Pages

12 January 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೪

ವಿಮಾನದ ರೆಕ್ಕೆಯ ಕಾರ್ಯ

ತುಸ ದಪ್ಪವಾದ ಕಾಗದದ ಹಾಳೆಯಿಂದ ಸುಮಾರು ೫ ಸೆಂಮೀ ಅಗಲ ಮತ್ತು ೧೫ ಸೆಂಮೀ ಉದ್ದದ ಪಟ್ಟಿಯೊಂದನ್ನು ತಯಾರಿಸಿ. ಅದರಿಂದ ಚಿತ್ರದಲ್ಲಿ ತೋರಿಸಿರುವ ಆಕೃತಿಯನ್ನು ರಚಿಸಿ. ವಿಮಾನದ ರೆಕ್ಕೆಗಳು ಸರಿಸುಮಾರಾಗಿ ಈ ಆಕೃತಿಯನ್ನು ಹೋಲುತ್ತವೆ. ಆಕೃತಿಯ ತಳಭಾಗ ನೇರವಾಗಿರುವುದನ್ನೂ ಮೇಲ್ಭಾಗ ವಿಶಿಷ್ಠ ರೀತಿಯಲ್ಲಿ ವಕ್ರವಾಗಿರುವುದನ್ನೂ ಗಮನಿಸಿ. ಈ ಆಕೃತಿಯ ಯಾವ ಬಿಂದುವಿನಲ್ಲಿ ಒಂದು ಬೆರಳಿನ ತುದಿಯಿಂದ ಎತ್ತಿ ಹಿಡಿದರೆ ಆಕೃತಿ ಭೂತಲಕ್ಕೆ ಸಮಾಂತರವಾಗಿ ನಿಲ್ಲುತ್ತದೆ ಎಂಬುದನ್ನು ಪತ್ತೆ ಹಚ್ಚಿ. ಬಾಲ್ ಪಾಇಂಟ್ ಪೆನ್ನಿನ ಖಾಲಿ ರೀಫಿಲ್ ಕೊಳವೆಯನ್ನು ಆಕೃತಿಯ ತಳಭಾಗದಲ್ಲಿರುವ ಆ ಬಿಂದುವಿನಲ್ಲಿ ಮೊದಲು ತದನಂತರ ಮೇಲಿನ ವಕ್ರಭಾಗದ ಮೂಲಕ ತೂರಿಸಿ. ಕೊಳವೆಯ ಅನಗತ್ಯ ಭಾಗಗಳನ್ನು ಕತ್ತರಿಸಿ ತೆಗೆಯಿರಿ. ಕೊಳವೆಯ ಮೂಲಕ ಉದ್ದನೆಯ ದಾರವೊಂದನ್ನು ಪೋಣಿಸಿ. ದಾರದ ೆರಡೂ ತುದಿಗಳನ್ನು ಎಳೆದು ಭೂಮಿಗೆ ಲಂಬವಾಗಿ ಹಿಡಿದರೆ ಕಾಗದದ ಆಕೃತಿ ಕೆಳತುದಿಗೆ ಜಾರಿ ನಿಲ್ಲುತ್ತದೆ. ಇಷ್ಟಾದ ಬಳಿಕ ಒಂದು ಟೇಬಲ್ ಫ್ಯಾನ್ ಚಾಲೂ ಮಾಡಿ ಅದರಿಂದ ಬೀಸುವ ಗಾಳಿಯ ಎದುರು ಆಕೃತಿಯ ಮೂತಿಯಂತಿರುವ ಭಾಗ ಬರುವಂತೆ ಹಿಡಿಯಿರಿ. ಗಾಳಿ ಬೀಸುತ್ತಿರುವ ದಕ್ಕಿಗೆ ಸಾಪೇಕ್ಷವಾಗಿ ಯುಕ್ತ ಸ್ಥಾನಕ್ಕೆ ಆಕೃತಿ ಬಂದೊಡನೆ ಅದು ದಾರದಗುಂಟ ತುಸ ಮೇಲೇರಿ ಯಾವ ಆಧಾರದ ನೆರವೂ ಇಲ್ಲದೆ ಗಾಳಿಯಲ್ಲಿ ತೇಲಾಡುತ್ತಾ ನಿಲ್ಲುವುದನ್ನು ಗಮನಿಸಿ. ಗಾಳಿ ಬೀಸುವುದು ನಿಂತೊಡನೆ ಆಕೃತಿ ಕೆಳಕ್ಕೆ ಜಾರುವದನ್ನೂ ಗಮನಿಸಿ.

ಈ ಮಾಲಿಕೆಯ ಹಿಂದಿನ ಕಂತಿನ ಪ್ರಯೋಗಗಳು ಸಾಬೀತು ಪಡಿಸಿದ ತತ್ವವನ್ನೇ ಈ ವಿದ್ಯಮಾನವೂ ಆಧರಿಸಿದೆಯೇ ಎಂಬುದನ್ನು ಪರಿಶೀಲಿಸಿ.

ವಿಮಾನವನ್ನು ಗಾಳಿಯಲ್ಲಿ ಮೇಲೆತ್ತಿ ಹಿಡಿಯುವುದೇ ಅದರ ರೆಕ್ಕೆಗಳ ಪ್ರಧಾನ ಕಾರ್ಯ.ತನಗೆ ಅಂಟಿಕೊಂಡಿರುವ ಭಾರವನ್ನು ರೆಕ್ಕೆ ಮೇಲಕ್ಕೆ ಎತ್ತಬಲ್ಲುದೇ ಎಂಬುದನ್ನು ತಿಳಿಯಲು ಇನ್ನೊಂದು ಪ್ರಯೋಗ ಮಾಡಿ.

ಪ್ಲಾಸ್ಟಿಕ್ ನ ಒಂದು ತೆಳುವಾದ ಅಳತೆಪಟ್ಟಿ, ೨೦ x ೧೦ ಸೆಂಮೀ ಅಳತೆಯ ತೆಳುವಾದ ರಟ್ಟಿನ ತುಂಡು, ಒಂದು ಉಪಯೋಗಿಸಿದ ಅಂಚೆಕಾರ್ಡ್, ಅಂಟು ಟೇಪ್, ೪-೬ ಡ್ರಾಇಂಗ್ ಪಿನ್ ಗಳು, ಊದುಗೊಳವೆ (ಎರಡೂ ಕಡೆ ತೆರೆದಿರುವ ಬಾಲ್ ಪಾಇಂಟ್ ಪೆನ್ನಿನ ಕೊಳವೆ), ಬಾಲ್ ಪಾಇಂಟ್ ಪೆನ್ನಿನ ಒಂದು ಖಾಲಿ ರೀಫಿಲ್, ಒಂದು ಪೆನ್ಸಿಲ್ ಅಥವ ದಪ್ಪನೆಯ ಪೆನ್ - ಇವಿಷ್ಟು ಸಾಮಗ್ರಿಗಳನ್ನು ಸಂಗ್ರಹಿಸಿ.

ಅಳತೆಪಟ್ಟಿಯ ಒಂದು ತುದಿಗೆ ರಟ್ಟಿನತುಂಡನ್ನು ಅಂಟುಟೇಪಿನ ನೆರವಿನಿಂದ ಬಂಧಿಸಿ. ರಟ್ಟಿನ ತುಂಡಿನ ಉದ್ದನೆಯ ಬಾಹು ಅಳತೆಪಟ್ಟಿಯ ನೇರಕ್ಕೆ ಲಂಬವಾಗಿರಲಿ. ಅಂಚೆಕಾರ್ಡನ್ನು ಹಿಂದಿನ ಪ್ರಯೋಗದಲ್ಲಿ ಉಪಯೋಗಿಸಿದ ಆಕೃತಿಯ ವಕ್ರಮೈನ ಆಕಾರಕ್ಕೆ ಸರಿಸುಮಾರಾಗಿ ಬಾಗಿಸಿ ಡ್ರಾಇಂಗ್ ಪಿನ್ನುಗಳ ನೆರವಿನಿಂದ ರಟ್ಟಿನ ತುಂಡಿನ ಮೇಲ್ಭಾಗಕ್ಕೆ ಜೋಡಿಸಿ. ಪೆನ್ ಅಥವ ಪೆನ್ಸಿಲ್ ನೆರವಿನಿಂದ ಒಟ್ಟಾರೆ ಜೋಡಣೆಯ ಒಂದು ವಿಶಿಷ್ಟ ತೂಗುತೊಲೆ (ಸೀ -ಸಾ) ನಿರ್ಮಿಸಬೇಕು. ಇದಕ್ಕೆ ನೀವು ಮಾಡಬೇಕಾದದ್ದು ಇಷ್ಟು - ಅಳತೆಪಟ್ಟಿಗೆ ರಟ್ಟಿನ ತುಂಡನ್ನು ಬಂಧಿಸಿದ ತುದಿಯ ವಿರುದ್ಧ ತುದಿಯ  ಅಡಿಯಲ್ಲಿ ಪೆನ್ಸಿಲ್ ಅಥವ ಪೆನ್ನನ್ನು ಇಡಿ. ಈಗ ಅಳತೆಪಟ್ಟಿಗೆ ರಟ್ಟನ್ನು ಬಂಧಿಸಿರುವ ತುದಿ ಮೇಜನ್ನು ಮುಟ್ಟಿಕೊಂಡಿರುತ್ತದಷ್ಟೆ? ಪೆನ್ಸಿಲ್ ಅಥವ ಪೆನ್ನನ್ನು ರಟ್ಟಿರುವ ತುದಿಯ ಕಡೆಗೆ ತುಸು ಜರುಗಿಸಿ ಆ ತುದಿ  ಮೇಜನ್ನು ಮುಟ್ಟಿಕೊಂಡಿದೆಯೇ ಮೇಲೇರಿದೆಯೇ ಎಂಬುದನ್ನು ಗಮನಿಸಿ. ಮೇಜನ್ನು ಮುಟ್ಟಿಕೊಂಡಿದ್ದರೆ ಪುನಃ ಪೆನ್ಸಿಲ್ ಅಥವ ಪೆನ್ನನ್ನು ರಟ್ಟಿರುವ ತುದಿಯ ಕಡೆಗೆ ತುಸು ಜರುಗಿಸಿ ಆ ತುದಿ  ಮೇಜನ್ನು ಮುಟ್ಟಿಕೊಂಡಿದೆಯೇ ಮೇಲೇರಿದೆಯೇ ಎಂಬುದನ್ನು ಗಮನಿಸಿ. ಇದೇ ರೀತಿ ಮುಂದುವರಿಸಿ ಅಳತೆಪಟ್ಟಿಯ ರಟ್ಟು ಇರುವ ತುದಿ ಮೇಲೇರಲು ಆರಂಭಿಸುವ ಮೊದಲ ಸ್ಥಳ ಗುರುತಿಸಿ. ತದನಂತರ ಪೆನ್ಸಿಲ್ ಅಥವ ಪೆನ್ನನ್ನು ೧ ಮಿಮೀ ಹಿಂದಕ್ಕೆ ಜರುಗಿಸಿ ರಟ್ಟಿರುವ ತುದಿ ಮೇಜನ್ನು ಮುಟ್ಟುವಂತೆ ಮಾಡಿ. ಪ್ರಯೋಗ ಮುಗಿಯುವ ತನಕ ಅಳತೆಪಟ್ಟಿಯನ್ನು ಅಥವ ಪೆನ್ಸಿಲ್/ಪೆನ್ನನ್ನು ಸ್ಥಳಾಂತರಿಸಬೇಡಿ. ಇದಿಷ್ಟು ಪ್ರಯೋಗದ ಪೂರ್ವಸಿದ್ಧತೆ.

ಇಷ್ಟು ಸಿದ್ಧತೆ ಮಾಡಿಕೊಂಡ ಬಳಿಕ ಚಿತ್ರದಲ್ಲಿ ಬಾಣದ ಗುರುತಿನ ಚಿಹ್ನೆಯಿಂದ ಸೂಚಿಸಿದಂತೆ ರಟ್ಟಿನ ಮೇಲ್ಮೈಗೆ ಸಮಾಂತರವಾಗಿ ಊದುಗೊಳವೆಯ ನೆರವಿನಿಂದ ಗಾಳಿ ಊದಿ. ಗಾಳಿ ಊದುತ್ತಿರುವ ಅವಧಿಯಲ್ಲಿ ರಟ್ಟು ಇರುವ ತುದಿ ಮೇಲಕ್ಕೇರುವುದನ್ನೂ ಊದುವುದನ್ನು ನಿಲ್ಲಿಸಿದ ತಕ್ಷಣ ಮೇಜಿಗೆ ಬೀಳುವುದನ್ನೂ ಗಮನಿಸಿ.

ವಿಮಾನದ ರೆಕ್ಕೆಯಂತೆ ವರ್ತಿಸುವ ಅಂಚೆಕಾರ್ಡ್ ಮೇಲಕ್ಕೇರಿದಾಗ ಅದಕ್ಕೆ ಅಂಟಿಕೊಂಡಿದ್ದ ವಸ್ತುಗಳೂ ಮೇಲಕ್ಕೇರಿದವು. ವಿಮಾನ ಮೇಲಕ್ಕೇರುವುದರಲ್ಲಿ ಅದರ ರೆಕ್ಕೆಗಳ ಪಾತ್ರ ಏನು ಎಂಬುದನ್ನು ಈಗ ನೀವೇ ವಿವರಿಸಬಹುದಲ್ಲವೇ?

No comments: