Pages

9 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೨೯

ಕನ್ನಡಿಗಳ ನೆರವಿನಿಂದ ಗಳಿಸಬಹುದಾದ ದಿವ್ಯದೃಷ್ಟಿ

ಗೋಡೆ ಅಥವ ಅಂತಹುದೇ ಬೇರೆ ಯಾವಯದಾದರೂ ಅಪಾರಕ ತಡೆಗಳ ಆಚೆ ಬದಿಯಲ್ಲಿ ಏನಿದೆ ಎಂಬುದನ್ನು ನಾವು ಇರುವ ಸ್ಥಳದಲ್ಲಿಯೇ ನೋಡಲು ಸಾಧ್ಯವೇ? ಯುಕ್ತ ರೀತಿಯಲ್ಲಿ ಕನ್ನಡಿಗಳನ್ನು ಜೋಡಿಸಿದರೆ ಸಾಧ್ಯ. ಚಿತ್ರದಲ್ಲಿ ತೋರಿಸಿದಂಥ ವ್ಯವಸ್ಥೆಯನ್ನು ನೀವೇ ಮಾಡಿ ನೋಡಿ. ಚಿತ್ರದಲ್ಲಿ ವೀಕ್ಷಕನಿಗೆ ಉರಿಯುತ್ತಿರುವ ಮೋಂಬತ್ತಿ ನೇರವಾಗಿ ಗೋಚರಿಸುತ್ತಿಲ್ಲ ಎಂಬುದನ್ನು ಗಮನಿಸಿ. ಮೋಂಬತ್ತಿಯನ್ನು ನೋಡಲು ಮಾಡಿದ ಕನ್ನಡಿಗಳ ಜೋಡಣೆಯ ವಿಧಾನ ಗಮನಿಸಿ. ರಟ್ಟಿನ ದೊಡ್ಡದೊಡ್ಡ ಡಬ್ಬಿಗಳನ್ನು ಅಥವ ಲಭ್ಯವಿರುವ ಯಾವುದಾದರೂ ಅಪಾರಕ ವಸ್ತುಗಳನ್ನು ತಡೆಗಳಾಗಿ ಉಪಯೋಗಿಸಿ ಮೋಂಬತ್ತಿ ಮತ್ತು ನಾಲ್ಕು ಕನ್ನಡಿಗಳನ್ನು ಚಿತ್ರದಲ್ಲಿ ತೋರಿಸಿದಂತೆ ವ್ಯವಸ್ಥೆ ಮಾಡಿ ವೀಕ್ಷಕನ ಸ್ಥಾನದಲ್ಲಿ ನಿಂತು ಉರಿಯುತ್ತಿರುವ ಮೋಂಬತ್ತಿಯನ್ನು ನೋಡಿ.

ನೀರಿನಲ್ಲಿ ಮುಳುಗಿರುವ ಜಲಾಂತರ್ಗಾಮಿ ನೌಕೆಯ ಒಳಗಿನಿಂದಲೇ ನೀರಮೇಲಿನ ಆಗುಹೋಗುಗಳನ್ನು ಕನ್ನಡಿಗಳ ಯುಕ್ತ ಜೋಡಣೆಯಿಂದ ನೋಡಲು ಸಾಧ್ಯ. ಈ ವ್ಯವಸ್ಥೆಗೆ ಪರಿದರ್ಶಕ (ಪೆರಿಸ್ಕೋಪ್) ಎಂದು ಹೆಸರು. ರಟ್ಟಿನ ಕೊಳವೆಗಳು ಮತ್ತು ಎರಡು ಚಿಕ್ಕ ಚೌಕಟ್ಟುರಹಿತ ಕನ್ನಡಿಗಳನ್ನು ಸಂಗ್ರಹಿಸಿ ಚಿತ್ರದ ನೆರವಿನಿಂದ ಒಂದು ಪರಿದರ್ಶಕವನ್ನು ನೀವೇ ತಯಾರಿಸಿ.

ಇದೇ ತತ್ವವನ್ನು ಆಧರಿಸಿ ಯುಕ್ತ ಗಾತ್ರದ ರಟ್ಟಿನ ಕೊಳವೆಗಳು ಮತ್ತು ನಾಲ್ಕು ಚೌಕಟ್ಟುರಹಿತ ಕನ್ನಡಿಗಳನ್ನು ಉಪಯೋಗಿಸಿ ಚಿತ್ರದಲ್ಲಿ ತೋರಿಸಿದಂಥ ಉಪಕರಣ ತಯಾರಿಸಿ ‘ಇಟ್ಟಿಗೆಯ ಮೂಲಕ ನೋಡಲು ನೆರವಾಗುವ ಯಂತ್ರ’ ಎಂಬ ನಾಮಫಲಕ ಹಾಕಿ ಶಾಲಾ ವಸ್ತುಪ್ರದರ್ಶನದಲ್ಲಿ ಇಡಬಹುದು. ಉಪಕರಣ ರಚಿಸುವಾಗ ಪ್ರತೀ ಸ್ತಂಭಾಕೃತಿಯ ಕೊಳವೆಯ ಹೊರ ತುದಿಗಳಲ್ಲಿ ಒಂದು ಕಣ್ಣಿನಿಂದ ಒಳಗಿನದನ್ನು ನೋಡಬಹುದಾದಷ್ಟು ದೊಡ್ಡ ರಂಧ್ರ ಇರುವಂತೆಯೂ ಇಟ್ಟಿಗೆ ಇಡಬೇಕಾದ ಸ್ಥಳದಲ್ಲಿ ತಲೆ ತೂರಿಸಿ ಕೊಳವೆಯ ಒಳ ಭಾಗ ನೋಡಲು ಸಾಧ್ಯವಾಗದಂತೆಯೂ ಎಚ್ಚರಿಕೆ ವಹಿಸಿ. ಕನ್ನಡಿಗಳ ಜೋಡಣೆಯಿಂದಾಗಿ ಇಟ್ಟಿಗೆ ಇಲ್ಲದೇ ಇದ್ದಾಗ ಕಾಣುವ ದೃಶ್ಯವೇ ಇಟ್ಟಿಗೆ ಇದ್ದಾಗಲೂ ಕಾಣುತ್ತದೆ.

No comments: