Pages

18 October 2010

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೮

ವಾಯುವಿನ ಬಲ ಪ್ರದರ್ಶನ!

ಕೈನಿಂದ ಒತ್ತಿದರೆ ಮುದುಡುವಷ್ಟು ಮಿದುವಾಗಿರುವ ನೀರಿನ ಬಾಟಲ್ (ಪ್ಲಾಸ್ಟಿಕ್ ನದ್ದು), ಅದರ ಬಾಯಿಯನ್ನು ಪೂರ್ಣವಾಗಿ ಮುಚ್ಚಬಲ್ಲ ಒಂದು ತೆಳುವಾದ ರಬ್ಬರ್ ಹಾಳೆ (ತೂತಾದ ಬೆಲೂನ್ ಕತ್ತರಿಸಿ ತಯಾರಿಸಿಕೊಳ್ಳಿ), ಒಂದು ಒಳ್ಳೆಯ ರಬ್ಬರ್ ಬ್ಯಾಂಡ್, ಒಂದು ಚಿಕ್ಕ ಬಕೆಟ್ ನಲ್ಲಿ ಹಬೆಯಾಡುತ್ತಿರುವ ಸುಡು ಬಿಸಿನೀರು, ಒಂದು ಚಿಕ್ಕ ಬಕೆಟ್ ನಲ್ಲಿ ತಣ್ಣೀರು - ಇವಿಷ್ಟನ್ನು ಒಂದೆಡೆ ಇಟ್ಟುಕೊಳ್ಳಿ.

ಮೊದಲು ಸುಡುಬಿಸಿ ನೀರನ್ನು ಬಾಟಲಿನಲ್ಲಿ ತುಂಬಿಸಿ ಒಂದೆರಡು ನಿಮಿಷ ಇಡಿ. ಬಳಿಕ  ಬಾಟಲಿನಲ್ಲಿರುವ ಬಿಸಿನೀರಿನ ಸುಮಾರು ೩/೪ ಭಾಗವನ್ನು ಬಿಸಿನೀರಿನ ಬಕೆಟ್ಟಿಗೆ ಸುರಿಯಿರಿ. ತಕ್ಷಣ ಬಾಟಲನ್ನು ಅದರ ಕತ್ತಿನ ತನಕ ಸುಡುಬಿಸಿ ನೀರಿನಲ್ಲಿ ಮುಚ್ಚಳ ಹಾಕದೆಯೇ ಮುಳುಗಿಸಿ ೨-೩ ನಿಮಿಷ ಕಾಲ ಹಿಡಿದುಕೊಳ್ಳಿ. (ಹೀಗೆ ಮಾಡಲು ಚಿಮ್ಮಟ ಅಥವ ಕರವಸ್ತ್ರ ಉಪಯೋಗಿಸ ಬಹುದು). ಸುಡುಬಿಸಿ ನೀರು ಕೈಗೆ ತಾಗದಂತೆ ಅಥವ ಕೈ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಿ. ತದನಂತರ ಬಾಟಲನ್ನು ಹೊರತೆಗದು ಕೂಡಲೇ ಬಲು ಚುರುಕಾಗಿ ಅದರ ಬಾಯಿಯನ್ನು ರಬ್ಬರ್ ಹಾಳೆಯಿಂದ ಮುಚ್ಚಿ ರಬ್ಬರ್ ಬ್ಯಾಂಡ್ ನೆರವಿನಿಂದ ವಾಯು ಒಳಹೋಗದಂತೆ ಬಂಧಿಸಿ. (ಪ್ರಯೋಗದ ಯಶಸ್ಸು ಈ ಕಾರ್ಯವನ್ನು ನೀವು ಎಷ್ಟು ವೇಗವಾಗಿ ಮಾಡುತ್ತೀರಿ ಎಂಬುದನ್ನು ಅವಲಂಬಿಸಿದೆ).  ತದನಂತರ ಬಾಟಲನ್ನು ತಣ್ಣೀರಿನ ಬಕೆಟ್ಟಿನಲ್ಲಿ ಪೂರ್ಣವಾಗಿ ಮುಳುಗಿಸಿ ಹಿಡಿಯಿರಿ. ಬಾಟಲ್ ತನ್ನ ಾಕಾರವನ್ನು ಕಳೆದುಕೊಂಡು ಕೊಂಚ ಮುದುಡುವುದನ್ನು ಗಮನಿಸಿ. ಬಾಟಲಿನ ಬಾಯಿಯನ್ನು ಮುಚ್ಚಿದ್ದ ರಬ್ಬರ್ ಹಾಳೆ ಸಡಲಿಸಿ. ಸುಂಯ್ ಎಂಬ ಸದ್ದಿನೊಡನೆ ಬಾಟಲ್ ತನ್ನ ಹಿಂದಿನ ಆಕಾರ ಗಳಿಸಿಕೊಳ್ಳುವುದನ್ನು ಗಮನಿಸಿ.

ಬಿಸಿನೀರಿನಲ್ಲಿ ಮುಳುಗಿಸಿದ್ದಾಗ ಒಳಗಿದ್ದ ವಾಯು ಏನಾಗಿರಬೇಕು? ಬಾಯಿಯನ್ನು ಮುಚ್ಚಿ ತಣ್ಣೀರಿನಲ್ಲಿ ಮುಳುಗಿಸಿದಾಗ ಬಾಟಲ್ ಮುದುಡಿದ್ದು ಏಕೆ? ಬಾಯಿಯನ್ನು ಮುಚ್ಚಿದ್ದ ರಬ್ಬರ್ ಹಾಳೆ ಸಡಲಿಸಿದಾಗ ಸುಂಯ್ ಸದ್ದಿನೊಡನೆ ಬಾಟಲ್ ತನ್ನ ಹಿಂದಿನ ಆಕಾರ ಮರಳಿ ಗಳಿಸಿದ್ದು ಏಕೆ?

No comments: