ಹೌದು. ಕುಟುಂಬದ ಸದಸ್ಯರೊಂದಿಗೆ ನಮ್ಮ ಸಂಬಂಧ ಹೇಗಿದೆ ಎಂಬುದನ್ನು ನಮ್ಮ ಜೀವಂತಿಕೆ (ಚೈತನ್ಯದಿಂದ ಕೂಡಿದ ಸ್ಥಿತಿ ಅಥವ ಲವಲವಿಕೆಯಿಂದಿರುವಿಕೆ) ಆಧರಿಸಿರುತ್ತದೆ. ಬಲಯುತವಾದ ಧನಾತ್ಮಕ ಸಂಬಂಧಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಮ್ಮನ್ನು ಬೆಂಬಲಿಸುವವರು, ಉತ್ತೇಜಿಸುವವರು, ಸಮರ್ಥಿಸುವವರು, ಅವಶ್ಯವಿದ್ದಾಗ ನೆರವಿಗೆ ಬರುವವರು ಇದ್ದಾರೆ ಎಂಬ ಅರಿವು ನಮಗಿದ್ದಾಗ ನಮ್ಮ ಕಾರ್ಯದಲ್ಲಿ ಶ್ರದ್ಧೆ ಹೆಚ್ಚುತ್ತದೆ. ತತ್ಪರಿಣಾಮವಾಗಿ ಯಶಸ್ವಿಗಳಾಗುತ್ತೇವೆ. ಕಷ್ಟಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುತ್ತೇವೆ. ಮಾನಸಿಕ ತುಯ್ತಗಳನ್ನು ಸಮರ್ಪಕವಾಗಿ ನಿಭಾಯಿಸುತ್ತೇವೆ. ಮಾನವ ಸಂಬಂಧಗಳ ಕುರಿತಾದ ಜ್ಞಾನ ಮತ್ತು ಕುಶಲತೆಗಳನ್ನು ಮಕ್ಕಳು ಕಲಿಯುವುದು ತಮ್ಮ ಕುಟುಂಬದಿಂದಲೇ. ತಾವು ಮನೆಯಲ್ಲಿ ಕಲಿತದ್ದನ್ನು ಆಧರಿಸಿ ಓರಗೆಯವರೊಂದಿಗೆ ಹೊಸ ಸಂಬಂಧಗಳನ್ನು ಮಕ್ಕಳು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ನಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಾಮಾಣಿಕವಾದ ಸುಮಧುರ ಸಂಬಂಧ ಸದಾ ಇರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಬಹುತೇಕ ಕುಟುಂಬಗಳಲ್ಲಿ ಸದಸ್ಯರ ನಡುವೆ ತೋರಿಕೆಯ ‘ಸುಮಧುರ’ ಸಂಬಂಧವಿರುತ್ತದೆಯೇ ವಿನಾ ಷರತ್ತುರಹಿತ ಪ್ರೀತಿವಿಶ್ವಾಸಗಳಿಂದ ಕೂಡಿದ ಬಾಂಧವ್ಯ ಇರುವುದಿಲ್ಲ. ‘ತಮ್ಮ ನಡುವೆ ಭಿನ್ನಾಭಿಪ್ರಾಯಗಳು ಇಲ್ಲ, ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ---’ ಇವೇ ಮೊದಲಾದ ಅಭಿಪ್ರಾಯಗಳು ಇತರರಲ್ಲಿ ಮೂಡಲಿ ಎಂಬ ಏಕೈಕ ಕಾರಣಕ್ಕಾಗಿ ಇತರರ ಎದುರಿಗೆ ‘ಸುಮಧುರ’ ಸಂಬಂಧವಿರುವಂತೆ ನಟಿಸುತ್ತಾರೆ. ಎಂದೇ, ಆ ಸದಸ್ಯರಲ್ಲಿ ಜೀವಂತಿಕೆ ಇರುವುದಿಲ್ಲ. ನನ್ನ ಪ್ರಕಾರ ಅವನ್ನು ‘ಕುಟುಂಬ’ ಅನ್ನುವುದಕ್ಕೆ ಬದಲಾಗಿ ಅನಿವಾರ್ಯ ಕಾರಣಗಳಿಗಾಗಿ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಸಮೂಹ ಅನ್ನಬೇಕು. (ನೋಡಿ: ನಾನೂ ನೀವೂ ನಟಶಿರೋಮಣಿಗಳು ಎಂಬ ತಥ್ಯ ನಿಮಗೆ ಗೊತ್ತೇ?, ನನ್ನ ಜೀವನ ದರ್ಶನ – ೧೦) ಜೀವಂತಿಕೆ ಇಲ್ಲದವರ ಜೀವನ ಸದಾ ತುಯ್ತ, ಉದ್ವೇಗ, ದೈಹಿಕ/ಮಾನಸಿಕ ಒತ್ತಡಗಳಿಂದ ನರಳುವಿಕೆ, ಮನಃಕ್ಷೋಭೆ ಇವೇ ಮೊದಲಾದ ಋಣಾತ್ಮಕ ಅಂಶಯುತವಾಗಿರುತ್ತದೆ. ಹೀಗಾಗುವುದನ್ನು ತಡೆಗಟ್ಟಲು ನೆರವು ನೀಡುತ್ತದೆ ಈ ಮುಂದಿನ ಮಾಹಿತಿ.
ಕುಟುಂಬದ ಮಕ್ಕಳೊಂದಿಗೆ ಮತ್ತು ಇತರ ಸದಸ್ಯರೊಂದಿಗೆ ಪ್ರಾಮಾಣಿಕವಾದ ಸುಮಧುರ ಧನಾತ್ಮಕ ಸಂಬಂಧ ಸ್ಥಾಪಿಸುವುದು ಮತ್ತು ಅದನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಸುಲಭವಲ್ಲ. ಸಾಂಸ್ಕೃತಿಕ ಹಿನ್ನೆಲೆ, ಪರಂಪರಾಗತವಾಗಿ ಬಂದ ಕೌಟುಂಬಿಕ ಮೌಲ್ಯಗಳು, ಸದಸ್ಯರ ನಡುವೆ ಇರುವ ಭಿನ್ನಾಭಿಪ್ರಾಯಗಳು, ದುಡಿಯುವವರು ಎಷ್ಟು ಮಂದಿ ಮತ್ತು ಯಾರು, ಕುಟುಂಬದ ಒಟ್ಟಾರೆ ಆರ್ಥಿಕ ಸ್ಥಿತಿಗತಿ ಇವೇ ಮೊದಲಾದವು ಕೌಟುಂಬಿಕ ಸಂಬಂಧಗಳ ಮೇಲೆ ಪ್ರಭಾವ ಬೀರುವುದೇ ಇದಕ್ಕೆ ಕಾರಣ. ತಾಳ್ಮೆ ಕಳೆದುಕೊಂಡು ರೇಗಾಡುವ, ಮನಸ್ಸಿಗೆ ನೋವಾಗುವ, ಒಬ್ಬರ ಹೇಳಿಕೆಯನ್ನು/ಕೃತ್ಯವನ್ನು ಇನ್ನೊಬ್ಬರು ತಪ್ಪಾಗಿ ಗ್ರಹಿಸುವ ಸನ್ನಿವೇಶಗಳು ಎಲ್ಲ ಕುಟುಂಬಗಳಲ್ಲಿಯೂ ಸೃಷ್ಟಿಯಾಗುತ್ತವೆ. ಇಂಥ ಸನ್ನಿವೇಶಗಳು ಹುಟ್ಟುಹಾಕುವ ವಿರಸವನ್ನು ಅಥವ ವೈಮನಸ್ಯವನ್ನು ಮಾತುಕತೆಯ ಮುಖೇನ ಸಂಪೂರ್ಣವಾಗಿ ನಿವಾರಿಸುವ ಕೌಶಲ ಸದಸ್ಯರಲ್ಲಿ ಇದ್ದರೆ ಮಾತ್ರ ಧನಾತ್ಮಕ ಸಂಬಂಧಗಳನ್ನು ಬಲಯುತವಾಗಿಸಲು ಸಾಧ್ಯ. ಈ ಕುಶಲತೆ ಇಲ್ಲದವರು ತಾತ್ಕಲಿಕವಾಗಿ ‘ತೇಪೆ ಹಾಕಿ’ ಸಂಬಂಧಗಳನ್ನು ಮುಂದುವರಿಸಿದರೂ ಅವು ಧನಾತ್ಮಕವಾಗಿ ಇರುವುದಿಲ್ಲ. ವೈಮನಸ್ಯಗಳು ಸಂಬಂಧಿಸಿದವರ ಮನಸ್ಸಿನಲ್ಲಿ ಹುಟ್ಟುಹಾಕಿದ ಆಲೋಚನೆಗಳು ಅವರ ಮನಸ್ಸಿನ ಅಂತರಾಳದಲ್ಲಿ ಹುದುಗಿ ಅವರ ಮುಂದಿನ ವರ್ತನೆಗಳನ್ನು ನಿಯಂತ್ರಿಸತೊಡಗುತ್ತವೆ. ಅರ್ಥಾತ್ ಇವು ಮನಸ್ಸನ್ನು ಮಲಿನಗೊಳಿಸಿ (ನೋಡಿ: ಮನಸ್ಸಿನ ಮಲಿನಕಾರಿಗಳು) ಸಂಬಂಧಗಳನ್ನು ಕೃತಕವಾಗಿಸುತ್ತವೆ. ಕುಟುಂಬದ ಸದಸ್ಯರ ನಡುವೆ ಸಂಘರ್ಷಗಳು ಆಗುವುದು ಪ್ರಸಾಮಾನ್ಯವಾದರೂ ಆರೋಗ್ಯಯುತ ಕುಟುಂಬಗಳಲ್ಲಿ ಮಾತ್ರ ಸದಸ್ಯರು ಒಗ್ಗಟ್ಟಾಗಿ ಅವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ ಮತ್ತು ಆ ಅನುಭವಗಳಿಂದ ಪಾಠ ಕಲಿಯುತ್ತಾರೆ. ಅಂಥ ಕುಟುಂಬಗಳಲ್ಲಿನ ಮಕ್ಕಳೂ ಸಂಘರ್ಷದ ಮೂಲ ಕಾರಣವನ್ನು ನಿಷ್ಕೃಷ್ಟವಾಗಿ ಗುರುತಿಸಲು ಮತ್ತು ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಮಾರ್ಗದರ್ಶನವನ್ನು ಅನೈಚ್ಛಿಕವಾಗಿ ಪಡೆಯುತ್ತಾರೆ.
ಇಂಥ ಆರೋಗ್ಯಯುತ ಕುಟುಂಬ ನಮ್ಮದಾಗಬೇಕಾದರೆ ಮಾಡಬೇಕಾದ್ದೇನು ಎಂಬುದನ್ನು ಈ ಮುಂದಿನ ಪಟ್ಟಿ ಸೂಚ್ಯವಾಗಿ ತಿಳಿಸುತ್ತದೆ.
೧. ಆಗಿಂದಾಗ್ಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸ್ವಲ್ಪ ಕಾಲ ಕಳೆಯಬೇಕು. ಪ್ರತೀದಿನ ಕೆಲ ನಿಮಿಷಗಳನ್ನಾದರೂ ಇಂತು ವಿನಿಯೋಗಿಸಿದರೆ ಬಲು ಒಳ್ಳೆಯದು. ಕನಿಷ್ಠ ಪಕ್ಷ ಒಂದು ಹೊತ್ತಿನ ಭೋಜನವನ್ನು ಎಲ್ಲರೂ ಒಟ್ಟಿಗೆ ಕುಳಿತು ಮಾಡುವುದು ಈ ದೃಷ್ಟಿಯಿಂದ ಒಳ್ಳೆಯದು. ಈ ಅವಧಿಯನ್ನು ಅನುಭವಗಳನ್ನು ಹಂಚಿಕೊಳ್ಳುವಿಕೆಗೆ, ವಿನೋದಭರಿತ ಮಾತುಕತೆಗೆ ವಿನಿಯೋಗಿಸಬೇಕು. ಆಗಿಂದಾಗ್ಗೆ ಪ್ರತಿಯೊಬ್ಬರೂ ಇನ್ನೊಬ್ಬರೊಂದಿಗೆ ವೈಯಕ್ತಿಕವಾಗಿ ಸಲಿಗೆಯಿಂದ ವಿಚಾರ ವಿನಿಮಯ ಮಾಡಿಕೊಳ್ಳುತ್ತಿರಬೇಕು ಅಥವ ನಗುನಗುತ್ತಾ ಹರಟುತ್ತಿರಬೇಕು. ಒಬ್ಬ ಸದಸ್ಯ ಇನ್ನೊಬ್ಬನ ನೋವುನಲಿವುಗಳಲ್ಲಿ ಆಸಕ್ತಿ ತೋರಬೇಕು, ಅವಶ್ಯವಿದ್ದಾಗ ನೆರವು ನೀಡಬೇಕು. ಹುಟ್ಟುಹಬ್ಬ ಇವೇ ಮೊದಲಾದ ವಿಶೇಷ ದಿನಾಚರಣೆಗೆ ಸಂಬಂಧಿಸಿದ ತೀರ್ಮಾನಗಳನ್ನು ಎಲ್ಲರೂ ಒಟ್ಟುಸೇರಿ ತೆಗೆದುಕೊಳ್ಳುವುದು ಕುಟುಂಬದ ಸದಸ್ಯರನ್ನು ಒಗ್ಗೂಡಿಸುತ್ತದೆ. ಆಗಿಂದಾಗ್ಗೆ ಎಲ್ಲರೂ ಒಟ್ಟಾಗಿ ಮನರಂಜನೆ ನೀಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅಪರೂಪಕ್ಕೊಮ್ಮೆಯಾದರೂ ಎಲ್ಲರೂ ಒಟ್ಟಾಗಿ ಪ್ರವಾಸ ಹೋಗುವುದು (ಎಷ್ಟು ದಿನ ಅನ್ನುವುದು ಮುಖ್ಯವಲ್ಲ) ಅಪೇಕ್ಷಣೀಯ.
೨. ಸದಸ್ಯರ ನಡುವಿನ ಸಂವಹನ ಯಾವಾಗಲೂ ಧನಾತ್ಮಕವಾಗಿರಬೇಕು. ಒಬ್ಬರು ಮಾತನಾಡುತ್ತಿರುವಾಗ ಮತ್ತೊಬ್ಬರು ಗಮನವಿಟ್ಟು ಕೇಳಬೇಕು. ಇನ್ನೊಬ್ಬರು ಹೇಳುತ್ತಿರುವುದನ್ನು ಠೀಕಿಸುವುದಾಗಲೀ ವಿಮರ್ಶೆ ಮಾಡುವುದಾಗಲೀ ಮಾಡಿದರೆ ಆರೋಗ್ಯಯುತ ಸಂವಹನ ಜರಗುವುದಿಲ್ಲ. ಮನಬಿಚ್ಚಿ ಮಾತನಾಡಲು (ಅದು ಯಾವ ವಿಷಯದ ಕುರಿತೇ ಆಗಿರಲಿ) ಪ್ರೋತ್ಸಾಹಿಸಬೇಕು. ಎಲ್ಲ ವಿಷಯಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ಇರಬೇಕು. ಸಂದರ್ಭೋಚಿತವಾಗಿ ಮೆಚ್ಚುಗೆಯನ್ನು, ಪ್ರೋತ್ಸಾಹವನ್ನು, ಒಲವನ್ನು, ಧನ್ಯವಾದಗಳನ್ನು, ಶುಭಾಷಯಗಳನ್ನು ಶಾಬ್ದಿಕವಾಗಿ/ಯುಕ್ತ ದೇಹ-ಭಾಷೆಯ ಮುಖೇನ ತಿಳಿಸುವುದನ್ನು ರೂಢಿಸಿಕೊಳ್ಳಬೇಕು (ನಮ್ಮ ಮನೆಗಳಲ್ಲಿ ಈ ಸಂಪ್ರದಾಯ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ). ಪ್ರೀತಿ, ವಿಶ್ವಾಸ, ಸಹಾನುಭೂತಿ ಮುಂತಾದವುಗಳ ನೆರವಿನಿಂದ ಮಕ್ಕಳಲ್ಲಿ ಸದಸ್ಯರಲ್ಲಿ ಸ್ವಶಿಸ್ತು ಬೇರೂರುವಂತೆ ಮಾಡಬೇಕೇ ವಿನಾ ನಿಂದನೆ, ದಂಡನೆಗಳ ನೆರವಿನಿಂದಲ್ಲ. ಅಪರೂಪಕ್ಕೊಮ್ಮೆ ‘ನಮ್ಮ ಕುಟುಂಬದಲ್ಲಿ ನನಗೆ ಬಲು ಇಷ್ಟವಾದದ್ದು ------- ’ ‘ನಮ್ಮ ಕುಟುಂಬದಲ್ಲಿ ನನಗೆ ಇಷ್ಟವಾಗದ್ದು ------- ’ ಮುಂತಾದವನ್ನು ಹೇಳುವ ಅವಕಾಶ ಸೃಷ್ಟಿಸುವುದು ಅಪೇಕ್ಷಣೀಯ.
೩. ಕುಟುಂಬದ ಎಲ್ಲ ಸದಸ್ಯರೂ ಒಂದು ತಂಡದಂತೆ ಒಗ್ಗಟ್ಟಿನಿಂದ ಕಟುಂಬದ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲರಿಗೂ ಅನ್ವಯವಾಗುವ ‘ನಮ್ಮ ಕುಟುಂಬದ ನಿಯಮಾವಳಿ’ ಅನ್ನು ಎಲ್ಲರೂ (ಬಲು ಸಣ್ಣ ಮಕ್ಕಳನ್ನು ಹೊರತುಪಡಿಸಿ) ಚರ್ಚಿಸಿ ರೂಪಿಸಿಕೊಂಡಿರಬೇಕು. ಅರ್ಥಾತ್, ಪ್ರತೀ ಕುಟುಂಬಕ್ಕೂ ಅದರದೇ ಆದ ಜೀವನದರ್ಶನ-ಸಂಪ್ರದಾಯ ಇರಬೇಕು. ಎಲ್ಲರೂ ಅವರವರ ಕಾರ್ಯಬಾಹುಳ್ಯಕ್ಕೆ ಧಕ್ಕೆಯಾಗದಂತೆ ನಿತ್ಯಗಟ್ಟಳೆಯ ಕೆಲಸಗಳಲ್ಲಿ ಭಾಗಿಗಳಾಗಬೇಕು. ಹುಟ್ಟುಹಬ್ಬ ಇವೇ ಮೊದಲಾದ ವಿಶೇಷ ದಿನಾಚರಣೆಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನೂ ಎಲ್ಲರೂ ಹಂಚಿಕೊಂಡು ಮಾಡಬೇಕು.
೪. ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಅದ್ವಿತೀಯರು ಎಂಬ ಅರಿವು ಎಲ್ಲರಿಗೂ ಸದಾ ಇರಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಆಸೆ-ಆಕಾಂಕ್ಷೆಗಳೂ ಇಷ್ಟ-ಅಇಷ್ಟಗಳೂ, ಬೇಕು-ಬೇಡಗಳೂ ಇರುತ್ತವೆ. (ನೋಡಿ: ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ) ಕುಟುಂಬದ ಸದಸ್ಯರ ನಡುವೆ ಇರುವ ಈ ಭಿನ್ನತೆಗಳು ಆಗಿಂದಾಗ್ಗೆ ಸವಾಲುಗಳನ್ನು ಸೃಷ್ಟಿಸುತ್ತವೆ. ಪ್ರತಿಯೊಬ್ಬರೂ ಇನ್ನೊಬ್ಬರನ್ನು ಅವರು ಹೇಗಿದ್ದಾರೆಯೋ ಹಾಗೆಯೇ ಸ್ವೀಕರಿಸಿ ಸರ್ವಸಮ್ಮತವಾಗುವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು. (ಗಮನಿಸಿ: ಅನೇಕ ವಿರಸಗಳ ಮೂಲ- 'ಬುದ್ಧಿಮಾತು' ಹೇಳಿ ಇನ್ನೊಬ್ಬರನ್ನು 'ಸುಧಾರಿಸಲು' ಸದಾ ಪ್ರಯತ್ನಿಸುವುದು) ಕುಟುಂಬದ ಪ್ರತಿಯೊಬ್ಬರೂ ತನ್ನ ಯೋಗಕ್ಷೇಮಕ್ಕೆ ಆದ್ಯತೆ ಕೊಡುವುದಕ್ಕೆ ಬದಲಾಗಿ ಕುಟುಂಬದ ಯೋಗಕ್ಷೇಮಕ್ಕೆ ಆದ್ಯತೆ ಕೊಡುವ ಮನೋಧರ್ಮ ಉಳ್ಳವರಾಗಿದ್ದರೆ, ಅರ್ಥಾತ್ ಕುಟುಂಬನಿಷ್ಠೆ ಉಳ್ಳವರಾಗಿದರೆ ಇದು ಸುಲಭ. ಯಾರಾದರೂ ವಯಸ್ಸಿನ ಹಿರಿತನ, ತೋಳ್ಬಲ, ವಾಕ್ಸಾಮರ್ಥ್ಯ, ಕುಟುಂಬದಲ್ಲಿ ಇರುವ ಸ್ಥಾನಮಾನ ಮುಂತಾದವುಗಳನ್ನು ಪ್ರಯೋಗಿಸಿ ತಮ್ಮ ಮನಸ್ಸಿನಲ್ಲಿ ಇರುವುದನ್ನು ಇತರರ ಮೇಲೆ ಹೇರುವ ಪ್ರವೃತ್ತಿ ಪ್ರದರ್ಶಿಸಿದರೆ ಅದು ವಿಚ್ಛಿದ್ರಕ ಶಕ್ತಿಯಂತೆ ಕಾರ್ಯ ನಿರ್ವಹಿಸುತ್ತದೆ. ನಿಧಾನವಾಗಿ ಕುಟುಂಬದಲ್ಲಿ ನಿಜವಾದ ಆತ್ಮೀಯತೆ ಕ್ಷೀಣಿಸುವಂತೆ ಮಾಡುತ್ತದೆ.
೫. ಬಂಧುಮಿತ್ರರೊಂದಿಗೆ ಸಂಪರ್ಕ ಇಟ್ಟುಕೊಂಡಿರಬೇಕು. ವಿ-ಅಂಚೆ, ಅಂತರ್ಜಾಲ ಮುಖೇನ ಹರಟುವ ಸೌಲಭ್ಯ, ದೂರವಾಣಿ ಇವೇ ಮೊದಲಾದ ಸೌಕರ್ಯಗಳು ಇರುವ ಈ ಯುಗದಲ್ಲಿ ಇದು ಸುಲಭಸಾಧ್ಯ. ವಿಶೇಷ ಸಂದರ್ಭಗಳಲ್ಲಿ ಕುಟುಂಬದ ನೆರವಿಗೆ ಬರುವವರೇ ಇವರಾದ್ದರಿಂದ ಈ ಕುರಿತು ಅಸಡ್ಡೆ ಸಲ್ಲದು. ಯಾರ ಹಂಗೂ ಬೇಡ, ಧನಬಲದಿಂದಲೇ ಅಥವ ಸ್ವಸಾಮರ್ಥ್ಯದಿಂದಲೇ ಏನೇ ಬಂದರೂ ನಿಭಾಯಿಸಬಲ್ಲೆವು ಅನ್ನುವ ಹಮ್ಮಿನಿಂದ ಬಂಧುಮಿತ್ರರನ್ನು ನಿರ್ಲಕ್ಷಿಸಿದರೆ ಅಪಾಯ ಖಾತರಿ.
ನೆನಪಿಡಿ: ನಮ್ಮ ಕುಟುಂಬ ಆರೋಗ್ಯಯುತ ಕುಟುಂಬವಾಗಿದ್ದು ಜೀವಂತಿಕೆಯಿಂದ ಕೂಡಿದ್ದರೆ ಮಾತ್ರ ನಾವೂ ಜೀವಂತಿಕೆಯಿಂದ ಇರಲು ಸಾಧ್ಯ. ಕುಟುಂಬ ಜೀವಂತಿಕೆಯಿಂದ ಇಲ್ಲದಿದ್ದರೆ ನಾವು ಜೀವಂತಿಕೆಯಿಂದ ಇರಲು ಸಾಧ್ಯವಿಲ್ಲ. ನಾವು ಜೀವಂತಿಕೆಯಿಂದ ಇಲ್ಲದಿದ್ದರೆ ಕುಟುಂಬ ಜೀವಂತಿಕೆಯಿಂದ ಇರಲು ಸಾಧ್ಯವಿಲ್ಲ.
No comments:
Post a Comment