೨.೪ ಏಪ್ರಿಲ್
ತಾರಾ ಪಟ ೧. ವಾಸ್ತವಿಕ
ತಾರಾ ಪಟ ೨. ತಾರಾಪುಂಜಗಳ
ಕಾಲ್ಪನಿಕ ರೇಖಾಚಿತ್ರ ಸಹಿತ
ತಾರಾ ಪಟ ೩. ತಾರಾಪುಂಜಗಳ
ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು ಅಕರಾದಿಯಾಗಿ
ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ
ತಾರಾ ಪಟ ೪. ರಾಶಿಚಕ್ರ
ವೀಕ್ಷಣಾ ಮಾರ್ಗದರ್ಶಿ
ಏಪ್ರಿಲ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ
ಸ್ಥಳದಲ್ಲಿ ಖಮಧ್ಯದಿಂದ ಪಶ್ಚಿಮ ದಿಗಂತದತ್ತ ಒಮ್ಮೆ ನಿಧಾನವಾಗಿ ನೋಡಿದಾಗ ಖಮಧ್ಯಕ್ಕೂ ಪಶ್ಚಿಮ
ದಿಗ್ಬಿಂದುವಿಗೂ ನಡುವೆ ವಿಶಿಷ್ಟ, ವಿಚಿತ್ರ ಜ್ಯಾಮಿತೀಯ ಆಕಾರದಿಂದಲೂ ಸದಸ್ಯ ತಾರೆಗಳ ಉಜ್ವಲ ಪ್ರಭೆಯಿಂದಲೂ
ರಾರಾಜಿಸುತ್ತಿರುವ ಮೂರು ಏಕರೇಖಾಗತ ಸಮೋಜ್ವಲ ತಾರೆಗಳು ನಿಮ್ಮ ಗಮನ ಸೆಳೆಯುತ್ತದೆ. ಇವು ಮಹಾವ್ಯಾಧ ರಾಶಿಯ ಸದಸ್ಯ ತಾರೆಗಳು. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ
ಮುಂದುವರಿಸಿ.
ಹಂತ ೧: ಜನವರಿ
ತಿಂಗಳಿನ ಮಾರ್ಗದರ್ಶಿಯ ಹಂತ ೧
ರಲ್ಲಿ ವಿವರಿಸಿದಂತೆ ಮಹಾವ್ಯಾಧ, ಮಿಥುನ, ವೃಷಭ, ಶಶ ಮತ್ತು ಏಕಶೃಂಗಿ ರಾಶಿಗಳನ್ನು ವೀಕ್ಷಿಸಿ. ವೈತರಿಣೀ ರಾಶಿಯ ಬಹು ಭಾಗ ಅಸ್ತವಾಗಿದೆ. ಜನವರಿ ತಿಂಗಳಿನ
ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದಂತೆ ಮಹಾಶ್ವಾನ ಮತ್ತು ಕಪೋತ ರಾಶಿಗಳನ್ನೂ ಫೆಬ್ರವರಿ ಮಾರ್ಗದರ್ಶಿಯ
ಹಂತ ೨ ರಲ್ಲಿ ವಿವರಿಸಿದಂತೆ ನೌಕಾಪೃಷ್ಠ
ರಾಶಿಯನ್ನೂ ಗುರುತಿಸಿ. ಜನವರಿ ತಿಂಗಳಿನ
ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದಂತೆ ಮಾರ್ಜಾಲ, ವಿಜಯಸಾರಥಿ, ಲಘುಶ್ವಾನ ಮತ್ತು ಕರ್ಕಟಕ ರಾಶಿಗಳನ್ನು ವೀಕ್ಷಿಸಿ. ಜನವರಿ ತಿಂಗಳಿನ
ಮಾರ್ಗದರ್ಶಿಯ ಹಂತ ೪ ರಲ್ಲಿ ವಿವರಿಸಿದಂತೆ ಪಾರ್ಥ ರಾಶಿ ವೀಕ್ಷಿಸಿ. ಅದರಲ್ಲಿ ವಿವರಿಸಿದ್ದ ಮೇಷ ಮತ್ತು ತಿಮಿಂಗಿಲ ಅಸ್ತವಾಗಿದೆ. ಜನವರಿ ತಿಂಗಳಿನ
ಮಾರ್ಗದರ್ಶಿಯ ಹಂತ ೬ ರಲ್ಲಿ ವಿವರಿಸಿದಂತೆ ದೀರ್ಘಕಂಠ ರಾಶಿಯನ್ನು ವೀಕ್ಷಿಸಿ. ಮಾರ್ಚ್ ಮಾರ್ಗದರ್ಶಿ ಹಂತ ೩ ರಲ್ಲಿ ಇರುವ ಸೂಚನಾನುಸಾರ ಈಗಾಗಲೇ ಗುರುತಿಸಿರುವ ನೌಕಾಪೃಷ್ಠ ರಾಶಿಯನ್ನು
ಕೈಕಂಬವಾಗಿಸಿ ಅದರ ಸುತ್ತಣ ರಾಶಿಗಳ ಪೈಕಿ ದೇವನೌಕಾ, ನೌಕಾಪಟ
ರಾಶಿಗಳನ್ನೂ ಫೆಬ್ರವರಿ
ಮಾರ್ಗದರ್ಶಿ ಹಂತ ೪ ರಲ್ಲಿ ವಿವರಿಸಿರುವ ದಿಕ್ಸೂಚಿ
ರಾಶಿಯನ್ನೂ ಈ ತಿಂಗಳು ಉದಯಿಸಿರುವ ಅಜಗರ ರಾಶಿಯನ್ನೂ ಗುರುತಿಸಿ. ತದನಂತರ ಮಾರ್ಚ್ ಮಾರ್ಗದರ್ಶಿ
ಹಂತ ೩ ರಲ್ಲಿ ವಿವರಿಸಿದ ರೇಚಕ ಮತ್ತು ಶಫರೀ ರಾಶಿಗಳನ್ನೂ ಗುರುತಿಸಿ.
ಹಂತ ೨: ಈಗಾಗಲೇ
ಗುರುತಿಸಿರುವ ನೌಕಾಪೃಷ್ಠ, ದಿಕ್ಸೂಚಿ, ರೇಚಕ, ಏಕಶೃಂಗಿ, ಲಘುಶ್ವಾನ ಮತ್ತು ಕರ್ಕಟಕ ರಾಶಿಗಳಿಗೆ ತಾಗಿಕೊಂಡಿರುವ ರಾಶಿ ಅಜಗರ (೨. ಹೈಡ್ರ, ವಿಸ್ತೀರ್ಣ ೧೩೦೨.೮೪೪ ಚ ಡಿಗ್ರಿ). ಇದು ಈಗ
ಉದಯಿಸುತ್ತಿದೆ. ರಾಶಿಗಳ ವಿಸ್ತೀರ್ಣವಾರು ಪಟ್ಟಿಯಲ್ಲಿ ಇದಕ್ಕೆ ಅಗ್ರಸ್ಥಾನ. ಕರ್ಕಟಕದ ದಕ್ಷಿಣ ಗಡಿಯಿಂದ ಆಗ್ನೇಯ ದಿಗಂತದ ವರೆಗೆ ವ್ಯಾಪಿಸಿದೆ. ಕೇವಲ ಎರಡು ಉಜ್ವಲ ತಾರೆಗಳು ಇರುವ ಈ ರಾಶಿಯ ಪುಂಜ ಗುರುತಿಸುವುದು ಕಷ್ಟ.
ರೇಖಾಚಿತ್ರದಲ್ಲಿ ಹೆಸರಿಸಿದ ತಾರೆಗಳು ಇವು: (೧) α ಅಜಗರ
(ಆಲ್ಪ್‌ಹಾರ್ಡ್, ತೋಉ ೧.೯೯, ದೂರ ೧೭೯ ಜ್ಯೋವ), (೨) γ ಅಜಗರ
(ತೋಉ ೨.೯೯, ದೂರ ೧೩೨ ಜ್ಯೋವ), (೩) ζ ಅಜಗರ
(ತೋಉ ೩.೧೧, ದೂರ ೧೫೨ ಜ್ಯೋವ), (೪) ν
ಅಜಗರ (ತೋಉ ೩.೧೦, ದೂರ ೧೩೮ ಜ್ಯೋವ), (೫) π
ಅಜಗರ (ತೋಉ ೩.೨೫, ದೂರ ೧೦೩ ಜ್ಯೋವ), (೬) ε
ಅಜಗರ (ತೋಉ ೩.೩೯, ದೂರ ೧೩೩ ಜ್ಯೋವ), (೭) ξ
ಅಜಗರ (ತೋಉ ೩.೫೪, ದೂರ ೧೨೯ ಜ್ಯೋವ), (೮) λ
ಅಜಗರ (ತೋಉ ೩.೬೦, ದೂರ ೧೧೫ ಜ್ಯೋವ), (೯) δ ಅಜಗರ
(ತೋಉ ೪.೧೩, ದೂರ ೧೭೬ ಜ್ಯೋವ), ರೇಖಾಚಿತ್ರದ ನೆರವಿನಿಂದ ಮೊದಲನೇ ಎರಡು ತಾರೆಗಳನ್ನು ಗುರುತಿಸಿ, ತನ್ಮೂಲಕ ಉಳಿದವನ್ನು ಗುರುತಿಸಲು ಪ್ರಯತ್ನಿಸಬಹುದು. ಭಾರತೀಯ ಜ್ಯೋತಿಶ್ಶಾಸ್ತ್ರೀಯ ಆಶ್ಲೇಷಾ ‘ನಕ್ಷತ್ರ’
ಎನ್ನಲಾಗಿರುವ ε ಅಜಗರ ತಾರೆ ಗುರುತಿಸಲು ಪ್ರಯತ್ನಿಸಿ. ಇದು ಕರ್ಕಟಕ ರಾಶಿಯ ದಕ್ಷಿಣ ಸೀಮಾರೇಖೆಗೆ ತಾಗಿಕೊಂಡಿದೆ. ರೇಚಕ, ಕರ್ಕಟಕ, ಲಘುಶ್ವಾನ, ಕಿನ್ನರ, ಹಸ್ತಾ, ಕಂದರ, ಸಿಂಹ, ತುಲಾ, ವೃಕ (ಮೂಲೆ),
ಏಕಶೃಂಗಿ, ನೌಕಾಪೃಷ್ಠ, ದಿಕ್ಸೂಚಿ, ಷಷ್ಟಕ, ಕನ್ಯಾ ಇವು ಅಜಗರವನ್ನು ಸುತ್ತುವರಿದಿರುವ ರಾಶಿಗಳು.
ಹಂತ ೩: ಮೊದಲು ಫೆಬ್ರವರಿ ಮಾರ್ಗದರ್ಶಿಯ
ಹಂತ ೫ ಮತ್ತು ೬ ರಲ್ಲಿ
ವಿವರಿಸಿದಂತೆ ಸಿಂಹ ಮತ್ತು ಲಘುಸಿಂಹ ರಾಶಿಗಳನ್ನೂ ಸಪ್ತರ್ಷಿಮಂಡಲ ಮತ್ತು ಷಷ್ಟಕ ರಾಶಿಗಳನ್ನೂ
ಗುರುತಿಸಿ. ತದನಂತರ ಮಾರ್ಚ್ ಮಾರ್ಗದರ್ಶಿ
ಹಂತ ೪ ರಲ್ಲಿ ವಿವರಿಸಿದಂತೆ ಕಂದರ, ಕೃಷ್ಣವೇಣಿ
ಮತ್ತು ಕಾಳಭೈರವ ರಾಶಿಗಳನ್ನು ಗುರುತಿಸಿ. ಮಾರ್ಚ್
ತಿಂಗಳಿನ ಮಾರ್ಗದರ್ಶಿಯ ಹಂತ ೧ ರಲ್ಲಿ ವಿವರಿಸಿದಂತೆ ದೀರ್ಘಕಂಠ ರಾಶಿಗೆ ತಾಗಿಕೊಂಡಿರುವ ಲಘುಸಪ್ತರ್ಷಿ
ರಾಶಿಯನ್ನು ಗುರುತಿಸಿ. ಸಿಂಹ ರಾಶಿಯ ಪೂರ್ವಕ್ಕೆ ಕನ್ಯಾ ರಾಶಿ ಉದಯಿಸಿದೆ. ಅದನ್ನು ಈಗ ವೀಕ್ಷಿಸಿ.
ಸಿಂಹ ರಾಶಿಯ ಪೂರ್ವಕ್ಕೆ ಇರುವುದೇ ಕನ್ಯಾ ರಾಶಿ (೮. ವರ್ಗೋ, ವಿಸ್ತೀರ್ಣ ೧೨೯೪.೪೨೮ ಚ ಡಿಗ್ರಿ). ಇದರ ಮೂರು ಉಜ್ವಲ ತಾರೆಗಳನ್ನು ಸುಲಭವಾಗಿ ಗುರುತಿಸಬಹುದು. ಈ ರಾಶಿಯ ಪ್ರಮುಖ ತಾರೆಗಳು ಇವು: (೧) α
ಕನ್ಯಾ (ಸ್ಪೈಕ, ಚಿತ್ತಾ, ತೋಉ ೧.೦೩, ದೂರ ೨೬೪
ಜ್ಯೋವ), (೨) γ ಕನ್ಯಾ ಎ (ತೋಉ ೩.೧೬, ದೂರ ೩೯ ಜ್ಯೋವ), (೩) ε ಕನ್ಯಾ
(ತೋಉ ೨.೮೪, ದೂರ ೧೦೩ ಜ್ಯೋವ), (೪) ζ ಕನ್ಯಾ
(ತೋಉ ೩.೩೭, ದೂರ ೭೪ ಜ್ಯೋವ), (೫) δ ಕನ್ಯಾ
(ತೋಉ ೩.೪೨, ದೂರ ೨೦೪ ಜ್ಯೋವ), (೬) β ಕನ್ಯಾ
(ತೋಉ ೩.೫೯, ದೂರ ೩೬ ಜ್ಯೋವ), (೭) η ಕನ್ಯಾ
(ತೋಉ ೩.೮೮, ದೂರ ೨೬೨ ಜ್ಯೋವ), (೮) ν ಕನ್ಯಾ
(ತೋಉ ೪.೦೪, ದೂರ ೩೧೩ ಜ್ಯೋವ). ಇವುಗಳ
ಪೈಕಿ α ಕನ್ಯಾ ತಾರೆಯೇ ಭಾರತೀಯ
ಜ್ಯೋತಿಶ್ಶಾಸ್ತ್ರೀಯ ಚಿತ್ತಾ ‘ನಕ್ಷತ್ರ’.
ಸಹದೇವ, ಕೃಷ್ಣವೇಣಿ, ಸಿಂಹ, ಕಂದರ, ಹಸ್ತಾ, ಅಜಗರ, ತುಲಾ, ಸರ್ಪಶಿರ ರಾಶಿಗಳು ಕನ್ಯಾರಾಶಿಯನ್ನು ಸುತ್ತುವರಿದಿವೆ.
ಹಂತ ೪: ಈ
ತಿಂಗಳು ಉದಯಿಸಿರುವ ಸಹದೇವ, ಹಸ್ತಾ ಮತ್ತು ತ್ರಿಶಂಕು ರಾಶಿಗಳನ್ನು ಗುರುತಿಸುವ ಕಾರ್ಯ ಈಗ ಮಾಡಬೇಕಿದೆ.
ಈಶಾನ್ಯ ದಿಕ್ಕಿನಲ್ಲಿ ಬಾನಂಚಿಗಿಂತ ತುಸು ಮೇಲೆ ಮೂರು ಉಜ್ವಲ
ತಾರೆಗಳಿರುವ ಸಹದೇವ ರಾಶಿ (೮೧. ಬೊಓಟೀಜ್, ವಿಸ್ತೀರ್ಣ ೯೦೬.೮೩೧ ಚ ಡಿಗ್ರಿ) ಇದೆ. ಇದರ ಪ್ರಮುಖ ತಾರೆಗಳು ಇವು: (೧) α
ಸಹದೇವ (ಆರ್ಕ್‌ಟ್ಯೂರಸ್, ತೋ ಉ
೦.೦೯, ದೂರ ೩೭ ಜ್ಯೋವ), (೨) ε
ಸಹದೇವ (ತೋಉ ೨.೪೯, ದೂರ ೨೧೦ ಜ್ಯೋವ), (೩) η ಸಹದೇವ (ತೋಉ ೨.೬೭, ದೂರ ೩೭
ಜ್ಯೋವ), (೪) γ
ಸಹದೇವ (ತೋಉ ೩.೦೩, ದೂರ ೮೬ ಜ್ಯೋವ), (೫) δ ಸಹದೇವ (ತೋಉ ೩.೪೭, ದೂರ ೧೧೭ ಜ್ಯೋವ), (೬)
β ಸಹದೇವ (ತೋಉ ೩.೪೮, ದೂರ ೨೧೮ ಜ್ಯೋವ). ಇವುಗಳ
ಪೈಕಿ α ಸಹದೇವ (ಆರ್ಕ್‌ಟ್ಯೂರಸ್) ಭಾರತೀಯ
ಜ್ಯೋತಿಷ್ಚಕ್ರದ ಸ್ವಾತೀ ‘ನಕ್ಷತ್ರ’.
ಸಹದೇವ ರಾಶಿಯನ್ನು ಕಾಳಭೈರವ, ಕೃಷ್ಣವೇಣಿ, ಉತ್ತರ ಕಿರೀಟ, ಸುಯೋಧನ, ಭೀಮ, ಸರ್ಪಶಿರ, ಕನ್ಯಾ, ಸಪ್ತರ್ಷಿಮಂಡಲ ರಾಶಿಗಳು ಸುತ್ತುವರಿದಿವೆ.
ಕನ್ಯಾ ರಾಶಿಯ ದಕ್ಷಿಣದಲ್ಲಿ ಕಂದರ ರಾಶಿಯ ಪೂರ್ವಕ್ಕೆ ಹಸ್ತಾ ರಾಶಿ (೮೭. ಕಾರ್ವಸ್, ವಿಸ್ತೀರ್ಣ ೧೮೩.೮೦೧ ಚ ಡಿಗ್ರಿ) ಇದೆ. ಪ್ರಧಾನ ತಾರೆಗಳು ಇಂತಿವೆ: (೧) γ ಹಸ್ತಾ (ತೋಉ ೨.೫೮, ದೂರ ೧೬೫ ಜ್ಯೋವ), (೨) β ಹಸ್ತಾ (ತೋಉ ೨.೬೫, ದೂರ ೧೩೯
ಜ್ಯೋವ), (೩) δ
ಹಸ್ತಾ (ತೋಉ ೨.೯೫, ದೂರ ೮೮ ಜ್ಯೋವ), (೪) α ಹಸ್ತಾ (ತೋಉ ೪.೦೩, ದೂರ ೪೯ ಜ್ಯೋವ), (೫) ε ಹಸ್ತಾ (ತೋಉ ೩.೦೦, ದೂರ ೩೦೪
ಜ್ಯೋವ). ಇವುಗಳ ಪೈಕಿ δ ಹಸ್ತಾ
ತಾರೆಯನ್ನು ಭಾರತೀಯ ಜ್ಯೋತಿಷ್ಚಕ್ರದ ಹಸ್ತಾ ‘ನಕ್ಷತ್ರ’ ಎಂದು ಅನೇಕ ವಿದ್ವಾಂಸರ ಅಂಬೋಣ.
ಕನ್ಯಾ, ಕಂದರ, ಅಜಗರ ರಾಸಿಗಳು ಹಸ್ತಾವನ್ನು ಸುತ್ತುವರಿದಿವೆ.
ಈಗ ದಕ್ಷಿಣ ದಿಗ್ಬಿಂದುವಿನ ಸಮೀಪದಲ್ಲಿ ಪೂರ್ವ ದಿಗಂತದಲ್ಲಿ ನಿಮ್ಮ ಗಮನ
ಕೇಂದ್ರೀಕರಿಸಿ. ಬಾನಂಚಿನಲ್ಲಿ ಅಥವಾ ತುಸು ಮೇಲೆ, ನಾಲ್ಕು
ಉಜ್ವಲ ನಕ್ಷತ್ರಗಳು ರಚಿಸುವ ವಜ್ರಾಕೃತಿ ಅಥವ ಶಿಲುಬೆಯಾಕಾರದ ಪುಂಜ ಇರುವ ರಾಶಿ ತ್ರಿಶಂಕು (೨೮. ಕ್ರಕ್ಸ್, ದಕ್ಷಿಣ ಶಿಲುಬೆ, ವಿಸ್ತೀರ್ಣ
೬೮.೪೪೭ ಚದರ ಡಿಗ್ರಿ) ಗುರುತಿಸಿ.
ಪುಂಜದ ನಕ್ಷತ್ರಗಳು ಇವು: (೧) β
ತ್ರಿಶಂಕು (ತ್ರಿಶಂಕು ಪಾದ, ತೋಉ ೧.೨೯, ದೂರ ೩೩೬ ಜ್ಯೋವ), (೨) α1 ತ್ರಿಶಂಕು (ಏಕ್ರಕ್ಸ್, ತ್ರಿಶಂಕುಶಿರ ತ್ರಿಶಂಕು ಶಿರ, ತೋಉ ೧.೦೪, ದೂರ ೩೨೯ ಜ್ಯೋವ), (೩)
γ ತ್ರಿಶಂಕು (ತ್ರಿಶಂಕು ತೃತೀಯ, ತೋಉ ೧.೬೬, ದೂರ ೮೮ ಜ್ಯೋವ), (೪) δ ತ್ರಿಶಂಕು (ತೋಉ ೨.೭೮, ದೂರ ೩೭೨ ಜ್ಯೋವ). ತ್ರಿಶಂಕು
ತೃತೀಯ ಮತ್ತು ಕಿನ್ನರ ಮತ್ತು ತ್ರಿಶಂಕು ಶಿರ ತಾರೆಗಳನ್ನು ಜೋಡಿಸುವ ಗೆರೆಯನ್ನು ಐದು ಪಟ್ಟು
ದೂರ ದಕ್ಷಿಣಕ್ಕೆ ವೃದ್ಧಿಸಿದರೆ ಅದು ದಕ್ಷಿಣಧ್ರುವ ಬಿಂದುವನ್ನು ಸಂಧಿಸುತ್ತದೆ. ದುರದೃಷ್ಟವಶಾತ್ ದಕ್ಷಿಣ ಧ್ರುವ ಬಿಂದುವಿನಲ್ಲಿ ಯಾವ ತಾರೆಯೂ ಇಲ್ಲ. ತ್ರಿಶಂಕುಶಿರದ ಪಕ್ಕದಲ್ಲಿ ಬಲು ಕಪ್ಪಾಗಿ ಕಾಣುವ ತಾರಾ ರಹಿತ ಆಕಾಶದ
ಭಾಗವನ್ನು ‘ಇದ್ದಲು ಮೂಟೆ, ಕೋಲ್ ಸ್ಯಾಕ್’ ಎಂದು
ಕರೆಯುವುದೂ ಉಂಟು. ಕಿನ್ನರ ಮತ್ತು ಮಶಕ ತ್ರಿಶಂಕುವನ್ನು ಸುತ್ತುವರಿದಿರುವ ರಾಶಿಗಳು.
ಸಿಂಹಾವಲೋಕನ
ಏಪ್ರಿಲ್ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ
ಮಾಡಿಕೊಂಡ ರಾಶಿಗಳನ್ನೂ, ವಿಶಿಷ್ಟ ತಾರೆಗಳನ್ನೂ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ
ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.
No comments:
Post a Comment