೨.೬ ಜೂನ್
ತಾರಾ ಪಟ ೧. ವಾಸ್ತವಿಕ
ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ
ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ
ಸೀಮಾರೇಖೆ ಮತ್ತು
ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು
ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ
ತಾರಾ ಪಟ ೪. ರಾಶಿಚಕ್ರ
ವೀಕ್ಷಣಾ ಮಾರ್ಗದರ್ಶಿ
ಜೂನ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಖಮಧ್ಯದ ಸಮೀಪದಲ್ಲಿ ತುಸು
ಪೂರ್ವಕ್ಕೆ ಉಜ್ವಲ ತಾರೆಯೊಂದು ನಿಮ್ಮ ಗಮನ ಸೆಳೆಯುತ್ತದೆ. ಇದು ಸ್ವಾತೀ ‘ನಕ್ಷತ್ರ’ ಎಂದು
ಗುರುತಿಸಲಾಗುತ್ತಿರುವ ತಾರೆ. ಇದು ಸಹದೇವ ರಾಶಿಯ ಸದಸ್ಯ ತಾರೆ. ಪಶ್ಚಿಮ ದಿಗ್ಬಿಂದುವಿನಿಂದ
ತುಸು ಮೇಲೆ ಇನ್ನೊಂದು ಉಜ್ವಲ ತಾರೆ ನಿಮ್ಮ ಗಮನ ಸೆಳೆಯುತ್ತದೆ. ಇದು ಲಘುಶ್ವಾನ ರಾಶಿಯ
ಪೂರ್ವಶ್ವಾನ ತಾರೆ, ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ
ಮುಂದುವರಿಸಿ.
ಹಂತ ೧: ಜನವರಿ
ಮಾರ್ಗದರ್ಶಿಯ ಹಂತ ೧ ರಲ್ಲಿ
ವಿವರಿಸಿದ ಮಿಥುನವನ್ನೂ ೩ ರಲ್ಲಿ
ವಿವರಿಸಿದ ಮಾರ್ಜಾಲ, ಲಘುಶ್ವಾನ ಮತ್ತು ಕರ್ಕಟಕ ರಾಶಿಗಳನ್ನು ವೀಕ್ಷಿಸಿ. ಇವೆರಡೂ ಪಶ್ಚಿಮ ದಿಗಂತವನ್ನು ಸಮೀಪಿಸಿವೆ.
ಹಂತ ೨: ಮಾಡಬೇಕಾದ ವೀಕ್ಷಣೆಗಳು ಇವು:
* ಮೊದಲು ಫೆಬ್ರವರಿ
ಮಾರ್ಗದರ್ಶಿಯ ಹಂತ ೫ ಮತ್ತು ೬ ರಲ್ಲಿ ವಿವರಿಸಿದಂತೆ ಸಿಂಹ ಮತ್ತು ಲಘುಸಿಂಹ ರಾಶಿಗಳನ್ನೂ ಸಪ್ತರ್ಷಿಮಂಡಲ
ಮತ್ತು ಷಷ್ಟಕ ರಾಶಿಗಳನ್ನೂ ಗುರುತಿಸಿ.
* ತದನಂತರ ಮಾರ್ಚ್
ಮಾರ್ಗದರ್ಶಿ ಹಂತ ೪ ರಲ್ಲಿ
ವಿವರಿಸಿದಂತೆ ಕಂದರ, ಕೃಷ್ಣವೇಣಿ ಮತ್ತು ಕಾಳಭೈರವ ರಾಶಿಗಳನ್ನು ಗುರುತಿಸಿ.
* ಏಪ್ರಿಲ್ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದಂತೆ ಕನ್ಯಾ ರಾಶಿಯನ್ನೂ ಹಂತ ೨ ರಲ್ಲಿ ವಿವರಿಸಿದ ಅಜಗರ ರಾಶಿಯನ್ನೂ ಗುರುತಿಸಿ.
ವಿವರಣೆಯ ಅಂತ್ಯದಲ್ಲಿ ಇರುವ ಅಜಗರದ ಸುತ್ತಣ ರಾಶಿಗಳ ಪಟ್ಟಿ ಅದನ್ನು ಗುರುತಿಸಲು
ನೆರವಾಗುತ್ತದೆ.
* ಈಗ ಸಪ್ತರ್ಷಿಮಂಡಲದ ನೆರವಿನಿಂದ ಧ್ರುವ ತಾರೆ
ಗುರುತಿಸಿದ ಬಳಿಕ ಮಾರ್ಚ್
ತಿಂಗಳಿನ ಮಾರ್ಗದರ್ಶಿಯ ಹಂತ ೧ ರಲ್ಲಿ ವಿವರಿಸಿದ ಲಘುಸಪ್ತರ್ಷಿ ರಾಶಿಯನ್ನು ಗುರುತಿಸಿ.
ಹಂತ ೩: ಈ ತಿಂಗಳು ಉದಯಿಸಿರುವ ರಾಶಿಗಳನ್ನು ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.
ತುಲಾ ರಾಶಿಯ ಪಶ್ಚಿಮಕ್ಕೆ, ಅರ್ಥಾತ್
ಆಗ್ನೇಯ ದಿಗಂತಕ್ಕಿಂತ ತುಸು ಮೇಲಿರುವ ಬಹು ಉಜ್ವಲ ತಾರಾ ಶೋಭಿತ ವೃಶ್ಚಿಕ ರಾಶಿಯನ್ನು (೬೭. ಸ್ಕಾರ್ಪಿಯೋ, ವಿಸ್ತೀರ್ಣ
೪೯೬.೭೮೩ ಚ ಡಿಗ್ರಿ) ವೀಕ್ಷಿಸಿ. ಈ ರಾಶಿಯ ಉಜ್ವಲ ತಾರೆಗಳ ಪೈಕಿ ಪ್ರಮುಖವಾದವು ಇವು: (೧) α ವೃಶ್ಚಿಕ (ಆಂಟೇರೀಜ್, ಜ್ಯೇಷ್ಠಾ, ತೋಉ ೧.೦೭, ದೂರ ೪೬೬ ಜ್ಯೋವ), (೨)
λ ವೃಶ್ಚಿಕ (ಶೌಲಾ, ಷಾಬ, ಮೂಲಾ, ತೋ ಉ ೧.೬೨, ದೂರ ೭೨೩ ಜ್ಯೋವ), (೩)
θ ವೃಶ್ಚಿಕ (ತೋಉ ೧.೮೫, ದೂರ ೨೬೬ ಜ್ಯೋವ), (೪)
δ ವೃಶ್ಚಿಕ (ತೋಉ ೨.೨೯, ದೂರ ೪೦೮ ಜ್ಯೋವ), (೫)
ε ವೃಶ್ಚಿಕ (ತೋಉ ೨.೨೬, ದೂರ ೬೫ ಜ್ಯೋವ), (೬)
β೧ ವೃಶ್ಚಿಕ (ಅಕ್ರಬ್, ಜೀಬ, ಅನೂರಾಧಾ, ತೋ ಉ ೨.೬೧, ದೂರ ೫೭೧ ಜ್ಯೋವ). ಭಾರತೀಯ
ಜ್ಯೋತಿಷ್ಚಕ್ರದ ಮೂರು ‘ನಕ್ಷತ್ರ’ಗಳು ಈ ಪುಂಜದಲ್ಲಿರುವುದನ್ನು ಗಮನಿಸಿ.
ಧನು, ಉರಗಧರ, ತುಲಾ, ವೃಕ, ಚತುಷ್ಕ, ವೇದಿಕಾ, ದಕ್ಷಿಣ ಕಿರೀಟ ರಾಶಿಗಳು ವೃಶ್ಚಿಕವನ್ನು ಸುತ್ತುವರಿದಿವೆ.
ವೃಶ್ಚಿಕ ರಾಶಿಯ ನೈರುತ್ಯ ಮೂಲೆಗೆ, ಅರ್ಥಾತ್
ದಕ್ಷಿಣ ದಿಗ್ಬಿಂದುವಿಗೆ ಅಭಿಮುಖವಾಗಿ ತಾಗಿಕೊಂಡು ಚತುಷ್ಕ ರಾಶಿ (೨೨. ನಾರ್ಮ, ವಿಸ್ತೀರ್ಣ ೧೬೫.೨೯೦ ಚ ಡಿಗ್ರಿ) ಇದೆ.
(೧) γ೨ ಚತುಷ್ಕ (ತೋಉ ೪.೦೧, ದೂರ ೧೨೮
ಜ್ಯೋವ) ಮತ್ತು (೨) ε ಚತುಷ್ಕ
(ತೋಉ ೪.೫೨, ದೂರ ೪೨೬ ಜ್ಯೋವ) ಇದರ
ಪ್ರಮಖ ತಾರೆಗಳು. ಬಲು ಮಸುಕಾದ ತಾರೆಗಳಾಗಿರುವುದರಿಂದ ಇವನ್ನು ಬರಿಗಣ್ಣಿನಿಂದ ಗುರುತಿಸುವ
ಪ್ರಯತ್ನ ಮಾಡದೆಯೇ ಮುಂದುವರಿಯಿರಿ.
ವೃಶ್ಚಿಕ, ವೃಕ, ವೃತ್ತಿನೀ, ದಕ್ಷಿಣ ತ್ರಿಕೋಣಿ, ವೇದಿಕಾ
ರಾಶಿಗಳು ಚತುಷ್ಕವನ್ನು ಸುತ್ತುವರಿದಿವೆ.
ವೃಶ್ಚಿಕ ರಾಶಿಯ ನೈರುತ್ಯ ಮೂಲೆಗೆ, ಅರ್ಥಾತ್
ದಕ್ಷಿಣ ದಿಗ್ಬಿಂದುವಿಗೆ ಅಭಿಮುಖವಾಗಿ ತಾಗಿಕೊಂಡು ವೃತ್ತಿನೀ ರಾಶಿ (೬೬. ಸರ್ಸಿನಸ್, ವಿಸ್ತೀರ್ಣ ೯೩.೩೫೩ ಚ ಡಿಗ್ರಿ) ಇದೆ. ಇದರ ಪಶ್ಚಿಮಕ್ಕೆ ನೀವು ಈ ಮೊದಲೇ ಗುರುತಿಸಿದ ಕಿನ್ನರ ರಾಶಿ ಇದೆ.(೧) α ವೃತ್ತಿನೀ (ತೋಉ ೩.೧೭, ದೂರ ೫೩
ಜ್ಯೋವ), (೨) β ವೃತ್ತಿನೀ
(ತೋಉ ೪.೦೬, ದೂರ ೯೮ ಜ್ಯೋವ) ಮತ್ತು
(೩) γ ವೃತ್ತಿನೀ (ತೋಉ ೪.೬೮, ದೂರ ೪೫೬ ಜ್ಯೋವ) ಪ್ರಮುಖ
ತಾರೆಗಳು.
ಬಲು ಕ್ಷೀಣ ತಾರೆಗಳಾಗಿರುವುದರಿಂದ ಈ ರಾಶಿಯ ವಲಯವನ್ನು ಅಂದಾಜು ಮಾಡಿ
ತೃಪ್ತರಾಗಿ. ಕಿನ್ನರ, ಮಶಕ, ದೇವವಿಹಗ, ದಕ್ಷಿಣ ತ್ರಿಕೋಣಿ, ಚತುಷ್ಕ, ವೃಕ ರಾಶಿಗಳು ವೃತ್ತಿನೀಯನ್ನು ಸುತ್ತುವರಿದಿವೆ.
ದಕ್ಷಿಣ ದಿಗ್ಬಿಂದುವಿಗೆ ತಾಗಿಕೊಂಡು ದೇವವಿಹಗ ರಾಶಿ (೩೬. ಏಪಸ್, ವಿಸ್ತೀರ್ಣ ೨೦೬.೩೨೭ ಚ ಡಿಗ್ರಿ) ನಮ್ಮ ಖಗೋಳ ಭಾಗದೊಳಕ್ಕೆ ಇಣುಕುತ್ತಿರುತ್ತದೆ. ಉತ್ತರ ಅಕ್ಷಾಂಶ ಪ್ರದೇಶಗಳಲ್ಲಿ ಈ ರಾಶಿಯ ಅಥವಾ ಅದರ ಪುಂಜದ ಕ್ಷೀಣ
ತಾರೆಗಳ ದರ್ಶನ ಆಗುವುದೇ ಇಲ್ಲ. ಎಂದೇ, ಈ ರಾಶಿಯನ್ನು ನಿರ್ಲಕ್ಷಿಸಿ ಮುಂದುವರಿಯಿರಿ.
ದಕ್ಷಿಣ ತ್ರಿಕೋಣಿ, ವೃತ್ತಿನೀ, ಮಶಕ, ಚಂಚಲವರ್ಣಿಕಾ, ಅಷ್ಟಕ, ಮಯೂರ, ವೇದಿಕಾ ರಾಶಿಗಳು ದೇವವಿಹಗವನ್ನೂ ಸುತ್ತುವರಿದಿವೆ.
ಈಗ ಉತ್ತರ ದಿಕ್ಕಿನಲ್ಲಿ ಇರುವ ಲಘುಸಪ್ತರ್ಷಿ ರಾಶಿಯತ್ತ ನೋಡಿದರೆ
ಪೂರ್ಣವಾಗಿ ಉದಯಿಸಿರುವ ಸುಯೋಧನ ರಾಶಿ (೮೫. ಡ್ರೇಕೋ, ವಿಸ್ತೀರ್ಣ ೧೦೮೨.೯೫೨ ಚ ಡಿಗ್ರಿ) ಗೋಚರಿಸುತ್ತದೆ.
ಇದರ ಪ್ರಮುಖ ತಾರೆಗಳು ಇವು: (೧) γ ಸುಯೋಧನ (ತೋಉ ೨.೨೩, ದೂರ ೧೪೮ ಜ್ಯೋವ), (೨) η ಸುಯೋಧನ (ತೋಉ ೨.೭೨, ದೂರ ೮೮
ಜ್ಯೋವ), (೩) β
ಸುಯೋಧನ (ತೋಉ ೨.೭೯, ದೂರ ೩೭೬
ಜ್ಯೋವ), (೪) δ ಸುಯೋಧನ (ತೋಉ
೩.೦೭, ದೂರ ೧೦೦ ಜ್ಯೋವ), (೫) ζ ಸುಯೋಧನ (ತೋಉ ೩.೧೭, ದೂರ ೩೩೬
ಜ್ಯೋವ), (೬) ι
ಸುಯೋಧನ (ತೋಉ ೩.೩೦, ದೂರ ೧೦೨ ಜ್ಯೋವ), (೭) χ ಸುಯೋಧನ (ತೋಉ ೩.೫೬, ದೂರ ೨೬ ಜ್ಯೋವ), (೮)
α ಸುಯೋಧನ (ತೋಉ ೩.೬೪, ದೂರ ೩೧೪ ಜ್ಯೋವ), (೯) ξ ಸುಯೋಧನ (ತೋಉ ೩.೭೩, ದೂರ ೧೧೨ ಜ್ಯೋವ), (೧೦) λ ಸುಯೋಧನ (ತೋಉ ೩.೮೧, ದೂರ ೩೨೬ ಜ್ಯೋವ), (೧೧)
ε ಸುಯೋಧನ (ತೋಉ ೩.೮೮, ದೂರ ೧೪೬ ಜ್ಯೋವ), (೧೨)
κ ಸುಯೋಧನ (ತೋಉ ೩.೮೮, ದೂರ ೫೩೨ ಜ್ಯೋವ), (೧೩)
θ ಸುಯೋಧನ (ತೋಉ ೪.೦೦, ದೂರ ೬೮ ಜ್ಯೋವ). ಇವುಗಳೆಲ್ಲವನ್ನೂ
ಬರಿಗಣ್ಣಿನಿಂದ ಗುರುತಿಸುವುದು ಕಷ್ಟವಾದರೂ ರೇಖಾಚಿತ್ರದ ನೆರವಿನಿಂದ ಪ್ರಯತ್ನಿಸಿ. ಸಂಪೂರ್ಣವಾಗಿ ಅಸ್ತವಾಗದೇ ಇರುವ ರಾಶಿ ಇದು. ಸಹದೇವ, ಭೀಮ, ವೀಣಾ, ರಾಜಹಂಸ, ಯುಧಿಷ್ಠಿರ, ಲಘುಸಪ್ತರ್ಷಿ, ದೀರ್ಘಕಂಠ, ಸಪ್ತರ್ಷಿಮಂಡಲ ರಾಶಿಗಳು ಸುಯೋಧನವನ್ನು ಸುತ್ತುವರಿದಿವೆ.
ಸುಯೋಧನ ರಾಶಿಯ
γ ತಾರೆಯ ದಕ್ಷಿಣದಲ್ಲಿ ಇರುವ ಭೀಮ ರಾಶಿಯ (೪೫. ಹರ್ಕ್ಯುಲೀಸ್, ವಿಸ್ತೀರ್ಣ
೧೨೨೫.೧೪೮ ಚ ಡಿಗ್ರಿ) ತಾರೆಗಳನ್ನು ರೇಖಾಚಿತ್ರದ ನೆರವಿನಿಂದ ಗುರುತಿಸಲು ಪ್ರಯತ್ನಿಸೋಣ.
ಈ ರಾಶಿಯ ಪೂರ್ವ ದಿಕ್ಕಿನಲ್ಲಿ ಇರುವ ಉಜ್ವಲ ತಾರೆ ಬೇರೆ ರಾಶಿಯದ್ದು. ಎಂದೇ, ಈಗ ಅದನ್ನು ಬಿಟ್ಟು ಈ ರಾಶಿಯನ್ನು ವೀಕ್ಷಿಸೋಣ. ಇದರ ಪ್ರಮುಖ ತಾರೆಗಳು ಇವು: (೧) β ಭೀಮ (ತೋಉ ೨.೭೭, ದೂರ ೧೬೦ ಜ್ಯೋವ), (೨) ζ ಭೀಮ (ತೋಉ ೨.೮೪, ದೂರ ೩೫ ಜ್ಯೋವ), (೩)
δ ಭೀಮ (ತೋಉ ೩.೧೨, ದೂರ ೭೮ ಜ್ಯೋವ), (೪)
π ಭೀಮ (ತೋಉ ೩.೧೪, ದೂರ ೩೬೪ ಜ್ಯೋವ), (೫)
α೧ ಭೀಮ (ತೋಉ ೩.೩೩, ದೂರ ೩೮೩ ಜ್ಯೋವ), (೬)
μ ಭೀಮ (ತೋಉ ೩.೪೧, ದೂರ ೨೭ ಜ್ಯೋವ), (೭)
η ಭೀಮ (ತೋಉ ೩.೪೮, ದೂರ ೧೧೨ ಜ್ಯೋವ). ಈ
ತಾರೆಗಳ ಪೈಕಿ ಮೊದಲ ಎರಡನ್ನು ಗುರುತಿಸಲು ಕಷ್ಟವಾಗುವುದಿಲ್ಲ. ಭೀಮ ರಾಶಿಯನ್ನು ಸುಯೋಧನ, ಸಹದೇವ, ಉತ್ತರ ಕಿರೀಟ, ಸರ್ಪಶಿರ, ಉರಗಧರ, ಗರುಡ, ಶರ, ಶೃಗಾಲ, ವೀಣಾ ರಾಶಿಗಳು ಸುತ್ತುವರಿದಿವೆ.
ಭೀಮ ರಾಶಿಯ ಪಶ್ಚಿಮಕ್ಕೆ ಒಂದು ಉಜ್ವಲ ತಾರೆಯನ್ನು ಈಗಾಗಲೇ
ಗಮನಿಸಿದ್ದೆವೆ. ಅದೇ ವೀಣಾ ರಾಶಿಯ (೬೪. ಲೈರ, ವಿಸ್ತೀರ್ಣ ೨೮೬.೪೭೬ ಚ ಡಿಗ್ರಿ) ೧ ನೇ ತಾರೆ ಅಭಿಜಿತ್ ಯಾನೆ α
ವೀಣಾ (ವೀಗ, ತೋಉ ೦.೦೭, ದೂರ ೨೫
ಜ್ಯೋವ). ಈ ರಾಶಿಯ ಇತರ ಪ್ರಮುಖ ತಾರೆಗಳು ಇವು: (೨) γ
ವೀಣಾ (ತೋಉ ೩.೨೪, ದೂರ ೬೯೫ ಜ್ಯೋವ), (೩) β
ವೀಣಾ (ತೋಉ ೩.೬೧, ದೂರ ೮೭೦ ಜ್ಯೋವ), (೪) δ೨ ವೀಣಾ (ತೋಉ ೪.೨೯, ದೂರ ೮೪೫ ಜ್ಯೋವ), (೫) ζ೧ ವೀಣಾ (ತೋಉ ೪.೩೩, ದೂರ ೧೫೬ ಜ್ಯೋವ).
ಇವುಗಳ ಪೈಕಿ ಕೊನೆಯ ಎರಡನ್ನು ಗುರುತಿಸುವುದು ಹೆಚ್ಚುಕಮ್ಮಿ ಅಸಾಧ್ಯ, ಅವುಗಳ
ಹಿಂದಿನ ಎರಡನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟ. ಭಾರತೀಯ
ಸಂಸ್ಕೃತಿಯಲ್ಲಿ ಪ್ರಾಧಾನ್ಯ ಇರುವ ಅಭಿಜಿತ್ ತಾರೆ ಗುರುತಿಸಿದ್ದಕ್ಕಾಗಿ ಆನಂದಿಸಿ ರಾಶಿಯ
ವಲಯವನ್ನು ಅಂದಾಜು ಮಾಡಿ. ಸುಯೋಧನ, ಭೀಮ, ಶೃಗಾಲ, ರಾಜಹಂಸ ರಾಶಿಗಳು ವೀಣಾವನ್ನು ಸುತ್ತುವರಿದಿವೆ.
ಭೀಮ ರಾಶಿಯ ದಕ್ಷಿಣದ
ಅಂಚಿಗೆ ತಾಗಿಕೊಂಡು ಇರುವ ಉಜ್ವಲ ತಾರಾಯುಕ್ತ ಉರಗಧರ (೫. ಆಫೀಯೂಕಸ್, ವಿಸ್ತೀರ್ಣ ೯೪೮.೩೪೦ ಚ ಡಿಗ್ರಿ) ರಾಶಿಯನ್ನು
ಈಗ ಗಮನಿಸೋಣ. α
ಭೀಮ ತಾರೆಯೊಂದಿಗೆ ಈ ರಾಶಿಯ ತಾರೆಗಳು ರಚಿಸುವ ಆಕೃತಿಯನ್ನು ರೇಖಾಚಿತ್ರದಲ್ಲಿ ಗಮನಿಸಿ.
ರಾಶಿಯ ಪ್ರಮುಖ ತಾರೆಗಳು ಇವು: (೧) α
ಉರಗಧರ (ತೋಉ ೨.೦೮, ದೂರ ೪೭ ಜ್ಯೋವ), (೨) η ಉರಗಧರ (ತೋಉ ೨.೪೨, ದೂರ ೮೩ ಜ್ಯೋವ), (೩)
ζ ಉರಗಧರ (ತೋಉ ೨.೫೭, ದೂರ ೪೬೬ ಜ್ಯೋವ), (೪)
δ ಉರಗಧರ (ತೋಉ ೨.೭೩, ದೂರ ೧೭೨ ಜ್ಯೋವ), (೫)
β ಉರಗಧರ (ತೋಉ ೨.೭೬, ದೂರ ೮೨ ಜ್ಯೋವ), (೬) κ ಉರಗಧರ (ತೋಉ ೩.೧೯, ದೂರ ೮೬ ಜ್ಯೋವ), (೭)
ε ಉರಗಧರ (ತೋಉ ೩.೨೩, ದೂರ ೧೦೯ ಜ್ಯೋವ), (೮)
θ ಉರಗಧರ (ತೋಉ ೩.೨೫, ದೂರ ೫೬೬ ಜ್ಯೋವ), (೯)
ν ಉರಗಧರ (ತೋಉ ೩.೩೨, ದೂರ ೧೫೧ ಜ್ಯೋವ), (೧೦)
ξ ಉರಗಧರ (ತೋಉ ೪.೩೮, ದೂರ ೫೭ ಜ್ಯೋವ). ಇವುಗಳ
ಪೈಕಿ ಮೊದಲ ಐದನ್ನು ಗುರುತಿಸಲು ಕಷ್ಟವಾಗುವುದಿಲ್ಲ. ಕೊನೆಯದ್ದು
ಬಲು ಕ್ಷೀಣ ತಾರೆಯಾದ್ದರಿಂದ ಬರಿಗಣ್ಣಿನಿಂದ ಗುರುತಿಸುವುದು ಬಲು ಕಷ್ಟ. ಆಧುನಿಕ ಖಗೋಳಶಾಸ್ತ್ರವು ಮಾನ್ಯ ಮಾಡಿರುವ ರಾಶಿಚಕ್ರದಲ್ಲಿ ಉರಗಧರ
ರಾಶಿಯು ವೃಶ್ಚಿಕ ರಾಶಿಯನ್ನು ತುಸು ಜರುಗಿಸಿ ಸ್ಥಾನ ಗಿಟ್ಟಿಸಿರುವುದನ್ನು ಗಮನಿಸಿ.
ಉರಗಧರವನ್ನು ಸುತ್ತುವರಿದಿರುವ ರಾಶಿಗಳೂ ಇವು: ಭೀಮ, ಸರ್ಪಶಿರ, ತುಲಾ, ಸರ್ಪಪುಚ್ಛ, ಗರುಡ.
ಉರಗಧರ ರಾಶಿಯ ಪೂರ್ವ ಮತ್ತು ಪಶ್ಚಿಮ ಪಾರ್ಶ್ವಗಳಲ್ಲಿ ಸರ್ಪ ರಾಶಿ (೮೦. ಸರ್ಪೆನ್ಸ್, ವಿಸ್ತೀರ್ಣ
೬೩೬.೯೨೮ ಚ ಡಿಗ್ರಿ) ಎರಡು ತುಂಡುಗಳಾಗಿರುವ ವಿಚಿತ್ರವನ್ನು ಈಗ ಗಮನಿಸೋಣ. ಹಾವು ಹಿಡಿಯುವವ ಹಾವನ್ನು ಹಿಡಿದಾಗ ಅವನ ಮುಷ್ಟಿಯೊಳಗಿನ ಹಾವಿನ ದೇಹ
ಅಗೋಚರ. ಮುಷ್ಟಿಯ ಎರಡೂ ಪಾರ್ಶ್ವಗಳ ಭಾಗಗಳು ಗೋಚರ. ಈ ಕಲ್ಪನೆಯ ಬಿಂಬರೂಪ ಉರಗಧರ, ಸರ್ಪಪುಚ್ಛ
(ಸರ್ಪೆನ್ಸ್ ಕಾಡ, ವಿಸ್ತೀರ್ಣ ೨೦೮.೪೪ ಚ ಡಿಗ್ರಿ)ಮತ್ತು ಸರ್ಪಶಿರ (ಸರ್ಪೆನ್ಸ್ ಕಾಪಟ್, ವಿಸ್ತೀರ್ಣ ೪೨೮.೪೮ ಚ ಡಿಗ್ರಿ) ರಾಶಿಗಳು. ಉರಗಧರದ ಪೂರ್ವಕ್ಕೆ ಸರ್ಪಪುಚ್ಛವೂ, ಪಶ್ಚಿಮಕ್ಕೆ ಸರ್ಪಶಿರವೂ ಇದೆ, ರೇಖಾಚಿತ್ರದ
ನೆರವಿನಿಂದ ಇವೆರಡರ ಪೈಕಿ ಸರ್ಪಶಿರದಲ್ಲಿ ಇರುವ ಉಜ್ವಲ ತಾರೆ α ಸರ್ಪ (ತೋಉ ೨.೬೨, ದೂರ ೭೩
ಜ್ಯೋವ) ಗುರುತಿಸಿದ ಬಳಿಕ ಉರಗಧರ ಪರಿವಾರವನ್ನು ಅದರ ಪಾಡಿಗೆ ಬಿಟ್ಟು
ಮುಂದುವರಿಯಿರಿ. ಈ ರಾಶಿಯಲ್ಲಿ ಬರಿಗಣ್ಣಿಗೆ ಗೋಚರಿಸುವ ಉಜ್ವಲ ತಾರೆಗಳು ಇಲ್ಲದಿರುವುದೇ
ಇದಕ್ಕೆ ಕಾರಣ.
ಸರ್ಪಶಿರವನ್ನು ಉತ್ತರ ಕಿರೀಟ, ಸಹದೇವ, ಕನ್ಯಾ, ತುಲಾ, ಉರಗಧರ, ಭೀಮ ರಾಶಿಗಳೂ ಸರ್ಪಪುಚ್ಛ ರಾಶೀಯನ್ನು ಗರುಡ, ಉರಗಧರ, ಧನು, ಖೇಟಕ ರಾಶಿಗಳೂ ಸುತ್ತುವರಿದಿವೆ.
ಸಿಂಹಾವಲೋಕನ
ಜೂನ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ
ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ
ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.
No comments:
Post a Comment