Pages

7 January 2012

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೫೮

ಯಾರಿಂದಲೂ ಮಾಡಲಾಗದ ಕಾರ್ಯಗಳು

೧ ‘ಕೈ ಇಲ್ಲದ ನೇರ ಒರಗು-ಹಲಗೆ’ ಕುರ್ಚಿಯೊಂದರಲ್ಲಿ ಚಿತ್ರ ೧ ರಲ್ಲಿ ತೋರಿಸಿದಂತೆ ನೇರವಾಗಿ ಒರಗಿ ಕುಳಿತುಕೊಳ್ಳಿ. ಪಾದಗಳನ್ನು ನೆಲದ ಮೇಲೆ ಊರಿರಬೇಕು, ಕೆಳಕಾಲು ತೊಡೆಯ ಭಾಗಕ್ಕೆ ಮತ್ತು ಭೂತಲಕ್ಕೆ ಲಂಬವಾಗಿರಲಿ. ಕೈಗಳನ್ನು ತೊಡೆಯ ಮೇಲೆ ಇಟ್ಟುಕೊಳ್ಳಿ. (ಕುಳಿತ ಭಂಗಿಯಲ್ಲಿ ಎರಡು ಲಂಬಕೋನಗಳಿರುವುದನ್ನೂ ಗಮನಿಸಿ) ಇಂತು ಕುಳಿತ ನೀವು ಮಾಡಬಾಕಾದದ್ದು ಇಷ್ಟು: ಬೆನ್ನನ್ನು ಒಂದಿನಿತೂ ಮುಂದಕ್ಕೆ ಬಾಗಿಸದೆ, ಕೆಳಕಾಲನ್ನು ಅಥವ ಪಾದಗಳನ್ನು ಒಂದಿನಿತೂ ಮುಂದಕ್ಕೇ ಆಗಲಿ ಹಿಂದಕ್ಕೇ ಆಗಲಿ ಸರಿಸದೆ ನಿಲ್ಲಲು ಪ್ರಯತ್ನಿಸಿ. ಸ್ಥಿರ ಸಮಭಾರಸ್ಥಿತಿಯ (ಸ್ಟೇಬಲ್ ಇಕ್ವಿಲಿಬ್ರಿಯಮ್) ವೈಷಿಷ್ಟ್ಯಗಳನ್ನು ನೀವು ಮನೋಗತ ಮಾಡಿಕೊಂಡಿದ್ದರೆ ಇದು ಏಕೆ ಅಸಾಧ್ಯ  ಎಂಬುದನ್ನು ನೀವು ವಿವರಿಸಬಲ್ಲಿರಿ.



೨. ಕೆಳಅಂಚು ಮುಂಚಾಚಿಕೊಂಡಿರದ ಗೋಡೆಗೆ ಹಿಮ್ಮಡಿಯೂ ತಾಗುವಂತೆ ನೆಟ್ಟಗೆ ಒರಗಿ ನಿಂತು (ಚಿತ್ರ ೨) ಮೊಣಕಾಲನ್ನು ಒಂದಿನಿತೂ ಮಡಚದೇ ಮುಂದಕ್ಕೆ ಬಾಗಿ ನೆಲದಲ್ಲಿರುವ ವಸ್ತುವನ್ನು ಹೆಕ್ಕಲು ಪ್ರಯತ್ನಿಸಿ. ಸ್ಥಿರ ಸಮಭಾರಸ್ಥಿತಿಯ (ಸ್ಟೇಬಲ್ ಇಕ್ವಿಲಿಬ್ರಿಯಮ್) ವೈಷಿಷ್ಟ್ಯಗಳನ್ನು ನೀವು ಮನೋಗತ ಮಾಡಿಕೊಂಡಿದ್ದರೆ ಇದೂ ಏಕೆ ಅಸಾಧ್ತ ಎಂಬುದನ್ನು ನೀವು ವಿವರಿಸಬಲ್ಲಿರಿ.



೩. ಕಾಗದದ ಆಯಾಕಾರದ ಪಟ್ಟಿಯೊಂದನ್ನು ತಯಾರಿಸಿ. (ಅಳತೆ, ನಿಮಗಿಷ್ಟವಾದಷ್ಟು) ಪಟ್ಟಿಯ ಎರಡು ಅಂಚುಗಳಿಂದ ಸಮದೂರದಲ್ಲಿ ಸಮ ಉದ್ದಕ್ಕೆ ಪಟ್ಟಿಯನ್ನು ಚಿತ್ರ ೩ ರಲ್ಲಿ ತೋರಿಸಿದಂತೆ ಕತ್ತರಿಸಿ. ತದನಂತರ ಕಾಗದದ ಎರಡು ತುದಿಗಳನ್ನು ನಿಮ್ಮ ಒಂದೊಂದು ಕೈನಲ್ಲಿ ಹಿಡಿದುಕೊಂಡು ಎಳೆದು ಕಾಗದವನ್ನು ಮೂರು ಭಾಗಗಳಾಗಿ ತುಂಡರಿಸಲು ಪ್ರಯತ್ನಿಸಿ. ಇದೂ ಅಸಾಧ್ಯ. ಏಕೆ ಎಂಬುದನ್ನು ನೀವೇ ತರ್ಕಿಸಿ.



೪. ಒಂದು ಅಳತೆ ಪಟ್ಟಿಯನ್ನು ನಿಮ್ಮ ಎರಡು ತೋರು ಬೆರಳುಗಳ ಮೇಲೆ ಚಿತ್ರ ೪ ರಲ್ಲಿ ತೋರಿಸಿದಂತೆ ಇಟ್ಟುಕೊಳ್ಳಿ. ಏಕಕಾಲದಲ್ಲಿ ಎರಡೂ ಬೆರಳುಗಳನ್ನು ಅಳತೆ ಪಟ್ಟಿಯ ಮಧ್ಯಭಾಗದತ್ತ ಜರುಗಿಸಲು ಪ್ರಯತ್ನಿಸಿ. ಒಂದಾದ ನಂತರ ಒಂದರಂತೆ ಬೆರಳುಗಳನ್ನು ಜರುಗಿಸಕೂಡದು ಎಂಬುದನ್ನು ಮರೆಯದಿರಿ. ಇದೂ ಅಸಾಧ್ಯ. ಏಕೆ ಎಂಬುದನ್ನು ನೀವೇ ತರ್ಕಿಸಿ.



೫. ಒಂದು ಮೋಂಬತ್ತಿಯನ್ನು ಉರಿಸಿ ಮೇಜಿನ ಮೇಲೆ ನಿಲ್ಲಿಸಿ. ಚಿತ್ರ ೫ ರಲ್ಲಿ ತೋರಿಸಿದಂತೆ ಆಲಿಕೆಯ ಬಾಯಿಯ ಕೇಂದ್ರಭಾಗದಲ್ಲಿ ಮೋಂಬತ್ತಿಯ ಜ್ವಾಲೆ ಸರಿಸುಮಾರಾಗಿ ಇರುವಂತೆ ಆಲಿಕೆಯನ್ನು ಹಿಡಿದುಕೊಂಡು ಅದರ ಕೊಳವೆಯ ಮೂಲಕ ಗಾಳಿ ಊದಿ ಮೋಬತ್ತಿಯನ್ನು ನಂದಿಸಲು ಪ್ರಯತ್ನಿಸಿ. ಇದೂ ಅಸಾಧ್ಯ. ಏಕೆ ಎಂಬುದನ್ನು ನೀವೇ ತರ್ಕಿಸಿ.

No comments: