಿಯಲ್ಪಟ್ಟ ಮತ್ತುಇತರ ಅಪರಾಧಗಳ ಜೊತೆಗೆ ಶಿಚಿರಿ ವಿರುದ್ಧ ಮಾಡಿದ ಅಪರಾಧವನ್ನೂ ಒಪ್ಪಿಕೊಂಡ. ಸಾಕ್ಷಿ ಹೇಳಲು ಶಿಚಿರಿಯನ್ನು ಕರೆಸಿದಾಗ ಆತ ಹೇಳಿದ: ಕೊನೆಯ ಪಕ್ಷ ನನಗೆ ಸಂಬಂಧಿಸಿದಂತೆ ಈ ಮನುಷ್ಯ ಕಳ್ಳನಲ್ಲ. ನಾನು ಅವನಿಗೆ ಹಣ ಕೊಟ್ಟೆ ಮತ್ತು ಅದಕ್ಕವನು ಧನ್ಯವಾದಗಳನ್ನೂ ಅರ್ಪಿಸಿದ.

ಸೆರೆವಾಸದ ಅವಧಿಯನ್ನು ಆತ ಮುಗಿಸಿದ ನಂತರ  ಶಿಚಿರಿ ಬಳಿಗೆ ಹೋಗಿ ಆತನ ಶಿಷ್ಯನಾದ.

ಝೆನ್‌ (Zen) ಕತೆ ೬೪. ಸ್ವರ್ಗದ ಮಹಾದ್ವಾರ

ನೊಬುಶಿಗೆ ಎಂಬ ಹೆಸರಿನ ಯೋಧನೊಬ್ಬ ಹಕುಇನ್‌ ಬಳಿ ಬಂದು ಕೇಳಿದ: ನಿಜವಾಗಿಯೂ ಸ್ವರ್ಗ ಮತ್ತು ನರಕಗಳು ಇವೆಯೇ?

ನೀನು ಯಾರು?; ವಿಚಾರಿಸಿದ ಹಕುಇನ್‌.

ನಾನೊಬ್ಬ ಸ್ಯಾಮುರೈ ಉತ್ತರಿಸಿದ ಯೋಧ.

ನೀನು, ಒಬ್ಬ ಯೋಧ! ಉದ್ಗರಿಸಿದ ಹಕುಇನ್‌, ನಿನ್ನನ್ನು ಯಾವ ದೊರೆ ರಕ್ಷಕನಾಗಿ ಇಟ್ಟುಕೊಂಡಾನು. ನಿನ್ನ ಮುಖ ಒಬ್ಬ ಭಿಕ್ಷುಕನ ಮುಖದಂತಿದೆ.

ನೊಬುಶಿಗೆಗೆ ಎಷ್ಟು ಕೋಪ ಬಂದಿತೆಂದರೆ ಆತ ತನ್ನ ಖಡ್ಗವನ್ನು  ಒರೆಯಿಂದ ಹೊರಕ್ಕೆಳೆಯಲಾರಂಭಿಸಿದ. ಆದರೂ ಹಕುಇನ್‌ ಮುಂದುವರಿಸಿದ: ಓ. ಹಾಗಾದರೆ ನಿನ್ ಹತ್ತಿರ ಒಂದು ಖಡ್ಗವೂ ಇದೆ! ನಿನ್ನ ಆಯುಧ ನನ್ನ ತಲೆಯನ್ನು ಕತ್ತರಿಸಲಾಗದಷ್ಟು ಮೊಂಡಾಗಿದೆ.

ನೊಬುಶಿಗೆ ಖಡ್ಗವನ್ನು ಪೂರ್ತಿಯಾಗಿ ಹೊರಕ್ಕೆಳೆದಾಗ ಹಕುಇನ್‌ ಹೇಳಿದ: ಯಾರಲ್ಲಿ, ನರಕದ ಮಹಾದ್ವಾರವನ್ನು ತೆರೆಯಿರಿ.

ಈ ಪದಗಳನ್ನು ಕೇಳಿದ ಸ್ಯಾಮುರೈ ಗುರುವಿನ ಸಂಯಮ ಮತ್ತು ಶಿಸ್ತನ್ನು ಗ್ರಹಿಸಿ, ಖಡ್ಗವನ್ನು ಪುನಃ ಒರೆಯೊಳಕ್ಕೆ ತಳ್ಳಿದ.

ಆಗ ಹಕುಇನ್ ಇಂತೆಂದ:ಯಾರಲ್ಲಿ, ಸ್ವರ್ಗದ ಮಹಾದ್ವಾರವನ್ನು ತೆರೆಯಿರಿ.

ಝೆನ್‌ (Zen) ಕತೆ ೬೫. ಮಾನವೀಯತೆಯ ಸಿಪಾಯಿಗಳು

ಒಮ್ಮೆ ಜಪಾನೀ ಸೈನ್ಯದ ತುಕಡಿಯೊಂದು ಕೃತ್ರಿಮ ಯುದ್ಧದಲ್ಲಿ ತೊಡಗಿಸಿಕೊಂಡಿತ್ತು. ಆ ತುಕಡಿಯ ಕೆಲ ಅಧಿಕಾರಿಗಳಿಗೆ ಗಾಸನ್‌ನ ದೇವಾಲಯದಲ್ಲಿ ತಮ್ಮ ಪ್ರಧಾನ ಕಚೇರಿ ಸ್ಥಾಪಿಸಿಕೊಳ್ಳುವುದು ಅಗತ್ಯ ಅನ್ನಿಸಿತು.

ಗಾಸನ್‌ ತನ್ನ ಅಡುಗೆಯವನಿಗೆ ಇಂತೆಂದ: ನಾವು ತಿನ್ನುವ ಸರಳ ಆಹಾರವನ್ನೇ ಅಧಿಕಾರಿಗಳಿಗೂ ಕೊಡಬೇಕು.

ಗೌರವದ ಉಟೋಪಚಾರ ರೂಢಿಯಾಗಿದ್ದ ಸೈನ್ಯದವರಿಗೆ ಇದರಿಂದ ಕೋಪ ಬಂದಿತು. ಅವರ ಪೈಕಿ ಒಬ್ಬ ಗಾಸನ್‌ ಬಳಿ ಬಂದು ಇಂತೆಂದ: ನಾವು ಯಾರೆಂದು ನೀನು ತಿಳಿದಿರುವೆ? ನಾವು ಸೈನಿಕರು, ನಮ್ಮ ದೇಶಕ್ಕಾಗಿ ನಮ್ಮ ಜೀವವನ್ನೇ ತ್ಯಾಗ ಮಾಡುವವರು. ಅಂಥವರಿಗೆ ತಕ್ಕುದಾದ ರೀತಿಯಲ್ಲಿ ನಮ್ಮನ್ನು ನೀನು ಏಕೆ ಉಪಚರಿಸಬಾರದು?

ನಿರ್ದಾಕ್ಷಿಣ್ಯದ ಗಡಸು ಧ್ವನಿಯಲ್ಲಿ ಗಾಸನ್‌ ಉತ್ತರಿಸಿದ: ನಾವು ಯಾರೆಂದು ನೀನು ತಿಳಿದಿರುವೆ? ಇಂದ್ರಿಯ ಗ್ರಹಣ ಸಾಮರ್ಥ್ಯ ಉಳ್ಳ ಎಲ್ಲ ಜೀವಿಗಳನ್ನೂ ಕಾಪಾಡುವ ಮಾನವೀಯತೆಯ ಸೈನಿಕರು ನಾವು.

 

ಝೆನ್‌ (Zen) ಕತೆ ೬೬. ಸುರಂಗ

ಝೆಂಕೈ ಒಬ್ಬ ಸ್ಯಾಮುರೈನ ಮಗ. ಅವನು ಎಡೋ ನಗರಕ್ಕೆ ಪಯಣಿಸಿ ಅಲ್ಲಿ ಒಬ್ಬ ಉನ್ನತ ಅಧಿಕಾರಿಯ ಅನುಚರನಾದ. ಅಧಿಕಾರಿಯ ಪತ್ನಿಯನ್ನು ಪ್ರೇಮಿಸತೊಡಗಿ ಸಿಕ್ಕಿಹಾಕಿಕೊಂಡ. ಆತ್ಮರಕ್ಷಣೆಗಾಗಿ ಅಧಿಕಾರಿಯನ್ನು ಕೊಂದು ಪತ್ನಿಯೊಡನೆ ಓಡಿಹೋದ.

ನಂತರ ಅವರೀರ್ವರೂ ಕಳ್ಳರಾದರು. ಹೀಗಿದ್ದರೂ ಝೆಂಕೈ ರೋಸಿಹೋಗುವಷ್ಟು ಆ ಹೆಂಗಸು ದುರಾಸೆಯುಳ್ಳವಳಾಗಿದ್ದಳು. ಅಂತಿಮವಾಗಿ, ಅವಳನ್ನು ಬಿಟ್ಟು ಅತೀ ದೂರದ ಬುಝೆನ್‌ ಪ್ರಾಂತ್ಯಕ್ಕೆ ಅವನು ಪಯಣಿಸಿದ. ಅಲ್ಲಿ ಅವನು ಒಬ್ಬ ಅಲೆಮಾರಿ ಬೈರಾಗಿಯಾದ.

ಹಿಂದೆ ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ತನ್ನ ಜೀವಿತಾವಧಿಯಲ್ಲಿ ಏನಾದರೊಂದು ಒಳ್ಳೆಯ ಕಾರ್ಯ ಮಾಡಲು ನಿರ್ಧರಿಸಿದ. ಅನೇಕರು ಸಾಯಲೂ ಗಾಯಗೊಳ್ಳಲೂ ಕಾರಣವಾಗಿದ್ದ ಪರ್ವತಾಗ್ರದ ಕಡಿದಾದ ಮುಖದ ಮೇಲೆ ಇದ್ದ ಅಪಾಯಕಾರೀ ರಸ್ತೆಯೊಂದರ ಕುರಿತು ತಿಳಿದಿದ್ದ ಅವನು ಅಲ್ಲಿ ಬೆಟ್ಟದ ಮೂಲಕ ಸುರಂಗವೊಂದನ್ನು ನಿರ್ಮಿಸಲು ನಿರ್ಧರಿಸಿದ.

ಹಗಲು ಆಹಾರಕ್ಕಾಗಿ ಭಿಕ್ಷೆ ಬೇಡುತ್ತಾ ರಾತ್ರಿಯ ವೇಳೆ ಸುರಂಗ ತೋಡುವ ಕಾಯಕದಲ್ಲಿ ನಿರತನಾಗುತ್ತಿದ್ದ. ೩೦ ವರ್ಷಗಳು ಕಳೆದಾಗ ಸುರಂಗದ ಉದ್ದ ೨,೨೮೦ ಅಡಿ, ಎತ್ತರ ೨೦ ಅಡಿ ಮತ್ತು ಅಗಲ ೩೦ ಅಡಿ ಆಗಿತ್ತು. ಕೆಲಸ ಪೂರ್ಣವಾಗುವ ೨ ವರ್ಷ ಮುನ್ನ ಅವನು ಕೊಂದಿದ್ದ ಅಧಿಕಾರಿಯ ಕತ್ತಿವರಸೆಯಲ್ಲಿ ಕುಶಲಿಯಾಗಿದ್ದ ಮಗ ಝೆಂಕೈ ಇರುವ ಸ್ಥಳ ಪತ್ತೆ ಹಚ್ಚಿದ. ಪ್ರತೀಕಾರವಾಗಿ ಅವನನ್ನು ಕೊಲ್ಲಲೋಸುಗ ಅಲ್ಲಿಗೆ ಬಂದ.

ಅವನಿಗೆ ಝೆಂಕೈ ಇಂತೆಂದ: ನನ್ನ ಪ್ರಾಣವನ್ನು ನಿನಗೆ ಸ್ವ-ಇಚ್ಛೆಯಿಂದಲೇ ಕೊಡುತ್ತೇನೆ. ನನ್ನ ಕೆಲಸ ಮುಗಿಸಲು ಬಿಡು. ಅದು ಮುಗಿದ ದಿನ ನೀನು ನನ್ನನ್ನು ಕೊಲ್ಲಬಹುದು.

ಅಂತೆಯೇ ಆ ದಿನಕ್ಕಾಗಿ ಕಾದ, ಅಧಿಕಾರಿಯ ಮಗ. ಅನೇಕ ತಿಂಗಳುಗಳು ಕಳೆದವು, ಝೆಂಕೈ ಅಗೆಯುತ್ತಲೇ ಇದ್ದ. ಏನೂ ಮಾಡದೆಯೇ ಸುಮ್ಮನೆ ಇದ್ದೇ ಬಳಲಿದ ಅಧಿಕಾರಿಯ ಮಗ ಅಗೆಯುವ ಕಾರ್ಯದಲ್ಲಿ ಸಹಾಯ ಮಾಡಲಾರಂಭಿಸಿದ. ಒಂದು ವರ್ಷಕ್ಕೂ ಹೆಚ್ಚು ಕಾಲ ಸಹಾಯ ಮಾಡಿದ ನಂತರ ಝೆಂಕೈನ ಮನೋಬಲ ಮತ್ತು ಚಾರಿತ್ರ್ಯವನ್ನು ಮೆಚ್ಚಲಾರಂಭಿಸಿದ.

ಕೊನೆಗೊಂದು ದಿನ ಸುರಂಗ ಸಂಪೂರ್ಣವಾಗಿ ಸಿದ್ಧವಾಯಿತು, ಜನ ಸುರಕ್ಷಿತವಾಗಿ ಪಯಣಿಸಲು ಅದನ್ನು ಉಪಯೋಗಿಸಬಹುದಾಗಿತ್ತು.

ಆಗ ಝೆಂಕೈ ಇಂತೆಂದ: : ನನ್ನ ಕೆಲಸ ಮುಗಿಯಿತು. ಈಗ ನನ್ನ ತಲೆ ಕತ್ತರಿಸು.

ನನ್ನ ಶಿಕ್ಷಕನ ತಲೆಯನ್ನು ನಾನೆಂತು ಕತ್ತರಿಸಲಿ? ಎಂಬುದಾಗಿ ಕೇಳಿದ ಅಶ್ರುಭರಿತ ಕಣ್ಣುಗಳ ಆ ಯುವಕ.

 

ಝೆನ್‌ (Zen) ಕತೆ ೬೭. ಕಲ್ಲಿನ ಬುದ್ಧನನ್ನು ದಸ್ತಗಿರಿ ಮಾಡುವುದು

ಹತ್ತಿಯ ಮಾಲುಗಳ ೫೦ ಉರುಳೆಗಳನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿದ್ದ ವ್ಯಾಪಾರಿಯೊಬ್ಬ ಬಿಸಿಲಿನ ಬೇಗೆಯಿಂದ ಬಸವಳಿದು ಬಲು ದೊಡ್ಡ ಬುದ್ಧನ ಕಲ್ಲಿನ ಮೂರ್ತಿಯ ಕೆಳಗೆ ತೆಗೆದುಕೊಳ್ಳಲೋಸುಗ ವಿರಮಿಸಿದನು. ಅಲ್ಲಿ ಅವನಿಗೆ ನಿದ್ದೆ ಬಂದಿತು. ಎಚ್ಚರವಾದಾಗ ಅವನ ಸರಕು ಮಾಯವಾಗಿತ್ತು. ತಕ್ಷಣವೇ ಅವನು ವಿಷಯವನ್ನು ಪೋಲೀಸರಿಗೆ ತಿಳಿಸಿದನು.

ಒ-ಒಕಾ ಎಂಬ ಹೆಸರಿನ ನ್ಯಾಯಾಧೀಶನು ನ್ಯಾಯಾಲಯದಲ್ಲಿ ತನಿಖೆಯನ್ನು ಆರಂಭಿಸಿದನು. ಆ ಕಲ್ಲಿನ ಬುದ್ಧನೇ ಸರಕನ್ನು ಕದ್ದಿರಬೇಕು ಎಂಬುದಾಗಿ ನ್ಯಾಯಾಧೀಶ ತೀರ್ಮಾನಿಸಿದ. ಜನಗಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದವನು ಅವನು. ಆವನು ತನ್ನ ಪವಿತ್ರ ಕಾರ್ಯ ಮಾಡುವುದರಲ್ಲಿ ಸೋತಿದ್ದಾನೆ. ಅವನನ್ನು ದಸ್ತಗಿರಿ ಮಾಡಿ.

ಪೋಲೀಸರು ಕಲ್ಲಿನ ಬುದ್ಧನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹೊತ್ತು ತಂದರು. ನ್ಯಾಯಾಧೀಶರು ಯಾವ ರೀತಿಯ ಶಿಕ್ಷೆಯನ್ನು ವಿಧಿಸುವರೆಂಬುದನ್ನು ತಿಳಿಯುವ ಕುತೂಹಲದಿಂದ ಗದ್ದಲ ಮಾಡುತ್ತಿದ್ದ ಗುಂಪೊಂದು ವಿಗ್ರಹವನ್ನು ಹಿಂಬಾಲಿಸಿತು.

ನ್ಯಾಯಪೀಠದಲ್ಲಿ ಆಸೀನನಾದ ಒ-ಒಕಾ ಗಲಾಟೆ ಮಾಡುತ್ತಿದ್ದ ಗುಂಪಿಗೆ ಛೀಮಾರಿ ಹಾಕಿದ: ಈ ರೀತಿಯಲ್ಲಿ ನಗುತ್ತಾ ತಮಾಷೆ ಮಾಡುತ್ತಾ ನ್ಯಾಯಾಲಯದ ಮುಂದೆ ಹಾಜರಾಗಲು ನಿಮಗೆ ಏನು ಹಕ್ಕಿದೆ? ನೀವು ನ್ಯಾಯಾಲಯದ ನಿಂದನೆ ಮಾಡಿರುವಿರಿ. ನಿಮಗೆ ದಂಡ ಮತ್ತು ಸೆರೆವಾಸದ ಶಿಕ್ಷೆ ವಿಧಿಸಬಹುದು.

ಜನ ಆತುರಾತುರವಾಗಿ ಕ್ಷಮೆ ಯಾಚಿಸಿದರು. ಆದರೂ ನ್ಯಾಯಾಧೀಶರು ಇಂತು ಹೇಳಿದರು: ನಾನು ನಿಮಗೆ ದಂಡ ವಿಧಿಸಲೇಬೇಕಾಗಿದೆ. ಇನ್ನು ಮೂರು ದಿನಗಳೊಳಗೆ ಇಲ್ಲಿರುವ ಪ್ರತಿಯೊಬ್ಬರೂ ಹತ್ತಿಯ ಸರಕಿನ ತಲಾ ಒಂದು ಉರುಳೆ ತಂದದ್ದೇ ಆದರೆ ಮಾತ್ರ ನಿಮ್ಮನ್ನು ಮನ್ನಿಸುತ್ತೇನೆ. ನಾನು ಹೇಳಿದಂತೆ ಸರಕು ತರದೇ ಇರುವವರನ್ನು ದಸ್ತಗಿರಿ ಮಾಡಲಾಗುತ್ತದೆ.

ಜನ ತಂದ ಉರುಳೆಗಳ ಪೈಕಿ ಒಂದನ್ನು ತನ್ನದೆಂದು ವ್ಯಾಪಾರಿ ಬಲು ಚುರುಕಾಗಿ ಗುರುತಿಸಿದನು. ಈ ರೀತಿಯಲ್ಲಿ ಕಳ್ಳ ಬಲು ಸುಲಭವಾಗಿ ಪತ್ತೆಯಾದ. ವ್ಯಾಪರಿ  ತನ್ನ ಸರಕನ್ನು ಪುನಃ ಪಡೆದುಕೊಂಡ ಮತ್ತು ಇತರರು ತಂದಿದ್ದ ಹತ್ತಿಯ ಉರುಳೆಗಳನ್ನು ಅವರಿಗೇ ಹಿಂದಿರುಗಿಸಲಾಯಿತು

 

ಝೆನ್‌ (Zen) ಕತೆ ೬೮. ಭೂತವೊಂದರ ನಿಗ್ರಹ

ಚಿಕ್ಕ ವಯಸ್ಸಿನ ಪತ್ನಿಯೊಬ್ಬಳು ರೋಗಪೀಡಿತಳಾಗಿ ಸಾಯುವ ಹಂತ ತಲುಪಿದ್ದಳು. ಅವಳು ತನ್ನ ಪತಿಗೆ ಇಂತೆಂದಳು: ನಾನು ನಿನ್ನನ್ನು ಬಹುವಾಗಿ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಹೋಗಲು ನಾನು ಬಯಸುವುದಿಲ್ಲ. ನನ್ನ ನಂತರ ಬೇರೆ ಯಾವ ಹೆಂಗಸಿನ ಹತ್ತಿರವೂ ಹೋಗಬೇಡ. ಹಾಗೇನಾದರೂ ಹೋದರೆ ನಾನು ಭೂತವಾಗಿ ಹಿಂದಿರುಗಿ ನಿನ್ನ ಅಂತ್ಯವಿಲ್ಲದ ತೊಂದರೆಗಳಿಗೆ ಕಾರಣಳಾಗುತ್ತೇನೆ.

ಇದಾದ ನಂತರ ಅನತಿಕಾಲದಲ್ಲಿಯೇ ಆಕೆ ಸತ್ತಳು. ತದನಂತರದ ಮೊದಲ ಮೂರು ತಿಂಗಳ ಕಾಲ ಅವಳ ಇಚ್ಛೆಯನ್ನು ಪತಿ ಗೌರವಿಸಿದನಾದರೂ ಆನಂತರ ಸಂಧಿಸಿದ ಇನ್ನೊಬ್ಬ ಹೆಂಗಸನ್ನು ಪ್ರೀತಿಸಲಾರಂಭಿಸಿದ. ಅವರೀರ್ವರೂ ಮದುವೆಯಾಗಲು ನಿಶ್ಚಯಿಸಿದರು.

ನಿಶ್ಚಿತಾರ್ಥವಾದ ಕೂಡಲೆ ಪ್ರತೀ ದಿನ ರಾತ್ರಿ ಅವನಿಗೆ ಭೂತವೊಂದು ಕಾಣಿಸಿಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವುದಕ್ಕೆ ನಿಂದಿಸಲಾರಂಭಿಸಿತು. ಅದೊಂದು ಜಾಣ ಭೂತವೂ ಆಗಿತ್ತು. ಅವನ ಮತ್ತು ಅವನ ಹೊಸ ಪ್ರೇಮಿಯ ನಡುವೆ ಏನೇನು ನಡೆಯಿತೆಂಬುದನ್ನು ಯಥಾವತ್ತಾಗಿ ಹೇಳುತ್ತಿತ್ತು. ಬಾವೀ ಪತ್ನಿಗೆ ಉಡುಗೊರೆಯೊಂದನ್ನು ಅವನು ಕೊಟ್ಟಾಗಲೆಲ್ಲ ಭೂತ ಅದರ ಸವಿವರ ವರ್ಣನೆ ನೀಡುತ್ತಿತ್ತು. ಅವರ ನಡುವಿನ ಸಂಭಾಷಣೆಯನ್ನೂ ಅದು ಪುನರುಚ್ಚರಿಸುತ್ತಿತ್ತು. ತತ್ಪರಿಣಾಮವಾಗಿ ಅವನಿಗೆ ಸಿಟ್ಟು ಬರುತ್ತಿತ್ತು, ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆ ಹಳ್ಳಿಗೆ ಸಮೀಪದಲ್ಲಿ ವಾಸಿಸುತ್ತಿದ್ದ ಝೆನ್‌ ಗುರುವಿಗೆ ಸಮಸ್ಯೆಯನ್ನು ತಿಳಿಸುವಂತೆ ಯಾರೋ ಒಬ್ಬರು ಅವನಿಗೆ ಸಲಹೆ ನೀಡಿದರು. ಹತಾಶನಾಗಿದ್ದ ಆ ಬಡಪಾಯಿ ಕೊನೆಗೆ ಝೆನ್ ಗುರುವಿನ ಸಹಾಯ ಕೋರಿದ.

ಗುರು ವ್ಯಾಖ್ಯಾನಿಸಿದರು: ನಿನ್ನ ಮೊದಲಿನ ಹೆಂಡತಿ ಭೂತವಾಗಿದ್ದಾಳೆ. ನೀನು ಮಾಡುವ ಎಲ್ಲವೂ ಅವಳಿಗೆ ತಿಳಿಯುತ್ತದೆ. ನೀನೇನು ಮಾಡಿದರೂ ಹೇಳಿದರೂ ನಿನ್ನ ಪ್ರೀತಿಪಾತ್ರಳಿಗೆ ಏನು ಕೊಟ್ಟರೂ ಅವಳಿಗೆ ತಿಳಿಯುತ್ತದೆ. ಅವಳು ಬಲು ಬುದ್ಧಿವಂತ ಭೂತವಾಗಿರಬೇಕು. ನಿಜವಾಗಿಯೂ ಇಂಥ ಭೂತವನ್ನು ನೀನು ಮೆಚ್ಚಬೇಕು. ಮುಂದಿನ ಸಲ ಕಾಣಿಸಿಕೊಂಡಾಗ ಅವಳೊಂದಿಗೆ ಒಂದು ಒಪ್ಪಂದ ಮಾಡಿಕೊ. ಅವಳಿಂದ ಏನನ್ನೂ ಮುಚ್ಚಿಡಲಾಗದಷ್ಟು ನಿನ್ನ ಕುರಿತಾದ ವಿಷಯಗಳನ್ನು ಅವಳು ತಿಳಿದಿರುವಳೆಂದು ಹೇಳು. ನಿನ್ನ ಒಂದು ಪ್ರಶ್ನೆಗೆ ಅವಳು ಉತ್ತರ ಕೊಟ್ಟರೆ ನಿಶ್ಚಿತಾರ್ಥದಲ್ಲಿ ಮಾಡಿಕೊಂಡ ಒಪ್ಪಂದವನ್ನು ಮುರಿದು ಒಂಟಿಯಾಗಿಯೇ ಉಳಿಯುವುದಾಗಿ ಆಶ್ವಾಸನೆ ಕೊಡು

ನಾನು ಅವಳನ್ನು ಕೇಳಬೇಕಾದ ಪ್ರಶ್ನೆ ಏನು? ಕೇಳಿದನಾತ.

ಗುರು ಹೇಳಿದರು: ಎಣಿಸದೆಯೇ ಒಂದು ಮುಷ್ಟಿ ತುಂಬ ಸೋಯಾ ಅವರೆ ಕಾಳುಗಳನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಎಷ್ಟು ಸೋಯಾ ಅವರೆ ಕಾಳುಗಳು ಇವೆಯೆಂದು ಕೇಳು. ಅವಳು ಹೇಳಲಿಲ್ಲ ಎಂದಾದರೆ ಆ ಭೂತವು ನಿನ್ನ ಕಲ್ಪನೆಯ ಪರಿಣಾಮ ಎಂಬುದು ನಿನಗೆ ತಿಳಿಯುತ್ತದೆ. ತದನಂತರ ಅದು ನಿನಗೆಂದೂ ತೊಂದರೆ ಕೊಡುವುದಿಲ್ಲ.

ಮಾರನೆಯ ರಾತ್ರಿ ಭೂತ ಕಾಣಿಸಿಕೊಂಡಾಗ ಅವನು ಅದನ್ನು ತುಂಬ ಹೊಗಳಿ ಅವಳಿಗೆ ಎಲ್ಲವೂ ತಿಳಿದಿದೆ ಎಂಬುದಾಗಿ ಹೇಳಿದ.

ಹೌದು. ನೀನು ಇವತ್ತು ಝೆನ್‌ ಗುರುವನ್ನು ನೋಡಲು ಹೋದದ್ದೂ ನನಗೆ ಗೊತ್ತಿದೆ, ಹೇಳಿತು ಭೂತ.

ನಿನಗೆ ಇಷ್ಟೆಲ್ಲ ವಿಷಯ ತಿಳಿದಿದೆ, ಅಂದ ಮೇಲೆ ನನ್ನ ಈ ಮುಷ್ಟಿಯಲ್ಲಿ ಎಷ್ಟು ಸೋಯಾ ಅವರೆ ಕಾಳುಗಳಿವೆ? ಹೇಳು ನೋಡೋಣ ಸವಾಲು ಹಾಕಿದ ಆತ.

ಆ ಸವಾಲಿಗೆ ಉತ್ತರ ನೀಡಲು ಅಲ್ಲಿ ಯಾವ ಭೂತವೂ ಇರಲಿಲ್ಲ.

 

ಝೆನ್‌ (Zen) ಕತೆ ೬೯. ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು

ಚೀನೀ ಝೆನ್‌ ಗುರು ಸೋಝನ್‌ಅನ್ನು ವಿದ್ಯಾರ್ಥಿಯೊಬ್ಬ ಕೇಳಿದ: ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದು?

ಗುರು ಉತ್ತರಿಸಿದ: ಸತ್ತ ಬೆಕ್ಕಿನ ತಲೆ.

ವಿದ್ಯಾರ್ಥಿ ವಿಚಾರಿಸಿದ: ಸತ್ತ ಬೆಕ್ಕಿನ ತಲೆ ಏಕೆ ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು?

ಸೋಝನ್ ಉತ್ತರಿಸಿದ: ಏಕೆಂದರೆ ಅದರ ಬೆಲೆ ಎಷ್ಟೆಂಬುದನ್ನು ಯಾರೂ ಹೇಳಲಾರರು.

 

ಝೆನ್‌ (Zen) ಕತೆ ೭೦. ಮೌನವಾಗಿರಲು ಕಲಿಯುವುದು

ಜಪಾನಿಗೆ ಝೆನ್‌ ಬರುವುದಕ್ಕೆ ಮುನ್ನವೇ ಬೌದ್ಧಮತದ ಟೆಂಡೈ ಶಾಖೆಯ ವಿದ್ಯಾರ್ಥಿಗಳು ಧ್ಯಾನ ಮಾಡುವುದನ್ನು ಅಭ್ಯಸಿಸುತ್ತಿದ್ದರು. ಅವರ ಪೈಕಿ ನಾಲ್ಕು ಮಂದಿ ಆತ್ಮೀಯ ಮಿತ್ರರು ಏಳು ದಿನ ಮೌನವಾಗಿರಲು ನಿರ್ಧರಿಸಿದರು.

ಮೊದಲನೆಯ ದಿನ ಎಲ್ಲರೂ ಮೌನವಾಗಿದ್ದರು. ಅವರ ಧ್ಯಾನವೂ ಮಂಗಳಕರವಾಗಿಯೇ ಆರಂಭವಾಯಿತು. ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆಯೇ ಎಣ್ಣೆ ದೀಪಗಳ ಬೆಳಕು ಕ್ಷೀಣವಾಗತೊಡಗಿತು. ವಿದ್ಯಾರ್ಥಿಗಳ ಪೈಕಿ ಒಬ್ಬ ತಡೆಯಲಾಗದೆ ಸೇವಕನೊಬ್ಬನಿಗೆ ಹೇಳಿದ: ದೀಪಗಳನ್ನು ಸರಿ ಮಾಡು.

ಮೊದಲನೆಯ ವಿದ್ಯಾರ್ಥಿ ಮಾತನಾಡಿದ್ದನ್ನು ಕೇಳಿ ಎರಡನೆಯವನಿಗೆ ಆಶ್ಚರ್ಯವಾಯಿತು. ನಾವು ಒಂದು ಪದವನ್ನೂ ಮಾತನಾಡುವಂತಿಲ್ಲ ಎಂಬುದಾಗಿ ಅವನು ಉದ್ಗರಿಸಿದ.

ನೀವಿಬ್ಬರೂ ಮೂರ್ಖರು. ನೀವೇಕೆ ಮಾತನಾಡಿದಿರಿ? ಕೇಳಿದ ಮೂರನೆಯವನು.

ನಾನೊಬ್ಬ ಮಾತ್ರ ಮಾತನಾಡಲಿಲ್ಲ ಎಂಬುದಾಗಿ ಘೋಷಿಸಿದ ನಾಲ್ಕನೆಯವನು.

 

ಝೆನ್‌ (Zen) ಕತೆ ೭೧. ನಿಜವಾದ ಅಭ್ಯುದಯ

 

ತನ್ನ ಕುಟುಂಬದ ಅಭ್ಯುದಯವು ಒಂದೇ ರೀತಿಯಲ್ಲಿ ಮುಂದುವರಿಯುವಂತೆ ಮಾಡುವುದಕ್ಕಾಗಿ ಏನನ್ನಾದರೂ ಬರೆದು ಕೊಡುವಂತೆ ಒಬ್ಬ ಶ್ರೀಮಂತ ಸೆಂಗೈ ಅನ್ನು ಕೇಳಿದ.  ಅದನ್ನು ಅತ್ಯಮೂಲ್ಯವಾದದ್ದು ಎಂಬುದಾಗಿ ಪರಿಗಣಿಸಿ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವಂಥದ್ದು ಆಗಿರಬೇಕು ಎಂಬುದೂ ಅವನ ಬಯಕೆಯಾಗಿತ್ತು.

ಕಾಗದದ ಒಂದು ದೊಡ್ಡ ಹಾಳೆಯನ್ನು ಪಡೆದು ಸೆಂಗೈ ಅದರಲ್ಲಿ ಇಂತು ಬರೆದ: ಅಪ್ಪ ಸಾಯುತ್ತಾನೆ, ಮಗ ಸಾಯುತ್ತಾನೆ, ಮೊಮ್ಮಗ ಸಾಯುತ್ತಾನೆ.

ಶ್ರೀಮಂತನಿಗೆ ಕೋಪ ಬಂದಿತು. ನನ್ನ ಕುಟುಂಬದ ಸಂತೋಷಕ್ಕಾಗಿ ಏನನ್ನಾದರೂ ಬರೆಯಲು ನಾನು ಹೇಳಿದೆ! ಅದನ್ನು ಹೀಗೆ ತಮಾಷೆ ಮಾಡುವುದೇ?

ತಮಾಷೆ ಮಾಡುವ ಉದ್ದೇಶ ನನ್ನದಲ್ಲ, ವಿವರಿಸಿದ ಸೆಂಗೈ. ನಿನಗಿಂತ ಮೊದಲೇ ನಿನ್ನ ಮಗ ಸತ್ತರೆ ಅದು ನಿನಗೆ ಅತೀವ ದುಃಖ ಉಂಟು ಮಾಡುತ್ತದೆ. ನಿನ್ನ ಮೊಮ್ಮಗ ನಿನ್ನ ಮಗನಿಗಿಂತ ಮೊದಲೇ ಸತ್ತರೆ ನಿಮಗಿಬ್ಬರಿಗೂ ಮಹಾದುಃಖವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಒಂದು ಪೀಳಿಗೆಯ ನಂತರ ಇನ್ನೊಂದು ಪೀಳಿಗೆ ನಾನು ಬರೆದ ಕ್ರಮದಲ್ಲಿಯೇ ಸತ್ತರೆ ಆಗ ಸ್ವಾಭಾವಿಕ ಮಾರ್ಗದಲ್ಲಿ

ಜೀವನ ಮುಂದುವರಿದಂತೆ ಆಗುತ್ತದೆ.  ಇದನ್ನು ನಾನು ನಿಜವಾದ ಅಭ್ಯುದಯ ಎಂಬುದಾಗಿ ಕರೆಯುತ್ತೇನೆ.

 

ಝೆನ್‌ (Zen) ಕತೆ ೭೨. ಚೀನೀ ಕವಿತೆಯನ್ನು ಬರೆಯುವುದು ಹೇಗೆ

ಚೀನೀ ಕವಿತೆಯನ್ನು ಬರೆಯುವುದು ಹೇಗೆ ಎಂಬುದಾಗಿ ಸುವಿಖ್ಯಾತ ಜಪಾನೀ ಕವಿಯೊಬ್ಬನನ್ನು ಯಾರೋ ಕೇಳಿದರು.

ಸಾಮಾನ್ಯವಾಗೀ ಚೀನಿ ಪದ್ಯದಲ್ಲಿ ನಾಲ್ಕು ಪಂಕ್ತಿಗಳಿರುತ್ತವೆ, ಆತ ವಿವರಿಸಿದ. ವಿಷಯ ಪ್ರತಿಪಾದನೆಯ ಮೊದಲನೇ ಮಜಲು ಒಂದನೇ ಸಾಲಿನಲ್ಲಿ ಇರುತ್ತದೆ; ಆ ಮಜಲಿನ ಮುಂದುವರಿದ ಭಾಗವಾಗಿರುತ್ತದೆ ಎರಡನೇ ಸಾಲು; ಮೂರನೇ ಸಾಲು ಆ ವಿಷಯವನ್ನು ಬಿಟ್ಟು ಬೇರೆ ಒಂದನ್ನು ಆರಂಭಿಸುತ್ತದೆ; ಮತ್ತು ನಾಲ್ಕನೇ ಸಾಲು ಮೊದಲಿನ ಮೂರು ಸಾಲುಗಳನ್ನು ಒಗ್ಗೂಡಿಸುತ್ತದೆ. ಈ ಜನಪ್ರಿಯ ಜಪಾನೀ ಹಾಡು ಇದನ್ನು ವಿಶದೀಕರಿಸುತ್ತದೆ:

ರೇಷ್ಮೆ ವ್ಯಾಪಾರಿಯೊಬ್ಬನ ಹೆಣ್ಣುಮಕ್ಕಳಿಬ್ಬರು ವಾಸಿಸುತ್ತಿದ್ದಾರೆ ಕ್ಯೋಟೋದಲ್ಲಿ.

ಹಿರಿಯವಳಿಗೆ ಇಪ್ಪತ್ತು, ಕಿರಿಯವಳಿಗೆ ಹದಿನೆಂಟು.

ಸೈನಿಕನೊಬ್ಬ ತನ್ನ ಖಡ್ಗದಿಂದ ಕೊಲ್ಲಬಲ್ಲ.

ಈ ಹುಡುಗಿಯರಾದರೋ ಪುರುಷರನ್ನು ಕೊಲ್ಲುತ್ತಾರೆ ತಮ್ಮ ಕಣ್ಣುಗಳಿಂದ.

 

ಝೆನ್‌ (Zen) ಕತೆ ೭೩. ಝೆನ್‌ನ ಒಂದು ಸ್ವರ

ಕಕುಆ ಚಕ್ರವರ್ತಿಯನ್ನು ಭೇಟಿಯಾದ ನಂತರ ಕಣ್ಮರೆಯಾದ ಮತ್ತು ಅವನಿಗೇನಾಯಿತು ಎಂಬುದು ಯಾರಿಗೂ ತಿಳಿಯಲಿಲ್ಲ. ಚೀನಾದಲ್ಲಿ ಅಧ್ಯಯನ ಮಾಡಿದ ಜಪಾನೀಯರ ಪೈಕಿ ಅವನೇ ಮೊದಲನೆಯವನು. ಆದರೂ ತಾನು ಕಲಿತದ್ದರಲ್ಲಿ ಒಂದು ಸ್ವರವನ್ನು ಹೊರತುಪಡಿಸಿದರೆ ಬೇರೇನನ್ನೂ ಆತ ಪ್ರದರ್ಶಿಸದೇ ಇದ್ದದ್ದರಿಂದ ತನ್ನ ದೇಶಕ್ಕೆ ಝೆನ್‌ ತಂದದ್ದಕ್ಕಾಗಿ ಆತನ ಹೆಸರನ್ನು ಯಾರೂ ಸ್ಮರಿಸಿಕೊಳ್ಳುವುದಿಲ್ಲ.

ಕಕುಆ ಚೀನಾಕ್ಕೆ ಭೇಟಿ ನೀಡಿ ನಿಜವಾದ ಬೋಧನೆಯನ್ನು ಸ್ವೀಕರಿಸಿದ. ಅಲ್ಲಿ ಇದ್ದಾಗ ಅವನು ಬೇರೆಬೇರೆ ಸ್ಥಳಗಳಿಗೆ ಪ್ರಯಾಣ ಮಾಡಲಿಲ್ಲ. ಸದಾ ಧ್ಯಾನ ಮಾಡುತ್ತಾ ಒಂದು ಪರ್ವತದ ಯಾವುದೋ ದೂರದ ಮೂಲೆಯಲ್ಲಿ ವಾಸಿಸುತ್ತಿದ್ದ. ಯಾವಾಗಲಾದರೂ ಯಾರಾದರೂ ಅವನನ್ನು ಕಂಡು ಏನಾದರೂ ಉಪದೇಶ ಮಾಡಿ ಎಂಬುದಾಗಿ ಕೇಳಿಕೊಂಡಾಗ ಕೆಲವೇ ಕೆಲವು ಪದಗಳನ್ನು ಹೇಳುತ್ತಿದ್ದ. ತದನಂತರ ಪರ್ವತದಲ್ಲಿ ಜನರಿಗೆ ಸುಲಭಗೋಚರನಾಗದಂಥ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗುತ್ತಿದ್ದ.

ಅವನು ಜಪಾನಿಗೆ ಹಿಂದಿರುಗಿದ ನಂತರ ಚಕ್ರವರ್ತಿಗೆ ಅವನ ವಿಷಯ ತಿಳಿದು, ತನ್ನ ಮತ್ತು ತನ್ನ ಪ್ರಜೆಗಳ ಆತ್ಮೋನ್ನತಿಗಾಗಿ ಝೆನ್ ಬೋಧಿಸುವಂತೆ ಕೇಳಿಕೊಂಡ.

 

ಚಕ್ರವರ್ತಿಯ ಮುಂದೆ ಕಕುಆ ತುಸು ಸಮಯ ಮೌನವಾಗಿ ನಿಂತಿದ್ದ. ತನ್ನ ಉದ್ದವಾದ ಮೇಲಂಗಿಯ ಮಡಿಕೆಯೊಳಗಿಂದ ಒಂದು ಕೊಳಲನ್ನು ಹೊರತೆಗೆದು ಒಂದು ಸ್ವರವನ್ನು ಅತ್ಯಲ್ಪ ಕಾಲ ಊದಿದ. ತದನಂತರ ವಿನಯದಿಂದ ತಲೆಬಾಗಿ ವಂದಿಸಿ, ಹೊರನಡೆದು ಕಣ್ಮರೆಯಾದ.

 

ಝೆನ್‌ (Zen) ಕತೆ ೭೪. ಮಹಾಪ್ರಭುವಿನ ಮಕ್ಕಳು

ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ.

ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು.

ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು.

ಹೊಸ ಉಡುಪುಗಳು ಏನಾದವು ಯಾಕಾಓಮ? ಕೇಳಿದನು ಚಕ್ರವರ್ತಿ.             

ಮಹಾಪ್ರಭುಗಳ ಮಕ್ಕಳಿಗೆ ನಾನು ಉಡುಪುಗಳನ್ನು ಪೂರೈಸಿದೆ ಯಾಮಾಓಕ ವಿವರಿಸಿದ.

 

ಝೆನ್‌ (Zen) ಕತೆ ೭೫. ಮೂರು ತರಹದ ಶಿಷ್ಯರು

ಗೆಟ್ಟನ್ ಎಂಬ ಹೆಸರಿನ ಝೆನ್‌ ಗುರುವೊಬ್ಬ ಟೋಕುಗವಾ ಕಾಲದ ಉತ್ತರಾರ್ಧದಲ್ಲಿ ಇದ್ದ. ಅವನು ಯಾವಾಗಲೂ ಇಂತು ಹೇಳುತ್ತಿದ್ದ: ಮೂರು ತರಹದ ಶಿಷ್ಯರು ಇರುತ್ತಾರೆ: ಇತರರಿಗೆ ಝೆನ್‌ ತಿಳಿಸುವವರು, ದೇವಾಲಯಗಳನ್ನೂ ಪೂಜಾಸ್ಥಳಗಳನ್ನೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವವರು ಮತ್ತು ಅಕ್ಕಿ ಚೀಲಗಳು ಹಾಗೂ ಬಟ್ಟೆ ತೂಗುಹಾಕಲು ಉಪಯೋಗಿಸುವ ಸಾಧನಗಳು.


ಗಾಸನ್‌ ಹೆಚ್ಚುಕಮ್ಮಿ ಇದೇ ಅಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದಾನೆ. ಅವನು ಟೆಕುಸುಯ್‌ ಮಾರ್ಗದರ್ಶನದಲ್ಲಿ ಅಧ್ಯಯಿಸುತ್ತಿದ್ದಾಗ ಅವಮ ಗುರು ಬಲು ಕಠಿನ ಶಿಸ್ತಿನವನಾಗಿದ್ದ. ಕೆಲವೊಮ್ಮೆ ಅವನನ್ನು ಗುರು ಹೊಡೆದದ್ದೂ ಉಂಟು. ಈ ತೆರನಾದ ಬೋಧನೆಯನ್ನು ಸಹಿಸಿಕೊಳ್ಳಲಾಗದ ಇತರ ವಿದ್ಯಾರ್ಥಿಗಳು ಬಿಟ್ಟು ಹೋದರು. ಗಾಸನ್‌ ಇಂತು ಹೇಳುತ್ತಾ ಅಲ್ಲಿಯೇ ಇದ್ದ: ಒಬ್ಬ ಸತ್ವಹೀನ ವಿದ್ಯಾರ್ಥಿ ಅಧ್ಯಾಪಕನ ಪ್ರಭಾವವನ್ನು ಉಪಯೋಗಿಸಿಕೊಳ್ಳುತ್ತಾನೆ. ಮಧ್ಯಮಗುಣದ ವಿದ್ಯಾರ್ಥಿ ಅಧ್ಯಾಪಕನ ಕಾರುಣ್ಯವನ್ನು ಮೆಚ್ಚಿಕೊಳ್ಳುತ್ತಾನೆ. ಒಬ್ಬ ಒಳ್ಳೆಯ ವಿದ್ಯಾರ್ಥಿ ಅಧ್ಯಾಪಕನ ಶಿಸ್ತಿನಿಂದಾಗಿ ಸದೃಢನಾಗಿ ಬೆಳೆಯುತ್ತಾನೆ.

No comments: