ಭೂಮಿಯ ಮೇಲಿರುವ ಮರಗಿಡಗಳು, ಕಟ್ಟಡಗಳು, ಬೀದಿ ದೀಪದ ಕಂಬಗಳು ಇವೇ ಮೊದಲಾದವು ನಾವು ಅವುಗಳಿಂದ ದೂರ ಸರಿದಂತೆ ಚಿಕ್ಕದಾಗುತ್ತಿರುವಂತೆ ಭಾಸವಾಗುವುದು ಏಕೆ? ವಸ್ತುವಿನ ಅಂಚುಗಳಿಂದ ನಮ್ಮ ಕಣ್ಣನ್ನು ತಲಪುವ ಬೆಳಕಿನ ಕಿರಣಗಳು ಉಂಟುಮಾಡುವ ಕೋನವನ್ನು ಆಧರಿಸಿ ಮಿದುಳು ವಸ್ತುವಿನ ಗಾತ್ರವನ್ನು ವ್ಯಾಖ್ಯಾನಿಸುತ್ತದೆ.
ಒಬ್ಬ ಮಿತ್ರನ ಸಹಕಾರದಿಂದ ಈ ಪ್ರಯೋಗ ಮಾಡಿ ನೋಡಿ. ಬಯಲಿನಲ್ಲಿ ಇರುವ ಯಾವುದಾದರೂ ಒಂದು ದೊಡ್ಡ ಕಂಬ ಅಥವ ಗಿಡವನ್ನು ಈ ಪ್ರಯೋಗಕ್ಕೆ ಆಯ್ಕೆ ಮಾಡಿ. ದಾರದ ಎರಡು ಉರುಳೆಗಳನ್ನು (ರೀಲ್) ಸಂಗ್ರಹಿಸಿ. ಒಂದು ಉರುಳೆಯ ದಾರದ ತುದಿಯನ್ನು ಕಂಬದ ಮೇಲ್ತುದಿಗೂ ಇನ್ನೊಂದರದ್ದನ್ನು ಬುಡಕ್ಕೂ ಕಟ್ಟಿ. ಕಂಬದಿಂದ ತುಸು ದೂರದಲ್ಲಿ ನಿಂತು ಎರಡೂ ದಾರಗಳನ್ನು ನಿಮ್ಮ ಕಣ್ಣಿನ ಸಮೀಪ ಸೇರಿಸಿದಾಗ ಉಂಟಾಗುವ ಕೋನವನ್ನು ಗಮನಿಸುವಂತೆ ನಿಮ್ಮ ಮಿತ್ರನೊಬ್ಬನಿಗೆ ಹೇಳಿ. ಕಂಬದಿಂದ ದೂರ ಸರಿದು ಪುನಃ ಎರಡೂ ದಾರಗಳನ್ನು ನಿಮ್ಮ ಕಣ್ಣಿನ ಸಮೀಪ ಸೇರಿಸಿದಾಗ ಉಂಟಾಗುವ ಕೋನ ಮೊದಲ ಬಾರಿಯದ್ದಕ್ಕಿಂತ ಸಾಪೇಕ್ಷವಾಗಿ ದೊಡ್ಡದಾಗಿದೆಯೇ, ಚಿಕ್ಕದಾಗಿದೆಯೇ ಗಮನಿಸಲು ಹೇಳಿ. ಕಂಬದಿಂದ ಇನ್ನೂ ದೂರ ಸರಿಯುತ್ತಾ ಸರಿಯುತ್ತಾ ಪ್ರಯೋಗ ಪುನರಾವರ್ತಿಸಿ. ಕಂಬದಿಂದ ದೂರ ಸರಿದಂತೆ ಕೋನಗಳು ಚಿಕ್ಕದಾಗುತ್ತವಲ್ಲವೇ? ಕಣ್ಣು ರವಾನಿಸುವ ಈ ಮಾಹಿತಿಯನ್ನು ಕಂಬದ ಎತ್ತರ ಕಮ್ಮಿ ಆಗುತ್ತಿದೆ ಎಂದು ಮಿದುಳು ಅರ್ಥೈಸುತ್ತದೆ.

ಈಗ ನಿಮ್ಮ ಬುದ್ಧಿಮತ್ತೆಗೆ ಒಂದು ಸವಾಲು - ಭೂಮಿಯ ಮೇಲೆ ನಾವು ಎಷ್ಟೇ ದೂರ ಚಲಿಸಿದರೂ ಚಂದ್ರನ ಗಾತ್ರ ಸ್ಥಿರವಾಗಿಯೇ ಇರುವಂತೆ ಗೋಚರಿಸುವುದು ಏಕೆ ಎಂಬುದನ್ನು ಚಟುವಟಿಕೆಯಿಂದ ಗ್ರಹಿಸಿದ ಮಾಹಿತಿಯನ್ನು ಆಧರಿಸಿ ವಿವರಿಸಬಲ್ಲಿರಾ?
೨. ಭೂಮಿಯ ಮೇಲೆ ನಾವು ಚಲಿಸುವಾಗ ಚಂದ್ರ ನಮ್ಮೊಂದಿಗೇ ಬರುತ್ತಿರುವಂತೆ ಭಾಸವಾಗುವುದು ಏಕೆ?
ಈ ಹಿಂದೆ ಮಾಡಿದ ಚಟುವಟಿಕೆಯನ್ನು ತುಸು ಬದಲಿಸಿ ಪುನಃ ಮಾಡಿ. ಈ ಚಟುವಟಿಕೆಯಲ್ಲಿ ಕಂಬದಿಂದ ದೂರದೂರ ಸರಿಯತ್ತಾ ಪ್ರಯೋಗ ಮಾಡುವ ಬದಲು ಕಂಬ ನಿಮ್ಮ ಎಡ ಅಥವ ಬಲಭಾಗದಲ್ಲಿ ತುಸು ದೂರದಲ್ಲಿ ಮುಂದೆ ಇರುವಂತೆ ನಿಂತು, ಆ ಸ್ಥಳದಿಂದ ನಡೆಯಲಾರಂಭಿಸಿ ಅದನ್ನು ದಾಟಿ ಮುಂದೆ ಇರುವ ಯಾವುದಾದರೊಂದು ಸ್ಥಳ ತಲುಪಬೇಕು. ಹೀಗೆ ಸಾಗುವಾಗ ಕಂಬದಿಂದ ನಿಮಗಿರುವ ದೂರ ಹೆಚ್ಚುಕಮ್ಮಿ ಒಂದೇ ಆಗಿರಲಿ. ನೀವು ನಡೆಯಲು ಆರಂಭಿಸುವ ಸ್ಥಳ ಮತ್ತು ತಲುಪಬೇಕೆಂದಿರುವ ಸ್ಥಳವನ್ನು ಜೋಡಿಸುವಂತೆ ಹೆಚ್ಚುಕಮ್ಮಿ ನೇರವಾಗಿರುವ ರೇಖೆಯೊಂದನ್ನು ನೆಲದ ಮೇಲೆ ಎಳೆಯಿರಿ. ಉರುಳೆಯ ದಾರದ ಒಂದು ತುದಿಯನ್ನು ಕಂಬಕ್ಕೆ ಕಟ್ಟಿ ನೀವು ನಡೆಯಲಾರಂಭಿಸುವ ಸ್ಥಳದಲ್ಲಿ ನಿಂತುಕೊಳ್ಳಿ. ಕಂಬದಿಂದ ಬಂದ ದಾರಕ್ಕೂ ನೀವು ಚಲಿಸುವ ಪಥವನ್ನು ಪ್ರತಿನಿಧಿಸುವ ರೇಖೆಗೂ ನಡುವಿನ ಕೋನ ಗಮನಿಸಿ. ತದನಂತರ ಗುರುತಿಸಿದ ಪಥದಲ್ಲಿ ನಡೆಯುತ್ತಾ ಪಥದ ಬೇರೆಬೇರೆ ಸ್ಥಳಗಳಲ್ಲಿ ನಿಂತು ಕಂಬದಿಂದ ಬಂದ ದಾರಕ್ಕೂ ನೀವು ಚಲಿಸುವ ಪಥವನ್ನು ಪ್ರತಿನಿಧಿಸುವ ರೇಖೆಗೂ ನಡುವಿನ ಕೋನದಲ್ಲಿ ಆಗುವ ಬದಲಾವಣೆ ಗಮನಿಸಿ. ಕೋನದಲ್ಲಿ ಆಗುವ ಬದಲಾವಣೆಯ ದರವನ್ನೂ ಗಮನಿಸಿ. ತದನಂತರ ಕಂಬದಿಂದ ಈಗ ಇರುವ ದೂರಕ್ಕಿಂತ ಬಹುಪಟ್ಟು ಹೆಚ್ಚು ದೂರ ಸರಿದು ಪ್ರಯೋಗ ಪುನರಾವರ್ತಿಸಿ. ಪುನರಾವರ್ತಿಸುವಾಗ ನೀವು ನಡೆಯುವ ದೂರ ಮೊದಲು ನಡೆದಷ್ಟೇ ಇರಲಿ. ನೀವು ಕಂಬದಿಂದ ಇರುವ ದೂರಕ್ಕೂ ಕೋನಬದಲಾವಣೆಯ ದರಕ್ಕೂ ಇರುವ ಸಂಬಂಧ ಗಮನಿಸಿ.

No comments:
Post a Comment