ಬಲು ದೊಡ್ಡ ಕಟ್ಟಡಗಳನ್ನು ಕಟ್ಟುವಾಗ ಛತ್ತುವಿನ ಭಾರವನ್ನು ಹೊರಲೋಸುಗ ಕಾಂಕ್ರೀಟಿನ ಕಂಭಗಳನ್ನು ನಿರ್ಮಿಸುವುದನ್ನು ನೀವು ನೋಡಿರಬಹುದು. ತ್ರಿಭುಜಾಕಾರದ, ಆಯತ ಅಥವ ಚೌಕಾಕಾರದ. ಮತ್ತು ದುಂಡನೆಯ ಕಂಭಗಳ ಪೈಕಿ ಯಾವುದು ಹೆಚ್ಚು ಭಾರವನ್ನು ಹೊರಬಲ್ಲುದು? ಉತ್ತರ ತಿಳಿಯಲೋಸುಗ ಈ ಪ್ರಯೋಗ ಮಾಡಿ.
ಸಮತೂಕದ ದಪ್ಪ ರಟ್ಟಿನ ‘ನೋಟ್ ಬುಕ್’ಗಳನ್ನು ಸಾಧ್ಯವಿರುವಷ್ಟು ಹೆಚ್ಚು ಸಂಖ್ಯೆಯಲ್ಲಿ ಸಂಗ್ರಹಿಸಿ. ಅಂಚೆಕಾರ್ಡಿನಷ್ಟು ಅಥವ ಅದಕ್ಕಿಂತ ತುಸು ದಪ್ಪದ ೧೪ x ೯ ಸೆಂಮೀ ಅಳತೆಯ ಮೂರು ಕಾರ್ಡುಗಳನ್ನು ಸಿದ್ಧಪಡಿಸಿ. (ಮದುವೆ ಆಮಂತ್ರಣ ಕಾರ್ಡುಗಳಿಂದ ಇವನ್ನು ತಯಾರಿಸುವುದು ಸುಲಭ) ಚಿತ್ರದಲ್ಲಿ ತೋರಿಸಿರುವ ಅಳತೆಗಳಿಗೆ ಅನುಗುಣವಾಗಿ ಗೆರೆ ಎಳೆದು ಇವುಗಳನ್ನು ಕ್ರಮವಾಗಿ ೫, ೪, ಮತ್ತು ೨ ವಿಭಾಗಗಳಾಗಿ ವಿಭಜಿಸಿ. ಪ್ರತೀ ಕಾರ್ಡಿನಲ್ಲಿಯೂ ೨ x ೯ ಸೆಂಮೀ ಅಳತೆಯ ಒಂದು ವಿಭಾಗ ಇರುವುದನ್ನು ಗಮನಿಸಿ. ವಿಭಾಜಕ ಗೆರೆಗಳಗುಂಟ ಮಡಚಿ ೫ ವಿಭಾಗಗಳು ಉಳ್ಳ ಕಾರ್ಡಿನಿಂದ ಚೌಕಾಕಾರದ ತಳವುಳ್ಳ ಸ್ತಂಭಾಕೃತಿಯನ್ನೂ ೪ ವಿಭಾಗಗಳು ಉಳ್ಳದ್ದರಿಂದ ತ್ರಿಭುಜಾಕಾರದ ತಳವುಳ್ಳ ಸ್ತಂಭಾಕೃತಿಯನ್ನೂ ೨ ವಿಭಾಗಗಳು ಉಳ್ಳದ್ದರಿಂದ ವೃತ್ತಾಕಾರದ ತಳವುಳ್ಳ ಸ್ತಂಭಾಕೃತಿಯನ್ನೂ ತಯಾರಿಸಿ. ಅಪೇಕ್ಷಿತ ಘನಾಕೃತಿಯನ್ನು ರಚಿಸುವಾಗ ಅಂಟಿಸಲು ಪ್ರತೀ ಕಾರ್ಡಿನಲ್ಲಿಯೂ ಇರುವ ೨ x ೯ ಸೆಂಮೀ ಅಳತೆಯ ವಿಭಾಗವನ್ನು ಉಪಯೋಗಿಸಿ. ಈ ಎಲ್ಲ ಘನಾಕೃತಿಗಳ ಮೇಲ್ಮೈ ವಿಸ್ತೀರ್ಣ ಸಮವಾಗಿರುವುದನ್ನು ಗಮನಿಸಿ.

ನೀವು ತಯಾರಿಸಿದ ಮೂರು ಪುಟ್ಟ ಕಂಬಗಳನ್ನು ಸಮತಟ್ಟಾದ ಸ್ಥಳದಲ್ಲಿ ಸಾಲಾಗಿ ಇಡಿ. ಪ್ರತೀ ಕಂಬದ ಮೇಲೆ ಒಂದೊಂದು ‘ನೋಟ್ ಬುಕ್’ ಅನ್ನು ಜಾಗರೂಕತೆಯಿಂದ ಇಡಿ. ಈ ಮೂರೂ ಪುಸ್ತಕಗಳ ತೂಕಗಳು ಸಮವಾಗಿರಬೇಕು. ಪುನಃ ಪ್ರತೀ ಕಂಬದ ಮೇಲೆ ಈಗಾಗಲೇ ಇಟ್ಟಿರುವ ‘ನೋಟ್ ಬುಕ್’ ಮೇಲೆ ಜಾಗರೂಕತೆಯಿಂದ ಇನ್ನೂ ಒಂದೊಂದು ಸಮತೂಕದ ‘ನೋಟ್ ಬುಕ್’ ಇಡಿ. ಪುಸ್ತಕಗಳ ಭಾರ ತಡೆಯಲಾರದೆ ಎಲ್ಲ ಕಂಬಗಳೂ ಕುಸಿದು ಬೀಳುವ ತನಕ ಇದೇ ರೀತಿ ಪುಸ್ತಕಗಳನ್ನು ಇಡುತ್ತಿರಿ.

ಯಾವ ಅಕಾರದ ಕಂಬ ಮೊದಲು ಯಾವ ಆಕಾರದ್ದು ಕೊನೆಗೆ ಕುಸಿಯಿತು? ಯಾವ ಾಕಾರದ ಕಂಬ ಹೆಚ್ಚು ಭಾರ ಹೊರಲು ಸಮರ್ಥವಾಗಿದೆ? ಭಾರ ಹೊರುವ ಸಾಮರ್ಥ್ಯಕ್ಕೂ ಆಕೃತಿಯಲ್ಲಿ ಇರವ ಮೈಗಳ ಅಥವ ಮೂಲೆಗಳ ಸಂಖ್ಯೆಗೂ ಏನಾದರೂ ಸಂಬಂಧ ಇದೆಯೇ? ನಿಸರ್ಗದಲ್ಲಿ ಗಿಡಮರಗಳ ಕಾಂಡಗಳು ಯಾವ ಆಕಾರದ ಕಂಬವನ್ನು ಹೋಲುತ್ತವೆ? ಏಕೆ?
No comments:
Post a Comment