ನೀವೆಷ್ಟು ಜೋರಾಗಿ ಗಾಳಿ ಊದಬಲ್ಲಿರಿ?ಒಂದು ಅತೀ ಮಿದುವಾಗಿಲ್ಲದ ಪ್ಲಾಸ್ಟಿಕ್ ನೀರಿನ ಬಾಟಲ್ ( ೧ ಲೀ ಗಿಂತ ದೊಡ್ಡದು), ಸುಲಭವಾಗಿ ಗಾಳಿ ತುಂಬಿಸಬಹುದಾದ ಒಂದು ದೊಡ್ಡ ಬೆಲೂನ್ ಮತ್ತು ಕೆಲವು ರಬ್ಬರ್ ಬ್ಯಾಂಡ್ ಸಂಗ್ರಹಿಸಿ. ಬೆಲೂನಿನ
ಬಾಯಿ ಬಾಟಲಿನ ಹೊರಗೆ ಇರುವಂತೆ ಎಚ್ಚರಿಕೆ

ವಹಿಸಿ ಬೆಲೂನಿನ ುಳಿದ ಭಾಗವನ್ನು ಬಾಟಲಿನ ಒಳಕ್ಕೆ ತುರುಕಿ. ಬೆಲೂನಿನ ಬಾಯಿಯು ಬಾಟಲಿನ ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಹಿಂದಕ್ಕೆ ಮಡಚಿ ರಬ್ಬರ್ ಬ್ಯಾಂಡ್ ನೆರವಿನಿಂದ ಬಲು ಬಿಗಿಯಾಗಿ ಬಂಧಿಸಿ. ಬಾಟಲಿನ ಬಾಯಿಗೂ ಬೆಲೂನಿಗೂ ನಡುವಿನಿಂದ ವಾಯು ಒಳ ನುಸುಳದಷ್ಟು ಬಿಗಿಯಾಗಿರಬೇಕು ಈ ಬಂಧನ.
ಈಗ ಬೆಲೂನಿಗೆ ಅದರ ಬಾಯಿಯ ಮೂಲಕ ಗಾಳಿ ತುಂಬಿಸಲು ಪ್ರಯತ್ನಿಸಿ. ಎಷ್ಟು ಪ್ರಯತ್ನಿಸಿದರೂ ಗಾಳಿ ತುಂಬಿಸಲು ಸಾಧ್ಯವಾಗಲಿಲ್ಲವೇ? ಕಾರಣ ಏನಿರಬಹುದು? ಬಾಟಲ್ ಒಳಗೆ ಇರುವ ಯಾವುದು ಬೆಲೂನ್ ಉಬ್ಬಲು ಅಡ್ಡಿ ಉಂಟುಮಾಡುತ್ತಿದೆ?
ನಿಮ್ಮ ಊಹೆ ಸರಿಯೇ ತಪ್ಪೇ ಎಂಬುದನ್ನು

ಪರೀಕ್ಷಿಸಲು ಹೀಗೆ ಮಾಡಿ - ಬಾಟಲಿನ ತಳಭಾಗದ ಸಮೀಪದಲ್ಲಿ ಒಂದು ಚಿಕ್ಕ ರಂಧ್ರ ಮಾಡಿ. ಬಾಟಲಿನ ಒಳಗಿರುವ ವಾಯುವನ್ನು ಆ ರಂಧ್ರದ ಮೂಲಕ ಬಾಯಿಯಿಂದ ಎಳೆದು ತೆಗೆಯಿರಿ. ಬೆಲೂನ್ ತನ್ನಿಂದ ತಾನೇ ಉಬ್ಬಿತೇ? ನೀವು ರಂಧ್ರದಿಂದ ಬಾಯಿ ತೆಗೆದ ತಕ್ಷಣ ಉಬ್ಬಿದ ಬೆಲೂನಿನಿಂದ ವಾಯು ಹೊರಹೋಯಿತೇ? ಏಕೆಂದು ಊಹಿಸಬಲ್ಲಿರಾ? ಬೆಲೂನ್ ಉಬ್ಬಿದ ತಕ್ಷಣ ಬೆರಳಿನಿಂದ ಅಥವ ಅಂಟುಟೇಪಿನಿಂದ ಆ ರಂಧ್ರವನ್ನು ಮುಚ್ಚಿ. ಉಬ್ಬಿದ ಬೆಲೂನಿನಿಂದ ವಾಯು ಹೊರ ಹೋಗುತ್ತದೆಯೇ? ಏಕೆ? ಈಗ ಬಾಟಲನ್ನು ಅದರ ಕತ್ತಿನ ತನಕ ನೀರಿನಲ್ಲಿ ಮುಳುಗಿಸಿ ರಂಧ್ರವನ್ನು ತೆರೆಯಿರಿ. ಏನಾಗುತ್ತದೆ? ಏಕೆ ಎಂಬುದನ್ನು ಊಹಿಸಿ.
ಜಾದೂ ಬಾಟಲ್ಮುಚ್ಚಳ ಹಾಕಿದಾಗ ವಾಯು ಅಥವ ನೀರು ಒಳನುಗ್ಗದ ಅಥವ ಹೊರಬರದಂಥ ಸುಲಭವಾಗಿ ಬಳುಕದ ಪ್ಲಾಸ್ಟಿಕ್ ಬಾಟಲ್ ಅಥವ ಡಬ್ಬಿ ಸಂಗ್ರಹಿಸಿ (ಮಾರುಕಟ್ಟೆಯಲ್ಲಿ ದೊರೆಯುವ ತಂಪು ಪಾನೀಯದ ಬಾಟಲ್ ಸಾಪೇಕ್ಷವಾಗಿ ದೃಢವಾಗಿರುತ್ತವೆ).

ಬಾಟಲಿನ ಕಂಠದ ಸಮೀಪದಲ್ಲಿ ಒಂದು ಮತ್ತು ತಳದಲ್ಲಿ ಅಥವ ತಳದ ಸಮೀಪದಲ್ಲಿ ೧-೪ ಚಿಕ್ಕ ರಂಧ್ರಗಳನ್ನು ಮಾಡಿ. ಬಾಟಲಿನ ೧/೨ ಭಾಗಕ್ಕಿಂತ ಹೆಚ್ಚು ನೀರು ತುಂಬಿಸಿ ಬಿಗಿಯಾಗಿ ಮುಚ್ಚಳ ಹಾಕಿ. ಬಾಟಲಿನಲ್ಲಿ ನೀರಿನ ಮಟ್ಟ ಮೇಲಿನ ರಂಧ್ರಕ್ಕಿಂತ ತುಸು ಕೆಳಗಿರಲಿ. ಬಾಟಲನ್ನು ಎತ್ತಿ ಹಿಡಿಯಿರಿ. ಕೆಳಗಿನ ರಂಧ್ರಗಳಿಂದ ನೀರು ಹೊರ ಚಿಮ್ಮುತ್ತಿರುತ್ತದಲ್ಲವೆ? ಒಂದು ಬೆರಳಿನಿಂದ ಮೇಲಿನ ರಂಧ್ರವನ್ನು ಸಂಪೂರ್ಣವಾಗಿ ಬಿಗಿಯಾಗಿ ಮುಚ್ಚಿ? ಕೆಳಗಿನ ರಂಧ್ರಗಳಿಂದ ನೀರು ಹೊರ ಚಿಮ್ಮುತ್ತದೆಯೇ? ಮೇಲಿನ ರಂಧ್ರವನ್ನು ಬೆರಳಿನಿಂದ ಮುಚ್ಚಿದಾಗ ಏನಾಗುತ್ತದೆ? ಮಚ್ಚದೇ ಇರುವಾಗ ಏನಾಗುತ್ತದೆ? ಏಕೆ? (ಬಾಟಲಿನ ಬಿರಡೆಯ ಮೂಲಕ ವಾಯು ನುಸುಳುವಂತಿದ್ದರೆ ಈ ಪ್ರಯೋಗ ಯಶಸ್ವಿಯಾಗುವುದಿಲ್ಲ)
‘ನಿಲ್ಲು’ ಎಂದು ಮಂತ್ರ ಹಾಕಿದಾಗ ಹೊರಚಿಮ್ಮುವ ನೀರು ನಿಲ್ಲುವಂತೆಯೂ ‘ಚಿಮ್ಮು’ ಎಂದು ಮಂತ್ರ ಹಾಕಿದಾಗ ನೀರು ಚಿಮ್ಮುವಂತೆಯೂ ಮಾಡುವ ಜಾದೂ ಪ್ರಯೋಗವನ್ನು ಚಿಕ್ಕ ಮಕ್ಕಳ ಮುಂದೆ ಈ ಬಾಟಲಿನ ನೆರವಿನಿಂದ ಮಾಡಿ ರಂಜಿಸಬಹುದಲ್ಲವೆ?
No comments:
Post a Comment