Pages

15 November 2010

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೧

ವಾಯು ಸಮ್ಮರ್ದದ (ಒತ್ತಡದ) ಸಾಮರ್ಥ್ಯ ಪರೀಕ್ಷೆ.

ಗಾಜಿನ ಒಂದೇ ಗಾತ್ರದ ಎರಡು ಲೋಟಗಳನ್ನು ಸಂಗ್ರಹಿಸಿ. ಇವುಗಳ ಬಾಯಿ

ಯ ವ್ಯಾಸಗಳೂ ಒಂದೇ ಆಗಿರಬೇಕು. ಒಂದನ್ನು ಮೇಜಿನ ಮೇಲೆ ಇಟ್ಟು ಅದರ ಮೇಲೆಇನ್ನೊಂದನ್ನು ಕವುಚಿ ಇಟ್ಟು ಬಾಯಿಯ ವ್ಯಾಸಗಳು ಒಂದೇ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಿ.

ಒಂದು ಚಿಕ್ಕ ಮೋಂಬತ್ತಿ, ಒಂದು ಬೆಂಕಿಪೆಟ್ಟಿಗೆ ಮತ್ತು ಒಂದು ಗಂಧದಕಡ್ಡಿ ಸುಲಭವಾಗಿ ನೀರು ಹೀರುವಂಥ ಹಾಳೆಗಳುಳ್ಳ ವಾರ್ತಾಪತ್ರಿಕೆ ಒಂದನ್ನು ಸಂಗ್ರಹಿಸಿ.  ಮಧ್ಯದಲ್ಲಿ ಲೋಟದ ಬಾಯಿಯ ವ್ಯಾಸಕ್ಕಿಂತ ಕಮ್ಮಿ ವ್ಯಾಸದ ವೃತ್ತಾಕಾರದ ರಂಧ್ರವಿರುವ ೮-೧೦ ಪದರಗಳುಳ್ಳ ‘ವಾಷರ್’ ಒಂದನ್ನು ವಾರ್ತಾಪತ್ರಿಕೆಯ ಹಾಳೆಗಳನ್ನು ಕತ್ತರಿಸಿ ತಯಾರಿಸಿ. ‘ವಾಷರ್’ಅನ್ನು ಚೆನ್ನಾಗಿ ಒದ್ದೆ ಮಾಡಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.

ಒಂದು ಲೋಟವನ್ನು ಮೇಜಿನ ಮೇಲೆ ಇಟ್ಟು ಅದರೊಳಗೆ ಮೋಂಬತ್ತಿಯನ್ನು ಭದ್ರವಾಗಿ ನಿಲ್ಲಿಸಿ. ಲೋಟದ ಬಾಯಿಯ ಮೇಲೆ ನೀವು ತಯಾರಿಸಿದ ವಾಷರ್ ಇಡಿ. ಬಲು ಚುರುಕಾಗಿ ಎರಡೂ ಲೋಟಗಳ ಬಾಯಿಯ ಅಂಚುಗಳು ಪರಸ್ಪರ ಸಂಪೂರ್ಣವಾಗಿ ತಾಗುವಂತೆ ಅದರ ಮೇಲೆ ಇನ್ನೊಂದು ಲೋಟವನ್ನು ಕವುಚಿ ಇಡಲು ಅಭ್ಯಾಸ ಮಾಡಿ. ಅಭ್ಯಾಸಾವಧಿಯಲ್ಲಿ ಪ್ರತೀ ಬಾರಿಯೂ ಕವುಚಿ ಇಟ್ಟ ಲೋಟವನ್ನು ಮೇಲಕ್ಕೆ ಎತ್ತಿದಾಗ ಮೇಜಿನ ಮೇಲಿನ ಲೋಟ  ಅದನ್ನ ಇಟ್ಟಿದ್ದ ಸ್ಥಳದಿಂದ ಕದಲುವುದಿಲ್ಲ ಎಂಬುದನ್ನು ಗಮನಿಸಿ.

ತದನಂತರ, ಮೋಂಬತ್ತಿಯನ್ನು ಗಂಧದಕಡ್ಡಿಯ ನೆರವಿನಿಂದ ಉರಿಸಿ. ಕೆಲ ಕ್ಷಣಗಳ ಕಾಲ ಮೋಂಬತ್ತಿ ಉರಿದ ನಂತರ ಬಲು ಚುರುಕಾಗಿ ಒಂದನೇ ಲೋಟದ ಮೇಲೆ ಮೊದಲೇ ಸೂಚಿಸಿದಂತೆ ಕವುಚಿ ಇಟ್ಟು ಮೋಂಬತ್ತಿ ನಂದುವ ತನಕ ಒತ್ತಿ ಹಿಡಿಯಿರಿ. ಮೋಬತ್ತಿ ನಂದಿದ ಬಳಿಕ ಮೇಲೆ ಕವುಚಿ ಇಟ್ಟ ಲೋಟವನ್ನು ಮಾತ್ರ ನಿಧಾನವಾಗಿ ಮೇಲಕ್ಕೆ ಎತ್ತಿ. ಕೆಳಗಿನ ಲೋಟವೂ ವಾಷರ್ ಸಹಿತ ಅದಕ್ಕೆ ಅಂಟಿಕೊಂಡೇ ಬರುವ ವಿಚಿತ್ರ ವೀಕ್ಷಿಸಿ.

ಎರಡು ಲೋಟಗಳನ್ನು ಬೇರ್ಪಡಿಸಲು ನೀವು ಸ್ವಲ್ಪ ಬಲ ಪ್ರಯೋಗ ಮಾಡಬೇಕಾಗುತ್ತದೆ. ಅವು ಬೇರ್ಪಡುವಾಗ ‘ಪಾಪ್’ ಎಂದು ಶಬ್ದವಾಗುವುದನ್ನೂ ಗಮನಿಸಿ.

ಮೋಂಬತ್ತಿ ಉರಿಸುವ ಮುನ್ನ ಲೋಟಗಳು ಅಂಟಿಕೊಳ್ಳದೇ ಇದ್ದದ್ದು ಏಕೆ? ಉರಿದು ನಂದಿದ ಬಳಿಕ ಅಂಟಿಕೊಳ್ಳುವುದು ಏಕೆ? ಈ ಪ್ರಯೋಗದಲ್ಲಿ ಒದ್ದೆ ಪೇಪರ್ ವಾಷರ್ ನ ಪಾತ್ರ ಏನು ಎಂಬುದನ್ನು ಅದು ಇಲ್ಲದೆಯೇ ಪ್ರಯೋಗವನ್ನು ಪುನರಾವರ್ತಿಸಿ ನೀವೇ ಅನುಮಾನಿಸಿ.

No comments: