ಹೈಡ್ರೊಜನ್ನಿನ ಎರಡು ಮತ್ತು ಆಕ್ಸಿಜನ್ನಿನ ಒಂದು ಪರಮಾಣುಗಳ ಸಂಯೋಗದ ಉತ್ಪನ್ನವೇ ನೀರಿನ ಒಂದು ಅಣು ಎಂಬುದೂ ನೀರನ್ನು ವಿದ್ಯುದ್ವಿಭಜಿಸಿ ೨:೧ ಅನುಪಾತದಲ್ಲಿ ಹೈಡ್ರೊಜನ್ ಮತ್ತು ಆಕ್ಸಿಜನ್ನುಗಳನ್ನು ಪಡೆಯಬಹುದು ಎಂಬುದೂ ನಿಮಗೆ ತಿಳಿದಿದೆ. ಈ ತಥ್ಯಗಳನ್ನು ಆಧರಿಸಿದ ಕುತೂಹಲಕಾರೀ ಪ್ರಯೋಗ ಇಂತಿದೆ:
ಪ್ಲಾಸ್ಟಿಕ್ಕಿನ ತಿರುಪು ಮುಚ್ಚಳ ಉಳ್ಳ ಅಗಲ ಬಾಯಿಯ ಒಂದು ಪುಟ್ಟ ವಾಯು ಅಭೇದ್ಯ ಬಾಟಲ್ (ಗಾಜಿನದ್ದು ಅಥವ ಪಾರಕ ಪ್ಲಾಸ್ಟಿಕ್ಕಿನದ್ದು-ಒಳಗೆ ಏನು ಜರಗುತ್ತದೆ ಎಂಬುದನ್ನು ನೋಡಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ- ಚಿತ್ರ ೧),

ಪ್ರಯೋಗದ ಯಶಸ್ಸು ಬಲುಮಟ್ಟಿಗೆ ಬಾಟಲಿನ ವಾಯು ಅಭೇದ್ಯತೆಯನ್ನು ಅವಲಂಬಿಸಿದೆ. ನೀವು ಸಂಗ್ರಹಿಸಿದ ಬಾಟಲ್ ಅನ್ನು ವಾಯು ಅಭೇದ್ಯವಾಗಿಸಲು ಮತ್ತು ಪ್ರಯೋಗ ಮಾಡಲು ನೀವು ಮಾಡಬೇಕಾದದ್ದು ಇಂತಿದೆ:
೧. ತಿರುಪು ಮುಚ್ಚಳದ ಒಳಗೆ ಕರಾರುವಾಕ್ಕಾಗಿ ಅಳವಡಿಸಬಹುದಾದ ಉಂಗುರಾಕಾರದ ರಬ್ಬರ್ ‘ವಾಷರು’ ಒಂದನ್ನು ನೀವು ಸಂಗ್ರಹಿಸಿದ ಟ್ಯೂಬ್ ನಿಂದ ತಯಾರಿಸಿ. ಇದನ್ನು ಮುಚ್ಚಳದಲ್ಲಿ ಅಳವಡಿಸಿದಾಗ ಒಂದಿನಿತೂ ಸುಕ್ಕು ಇರಕೂಡದು. ವಾಷರು ಬಾಟಲ್ಲಿನ ಬಾಯಿಯ ಹೊರ ಅಂಚಿಗೆ ಕರಾರುವಾಕ್ಕಾಗಿ ಹೊಂದಾಣಿಕೆ ಆದರೆ ಮಾತ್ರ ಇದು ಸಾಧ್ಯ (ಚಿತ್ರ ೨)

೨. ತದನಂತರ ವಾಷರು ಅಳವಡಿಸಿದ ಮುಚ್ಚಳದ ಮಧ್ಯ ಭಾಗದಲ್ಲಿ ರೀಫಿಲ್ ಕೊಳವೆಯನ್ನು ಬಿಗಿಯಾಗಿ ತೂರಿಸಬಹುದಾದ ಒಂದು ಚಿಕ್ಕ ರಂಧ್ರವನ್ನೂ ಅದರ ಇಕ್ಕೆಲಗಳಲ್ಲಿ ಸೀಸದ ತಗಡುಗಳನ್ನು ಬಿಗಿಯಾಗಿ ತೂರಿಸಿ ನಿಲ್ಲಿಸಬಹುದಾದ ಒಂದೊಂದು ಸೀಳನ್ನೂ ಮಾಡಿ. ರೀಫಿಲ್ ಕೊಳವೆ ಮತ್ತು ಸೀಸದ ತಗಡುಗಳನ್ನು ಚಿತ್ರದಲ್ಲಿ ತೋರಿಸಿದಂತೆ ವಾಷರು ಇರುವ ಮುಚ್ಚಳಕ್ಕೆ ಜೋಡಿಸಿ (ಚಿತ್ರ ೩).

ಮುಚ್ಚಳದ ಒಳಗಿರುವ ರೀಫಿಲ್ ಕೊಳವೆಯ ತುದಿ ಮುಚ್ಚಳದ ಸಮೀಪದಲ್ಲಿಯೂ ಸೀಸದ ತಗಡುಗಳ ಕೆಳತುದಿಗಳು ಸಾಪೇಕ್ಷವಾಗಿ ದೂರದಲ್ಲಿಯೂ ಇರುವುದನ್ನು ಗಮನಿಸಿ.
೩. ರೀಫಿಲ್ ಕೊಳವೆಯ ಹೊರತುದಿಗೆ ವಾಲ್-ಟ್ಯೂಬನ್ನೂ ಸೀಸದ ತಗಡುಗಳಿಗೆ ವಿದ್ಯುದ್ವಾಹಕ ತಂತಿಗಳನ್ನೂ ಜೋಡಿಸಿ.
೪. ತದನಂತರ ರೀಫಿಲ್ ಕೊಳವೆ ಮತ್ತು ಸೀಸದ ತಗಡುಗಳನ್ನು ಮುಚ್ಚಳದಲ್ಲಿ ತೂರಿಸಿದ ರಂಧ್ರಗಳು ವಾಯು ಅಭೇದ್ಯವಾಗುವಂತೆ ಜೇನುಮೇಣ (ಅರಗೂ ಆದೀತು) ಕರಗಿಸಿ ಮೆತ್ತಿ. ಹೀಗೆ ಸಜ್ಜುಗೊಳಿಸಿದ ಮುಚ್ಚಳವನ್ನು ೧೦ ನಿಮಿಷ ಕಾಲ ಒಂದೆಡೆ ಇಡಿ.
೫. ಇಷ್ಟು ಸಿದ್ಧತೆ ಆದ ನಂತರ ಮುಚ್ಚಳವನ್ನು ಬಾಟಲಿಗೆ ಬಿಗಿಯಾಗಿ ಹಾಕಿ ಅದು ನಿಜವಾಗಿಯೂ ವಾಯು ಅಭೇದ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಬಾಟಲನ್ನು ನೀರಿನಲ್ಲಿ ಮುಳುಗಿಸಿ ಹಿಡಿದು ವಾಲ್ ಟ್ಯೂಬಿನ ಮೂಲಕ ಗಾಳಿ ಊದಿ (ಚಿತ್ರ ೪). ಬಾಟಲ್ ಮತ್ತು ಮುಚ್ಚಳದ ಯಾವುದೇ ಭಾಗದಿಂದ ಒಂದೇ ಒಂದು ವಾಯುವಿನ ಗುಳ್ಳೆಯೂ ಹೊರಬರದಿದ್ದರೆ ಅದು ವಾಯು ಅಭೇದ್ಯವಾಗಿದೆ. ಆಗಿರದಿದ್ದರೆ ಯುಕ್ತ ಪರಿಹಾರೋಪಾಯ ನೀವೇ ಪತ್ತೆ ಹಚ್ಚಿ. ವಾಯು ಅಭೇದ್ಯವಾಗದೇ ಇದ್ದರೆ ಪ್ರಯೋಗ ನಿರೀಕ್ಷಿತ ಫಲ ನೀಡುವುದಿಲ್ಲ.

೬. ತದನಂತರ ಬಾಟಲಿನಲ್ಲಿ ಮುಕ್ಕಾಲು ಭಾಗದಷ್ಟು ತುಸು ಪಟಿಕ ಲೀನಿಸಿದ ನೀರು ತುಂಬಿಸಿ ಮುಚ್ಚಳ ಬಿಗಿಯಾಗಿ ಹಾಕಿ. ಪಟಿಕಯುತ ನೀರು ದೀರ್ಘಕಾಲ ಕೆಡುವುದೂ ಇಲ್ಲ, ಸೀಸದ ಮೇಲೆ ರಾಸಾಯನಿಕ ಕ್ಚಿಯೆ ನಡೆಸುವುದೂ ಇಲ್ಲ. ದುಬಾರಿಯೂ ಅಲ್ಲ. ಎಂದೇ ಇದನ್ನು ಉಪಯೋಗಿಸುವುದು ಅತ್ಯುತ್ತಮ. ರೀಫಿಲ್ ಕೊಳವೆಯ ತುದಿ, ನೀರಿನಲ್ಲಿ ಮುಳುಗಿರಬಾರದು, ಸೀಸದ ತಗಡುಗಳು ಮುಳುಗಿರಬೇಕು ಎಂಬುದನ್ನು ಮರೆಯದಿರಿ (ಚಿತ್ರ ೫).

೭. ಒಂದು ಬಟ್ಟಲಿನಲ್ಲಿ ಸ್ವಲ್ಪ ಸಾಬೂನು ಲೀನಿಸಿದ ನೀರು ಹಾಕಿ ನೀವು ತಯಾರಿಸಿದ ಉಪಕರಣದಿಂದ ತುಸು ದೂರದಲ್ಲಿ ಇಡಿ. ಸೀಸದ ತಗಡಿಗೆ ಜೋಡಿಸಿದ ವಿದ್ಯುದ್ವಾಹಕ ತಂತಿಗಳನ್ನು ರಬ್ಬರ್ ಬ್ಯಾಡ್ ಮತ್ತು ಅಂಟುಟೇಪಿನ ನೆರವಿನಿಂದ ಶುಷ್ಕಕೋಶಗಳಿಗೆ ಜೋಡಿಸಿ (ಚಿತ್ರ ೫). ಬಾಟಲಿನೊಳಗೆ ನೀರಿನಲ್ಲಿ ಉಳುಗಿರುವ ಸೀಸದ ತಗಡುಗಳ ಬಳಿ ಗುಳ್ಳೆಗಳು ಉತ್ಪತ್ತಿಯಾಗಿ ಮೇಲೇರುವುದನ್ನು ವೀಕ್ಷಿಸಿ. ಒಂದೆರಡು ನಿಮಿಷಗಳ ನಂತರ ವಾಲ್ ಟ್ಯೂಬಿನ ತುದಿಯನ್ನು ಬಟ್ಟಲಿನಲ್ಲಿರುವ ಸಾಬೂನು ನೀರಿನಲ್ಲಿ ಮುಳುಗಿಸಿ ಹಿಡಿಯಿರಿ. ಅದರಿಂದ ಗುಳ್ಳೆಗಳು ಹೊರಬಂದು ನೀರಿನ ಮೇಲ್ಮೈ ಮೇಲೆ ಒತ್ತೊತ್ತಾಗಿ ನಿಲ್ಲುವುದನ್ನು ವೀಕ್ಷಿಸಿ. ಸುಮಾರು ೧೦-೨೦ ಗುಳ್ಳೆಗಳು ಸಂಗ್ರಹವಾದ ನಂತರ ವಾಲ್ ಟ್ಯೂಬಿನ ತುದಿಯನ್ನು ಹೊರತೆಗೆದು ನೀರಿನ ಬಟ್ಟಲಿನಿಂದ ತುಸು ದೂರದಲ್ಲಿ ಇಡಿ (ಇದು ಬಲು ಮುಖ್ಯ). ತದನಂತರ ಉರಿಯುತ್ತಿರುವ ಬೆಂಕಿಕಡ್ಡಿ ಅಥವ ಊದುಕಡ್ಡಿಯನ್ನು (ಗಂಧದ ಕಡ್ಡಿ) ನೀರಿನ ಮೇಲಿರುವ ಗುಳ್ಳೆಗಳಿಗೆ ಮುಟ್ಟಿಸಿ. ಗುಳ್ಳೆಗಳು ಚಿಕ್ಕ ಪಟಾಕಿಯಂತೆ ಸ್ಫೋಟಿಸುವುದನ್ನು ವೀಕ್ಷಿಸಿ. ಪ್ರಯೋಗವನ್ನು ಎಷ್ಟು ಬಾರಿ ಬೇಕಾದರೂ ಪುನರಾವರ್ತಿಸಬಹುದು. ಪ್ರತೀಬಾರಿಯೂ ಗುಳ್ಳೆಗಳಿಗೆ ಬೆಂಕಿ ಮುಟ್ಟಿಸುವಾಗ ವಾಲ್ ಟ್ಯೂಬಿನ ತುದಿ ದೂರದಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಿ. ವಾಲ್ ಟ್ಯೂಬಿನ ತುದಿಯ ಹತ್ತಿರ ಮರೆತು ಗಂಧದ ಕಡ್ಡಿ ಹಿಡಿದರೆ ಬಾಟಲ್ ಸ್ಫೋಟಿಸಿ ಹಾನಿಯಾದೀತು, ಜೋಕೆ. ನಿಮಗೆ ಸಾಕೆನಿಸಿದಾಗ ವಿದ್ಯುತ್ ಸಂಪರ್ಕ ತಪ್ಪಿಸಿ. ಮುಂದೆ ಪ್ರಯೋಗ ಮಾಡಬೇಕೆನಿಸಿದಾಗಲೆಲ್ಲ ಸಂಪರ್ಕ ಏರ್ಪಡಿಸಿ ಪಟಾಕಿ ಸಿಡಿಸಿ. ಒಂದು ವಿದ್ಯುತ್ ಸ್ವಿಚ್ ಅನ್ನು ವಿದ್ಯುನ್ಮಂಡಲದಲ್ಲಿ ಅಳವಡಿಸಿದರೆ ಸಂಪರ್ಕ ಏರ್ಪಡಿಸುವುದು-ತುಂಡರಿಸುವುದು ಸುಲಭವಾಗುತ್ತದೆ.
ವಿದ್ಯುತ್ ಸಂಪರ್ಕ ಏರ್ಪಡಿಸಿದಾಗ ನೀರಿನಲ್ಲಿ ಉತ್ಪತ್ತಿಯಾದ ಅನಿಲಗಳು ಯಾವುವು? ಅವುಗಳ ಮಿಶ್ರಣ ಭರಿತ ಗುಳ್ಳೆಗಳು ಸ್ಫೋಟಿಸಿದ್ದು ಏಕೆ ಎಂಬುದನ್ನು ಪತ್ತೆಹಚ್ಚಿ.
No comments:
Post a Comment