Pages

28 December 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೫೫

ಸಂವೇಗ ಸಂರಕ್ಷಣ (ಕನ್ಸರ್ವೇಷನ್ ಆಫ್ ಮೊಮೆಂಟಮ್) ತತ್ವಾಧಾರಿತ ವಿದ್ಯಮಾನಗಳು

ಚಲನೆಯಲ್ಲಿ ಇರುವ ವಸ್ತುವಿನ ದ್ರವ್ಯರಾಶಿ (ಮಾಸ್) ಮತ್ತು ವೇಗಗಳ ಗುಣಲಬ್ಧವೇ ಆ ವಸ್ತುವಿನ ಸಂವೇಗ (ಮೊಮೆಂಟಮ್), ಬಾಹ್ಯ ಬಲಗಳ ಪ್ರಭಾವಕ್ಕೆ ಒಳಗಾಗದ ವಸ್ತುವ್ಯವಸ್ಥೆಯಲ್ಲಿ ವಸ್ತುಗಳ ಸಂವೇಗಗಳ ಮೊತ್ತ ಸ್ಥಿರವಾಗಿರುತ್ತದೆ - ಇದು ಸಂವೇಗ ಸಂರಕ್ಷಣ ತತ್ವದ ತಿರುಳು. ಮುಂದೆ ವರ್ಣಿಸಿರುವ ಎರಡು ಪ್ರಯೋಗಗಳು ಈ ತತ್ವದ ಸರಿಸುಮಾರಾದ ಪ್ರಾತ್ಯಕ್ಷಿಕೆಗಳು.

ಪ್ರಯೋಗ ೧. ಸಮ ತೂಕದ ಸಮ ಗಾತ್ರದ ೫ ಗೋಲಿಗಳು (ಕಬ್ಬಿಣದ್ದಾದರೆ ಉತ್ತಮ, ಲಭ್ಯವಿಲ್ಲದಿದ್ದರೆ ಗಾಜಿನವೂ ಆದೀತು), ಎರಡು ಉದ್ದನೆಯ ಪೆನ್ಸಿಲ್ಲುಗಳು ಅಥವ ತತ್ಸಮನಾದ ಕಡ್ಡಿಗಳು, ಸುಮಾರು ೧೫-೨೦ ಸೆಂಮೀ ಉದ್ದದ ಸುಲಭವಾಗಿ ತುಂಡಾಗದ ಸಪುರ ದಾರದ ೫ ತುಂಡುಗಲು - ಇವಿಷ್ಟನ್ನು ಸಂಗ್ರಹಿಸಿ.

ಅಂಟುಟೇಪಿನ ನೆರವಿನಿಂದ ಒಂದು ದಾರದ ತುಂಡಿನ ಮಧ್ಯಭಾಗಕ್ಕೆ ಒಂದು ಗೋಲಿಯಂತೆ ೫ ಗೋಲಿಗಳನ್ನು ೫ ದಾರದ ತುಂಡುಗಳಿಗೆ ದೃಢವಾಗಿ ಅಂಟಿಸಿ. ದಾರದ ಎರಡೂ ತುದಿಗಳನ್ನು ಎತ್ತಿ ಹಿಡಿದಾಗ ಸಾಮಾನ್ಯ ಲೋಲಕದಂತೆ ಗೋಲಿ ಆಂದೋಲಿಸುವಂತೆ ಇರಬೇಕು. ದಾರವನ್ನು ಗೋಲಿಗಳಿಗೆ ಅಂಟಿಸಲು ಉಪಯೋಗಿಸಿದ ಟೇಪ್ ತುಂಡುಗಳ ಉದ್ದ ಸಮವಾಗಿರಲಿ.

ಎರಡು ಪೆನ್ಸಿಲ್ಲುಗಳನ್ನು ಮೇಜಿನ ಮೇಲೆ ಯುಕ್ತ ದೂರದಲ್ಲಿ ಸಮಾಂತರವಾಗಿ ಇಡಿ. ಪ್ರತೀ ಗೋಲಿಯ ದಾರದ ಒಂದು ತುದಿಯನ್ನು ಒಂದಿ ಪೆನ್ಸಿಲ್ಲಿಗೂ ಇನ್ನೊಂದು ತುದಿಯನ್ನು ಇನ್ನೊಂದು ಪೆನ್ಸಿಲ್ಲಿಗೂ ಭದ್ರವಾಗಿ ಕಟ್ಟಿ (ಚಿತ್ರ ೧). ಕಟ್ಟಿದ ಬಳಿಕ ಎಲ್ಲ ಗೋಲಿಗಳ ಎರಡೂ ಪಾರ್ಶ್ವಗಳಲ್ಲಿ ಇರುವ ದಾರದ ಭಾಗಗಳ ಉದ್ದಗಳು ಸಮವಾಗಿರಲೇ ಬೇಕು.



ಪುಸ್ತಕಗಳ ಅಟ್ಟಿ ಅಥವ ಬೇರೆ ಯಾವುದಾದರೂ ಲಭ್ಯವಿರುವ ಆಧಾರಗಳ ಮೇಲೆ ಗೋಲಿಯುಕ್ತ ಪೆನ್ಸಿಲ್ಲುಗಳನ್ನು ಪ್ರತೀ ಗೋಲಿಯೂ ಸ್ವತಂತ್ರವಾಗಿ ಆಂದೋಲಿಸಲು ಸಾಧ್ಯವಾಗುವಂತೆ ಇಡಿ (ಚಿತ್ರ ೨). ತದನಂತರ ದಾರಗಳನ್ನು ಎಷ್ಟು ಬೇಕೋ ಅಷ್ಟು ಜರುಗಿಸಿ ಗೋಲಿಗಳು ಒಂದನ್ನೊಂದು ಸ್ಪರ್ಷಿಸುವಂತೆ ಸಜ್ಜುಗೊಳಿಸಿ. ಎಲ್ಲ ಗೋಲಿಗಳು ಒಂದನ್ನೊಂದು ಸ್ಪರ್ಷಿಸುತ್ತಿರುವುದನ್ನೂ ಏಕರೇಖಸ್ಥವಾಗಿರುವುದನ್ನೂ ಖಾತರಿ ಪಡಿಸಿಕೊಳ್ಳಿ.



ಏಕರೇಖಾಗತವಾಗಿರುವ ಐದು ಗೋಲಿಗಳ ಪೈಕಿ ಯಾವುದಾದರೂ ಒಂದು ತುದಿಯ ಗೋಲಿಯನ್ನು ಗೋಲಿಗಳ ಸರಣಿಯ ನೇರದಲ್ಲಿಯೇ ಹಿಂದಕ್ಕೆ ಎಳೆದು ಹಿಡಿದುಕೊಳ್ಳಿ. ಈ ರೀತಿ ಹಿಡಿದುಕೊಂಡಾಗ ಆ ಗೋಲಿಗೆ ಅಂಟಿಸಿದ ದಾರಗಳ ಎರಡೂ ಭಾಗಗಳು ಸಡಿಲವಾಗಿರಕೂಡದು. ಎಳೆದು ಹಿಡಿದಿದ್ದ ಗೋಲಿಯನ್ನು ಬಿಟ್ಟರೆ ಏನಾಗವಹುದು? ಅದು ಅದರ ನಂತರದ ಗೋಲಿಗೆ ಢಿಕ್ಕಿ ಹೊಡೆಯ ಬೇಕಲ್ಲವೇ? ಢಿಕ್ಕಿ ಹೊಡೆದ ನಂತರ ಏನಾಗಬಹುದು, ಊಹಿಸಿ. ಗೋಲಿಯನ್ನು ಬಿಟ್ಟು ನಿಮ್ಮ ೂಹೆ ಸರಿಯೇ ಎಂಬುದನ್ನು ಪರೀಕ್ಷಿಸಿ.

ಗೋಲಿಗಳ ಸರಣಿಯ ಇನ್ನೊಂದು ತುದಿಯ ಗೋಲಿ ಮುಂದಕ್ಕೆ ಚಿಮ್ಮುತ್ತದೆ ಎಂದು ನೀವು ಊಹಿಸಿದ್ದರೆ ಮಾತ್ರ ನಿಮ್ಮ ಊಹೆ ಸರಿ ಎಂದು ಸಾಬೀತಾಗುತ್ತದೆ. ಮುಂದಕ್ಕೆ ಚಿಮ್ಮಿದ ಗೋಲಿ ಏನು ಮಾಡುತ್ತದೆ ಮತ್ತು ಅದರ ಪರಿಣಾಮವೇನು ಎಂಬುದನ್ನು ವೀಕ್ಷಿಸಿ. ನೀವು ಗೋಲಿಯನ್ನು ಎಷ್ಟು ಹಿಂದಕ್ಕೆ ಎಳೆದಿದ್ದಿರೋ ಹೆಚ್ಚುಕಮ್ಮಿ ಅಷ್ಟೇ ದೂರಕ್ಕೆ ಇನ್ನಂದು ತುದಿಯ ಗೋಲಿ ಚಿಮ್ಮುವುದನ್ನು ಗಮನಿಸಿ. ಸ್ವಲ್ಪ ಕಾಲ ಈ ಎರಡು ಗೋಲಿಗಳು ಪರ್ಯಾಯವಾಗಿ ಚಿಮ್ಮುವುದನ್ನೂ ಚಿಮ್ಮುವ ದೂರ ಕ್ರಮೇಣ ಕಮ್ಮಿ ಆಗುವುದನ್ನೂ ಗಮನಿಸಿ.

ತದನಂತರ ಯಾವುದಾದರೂ ಒಂದು ತುದಿಯ ಎರಡು ಗೋಲಿಗಳನ್ನು ಒಟ್ಟಿಗೇ ಈ ಮೊದಲಿನಂತೆ ಎಳೆದು ಬಿಟ್ಟು ಪರಿಣಾಮಗಳನ್ನು ವೀಕ್ಷಿಸಿ. ಸಂವೇಗ ಸಂರಕ್ಷಣ ತತ್ವದ ನೆರವಿನಿಂದ ಈ ವಿದ್ಯಮಾನಗಳನ್ನು ವಿವರಿಸಲು ಪ್ರಯತ್ನಿಸಿ. ಈ ಪ್ರಯೋಗದಲ್ಲಿ ಸಂವೇಗ ಸಂರಕ್ಷಣ ತತ್ವ ಶೇಕಡಾ ೧೦೦ ರಷ್ಟು ಅನ್ವಯವಾಗದಿರಲು ಕಾರಣ ಊಹಿಸಿ.

ಪ್ರಯೋಗ ೨. ಸಮತೂಕದ, ಸಮ ಗಾತ್ರದ ೫ ಗೋಲಿಗಳು, ಇವಕ್ಕಿಂತ ತುಸು ದೊಡ್ಡದಾದ ಒಂದು ಗೋಲಿ, ಒಂದು ಉದ್ದನೆಯ ಪೆನ್ಸಿಲ್, ಒಂದು ದಪ್ಪಕಾಗದದ ಹಾಳೆ - ಇವಿಷ್ಟನ್ನು ಸಂಗ್ರಹಿಸಿ.

ಎರಡು ಗೋಲಿಗಳನ್ನು ಏಕಕಾಲದಲ್ಲಿ ಉರುಳಿಸಿದರೆ ಬಳುಕದಷ್ಟು ಗಟ್ಟಿಯಾದ, ದೊಡ್ಡ ಗೋಲಿ ಅತ್ತಿತ್ತ ಓಲಾಡದೆ ನೇರವಾಗಿಯೂ ಸರಾಗವಾಗಿಯೂ ಉರುಳಲು ಎಷ್ಟು ವ್ಯಾಸವಿರಬೇಕೋ ಅಷ್ಟು ವ್ಯಾಸದ ಕೊಳವೆಯನ್ನು ದಪ್ಪಕಾಗದದ ಹಾಳೆಯಿಂದ ತಯಾರಿಸಿ (ಚಿತ್ರ ೩). ಕೊಳವೆಯ ಒಂದು ತುದಿಯಿಂದ ಸುಮಾರು ೨-೩ ಗೋಲಿಗಳು ಇಡುವಷ್ಟು ಸ್ಥಳ ಬಿಟ್ಟು ಪೆನ್ಸಿಲನ್ನು ಸರಾಗವಾಗಿ ತೂರಿಸಿ ತೆಗೆಯಬಹುದಾದಷ್ಟು ದೊಡ್ಡ ರಂಧ್ರವೊಂದನ್ನು ಮಾಡಿ (ಚಿತ್ರ ೪). ಗೋಲಿ ಸರಾಗವಾಗಿ ಉರುಳಬಹುದಾದ ಪಥವೊಂದನ್ನು ದಪ್ಪ ಕಾಗದದ ಹಾಳೆಯಿಂದ ತಯಾರಿಸಿ. ನೀವು ತಯಾರಿಸಿದ ಕೊಳವೆ ಕರಾರುವಾಕ್ಕಾಗಿ ಹಿಡಿಯುವಷ್ಟು ಅಗಲದ ಪಥ ಇದಾಗಿರಲಿ (ಚಿತ್ರ ೫).



ಪುಸ್ತಕಗಳ ನೆರವಿನಿಂದ ಕೊಳವೆಯ ಪೆನ್ಸಿಲ್ ರಂಧ್ರವಿರುವ ತುದಿ ಮೇಜಿನ ಮೇಲ್ಮೈನಿಂದ ಸುಮಾರು ೩ ಸೆಂಮೀ ಎತ್ರದಲ್ಲಿ ಇರುವಂತೆಯೂ ಇನ್ನೊಂದು ತುದಿ ಕಾಗದದ ಪಥದಲ್ಲಿ ಇರುವಂತೆಯೂ ಸಜ್ಜುಗೊಳಿಸಿ (ಚಿತ್ರ ೬). ನಾಲ್ಕು ಗೋಲಿಗಳನ್ನು ಪಥದಲ್ಲಿ ಒಂದಕ್ಕೊಂದು ತಾಗಿರುವಂತೆ ಸಾಲಾಗಿ ಜೋಡಿಸಿ.



ಕೊಳವೆಯ ರಂಧ್ರದಲ್ಲಿ ಪೆನ್ಸಿಲ್ ತೂರಿಸಿದ ನಂತರ ಕೊಳವೆಯ ಮೇಲ್ತುದಿಯೊಳಕ್ಕೆ ಒಂದು ಗೋಲಿ ಹಾಕಿ. ಈ ಗೋಲಿ ಕೊಳವೆಯಲ್ಲಿ ಉರುಳದಂತೆ ಪೆನ್ಸಿಲ್ ತಡೆಯುವುದನ್ನು ಗಮನಿಸಿ. ಕೊಳವೆ ಅಲುಗಾಡದಂತೆ ಹಿಡಿದುಕೊಂಡು ಪೆನ್ಸಿಲನ್ನು ಹೊರಕ್ಕೆಳೆಯಿರಿ. ಉರುಳುತ್ತಾ ಕೊಳವೆಯಿಂದ ಹೊರಬಂದ ಗೋಲಿ ಪಥದಲ್ಲಿ ಜೋಡಿಸಿದ ಗೋಲಿಗಳ ಪೈಕಿ ಮೊದಲನೆಯದಕ್ಕೆ ಢಿಕ್ಕಿ ಹೊಡೆದಾಗ ಎಷ್ಟು ಗೋಲಿಗಳು ಎಷ್ಟು ದೂರ ಚಲಿಸಿದವು ಎಂಬುದನ್ನು ವೀಕ್ಷಿಸಿ. ಕೊಳವೆಯೊಳಗೆ ಅನುಕ್ರಮವಾಗಿ ೨, ೩ ಗೋಲಿಗಳನ್ನೂ ಪಥದಲ್ಲಿ ಅನುಕ್ರಮವಾಗಿ ೩, ೨ ಗೋಲಿಗಳನ್ನೂ ಇಟ್ಟು ಪ್ರಯೋಗ ಪುನರಾವರ್ತಿಸಿ. ೫ ಗೋಲಿಗಳನ್ನು ಪಥದಲ್ಲಿಯೂ ಕೊಳವೆಯಲ್ಲಿ ದೊಡ್ಡ ಗೋಲಿಯನ್ನೂ ಇಟ್ಟು ಪ್ರಯೋಗ ಪುನರಾವರ್ತಿಸಿ.

ನಿಮ್ಮ ವೀಕ್ಷಣೆಗಳನ್ನು ಸಂವೇಗ ಸಂರಕ್ಷಣ ತತ್ವದಿಂದ ವಿವರಿಸಲು ಪ್ರಯತ್ನಿಸಿ

No comments: