Pages

24 September 2010

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೭

ವಾಯುವನ್ನು ಬಿಸಿ ಮಾಡಿದಾಗ ----

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೫ರ ಚಟುವಟಿಕೆಯಲ್ಲಿ ಉಪಯೋಗಿಸಿದ ರೀಫಿಲ್ ತೂರಿಸಿದ ರಬ್ಬರ್ ಬಿರಡೆ ಇರುವ ಬಾಟಲನ್ನು ಹಾಗೆಯೇ ಈ ಚಟುವಟಿಕೆಯಲ್ಲಿ ಉಪಯೋಗಿಸಿ.  ವಾಯುವನ್ನು ಬಿಸಿ ಮಾಡಿದರೆ ಏನಾಗುತ್ತದೆ ಎಂಬುದನ್ನು ವೀಕ್ಷಿಸಲು ಮೂರು ಪ್ರಯೋಗಗಳನ್ನು ಮಾಡಬಹುದು. ಇವುಗಳ ಪೈಕಿ ನಿಮಗೆ ಯಾವುದು ಸಾಧ್ಯವೋ ಅವನ್ನು ಮಾಡಿ.

೧. ಬಿರಡೆಯ ಮೇಲ್ಭಾಗದಲ್ಲಿ ಗೋಚರಿಸುವ ರೀಫಿಲ್ ಒಳಗೆ ಒಂದು ಹನಿ ಗಾಢ ಬಣ್ಣದ ನೀರನ್ನು ಸೇರಿಸಿ. ಅದು ಬಿರಡೆಯ ಸಮೀಪದಲ್ಲಿ ಇರುವಂತೆ ಮಾಡಿ. ಹೇಗೆ ಎಂಬುದನ್ನು ನೀವೇ ಪತ್ತೆ ಹಚ್ಚಿ. ಹೀಗೆ ಸಜ್ಜುಗೊಳಿಸಿದ ರೀಫಿಲ್ ಸಹಿತವಾದ ಬಿರಡೆಯನ್ನು ‘ಖಾಲಿ’ ಬಾಟಲಿಗೆ ಹಾಕಿ. ಬಿರಡೆಯ ಮೇಲ್ಭಾಗದ ಸಮೀಪದಲ್ಲಿ ರೀಫಿಲ್ ಒಳಗೆ ಗೋಚರಿಸುತ್ತಿರುವ ಬಣ್ಣದ ನೀರಿನ ಹನಿ ಇರುವ ಸ್ಥಳವನ್ನು ಇಂಕ್ ನಿಂದ ಗುರುತಿಸಿ. ಇಷ್ಟು ಮಾಡಿದ ಬಳಿಕ ಬಾಟಲಿನ ಸುಮಾರು ೩/೪ ಭಾಗ ಸುಡುಬಿಸಿ ನೀರಿನಲ್ಲಿ ಮುಳುಗುವಂತೆ ಹಿಡಿದು  ಋಈಫಿಲ್ಲಿನಲ್ಲಿರುವ ಬಣ್ಣದ ನೀರಿನ ಹನಿಯನ್ನು ಗಮನವಿಟ್ಟು ವೀಕ್ಷಿಸುತ್ತಿರಿ. ೪-೫ ನಿಮಿಷಗಳ ಬಳಿಕ ನೀರಿನ ಹನಿಯ ಸ್ಥಾನ ಗುರುತಿಸಿ.

‘ಖಾಲಿ’ ಬಾಟಲಿನ ಒಳಗೆ ನಿಜವಾಗಿ ಏನಿದೆ ಎಂಬುದು ನಿಮಗೆ ತಿಳಿದಿದೆಯಷ್ಟೆ. ಅಂದ ಮೇಲೆ, ಬಾಟಲನ್ನು ಬಿಸಿ ನೀರಿನಲ್ಲಿ ಮುಳುಗಿಸಿದಾಗ  ರೀಫಿಲ್ಲಿನಲ್ಲಿ ಇದ್ದ ನೀರಿನ ಹನಿ ಮೇಲೆ ಚಲಿಸಲು ಕಾರಣವನ್ನು ತರ್ಕಿಸಿ. (ಬಾಟಲನ್ನು ಮೋಂಬತ್ತಿಯ ಜ್ವಾಲೆಯಿಂದಲೂ ಬಿಸಿ ಮಾಡಬಹುದು. ಬಾಟಲಿಗೆ ಮಸಿ ಮೆತ್ತಿಕೊಳ್ಳುತ್ತದೆ. ಪ್ರಯೋಗ ಮುಗಿದ ಬಳಿಕ ತೊಳೆಯಬೇಕಾಗುತ್ತದೆ)

ಅಥವ

ರೀಫಿಲ್ ತೂರಿಸಿದ ಬಿರಡೆ ಹಾಕಿದ ‘ಖಾಲಿ’ ಬಾಟಲ್ ತೆಗೆದುಕೊಳ್ಳಿ. ರೀಫಿಲ್ಲಿನ ಹೊರತುದಿ ನೀರಿನಲ್ಲಿ ಮುಳುಗಿರುವಂತೆ ಬಾಟಲನ್ನು ತಲೆಕೆಳಗಾಗಿ ಹಿಡಿದುಕೊಂಡು ಮೋಂಬತ್ತಿಯ ನೆರವಿನಿಂದ ಬಾಟಲನ್ನು ಬಿಸಿ ಮಾಡಿ. ರೀಫಿಲಲ್ಲಿನ ನೀರೊಳಗಿರುವ ತುದಿಯಿಂದ ಚಿಕ್ಕಚಿಕ್ಕ ಗುಳ್ಳೆಗಳು ಹೊರಬರುವುದನ್ನು ವೀಕ್ಷಿಸಿ. ಇವು ಏನು ಎಲ್ಲಿಂದ ಏಕೆ ಬಂದವು ಎಂಬುದನ್ನು ತರ್ಕಿಸಿ. ( ಸಾಮಾನ್ಯ ರೀಫಿಲ್ ಆಗಿದ್ದರೆ ಅದರ ತುದಿಗೆ ಬೈಸಿಕಲ್ ವಾಲ್ ಟ್ಯೂಬನ್ನು ಸಿಕ್ಕಿಸಿ, ಆ ಟ್ಯೂಬಿನ ಇನ್ನೊಂದು ತುದಿಯನ್ನು ನೀರಿನಲ್ಲಿ ಮುಳುಗಿಸಿ ಹಿಡಿದುಕೊಂಡೂ ಪ್ರಯೋಗ ಮಾಡಬಹುದು-ಇದು ಉತ್ತಮ)

೨. ಅಗಲಕಿರಿದಾದ ಬಾಯಿಯುಳ್ಳ ಒಂದು ಗಾಜಿನ ಬಾಟಲ್ (ಪೆಪ್ಸಿ ಬಾಟಲಿನಂಥದ್ದು) ಹಾಗೂ ಬಾಟಲಿನ ಬಾಯಿಗೆ ಬಲು ಬಿಗಿಯಾಗಿ ಜೋಡಿಸಲು ಸಾಧ್ಯವಾಗುವ ಗಾತ್ರದ ಬಾಯಿ ಇರುವ ಒಂದೆರಡು ಬಲೂನುಗಳನ್ನು ಸಂಗ್ರಹಿಸಿ. ಬಾಟಲ್ ಮುಳುಗಿಸಬಹುದಾದಷ್ಟು ದೊಡ್ಡಪಾತ್ರೆ/ಬಕೆಟ್ಟಿನಲ್ಲಿ ಸುಡುಬಿಸಿ ನೀರು ಸಿದ್ಧವಾಗಿರಲಿ. ಒಂದು ಬಕೆಟ್ ತಣ್ಣೀರೂ ಇರಲಿ. ಬಾಟಲಿನಲ್ಲಿ ಬಿಸಿನೀರು ತುಂಬಿಸಿ ೧-೨ ನಿಮಿಷ ಹಾಗೆಯೇ ಇಡಿ. ತದನಂತರ ನೀರನ್ನು ಹೊರಚೆಲ್ಲಿ ತಕ್ಷಣವೇ ಬಾಟಲಿನ ಬಾಯಿಯನ್ನು ಆವರಿಸುವಂತೆ ಬಲೂನ್ ಸಿಕ್ಕಿಸಿ ಬಾಟಲಿನ ೩/೪ ಭಾಗ ಸುಡುಬಿಸಿ ನೀರಿನಲ್ಲಿ ಮುಳುಗುವಂತೆ ಲಂಬವಾಗಿ ಹಿಡಿಯಿರಿ. ಬಲೂನಿನಲ್ಲಿ ಆಗುವ ಬದಲಾವಣೆ ವೀಕ್ಷಿಸಿ, ಬಾಟಲನ್ನು ಬಿಸಿನೀರಿನಿಂದ ಹೊರತೆಗೆದು ತಕ್ಷಣ ತಣ್ಣೀರಿನಲ್ಲಿ ೩/೪ ಭಾಗ ಮುಳುಗುವಂತೆ ಹಿಡಿದು ಬಲೂನಿನಲ್ಲಿ ಆಗುವ ಬದಲಾವಣೆ ವೀಕ್ಷಿಸಿ. ಕಾರಣ ತರ್ಕಿಸಿ.

ವಾಯುವನ್ನು ಬಿಸಿ ಮಾಡಿದಾಗ ಅದರ ಗಾತ್ರದಲ್ಲಿ ಆಗು ವ್ಯತ್ಯಾಸ ೇನು ಎಂಬುದು ತಿಳಿಯಿತಲ್ಲವೇ? ಅಂದ ಮೇಲೆ ಬೇಸಿಗೆಯ ಸುಡುಬಿಸಿಲಿನಲ್ಲಿ ನಿಲ್ಲಿಸಿದ್ದ ಬೈಸಿಕಲ್ಲಿನ ಟಯರ್ ಬರ್ಸ್ಟ್ ಆಗುವುದೇಕೆ ಎಂಬುದನ್ನು ನೀವೇ ವಿವರಿಸಬಹುದಲ್ಲ!

No comments: